ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ ನಮ್ಮ ದೇಶಕ್ಕೆ "ವಿಶ್ವಗುರುವಿನ" ಸ್ಥಾನ ಲಭಿಸಿತ್ತು ಎಂಬ ವಿಚಾರವನ್ನೂ ಸಹ ಕೇಳುತ್ತೇವೆ.ನಮ್ಮ ಈ ನೆಲದಲ್ಲಿಯೇ "ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರುತ್ತಿದ್ದರೆಂದೂ" ಕೇಳಿದ್ದೇವೆ.ಇವೆಲ್ಲದರ ಜೊತೆಗೆ ನಮ್ಮ ನಿತ್ಯ ಸಂಕಲ್ಪವಾದರೋ " ಸರ್ವೇ ಭವಂತು ಸುಖಿನ:.......ಮಾ ಕಶ್ಚಿತ್ ದು:ಖ ಭಾಗ್ಭವೇತ್"-ಎಲ್ಲರೂ ಸುಖವಾಗಿರಬೇಕು........, ಯಾರಿಗೂ ದು:ಖ ಬರುವುದು ಬೇಡ". ಇದು ನಮ್ಮ ನಿತ್ಯ ಪ್ರಾರ್ಥನೆ ಯಾಗಿತ್ತು. ಆದರೆ ಎಲ್ಲೋ ಎನೋ ತಪ್ಪಾಗಿದೆಯಲ್ಲಾ! ಯಾವುದೋ ಕೊಂಡಿ ಕಳಚಿದೆಯಲ್ಲಾ!!
ಮೊನ್ನೆ ನಾನು ಅಗ್ನಿಹೋತ್ರ ಮಾಡುತ್ತಾ ಕುಳಿತಿದ್ದೆ. ನಮ್ಮಕ್ಕ ನಮ್ಮ ಮನೆಗೆ ಬಂದವರು " ಇದೇನೋ ನೀನು "ಹೋಮ ಮಾಡುತ್ತಿದ್ದೀಯಾ? ಯಜುರ್ವೇದವರು ಮಾಡಬೇಕಾದ್ದು,ಋಗ್ವೇದಿಯಾದ ನೀನು ಮಾಡುತ್ತಿದ್ದೀಯಲ್ಲಾ!!" ವೇದಸುಧೆಯ ವಾರ್ಷಿಕೋತ್ಸವದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಸ್ವತ: ಅಗ್ನಿಹೋತ್ರ ಮಾಡಿದ್ದ ನಮ್ಮ ಅಕ್ಕ ಶ್ರೀ ಸುಧಾಕರ ಶರ್ಮರಿಂದ ಅಗ್ನಿಹೋತ್ರದ ಅರ್ಥವಿವರಣೆಯನ್ನು ಸವಿಸ್ತಾರವಾಗಿ ಕೇಳಿದ್ದರು. ಅಂದು ಮೆಚ್ಚುಗೆ ವ್ಯಕ್ತಪಡಿಸಿದ್ದವರು. ಇವರೇ. ಆದರೆ ಅವರ ಬಾಯಲ್ಲಿಯೇ ಈ ಪ್ರಶ್ನೆ. ನಾನು ನಮ್ಮಕ್ಕನಿಗೆ ಹೇಳಿದೆ" ಆರೋಗ್ಯ ನಿಮಗೆ ಮಾತ್ರ ಬೇಕೋ? ಬೇರೆಯವರಿಗೆ ಬೇಡವೋ?
ಅವರು ನಿರುತ್ತರರಾಗಿದ್ದರು.
ಬ್ರಾಹ್ಮಣರೆಂದು ಕರೆಸಿಕೊಳ್ಳುವ , ಅಲ್ಪಸ್ವಲ್ಪ ಸಾಮಾಜಿಕ ಅರಿವು ಹೊಂದಿರುವ ಇವರೇ ಹೀಗೆ ಚಿಂತಿಸಿದರೆ ಹಿಂದುಸಮಾಜವು ಇನ್ನೂ ಯಾವ ಬಗೆಯ ಅಜ್ಞಾನದ ಸುಳಿಯಲ್ಲಿ ಸಿಲುಕಿ ಬಳಲುತ್ತಿರಬಹುದೆಂದು ಚಿಂತೆಗೊಳಗಾಗುತ್ತೇನೆ. ಚಿಂತೆಗೆ ಕಾರಣವಿದೆ. ಯಜ್ಞೋಪವೀತವನ್ನು ಧಾರಣೆ ಮಾಡಿರುವ ಎಲ್ಲರಿಗೂ ವೈಜ್ಞಾನಿಕವಾಗಿ ಅದರ ಮಹತ್ವವನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ, ಸಂಧ್ಯಾವಂದನೆ ಮಾಡುವ, ಗಾಯತ್ರಿ ಮಂತ್ರ ಜಪಿಸುವ, ಊಟಮಾಡುವಾಗಿನ ಪರಿಶಂಚನೆಗೂ ಅರ್ಥ ವಿವರಣೆ ಕೊಟ್ಟು ಅದರಿಂದಾಗಿ ನಮ್ಮ ಆರೋಗ್ಯದ ಮೇಲಾಗುವ ಸತ್ಪರಿಣಾಮದ ಬಗೆಗೆ ಅರಿವು ಮಾಡಿಸಲಾಗುತ್ತದೆ.ಆದರೆ " ಸರ್ವೇ ಭವಂತು ಸುಖಿನ:.......ಮಾ ಕಶ್ಚಿತ್ ದು:ಖ ಭಾಗ್ಭವೇತ್"- ಎಂದು ಪ್ರಾರ್ಥಿಸುವ ನಾವು ನಮ್ಮೊಡನೆ ಉಪನಯನ ಸಂಸ್ಕಾರದಿಂದ, ವೇದಾಧ್ಯಯನದಿಂದ ಎಷ್ಟು ಜನ ನಮ್ಮ ಸೋದರರು ವಂಚಿತರಾಗಿದ್ದಾರೆಂಬ ಬಗ್ಗೆ ಯೋಚಿಸಿದ್ದೇವೆಯೇ? " ಆತ್ಮವತ್ ಸರ್ವ ಭೂತೇಶು" ಎನ್ನುವ ನಮಗೆ ಮಾನವ ಜಾತಿಯಲ್ಲೂ ಒಂದುಬಹುದೊಡ್ದ ಭಾಗ ಈ ಸಂಸ್ಕಾರಗಳಿಂದ ವಂಚಿತವಾಗಿದೆ, ಎಂದು ಅನಿಸುವುದಿಲ್ಲವೇ?ಅವರಿಗೆ ಉತ್ತಮ ಆರೋಗ್ಯ ಬೇಡವೇ? ಉತ್ತಮ ಬದುಕು ಬೇಡವೇ?
ನನಗೆ ಚಿಂತೆ ಕಾಡಲೂ ಇನ್ನೂ ಕಾರಣಗಳಿವೆ. ವೇದಾಧ್ಯಯನವನ್ನು ಮಾಡಿರುವ ಅದೆಷ್ಟು ವಿದ್ವಾಂಸರುಗಳಿಲ್ಲ! ಅವರಲ್ಲಿ ಈ ಚಿಂತೆ ಯಾಕೆ ಕಾಡುತ್ತಿಲ್ಲ? ನಮ್ಮ ವೈದಿಕ ಪರಂಪರೆಯಿಂದ ಒಂದು ಆರೋಗ್ಯಯುತವಾದ ಜೀವನ ನಡೆಸಬಹುದೆಂದಾದರೆ ಆ ಜೀವನ ಕೆಲವರಿಗೆ ದಕ್ಕಿದರೆ ಸಾಕೇ?
ಸಮಾನೋ ಮಂತ್ರ: ಸಮಿತಿ: ಸಮಾನೀ
ಸಮಾನಂ ವ್ರತಂ ಸಹ ಚಿತ್ತಮೇಷಾಮ್|
ಸಮಾನೇನ ವೋ ಹವಿಷಾ ಜುಹೋಮಿ
ಸಮಾನಂ ಚೇತೋ ಅಭಿಸಂವಿಶಧ್ವಮ್||
[ಅಥರ್ವ-೬.೬೪.೨]
ಅಥರ್ವ ವೇದದ ಈ ಮಂತ್ರ ಏನು ಹೇಳುತ್ತದೆ?
ಸಮಾನೋ ಮಂತ್ರ: = ಮಾನವರೆಲ್ಲರ ಮಂತ್ರವು ಸಮಾನವಾಗಿರಲಿ
ಸಮಿತಿ: ಸಮಾನೀ= ಸಮಿತಿಯು ಸಮಾನವಾಗಿರಲಿ[ ಸಮಿತಿ ಎಂದರೆ ಸಭೆ, ಕೂಟ, ಸಂಸ್ಥೆ,ಸಮಾಜ,ಸೇರುವಿಕೆ]
ಸಮಾನಂ ವ್ರತಂ=ವ್ರತವೂ ಸಮಾನವಾಗಿರಲಿ[ವ್ರತವೆಂದರೆ ಕಟ್ಟು, ಕಟ್ಟಳೆ,ನಿಯಮ,ಶಾಸನ,ವಿಧಿ, ಯಜ್ಞ,ಪೂಜೆ,ಧಾರ್ಮಿಕ ಪ್ರತಿಜ್ಞೆ ]
ಸಹ ಚಿತ್ತಮೇಷಾಮ್= ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ
ವ:=ನಿಮ್ಮೆಲ್ಲರಿಗೂ
ಸಮಾನೇನ ಹವಿಷಾ=ಸಮಾನವಾದ ಖಾದ್ಯ,ಪೇಯಗಳನ್ನೇ
ಜುಹೋಮಿ=ದಾನ ಮಾಡುತ್ತೇನೆ
ಅಭಿಸಂವಿಶಧ್ವಮ್= ಎಲ್ಲೆಡೆಯಿಂದಲೂ ಪ್ರವೇಶಿಸಿರಿ
ಈ ಮಂತ್ರದ ಅರ್ಥವನ್ನು ತಿಳಿದಾಗ ಆ ಭಗವಂತನೇ ನೀಡಿರುವ ಸವಲತ್ತನ್ನೂ ಕೂಡ ನಾವು ಸರಿಯಾಗಿ ಎಲ್ಲರೂ ಅನುಭವಿಸಲು ಸಾಧ್ಯವಾಗಿಲ್ಲವಲ್ಲಾ! [ಸುಪ್ರೀಮ್ ಕೋರ್ಟ್ ಆದೇಶವಿದ್ದರೂ ಸಹ ಸರ್ಕಾರವು ಕಾರ್ಯಕ್ರಮವನ್ನು ಅನುಷ್ಠಾನ ಮಾಡದಿರುವಂತೆ]
ಯಾಕೆ ಹೀಗೆ? ಯಾಕೆ ಹೀಗೆ? ಚಿಂತೆ ಕಾಡುತ್ತಿರುವುದು ತಪ್ಪೇ?
ಸಾಮಾಜಿಕ ಸಾಮರಸ್ಯದ ಬಗೆಗೆ ಚಿಂತನೆ ಮಾಡುವಾಗ ನಿಜವಾಗಿ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಅದು ಮಾಂಸಾಹಾರ ಸೇವನೆ ಯ ಸಮಸ್ಯೆ. ಈ ಸಮಸ್ಯೆಯನ್ನು ಪರಿಹರಿಸುವುದೇನೂ ಕಷ್ಟವಿಲ್ಲ. ಆದರೂ ಬೆಳೆದುಬಂದಿರುವ ರೂಢಿಯಿಂದ ಹಲವರು ಮಾಂಸಾಹಾರದ ಅಭ್ಯಾಸವನ್ನು ಮಾಡಿಕೊಂಡಿರುವುದು ಸುಳ್ಳಲ್ಲ. ಮಾಂಸಾಹಾರಿ ಮಿತ್ರರನ್ನು ಬಹಳ ಆತ್ಮೀಯವಾಗಿ ವಿಚಾರಿಸಿದಾಗ ಅವರಿಂದ ಪ್ರಾಮಾಣಿಕವಾಗಿ ಬರುವ ಉತ್ತರವೇನು ಗೊತ್ತೇ? “ ಬಾಯಿ ಚಪಲ ದಿಂದಾಗಿ ಮಾಂಸಾಹಾರ ಬಿಡಲು ಆಗುತ್ತಿಲ್ಲ” ಸಸ್ಯಾಹಾರವು ಆರೋಗ್ಯಕ್ಕೆ ಉತ್ತಮವೆಂದು ಹೇಳಿದರೆ ಉತ್ತರ ಒಂದು ಸಿದ್ಧವಾಗಿರುತ್ತದೆ” ಬಹುತೇಕ ವಿಜ್ಞಾನಿಗಳು ಭಾರತೀಯರಲ್ಲ. ಪಾಶ್ಚಿಮಾತ್ಯರಲ್ಲಿ ಮಾಂಸಾಹಾರ ಸರ್ವೇ ಸಾಮಾನ್ಯ. ಆದ್ದರಿಂದ ಮಾಂಸಾಹಾರಿ ವಿಜ್ಞಾನಿಗಳಿರಲಿಲ್ಲವೇ?
ನಿಜವಾಗಿ ಪಾಶ್ಚಿಮಾತ್ಯ ವಿಜ್ಞಾನಿಗಳ ಆಹಾರ ಕ್ರಮವನ್ನು ಇವರೇನೂ ಅಧ್ಯಯನ ಮಾಡಿಲ್ಲ. ಆದರೂ ಅವರೆಲ್ಲರನ್ನೂ ಮಾಂಸಾಹಾರಿಗಳೆಂದು ಪರಿಗಣಿಸಿ ಮಾಂಸಾಹಾರ ಸೇವನೆಗೂ ಜ್ಞಾನಕ್ಕೂ ಸಬಂಧವಿಲ್ಲ” ಎಂಬ ಸ್ವಂತ ತೀರ್ಮಾನಕ್ಕೆ ಬಂದು ಅದಕ್ಕೇ ಅಂಟಿಕೊಳ್ಳುವರಿಗೇನೆನ್ನಬೇಕು?
ಯಜ್ಞಕ್ಕೆ ಅಧ್ವರ ಎಂಬ ಸಮಾನ ಪದವೂ ಇದೆ. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದಾಯ್ತು. ಹಾಗಾಗಿ ಹಿಂಸೆ ಮಾಡದೆ ,ಪ್ರಾಣಿಯನ್ನು ಕೊಲ್ಲದೆ ಮಾಂಸಾಹಾರ ಸೇವನೆ ಸಾಧ್ಯವೇ? ಆದ್ದರಿಂದ ಯಜ್ಞವನ್ನು ಮಾಡಬೇಕಾದ ಎಲ್ಲಾ ಮಾನವರೂ ಕೂಡ ಸಸ್ಯಾಹಾರಿಗಳೇ ಆಗಿರಬೇಕಲ್ಲವೇ?
ಈ ಮಾತು ಹೇಳುವಾಗ ಮಾಂಸಪ್ರಿಯರು ಕೂಡಲೇ ಉತ್ತರಿಸುತ್ತಾರೆ “ ನಾವು ಕುರಿ-ಕೋಳಿ ಕೊಂದು ತಿನ್ನದಿದ್ದರೆ , ಅವುಗಳ ಸಂಖ್ಯೆ ಎಷ್ಟಾಗುತ್ತಿತ್ತು ಗೊತ್ತಾ?
ಎಂತಹಾ ಪ್ರಶ್ನೆ!
ಸಿಂಹ, ಹುಲಿ ಇತ್ಯಾದಿ ಪ್ರಾಣಿಗಳ ಆಹಾರವೇ ಮತ್ತೊಂದು ಪ್ರಾಣಿಯ ಮಾಂಸ. ಸಿಂಹ, ಹುಲಿಗಳಿಗೆ ಸಸ್ಯಾಹಾರ ಉಣಿಸಲು ಸಾಧ್ಯವೇ? ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ಆಹಾರ. ಆದರೆ ಯಾವ ಪ್ರಾಣಿಯೂ ಮನುಷ್ಯನಿಗೆ ಆಹಾರವಾಗಬಾರದು. ಮನುಷ್ಯನ ದೇಹದ ರಚನೆಯೂ ಕೂಡ ಸಸ್ಯಾಹಾರಕ್ಕೇ ರಚಿತವಾಗಿದ್ದು.
ಇಂತಹ ಸೂಕ್ಷ್ಮ ವಿಷಯಗಳ ಬಗೆಗೆ ಚಿಂತನ-ಮಂಥನ ಮಾಡಬಾರದೇ?
ಬದಲಾಗಬೇಕಾದವರು ಕೇವಲ ಒಂದು ವರ್ಗವಲ್ಲ. ವೇದಜ್ಞಾನವನ್ನು ಹೊಂದಿರುವವರು ವೇದಜ್ಞಾನವಿಲ್ಲದ ಆದರೆ ಅದನ್ನು ಕಲಿಯುವ ಆಸಕ್ತಿ ಇರುವ ಯಾವುದೇ ವ್ಯಕ್ತಿಗಾಗಲೀ ಕಲಿಸಿಕೊಡಲು ಮುಂದೆ ಬರಬೇಕು, ಅಂತೆಯೇ ವೇದಜ್ಞಾನವಿಲ್ಲದವರು ವೇದಜ್ಞಾನವನ್ನು ಪಡೆಯಲು ಬೇಕಾದ ಮಾನಸಿಕತೆಯನ್ನು ಹೊಂದಬೇಕು. ಅಲ್ಲವೇ?
ಇಡೀ ವಿಶ್ವಕ್ಕೆ ಉತ್ತಮ ಬದುಕು ನೀಡುವ ಸಾಮರ್ಥ್ಯವು ವೇದದಲ್ಲಿದ್ದು ಅದನ್ನು ಬಲ್ಲವರು ಆಸಕ್ತರಿಗೆ ನೀಡಲು
ಮನಸ್ಸು ಮಾಡಬೇಕು,ಪಡೆಯುವವರೂ ಕೂಡ ಪಡೆಯಲು ಬೇಕಾದ ಮಾನಸಿಕತೆಯನ್ನು ಬೆಳಸಿಕೊ ಳ್ಳಬೇಕು. ಏನಂತೀರಾ?
ಪ್ರಿಯ ಶ್ರೀಧರ, ನಿಮ್ಮ ಕಳಕಳಿ ಅರ್ಥವಾಗುತ್ತದೆ. ಇಂತಹ ಕಳಕಳಿ ಇತರರರಿಗೂ ಬರಬೇಕೆಂದು ಅಪೇಕ್ಷಿಸಬಹುದಷ್ಟೆ, ನಿರೀಕ್ಷಿಸಲಾಗದು.
ReplyDeleteಇನ್ನು ಸಸ್ಯಾಹಾರ/ಮಾಂಸಾಹಾರದ ಬಗ್ಗೆ ನನ್ನದೇ ಒಂದು ಅನುವಾದಿತ ಲೇಖನವಿದ್ದು ನೀವೂ ಓದಿರಬಹುದು.
ಮಾಂಸಾಹಾರ ಬಿಟ್ಟು ಯಜ್ಞ ಮಾಡಬೇಕೋ ಅಥವಾ ಯಜ್ಞ ಮಾಡಿ ಮನ ಪರಿವರ್ತನೆ ಆಗಿ ಮಾಂಸಾಹಾರ ತ್ಯಜಿಸಬೇಕೋ? ಕೋಳಿ ಮೊದಲೋ ಮೊಟ್ಟೆ ಮೊದಲೂ ಎಂಬಂತಹ ಸಮಸ್ಯೆ ಇದು. ನನಗೆ ಮನ ಪರಿವರ್ತನೆಯ ದಾರಿಯೇ ಸರಿ ಎಂದೆನಿಸುತ್ತದೆ. ಎಷ್ಟೋ ಜನರಿಗೆ ಯೋಗಾಭ್ಯಾಸ ಶುರು ಹಚ್ಚಿ ಕೊಂಡ ಮೇಲೆ ಮಾಂಸ ಮದ್ಯದ ಮೇಲಿನ ಆಸೆ ತನ್ನಿಂತಾನೇ ಕಡಿಮೆಯಾಗಿದ್ದರ ಬಗ್ಗೆ ಓದಿದ್ದೇನೆ. ಅಲ್ಲದೆ ಮಾಂಸಾಹಾರವೊಂದೇ ಮನಸ್ಸಿನ ವಿಕಾರವಲ್ಲ. ಬೇರೆಯ ವಿಕಾರಗಳೂ ಇವೆ. ಅಂತಹ ಬೇರೆ ವಿಕಾರ ಇದ್ದವರು ಹೋಮ ಹವನ ಮಾಡಬಹುದಾದರೆ ಮಾಂಸಾಹಾರಿಗಳು ಯಾಕೆ ಮಾಡಬಾರದು. ಇಲ್ಲಿ ವಿವೇಕಾನಂದರ ಮಾತೊಂದು ನೆನಪಾಗುತ್ತದೆ ನನಗೆ - "ಸಸ್ಯಾಹಾರಿಯಾಗಿದ್ದೂ ಹೇಡಿಯಾಗಿರುವವನಿಗಿಂತ ಧೈರ್ಯವಂತನಾದ ಮಾಂಸಾಹಾರಿ ಲೇಸು" - ಎಂಬರ್ಥದಲ್ಲಿ ಹೇಳಿದ್ದರು.
ReplyDeleteಇದು ನನ್ನ ಅನಿಸಿಕೆ, ತಪ್ಪಿದ್ದಲ್ಲಿ ತಿಳಿದವರು ಹೇಳಿದರೆ ತಿದ್ದಿಕೊಳ್ಳುವೆ.
[ಬೇರೆ ವಿಕಾರ ಇದ್ದವರು ಹೋಮ ಹವನ ಮಾಡಬಹುದಾದರೆ]
ReplyDeleteನಿಜವಾಗಿ ಚಿಂತನೆ ಮಾಡಬೇಕಾದ ವಿಷಯ.ಸಸ್ಯಾಹಾರಿ ಎಂದಾಗ ಕೇವಲ ಮಾಂಸಾಹಾರ ತಿನ್ನದೇ ಇರುವುದು ಎಂದು ಅರ್ಥೈಸಿದರೆ ತಪ್ಪಾದೀತು. ಮನಸ್ಸಿನಲ್ಲಿ ಕಾಮ, ಕ್ರೋಧ,ಮದ ಮತ್ಸರಗಳನ್ನು ತುಂಬಿ ಕೊಂಡು ನಾನು ಸಸ್ಯಾಹಾರೀ, ಆದ್ದರಿಂದ ನಾನು ವೇದಾಧ್ಯಯನ ಮಾಡಬಹುದು, ನಾನು ಯಜ್ಞ ಯಾಗಾದಿಗಳನ್ನು ಮಾಡಬಹುದು ಎಂದು ಬ್ರಮಿಸಿದರೆ ಪ್ರಯೋಜನವಿಲ್ಲ. ನಾವು ಏನೇ ಮಾಡಲೀ ಅದರ ಪ್ರಯೋಜನ ೧೦೦% ಸಿಗಬೇಕಾದರೆ ಅದನ್ನು ಹೇಗೆ ಮಾಡಬೇಕೋ ಹಾಗೆ ಪೂರ್ಣ ಪ್ರಮಾಣದ ಶ್ರದ್ಧೆಯಿಂದ ಮಾಡಬೇಕು.ಅದಿಲ್ಲದೆ ಮನಸ್ಸಿನಲ್ಲಿ ಹತ್ತು ಹಲವು ವಿಕಾರಗಳನ್ನಿಟ್ಟುಕೊಂಡು ಪೂಜೆ ಮಾಡಿದರೇನು? ಯಜ್ಞ ಯಾಗಾದಿಗಳನ್ನು ಮಾಡಿದರೇನು? ಯಾವ ಪ್ರಯೋಜನ ವಾಗದು. ನಮ್ಮ ಚಿಂತನೆಗಳಿಗೂ ನಮ್ಮ ಆರೋಗ್ಯಕ್ಕೂ ಸಂಬಂಧವಿದೆ, ಎನ್ನುವ ಮಾತನ್ನು ಬಲ್ಲವರು ಹೇಳುತ್ತಾರಷ್ಟೆ.ಅಂದಮೇಲೆ ನಮ್ಮ ಮನಸ್ಸು ಶುದ್ಧವಾಗಿರಲೇ ಬೇಕು. ಆಗಮಾತ್ರ ಪ್ರಯೋಜನ ವಾದೀತು. ಒಬ್ಬ ರೋಗಿಗೆ ಏನೇನು ಔಷದೋಪಚಾರವನ್ನು ಮಾಡಿದರೂ ಅವನು ಡಯಟ್ ಪಾಲಿಸದಿದ್ದರೆ ಗುಣವಾಗುತ್ತಾನೆಯೇ? ಹಾಗೆಯೇ ವೇದಾಧ್ಯನದ ಅಥವಾ ಯಜ್ಞದ ಲಾಭ ಸಿಗಬೇಕಾದರೆ ಇದಕ್ಕೆ ಬೇಕಾದ ಡಯಟ್ ಪಾಲಿಸಲೇ ಬೇಕು , ಇಲ್ಲವಾದಲ್ಲಿ ಪ್ರಯೋಜನವಾದರೂ ಏನು? ಇದು ನನ್ನ ಅನಿಸಿಕೆ. ತಿಳಿದವರು ಹೆಚ್ಚು ಹೇಳಬೇಕು.