Pages

Sunday, May 22, 2011

"ಸಮಾನೋ ಮಂತ್ರ: ಸಮಿತಿ: ಸಮಾನೀ-ಕೆಲವು ಸಂದೇಹಗಳು


"ಸಮಾನೋ  ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ" ಲೇಖನವನ್ನು ಓದಿದ ಶ್ರೀ ಪಿ.ಎಸ್. ರಂಗನಾಥ್ ಇವರು ಕೆಲವು ಸಂಶಯಗಳನ್ನು ಬರೆದಿದ್ದಾರೆ. ಅದಕ್ಕೆ ನನ್ನ ಸಮಾಧಾನವನ್ನು ಕೋರಿದ್ದಾರೆ.  ಅವರ ಸಂಶಯಗಳಿಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇನೆ.
-ಹರಿಹರಪುರಶ್ರೀಧರ್

ನಿಮ್ಮ ಲೇಖನ "ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ" ಯನ್ನು ಓದಿದೆ. ನಿಮ್ಮ ಪ್ರಯತ್ನ ಶ್ಲಾಘನೀಯ. ಒಳ್ಳೊಳ್ಳೆ ವಿಚಾರಗಳನ್ನು ತಿಳಿಸುತ್ತಿರುವ ತಮಗೆ ದೇವರು ಸದಾಕಾಲ ಒಳ್ಳೆಯದನ್ನು ಮಾಡಲಿ ಎಂದು ನಾನು ಕೋರುತ್ತೇನೆ. ನನ್ನಲ್ಲಿ ಕೆಲ ಸಂಶಯಗಳು ಇವೆ. ಒಂದೊಂದಾಗಿ ನಿಮ್ಮಲ್ಲಿ ಪರಿಹರಿಸಿಕೊಳ್ತಿನಿ.ನಿಮ್ಮ ಉತ್ತರದ ನಂತರ ನನ್ನ ಮುಂದಿನ ಪ್ರಶ್ನೆ ಗಳನ್ನು ನಿಮ್ಮ ಮುಂದಿಡತ್ತೇನೆ.

-ಪಿ.ಎಸ್.ರಂಗನಾಥ್

·    ಸಂಶಯ: ನನ್ನಲ್ಲಿ ಕೆಲ ಸಂಶಯಗಳು ಇವೆ. ಒಂದೊಂದಾಗಿ ನಿಮ್ಮಲ್ಲಿ ಪರಿಹರಿಸಿಕೊಳ್ತಿನಿ

ಉ: ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಬಹುದಷ್ಟೆ. ಸಂಶಯ ಪರಿಹರಿಸುವಷ್ಟು ಸಮರ್ಥನಲ್ಲ.

·     ಪ್ರ: ಸಸ್ಯ, ಗಿಡ ಮರಗಳಿಗೆ ಜೀವ ಇದೆಯೇ?

ಉ: ಜೀವ ಇದೆ.

·     ಪ್ರ:ಹಸುವಿನ ಹಾಲು, ತುಪ್ಪ ಮತ್ತು ಮೊಸರನ್ನು ಸಸ್ಯಹಾರ ವರ್ಗದಲ್ಲಿ ಯಾಕೆ ಸೇರಿಸಿದ್ದಾರೆ?
ಉ: ಗೊತ್ತಿಲ್ಲ.ಅದರೆ ಕರು ಕುಡಿದು ಬಿಟ್ಟ ಹಾಲನ್ನು ಉಪಯೋಗಿಸುವುದರಿಂದ ಅದನ್ನು ಅಹಿಂಸಾತ್ಮಕ ಹಾಲು ಎಂದು ಹೇಳಬಹುದು.

·    ಪ್ರ: ರಸ್ತೆ ಅಗಲೀಕರಣ ಸಂಧರ್ಭದಲ್ಲಿ ನೂರಾರು ಮರಗಳನ್ನು ಕಡಿದಾಗ, ನಾವೆಲ್ಲರು ಹೇಳುವ ಮಾತು "ಮರಗಳ ಮಾರಣ ಹೋಮ" ಅಂತ ಅಥವ ರಸ್ತೆ ಅಗಲೀಕರಣಕ್ಕೆ ಮರಗಳ ಬಲಿ. ಮಾತನಾಡಲು ಬರದ ಮತ್ತು ಕೆಂಪು ರಕ್ತವಿಲ್ಲದ ಹಾಗು ಮೆದುಳೇ ಇಲ್ಲದ ಮರಗಳನ್ನು ಕಡಿದಾಗ ನಮ್ಮ ಮನ ಮಿಡಿಯುವುದೇಕೆ. ಅಥವ ನಾವೇ ಕೈಯಾರೆ ನೆಟ್ಟ ಒಂದು ಹೂ ಗಿಡ ಅಥವ ಹಣ್ಣಿನ ಗಿಡ ನಮ್ಮೆದುರುಗೆ ಬೆಳೆದು ನಿಂತಾಗ ನಮಗಾಗುವ ಆನಂದ ಅಷ್ಟಿಷ್ಟಲ್ಲ, ಯಾರಾದರು ಅದಕ್ಕೆ ಘಾಸಿ ಮಾಡಿದರೆ ಮನಸ್ಸು ಮುದುಡುವುದೇಕೆ?
ಉ: ಇದೆಲ್ಲ ಮಾನವೀಯತೆಯ ಲಕ್ಷಣಗಳಲ್ಲವೇ? ಬಹುಷ: ನಿಮ್ಮ ಮುಂದಿನ ಪ್ರಶ್ನೆ ಹೀಗಿರಬಹುದು. ತರಕಾರಿಯನ್ನು ಕೊಯ್ದಾಗ ಸಸ್ಯಕ್ಕೆ ಹಿಂಸೆಯಾಗುವುದಿಲ್ಲವೇ? ಬತ್ತ, ರಾಗಿ ಜೋಳ ಮುಂತಾದ ಸಸ್ಯಗಳನ್ನು ಕೊಯ್ದು ದವಸ ಧಾನ್ಯ ಪಡೆಯುವುದು ಹಿಂಸೆಮಾಡಿದಂತಲ್ಲವೇ? ಕೊತ್ತಂಬರಿ, ಕರಿಬೇವು ಎಲ್ಲವನ್ನೂ ಗಿಡ/ಮರದಿಂದ ಕೊಯ್ದು ಅವಕ್ಕೆ ಹಿಂಸೆಯುಂಟುಮಾಡುವಿದಿಲ್ಲವೇ? ಹೀಗೆ ಯೋಚಿಸುತ್ತಾ ಹೋದರೆ ಬಹಳ ಪ್ರಶ್ನೆಗಳು ಹುಟ್ಟುತ್ತವೆ.  ಹುಲಿ-ಸಿಂಹ ಗಳು ಒಂದು ಪ್ರಾಣಿಯನ್ನು ಕೊಂದು ಅದನ್ನು ತನ್ನ ಆಹಾರಮಾಡಿಕೊಳ್ಳುತ್ತವೆ. ಅದು ಸೃಷ್ಟಿ ನಿಯಮ. ಒಂದು ಪ್ರಾಣಿ ಮತ್ತೊಂದು ಪ್ರಾಣಿಯ ಆಹಾರ. ಮನುಷ್ಯನಾದರೋ ಕೆಲವು ಮರ/ಗಿಡ/ಬಳ್ಳಿಗಳನ್ನು ಮತ್ತು ಅದರ ಬೆಳೆಯನ್ನು ತನ್ನ ಆಹಾರ ಮಾಡಿಕೊಂಡಿದ್ದಾನೆ. ಹೌದು, ಒಂದು ಗಿಡ ತಾನೇ ತಾನಾಗಿ ಸಾಯುವುದಕ್ಕಿಂತ ಮುಂಚೆಯೇ ಮನುಷ್ಯನು ಅದರ ಆಯುಶ್ಯವನ್ನು ಮುಗಿಸಿ ಬಿಡುತ್ತಾನೆ. ಇನ್ನೂ ಬೇರೆ ರೀತಿಯಲ್ಲಿ ಯೋಚಿಸಿದಾಗ ಇರುವೆ, ಜಿರಲೆ, ಸೊಳ್ಳೆ, ನೊಣ, ಇಲಿ ಮುಂತಾದುವುಗಳನ್ನು ಕೊಲ್ಲುವಾಗ ಅದು ಹಿಂಸೆ ಎನಿಸುವುದಿಲ್ಲ. ಜಿರಲೆ ಔಷಧಿ ಸ್ಪ್ರೆ ಮಾಡಿದಾಗಲಂತೂ ನೂರಾರು ಹೆಣ ಉರುಳುತ್ತವೆ. ಇದೆಲ್ಲಾ ಮಾಡುವ ನಾವೆಲ್ಲರೂ ಪ್ರಾಣಿ ಹಿಂಸೆ ಮಾಡಿದಂತಾಗಲಿಲ್ಲವೇ? ಇಂತಹ ಸಂಶಯಗಳಿಗೆ ಸಮಾಧಾನ ಕಷ್ಟ. ಅಥವಾ ಚರ್ಚೆಯಿಂದ ಲೇ ಸಮಾಧಾನವಾಗುವುದೂ ಇಲ್ಲ. ಇಂತಾ ಸಂಶಯಗಳಿಗೆ ನನ್ನ ಸಮಾಧಾನ ಏನೆಂದರೆ……

ನಮ್ಮ ಆಹಾರಕ್ಕಾಗಿ ಮನುಷ್ಯನು ಪ್ರಾಣಿಯನ್ನು ಕೊಲ್ಲಬಾರದು. ಮನುಷ್ಯನು ಸಸ್ಯಾಹಾರಿ. ಆದರೆ ನಮಗೆ ಉಪಟಳ ಕೊಡುವ ಜಿರಲೆ, ಇರುವೆ,ಇಲಿ,ಇವುಗಳ ನಾಶ ಮಾಡದೆ ವಿಧಿಯಿಲ್ಲ-ನಮ್ಮ ನಿರಾಳ ಬದುಕಿಗಾಗಿ[ಆಹಾರಕ್ಕಾಗಿ ಅಲ್ಲ] ಅಂತೆಯೇ ಸಸ್ಯಾಹಾರ ಪಡೆಯಲು ಸಸ್ಯಗಳನ್ನು ಕೊಲ್ಲುವುದಕ್ಕಾಗಿಯೇ ಬೆಳೆಯುತ್ತೇವೆ.ಸಸ್ಯಗಳನ್ನು ಕೊಯ್ಯುವ ಪ್ರಕ್ರಿಯೆಯನ್ನು ಪ್ರಾಣಿಗಳನ್ನು ಕೊಲ್ಲುವ ಪ್ರಕ್ರಿಯೆಗೆ ಹೋಲಿಸಲಾಗದು.

ನನ್ನ ಸ್ವಭಾವ ತಿಳಿಸುವೆ. ನಮ್ಮ ಕಛೇರಿ ಆವರಣದಲ್ಲಿ ಸಾಕಷ್ಟು ಹೂ ಗಿಡ ಬೆಳೆದಿದ್ದೇವೆ. ಪ್ರತಿದಿನ ಸಾಕಷ್ಟು ಹೂ ಅರಳುತ್ತವೆ. ನಮ್ಮ ಕಛೇರಿಯ ಸಿಬ್ಬಂಧಿಗಳು ಅವುಗಳನ್ನು ಕೊಯ್ದು ದೇವರ ಫೋಟೋ ಗಳಿಗೆ ಅಲಂಕರಿಸುತ್ತಾರೆ.ನಾನು ಅವರಲ್ಲಿ ಸಾಮಾನ್ಯವಾಗಿ ಹೇಳುತ್ತೇನೆ. “ ಗಿಡಗಳಲ್ಲಿ ಹೂ ಅರಳಿದ್ದಾಗ  ಅವು  ಗಾಳಿಗೆ ತೂಗುತ್ತಿದ್ದರೆ ಅವನ್ನು ನೋಡಲು ಚೆಂದವೋ? ಅಥವಾ ಕಿತ್ತ ಹೂ ಸ್ವಲ್ಪ ಹೊತ್ತಿನಲ್ಲಿ ಬಾಡಿ ದೇವರ ಪಟದ ಮೇಲೆ ಮುದುಡಿಕೊಳ್ಳುವ ಚಿತ್ರಣ ಅಂದವೋ? ಹಾಗಂತ ಯಾರೂ ಗಿಡದಿಂದ ಹೂ ಕೀಳದೇ ಇರುವುದಿಲ್ಲ. ಆದರೆ ಹೂ ವು ಗಿಡದಲ್ಲಿದ್ದರೇನೇ ಚೆಂದ. ಪೈರು ಬಂದಾಗ ಬೆಳೆಕೊಯ್ದು ದವಸ ಧಾನ್ಯವನ್ನು ಆಹಾರಕ್ಕೆ ಪಡೆಯುವುದೇ ಯೋಗ್ಯ.

ಇವೆಲ್ಲಾ ನನ್ನ ಭಾವನೆಗಳು. ಶ್ರೀ ಸುಧಾಕರಶರ್ಮರಂತವರು ಸೂಕ್ತ ಉತ್ತರ ಕೊಡಬಲ್ಲರು. ಆದರೆ ಶರ್ಮರಿಗೆ ಆರೋಗ್ಯ ಉತ್ತಮವಾಗಿಲ್ಲ. ಸಧ್ಯಕ್ಕೆ ಶರ್ಮರು ಉತ್ತರಿಸಲಾರರು. ಬೇರೆ ಚಿಂತಕರು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುವುದು ಸೂಕ್ತವಾಗಿದೆ.

7 comments:

  1. ಆತ್ಮೀಯರಾದ ಶ್ರೀಧರ್ ರವರಿಗೆ,
    ಧನ್ಯವಾದಗಳು ತಮ್ಮ ಸವಿವರವಾದ ಸಮಾಧಾನದ ಉತ್ತರಗಳಿಗೆ.
    ನನ್ನ ಪ್ರಶ್ನೆ ಮಾಂಸಹಾರದ ವಿಷಯದ ಕುರಿತಾಗಿ ಅಲ್ಲ. ಅಹಿಂಸೆ ಕುರಿತಾಗಿದ್ದು. ನನ್ನ ಮನಸ್ಸು ಯಾವಾಗಲು ಅಹಿಂಸಾ ಪ್ರವೃತ್ತಿ ಬಗೆಗೆ ಯೋಚನೆ ಮಾಡುತ್ತಿರುತ್ತದೆ. ಒಂದು ಜಿರಲೆ ಯನ್ನು ಸಹ ಕೊಲ್ಲುವುದಕ್ಕೆ ನಾನು ಹೋಗುವುದಿಲ್ಲ. ಹಾಗು ನಡೆದಾಡಬೇಕಾದರೆ ಇರುವೆಗಳು ಬಂದರೆ ಅದನ್ನು ದಾಟಿ ಹೋಗಲು ನಾನು ಪ್ರಯತ್ನಿಸುತ್ತೇನೆ. ನಮಗೆ ಉಪಟಳ ಕೊಟ್ಟರೂ ಚಿಂತೆಯಿಲ್ಲ ಆದರೆ ಅದರಿಂದ ದೂರವಿರುವ ಮನಸ್ಸನ್ನು ಮಾಡುತ್ತೇನೆ.
    ವಿಷಯ ಅದಲ್ಲ, ನಮ್ಮ ಮನಸ್ಸು ಕೇವಲ ತಿನ್ನುವುದಕ್ಕೆ ಮಾತ್ರ ಕೊಲ್ಲಬಾರದು ಅಂತ ಯಾಕೆ ಯೋಚಿಸುತ್ತದೆ, ಬೇರೆ ರೀತಿಯಾದ ಹಿಂಸೆ ಮತ್ತು ತೊಂದರೆಗಳ ಬಗ್ಗೆ ಯಾಕೆ ಯೋಚಿಸುತ್ತಿಲ್ಲ ಅಂತ.
    ನಾವು ಸಾಮನ್ಯವಾಗಿ ಬೆಳೆಗಳಿಗೆ ಕೀಟಗಳ ತೊಂದರೆ ಆಗಬಾರದು ಎಂದು ಕೀಟನಾಶಕ ಗಳನ್ನು ಸಿಂಪಡಿಸುತ್ತೇವೆ, ಜಿರಲೆ, ಇಲಿ ಗಳು ತೊಂದರೆ ಕೊಡುತ್ತವೆ ಅಂತ ವಿಷವಿಕ್ಕಿ ಸಾಯಿಸಲು ಯತ್ನಿಸುತ್ತೇವೆ. ಒಂದು ವೇಳೆ ಕಾಡು ಪ್ರಾಣಿಗಳು ತೊಂದರೆ ಕೊಟ್ಟರೆ ನಮ್ಮ ರಕ್ಷಣೆಗೆಗಾಗಿ ಅವುಗಳನ್ನು ಸಾಯಿಸದೆ ಬಿಡುವುದಿಲ್ಲ. ಒಟ್ಟಿನಲ್ಲಿ ನಮ್ಮ ಉಳಿವಿಗೆ ನಮಗೆ ಏನು ಬೇಕೊ ಅದನ್ನು ನಾವು ಮಾಡಲು ಹೇಸುವುದಿಲ್ಲ. ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಒಂದೊಂದು ಕಟ್ಟುಪಾಡು ಮತ್ತು ಕಟ್ಟಳೆಗಳು ಹಾಕಿಕೊಂಡು ನಾವು ಬದುಕುತಿದ್ದೇವೆ ಅಂತ ಅನಿಸುತ್ತಿದೆ.
    ಕೆಲವು ತರ್ಕಗಳು ಸಸ್ಯಹಾರವನ್ನು ಸಮರ್ಥಿಸುತ್ತವೆ ಹೊರತು ಅಹಿಂಸೆಯ ಇತರೆ ಪ್ರಶ್ನೆ ಗಳಿಗೆ ಉತ್ತರ ಮಾತ್ರ ನಾವು ಹಾಕಿಕೊಂಡ ಚೌಕಟ್ಟು ಮತ್ತು ನಮ್ಮ ಅಗತ್ಯತೆ ಮಾತ್ರ.
    ನೀವೇ ಹೇಳಿದ ಹಾಗೆ, ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗುವುದು ಕಷ್ಟ ಮತ್ತು ಚರ್ಚೆ ಯಿಂದಲೇ ಸಮಾಧಾನವಾಗುವುದಿಲ್ಲ ಎಂಬುದು ಸರಿ.
    ಕಾಡಿನಲ್ಲಿ ಹೋಗುವಾಗ ಯಾವುದಾದರು ಕಾಡು ಪ್ರಾಣಿ ನಮ್ಮ ಮೇಲೆರಗಿಬಂದರೆ ಅದರಿಂದ ತಪ್ಪಿಸಿಕೊಳ್ಳುವಾಗ ಸಾಧ್ಯವಾದಷ್ಟು ಹೋರಾಡಿ ಅದನ್ನು ದಮನಿಸಲೆತ್ನಿಸುತ್ತೇವೆ. ಇಲ್ಲಿ ಯೋಚಿಸಲು ಶಕ್ತನಾಗಿರುವ ಮನುಷ್ಯ "ಒಂದೋ ತಾನು ಸಾಯಬಹುದು ಇಲ್ಲವೆ ಪ್ರಾಣಿ ಯನ್ನು ಸಾಯಿಸ ಬಹುದು" ಹಾಗೆ "ತಾನು ಗಾಯ ಗೊಳ್ಳಬಹುದು ಅಥವ ಪ್ರಾಣಿಯನ್ನು ಗಾಯ ಗೊಳಿಸಬಹುದು" ಆದರೆ ಪ್ರಾಣಿ ಮಾತ್ರ ತನ್ನ ಆಹಾರ ಕ್ಕಾಗಿ ಹೋರಾಟವನ್ನು ಮಾಡುತ್ತದೆ ವಿನಹ ಬೇರೇನು ಚಿಂತಿಸದು. ಯಾವುದು ಸರಿ ಮತ್ತು ತಪ್ಪು ಯೋಚಿಸಲು ಬಾರದ ಮನಸ್ಥಿತಿ ಪ್ರಾಣಿಯದು. ಮನುಷ್ಯನಿಗೆ ಮಾತ್ರ ಎಲ್ಲ ಗೊತ್ತು, ಆದರೆ ಅವನಿಗೆ ಮಾತ್ರ ತನ್ನ ಪ್ರಾಣ ಮುಖ್ಯ. ಅದನ್ನು ಉಳಿಸಿಕೊಳ್ಳಲು ಪ್ರಾಣಿಯನ್ನು ಕೊಲ್ಲಲು ಸಹ ಹೇಸುವುದಿಲ್ಲ. ಹಾಗೆ ನೋಡಿದರೆ ಮುಗ್ಧ ಪ್ರಾಣಿಯನ್ನು ನೋಡಿ ನಾವು ಕನಿಕರ ಪಡಬೇಕು, ಆದರೆ ಆಸೆ ಬುರುಕ ಮನುಷ್ಯ ತನ್ನ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರಾಣಿಯ ಬಲಿ ತೆಗೆದುಕೊಳ್ಳುವುದಕ್ಕೆ ಹೋರಾಡುತ್ತಾನೆ.
    ಇಲ್ಲಿ ಬೇರೆ ರೀತಿಯಾಗಿ ಮನುಷ್ಯ ಯೋಚಿಸುವುದಿಲ್ಲ.
    ಇಂತಹ ಆಲೋಚನ ರೀತಿ ನನ್ನಲ್ಲಿ ಕೆಲ ಸಂಶಯಗಳನ್ನು ಹುಟ್ಟುಹಾಕಿವೆ ಅಷ್ಟೇ ವಿನಹ ಬೇರೆ ರೀತಿಯ ವಾದವಿಲ್ಲ.
    ವಂದನೆಗಳು.
    ರಂಗನಾಥ.

    ReplyDelete
  2. ನಿಮ್ಮ ಎಲ್ಲಾ ಮಾತನ್ನೂ ಒಪ್ಪುವೆ.ಮನುಷ್ಯನು ತನ್ನ ವಿಪರೀತವಾದ ಸ್ವಾರ್ಥದಿಂದ ಪೈರನ್ನು ಬೆಳೆಯುವಾಗಲೂ ಕೂಡ ವಿಷವನ್ನು ಪ್ರಯೋಗಿಸಿ ಜಂತುಗಳನ್ನು ಕೊಲ್ಲುವುದಷ್ಟೇ ಅಲ್ಲ, ನಿಧಾನವಾಗಿ ತಾನೂ ವಿಷಪ್ರಾಶನ ಮಾಡುತ್ತಿದ್ದಾನೆ. ಇದಕ್ಕೆಲ್ಲಾ ನಮ್ಮ ಆಧುನಿಕ ಸ್ವಾರ್ಥ ಚಿಂತನೆಯೇ ಕಾರಣ. ನಿಧಾನವಾಗಿಯಾದರೂ ನಾವು ನಮ್ಮ ಪರಂಪರಾನುಗತ ಜೀವನವನ್ನು ಅನುಸರಿಸಬೇಕಾಗಿದೆ. ಆಗ ಸ್ವಲ್ಪವಾದರೂ ಹಿಂಸೆ ಕಡಿಮೆಯಾದೀತು. ನಿಮ್ಮಂತೆಯೇ ನನಗೂ ಜಿರಲೆ ಕೊಲ್ಲಲು ಮನಸ್ಸು ಬಾರದು. ಆದರೆ ಮನೆಯಲ್ಲಿ ಅದರ ಮಾರಣಹೋಮ ನಡೆಯುತ್ತಲೇ ಇರುತ್ತದೆ. ಅದನ್ನು ತಪ್ಪಿಸಲು ಸಾಧ್ಯವಾಗಿಲ್ಲವೆಂಬ ನಿಜವನ್ನು ಒಪ್ಪಿಕೊಳ್ಳುವೆ.ನಿಮ್ಮ ಚರ್ಚೆಯ ರೀತಿ ಮನಸ್ಸಿಗೆ ಹಿತವೆನಿಸಿತು.ನಿಮ್ಮ ಚಿಂತನಾಲಹರಿಯಿಂದ ಆಕರ್ಶಿತನಾಗಿದ್ದೇನೆ. ಕಾರಣ ನೀವು ಅಹಿಂಸಾಪ್ರಿಯರು.ಯಾರಮನಸ್ಸಿಗೂ ಅಹಿತ ಉಂಟುಮಾಡಲು ನಿಮ್ಮ ಮನ ಒಪ್ಪದು.ವೇದಸುಧೆಗೆ ನಿಮ್ಮ ಸಲಹೆ ಸಹಕಾರವಿರಲಿ.ತಾವು ಈಗಾಗಲೇ ವೇದಸುಧೆಯ ಅಧಿಕೃತ ಲೇಖಕರು. ದಯಮಾಡಿ ಲೇಖನಗಳನ್ನು ನೀವೇ ನೇರವಾಗಿ ವೇದಸುಧೆಯಲ್ಲಿ ಬರೆಯಿರಿ. ನಮಸ್ತೆ.

    ReplyDelete
  3. ನಾನು ದಿ. 21-05-2011ರಂದು ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಭಾಗಿಯಾಗಿದ್ದೆ. ಆ ಸಂದರ್ಭದಲ್ಲಿ ಅವರು ತಿಳಿಸಿದ ಒಂದು ಮಾತು ಈ ಸಂದರ್ಭದಲ್ಲಿ ಪ್ರಸ್ತುತವಾಗಬಹುದು. ಅವರು ಹೇಳಿದ್ದರು: 'ಹೂವನ್ನು ಕೀಳುವುದು ಸರಿಯಲ್ಲ. ಅದರಿಂದ ಅದಕ್ಕೆ ನೋವಾಗುತ್ತದೆ. ನಮಗೆ ಗೊತ್ತಾಗುವುದಿಲ್ಲ. ಅದು ಗಿಡದಲ್ಲೇ ಇದ್ದರೆ ಪರಿಮಳ ಬೀರಿ ವಾತಾವರಣ ಆಹ್ಲಾದಗೊಳಿಸುತ್ತದೆ. ನಿಮಗೆ ಕೋಪ ಬರಬಹುದು. ಹೂವನ್ನು ಮುಡಿದುಕೊಳ್ಳುವುದೂ ಪಾಪವೇ.' ಪೂರ್ಣ ಅರಳಿದ, ಇನ್ನೇನು ಬೀಳಲಿರುವ ಹೂವನ್ನು ಉಪಯೋಗಿಸಬಹುದೆಂಬುದು ನನ್ನ ವೈಯಕ್ತಿಕ ಅನಿಸಿಕೆ.

    ReplyDelete
  4. ಹೂವು ಗಿಡದಲ್ಲಿದ್ದರೇನೇ ಚೆಂದ-ಎಂಬ ನನ್ನ ಮಾತಿಗೆ ಪುಷ್ಟಿ ಸಿಕ್ಕಿದಂತಾಯತಲ್ಲವೇ? ನಾಗರಾಜ್?

    ReplyDelete
  5. ನನ್ನ ಪ್ರಕಾರ ಬದುಕುವುದಕ್ಕಾಗಿ ಎಷ್ಟು ಬೇಕೋ ಅಷ್ಟನ್ನು ತಿಂದರೆ ಅದಕ್ಕೆ ಮಾತ್ರ ಸಮ್ಮತಿಯಿದೆ. ಬಾಯಿ ರುಚಿಗಾಗಿ, ಭೋಗಕ್ಕಾಗಿ ತಿಂದರೆ - ಆತ ಬರೇ ಸಸ್ಯಾಹಾರ ತಿಂದರೂ - ಅದಕ್ಕೆ ಶಾಸ್ತ್ರ ಸಮ್ಮತಿಯಿಲ್ಲ. ಇದನ್ನು ಸುಧಾಕರ ಶರ್ಮರು ಕೂಡ ಸ್ಪಷ್ಟಪಡಿಸಿದ್ದಾರೆ. ಮಾಂಸಾಹಾರ ಎನ್ನುವುದು ಮೂಲತಹ ಭೋಗವೇ. ಯಾಕೆಂದರೆ ಮನುಷ್ಯನಿಗೆ ಮಾಂಸ ತಿನ್ನದೇ ಚೆನ್ನಾಗಿ ಬದುಕುವ ವ್ಯವಸ್ಥೆ ಇದೆ ಎಂದ ಮೇಲೆ ಬಾಯಿ ರುಚಿ ಮತ್ತು ಭೋಗಭಾವನೆಯೊಂದೇ ಮಾಂಸ ತಿನ್ನಲು ಕಾರಣ. ಈಗ ನೋಡಿ - ಆಸೆಬುರುಕ ಸಸ್ಯಾಹಾರಿ ಮತ್ತು ಮಾಂಸಾಹಾರಿ ಇವರಿಬ್ಬರಿಗೂ ಶಾಸ್ತ್ರ ಸಮ್ಮತಿ ಇಲ್ಲ. ಆದರೆ ಯಜ್ಞ ಯಾಗಾದಿಗಳನ್ನು ಮಾಡುವಾಗ ಆತ ಮಾಂಸಾಹಾರಿಯಾಗಿದ್ದರೆ ಜನ ಪ್ರಶ್ನಿಸುತ್ತಾರೆ. ಆದರೆ ಆತ ಆಸೆಬುರುಕ ಸಸ್ಯಾಹಾರಿಯಾಗಿದ್ದರೆ ಯಾಕೆ ಯಾರೂ ಪ್ರಶ್ನಿಸುವುದಿಲ್ಲ? ಇದು ನನಗೆ ವಿಚಿತ್ರವೆನಿಸುತ್ತದೆ.

    ReplyDelete
  6. ಮನುಷ್ಯನ ಆಹಾರ ವಿಷಯದಲ್ಲಿ ಬಹಳಷ್ಟು ವಿಚಾರ ಮಾಡುವುದಿದೆ. ಊಟ ಮಾಡುವುದೇ ಒಂದು ಯಜ್ಞ. ಅದನ್ನು ಹೇಗೆಂದರೆ ಹಾಗೆ, ಹೊಟ್ಟೆ ಬಿರಿಯುವಂತೆ,ಅಥವಾ ಬಾಯಿ ಚಪಲಕ್ಕಾಗಿ ಮಾಡುವಂತಿಲ್ಲ.ಆ ಬಗ್ಗೆ ಶರ್ಮರಿಂದಲೇ ಒಂದು ಲೇಖನ ಬರೆಸೋಣ.ಶುದ್ಧ ಮಿತಹಾರವೇ ಆರೋಗ್ಯಕ್ಕೆ ಉತ್ತಮ ವಲ್ಲವೇ? ಸಸ್ಯಾಹಾರಿಯೂ ಕೂಡ ತನ್ನ ಆಲೋಚನೆಗಳಲ್ಲಿ, ನಡೆಯಲ್ಲಿ ಮಾದರಿಯಾಗಿದ್ದರೇನೇ ಅವನು ಉಳಿದೆಲ್ಲಕ್ಕೂ ಯೋಗ್ಯತೆ ಪಡೆಯುತ್ತಾನೆ. ಅದಿಲ್ಲದಿದ್ದರೆ ಅವನು ಸಸ್ಯಾಹಾರಿಯಾದರೇನು? ಮಾಂಸಾಹಾರಿಯಾದರೇನು?

    ReplyDelete
  7. `ನನ್ನದು' ಎಂಬ ಅಂಟಿದ್ದರೆ, ಅಭಿಮಾನವಿದ್ದರೆ ನೋವು-ನಲಿವು. ನನ್ನ ಮನೆಯ ಸಾವು ಕೊಡುವಷ್ಟು ತೊಂದರೆ ಎಲ್ಲಿನದೋ ನಾವು ಕೊಡದು!!
    ಸಸ್ಯಗಳಲ್ಲಿ ಅಭಿಮಾನೀ ಜೀವವಿಲ್ಲ. `ಅನುಶಾಯೀ' ಜೀವಗಳಿವೆ. (ಸುಪ್ತ ಸ್ಥಿತಿಯಲ್ಲಿರುವ, ತಾತ್ಕಾಲಿಕವಾಗಿ ಆಶ್ರಯ ಪಡೆದಿರುವ ಜೀವಿಗಳು) ಸುಪ್ತ ಸ್ಥಿತಿಯಲ್ಲಿರುವುದರಿಂದಲೂ, `ನನ್ನದು' ಎಂಬ ಅಭಿಮಾನ ಇಲ್ಲದಿರುವುದರಿಂದಲೂ,ನರಮಂಡಲ ವ್ಯವಸ್ಥೆ ಇಲ್ಲದಿರುವುದರಿಂದಲೂ ನೋವು-ನಲಿವುಗಳಿಲ್ಲ! ಭೌತಿಕ ಪ್ರತಿಕ್ರಿಯೆಗಷ್ಟೇ ಸೀಮಿತ (ನೆನಪಿಗಾಗಿ: ಜಗದೀಶ ಚಂದ್ರ ಬೋಸ್)
    ಮಾನವನ ಅತಿಶ್ರೇಷ್ಠ ಆಹಾರ ಹಣ್ಣು!! ವಾಸನೆ, ಬಣ್ಣ, ರುಚಿಯ ಭಾಗ ನಮಗೆ, ಪ್ರಾಣಿಗಳಿಗೆ! ಬೀಜ ಮಣ್ಣಿಗೆ! ನಮಗೆ ಊಟ, ಸಸ್ಸಕ್ಕೆ ಬೀಜಪ್ರಸಾರ!!
    ಮಾಂಸ = ಹಣ್ಣಿನ ತಿರುಳು!!! (ಆಪ್ಟೆ ಸಂಸ್ಲೃತ ನಿಘಂಟು ನೋಡಿ!)
    ಪ್ರಾಣಿಯ ಶರೀರದ ಭಾಗಕ್ಕೆ `ಪಿಶ' ೆ<ದು ಹೆಸರು. ಪಿಶವನ್ನು ತಿನ್ನುವವರು ಪಿಶಾಚಿಗಳು!! ಮಾನವರೇ ಅಲ್ಲ.
    ಪಿಶ ಮಾನವರ ಆಹಾರವಲ್ಲ.
    ಈ ಮಾತನ್ನು ಒಪ್ಪದವರು, ಹಸಿವಾದಾಗ ಯಾವುದೇ ಆಯುಧಗಳ ಸಹಾಯವಿಲ್ಲದೇ, ಪ್ರಾಣಿಯ ಬೇಟೆಯಾಡಿ, ಸಿಗಿದು, ಹಸಿಯಾಗಿಯೇ ತಿಂದು ಬದುಕಿ ತೋರಿಸಬೇಕು! ಸಸ್ಯಾಹಾರವನ್ನು ಬೆರೆಸುವಂತಿಲ್ಲ. ಒಂದು ವರ್ಷ ಕಾಲ ಹೀಗೆ ಮಾಡಿ ಆರೋಗ್ಯವಾಗಿದ್ದು (ಬದುಕಿದ್ದರೆ) ತೋರಿಸಬೇಕು!! ಇದೊಂದು ಸವಾಲು!!
    ಮಾನವರಾದ ನಾವು ಯಾವುದೇ ಆಯುಧಗಳ ನೆರವಿಲ್ಲದೆ, ಹಣ್ಣನ್ನು ಹಸಿಯಾಗಿಯೇ ತಿಂದು ಅದೇ ಒಂದು ವರ್ಷ ಆರೋಗ್ಯವಾಗಿದ್ದು ತೋರಿಸುತ್ತೇವೆ!!!

    ReplyDelete