Pages

Monday, August 1, 2011

ವಿವೇಕ ಚೂಡಾಮಣಿ -ಭಾಗ ೪


ಗ್ರಂಥದ ಮುಂದುವರಿದ ಭಾಗ.

॥दुर्लभं त्रयमेवैतद् दैवानुग्रहहेतुकम्।
मनुष्यत्वं मुमुक्षुत्वम् महापुरुषसंश्र्यः ॥३||

||ದುರ್ಲಭಂ ತ್ರಯಮೇವೈತದ್ ದೈವಾನುಗ್ರಹ ಹೇತುಕಮ್ |
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ || ೩||


ಈ ಲೋಕದಲ್ಲಿ ಸುಲಭವಾಗಿ ದೊರಕದ (ದುರ್ಲಭವಾದ) ವಿಷಯಗಳನ್ನು ತಿಳಿಸುತ್ತಾ ಶ್ರೀ ಶಂಕರರು ಇನ್ನೂ ಮಹತ್ತರವಾದ ವಿಚಾರವನ್ನು ಪ್ರಸ್ತಾವಿಸುತ್ತಾರೆ.
ಮೇಲಿನ ಶ್ಲೋಕದ ಮೊದಲನೆಯ ಸಾಲನ್ನು ಗಮನಿಸೋಣ

ದುರ್ಲಭಂ ತ್ರಯಮೈವತದ್ ದೈವಾನುಗ್ರಹ ಹೇತುಕಮ್
(ದುರ್ಲಭಂ =ಸುಲಭವಾಗಿ ದೊರಕದ, ತ್ರಯಮ್ =ಮೂರು, ದೈವಾನುಗ್ರಹ ಹೇತುಕಮ್ = ದೈವಾನುಗ್ರಹವೇ ಕಾರಣವಾಗಿರುವ )

ದೈವಾನುಗ್ರಹವೇ ಕಾರಣವಾಗಿರುವ ಮೂರು ಮುಖ್ಯ ದುರ್ಲಭವಾದ ಸಂಗತಿಗಳಿವೆ . ಆ ಸಂಗತಿಗಳನ್ನು ಶ್ಲೋಕದ ಎರಡನೆಯ ಸಾಲಿನಲ್ಲಿ ಹೇಳಲಾಗಿದೆ. ಆ ಎರಡನೆಯ ಸಾಲಿನ ಮೊದಲನೆಯ ಸಂಗತಿಯನ್ನು ಗಮನಿಸೋಣ.

೧) ಮನುಷ್ಯತ್ವಮ್ (= ಮನುಜನಾಗಿರುವುದು)

ಮಾನವ ಜೀವಿಯು 'ಮನುಷ್ಯ' ಎನಿಸಿಕೊಳ್ಳಲು ಆತನಿಗಿರಬೇಕಾದ ಕನಿಷ್ಠ ಅರ್ಹತೆಯೆಂದರೆ ಅದು ಮನುಷ್ಯತ್ವ !. ಕಾಡು ಪ್ರಾಣಿಗಳ ಗುಣವು ನಾಗರೀಕ ಮಾನವನ ಗುಣವಲ್ಲ. ಈ ಮೊದಲು ಹೇಳಿದಂತೆ ಮಾನವನಿಗೆ ಹೆಚ್ಚಿನ ಗುಣಗಳು ಸಂದಾಯವಾಗಿ ಬಂದಿದ್ದರೆ ಕೆಲವೊಂದನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. ಗುಣ ಸಂಪಾದನೆಗೆ ಸ್ವಾನುಭವವೂ ದಾರಿಯಾಗಬಲ್ಲುದು ವೇದಾಂತಗಳ ಅರಿವೂ ಬೆಳಕಾಗಬಲ್ಲುದು. ಸಂವೇದನಾಶೀಲತೆಯೇ ಮನುಷ್ಯತ್ವದ ಮುಖ್ಯ ಲಕ್ಷಣ ಎನ್ನಬಹುದು. ಸಂವೇದನೆ (ನೋವು-ನಲಿವು ಮುಂತಾದವು )ಗಳಿಗೆ ಮನಸ್ಸು-ಬುದ್ಧಿಯನ್ನು ಬಲಿಗೊಡದೆ ಸ್ಥಿತಪ್ರಜ್ಞರಂತೆ ಇರಬೇಕೆಂದು ’ಗೀತೆ’ಯಲ್ಲಿ ಹೇಳಿದ್ದರೂ ಹಾಗೆ ಹೇಳಿರುವ ಸಂದರ್ಭ ಮತ್ತು ಉದ್ದೇಶವನ್ನು ನಾವು ಗಮನದಲ್ಲಿಡಬೇಕಾಗುತ್ತದೆ. ಸೂಕ್ಷ್ಮ ಸಂವೇದನೆಗಳಿಲ್ಲದ ಮಾನವನಲ್ಲಿ ಮನುಷ್ಯತ್ವವನ್ನು ಕಾಣಲು ಸಾಧ್ಯವೆ ?. ನಮ್ಮ ಸುತ್ತಲಿನ ಪರಿಸರದ ಮತ್ತು ನಮ್ಮೊಡನೆ ಜೀವಿಸುವ ಜೀವಿಗಳ ಆಗು-ಹೋಗುಗಳ ವಿಷಯದಲ್ಲಿ ಆಸಕ್ತರಾಗಿರುವುದು, ನೋವು-ನಲಿವುಗಳಲ್ಲಿ ಭಾಗಿಯಾಗುವುದು ಮನುಷ್ಯತ್ವದ ಪ್ರತೀಕ. ಮನುಷ್ಯರಾದ ನಾವು ಮನುಷ್ಯತ್ವವನ್ನು ಸ್ವಾನುಭವದಿಂದಲ್ಲದೆ ಕೇವಲ ಉಪದೇಶಗಳನ್ನು ಕೇಳುವುದರಿಂದಲೇ ಕಂಡುಕೊಳ್ಳಲೆತ್ನಿಸುವುದು ಕಡ್ಡತನವೇ ಸರಿ !. ಗ್ರಂಥದ ಆರಂಭದ ಶ್ಲೋಕದಲ್ಲೇ "ಸ್ವನುಭವೋ" ( ಸು = ಚೆನ್ನಾದ, ಒಳ್ಳೆಯ, ಅನುಭವಃ = ಸಾಕ್ಷಾತ್ಕಾರ, ತಿಳುವಳಿಕೆ) ಎಂದು ಹೇಳಿ ಅದಕ್ಕೆ ಮಹತ್ವವನ್ನು ನೀಡಲಾಗಿದೆ. ಧ್ಯಾನ (ವಿದ್ಯೆ) ಮತ್ತು ಯೋಗಗಳ ಸಹಾಯದಿಂದ (ಆಚರಣೆಯಿಂದ) ಮನುಷ್ಯತ್ವದ ತಿಳುವಳಿಕೆಯನ್ನು ಪಡೆಯುವ ಮಾರ್ಗವೇ ಉತ್ತಮವೆಂದು ಹೇಳಲಾಗಿದೆ.

೨) ಮುಮುಕ್ಷುತ್ವಮ್ ( = ಮೋಕ್ಷದ ಅಪೇಕ್ಷೆ, ಬಿಡುಗಡೆಯ ಬಯಕೆ )

ಪ್ರಾಪಂಚಿಕ ಸುಖಗಳನ್ನೆಲ್ಲಾ ತೊರೆದು ವೈರಾಗ್ಯವನ್ನು ತಾಳಿದರೆ ಮಾತ್ರ ಮೋಕ್ಷ ದೊರಕುವುದೆಂದಾದರೆ ವಿಶಿಷ್ಟತೆ-ವಿಚಿತ್ರಗಳಿಂದ ಕೂಡಿರುವ ಈ ಲೋಕದಲ್ಲಿ ಹುಟ್ಟುವುದಾದರೂ ಏಕೆ ?! . ಹುಟ್ಟು-ಸಾವುಗಳೆರಡೂ ಸಾಮಾನ್ಯ ಮನುಜನ ಅಂಕೆಯಲ್ಲಿ ಇಲ್ಲದಿರುವುದರಿಂದ ಮೇಲಿನ ಪ್ರಶ್ನೆಗೆ ಸಾಮಾನ್ಯ ಸ್ತರದಲ್ಲಿ ಉತ್ತರ ದೊರಕುವುದಿಲ್ಲ !.
ಈ ಲೋಕದ ವ್ಯವಹಾರಗಳಲ್ಲಿ ನಾವು ತೊಡಗಿಕೊಂಡಾಗ ಪರಸ್ಪರ ಸಹಕಾರ ಸಂವೇದನೆಗಳು ಏರ್ಪಡುವುದು ಸಹಜ. ಉದಾಹರಣೆಗೆ ;
ನಮ್ಮ ಮನೆಯ ಮುದ್ದಿನ ನಾಯಿಗೆ ಕಾಯಿಲೆಯಾದರೆ ಅದರ ಮೇಲಿನ ವಾತ್ಸಲ್ಯದಿಂದ ಔಷಧಿಗಳನ್ನು ಕೊಟ್ಟು ಉಪಚರಿಸಿ ಚೇತರಿಸಿಕೊಳ್ಳುವಂತೆ ಮಾಡುತ್ತೇವೆ ( ಇದು ಮನುಷ್ಯತ್ವ). ನಾಯಿಗೆ ಕಾಯಿಲೆ ಬಂದಾಗ ಬಾಡುವ ಮನಸ್ಸು, ನಾಯಿಯು ಚೇತರಿಸಿಕೊಂಡು ಪ್ರೀತಿಯಿಂದ ಬಾಲವನ್ನು ಆಡಿಸಿದಾಗ ಅರಳುತ್ತದೆ. ನಮ್ಮ ಔಷಧೋಪಚಾರಕ್ಕೆ ಬೆಲೆ ಬರುತ್ತದೆ. ಮನಸ್ಸಿಗೆ ನೆಮ್ಮದಿ ದೊರೆತು ಆತಂಕದಿಂದ ’ಮುಕ್ತಿ’ ಸಿಗುತ್ತದೆ. ಇಂತಹ ಸಣ್ಣ ಸಣ್ಣ ’ಮುಕ್ತಿ’ಗಳೇ ಸಮಷ್ಟಿಯಲ್ಲಿ (ಒಟ್ಟಾರೆ) ಮೋಕ್ಷದ ದಾರಿಯೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ನಮ್ಮ ಕರ್ತವ್ಯ, ಕರ್ಮಗಳನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸಿದ ನಂತರ ದೊರೆಯುವ ನೆಮ್ಮದಿ ಮತ್ತು ಬಿಡುಗಡೆಯ ಆನಂದವನ್ನು ನಾವು ಅನುಭವಿಸಿಯೇ ಅರಿತಿರುತ್ತೇವೆ. ಕರ್ಮದ ದಾರಿಯಲ್ಲಿ ಇಂತಹ ಬಿಡುಗಡೆಯನ್ನು ಪಡೆಯುತ್ತಾ ಹೋದಂತೆ ಜ್ಞಾನವೂ ವರ್ಧಿಸುತ್ತಾ ಹೋಗುತ್ತದೆ. ಜ್ಞಾನ ಮಾರ್ಗದಿಂದ ಪಡೆಯುವ ನೆಮ್ಮದಿ ಅಥವಾ ಮೋಕ್ಷವು (ಬ್ರಹ್ಮ ಜ್ಞಾನವು) ಕರ್ಮಮಾರ್ಗದಿಂದ ಪಡೆದಿದುಕ್ಕಿಂತಲೂ ಮಿಗಿಲಾದುದಾಗಿರುತ್ತದೆ. ಪ್ರಾಪಂಚಿಕ ಸುಖಗಳಲ್ಲಿ ತೊಡಗಿಕೊಂಡ ನಂತರ ಆಯಾ ಕರ್ಮಗಳನ್ನು ಪ್ರಾಮಾಣಿಕವಾಗಿ ಮುಗಿಸಿ ನಿರಾಳತೆಯನ್ನು ಹೊಂದಿದರೆ ಕರ್ಮದಿಂದ ಮುಕ್ತರಾಗಬಹುದು ಆದರೆ ಕರ್ಮಮುಕ್ತಿಯು ಯೋಗ್ಯವಲ್ಲದ್ದು ( ಹಲವು ಬಾರಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೊನೆಗೊಮ್ಮೆ ಪೂರಕ ಪರೀಕ್ಷೆಯಲ್ಲಿ ಸಾರಾ ಸಗಟು ೩೫ ಅಂಕಗಳನ್ನು ನೀಡಿ ಪಾಸು ಮಾಡಿದಂತೆ !) ಎನ್ನುವ ಅಭಿಪ್ರಾಯವಿರುವುದರಿಂದ ಜ್ಞಾನದಿಂದಲೇ ಮುಮುಕ್ಷುತ್ವವನ್ನು ಪಡೆಯುವುದು ಉತ್ತಮ ಎಂದು ಹೇಳಲಾಗಿದೆ. ಹಾಗಾದರೆ ಕರ್ಮ(ಕರ್ತವ್ಯ)ವನ್ನು ಮಾಡದೆ ನೇರವಾಗಿ ಜ್ಞಾನ ಸಂಪಾದನೆಯನ್ನೇ ಮಾಡಬಹುದಲ್ಲಾ ಎಂದುಕೊಂಡರೆ ಅದೂ ತಪ್ಪಾಗುತ್ತದೆ !. ಕರ್ಮವನ್ನು ಮಾಡುವುದರಿಂದ ಮಾತ್ರ ಅದರ ಬಂಧನದಿಂದ ಬಿಡುಗಡೆ ಹೊಂದಬಹುದೇ ಹೊರತು ಮಾಡದೇ ಇರುವುದರಿಂದಲ್ಲ ( ಬ್ಲಾಗ್ ಪೋಸ್ಟನ್ನು ಬರೆಯುವುದರಿಂದ ಮಾತ್ರವೇ ಆ ಚಟದಿಂದ ಮುಕ್ತರಾಗಬಹುದೇ ಹೊರತು ಬರೆಯದೆ ಸುಮ್ಮನಿರುವುದರಿಂದಲ್ಲ ! ). ಉಪದೇಶಗಳನ್ನು ಕೇಳುವುದರಿಂದ, ಕೇಳಿದ್ದನ್ನು ಮನನ ಮಾಡುವುದರಿಂದ ಬರುವ ಅನುಭವವು ಉನ್ನತ ಮಟ್ಟದ್ದಾಗಿರುವುದಿಲ್ಲ, *ಜ್ಞಾನಭೂಮಿಕೆ*ಗಳಿಂದ ಪಡೆಯುವ ಅನುಭವವು ಮುಮುಕ್ಷುತ್ವಕ್ಕೆ ದಾರಿ ಮಾಡಿಕೊಡುತ್ತದೆ.
ಒಬ್ಬಾತನು ರಾಮಕೃಷ್ಣ ಪರಮಹಂಸರ ಬಳಿಗೆ ತೆರಳಿ "ಮುಮುಕ್ಷುತ್ವ" ಎಂದರೇನು ಎಂದು ಕೇಳಿದನಂತೆ. ಅವರು ವಿವರಣೆ ಕೊಡುವ ಬದಲು ಆತನನ್ನು ಗಂಗಾನದಿಯ ಬಳಿಗೆ ಕರೆದೊಯ್ದು ನದಿಯೊಳಗೆ ನಿಲ್ಲಿಸಿ ಆತನ ಕತ್ತನ್ನು ನೀರಿನೊಳಗೆ ಅದುಮಿ ಹಿಡಿದರಂತೆ. ಆ ಮನುಷ್ಯನು ತನ್ನೆಲ್ಲಾ ಶಕ್ತಿಯನ್ನು ಬಳಸಿ ತಲೆಯನ್ನು ನೀರಿನಿಂದ ಮೇಲೆತ್ತಿದನಂತೆ. "ಯಾಕಯ್ಯ" ಎಂದು ಪರಮಹಂಸರು ಕೇಳಿದರೆ " ಉಸಿರೇ ನಿಂತು ಹೊಗುತ್ತಿತ್ತು" ಎಂದನಂತೆ ಆ ಮನುಷ್ಯ.
"ಇಂತಹ ತೀವ್ರತೆಯೇ ಮುಮುಕ್ಷುತ್ವಕ್ಕೆ ದಾರಿ" ಎಂದರಂತೆ ಪರಮಹಂಸರು !.

೩) ಮಹಾಪುರುಷ ಸಂಶ್ರಯಃ (= ಮಹಾಪುರುಷರ, ಸಜ್ಜನರ ಸಹವಾಸ ಪಡೆಯುವುದು)

’ಸಹವಾಸದಿಂದ ಸನ್ಯಾಸಿ ಕೆಟ್ಟ’ ಎಂಬ ಮಾತನ್ನು ಕೇಳಿರುತ್ತೇವೆ. ವೇದಾಂತಿಗಳಾದ ಮಂಡನಮಿಶ್ರರ ಮನೆಯಲ್ಲಿ ಗಿಳಿಗಳೂ ಸಹ ವೇದಾಂತಗಳ ಬಗ್ಗೆ ತರ್ಕವನ್ನು ಮಾಡುತ್ತಿದ್ದುವಂತೆ !. "ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ" ಎಂಬ ಸರ್ವಜ್ಞನ ವಚನವನ್ನು ಓದಿರುತ್ತೇವೆ. ವಿಚಾರಗಳ ತಿಳಿವು ಪಡೆಯಲು ಅರಿತವರೊಂದಿಗೆ, ಮಹಾಪುರುಷರೊಂದಿಗೆ ತರ್ಕಮಾಡಬೇಕೆಂದೇನೂ ಇಲ್ಲ, ಅಂತಹ ಮಹನೀಯರ ನಡುವಿನ ಸಂಭಾಷಣೆಯನ್ನು ಮೌನವಾಗಿ ಕೇಳಿಸಿಕೊಳ್ಳುವುದರಿಂದಲೇ ಹೆಚ್ಚಿನ ತಿಳಿವನ್ನು ಪಡೆಯಬಹುದು. ಜ್ಞಾನಿಗಳ ಹರಟೆಯ ವಿಷಯಗಳೇ ಆಸಕ್ತರಿಗೆ ಮಹತ್ವವಾಗಿ ಪರಿಣಮಿಸಬಲ್ಲುದು. ಚಾಣಕ್ಯನೆಂಬ ಮಹಾಪುರುಷನ ಸಹವಾಸಕ್ಕೆ ಸಿಲುಕಿದ ಚಂದ್ರಗುಪ್ತನೆಂಬ ಬಾಲಕ ಮುಂದೆ ಮೌರ್ಯ ವಂಶದ ದೊರೆಯಾದದ್ದು ಇತಿಹಾಸ. ಮಾನಸಿಕ ಒತ್ತಡಕ್ಕೆ ಸಿಲುಕಿದಾಗ ಮನೋವಿಜ್ಞಾನಿಗಳ ಬಳಿಗೆ ತೆರಳಿ ಸಲಹೆ ಪಡೆಯುವುದು ಇಂದಿನ ದಿನಗಳಲ್ಲಿ ವಾಡಿಕೆಯೇ ಆಗಿದೆ. ಅಲ್ಲಿ ಪಡೆಯಬಹುದಾದ ಸಲಹೆಯ ಬಹುಪಾಲು ಅಂಶಗಳು ನಮ್ಮ ಸಂಸ್ಕೃತಿಯ ವೇದೋಪನಿಷತ್ತುಗಳಲ್ಲಿಯೇ ಅಡಗಿದೆ ಎನ್ನುವುದನ್ನು ನಮ್ಮವರೇ (ಜಾಣ) ಮರೆತಿರುವುದು ವಿಪರ‍್ಯಾಸ !. ಇಂತಹ ಜ್ಞಾನ ದೀವಿಗೆಯನ್ನು ನಮಗಿತ್ತು ಆ ಬೆಳಕಿನಲ್ಲಿ ಅನವರತ ಸಾಗಿರಿ ಎಂದಂತಹ ಮಹಾಪುರುಷರ ಸಹವಾಸ ಇಂದು ಅಗತ್ಯವಾದುದಾಗಿದೆ. ಇಂತಹ ದುರ್ಲಭವಾದ ಸಹವಾಸವನ್ನು ಪಡೆಯುವುದು ಜ್ಞಾನ ಮಾರ್ಗದಲ್ಲಿ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

|| ದೊರಕದು ಇವು ಮೂರು ದೇವನಂತಃಕರಣವಿಲ್ಲದೆ
ಮನುಜನಾಗಿರುವುದು, ಮುಕ್ತಿಯು, ಸಜ್ಜನರ ಸಂಗವು ||

***********************************************
ಗ್ರಂಥದ ಮುಂದಿನ ಶ್ಲೋಕವನ್ನು ಗಮನಿಸೋಣ

लब्ध्वा कथन्चित नरजन्म दुर्लभं
तत्रापि पुंस्त्वं श्रुतिपारदर्शनम् ।
यस्त्वात्ममुक्त्यै न यतेत मूढधीः
स आत्महा स्वं विनिहन्त्यसद्ग्रहात ॥४॥

ಲಬ್ಧ್ವಾ ಕಥಂಚಿತ್ ನರಜನ್ಮ ದುರ್ಲಭಂ ತತ್ರಾಪಿ ಪುಂಸ್ತ್ವಂ ಶ್ರುತಿಪಾರದರ್ಶನಮ್ |
ಯಸ್ತ್ವಾತ್ಮಮುಕ್ತ್ಯೈ ನ ಯತೇತ ಮೂಢಧೀಃ ಸ ಆತ್ಮಹಾ ಸ್ವಂ ವಿನಿಹಂತ್ಯಸದ್ಗ್ರಹಾತ್ ||೪||

ಈ ಸೂಕ್ತಿಯು ಮೇಲಿನ ಮೂರನೆಯ ಸೂಕ್ತಿಗೆ ಪೂರಕವಾದ ಶ್ಲೋಕವಾಗಿದೆ. ಇದರ ಅರ್ಥವನ್ನು ಗಮನಿಸೋಣ.

ಲಬ್ಧ್ವಾ ಕಥಂಚಿತ್ ನರಜನ್ಮ ದುರ್ಲಭಂ (= ಕದಾಚಿತ್ (ಆಕಸ್ಮಿಕವಾಗಿ) ದೊರಕಿರುವ ದುರ್ಲಭವಾದ ನರಜನ್ಮ)
ತತ್ರಾಪಿ ಪುಂಸ್ತ್ವಂ ಶ್ರುತಿಪಾರದರ್ಶನಮ್ (= ವೇದಾಂತದರಿವಿಗೆ ಬೇಕಾದ ಪುರುಷತ್ವ)
ಯಸ್ತ್ವಾತ್ಮಮುಕ್ತ್ಯೈ ನ ಯತೇತ ಮೂಡಧೀಃ (= ತನ್ನ ಮುಕ್ತಿಗಾಗಿ ಯತ್ನಿಸದ ಮೂಳ (ದಡ್ಡ))
ಸ ಆತ್ಮಹಾ ಸ್ವಂ ವಿನಿಹಂತ್ಯಸದ್ಗ್ರಹಾತ್ (= ಆತ್ಮಘಾತುಕತನ)

ಹೀಗೆ ಆಕಸ್ಮಿಕವಾಗಿ ದೊರೆತಿರುವ ದುರ್ಲಭವಾದ ಮಾನವ ಜನ್ಮವಿದ್ದು ವೇದಾಂತದ, ಆತ್ಮ ಜ್ಞಾನದ ಅರಿವಿಗೆ ಬೇಕಾದ ಪುರುಷತ್ವವೂ ಇದ್ದು ತನ್ನ ಮುಕ್ತಿಗಾಗಿ ಯತ್ನಿಸದವನು ಮೂರ್ಖನು ಮತ್ತು ಹಾಗೆ ಮಾಡುವುದು ತನ್ನನ್ನೇ ತಾನು ಹತ್ಯೆ ಮಾಡಿಕೊಂಡತಾಗುತ್ತದೆ , ಹೇಗೆಂದರೆ ಮಿಥ್ಯೆ ಎನ್ನುವ ಈ ಜಗತ್ತನ್ನೇ ನಂಬುವುದರ ಮೂಲಕ ಎಂದು ಹೇಳಲಾಗಿದೆ. (’ಜಗನ್ಮಿಥ್ಯಾ’ ಎನ್ನುವುದಕ್ಕೆ ಮುಂದಿನ ಸೂಕ್ತಿಗಳಲ್ಲಿ ಸಾಕಷ್ಟು ವಿವರಣೆಗಳು ಬರಲಿದೆ)

************************

ಗ್ರಂಥದ ಐದನೆಯ ಸೂಕ್ತಿಯನ್ನು ನೋಡೋಣ

इतः कोन्वस्ति मूढात्मा यस्तु स्वार्थे प्रमाद्यति ।
दुर्लभं मानुषं देहं प्राप्यतत्रापि पौरुषम् ॥५॥

ಇತಃ ಕೋನ್ವಸ್ತಿ ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ |
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯತತ್ರಾಪಿ ಪೌರುಷಮ್ ||೫||

ಈ ಸೂಕ್ತಿಯೂ ಸಹ ಮೇಲಿನ ಎರಡು ಮತ್ತು ಮೂರನೆಯ ಶ್ಲೋಕಗಳಿಗೆ ಪೂರಕವಾಗಿ ಹೇಳಿದುದಾಗಿದೆ. ಇದರ ಅರ್ಥವನ್ನು ಗಮನಿಸೋಣ.

ಇತಃ ಕೋನ್ವಸ್ತಿ ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ (= ತನ್ನ ಹಿತವನ್ನೇ ಕಾಯ್ದುಕೊಳ್ಳದ ಮೂಢ )
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯತತ್ರಾಪಿ ಪೌರುಷಮ್ (= ದುರ್ಲಭವಾದ ಮನುಷ್ಯಜನ್ಮ ಮತ್ತು ಪೌರುಷವನ್ನು ಪಡೆದು)

ಪ್ರಾಣಿಗಳಲ್ಲೇ ದುರ್ಲಭವಾದ ಮನುಷ್ಯಜನ್ಮವನ್ನು ಪಡೆದು, ಪುರುಷತ್ವವನ್ನೂ ಪಡೆದು ಧರ್ಮಮಾರ್ಗದಲ್ಲಿ ನಡೆಯುವ ಅಧಿಕಾರವನ್ನು ಪಡೆದು ಆತ್ಮಾನಾತ್ಮ ವಿವೇಚನೆಯನ್ನೂ ಪಡೆದು ಮನುಷ್ಯತ್ವ ಮುಮುಕ್ಷುತ್ವಗಳನ್ನೂ ತಿಳಿದು ಮಹಾಪುರುಷರ ಸಹವಾಸವನ್ನು ಹೊಂದಿದರೂ ಸಹ ತನ್ನ ಹಿತವನ್ನು ಕಾಪಾಡಿಕೊಳ್ಳಲಾಗದವನನ್ನು(ಕಾರ್ಯವನ್ನು ಜಯಿಸುವ ಸಾಮರ್ಥ್ಯವನ್ನು ತೋರದವನು) ಮೂಢನೆನ್ನದೆ ಏನನ್ನಬೇಕು?. ಅಂತಹವನು ಮಹಾ ಮೂರ್ಖನೇ ಸರಿ ಎಂದು ಹೇಳಲಾಗಿದೆ. ಹೀಗೆ ಐದು ಸೂಕ್ತಿಗಳಲ್ಲಿ ಮುಕ್ತಿಯ ಮಹತ್ವವನ್ನು ಶ್ರೀ ಶಂಕರರು ತಿಳಿಸಿದ್ದಾರೆ.

ಮುಂದಿನ ಕಂತಿನಲ್ಲಿ ಮತ್ತಷ್ಟು ತಿಳಿಯೋಣ.
----------------------------------------------------------------------------------------------------------

ಟಿಪ್ಪಣಿ :

*ಜ್ಞಾನ ಭೂಮಿಕೆಗಳು * (ಸ್ವಾನುಭವಕ್ಕೆ ಪೂರಕವಾದ ಸಂಗತಿಗಳು) ಒಟ್ಟು ಏಳು. ಅವು ಹೀಗಿವೆ.

೧) ಶುಭೇಚ್ಛೆ = ತಾನಿನ್ನೂ ಮೂಳನಾಗಿಯೇ ಇದ್ದೇನೆ, ಧರ್ಮಶಾಸ್ತ್ರಗಳಿಂದ ಮತ್ತು ಸಜ್ಜನರ ಸಹವಾಸದಿಂದ ಆತ್ಮಜ್ಞಾನವನ್ನು ಪಡೆಯಬೇಕು ಎಂಬ ಆಸಕ್ತಿ ಬರುವುದೇ ಶುಭೇಚ್ಛೆ.
೨) ವಿಚಾರಣಾ = ಶಾಸ್ತ್ರಗಳನ್ನು ತಿಳಿದು ಜ್ಞಾನಿಗಳ ಸಹವಾಸವನ್ನು ಪಡೆದು ಸನ್ಮಾರ್ಗದಲ್ಲಿ, ಸದಾಚಾರದಲ್ಲಿ ನಡೆಯುವುದು ವಿಚಾರಣಾ.
೩) ತನುಮಾನಸೀ = ಮೇಲಿನ ಎರಡು ಭೂಮಿಕೆಗಳ ಅಭ್ಯಾಸದಿಂದ ಇಂದ್ರಿಯ ವಿಷಯಗಳಲ್ಲಿ ಉಂಟಾಗುವ ಅತಿಯಾದ ದೌರ್ಬಲ್ಯವನ್ನು ಕಳೆದುಕೊಂಡು ಸಾಮರ್ಥ್ಯವನ್ನು ಪಡೆಯುವುದು ತನುಮಾನಸೀ.
೪) ಸತ್ವಾಪತ್ತಿ = ಮೇಲಿನ ಮೂರು ಅನುಭವ ಮೂಲವಾದ ವಿಷಯಗಳ ಅನುಸರಣೆಯಿಂದ ಹುಟ್ಟುವ ಸತ್ವಗುಣ ಅಥವಾ ನೆಮ್ಮದಿಯ, ಶಾಂತಿಯ ಭಾವವೇ ಸತ್ವಾಪತ್ತಿ.
೫) ಅಸಂಸಕ್ತಿ = ಮೇಲೆ ಹೇಳಿದ ನಾಲ್ಕು ಭೂಮಿಕೆಗಳ ಅಭ್ಯಾಸದಿಂದ ಹೊರಗಿನ ವಿಷಯಗಳಲ್ಲಿ ( ಪ್ರಾಪಂಪಚಿಕ ಸುಖಗಳು) ಅತಿಯಾದ ಆಸಕ್ತಿಯು ನಿವಾರಣೆಯಾಗಿ ನೆಮ್ಮದಿಯ ಭಾವವೇ ವಾಡಿಕೆಯಾಗುವ ಅವಸ್ಥೆಯೇ ಅಸಂಸಕ್ತಿ.
೬) ಪದಾರ್ಥಭಾವನೀ = ಮೇಲೆ ಹೇಳಿದ ಐದು ಭೂಮಿಕೆಗಳ ಅನುಸರಣೆಯಿಂದ ಅಂತರ್ಬಾಹ್ಯ ವಿಷಯಗಳ ಬಗ್ಗೆ ನಿರ್ಲಿಪ್ತತೆಯುಂಟಾಗಿ ಕೇವಲ ಜ್ಞಾನದಿಂದಲೇ ಅವೆಲ್ಲವನ್ನೂ ತಿಳಿಯುವುದು ಪದಾರ್ಥಭಾವನೀ .
೭) ತುರ್ಯಗಾ = ಮೇಲಿನ ಆರೂ ಭೂಮಿಕೆಗಳ ಸತತ ಅಭ್ಯಾಸ ಮತ್ತು ಅನುಸರಣೆಯಿಂದ ಮನಸ್ಸು ಮತ್ತು ಬುದ್ಧಿಯು ಚಂಚಲಗೊಳ್ಳದೆ ಒಂದೇ ಸ್ವಭಾವವು ಜೀವಿಯಲ್ಲಿ ನೆಲೆಗೊಳ್ಳುವುದು ತುರ್ಯಗಾ.

1 comment:

  1. "ಮೋಕ್ಷ" ಎಂದರೆ ಅದು ಈ ಪ್ರಪಂಚದಿಂದಲೇ ಕಟ್ಟಕಡೆಯಬಿಡುಗಡೆ ಎಂದೇ ಅನೇಕರ ಅರ್ಥೈಸುತ್ತಾರೆ. ಆದರೆ ನಿಮ್ಮ ವಿವರಣೆ ಬಹಳ ಉಚಿತವಾಗಿದೆ. ಅಂದಂದಿನ ನೋವು ನಲಿವುಗಳಿಂದ ಅಂದೇ ಕಾಣುವ ಮುಕ್ತಿ!. ನಾಯಿಯ ಉಧಾಹರಣೆ ಅದ್ಭುತವಾಗಿದೆ. ನಿಜಕ್ಕೂ ಶಂಕರರ ವಿವೇಕಚೂಡಾಮಣಿಯಾಗಲೀ, ಸಾಧನಾ ಪಂಚಕಮ್ ಆಗಲೀ, ಭಜಗೋವಿಂದಮ್ ಆಗಲೀ ಅವೆಲ್ಲಾ ಭಕ್ತಿಯಿಂದ ಭಗವಂತನನ್ನು ಸ್ತುತಿಗಳಲ್ಲಾ, ಬದಲಿಗೆ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿರುವ ಸ್ವಾಸ್ಥ್ಯ ಬದುಕಿನ ಸೂತ್ರಗಳು.ನಾನು ಗಮನಿಸಿದಂತೆ ಇಂತಹಾ ಪೋಸ್ಟ್ ಗಳನ್ನು ಹೊರದೇಶಗಳಲ್ಲಿರುವ ಕನ್ನಡಿಗರು ನಿತ್ಯವೂ ಬಿಡದೆ ಓದುತ್ತಿದ್ದಾರೆ. ಇಂತಹಾ ವಿಚಾಗರಗಳನ್ನು ಇಂಗ್ಲೀಶ್ ಭಾಷೆಯಲ್ಲೂ ಬರೆಯುವ ಲೇಖಕರು ಮುಂದೆ ಬಂದರೆ ಶಂಕರರು ೧೨೦೦ ವರ್ಷಗಳ ಹಿಂದೆಯೇ ನೀಡಿದ, ಇಂದಿನ ಬದುಕಿಗೆ ಅಗತ್ಯವಾದ ಜೀವನ ಸೂತ್ರಗಳನ್ನು ಕನ್ನಡೆತರ ಜನರಿಗೂ ನೀಡಿದಂತಾಗುತ್ತದೆ. ನಿಮ್ಮ ಪ್ರಯತ್ನ ಮುಂದುವರೆಯಲಿ. ಧನ್ಯವಾದಗಳು.

    ReplyDelete