Pages

Friday, August 19, 2011

ವಿವೇಕ ಚೂಡಾಮಣಿ ಭಾಗ -೮



ಗ್ರಂಥದ ಮುಂದುವರಿದ ಭಾಗ

अर्थस्य निश्चयो दृष्टो  विचारेण हितोक्तितः।
न स्नानेन न दानेन प्राणायाम शतेनवा ॥१३॥

ಅರ್ಥಸ್ಯ ನಿಶ್ಚಯೋ ದೃಷ್ಟೋ ವಿಚಾರೇಣ ಹಿತೋಕ್ತಿತಃ|
(= ಒಳ್ಳೆಯ ವಚನಗಳನ್ನು ಕೇಳಿ ವಿಚಾರಮಾಡುವುದರಿಂದಲೇ ಆತ್ಮಾರ್ಥ ನಿಶ್ಚಯವು)
ನ ಸ್ನಾನೇನ ನ ದಾನೇನ ಪ್ರಾಣಾಯಾಮ ಶತೇನವಾ ||೧೩||
(=ಸ್ನಾನ, ದಾನ ಮತ್ತು ನೂರಾರು ಪ್ರಾಣಾಯಾಮಗಳಿಂದಲ್ಲ)

ಸದ್ಗುರುಗಳಾದವರ ಒಳ್ಳೆಯ ಮಾತುಗಳನ್ನು , ಉಪದೇಶಗಳನ್ನು ಆಲಿಸುವುದರ ಜೊತೆಗೆ ಅಂತಹ ವಿಚಾರಗಳನ್ನು ಒರೆಗೆ ಹಚ್ಚಿ ತಿಳಿದುಕೊಂಡು ವಿವೆಚನೆಯಿಂದ ನಿರ್ಣಯಿಸಿಕೊಳ್ಳುವ ಆತ್ಮಾರ್ಥವು ಮಿಗಿಲಾದುದು.
ಇಂತಹ ಆತ್ಮಾರ್ಥಜ್ಞಾನವು ಕೇವಲ ಸ್ನಾನ, ದಾನ ಮತ್ತು ನೂರಾರು ಬಾರಿ ಪ್ರಾಣಾಯಾಮಗಳನ್ನು ಮಾಡುವುದರಿಂದ ಸಿದ್ಧಿಸುವುದಿಲ್ಲ ಎಂದು ತಿಳಿಸುತ್ತಾರೆ.

ಆಕ್ಷೇಪ : ’ವಸ್ತುಸಿದ್ಧಿರ್ವಿಚಾರೇಣ’ ಎಂದು ಈಗಾಗಲೇ ತಿಳಿದಿರುವುದರಿಂದ ಸದ್ಗುರುಗಳ ಆಪ್ತವಚನದ ಅಗತ್ಯವಿದೆಯೆ ?

ಸಮಾಧಾನ :  ಹಗ್ಗವನ್ನೇ ಹಾವೆಂದು ತಿಳಿದು ಭ್ರಮೆಯಲ್ಲಿದ್ದಾಗ ವಾಸ್ತವದ ಅರಿವು ತಂತಾನೇ ಮೂಡುವುದು ಕಷ್ಟವಾಗುತ್ತದೆ. ಆಪ್ತರೊಬ್ಬರು ಹಿತವಾದ ಮಾತುಗಳಿಂದ ಸಂದರ್ಭವನ್ನು ವಿವರಿಸಿದಾಗ ಮನಸ್ಸು ತಿಳಿಯಾಗುತ್ತದೆ. ಭ್ರಮೆಯು ತೊಲಗುತ್ತದೆ.

ಶ್ಲೋಕದ ಎರಡನೆಯ ವಾಕ್ಯವನ್ನು ಯೋಗಗುರು ’ಬಾಬಾ ರಾಮದೇವರು ’ ಗಮನಿಸಿದರೆ, ಬಹುಶಃ ಅವರಿಗೆ ಕಡುಕೋಪ ಬರಬಹುದು. ವೇದಾಂತದ ವಿಚಾರವೇ ಹಾಗೆ !. ಅರ್ಜುನನು ಮೀನಿನ ಕಣ್ಣಿಗೆ ಬಾಣವನ್ನು ಹೊಡೆಯುವಾಗ ಆತನ ಗುರಿಯಿದ್ದುದು ಕಣ್ಣಿನೆಡೆಗೆ ಮಾತ್ರ !. ಕಣ್ಣೊಂದನ್ನು ಬಿಟ್ಟು ಆತನಿಗೆ ಬೇರೇನೂ ಕಾಣಿಸುತ್ತಿರಲಿಲ್ಲ. ಮೀನಿನ ಉಳಿದ ಅಂಗಾಗಗಳೆಲ್ಲಾ ಆತನಿಗೆ ನಿರ್ಲಕ್ಷ್ಯ ಅಥವಾ ಮಿಥ್ಯೆ. ಆತನ ಗುರಿಯೊಂದೇ ಸತ್ಯ !. ಹೀಗೆ ಆತ್ಮಜ್ಞಾನದ ಅನ್ವೇಷಣೆಯಲ್ಲಿ ತೊಡಗುವವರಿಗೆ ಅದೊಂದೇ ಪರಮಗುರಿಯಾಗಿರಬೇಕಾಗುತ್ತದೆ. ಉಳಿದುವೆಲ್ಲಾ ಆ ಗುರಿಯನ್ನು ತಲುಪುವ ನಿಟ್ಟಿನಲ್ಲಿ ನಿಮಿತ್ತವಾಗುತ್ತದೆ.
ಸ್ನಾನ, ದಾನಾದಿಗಳು ಮತ್ತು ಪ್ರಾಣಾಯಾಮಗಳಾವುವೂ ಆತ್ಮಜ್ಞಾನಾರ್ಥಿಯ ಪರಮಗುರಿಯಲ್ಲ. ಹಾಗಾಗಿ ಇವುಗಳಿಂದ ಪ್ರಯೋಜನವಿಲ್ಲ ಎಂದು ಹೇಳುತ್ತಾರೆ.

ಆಕ್ಷೇಪ:       ಸ್ನಾನ, ದಾನ ಮತ್ತು ಪ್ರಾಣಾಯಾಮಗಳೆಲ್ಲಾ ಬಳಕೆಗೆ ಬಾರದ್ದೇ ? (ವ್ಯರ್ಥವೇ ?) .
ಸಮಾಧಾನ : ಮತ್ತೊಮ್ಮೆ ’ಚಿತ್ತಸ್ಯ ಶುದ್ಧಯೇ ಕರ್ಮ’ ಎನ್ನುವುದನ್ನು ಮನನ ಮಾಡಿಕೊಳ್ಳಬೇಕಾಗುತ್ತದೆ.

ಸ್ನಾನದಲ್ಲಿ ನಿತ್ಯಸ್ನಾನ (ದಿನವೂ ಮೈತೊಳೆದುಕೊಳ್ಳುವುದು. ಶುಚಿತ್ವಕ್ಕಾಗಿ.), ಸೇತುಸ್ನಾನ (’ಸೇತು ಬಂಧೇತು ರಾಮೇಶಮ್’ ಎಂದು ಕೇಳಿದ್ದೆವೆ. ಗಂಡುಮಗುವನ್ನು ಪಡೆಯಲು ರಾಮೇಶ್ವರದ ಪುಣ್ಯತೀರ್ಥಗಳಲ್ಲಿ ಮೀಯವುದು ಎಂಬ ಶಾಸ್ತ್ರಾರ್ಥವಿದೆ), ಗಂಗಾಸ್ನಾನ (ಗಂಗಾನದಿಯಲ್ಲಿ ಮಿಂದು ಬಂದರೆ ಎಲ್ಲಾ ಪಾಪಗಳೂ ನಿವಾರಣೆ (ಚಿತ್ತಶುದ್ಧಿ!) ಎಂಬ ವಚನವಿದೆ) ಗಳೆಂಬ ಫಲಮೂಲವಾದ ಮೂರು ಪ್ರಸಿದ್ಧ ಕ್ರಿಯೆಗಳಿವೆ. ವಿಚಾರವೇ ಇಲ್ಲದೆ, ಆತ್ಮಶುದ್ಧಿಯೇ ಇಲ್ಲದೆ ಎಷ್ಟು ಕೋಟಿ ತೀರ್ಥಗಳಲ್ಲಿ ಮಿಂದು ಬಂದರೆ ಏನು ಪ್ರಯೋಜನ ?. ಅಜ್ಞಾನವೇ ಎಲ್ಲೆಲ್ಲೂ ಮುಸುಕಿರುವಾಗ ಕತ್ತಲೆಯಲ್ಲದೆ ಬೆಳಕು ಕಾಣುವುದಿಲ್ಲ.  ಕೊಳೆತುಹೋಗುವಷ್ಟು ಸಂಪತ್ತಿದೆ (Tax saving purpose !)   ಎಂದು ದಾನ ಮಾಡುವುದಕ್ಕಿಂತಲೂ ನಿಸ್ವಾರ್ಥ ಭಾವನೆಯಿಂದ ಕೊಡುವ ಚಿಕ್ಕಾಸೇ ಮಿಗಿಲಾದ ದಾನವೆನಿಸಿಕೊಳ್ಳುತ್ತದೆ. ಕರ್ಮಾನುಷ್ಠಾನಕ್ಕಾಗಿ ಮಾಡುವ ಪ್ರಾಣಾಯಾಮವು ಏಕಾಗ್ರತೆ , ಸಹಿಷ್ಣುತೆಗಳಿಗೆ ಮೂಲವಾದರೂ ಕೇವಲ ಅದನ್ನೇ ಹಲವು ನೂರು ಬಾರಿ ಮಾಡುವುದರಿಂದ ಆತ್ಮಾರ್ಥವು ಸಿದ್ಧಿಸುವುದಿಲ್ಲ ಎಂದು ತಿಳಿಸುತ್ತಾರೆ. ಸ್ನಾನ , ದಾನ ಮತ್ತು ಪ್ರಾಣಾಯಾಮಗಳು ನಮ್ಮ ಸುಖ-ಸವಲತ್ತುಗಳನ್ನೇ ಮೇಲಾಗಿಟ್ಟುಕೊಂಡು ನೆಡೆಸುವಂತಹುದಾಗಿರುತ್ತದೆ. ಈಗಿನ ಕಾಲದಲ್ಲಿ ’ಪ್ರಾಣಾಯಾಮ ಮಾಡಿದರೆ ಬಿ.ಪಿ. , ಶುಗರ್ರು, ಹಿಡಿದಲ್ಲಿರುತ್ತೆ’ ಎನ್ನುವ ಮೂಲೋದ್ದೇಶವಿಲ್ಲದೆ ಅದನ್ನು ಆಚರಿಸುವವರು ವಿರಳಾತಿವಿರಳ ಎನ್ನಬಹುದು !.
(ಪ್ರಾಣಾಯಾಮ ಮತ್ತು ಅದರ ಸಮಗ್ರ ವಿಚಾರಗಳು ಅಂತರಜಾಲದಲ್ಲಿ ಸಾಕಷ್ಟು ಲಭ್ಯವಿದೆ. ಆಸಕ್ತರು ಜಾಲಾಡಬಹುದು).

ಹಿತೋಕ್ತಿಗಾಗಿ ಯಾರನ್ನು ಆಶ್ರಯಿಸಬೇಕು ಎನ್ನುವುದನ್ನು ಶಂಕರರು ಮುಂದಿನ ಶ್ಲೋಕದಲ್ಲಿ ನಿರೂಪಿಸುತ್ತಾರೆ.

अधिकारिणमाशास्ते फलसिद्धिर्विशेषतः ।
उपाया देशकालाद्याः सन्तस्यां सहकारिणः॥१४||

ಅಧಿಕಾರಿಣಮಾಶಾಸ್ತೇ ಫಲಸಿದ್ಧಿರ್ವಿಶೇಷತಃ |
(= ಫಲಸಿದ್ಧಿಗಾಗಿ (=ಆತ್ಮವಿದ್ಯೆ) ಗುರುವಿನ ಬಳಿ ಸಾರುವುದು)
ಉಪಾಯಾ ದೇಶಕಾಲಾದ್ಯಾಃ ಸಂತ್ಯಸ್ಯಾಂ ಸಹಕಾರಿಣಃ ||೧೪||
(=ದೇಶ, ಕಾಲ, ಉಪಾಯಗಳು ಫಲಸಿದ್ಧಿಗೆ(=ಅಸ್ಯಾಂ) ಸಹಾಯಕವಾಗುತ್ತದೆ)

 ಆತ್ಮವಿದ್ಯೆಯ ಸಿದ್ಧಿಗಾಗಿ (ಫಲಸಿದ್ಧಿ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು. ಇದು ಫಲಾಪೇಕ್ಷೆಯಲ್ಲ !) ಗುರುವನ್ನೇ ಆಶ್ರಯಿಸಬೇಕು ಮತ್ತು ಅಂತಹ ಸಾಧನೆಗೆ  ಕಾಲ (Time),  ದೇಶ ( Space) ಮತ್ತು ಉಪಾಯ (Method) ಗಳು ನೆರವಿಗೆ ಬರುತ್ತವೆ ಎಂದು ತಿಳಿಸುತ್ತಾರೆ. ಶ್ರೀ ಶಂಕರರು  ದೇಶ, ಕಾಲ, ಉಪಾಯಗಳು ಭಿನ್ನವಾಗಿರುತ್ತವೆ ಎಂಬುದನ್ನು ಒಪ್ಪಿದ್ದಾರೆ ಎಂಬುದು ಇಲ್ಲಿ ತಿಳಿಯುತ್ತದೆ. ಶಂಕರರು ಇದನ್ನು ಹೇಳಿದ ಕಾಲಕ್ಕೂ ಈಗಿನ ಕಾಲಕ್ಕೂ ತಳುಕು ಹಾಕಿದರೆ ದೊಡ್ಡ ವ್ಯತ್ಯಾಸವೇನೂ ಕಂಡುಬರುವುದಿಲ್ಲ. ಇಂತಹ ವಾಕ್ಯಗಳು ವಾಸ್ತವದ ಅರಿವಿನಿಂದ ಮತ್ತು ವಿಶಾಲ ಮನೋಭಾವದಿಂದ (ಉದಾರತೆ) ಬಂದಿರುವುದೆದು ತಿಳಿಯಬಹುದು. ದೇಶ, ಕಾಲೋಪಾಯಗಳು ಸಹಾಯಕವೆಂದು ಹೇಳುತ್ತಾರೆಯೇ ಹೊರತು ಅದನ್ನೇ ಸಾಧನವೆಂದು ನಿರೂಪಿಸುವುದಿಲ್ಲ.  ಉತ್ತಮ ಗುರುವು ದೊರೆಯದಿದ್ದರೆ ದೇಶ, ಕಾಲಗಳೆಲ್ಲಾ ಅಪ್ರಯೋಜಕ ಎನ್ನುವುದು ಸೂಕ್ಷ್ಮ ವಿಚಾರ.

ಇಲ್ಲಿ ಶಂಕರರು ಯಾವುದನ್ನೂ ಸಂಪೂರ್ಣ ನಿರಾಕರಿಸುವುದಿಲ್ಲ. ಯಾವ ಸಾಧನೆಗೆ ಯಾವ ಸಾಧನಗಳು ಅಗತ್ಯ ಎನ್ನುವುದನ್ನು ವಿವರಿಸುತ್ತಾ ಮನುಷ್ಯನು ತನ್ನ ಪರಮಗುರಿಯೆಡೆಗೆ ಹೇಗೆ ಸಾಗಬೇಕು ಎನ್ನುವುದನ್ನು ತಿಳಿಸುತ್ತಾರೆ. ವೇದಾಂತಿಗಳಿಗೆ ಇರಬೇಕಾದ ಮೂಲ ಗುಣವೇ ಇದು !.  "ನಾನು ಯಾವುದನ್ನೂ ನಿರಾಕರಿಸದೇ ನನ್ನನ್ನು ಯಾವುದೂ ನಿರಾಕರಿಸದಿರುವಂತೆ ಆಗಲಿ " (*ನಿರಾಕರೋದನಿರಾಕರಣಮಸ್ತ್ವನಿರಾಕರಣಂ ಮೇ ಅಸ್ತು  - ಛಾಂದೋಗ್ಯ ಉಪನಿಷತ್ತು. ಶಾಂತಿಮಂತ್ರ) ಎನ್ನುವುದನ್ನು ವೇದಾಂತಿಗಳೂ ತಿಳಿದಿರಬೇಕಾಗುತ್ತದೆ. ಕೆಲವು ಸೂಪರ್ ’ಅಹಂ ಬ್ರಹ್ಮಾಸ್ಮಿ’ಗಳಿಗೆ ತಾವು ನಂಬಿರುವ ತತ್ತ್ವವನ್ನು ಬಿಟ್ಟರೆ ಉಳಿದುದೆಲ್ಲವೂ ಸುಳ್ಳು ಎನ್ನುವ ಗುಣವಿರುತ್ತದೆ. ಇದನ್ನು ಶಂಕರರು ತಮ್ಮ ವಿಚಾರಗಳಿಂದಲೇ ಖಂಡಿಸುತ್ತಾರೆ. ’ಗುರಿಗೆ ಏನು ಬೇಕೋ ಅದನ್ನು ನಂಬು, ಉಳಿದ ವಿಚಾರಗಳನ್ನು ಪುರಸ್ಕರಿಸು’ ಎನ್ನುವ ಸೂಚನೆಯನ್ನು ಅಲ್ಲಲ್ಲಿ ನೀಡಿರುತ್ತಾರೆ.  ಅತ್ಮವಿದ್ಯೆಯ ಅರಿವಿಗೆ ಇಯತ್ತಾಪ್ರಮಾಣ ಎನ್ನುವುದು ಅಗತ್ಯ. ’ಇದಕ್ಕೆ ಇಷ್ಟೇ’ ಎನ್ನುವ ಯೋಗ್ಯತಾಸ್ವೀಕಾರದ ಅರಿವು ಆಸಕ್ತನಿಗೆ ಇರಬೇಕಾಗುತ್ತದೆ.  ಉಗುರನ್ನು ಕತ್ತರಿಸಲು ಸಣ್ಣ ’ನಯಿಲ್ ಕಟರ್’ ಸಾಕು, ಕೊಡಲಿಯ ಅಗತ್ಯವೇನೂ ಇಲ್ಲವಲ್ಲಾ !. ನಯಿಲ್ ಕಟರ್ರೂ ಕಬ್ಬಿಣದ್ದೇ, ಕೊಡಲಿಯೂ ಕಬ್ಬಿಣದ್ದೇ "ಇದನ್ನೆ ಅದನ್ನಾಗಿ ಮಾಡೋಣ" ಎನ್ನುವುದು ಗಾಂಪರಗುಂಪಿನ ಮಾತಾಗುತ್ತದೆ. ನಮ್ಮ ಉದ್ದೇಶಕ್ಕೆ, ಗುರಿಗೆ ಏನು ಬೇಕೋ ಅದನ್ನು ಅನುಸರಿಸುವುದು ಉತ್ತಮವಾದುದು . ಯಾವುದಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಗ್ರಹಿಸುವುದರಿಂದ , ನಂಬುವುದರಿಂದ ಗುರಿಯೆಡೆಗೆ ಸಾಗುವುದು ಸುಗಮ ಎಂದು ಸೂಚಿಸಿರುತ್ತಾರೆ.  ರುಚಿಯಾಗಿದೆ ಎಂದು ಸೇರುಗಟ್ಟಲೆ ತಿನ್ನುವುದು ನಂತರ ತಿಂದಿದ್ದು ಅರಗದೆ  ಕಕ್ಕವುದು !.  ಪೌಷ್ಟಿಕವಾದ , ಉತ್ತಮವಾದ ಆಹಾರವನ್ನು ಕೊಂಚವೇ ತಿನ್ನುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.

ಆತ್ಮವಿದ್ಯೆಯನ್ನು ತಿಳಿಸಿಕೊಡುವ ಗುರುವು-ಅಧಿಕಾರಿಯು ಹೇಗಿರಬೇಕು? ಆತನ ಲಕ್ಷಣಗಳೇನು ? ಎನ್ನುವುದನ್ನು ಮುಂದಿನ ಕಂತಿನಲ್ಲಿ ತಿಳಿಯೋಣ.

------------------------------------------
ಟಿಪ್ಪಣಿ :

ಛಾಂದೋಗ್ಯ ಉಪನಿಷತ್ತಿನ ಶಾಂತಿಮಂತ್ರ
-------------------------------------------

 आप्यायन्तु ममाङ्गानि वाक्प्राणश्चक्षुः
श्रोत्रमथो बलमिन्द्रियाणि च सर्वाणि ।
सर्वम् ब्रह्मौपनिषदम् माऽहं ब्रह्म
निराकुर्यां मा मा ब्रह्म
निराकरोदनिराकरणमस्त्वनिराकरणम् मेऽस्तु ।
तदात्मनि निरते य उपनिषत्सु धर्मास्ते
मयि सन्तु ते मयि सन्तु ।
ॐ शान्तिः शान्तिः शान्तिः 


ವಂದನೆಗಳೊಂದಿಗೆ.

2 comments:

  1. [ಒಳ್ಳೆಯ ವಚನಗಳನ್ನು ಕೇಳಿ ವಿಚಾರಮಾಡುವುದರಿಂದಲೇ ಆತ್ಮಾರ್ಥ ನಿಶ್ಚಯವು.
    ಸ್ನಾನ, ದಾನ ಮತ್ತು ನೂರಾರು ಪ್ರಾಣಾಯಾಮಗಳಿಂದಲ್ಲ]
    ಚಿಂತನೆಗೆ ಯೋಗ್ಯವಾದ ವಿಚಾರ.ಯಾವಾಗಲೂ ಒಂದು ವಿಚಾರಕ್ಕೆ ಹೆಚ್ಚು ಮಹತ್ವವನ್ನು ಕೊಡುವಾಗ ಹೀಗಾಗುತ್ತದೆ.ಸ್ನಾನ, ದಾನ ಮತ್ತು ಪ್ರಾಣಾಯಾಮಗಳು ಬೇಡವೆಂದು ಇದರರ್ಥವಲ್ಲ. ಸದ್ಗುರುಗಳ ಹಿತವಚನವು ಎಲ್ಲಕ್ಕಿಂತಲೂ ಮಿಗಿಲೆಂಬುದು ಅದರ ಸಾರಾಂಶ, ಅಲ್ಲವೇ? ಇದರಿಂದ ಬಾಬಾ ರಾಮ್ ದೇವ್ ಅವರಿಗೆ ಸಿಟ್ಟು ಬರಬೇಕಾಗಿಲ್ಲ. ಇಂತಹ ಲೇಖನ ಮಾಲೆಯನ್ನು ದಯಮಾಡಿ ಮುಂದುವರೆಸಿ. ಧನ್ಯವಾದಗಳು.

    ReplyDelete
  2. "ಯಾವುದಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಗ್ರಹಿಸುವುದರಿಂದ , ನಂಬುವುದರಿಂದ ಗುರಿಯೆಡೆಗೆ ಸಾಗುವುದು ಸುಗಮ ಎಂದು ಸೂಚಿಸಿರುತ್ತಾರೆ. ರುಚಿಯಾಗಿದೆ ಎಂದು ಸೇರುಗಟ್ಟಲೆ ತಿನ್ನುವುದು ನಂತರ ತಿಂದಿದ್ದು ಅರಗದೆ ಕಕ್ಕವುದು !." ಈ ಮಾತನ್ನು ನಾನು ಅಕ್ಷರಶ: ಒಪ್ಪುತ್ತೇನೆ. ನಾವು ಬಹಳಷ್ಟು ಜನ ಎಡವುದೇ ಇಲ್ಲಿ. ಲೇಖನಮಾಲೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಶುಭವಾಗಲಿ..

    ReplyDelete