Pages

Sunday, September 4, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೮:


     ಉಪಾಸನಾ -  ಎಂದರೆ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು. ಭಗವಂತನ ಸಮೀಪದಲ್ಲಿ ಕುಳಿತುಕೊಳ್ಳುವುದೇ ಭಗವದುಪಾಸನೆ. ಭಗವಂತನೂ ಅನಾದಿ, ಜೀವರಾದ ನಾವೂ ಅನಾದಿ. ಹೀಗಾಗಿ ಅವನೂ, ನಾವೂ ಸಮಕಾಲೀನರು. ಕಾಲದ ದೃಷ್ಟಿಯಿಂದ ನಾವು ಅವನಿಂದ ದೂರವಿಲ್ಲ. ಅವನು ಸರ್ವವ್ಯಾಪಕನಾದ ಕಾರಣ, ನಮ್ಮೊಳಗೂ, ಹೊರಗೂ ಏಕಪ್ರಕಾರವಾಗಿ ವ್ಯಾಪಕನಾಗಿದ್ದೇನೆ. ಆದುದರಿಂದ ದೇಶದ ದೃಷ್ಟಿಯಿಂದಲೂ ಅವನು ನಮ್ಮಿಂದ ದೂರವಿಲ್ಲ. ಹೀಗೆ ಕಾಲ-ದೇಶಗಳ ದೃಷ್ಟಿಯಿಂದ ಉಪಾಸನೆ ನಮಗೆ ಸಹಜವಾಗಿಯೇ ಸಿದ್ಧಿಸಿದೆ. ಆದರೆ. ಸಂಪರ್ಕ ಸಾಧನವಾದ ಮನಸ್ಸು ಸಾಂಸಾರಿಕ ವ್ಯಾಪಾರಗಳಲ್ಲಿ ವ್ಯಾಪ್ರವಾಗಿರುವುದರಿಂದ, ಜ್ಞಾನದ ದೃಷ್ಟಿಯಿಂದ ನಾವು ಪರಮಾತ್ಮನಿಂದ ದೂರವೇ ಇದ್ದೇವೆ. ಈ ಜ್ಞಾನಸಂಬಂಧೀ ದೂರವನ್ನು ದೂರೀಕರಿಸಿ, ಮನಸ್ಸನ್ನು ಅವನಲ್ಲಿ ನಿಲ್ಲಿಸಿ, ಅವನ ಸಾಮೀಪ್ಯವನ್ನನುಭವಿಸುವುದೇ ಉಪಾಸನೆ. ಆಲಿಸಿರಿ:-


ಯುಂಜತೇ ಮನ ಉತ ಯುಂಜತೇ ಧಿಯೋ ವಿಪ್ರಾ ವಿಪ್ರಸ್ಯ ಬೃಹತೋ ವಿಪಶ್ಚಿತಃ |
ವಿ ಹೋತ್ರಾ ದಧೇ ವಯುನಾವಿದೇಕ ಇನ್ಮಹೀ ದೇವಸ್ಯ ಸವಿತುಃ ಪರಿಷ್ಟುತಿಃ ||
(ಯಜು. ೩೭.೨.)


     [ವಿಪ್ರಾಃ] ವಿಶೇಷ ಪ್ರಜ್ಞಾವಂತರಾದ [ವಿಪಶ್ಚಿತಃ] ವಿದ್ವಾಂಸರು [ಬೃಹತಃ ವಿಪ್ರಸ್ಯ] ಮಹಾನ್ ಹಾಗೂ ವಿಶಿಷ್ಟ ಪ್ರಜ್ಞನಾದ ಪ್ರಭುವಿನಲ್ಲಿ [ಮನಃ ಯುಂಜತೇ] ಮನಸ್ಸನ್ನು ನಿಲ್ಲಿಸುತ್ತಾರೆ. [ಉತ] ಹಾಗೆಯೇ [ಧಿಯಃ ಯುಂಜತೇ] ಬುದ್ಧಿಗಳನ್ನು ನಿಲ್ಲಿಸುತ್ತಾರೆ. [ಏಕ ಇತ್ ವಯುನಾವಿತ್] ಏಕಮಾತ್ರ ಪಥಜ್ಞನೂ, ಲೋಕಜ್ಞನೂ ಆದ ಪ್ರಭುವು [ಹೋತ್ರಾ] ಸಂಯೋಗಜನ್ಯವಾದ ನಾನಾ ಜಗತ್ತುಗಳನ್ನು [ವಿದಧೇ] ವಿವಿಧ ರೀತಿಯಲ್ಲಿ ಧರಿಸಿದ್ದಾನೆ. [ಸವಿತುಃ ದೇವಸ್ಯ] ಜಗದುತ್ಪಾದಕ ಹಾಗೂ ಪ್ರೇರಕನಾದ, ಸರ್ವದಾತೃ, ಪ್ರಕಾಶಸ್ವರೂಪ ಭಗವಂತನ, [ಪರಿಸ್ತುತಿಃ ಮಹೀ] ಉನ್ನತ ಸ್ತುತಿ ಮಹತ್ತಾದುದು. 


     ಮನಸ್ಸು ಸಂಕಲ್ಪ-ವಿಕಲ್ಪ ಸಾಧನ. ಬುದ್ಧಿ ತತ್ತ್ವಗ್ರಹಣ ಸಾಧನ. ಮನಸ್ಸಿನ ಆಲೋಚನ-ವಿಲೋಚನಗಳನ್ನು ತಡೆಗಟ್ಟಿ ಬುದ್ಧಿಯನ್ನು ಬಾಹ್ಯ ವಿಷಯಗ್ರಹಣದಿಂದ ಬೇರ್ಪಡಿಸಿ, ಎರಡನ್ನೂ ಅಭ್ಯಂತರ ವೃತ್ತಿಯ ಪರಿಧಿಗೆಳೆತಂದು, ಭಗವದ್ಗುಣಗಳನ್ನು ಚಿಂತಿಸುತ್ತಾ, ಗ್ರಹಿಸುತ್ತಾ, ಎರಡನ್ನೂ ಆ ಕಾರ್ಯಗಳಲ್ಲಿಯೇ ವಿನಿಯೋಗಿಸುವುದು ಭಗವದುಪಾಸನೆ. ಇದು ಸರ್ವಥಾ ಅಭ್ಯಂತರ ಕರ್ಮ. ಈ ಉಪಾಸನೆಗೆ ಪೂರ್ವಹಂತಗಳಾಗಿ ಭಗವಂತನಲ್ಲಿ ಪ್ರೇಮ ಬೆಳೆಯಿಸುವ ಸ್ತುತಿ ಮತ್ತು ಹೃದಯದಲ್ಲಿ ನಮ್ರತೆಯನ್ನು ಬಿತ್ತುವ ಪ್ರಾರ್ಥನೆ. ಇವೆರಡನ್ನೂ ಉಪಯೋಗಿಸಿಕೊಳ್ಳಬೇಕು. ಈ ಬಗೆಯ ಸತ್ಯೋಪಾಸನೆಯಿಂದ ಹೃದಯದಲ್ಲಿ ಪವಿತ್ರವಾದ ಹಾಗೂ ವಿಶಾಲವಾದ ಭಾವನೆಗಳುದಿಸುವುದಲ್ಲದೆ, ಅನಿರ್ವಚನೀಯವಾದ ಶಾಂತಿ, ಆನಂದ ಹಾಗೂ ಸ್ಫೂರ್ತಿಗಳ ಉದಯವೂ ಆಗಿ , ಜೀವನ ಸರಸವೂ, ಬಲಿಷ್ಠವೂ ಆಗುತ್ತದೆ. ಭಗವದ್ಗುಣಧ್ಯಾನದಲ್ಲಿ ನಿಂತ ಚಿತ್ತ, ಕ್ರಮಕ್ರಮವಾಗಿ ಆ ಗುಣಗಳನ್ನು ಉಪಾಸಕನಾದ ಮಾನವನ ಜೀವನಕ್ಕೆ ತುಂಬುತ್ತಾ ಹೋಗುತ್ತದೆ. ಭಗವಂತನೊಂದಿಗೆ ಸಮಾನ ಗುಣಗಳನ್ನು ಹೊಂದಿದ ಭಕ್ತ, ಬೇಗನೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಸಮರ್ಥನಾಗುತ್ತಾನೆ. ಅವನು ಶಕ್ತಿ-ಸ್ಫೂರ್ತಿಗಳ, ಕೀರ್ತಿ-ಪ್ರೀತಿಗಳ ಬುಗ್ಗೆಯೇ ಆಗಿಹೋಗುತ್ತಾನೆ.
***************

2 comments:

  1. [ಪ್ರಜ್ಞಾವಂತರು ಪ್ರಭುವಿನಲ್ಲಿ ಮನಸ್ಸನ್ನು, ಬುದ್ಧಿಯನ್ನು ನಿಲ್ಲಿಸುತ್ತಾರೆ. ಪ್ರಭುವು ನಾನಾ ಜಗತ್ತುಗಳನ್ನು ವಿವಿಧ ರೀತಿಯಲ್ಲಿ ಧರಿಸಿದ್ದಾನೆ. ಭಗವಂತನ, ಉನ್ನತ ಸ್ತುತಿ ಮಹತ್ತಾದುದು]
    ಬಹುಪಾಲು ಎಲ್ಲಾ ವೇದ ಮಂತ್ರಗಳಲ್ಲೂ ಭಗವಂತನ ಬಗ್ಗೆ " ಜಗದುತ್ಪಾದಕ, ಸರ್ವವ್ಯಾಪಿ, ಸರ್ವ ಶಕ್ತ ...ಇತ್ಯಾದಿ ಅವನ ವರ್ಣನೆಯೇ ಹೆಚ್ಚಿದೆ. ಅದರ ಹೊರತಾಗಿ ಈ ಮಂತ್ರದಲ್ಲಿ "ಪ್ರಜ್ಞಾವಂತರು ಭಗವಂತನಲ್ಲಿ ಮನಸ್ಸನ್ನು, ಬುದ್ಧಿಯನ್ನು ನಿಲ್ಲಿಸುತ್ತಾರೆ" ಎಂಬ ಮಾತಿದೆ.ಹೇಗೆ ಮನಸ್ಸು ಬುದ್ಧಿಯನ್ನು ಅವನಲ್ಲಿ ನಿಲ್ಲಿಸುತ್ತಾರೆ? ಎಂಬುದು ..ನಮಗೆಲ್ಲಾ ಬೇಕಾಗಿರುವುದಲ್ಲವೇ?

    ReplyDelete
  2. ಭಗವಂತನಲ್ಲಿ ಮನಸ್ಸು, ಬುದ್ಧಿ ನಿಲ್ಲಿಸುವ ಕ್ರಿಯೆ/ಪ್ರಯತ್ನವೇ ಉಪಾಸನೆ. ಆ ಉಪಾಸನೆ ಹೇಗೆ ಎಂಬ ಬಗ್ಗೆ ಹಲವರು ಹಲವು ರೀತಿಯಲ್ಲಿ ಹೇಳುತ್ತಾರೆ. ಮಾರ್ಗ ಹಲವು, ಗುರಿಯೊಂದೇ.

    ReplyDelete