ಗ್ರಂಥದ ಮುಂದುವರಿದ ಭಾಗ
विरज्य विषयव्रातात् दोषदृष्ट्या मुहुर्मुहुः ।
स्वलक्ष्ये नियतावस्था मनसः शम उच्यते ॥२२॥
ವಿರಜ್ಯವಿಷಯವ್ರಾತಾತ್ ದೊಷದೃಷ್ಟ್ಯಾ ಮುಹುರ್ಮುಹುಃ |
(= ಭೋಗವಸ್ತುಗಳಲ್ಲಿರುವ ದೋಷಗಳನ್ನು ಮತ್ತೆ-ಮತ್ತೆ ಕಂಡು ಭೋಗ ವಿಷಯಾಸಕ್ತಿಯನ್ನು ಬಿಡುವುದು)
ಸ್ವಲಕ್ಷ್ಯೇ ನಿಯತಾವಸ್ಥಾ ಮನಸಃ ಶಮ ಉಚ್ಯತೇ ||೨೨॥
(=ಗುರಿಯ ಸಾಧನೆಗೆ ಮನೋನಿಗ್ರಹವನ್ನಿಟ್ಟುಕೊಳ್ಳುವುದೆ ಶಮವು )
ಸಾಧನ ಚತುಷ್ಟಯದ ಮೂರನೆಯ ಸಾಧನದ ನಿರೂಪಣೆಯನ್ನು ಮಾಡುತ್ತಾ ’ಶಮದಮಾದಿ’ ಆರು ಸಂಪತ್ತುಗಳ ವಿಚಾರವನ್ನು ಶ್ರೀ ಶಂಕರರು ವಿವರಿಸುತ್ತಾರೆ.
ಮೊದಲನೆಯದಾಗಿ ’ಶಮ’ :-
ಭೋಗವಸ್ತುಗಳಲ್ಲಿ ಕಂಡುಬರುವ ದೋಷಗಳನ್ನು ಗ್ರಹಿಸಿ ಅವುಗಳಲ್ಲಿ ಜಿಗುಪ್ಸೆಯನ್ನು ಹೊಂದಿ ಆತ್ಮವಿಷಯದಲ್ಲಿ ಮಾತ್ರವೇ ಮನಸ್ಸನ್ನು ತಲ್ಲೀನಗೊಳಿಸಿಕೊಳ್ಳುವುದನ್ನು ’ಶಮ’ ಎಂದು ಹೇಳುತ್ತಾರೆ. ಮನಸ್ಸನ್ನು ಹತೋಟಿಯಲ್ಲಿಡುವುದು ಎಂದರೆ, ಇಂದ್ರಿಯಯಗಳನ್ನು ನಿಗ್ರಹಿಸುವುದು ಎಂದು ತಿಳಿಯಬೇಕಾಗುತ್ತದೆ. ಮುಖ್ಯವಾಗಿ ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ಮೂಗು, ಚರ್ಮ, ನಾಲಿಗೆ) ವಿಷಯವಸ್ತುವಿನ ಗೊಡವೆಗೆ ಹೋಗದಂತೆ ಹತೋಟಿಯಲ್ಲಿಟ್ಟುಳ್ಳುವುದು ಎಂದು ಅರ್ಥ. ಅಪೇಯಪಾನವು ಮನೆಯಲ್ಲಿಯೂ ಆರೋಗ್ಯಕ್ಕೆ ಹಾನಿಕಾರಕ ಹೊರಗಿನ ಅಂಗಡಿಯಲ್ಲೂ ಹಾನಿಕಾರಕವೆ !. ಜಾಗ ಬದಲಾದ ಮಾತ್ರಕ್ಕೆ ಅದರ ದೋಷಗುಣವೇನೂ ಬದಲಾಗುವುದಿಲ್ಲ. ದೋಷವನ್ನು ಗ್ರಹಿಸಿ ಒಟ್ಟಾರೆಯಾಗಿ ಭೋಗಲಾಲಸೆಯನ್ನು ಬಿಟ್ಟು ಮತ್ತೊಮ್ಮೆ ಜ್ಞಾನೇಂದ್ರಿಯಗಳು ಅತ್ತ ಸುಳಿಯದಂತೆ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಆ ಮನೋನಿಶ್ಚಯದಂತೆ ನಡೆಯುವುದೇ ’ಶಮ’ ಎನ್ನುವ ಅರ್ಥದಲ್ಲಿ ಹೇಳಿರುತ್ತಾರೆ.
ಎರಡನೆಯದು ’ದಮ’ :-
विषयेभ्यःपरावर्त्य स्थापनं स्वस्वगोलके ।
उभयेषामिंद्रियाणां स दमः परिकीर्तितः ॥२३॥
ವಿಷಯೇಭ್ಯಃ ಪರಾವರ್ತ್ಯ ಸ್ಥಾಪನಂ ಸ್ವಸ್ವಗೋಲಕೇ |
(=ಇಂದ್ರಿಯಗಳನ್ನು ವಿಷಯಭೋಗವಸ್ತುವಿನ ಕಡೆಯಿಂದ ಸ್ವಸ್ಥಾನಕ್ಕೆ ತರುವುದು)
ಉಭಯೇಷಾಮಿಂದ್ರಿಯಾಣಾಂ ಸ ದಮಃ ಪರಿಕೀರ್ತಿತಃ ||೨೩||
(=’ಇಂದ್ರಿಯಗಳೆರಡನ್ನೂ’ ಅಂಕೆಯಲ್ಲಿಡುವುದೇ ’ದಮ’ವು)
ಭೋಗವಸ್ತುಗಳಲ್ಲಿ ತಲ್ಲೀನವಾಗಿರುವ ಇಂದಿಯಗಳನ್ನು ಅದೇ ದಾರಿಯಲ್ಲಿ ಹಿಮ್ಮುಖವಾಗಿ ತಂದು (=ಪರಾವರ್ತ್ಯ ) ಸ್ವಸ್ಥಾನಗಳಲ್ಲಿ ನಿಲ್ಲಿಸಿ ಅವುಗಳು ಕೇವಲಬ್ರಹ್ಮದಲ್ಲಿ ಲೀನವಾಗುವಂತೆ ಮಾಡಿಕೊಳ್ಳುವುದೇ ’ದಮ’ ಎಂದು ಹೇಳುತ್ತಾರೆ. ’ಇಂದ್ರಿಯಗಳು’ ಎಂಬಲ್ಲಿ ಜ್ಞಾನೇಂದಿಯಗಳು ಮತ್ತು ಕರ್ಮೇಂದ್ರಿಯಗಳೆರಡನ್ನೂ ( ಕೈ, ಕಾಲು, ಬಾಯಿ ಮುಂತಾದವು) ಹತೋಟಿಯಲ್ಲಿಟ್ಟುಕೊಳ್ಳುವುದು ಎಂದು ತಿಳಿಯಬೇಕಾಗುತ್ತದೆ.
’ಸ್ಥಾಪನಂ ಸ್ವಸ್ವಗೋಲಕೆ’ ಎನ್ನುವಲ್ಲಿ ಇಂದ್ರಿಯವಿಷಯಗಳು ಮೊದಲಾದ ಜಾಗಕ್ಕೆ ಮನಸ್ಸನ್ನು ಪುನಃ ಎಳೆದು ತರುವುದು ಎಂದು ಅರ್ಥ. ರುಚಿಯ ಮೂಲವಿರುವುದು ನಾಲಿಗೆಯಲ್ಲಿ ಅಲ್ಲ, ಅದರ ಮೇಲಿರುವ ರುಚಿಯ ಮೊಗ್ಗುಗಳಲ್ಲಿ (taste buds). ಅಲ್ಲಿಂದ ಆರಂಭವಾಗುವ ರುಚಿಯ ಕಾರ್ಯಕ್ರಮಗಳು ಅಜೀರ್ಣವಾಗುವಷ್ಟು ತಿಂದು ವೈದ್ಯರಲ್ಲಿಗೆ ತೆರಳುವವರೆಗೂ ಮುಂದುವರಿಯುತ್ತದೆ. ವೈದ್ಯರಲ್ಲಿಗೆ ಹೋದ ಮನಸ್ಸನ್ನು ತಿರುಗಿ ರುಚಿಯ ಮೊಗ್ಗುಗಳೆಡೆಗೆ ತಂದು ಬಿಡುವುದು ಮತ್ತು ನಂತರದಲ್ಲಿ ತನಗೆ ರುಚಿಯ ಮೊಗ್ಗುಗಳಿವೆ ಎನ್ನುವುದನ್ನೇ ಮರೆತುಬಿಡುವುದು, ಇದನ್ನು ದಮ ಎಂದು ನಿರೂಪಿಸುತ್ತಾರೆ. ಕೆಟ್ಟದ್ದನ್ನು ಕೇಳಬೇಡ ಎನ್ನುವಲ್ಲಿ ಕಿವಿಯನ್ನು ಕೆಟ್ಟದ್ದರ ಕಡೆಗೆ ಆಲಿಸಬೇಡ ಅಥವಾ ಅಂತಹ ವಿಚಾರಗಳ ಪ್ರತಿಯಾಗಿ ತನಗೆ ಕಿವಿಯ ತಮಟೆಯೇ ಕೆಲಸ ಮಾಡುತ್ತಿಲ್ಲ ಎಂಬ ಭಾವವನ್ನು ತಳೆದು ನಿರ್ಲಿಪ್ತರಾಗುವುದು ಎಂದು ತಿಳಿಯಬಹುದು.
ಆಕ್ಷೇಪ : ಶಮ ಅಥವಾ ಮನೋನಿಗ್ರಹವು (ಅಂತರಿಂದ್ರಿಯ=ಶಬ್ದ, ಸ್ಪರ್ಶ, ರೂಪ,ರಸ, ಗಂಧ) ಇದ್ದಾಗ ಕರ್ಮೇಂದ್ರಿಯ (ಬಹಿರಿಂದ್ರಿಯ=ಕೈ,ಕಾಲು,ಬಾಯಿ,ಗುದ,ಮತ್ತು ಲಿಂಗ)ಗಳ ಮೇಲಿನ ಹತೋಟಿಯು ತಾನೇ ಬರುವುದಲ್ಲವೇ ? ’ದಮ’ದ ಪ್ರತ್ಯೇಕತೆಯ ಅಗತ್ಯವಾದರೂ ಏಕೆ ?
ಸಮಾಧಾನ : ಶಮದಮಾದಿಗಳು ಒಂದಕ್ಕೊಂದು ಪೂರಕವಾಗಿದ್ದರೂ ಸಹ ಶಾಸ್ತ್ರಾನುಕೂಲತೆಗಾಗಿ ಬಿಡಿಸಿ ಹೇಳಲಾಗಿದೆ ಎನ್ನಬಹುದು. ಹೆಚ್ಚು ಸ್ಪಷ್ಟತೆಗಾಗಿ ಒಂದೊಂದನ್ನೂ ಬಿಡಿಸಿ ಹೇಳಲಾಗುತ್ತದೆ. ’ಸ್ವಾಗತ’(ವೆಲ್ಕಮ್) ವೇ ಸಾಕು, ’ಸುಸ್ವಾಗತ’ ಏಕೆ? (ವೆಲ್ ವೆಲ್ಕಮ್ಮು !). ನಲಿಯುತ್ತಾ ಬರುವುದೇನೋ ಸರಿ, ನಲಿ-ನಲಿಯುತ್ತಾ ಬರುವುದು ಏಕೆ ? ಎಂದರೆ, ವಿಷಯದ ಮಹತ್ವದ ತಿಳಿವಿಗಾಗಿ ಅಥವಾ ವಿಷಯಕ್ಕೆ ಪುಷ್ಟಿ ನೀಡುವುದಕ್ಕಾಗಿ ಹೇಳಲಾಗಿದೆ ಎನ್ನಬಹುದು. ’ಶ್ರೇಷ್ಠತಮಾಯ ಕರ್ಮಣೆ’ ಎಂಬ ವಾಕ್ಯವೊಂದು ವೇದದಲ್ಲಿ ಬರುತ್ತದೆ. ಶ್ರೇಷ್ಠ ಎನ್ನುವುದೇ superlative ಆಗಿರುವಾಗ ಶ್ರೇಷ್ಠತಮ ಎನ್ನುವುದು ಏಕೆ ? ಎಂದರೆ , ಪುಷ್ಟಿಗಾಗಿ, ಮಹತ್ವಕ್ಕಾಗಿ ಹೇಳಿದ್ದಾರೆ ಎನ್ನಬಹುದು. ( Sachin is one of the best player ಎನ್ನುತ್ತಾರೆ. Best ಎನ್ನುವುದೇ unique ಆಗಿರುವಾಗ one of the best ಏಕೆ ? ಎಂದರೆ , ದ್ರಾವಿಡ್ ಕೂಡಾ ಸಚಿನ್ ನಷ್ಟೇ talented ಆಗಿರುವುದರಿಂದ ವ್ಯತ್ಯಾಸವನ್ನು ಗುರುತಿಸಲು ಮಹತ್ವವನ್ನು ಹೇಳಲು ಬಳಸಲಾಗುತ್ತದೆ ಎನ್ನಬಹುದು !).
ಮೂರನೆಯದು ಉಪರತಿ :-
बाह्यालम्बनं वृत्तेरेषोपरतिरुत्तमा ॥२४॥
ಬಾಹ್ಯಾಲಂಬನಂ ವೃತ್ತೇರೇಷೋಪರತಿರುತ್ತಮಾ ||೨೪||
(=ಹೊರಗಿನ ವಿಷಯಗಳ ಅವಲಂಬನೆಯನ್ನು ಬಿಡುವುದೇ ಉಪರತಿ)
ದಮವನ್ನು ಸಾಧಿಸುವುದು ಹೇಗೆ ? ಎನ್ನುವದನ್ನು ’ಉಪರತಿ’ ಎಂಬಲ್ಲಿ ಹೇಳುತ್ತಾರೆ. ಹೊರಗಿನ ಭೋಗವಸ್ತುಗಳ ಅವಲಂಬನೆಯನ್ನು ಬಿಟ್ಟು ತನ್ನಲ್ಲಿ ತಾನು ನೆಮ್ಮದಿಯನ್ನು ಕಾಣುವುದು ’ಉಪರತಿ’ ಎಂದು ಹೇಳುತ್ತಾರೆ. ಬಯಕೆಗಳು ಏಳದೆ ಇದ್ದಾಗ ವೈರಾಗ್ಯವು ಹುಟ್ಟುತ್ತದೆ. ವೈರಾಗ್ಯವಿದ್ದಲ್ಲಿ ವಿಷಯವಸ್ತುಗಳ ಮೇಲಿನ ಅವಲಂಬನೆಯೂ ಇರುವುದಿಲ್ಲ. ಹೊರಗಿನ ವಿಷಯವಸ್ತುಗಳಾವುದನ್ನೂ ನೆಚ್ಚಿಕೊಳ್ಳದೆ ಸಾಧನೆಯ ದಾರಿಯಲ್ಲಿ ಸಾಗುವುದನ್ನು ಉಪರತಿ ಎಂದು ಹೇಳುತ್ತಾರೆ. ಕೆರೆಯ ನೀರು ಕೆರೆಯ ತೂಬಿನ ಮೂಲಕ ಹೊರಟು ಮುಂದೆ ನಾಲೆಗಳಲ್ಲಿ , ಹೊಲ-ಗದ್ದೆಗಳಲ್ಲಿ ಹೇಗೆ ಬೇರೆ ರೂಪವನ್ನು ಪಡೆಯುವುದೋ ಹಾಗೆಯೇ ಮನಸ್ಸಿನ ಮೂಲಕ ಉಂಟಾಗುವ ವಿಷಯಭೋಗವು ಹೊರಗಿನ ಅವಲಂಬನೆಗಳು ಹೆಚ್ಚಾದಂತೆ ಹಲವು ರೂಪಗಳನ್ನು ಪಡೆದುಕೊಂಡು ನಿವೃತ್ತಿಧರ್ಮಕ್ಕೆ ಅಡ್ಡಿಯಾಗುತ್ತದೆ. ಹೀಗೆ ಶಮದಮಾದಿಗಳು ಒಂದಕ್ಕೊಂದು ಪೂರಕವಾಗಿದ್ದರೂ ಸಹ ಒಂದೊಂದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಮುಂದಿನ ಕಂತಿನಲ್ಲಿ ’ತಿತಿಕ್ಷಾ’ ಮುಂತಾದ ಗುಣಗಳ ವಿಚಾರವನ್ನು ತಿಳಿಯೋಣ.
-------------------------------------------
" ಐಂಕಾರ ಹ್ರೀಂಕಾರ ರಹಸ್ಯಯುಕ್ತಃ ಶ್ರೀಂಕಾರ ಗೂಢಾರ್ಥ ಮಹಾ ವಿಭೂತ್ಯಾ,
ಓಂಕಾರ ಮರ್ಮ ಪ್ರತಿಪಾದಿನೀಭ್ಯಃ ನಮೋನಮಃ ಶ್ರೀ ಗುರುಪಾದುಕಾಭ್ಯಾಮ್ "
ಮಹಾಲಯ ಅಮಾವಾಸ್ಯೆಯು ಸದ್ಗುರು ಶ್ರೀ ಚಂದ್ರಶೇಖರಭಾರತಿಸ್ವಾಮಿಗಳು ಬ್ರಹ್ಮೈಕ್ಯರಾದ ದಿನ. ಜೀವನ್ಮುಕ್ತರೆಂದೇ ಅವರು ಪ್ರಸಿದ್ದರು. ಅಂತಹ ಸದ್ಗುರುವನ್ನು ವ್ಯಕ್ತಿಗತವಾಗಿ ಕಾಣುವ ಸುಯೋಗ ನನಗಿಲ್ಲವಾದರೂ ಅವರೇ ಬರೆದಿರುವ ವಿವೇಕ ಚೂಡಾಮಣಿಯ ಸಂಸ್ಕೃತ ವ್ಯಾಖ್ಯಾನದಲ್ಲಿ ಪ್ರತ್ಯಕ್ಷವಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು. ಕೆಲವೊಮ್ಮೆ(ಬಹುತೇಕ) ವ್ಯಕ್ತಿಯ ವಿಚಾರಕ್ಕಿಂತಲೂ ವ್ಯಕ್ತಿಯೇ ಪರಮಾರ್ಥವಾಗಿ ವಿಜೃಂಭಿಸುವ ಅಪಾಯಗಳೇ ಹೆಚ್ಚಾಗಿರುವ ಕಾಲದಲ್ಲೂ ಅಂತಹ ವ್ಯಕ್ತಿಪೂಜೆ, ಬಾಹ್ಯಾಡಾಂಬರ ಮುಂತಾದವುಗಳನ್ನೆಲ್ಲಾ ನಿರಾಕರಿಸುತ್ತಲೇ ಬಂದು ಕೊನೆಯಲ್ಲಿ ಹೆಚ್ಚು-ಹೆಚ್ಚು ಅಂತರ್ಮುಖರಾಗಿಯೇ ಇದ್ದು ಬ್ರಹ್ಮಜ್ಞಾನದ ನಿಜಾರ್ಥವನ್ನು ಪ್ರತಿಪಾದಿಸಿ ತೋರಿಸಿದ ಚೈತನ್ಯಕ್ಕೆ ನನ್ನ ನಮನಗಳು. ಆರಾಧನೆಗಳು ಬರುತ್ತವೆ, ಹೋಗುತ್ತವೆ. ವಿವೇಕ ಚೂಡಾಮಣಿಯ ವ್ಯಾಖ್ಯಾನವನ್ನು ನನ್ನ ಬಾಲಿಶ ಮತಿಗೆ ಹೊಳೆದಂತೆ ನಿಮ್ಮೆಲ್ಲರ ಮುಂದೆ ಇಡುತ್ತಿರುವುದಕ್ಕೂ ಸದ್ಗುರುಗಳ ಪ್ರೇರಣೆಯೇ ಕಾರಣವೆನ್ನುತ್ತೇನೆ. ಈ ನಿಟ್ಟಿನಲ್ಲಿ ನಾನಿಂದು, ಇಲ್ಲಿ ಸದ್ಗುರುವಿನ ಚರಣಕ್ಕೆ ಬಾಗಿದ್ದೇನೆ.
-------------------------------------------
ವಂದನೆಗಳೊಂದಿಗೆ.......
[ಭೋಗವಸ್ತುಗಳಲ್ಲಿ ಕಂಡುಬರುವ ದೋಷಗಳನ್ನು ಗ್ರಹಿಸಿ ಅವುಗಳಲ್ಲಿ ಜಿಗುಪ್ಸೆಯನ್ನು ಹೊಂದಿ ಆತ್ಮವಿಷಯದಲ್ಲಿ ಮಾತ್ರವೇ ಮನಸ್ಸನ್ನು ತಲ್ಲೀನಗೊಳಿಸಿಕೊಳ್ಳುವುದು’ಶಮ’]
ReplyDeleteಸಾಮಾನ್ಯವಾಗಿ ನಾವು ಮಾಡುವುದೇನೆಂದರೆ ಭೋಗವಸ್ತುವಿನಲ್ಲಿ ಕಾಣುವ ದೋಷವನ್ನು ಸರಿಪಡಿಸುವ ಯತ್ನ.ಈ ಪ್ರಯತ್ನದಲ್ಲಿ ವಿಫಲರಾಗಿ ಕೊನೆಗೆ ಬೇಸರಪಡುತ್ತೇವೆ. ಬದಲಿಗೆ ದೋಷ ಕಂಡೊಡನೆ ಅದನ್ನು ಗ್ರಹಿಸಿ " ಇದು ಇಷ್ಟೆ" ಎಂಬ ಸತ್ಯವನ್ನರಿತು ಇದಕ್ಕಿಂತ ಹೆಚ್ಚಿನ ಸಮಾಧಾನ ಸಿಗುವ ಆತ್ಮ ವಿಷಯದಲ್ಲಿ ಮನಸ್ಸನ್ನು ತಿರುಗಿಸಿದರೆ ನಿಜವಾಗಿ ನಮ್ಮ ಸಮಾಧಾನದ ಹಾದಿ ಸುಗಮವಾದೀತು