ಗ್ರಂಥದ ಮುಂದುವರಿಕೆ:-
मूलम्- ಮೂಲ:-
मन्दमध्यमरूपाऽपि वैराग्येण शमादिना ।
प्रसादेन गुरोः सेयं प्रवृद्धा सूयते फलम् ॥२९॥
ಮಂದ-ಮಧ್ಯಮ-ರೂಪಾಽಪಿ ವೈರಾಗ್ಯೇಣ ಶಮಾದಿನಾ |
ಪ್ರಸಾದೇನ ಗುರೋಸ್ಸೇಯಂ ಪ್ರವೃದ್ಧಾ ಸೂಯತೇ ಫಲಮ್ ||೨೯|
ಪ್ರತಿಪದಾರ್ಥ :-
(ಮಂದ-ಮಧ್ಯಮ-ರೂಪಾ ಅಪಿ= ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ, ವೈರಾಗ್ಯೇಣ= ವಿರಾಗದಿಂದದಲೂ, ಶಮಾದಿನಾ = ಶಮಾದಿಗುಣ ಸಾಧನದಿಂದಲೂ, ಗುರೋಃ =ಗುರುವಿನ, ಪ್ರಸಾದೇನ = ಅನುಗ್ರಹದಿಂದ, ಸಾ ಇಯಂ = ಆ ಈ (ಮುಮುಕ್ಷುತ್ವವು), ಪ್ರವೃದ್ಧಾ = ಪ್ರಬಲವಾಗಿ, ಫಲಂ = ಫಲವನ್ನು , ಸೂಯತೇ = ಉಂಟುಮಾಡುತ್ತದೆ. )
ತಾತ್ಪರ್ಯ :
ಇಂತಹ ಮುಮುಕ್ಷುತ್ವವು ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ ವೈರಾಗ್ಯ , ಶಮಾದಿಗುಣ ಸಾಧನೆ ಮತ್ತು ಗುರುವಿನ ಅನುಗ್ರಹದಿಂದ (ಉಪದೇಶದಿಂದ) ಪ್ರಬಲವಾಗಿ ಮೋಕ್ಷರೂಪವಾದ ಫಲವು ಉಂಟಾಗುತ್ತದೆ.
ವಿವರಣೆ :
ಸಾಧನ ಚತುಷ್ಟಯದ ನಂತರ ಆಚಾರ್ಯರು ಮುಂದುವರಿದು ಮುಮುಕ್ಷುತ್ವದ ಬಗೆಗೆ ಹೇಳುತ್ತಾರೆ. ಮುಮುಕ್ಷುತ್ವ ಅಥವಾ ಬಿಡುಗಡೆಯ ಬಯಕೆ ಎನ್ನುವುದು ಎಲ್ಲರಲ್ಲೂ ಒಂದೇ ತೆರನಾಗಿ ಇರುವುದಿಲ್ಲ. ಕೆಲವರಿಗೆ ಮಂದ (Slow)ವಾಗಿರುತ್ತದೆ. ನಿಧಾನವಾಗಿ ಕೆಲಸ ಮಾಡುವ ಅಥವಾ ಮುಂದಿನ ವಾರವೋ ಮುಂದಿನ ತಿಂಗಳೋ ಮಾಡಿದರಾಯಿತು ಎನ್ನುವ ಮನೋಭಾವವಿರುತ್ತದೆ. ಕೆಲವರಿಗೆ ಮಧ್ಯಮ (Medium)ಸ್ಥಿತಿಯಲ್ಲಿರುತ್ತದೆ. ನಾಳೆಯೋ ನಾಡಿದ್ದೋ ಮಾಡಿದರಾಯಿತು ಎನ್ನುವ ಮನೋಭಾವ. ಕೆಲವರಿಗೆ ಪ್ರವೃದ್ಧ(ಜಾಗೃತ, Quick, Cautious) ಸ್ಥಿತಿಯಲ್ಲಿರುತ್ತದೆ. ಇಂದು ಮಾಡಬೇಕಾದ ಕೆಲಸ ಈಗಲೇ ಆಗಿ ಬಿಡಬೇಕು ಎನ್ನುವ ತೀವ್ರತೆಯ ಮನೋಭಾವವಿರುತ್ತದೆ. ಹೀಗೆ ಮುಮುಕ್ಷುತ್ವವು ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ ಸಹ ವೈರಾಗ್ಯಸಾಧನೆ ಮತ್ತು ಶಮಾದಿಗುಣಗಳ ಪಾಲನೆಯಿಂದ ಪರಿಪಾಕಗೊಂಡ ಮೋಕ್ಷಾಪೇಕ್ಷಿಯ ಮೇಲೆ ಗುರುವಿನ ಅನುಗ್ರಹವು ಆಗುವುದರಿಂದ ಅದು ತೀವ್ರತೆಯನ್ನು ಪಡೆದುಕೊಳ್ಳುತ್ತದೆ. ವಿಷಯಭೋಗವಸ್ತುಗಳಲ್ಲಿನ ದೋಷಗಳನ್ನು ಕಂಡು ಹುಟ್ಟುವ ಮಂದ ಮುಮುಕ್ಷುತ್ವವು ಶಾಸ್ತ್ರಾರ್ಥಗಳನ್ನು ಅರಿಯುವ ಕಾಲದಲ್ಲಿ ಮಧ್ಯಮಾವಸ್ಥೆಗೆ ಬಂದು ವೈರಾಗ್ಯವು ತೀವ್ರವಾದಂತೆ ಶಮಾದಿಗುಣಗಳು ಸಿದ್ಧಿಸಿದಂತೆ ಮನಸ್ಸು ಸಮಾಧಾನದಲ್ಲಿ ಲೀನವಾಗುವುದರೊಂದಿಗೆ ಗುರುವಿನ ಅನುಗ್ರಹವೂ ಅಪೇಕ್ಷಿಯ ಮೇಲೆ ಉಂಟಾಗಿ ಮುಮುಕ್ಷುತ್ವವು ಪ್ರಬಲವಾಗಿ ಮೋಕ್ಷರೂಪವಾದ ಫಲವು ಉಂಟಾಗುತ್ತದೆ ಎಂದು ವ್ಯಾಖ್ಯಾನಕಾರರು ವಿವರಿಸುತ್ತಾರೆ.
ಗಾಂಧೀಜಿಯವರಿಗೆ ಬಂದದ್ದು ತೀವ್ರತರವಾದ ಮುಮುಕ್ಷುತ್ವ ಎನ್ನಬಹುದು. ’ದೇಶಕ್ಕಾಗಿ ಸರಳತೆಯನ್ನು ಪಾಲಿಸುತ್ತೇನೆ’ ಎಂದು ಹೇಳಿದಷ್ಟೇ ವೇಗವಾಗಿ ತಮ್ಮ ’ಸಿವಿಲ್’ ಪೋಷಾಕುಗಳನ್ನು ತ್ಯಜಿಸಿ ದೇಶೀಯವಾದ ಒಂಟಿ ಬಟ್ಟೆಯನ್ನು ಉಟ್ಟರು !. ಅಪ್ರತೀಕಾರ ಅಥವಾ ಅಹಿಂಸೆಯನ್ನೇ ತಮ್ಮ ಧ್ಯೇಯವಾಗಿರಿಸಿಕೊಂಡು ಗುರಿಯನ್ನು ಮುಟ್ಟಿದರು. ಮಹಾಭಾರತದಲ್ಲಿ ವಿದುರನಿಗೆ ಬಂದದ್ದು ತೀವ್ರವಾದ ಮುಮುಕ್ಷುತ್ವವೆ. ಅರ್ಜುನನಿಗೆ ಬಂದ ಮುಮುಕ್ಷುತ್ವ ಹಾಗೆ ಬಂದು ಹೀಗೆ ಹೋದದ್ದು !. ಆದುದರಿಂದ, ಆತ್ಮಾಭ್ಯಾಸಿಯು ಪುರುಷ ಪ್ರಯತ್ನದಿಂದ ಶಮಾದಿಗುಣಗಳು ಮತ್ತು ವೈರಾಗ್ಯ ಸಾಧನೆಗೆ ತೀವ್ರವಾಗಿ ಯತ್ನಿಸಬೇಕಾಗುತ್ತದೆ ಎಂಬ ಸೂಕ್ಷ್ಮವನ್ನು ಇಲ್ಲಿ ಕಂಡು ತಿಳಿಯಬಹುದು.
ಮಂದಗಾಮಿಗಳು ಇಂದೋ ನಾಳೆಯೋ ಅಥವಾ ಎಂದೋ ಒಂದು ದಿನ ಆತ್ಮಾನುಭವವನ್ನು ಪಡೆದರೆ ಆಯಿತು ಎನ್ನುವ ಮನೂಭಾವದವರು. ಪ್ರವೃದ್ಧರಿಗೆ ವ್ಯಾವಹಾರಿಕ ಜಗತ್ತು ಎನ್ನುವುದು ಕಾದ ದೋಸೆಯ ಹೆಂಚಿನ ಮೇಲೆ ಕೂರುವಂತೆ !. ಆದಷ್ಟು ಬೇಗ ಎದ್ದು ಓಡಬೇಕು (ಸಂಸಾರದಿಂದ) ಎನ್ನುವ ತೀವ್ರತೆ. ಇನ್ನು ಕೆಲವರು ಕ್ರಮೇಣ ಪ್ರಪಂಚದೊಂದಿಗೆ ರಾಜಿಮಾಡಿಕೊಂಡು ಕಾಲಯಾಪನೆ ಮಾಡುವವರು , ಕ್ಷಣಿಕ ವೈರಾಗ್ಯದವರು.
ಹೀಗಿದ್ದರೂ ಸಹ ಸಾಧನ ಚತುಷ್ಟಯಗಳ ಸಾಧನೆಯಿಂದ ಮತ್ತು ಗುರುವಿನ ಅನುಗ್ರಹವನ್ನು ಪಡೆಯುವುದರಿಂದ ಮೋಕ್ಷರೂಪವಾದ ಫಲವನ್ನು ಹೊಂದಬಹುದು ಎಂದು ಆಚಾರ್ಯರು ವಿವರಿಸುತ್ತಾರೆ.
मूलम्- ಮೂಲ:-
वैराग्यंच मुमुक्षुत्वं तीव्रं यस्य तु विद्यते ।
तस्मिन्नेवार्थवंतः स्युः फलवंतः शमादयः ॥३०॥
ವೈರಾಗ್ಯಂಚ ಮುಮುಕ್ಷುತ್ವಂ ತೀವ್ರಂ ಯಸ್ಯ ತು ವಿದ್ಯತೇ |
ತಸ್ಮಿನ್ನೇವಾರ್ಥವಂತಃ ಸ್ಯುಃ ಫಲವಂತಃ ಶಮಾದಯಃ ||೩೦||
ಪ್ರತಿಪದಾರ್ಥ :-
(ತು= ಆದರೆ, ಯಸ್ಯ= ಯಾರಿಗೆ, ವೈರಾಗ್ಯಂ= ವೈರಾಗ್ಯವು, ಮುಮುಕ್ಷುತ್ವಂ ಚ= ಮತ್ತು ಬಿಡುಗಡೆಯ ಬಯಕೆಯು, ತೀವ್ರಂ ವಿದ್ಯತೇ= ತೀವ್ರವಾಗಿದೆಯೋ,
ತಸ್ಮಿನ್ ಏವ = ಅವನಲ್ಲಿಯೇ, ಶಮಾದಯಃ= ಶಮಾದಿಗುಣಗಳು, ಅರ್ಥವಂತಃ=ಅರ್ಥವುಳ್ಳವೂ, ಫಲವಂತಃ=ಫಲವುಳ್ಳದ್ದೂ, ಸ್ಯುಃ =ಆಗುವುವು).
ತಾತ್ಪರ್ಯ:-
ಆದರೆ, ಯಾರಲ್ಲಿ ವೈರಾಗ್ಯವು ಮತ್ತು ಮುಮುಕ್ಷುತ್ವವು ತೀವ್ರವಾಗಿರುವುದೋ ಅವನಲ್ಲಿಯೇ ಶಮಾದಿಗುಣಗಳು ಸಾರ್ಥಕವೂ ಸಫಲವೂ ಆಗುವುವು.
ವಿವರಣೆ:-
ಈ ಮೇಲಿನ ಶ್ಲೋಕವನ್ನು ಮತ್ತು ಅದರ ತಾತ್ಪರ್ಯವನ್ನು ಗಮನಿಸಿದರೆ ಸುತ್ತಿ-ಬಳಸಿ ಮತ್ತೆ ಇದ್ದಲ್ಲಿಗೇ ಬಂದೆವೇನೊ ಎನಿಸುತ್ತದೆ. ಅದು ನಿಜವೆ !. ಈ ಮೂಲಕ ಸಾಧನ ಚತುಷ್ಟಯದ ಗುಣಗಳೆಲ್ಲವೂ ಅಪೇಕ್ಷಿಯಲ್ಲಿ ಅಥವಾ ಅಧಿಕಾರಿಯಲ್ಲಿ ತೀವ್ರವಾಗಿಯೇ ಇರಬೇಕಾಗುತ್ತದೆ ಎನ್ನುವುದನ್ನು ತಿಳಿಯಬಹುದು. ಒಬ್ಬನು ತನ್ನ ಹೊಲದಲ್ಲಿ ರಾಗಿಯನ್ನು ನಾಟಿ ಚೆನ್ನಾಗಿ ನೀರು ಕೊಟ್ಟು ಗೊಬ್ಬರವನ್ನೂ ಹಾಕಿ ತಿಂಗಳುಗಳ ಕಾಲ ಕಣ್ಣಿಟ್ಟು ಬೆಳೆದರೂ ಸಹ ಇಳುವರಿಯು ಚೆನ್ನಾಗಿಲ್ಲ ಎಂದು ಹೇಳುತ್ತಾನೆ. ಏಕೆಂದರೆ ಆತನು ಬೆಳೆಯ ಸುತ್ತಲೂ ಬೆಳೆದಿದ್ದ ಕಳೆಯನ್ನು ಹಾಗೆ ಬಿಟ್ಟುಕೊಂಡೇ ಉತ್ತಮ ಇಳುವರಿಯನ್ನು ಬಯಸಿರುತ್ತಾನೆ. ಸಂಪೂರ್ಣ ತೊಡಗುವಿಕೆ ಇಲ್ಲದೆ ಉತ್ತಮ ಫಲವನ್ನು ನಿರೀಕ್ಷಿಸುವುದಾದರೂ ಹೇಗೆ ? . ತೊಡವಿಕೆಯ ಜೊತೆಗೆ ಮಾಡುವ ಕೆಲಸದಲ್ಲಿ Passion ಮತ್ತು ತೀವ್ರತೆಗಳೆರಡೂ ಇರಬೇಕಾಗುತ್ತದೆ.
ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ ಕ್ರಮೇಣ (ಮೇಲೆ ವಿವರಿಸಿದಂತೆ) ಮುಮುಕ್ಷುತ್ವವು ತೀವ್ರವಾಗುತ್ತದೆ ಎಂದರೂ ಸಹ ಸಾಧ್ಯತೆಗಳು ದೀರ್ಘಕಾಲೀನವಾದುವೂ ಮತ್ತು ಇಂತಹ ಸ್ಥಿತಿಯಲ್ಲಿ ಮನೋನಿಗ್ರಹವು ಕಷ್ಟಸಾಧ್ಯವಾದುದರಿಂದ ತೀವ್ರತೆಯ ಭಾವವೇ ಉತ್ತಮ ಎನ್ನುವ ಆಶಯವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆನ್ನಬಹುದು.
ವೈರಾಗ್ಯ ಮತ್ತು ಮುಮುಕ್ಷುತ್ವದ ತೀವ್ರತೆಯನ್ನು ಇಟ್ಟುಕೊಂಡು ಸಾಧನೆಗೆ ಮುಂದಾದಾಗ ಶಮಾದಿಗಳು ಫಲನೀಡುತ್ತವೆ ಮತ್ತು ಅರ್ಥಪೂರ್ಣವಾಗಿರುತ್ತದೆ ಎಂದು ವ್ಯಾಖ್ಯಾನಿಸುತ್ತಾರೆ. ಕಾರ್ಯದಿಂದ ಕಾರಣವನ್ನು ಊಹಿಸಬೇಕೆಂಬ ಅಭಿಪ್ರಾಯವು ಇಲ್ಲಿ ವ್ಯಕ್ತವಾಗುವುದನ್ನು ಕಾಣಬಹುದು. ತೀವ್ರ ವೈರಾಗ್ಯವಿದ್ದರೆ ಶಮಾದಿ ಶಬ್ದಗಳು ಅರ್ಥವುಳ್ಳದ್ದಾಗುವುವು, ತೀವ್ರ ಮುಮುಕ್ಷುತ್ವವಿದ್ದರೆ ಶಮಾದಿಗಳು ಫಲವುಳ್ಳದ್ದಾಗುವುವು ಎಂದು ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು ವ್ಯಾಖ್ಯಾನಿಸುತ್ತಾರೆ.
मूलम्- ಮೂಲ:-
एतयोर्मंदता यत्र विरक्तत्वमुमुक्षुयोः ।
मरौ सलिलवत् तत्र शमादेर्भानमात्रता ॥३१॥
ಏತಯೋರ್ಮಂದತಾ ಯತ್ರ ವಿರಕ್ತತ್ವ-ಮುಮುಕ್ಷುಯೋಃ|
ಮರೌ ಸಲಿಲವತ್ತತ್ರ ಶಮಾದೇರ್ಭಾನಮಾತ್ರತಾ ||೩೧||
ಪ್ರತಿಪದಾರ್ಥ:-
(ಯತ್ರ= ಯಾರಲ್ಲಿ, ಏತಯೋ ವಿರಕ್ತತ್ವ-ಮುಮುಕ್ಷುತಾ= ಈ ವೈರಾಗ್ಯ-ಮುಮುಕ್ಷುತ್ವಗಳು, ಮಂದತಾ= ಮಂದವಾಗಿವೆಯೋ ತತ್ರ= ಅವರಿಗೆ,
ಮರೌ = ಮರುಭೂಮಿಯಲ್ಲಿ, ಸಲಿಲವತ್= ನೀರಿರುವಂತೆ, ಶಮಾದೇಃ= ಶಮಾದಿಗಳ, ಭಾನಮಾತ್ರ ತಾ= ತೋರಿಕೆಯು ಮಾತ್ರ ’ಇರುತ್ತದೆ’).
ತಾತ್ಪರ್ಯ:-
ಯಾರಲ್ಲಿ ಈ ವೈರಾಗ್ಯ-ಮುಮುಕ್ಷುತ್ವಗಳು ಮಂದವಾಗಿರುತ್ತವೆಯೋ ಅವರಲ್ಲಿ ಶಮಾದಿಗಳು ತೋರಿಕೆಗೆ ಮಾತ್ರ ಇರುತ್ತದೆ. ಹೇಗೆಂದರೆ, ಮರುಭೂಮಿಯಲ್ಲಿ ನೀರಿರುವಂತೆ (ಅಥವಾ ಮರೀಚಿಕೆಯಂತೆ, ಬಿಸಿಲ್ಗುದುರೆ).
ವಿವರಣೆ :-
ಯಾರಲ್ಲಿ ವೈರಾಗ್ಯ ಮತ್ತು ಮುಮುಕ್ಷುತ್ವಗಳು ಮಂದವಾಗಿರುತ್ತದೆಯೋ ಅವರಲ್ಲಿ ಶಮಾದಿಗುಣಗಳು ಕೇವಲ ತೋರಿಕೆಗೆ ಮಾತ್ರ ಇರುತ್ತದೆಯೇ ಹೊರತು ಸಾಧನೆಯ ರೂಪದಲ್ಲಿ ಇರುವುದಿಲ್ಲ. ಮರುಭೂಮಿಯಲ್ಲಿ ಮರೀಚಿಕೆಯನ್ನು ಕಾಣುವಂತೆ ಅಥವಾ ಮರಳುಗಾಡಿನಲ್ಲಿ ದುರ್ಲಭವಾದ ನೀರಿನ ಮೂಲದಂತೆ ತೋರಿಕೆಯಾಗುತ್ತದೆ ಎಂದು ವಿವರಿಸುತ್ತಾರೆ. ಮೇಲ್ನೋಟಕ್ಕೆ ಇದ್ದಂತೆ ಕಾಣುತ್ತದೆ ಆದರೆ ವಾಸ್ತವದಲ್ಲಿ ಇರುವುದಿಲ್ಲ ಎಂದು ಅರ್ಥ.
ಗುರಿ ಇಲ್ಲದೆ ದಾರಿಯಲ್ಲಿ ಸಾಗಿದರೆ ಎಲ್ಲಿಗೆ ತಲುಪಬೇಕೆಂಬ ಗೊಂದಲವು ಮುಗಿಯುವುದೇ ಇಲ್ಲ. ಹೊಲದಲ್ಲಿ ಉತ್ತಮ ಇಳುವರಿಯನ್ನು ಪಡೆಯಬೇಕೆಂಬ ತೀವ್ರ ಹಂಬಲವಿದ್ದರೆ ಅದಕ್ಕೆ ಪೂರಕವಾದ ಕಾರ್ಯಗಳೂ ಕೈಗೂಡುತ್ತವೆ ಸಾಧನಗಳೂ ಫಲ ನೀಡುತ್ತವೆ. ಗುರಿಯ ನೆಚ್ಚಿಗೆ ಇಲ್ಲದಿದ್ದರೂ ಸಹ ಹಂಬಲದಿಂದ , ಉತ್ಸಾಹದಿಂದ ಕೆಲಸ ಮಾಡುತ್ತಾ ಹೋಗುವುದರಿಂದ ಅರಿಯದೆಯೇ ಗುರಿಯನ್ನು ಮುಟ್ಟುವುದು ಸಾಧ್ಯ ಎಂದು ಹೇಳಬಹುದು. ಮುಖ್ಯವಾಗಿ ಬೇಕಾಗುವುದು ಕಾರ್ಯದಲ್ಲಿ ತೀವ್ರತೆ ಮತ್ತು ಹಂಬಲ, ಇದಿಲ್ಲದೆ ಮಾಡುವ ಕೆಲಸವು ಫಲಕಾರಿಯಾಗದೆ ಕೇವಲ ’ನಾವೂ ಮಾಡಿದೆವು’ ಎನ್ನುವುದಕ್ಕೆ ಸೀಮಿತವಾಗಿಬಿಡುತ್ತದೆ. ನೆಹರೂ ಅವರಲ್ಲಿ ತೋರಿಕೆಯಂತಿದ್ದ ದೇಶಪ್ರೇಮ, ಸ್ವದೇಶೀಯತೆ, ಸರಳತೆಗಳು ಗಾಂಧೀಜಿಯವರಲ್ಲಿ ಸಾಧನೆಯ ರೂಪದಲ್ಲಿ ಇದ್ದುವು ಎನ್ನುವುದನ್ನು ಸುಲಭವಾಗಿ ತಿಳಿಯಬಹುದು !.
ವೈರಾಗ್ಯ ಮತ್ತು ಮುಮುಕ್ಷುತ್ವವು ತೀವ್ರತೆಯನ್ನು ಪಡೆದುಕೊಂಡಾಗ ಸಾಧನೆಯ ಹಾದಿಯು ಸುಗಮವಾಗುತ್ತದೆ ಎನ್ನುವ ಸೂಕ್ಷ್ಮ ವಿಚಾರವನ್ನು ಇಲ್ಲಿ ತಿಳಿಯಬಹುದು.
ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ....
--------------------------
ಕೊ : ಇದೊಂದು ಹೊಸ ಮಾದರಿ. ಮೂಲ, ಪ್ರತಿಪದಾರ್ಥ, ತಾತ್ಪರ್ಯ, ವಿವರಣೆ ಕೊನೆಯಲ್ಲಿ ಟಿಪ್ಪಣಿ. ಇದು ಸೋಪಾನ. ಈ ಪ್ರಯತ್ನ ಸರಿಯಾಗಿದೆಯೋ ಇಲ್ಲವೋ ಎನ್ನುವುದನ್ನು ನೀವೇ ಹೇಳಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳದ್ದೇ ಅಂತಿಮ ನಿರ್ಣಯವಾದುದರಿಂದ ತೀರ್ಮಾನವನ್ನು ನಿಮಗೇ ಬಿಟ್ಟಿದ್ದೇನೆ :) . ದಯವಿಟ್ಟು ತಿಳಿಸಿ.
ಕೊ.ಕೊ.: ಪ್ರತಿಪದಾರ್ಥವನ್ನು ಕೊಡಲು ನನ್ನಲ್ಲಿ ಸಬಂಧಪಟ್ಟ ಕನ್ನಡ ಪುಸ್ತಕವು ಇಲ್ಲ. ನನ್ನ ಗ್ರಹಿಕೆಯ, ತಿಳುವಳಿಕೆಯ ಆಧಾರದಲ್ಲಿ ಕೊಟ್ಟಿದ್ದೇನೆ, ಕೊಡುತ್ತೇನೆ. ಇಲ್ಲೇನಾದರೂ ತಪ್ಪುಗಳು ಕಂಡು ಬಂದಲ್ಲಿ ತಿಳಿಸಿ-ತಿದ್ದಿಕೊಡಿ ಎಂದು
ಕೇಳಿಕೊಳ್ಳುತ್ತೇನೆ. ಹಳೆಯ ಮಾದರಿಯನ್ನೇ ಉಳಿಸಿಕೊಳ್ಳಬೇಕೆಂದರೆ , ಅದಕ್ಕೂ ಸರಿಯೆ.
=======================
ವಂದನೆಗಳೊಂದಿಗೆ,
No comments:
Post a Comment