[ಚಿತ್ರ ಕೃಪೆ ಗೂಗಲ್ ಅಂತರ್ಜಾಲ ]
[ಇಲ್ಲೂ ಮನುಷ್ಯರು ಬದುಕ್ತಾರೆ. ಚಿತ್ರ ಕೃಪೆ: ವಿಕಿಪಿಡಿಯಾ ]
ಡಾ||ಕೃಷ್ಣಮೂರ್ತಿಯವರು ತಮ್ಮ ಕೊಳಲು ಬ್ಲಾಗಿನಲ್ಲಿ "ಜಗವೆಲ್ಲ ಮಲಗಿರಲು" ಎಂಬ ಒಂದು ಲೇಖನವನ್ನು ಬರೆದಿದ್ದಾರೆ. ಅದನ್ನು ಓದಿದಾಗ ನನಗೆ ನಮ್ಮ ಸಮಾಜದ ಸ್ಥಿತಿಗತಿಗಳ ಚಿತ್ರಣ ಮನದಲ್ಲಿ ಮೂಡಿ ಅದರಲ್ಲೇ ಸ್ವಲ್ಪ ಕಾಲ ಮುಳುಗಿಹೋಗಿದ್ದೆ. ಸಾಮಾನ್ಯವಾಗಿ ನಾವೆಲ್ಲಾ ಭಗವಂತನ ಕೃಪೆಯಿಂದ ಹೊಟ್ಟೆ-ಬಟ್ಟೆಗೆ ನೆಮ್ಮದಿಯಿಂದ ಇರುವವರೆ. ಇರಲು ಎಷ್ಟು ಬೇಕೋ ಅದಕ್ಕಿಂತಲೂ ಸ್ವಲ್ಪ ಹೆಚ್ಚು ಹೊಂದಿರುವವರೇ.[ನಾನು ಈ ಲೇಖನ ಬರೆಯುತ್ತಿರುವುದು ಮಧ್ಯಮ ವರ್ಗದಿಂದ ಮೇಲಿರುವವರಿಗೆ] ಎಲ್ಲರ ಮನೆಯ ದೋಸೆಯೂ ತೂತವೇ ಅನ್ನೋ ಗಾದೆ ಸುಳ್ಲಲ್ಲ. ಭಗವಂತ ನಮಗೆಲ್ಲಾ ಎಷ್ಟು ಕೊಟ್ಟಿದ್ದರೂ ಅಕಾರಣವಾಗಿ ಮನೆಯಲ್ಲಿ ನಾವು ಸಮಾಧಾನವನ್ನು ಹಾಳುಮಾಡಿಕೊಂಡು ಜೀವನವನ್ನು ವ್ಯರ್ಥಮಾಡಿಕೊಂಡಿರುತ್ತೇವೆ. ಸಾಮಾನ್ಯವಾಗಿ ಮನೆಯಲ್ಲಿ ಎಲ್ಲರಿಗೂ ಇರುವ ಕಾಮನ್ ಸಮಸ್ಯೆ ಎಂದರೆ ಪತಿಪತ್ನಿಯರಲ್ಲಿ ಒಬ್ಬರಿಗೆ ಚಿನ್ನ, ಬೆಳ್ಳಿ, ಬಟ್ಟೆ, ಮತ್ತು ಮನೆಯ ಅಲಂಕಾರಿಕ ವಸ್ತುಗಳಿಗೆ ಎಷ್ಟು ಹಣ ವ್ಯಯ ಮಾಡಿದರೂ ಸಮಾಧಾನವಿರುವುದಿಲ್ಲ. ಮತ್ತೊಬ್ಬರಿಗೆ ಅಯ್ಯೋ ಅನ್ಯಾಯವಾಗಿ ಇವಕ್ಕೆಲ್ಲಾ ದುಡ್ದು ಖರ್ಚುಮಾಡಿ ಮನೆಯಲ್ಲಿ ತುಂಬಿಕೊಂಡು ಸಮಾಧಾನ ಕೆಡಸಿಕೊಳ್ಳ ಬೇಕಲ್ಲಾ! ಎಂದು . ಒಬ್ಬರಿಗೆ ಮನೆಯಲ್ಲಿ ಎಷ್ಟಿದ್ದರೂ ಇನ್ನೂ ಬೇಕೆನುವ ಸ್ವಭಾವವಿದ್ದರೆ ಮತ್ತೊಬ್ಬರಿಗೆ, ಸಮಾಜದಲ್ಲಿ ಹಸಿದ ಜನರನ್ನು ಕಂಡು ಕನಿಕರದಿಂದ ನೀಡುವ ಸ್ವಭಾವ!!
ಕುಟುಂಬ ದಲ್ಲಿ ಎಲ್ಲರ ಸ್ವಭಾವವೂ ಒಂದೇ ಆಗಿರ ಬೇಕೆಂದೇನೂ ಇಲ್ಲ. ಕೆಲವರ ಮನೆಗಳು ಇದಕ್ಕೆ ವಿರುದ್ಧವಾಗಿಯೂ ಇರಬಹುದು. ಪತಿ-ಪತ್ನಿಯರಿಬ್ಬರಿಗೂ ನೀಡುವ ಸ್ವಭಾವ ಇರಬಹುದು, ಅಥವಾ ಪತಿ-ಪತ್ನಿಯರಿಬ್ಬರಿಗೂ ಕೊಳ್ಳು ಬಾಕ ಸಂಸ್ಕೃತಿಯ ಕೂಡಿಹಾಕಿಕೊಳ್ಳುವ ಸ್ವಭಾವವಿರಬಹುದು.ಇವತ್ತಿನ ಮಕ್ಕಳಿಗಂತೂ ಎಷ್ಟೇ ಬಟ್ಟೆ ಕೊಂಡರೂ ಸಮಾಧಾನವಿಲ್ಲ. ಒಟ್ಟಿನಲ್ಲಿ ಹೀಗೆ ಮನಸ್ಸಿಗೆ ನೆಮ್ಮದಿ ಹಾಳಾಗಲು ಒಂದಿಲ್ಲೊಂದು ವಿಚಾರ ನಮ್ಮನ್ನು ಕಾಡ್ತಾ ಇರುತ್ತೆ.
ಯಾಕೆ ಹೀಗಾಗುತ್ತೆ, ಅಂದ್ರೆ ಸಮಾಜದ ಬಗ್ಗೆ ನಮಗಿರುವ ಅಜ್ಞಾನ. ಮನೆ ಬಿಟ್ಟು ಹೊರಗೆ ಸುತ್ತಬೇಕು. ಸುತ್ತಬೇಕು ಅಂದ ತಕ್ಷಣ ಸಾಮಾನ್ಯವಾಗಿ ಮನೆ ಮಂದಿಗೆಲ್ಲಾ ಅನ್ನಿಸೋದು ಬಿಗ್ ಬಝಾರ್, ಹೋಟೆಲ್, ಸಿನೆಮಾ, ಪಾರ್ಕು, ಚಿನ್ನ ಬೆಳ್ಳಿ ಅಂಗಡಿ, ಅಥವಾ ಯಾವ್ಯಾವುದೋ ಮಾಲ್ ಗಳು. ಅಥವಾ ದೇವಸ್ಥಾನಗಳು, ಪುಣ್ಯ ಕ್ಷೇತ್ರಗಳು, ಮಠ ಮಂದಿರಗಳು. ಇದು ಬಿಟ್ಟು ಬೇರೆ ಎಲ್ಲಾದರೂ ಹೆಜ್ಜೆ ಹಾಕಿದ್ದೀವಾ? ನನ್ನನ್ನೂ ಸೇರಿಸಿಕೊಂಡೇ ಈ ಮಾತು. ನಾನು ಒಮ್ಮೊಮ್ಮೆ ಹೀಗೆ ಮಾಡುವುದುಂಟು. ಸಮಯ ಸಿಕ್ಕಾಗ ನಮ್ಮ ಹತ್ತಿರದ ಕೊಳೆಗೇರಿ ಯಲ್ಲಿ ಒಂದು ರೌಂಡ್ ಹಾಕಿ ಬಂದಿದ್ದುಂಟು. ಆಗೆಲ್ಲಾ ಸಿ೦ಬಳ ಸುರಿಸಿಕೊಂಡು, ನಿಕ್ಕರ ತೊಡದೆ ರಸ್ತೆಯಲ್ಲಿ ಚಿರಂಡಿ ಬದಿಯಲ್ಲಿ ಓಡಾಡುವ ಮಕ್ಕಳು. ಬಿಸಲು ಕಾಯಿಸುತ್ತಾ ಕುಳಿತಿರುವ ಚಿಂದಿ ಬಟ್ಟೆ ಉಟ್ಟ ಮುದುಕರು. ಸಾಮಾನ್ಯವಾಗಿ ಆ ಮನೆಗಳ ಪ್ರಾಯಸ್ತರು ಗಾರೆ ಕೆಲಸ, ಬಣ್ಣ ಹೊಡೆಯುವ ಕೆಲಸ, ಗಾಡಿಯಲ್ಲಿ ತರಕಾರಿ ಮಾರುವ ಕೆಲಸ, ಹೀಗೆ ಯಾವುದೋ ಕೆಲಸದ ಮೆಲೆ ಹೊರ ಹೋಗಿದ್ದರೆ ಕೇರಿಯಲ್ಲಿರುವವರ ಸ್ಥಿತಿ ಹೀಗಿರುತ್ತೆ. ಇದನ್ನೆಲ್ಲಾ ನೋಡಿ ಮನ ಕರಗಿ ಮನೆಯಲ್ಲಿ ಮಾತನಾಡಿದರೆ ಸಾಮಾನ್ಯವಾಗಿ ರಿಯಾಕ್ಷನ್ ಏನು ಗೊತ್ತಾ? ಅವರಿಗೆಲ್ಲಾ ಸರ್ಕಾರ ಎಷ್ಟು ಮಾಡುತ್ತೆ! ಎಷ್ಟು ಮಾಡಿದ್ರೂ ಇಷ್ಟೆ!! ಅದು ಅವರ ಹಣೆ ಬರಹ!!
ಅಯ್ಯೋ ಅನ್ನಿಸುತ್ತೆ. ಯಾರ ಹಣೆ ಬರಹ ಯಾರೂ ತಿದ್ದಲಾಗದು. ಆದರೆ ನಮಗೆ ಭಗವಂತನು ಏನಾದರೂ ಸ್ವಲ್ಪ ವಿದ್ಯೆ ಅಂತಾ ಕೊಟ್ಟಿದ್ದರೆ ಅದರ ವಿನಿಯೋಗ ಹೇಗಾಗಬೇಕು? ಕನಿಷ್ಟ ಒಬ್ಬಿಬ್ಬರನ್ನಾದರೂ ಪರಿವರ್ತಿಸಲು ನಮ್ಮಿಂದಾಗದೇ? ನಮ್ಮ ಕೈಲಾದ ಸಹಾಯವನ್ನು ಒಂದು ಕುಟುಂಬಕ್ಕಾದರೂ ಮಾಡಲು ನಮಗೆ ಸಾಧ್ಯವಿಲ್ಲವೇ?
ನಮಗೆ ಬೇಕಿರುವುದು ಏನು?
ಕೊಳೆಗೇರಿ ಜನರೂ ಕೂಡ ನಮ್ಮಂತೆ ಮನುಷ್ಯರು, ನಮ್ಮ ಅಣ್ಣ ತಮ್ಮಂದಿರು ಎನಿಸಿದರೆ ಮೊದಲ ಹಂತವಾಗಿ ನಾವು ನಮ್ಮ ವಾಕಿಂಗ್ [ನಿತ್ಯವೂ ಗಾಳಿ ಸೇವನೆಗಾಗಿ ಮಾಡ್ತೀವಲ್ಲವೇ?] ವಾರಕ್ಕೊಮ್ಮೆಯಾದರೂ ಅಲ್ಲಿ ಮಾಡಬೇಕು. ಕಣ್ಣಾರೆ ಅಲ್ಲಿಯ ಜನರನ್ನು ನೋಡಬೇಕು. ಅಯ್ಯೋ ಎನಿಸಿದರೆ ಯಾರ ಬಗ್ಗೆ ಅನ್ನಿಸುತ್ತೋ ಅವರ ಮನೆ ಹತ್ತಿರ ನಾಲ್ಕಾರು ದಿನ ಓಡಾಡಿ ಪರಿಚಯ ಮಾಡಿಕೊಳ್ಳಬೇಕು. ನಮ್ಮ ಪ್ರಯತ್ನಕ್ಕೆ ಎಟುಕದಿದ್ದರೆ ದುಸ್ಸಾಹಸ ಮಾಡುವ ಅಗತ್ಯವಿಲ್ಲ. ಆದರೆ ಪರಿಚಯ ಬೆಳೆದು ನಾವು ಆ ಕುಟುಂಬಕ್ಕೆ ಏನಾದರೂ ಕಿಂಚಿತ್ ಸಹಾಯ ಮಾಡಿ ಆ ಮನೆಯ ಜನರ ಸ್ಥಿತಿಯನ್ನು ಕೊಂಚ ಮೇಲೆತ್ತಬಹುದೆಂದು ನಮಗೆ ಅನ್ನಿಸಿದರೆ ಏನು ಮಾಡ ಬಹುದೆಂದು ನಮಗೇ ತೋಚುತ್ತದೆ.
ಎಚ್ಚರ ವಿರಲಿ
ಈಗ್ಗೆ ಹತ್ತು ಹದಿನೈದು ವರ್ಷಗಳ ಮುಂಚೆ ಕವಿನಾಗರಾಜರು ಮತ್ತು ನಮ್ಮ ಹಲವು ಮಿತ್ರರು ಸೇರಿ ಹಾಸನದಲ್ಲಿ " ಸೇವಾಭಾರತೀ"ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ನಾನು ಕೆಲಸ ಮಾಡುತ್ತಿದ್ದ ಕೆ.ಇ.ಬಿ. ಕಚೇರಿ ಸಮೀಪದ ಸಿದ್ದಯ್ಯ ನಗರವೆಂಬ ಕಲೊನಿಯಲ್ಲಿ ಪ್ರತೀ ತಿಂಗಳು ಉಚಿತ ವೈದ್ಯಕೀಯ ತಪಾಸಣೆ ಶಿಬಿರ ನಡೆಸಿದೆವು. ಸುಮಾರು ವರ್ಷಕ್ಕಿಂತಲೂ ಹೆಚ್ಚು ಕಾಲ. ನಮಗೆ ಸಮಾಧಾನವೆಂದರೆ ಆ ಸಮಯದಲ್ಲಿ ಆ ಕಾಲೊನಿಯಲ್ಲಿ ಹಲವರಿಗಿದ್ದ " ಕಜ್ಜಿ" ರೋಗದ ನಿರ್ಮೂಲನೆ ಮಾಡಲು ಸಾಧ್ಯವಾಯ್ತು. ನಮ್ಮೊಡನೆ ಮಿತ್ರರಾದ ಡಾ|| ಗುರುರಾಜ ಹೆಬ್ಬಾರ್ ಅವರು ತಮ್ಮ ಸಿಬ್ಬಂಧಿಗಳೊಡನೆ ತಮ್ಮದೇ ಆದ ವಾಹನದಲ್ಲಿ ಬಂದು ಉಚಿತವಾಗಿ ರಕ್ತ ,ಮೂತ್ರ, ಬಿಪಿ ,ಇಸಿಜಿ ಎಲ್ಲವನ್ನೂ ಪರೀಕ್ಷಿಸಲು ತಪಾಸಣಾ ಕೇಂದ್ರವನ್ನೆ ತಾತ್ಕಾಲಿಕವಾಗಿ ತೆರೆಯುತ್ತಿದ್ದರು. ಮತ್ತೊಬ್ಬ ವೈದ್ಯರಾದ ಡಾ|| ವೀರಭದ್ರಪ್ಪನವರು ತಮ್ಮ ಮೆಡಿಕಲ್ ಶಾಪ್ ನಲ್ಲಿ ಅಗತ್ಯವಾದ ಎಲ್ಲಾ ಔಷ ಧಿಯನ್ನು ಉಚಿತವಾಗಿ ಒದಗಿಸುತ್ತಿದ್ದರು. ಅದನ್ನೆಲ್ಲಾ ವ್ಯವಸ್ಥೆ ಮಾಡಲು ಶ್ರೀ ಕವಿನಾಗರಾಜ್, ಲಕ್ಷ್ಮಣ್ ಮತ್ತು ನಾನು ಸೇರಿ, ಮೂವರ ತಂಡ. ವ್ಯವಸ್ಥಿತವಾಗಿ ಕೆಲವು ವರ್ಷಗಳು ಈ ಸೇವೆ ನಡೆಯಿತು. ಆದರೆ ಸಿದ್ದಯ್ಯ ನಗರದಲ್ಲಿ ಯಾರೋ ಒಬ್ಬರ ಬಾಯಲ್ಲಿ ಬಂದ ಮಾತು" ಸರ್ಕಾರದೋರು ನಿಮಗೆ ಎಷ್ಟು ಕೊಡ್ತಾರೆ?" ಅದರಲ್ಲಿ ಏನಾದರೂ ಉಳಿದರೆ ನಮಗೂ ಹಂಚಿ ಎಂಬುದು ಅವರ ಮಾತು.
ನಿಸ್ವಾರ್ಥವಾಗಿ ಕೆಲಸ ಮಾಡಿದ್ದ ನಮಗೆ ಆ ಒಂದು ಮಾತು ಬೇಸರವನ್ನೂ ತಂದಿತ್ತು. ಹೀಗೆ ಸಮಾಜ ಸೇವೆ ಮಾಡುವಾಗ ಇದೆಲ್ಲಾ ಇದ್ದದ್ದೇ. ಆದರೆ ನಾವು ನಾವೇನೋ ಮಹಾನ್ ಕಾರ್ಯ ಮಾಡುತ್ತಿದ್ದೇವೆಂದು ಭಾವಿಸುವುದಕ್ಕಿಂತಲೂ ನಮಗಿಂತ ಕೆಳಗಿನವರ ಜೀವನದ ಪರಿಚಯ ನಮಗೆ ಆದಾಗ ನಮ್ಮ ಮನೆ ಮಂದಿ ಜೀವನವನ್ನು ಅರ್ಥ ಮಾಡಿಕೊಂಡು ಸಂತೃಪ್ತವಾಗಿ ಜೀವನ ನಡೆಸ ಬಲ್ಲರು. ಅದಕ್ಕಾಗಿಯಾದರೂ ನಾವು ನಮಗಿಂತ ಆರ್ಥಿಕವಾಗಿ ಸಾಮಾಜಿಕವಾಗಿ ಕೆಳಗಿರುವವರ ಕಾಲೊನಿಗಳ ಹಾದಿ ತುಳಿಯಬೇಕು.
ನಿಮ್ಮ ಈ ಬರಹ ನನಗೆ ಸೇವಾಭಾರತಿಯ ಬಗ್ಗೆ ಬರೆಯಲು ಪ್ರೇರೇಪಿಸಿತು. ಈ ಕುರಿತು ಲೇಖನ ಮತ್ತು ಕೆಲವು ಫೋಟೋಗಳನ್ನು 'ಕವಿಮನ'ದಲ್ಲಿ ನೋಡಬಹುದು:
ReplyDeleteಸೇವಾಭಾರತಿ - ಸವಿನೆನಪು http://kavimana.blogspot.com/2011/12/blog-post_6813.htm
http://kavimana.blogspot.com/2011/12/blog-post_14.html
ಅಬ್ಭಾ!
ReplyDeleteಎರಡು ದಶಕಗಳ ಹಿಂದಕ್ಕೆ ಕರೆದುಕೊಂಡು ಹೋಗಿಬಿಟ್ಟಿರಿ. ನಮ್ಮ ಅಂದಿನ ಚಟುವಟಿಕೆಗಳನ್ನು ನೆನಸಿಕೊಂಡರೆ ಅಚ್ಚರಿಯಾಗುತ್ತೆ! ನಾನಂತೂ ಹಲವು ಸಂಗತಿಗಳನ್ನು ಮರೆತೇ ಬಿಟ್ಟಿದ್ದೆ. ಸಚಿತ್ರ ನೆನಪುಮಾಡಿದ್ದಕ್ಕೆ ಅನಂತ ಧನ್ಯವಾದಗಳು. ಭಗವತ್ ಕೃಪೆ ಇದ್ದರೆ ಮತ್ತೊಮ್ಮೆ ಅದೇ ಚಟುವಟಿಕೆಗಳನ್ನು ಪುನರಾರಂಭ ಮಾಡೋಣ. ಏನಂತೀರಿ?
:))
ReplyDeleteಶ್ರೀಧರರೇ, ಸಮಾಜಸೇವೆಯನ್ನೂ ಅಪವಿತ್ರಮಾಡಿದ್ದಾರೆ, ಅಲ್ಲಿಯೂ ರಾಜಕೀಯದವರ ಅಪಾರ ಕೈವಾಡವಿದೆ. ಸೇವೆಯ ನೆಪದಲ್ಲಿ ಬಡವರ ಕಣ್ಣಿಗೆ ಹೊರಗಿನಿಂದ ತಂದ ನೀರು ಹಚ್ಚಿ " ಅಳುತ್ತಿದ್ದಾರೆ, ಈಗ ನಾವಲ್ಲದಿದ್ದರೆ ಬದುಕು ಕಷ್ಟವಿದೆ" ಎಂದು ಮಾಧ್ಯಮಗಳವರಿಗೆ ಚಿತ್ರ ತೆಗೆಯಲು ಹೇಳುತ್ತಾರೆ, ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಸರಕಾರದ ನಜರಿಗೆ ತಂದು ಒಂದಷ್ಟು ಗ್ರಾಂಟ್ ಪಡೆಯುತ್ತಾರೆ; ಮರಳಿಬಂದು ಪಡೆದದ್ದರಲ್ಲಿ ೧೦% ಹೀಗೆ ಬಡವರ ವ್ಯವಸ್ಥೆಗೆ ಬಳಸಿದಂತೇ ನಾಟಕವಾಡಿ ಮಿಕ್ಕಿದ್ದನ್ನು ತಮ್ಮ ಪಾತ್ರೆಗೆ ಬಸಿದುಕೊಂಡು ಎದ್ದುಹೋಗುತ್ತಾರೆ. ಇದನ್ನು ನೋಡಿದ ಕೆಲವು ಜನ ನಿತ್ಯಾನಂದನ ಕಾವಿಯನ್ನು ಕಂಡಂತೇ ಅಥವಾ ತೆನ್ನಾಲಿಯ ಬೆಕ್ಕು ಹಾಲನ್ನು ಕಂಡಂತೇ ನಿಜವಾದ ಕಾವಿಯನ್ನೊ ನಿಜವಾದ ಹಾಲನ್ನೂ ದುರುಗುಟ್ಟಿಕೊಂಡು ನೋಡುತ್ತಾರೆ;ನಂಬಲು ಹೆದರುತ್ತಾರೆ. ಕಲಿಯುಗದ ಮಹಿಮೆ ಇದಾಗಿದೆ! ಯಾರಿಗೋ ಸೇವೆ ಮಾಡಲು ಹೋದರೂ ಕೆಲವೊಮ್ಮೆ ಅವರು ಇಲ್ಲದ ಉಪದ್ವ್ಯಾಪಗಳನ್ನೆಲ್ಲಾ ಸೇವೆಗೆ ಹೋದವರಿಗೇ ಅಂಟಿಸುವುದೂ ಇದೆ. ಸೇವೆಯನ್ನು ಒಬ್ಬರೇ ನೇರವಾಗಿ ಮಾಡುವ ಬದಲು ಸಂಘಗಳ ಮುಖಾಂತರ ಮಾಡಿದರೇ ವಾಸಿ. ನಿಮ್ಮ ಕಳಕಳಿ ತಿಳಿಯುತ್ತದೆ, ಆದರೆ ಕೊಳೆಗೇರಿಯ ನಿವಾಸಿಗಳಲ್ಲಿ ತಾವು ಬದಲಾಗಬೇಕೆಂಬ ಭಾವನೆ ಮೂಡುವಂತೇ ಅಲ್ಲಿರುವವರಿಗೆ ವಿದ್ಯೆ ದೊರೆಯುವ ಹಾಗೇ ಮಾಡಿದರೆ ಅದು ಸರಿಯಾಗಿರುತ್ತದೆ, ನೇರವಾಗಿ ಹಣವನ್ನೋ ಇನ್ನೇನನ್ನೋ ಕೊಟ್ಟರೆ ಅದು ಹೆಂಡ, ಜುಗಾರು ಇತ್ಯಾದಿ ಖರ್ಚುಗಳ ಯಾದಿಗೆ ಸೇರುತ್ತದೆ. ಕೊಳೆಗೇರಿಯಲ್ಲೇ ಹುಟ್ಟಿ ಬೆಳೆದ ಹುಡುಗನೊಬ್ಬ ಹೋಟೆಲ್ ನಲ್ಲಿ ಸಪಾಯ್ ಕೆಲಸಕ್ಕೆ ಸೇರಿ, ಅಲ್ಲೇ ಎಲ್ಲವನ್ನೂ ಕಲಿತು, ಇಂದು ದೊಡ್ಡ ಹೋಟೆಲ್ ಗಳ ಮಾಲೀಕನಾಗಿದ್ದಾನೆ-ಅಮ್ಮನನ್ನು ಖುಷಿಪಡಿಸುವ ಏಕೈಕ ಆಸೆಯಿಂದ ಹಾಗೆ ಮೇಲ್ಮಟ್ಟಕ್ಕೆ ಏರಿದ್ದಾನೆ. ಆತನಿಗೆ ಕುಲೀನ ಹುಡುಗಿಯ ಜೊತೆ ಮದುವೆಯಾಗಿದೆ, ಕಾರು ಬಂಗಲೆ ಎಲ್ಲಾ ಖರೀದಿಸಿ ಹಾಯಾಗಿದ್ದಾನೆ. ಇಂತಹ ಉದಾಹರಣೆಗಳನ್ನು ಅಲ್ಲಿನ ಜನರಿಗೆ ತಿಳಿಸಿ ಅವರು ನ್ಯಾಯಯುತವಾಗಿ ಗಳಿಸುವ ಮಾರ್ಗವನ್ನು ತೋರಿಸಿಕೊಟ್ಟರೆ ಅದೇ ಮಹದುಪಕಾರ.
ReplyDeleteಹೌದು ಭಟ್ಟರೇ,
ReplyDeleteಅಲ್ಲಿನ ಜನರನ್ನು ಎಜುಕೇಟ್ ಮಾಡಬೇಕು. ನೀವು ಹೇಳಿದಂತೆ ಪಾರದರ್ಶಕವಾಗಿರುವ ಸಂಘಟನೆಯ ಮೂಲಕ ಮಾಡಬೇಕು. ಕೊಂಡಿಯಲ್ಲಿರುವ ಲೇಖನದಲ್ಲಿ ಮಿತ್ರರಾದ ನಾಗರಾಜ್ ಅವರೊಡನೆ ಸೇರಿ ಸೇವಾಭಾರತಿಯ ಹೆಸರಲ್ಲಿ ನಮಗೆ ಸಮಾಧಾನವಾಗುವಂತೆ ಕೆಲಸ ಮಾಡಿದೆವು. ಈಗಲೂ ಒಂದಿಷ್ಟು ಚಟುವಟಿಕೆ ಮುಂದುವರೆಸಬೇಕೆಂಬ ಆಸೆಯಂತೂ ಇದೆ. ಆಯುಶ್ಯ ಜಾರಿಹೋಗುತ್ತಿದೆ. ಏನಾದರೂ ಕೈಲಾದ ಸೇವೆ ಮಾಡಬೇಕೆಂಬ ಆಸೆಯಂತೂ ಬಲವಾಗಿದೆ. ದೈವ ಕೃಪೆ ಇದ್ದರೆ ಆಗುತ್ತದೆ.