Pages

Thursday, February 16, 2012

ಮಂಕು ತಿಮ್ಮನ ಕಗ್ಗ - ರಸಧಾರೆ -1


ನಮಸ್ಕಾರ,
ಶ್ರೀ ಹರಿಹರಪುರಶ್ರೀಧರ್ ಅವರ ಪ್ರೀತಿಯ ಆಹ್ವಾನದ ಮೇರೆಗೆ ನನಗೆ ಇಲ್ಲಿ ಬರೆಯುವ ಸೌಭಾಗ್ಯ ದೊರೆತದ್ದು ಪೂರ್ವ ಸುಕೃತವೆ ಸರಿ. ಪರಮಾತ್ಮನ ದಯೆಯಿಂದ ಜ್ಞಾನ ಪಡೆಯಬೇಕೆಂಬ ಉತ್ಕಟಾಕಾಂಕ್ಷೆಯ ಫಲ ಸ್ವರೂಪವೇ ಈ ಕಗ್ಗಗಳ ವಿವರಣೆಯ ಸರಮಾಲೆ. ಮಾನ್ಯ ಡಿ.ವಿ.ಜಿ ಯವರ ಕಗ್ಗಗಳಿಗೆ ವಿವರಣೆ ಕೊಡುವುದು ನನ್ನ೦ತಹ ಪಮರಾತಿಪಾಮರನಿಗೆ ಒಂದು ದುಸ್ಸಾಹಸವೇ ಸರಿ. ಆದರೂ ಜ್ಞಾನಾಕಾಂಕ್ಷಿಯಾಗಿ  ಈ ಕೆಲಸ ಮಾಡುತ್ತಿದ್ದೇನೆ. ವಾಚಕರು ಸಹೃದಯದಿಂದ, ನನ್ನ ತಪ್ಪುಗಳನ್ನು ತಿದ್ದಿ ಸರಿಮಾರ್ಗದಲ್ಲಿ ನನ್ನನ್ನು ಕೊಂಡು ಹೋಗಬೇಕೆಂದು ದಾಸನ ಕಳಕಳಿಯ ಮನವಿ. ಇಂದಿನಿಂದ ಪ್ರತಿನಿತ್ಯ ಒಂದು ಕಗ್ಗ ಮತ್ತು ಅದರ ವಿವರಣೆಯನ್ನು ಬರೆಯುತ್ತೇನೆ. ನಮಸ್ಕಾರ. 



ಇಂದು ಮೊದಲನೆಯ ಕಗ್ಗವನ್ನು ಬರೆದು ಹಾಕುತ್ತಿದ್ದೇನೆ. 

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ 
ದೇವ ಸರ್ವೇಶ ಪರಬೊಮ್ಮನೆಂದು ಜನಂ //
ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ 
ಆ ವಿಚಿತ್ರಕೆ ನಮಿಸೊ - ಮಂಕು ತಿಮ್ಮ //

ವಿಶ್ವಕ್ಕೆ ಮೂಲವಾದ ಶ್ರೀ ವಿಷ್ಣು, ಮಾಯಾಲೋಲ, ದೇವರು, ಪರಬ್ರಹ್ಮ, ಸರ್ವಕ್ಕೂ ಒಡೆಯನಾದ ಪರಮ ಪುರುಷ ಹೀಗೆ ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ  ಆ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು. 

ನಾವಿರುವ ಭೂಮಿಯಂತಹ 9 .80 ಲಕ್ಷ ಭೂಮಿಗಳನ್ನು ನಮ್ಮ ಸೌರವ್ಯೂಹದ ಸೂರ್ಯನೊಳಕ್ಕೆ ಹಾಕಿಬಿಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಸೌರಮಂಲವೂ  ಸೇರಿದಂತೆ  ಲಕ್ಷಾಂತರ ಸೌರಮಂಡಲಳಿರುವ  ನಮ್ಮ ಕ್ಷೀರಪಥ, ನಮ್ಮ ಕ್ಷೀರಪಥವೂ ಸೇರಿದಂತೆ ಲಕ್ಷಾಂತರ ಕ್ಷೀರಪಥಗಳಿರುವ ಅಕಾಶಗಂಗೆ, ನಮ್ಮ ಆಕಾಶಗಂಗೆಯೂ ಸೇರಿದಂತೆ ಲಕ್ಷಾಂತರ ಆಕಾಶಗಂಗೆಗಳಿರುವ ಈ ವಿಶ್ವ. ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಒಂದು ಶಕ್ತಿ. ಅದನ್ನೇ ಬೇರೆ ಬೇರೆಯವರು ಬೇರೆ ಹೆಸರುಗಳಿಂದ ಕರೆಯುತ್ತಾರೆಂದು ಈ ಕಗ್ಗದ ಆಂತರ್ಯ ಮತ್ತು ವಿಶ್ವದ ಒಂದು ಅಣುವಷ್ಟೂ ಅಲ್ಲದ ನಾವು ಕಾಣದಿದ್ದರೂ ಆ ಶಕ್ತಿಯ ಅಧೀನದಲ್ಲಿರುವುದರಿಂದ, ಅದಕ್ಕೆ ಭಕ್ತಿಯಿಂದ ಪ್ರೀತಿಯಿಂದ ನಮಿಸಬೇಕು ಎಂದು ಒಂದು ಆದೇಶ. 

ಅವರವರ ಭಾವಕ್ಕೆ ಅವರವರ ಭಕುತಿಗೆ 
ಅವರವರ ತೆರನಾಗಿ ಇರುತಿಹನು ಶಿವಯೋಗಿ    
ಹರನ  ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ 
ನರರೇನು ಭಾವುಸುವರದರಂತೆ ಕಾಣುವನು 

ಶಿವ ಶರಣರ ಮಾತು. ಹೀಗೆ ಒಂದೇ ಸತ್ಯವನ್ನು ಎಲ್ಲ ಮಹಾ ಮಹಿಮರೂ ಹೇಳಿದ್ದಾರೆ  ಅಲ್ಲವೆ. 

ಬನ್ನಿ ಈ ವಿಚಾರಗಳನ್ನು ಮಂಥನ ಮಾಡುತ್ತಾ, ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳೋಣ. 
ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ 

7 comments:

  1. ರವಿ ತಿರುಮಲೈರವರಿಗೆ ಬಳಗಕ್ಕೆ ಸ್ವಾಗತ. ಶುಭಾರಂಭವಾಗಿದೆ. ಮುಂದುವರೆಸಿರಿ.

    ReplyDelete
  2. ಅಣ್ಣನೊಡನೆ ತಮ್ಮನಿಂದಲೂ ಆದರದ ಸ್ವಾಗತ.

    ReplyDelete
  3. ಕಗ್ಗ ಇಲ್ಲಿ ಬಂದದ್ದು ನೋಡಿ ಖುಷಿಯಾಯಿತು.
    ವಿವರಣೆ ಚೆನ್ನಾಗಿದೆ.
    ಸ್ವರ್ಣಾ

    ReplyDelete
    Replies
    1. ನೀವು ಚಿನ್ನದಷ್ಟು ದುಬಾರಿ ಆಗಿಬಿಡ್ತೀರಲ್ಲಾ! ನೀವೂ ಒಂದಿಷ್ಟು ಬರೆಯಿರಿ. ವೇದಸುಧೆದಾಟ್ ಕಾಮ್ [vedasudhe.com] ನಲ್ಲಿ ನಿನ್ನೆಯಿಂದ ಸುಧಾಕರ ಶರ್ಮರ ಸರಣಿ ಉಪನ್ಯಾಸದ ಆಡಿಯೋ ಹಾಕಲು ಆರಂಭಿಸಲಾಗಿದೆ.ಅಲ್ಲಿಗೂ ಅಲ್ಲಿಗೂ ಭೇಟಿ ಕೊಡಿ.

      Delete
    2. ಅಯ್ಯೋ ಸರ್....ನಿಮ್ಮಂಥೋರಿಂದ ಕಲಿಯೋದಷ್ಟೇ ನನ್ನ ಕೆಲಸ :)
      ಖಂಡಿತ..ಒಮ್ಮೆ ಶರ್ಮರನ್ನು ಭೇಟಿಯಾಗಬೇಕಿಂದಿದೆ, ಹೊಸಬೆಳಕೂ ಸಹ
      ಚೆನ್ನಾಗಿದೆ.
      ಒಂದು ಮನವಿ, ನಾನು ಮಂಗಳ ಗೌರಿ ವ್ರತದ ಉದ್ಯಾಪನೆ ಮಾಡಬೇಕಿದೆ.
      ಈ ವರ್ಷ. ಅದಕ್ಕೆ ನಾನು ಯಾರಾದರೂ ಇಲ್ಲದ ಹೆಣ್ಣುಮಕ್ಕಳಿಗೆ
      ಬಾಗಿನದ ಎಲ್ಲ ಸಾಮಾನು ಕೊಟ್ಟು, ಹೊರನಾಡಿನಲ್ಲಿ ಊಟಕ್ಕೆ ಅಕ್ಕಿ ಕೊಡೋಣ ಅಂತ.
      ಇದು ಸರಿನ? ಸಲಹೆ ಕೊಡ್ತಿರಾ ಸರ್?
      ಸ್ವರ್ಣಾ

      Delete
    3. ಎಂತಹಾ ಚಿನ್ನದಂತಾ ಆಲೋಚನೆ ನಿಮ್ಮದು. ನಾನು ಹಲವು ಭಾರಿ ನಮ್ಮ ಮನೆಯಲ್ಲಿ ಹೇಳ್ತಾ ಇರ್ತೀನಿ. ಏನೇ ದಾನಮಾಡುವಾಗಲೂ ಇಲ್ಲದವರಿಗೆ ದಾನ ಮಾಡಿದರೆ ಅವರು ಅದರಲ್ಲಿ ಸಂತೋಷ ಪಡ್ತಾರೆ. ಆದರೆ ನಾವೇನು ಮಾಡ್ತೀವಿ, ಅಂದ್ರೆ ಇದ್ದವರಿಗೇ ದಾನಮಾಡ್ತೀವಿ. ಅದೂ ಯಾರಿಗೆ ಅಂದ್ರೆ, ನಮ್ಮ ಹತ್ತಿರದ ಸಂಬಂಧಿಗಳೇ ಆಗಿರಬೇಕು.ನಿಜವಾಗಿ ಇಂತಹಾ ಆಲೋಚನೆ ಸ್ತ್ರೀಯರಲ್ಲಿ ಬಂದರೆ ಮುಂದೆ ಕುಟುಂಬದ ಕಿರಿಯರಲ್ಲಿ ತಾನೇ ತಾನಾಗಿ ಮುಂದುವರೆಯುತ್ತೆ. ಅತೀ ದುರ್ಬಲವ್ಯಕ್ತಿ ನಿಮಗೆ ಕಂಡುಬಂದರೆ , ಆದರೆ ಅವರಿಗೆ ಸಹಾಯಮಾಡಿದರೆ ಇದರಿಂದ ಅವರಿಗೆ ಉಪಯೋಗ ವಾಗಿ ಸುಧಾರಿಸುತ್ತಾರೆ, ಎಂದು ಮನವರಿಕೆ ಯಾದರೆ ಹಾಗೆ ಮಾಡಿ. ಆಗ ನಿಜವಾಗಿ ದೇವರು ಮೆಚ್ಚುತ್ತಾನೆ. ಸಮಾಜಕ್ಕೆ ಮಾದರಿಯಾಗುವ ಹಲವಾರು ಯುಅವ ಜನತೆ ಈಗ ಕಾಣುತ್ತಿದ್ದಾರೆ. ಅದರಲ್ಲಿ ನೀವೂ ಒಬ್ಬರಾಗಿ. ಬೇರೆಯವರಿಗೆ ಅನುಕರಣೀಯರಾಗಿ. ಒಂದು ಮಾತು ಮನದಾಳದಿಂದ ಹೇಳುವೆ. ನಾವು ಏನೇ ಒಳ್ಳೆಯ ಕೆಲಸ ಮಾಡುವಾಗಲೂ ಅದು ಬೂಟಾಟಿಕೆಯಾಗದೆ ಆಕೆಲಸದಿಂದ ಒಬ್ಬ ದುರ್ಬಲ ವ್ಯಕ್ತಿಗೆ ಸಹಾಯವಾಗುವುದಾದರೆ ಅದಕ್ಕಿಂತ ವ್ರತ ಬೇರೊಂದಿಲ್ಲ. ನಿಮ್ಮ ಆಲೋಚನೆಯಂತೆ ಮುಂದುವರೆಯಿರಿ ಸದಾನಿಮಗೆ ಭಗವಂತನ ಕೃಪೆ ಇದ್ದೇ ಇರುತ್ತೆ.

      Delete
    4. ಶಾಸ್ತ್ರ ಸಂಪ್ರದಾಯಗಳ ಹೆಸರಲ್ಲಿ ಮನೆಯಲ್ಲಿ ನಡೆಯುವ
      ವಾದದಿಂದ ಸ್ವಲ್ಪ ಗೊಂದಲವಾಗಿತ್ತು ಸರ್. ತಲೆ ತಲೆ ಮಾರುಗಳಿಂದ
      ಮಾಡಿಕೊಂಡು ಬಂದಿರುವುದನ್ನ ಬಿಡಲು ಇತರರಿಗೆ ಸ್ವಲ್ಪ ಕಷ್ಟವಾಗಬಹುದು.
      ನಿಮ್ಮ ಉತ್ತರ ನೋಡಿ ಹೋರಾಟ ದಾರಿ ಸರಿಯಾಗೇ ಇದೆ ಅಂತ ಖಾತ್ರಿಯಾಯಿತು.
      ತುಂಬಾ ತುಂಬಾ ಧನ್ಯವಾದಗಳು
      ಸ್ವರ್ಣಾ

      Delete