Pages

Tuesday, February 28, 2012

 ಮಂಕುತಿಮ್ಮನ ಕಗ್ಗ - ರಸಧಾರೆ 

ಕಗ್ಗ -೧೨ 

ಮಾನವರೋ ದಾನವರೋ ಭೂಮಾತೆಯನು ತಣಿಸೆ 
ಶೋಣಿತವನೆರೆಯುವರು ಬಾಷ್ಪಸಲುವುದಿರೆ?
ಏನು ಹಗೆ! ಏನು ಧಗೆ!ಏನು ಹೊಗೆ! ಯೀ ಧರಿಣಿ
ಸೌನಿಕನ ಕಟ್ಟೆಯೇಂ? - ಮಂಕುತಿಮ್ಮ


ಶೋಣಿತವನೆರೆಯುವರು= ಶೋಣಿತವನು+ ಎರೆಯುವರು/ಬಾಷ್ಪಸಲುವುದಿರೆ= ಭಾಷ್ಪ+ಸಲುವುದು+ಇರೆ

ಶೋಣಿತ= ರಕ್ತ, ಭಾಷ್ಪ = ಕಣ್ಣೀರು, ಎರೆಯುವುದು= ಸುರಿಸುವುದು, ಸಲುವುದಿರೆ= ಸುರಿಸಬೇಕಾದರೆ. ಸೌನಿಕ =
 
ಕಟುಕ, /ಕಟ್ಟೆ= ಜಗುಲಿ. 

  
ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯನು ತಣಿಸಲು ಅಂದರೆ ದಾಹವಿಂಗಿಸಲು ಕಣ್ಣೇರು ಸುರಿಸುವಬದಲು ರಕ್ತವನ್ನು ಸುರಿಸಿಹರಲ್ಲ! ಈ ಪ್ರಪಂಚದಲ್ಲಿನ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇಡೀ
ಪ್ರಪಂಚವೇ ಕಟುಕನ ಜಗುಲಿಯಂತಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. 

ಮತ್ತದೇ ಯುದ್ಧದ ಸನ್ನಿವೇಶವನ್ನು ಈ ಕಗ್ಗದಲ್ಲೂ ಉಲ್ಲೇಖಿಸುತ್ತಾರೆ, ಶ್ರೀ ಗುಂಡಪ್ಪನವರು. ಪಾಪ ಅವರ ಮನ ಎಷ್ಟು 
ನೊಂದಿತ್ತೋ ಏನೋ? ಇಲ್ಲದಿದ್ದರೆ ಅಂದಿನ ವರ್ತಮಾನ ಸ್ಥಿತಿಗೆ ಇಷ್ಟೊಂದು ಪ್ರತಿಕ್ರಿಯೆ ಬರುತಿತ್ತೆ. 
ಇರಲಿ. ಮಾನವರಾದ ನಾವು ಮಾನವರಂತೆ ಇರದೇ ದಾನವರಂತೆ ಏಕೆ ಒಬ್ಬರಿಗೆ ಮತ್ತೊಬ್ಬರ ರಕ್ತದಾಹ. ಬಾಳುವವನು ಮಾನವ ಎನ್ನುತ್ತದೆ ಪರಿಭಾಷೆ. ಬಾಳದೆ ಯುದ್ಧಮಾಡಿ ನಾಶಕ್ಕೆ ಕಾರಣರಾದವರನ್ನು ಮಾನ್ಯ
ಗುಂಡಪ್ಪನವರು ದಾನವರೆಂದು ಸೂಕ್ತವಾಗೆ ಹೇಳಿದ್ದರೆ. 

ಅಹಂಕಾರದಿಂದ, ಆಸೆಯಿಂದ, ಮದ, ಮತ್ಸರಗಳ ಕಾರಣಗಳಿಂದ ಎಲ್ಲ ಯುದ್ಧಗಳೂ ನಡೆಯುತ್ತವೆ. ನಮ್ಮ ಪುರಾಣಗಳಲ್ಲೂ ಇಂತಹ ಯುದ್ಧಗಳನ್ನು ನೋಡಬಹುದು. ದಾನವರಾಗೆ ಹುಟ್ಟಿದ ಹಿರಣ್ಯಾಕ್ಷ-ಹಿರನ್ಯಕಶಿಪುಗಳೂ ಸಹ
ತಮಗೆ ಸಿಕ್ಕ ವಾರಗಳ ಬಲದಿಂದ, ಮದೋನ್ಮತ್ತರಾಗಿ ಭೂಲೋಕವೇನು ದೇವಲೋಕಕ್ಕೂ ಲಗ್ಗೇ ಇಟ್ಟ ಉಲ್ಲೇಖವುಂಟು .ಮಹಾಭಾರತದ ಯುದ್ಧದಲ್ಲೂ ಇಡೀ ಆರ್ಯವರ್ತವೇ ಇಬ್ಬಾಗವಾಗಿ ಕೆಲವರು ಕೌರವರ ಮತ್ತೆ ಕೆಲವರು ಪಾಂಡವರ ಪಕ್ಷ ವಹಿಸಿ ಯುದ್ಧಮಾಡಿ ೧೮ ಅಕ್ಷೋಹಿಣಿ ( ೧.೫೬ ಸಾವಿರ) ಜನರನ್ನು ಬಳಿ ತೆಗೆದುಕೊಂಡಿತಂತೆ. ಅದು ಪುರಾಣ. ಗ್ರೀಕ್ ಪುರಾಣದಲ್ಲಿ ಬರುವ ಟ್ರೋಜನ್ ಯುದ್ಧವೂ ಸಹ ಒಂದು " ಹೆಲನ್" ಎನ್ನುವ ಹೆಣ್ಣಿಗಾಗಿ ನಡೆದು ಸುಮಾರು ವರ್ಷಗಳಕಾಲ ನಡೆದು ಅಪಾರ ಸಾವು ನೋವುಗಳಿಗೆ ಕಾರಣವಾಯಿತಂತೆ.

ಇನ್ನು ನಮ್ಮ ದೇಶದಲ್ಲಿ ಕ್ರಿಸ್ತ ಪೂರ್ವ ೩೨೩ ರ ಸುಮಾರಿಗೆ ಚಾಣಕ್ಯ ಬರುವವರೆಗೆ, ಸಣ್ಣ ಸಣ್ಣ ರಾಜರು ಮತ್ತು ಕೆಲವು ದೊಡ್ಡ ರಾಜರುಗಳು ಸದಾ ಯುದ್ಧನಿರತರು. ಮಾತ್ರ ಅವರ ದಾನವೀ ಅಹಂಕಾರವನ್ನು ತಣಿಸಲಿಕ್ಕಾಗಿಯೇ

ನಡೆದ ಯುದ್ದ್ಧಗಳು. ಕ್ಷುಲ್ಲಕ ಕಾರಣಕ್ಕಾಗಿಯೇ ನಡೆವ ಯುದ್ಧಗಳಲ್ಲೆಲ್ಲ ನಡೆಯುವುದು ಸಾಮಾನ್ಯರ ಮಾರಣ ಹೋಮ. ಅದು ದಾನವೀ ಪ್ರವೃತ್ತಿ. ನಮ್ಮ ದೇಶವನ್ನೇ ತೆಗೆದುಕೊಂಡರೆ, ಮೊದಲು ಯವನರು, ನಂತರ ಮೊಘಲರು ನಂತರ ಬ್ರಿಟಿಷರು. ಹೀಗೆ ಆಕ್ರಮಣಕಾರರ ದಂಡೇ ನಮ್ಮ ದೇಶವನ್ನು ಲೂಟಿಮಾಡಲು ಹಿಂದೂ ಹಿಂಡಾಗಿ ಬಂದವರೇ ಹೆಚ್ಚು. ಇವರು ಸಾಲದೆಂಬಂತೆ,ಬಂದವರು ಡಚ್ಚರು, ಪೋರ್ಚ್ಯುಗೀಸರು , ಎಲ್ಲರೂ ನಮ್ಮ ನಾಡಿನಮೇಲೆ ದಾಳಿಮಾಡಿದರು. ವಾಚಕರೆ ನೋಡಿ ಭಾರತವು ಯಾವುದೇ ಅನ್ಯ ದೇಶದಮೇಲೆ ದಾಳಿ ಮಾಡಿದ್ದನ್ನು ಯಾವುದಾದರೂ ಪುಸ್ತಕದಲ್ಲಿ ಕಂಡಿದ್ದೀರಾ? ಅಖಂಡವಾಗಿದ್ದ ಭಾರತ ೨೦೦ ವರ್ಷಗಳಲ್ಲಿ ತುಂಡು ತುಂಡಾಗಿ ಹರಿದು ಹಂಚಿಹೋಗಿದೆ.

ಹಾಗಾಗಿ ವಾಚಕರೆ, ಅಹಂಕಾರ ದುರಾಸೆ ಈ ಎಲ್ಲ ಯುದ್ಧಗಳಿಗೂ ಕಾರಣವಾಗಿತ್ತು. ಈ ಜಗತ್ತಿನಲ್ಲಿ ಮಾನವರು ಸುಸಂಸ್ಕೃತ ಪ್ರಾಣಿಗಳು. ಅನ್ಯ ಪ್ರಾಣಿಗಳಿಗಿಂತ ಭಿನ್ನ. ಮಾನವತೆಯಿಂದ ತನ್ನ ಜೀವನವನ್ನು ಮತ್ತು ಅನ್ಯರ
ಜೀವನವನ್ನೂ ಸಹ ಸುಂದರವಾಗಿ ರೂಪಿಸಿಕೊಳ್ಳಬಲ್ಲ ಶಕ್ತಿ ಅವನಿಗೆ ಇದೆ. ಆದರೆ ಮಾತ್ರ ಅಹಂಕಾರದಿಂದ ತನ್ನ ಬುಡಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡು ಅನ್ಯರನೂ ಸುಡುವ ಈ ದಾನವೀ ಅಥವಾ ಪೈಶಾಚಿಕ ಪ್ರವೃತ್ತಿ ಏಕೆ?

ದರಣಿ ಸಸ್ಯಶ್ಯಾಮಲವಾಗಿರಬೇಕಾದರೆ, ನೀರು ಮತ್ತು ಶ್ರಮದ ಅವಶ್ಯಕತೆ ಉಂಟು ಅದನ್ನು ಬಿಟ್ಟು ದ್ವೇಷದ ಬೀಜ ಮತ್ತು ರಕ್ತದ ಸಿಂಚನವಾದರೆ, ಬೆಳೆ ಬೆಳೆದೀತೆ? ಹೊಟ್ಟೆ ತುಂಬೀತೆ? ಹಗೆಯ ಹೊಗೆಯಿಂದ ಉಸಿರು ಕಟ್ಟುತ್ತದೆಯೇಹೊರತು ಜೀವ ಪೋಷಣೆಯಾಗದು. ಜೀವನದ ನಡೆಯದು. ಈ ಪ್ರಪಂಚದ ಗತಿಯೇನು? ಅದು ಹಾಗಾದರೆ ಇಡೀ ಪ್ರಪಂಚವೇ ಕಟುಕನ ಜಗಲಿಯಂತಾಗುತ್ತದೆ ಅಲ್ಲವೆ? ಅಂಥಹ ಭಾವಗಳನ್ನೇ ಮಾನ್ಯ ಶ್ರೀ ಗುಂಡಪ್ಪನವರು ವ್ಯಕ್ತ
ಪಡಿಸುತ್ತಾರೆ ಈ ಕಗ್ಗದಲ್ಲಿ.

ಸಹೃದಯರೇ, ಒಂದು ಸಣ್ಣ ಬೀದಿ ಜಗಳ ದಿಂದ ಹಿಡಿದು ಒಂದು ಮಹಾ ಪ್ರಪಂಚ ಯುದ್ಧಕ್ಕೂ ಮಾನವತೆಯ ಕೊರತೆ ಮತ್ತು ಅಹಂಕಾರಭರಿತ ದಾನವತೆಯೇ ಕಾರಣ. ದ್ವೇಶವೇ ಕಾರಣ ಇದರಿಂದ ನಾಶವೇ ಹೊರತು ಬಾಳು ಇಲ್ಲ
ಎಂದು ನಾವೂ ಸಹ ಅರಿತು ನಮ್ಮ ನಮ್ಮಲ್ಲಿ ಇರುವ ಅಂತಹ ವಿನಾಶಕಾರಿ ಭಾವಗಳನ್ನು ತೊಡೆದು, ಈ ಇಡೀ ಜಗತ್ತನ್ನು ಸುಂದರ ತಾಣವನ್ನಾಗಿ ಪರಿವರ್ತಿಸಲು ಪ್ರಯತ್ನಿಸೋಣ.

ಬನ್ನಿ ಇದೆ ಭಾವಗಳೊಂದಿಗೆ ನಾವು ಮುಂದಿನ ಕಗ್ಗಕ್ಕೆ ಹೋಗುವ

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ


ನಮಸ್ಕಾರ

ರವಿ ತಿರುಮಲೈ

No comments:

Post a Comment