Pages

Monday, February 20, 2012

ಈ ಸಮಾಜಕ್ಕೆ ನಾನು ಮಾಡಿದ್ದೇನು?

ಇಂದು ಬೆಳಿಗ್ಗೆ  ಅಂತರ್ಜಾಲ ತೆರೆದಾಗ ನಾಲ್ಕೈದು ಶುಭಾಷಯ ಪತ್ರಗಳು ನನ್ನನ್ನು ಎಚ್ಚರಿಸಿದವು. ನಾನೀಗ ಅರವತ್ತನೇ ವಯಸ್ಸಿಗೆ ಕಾಲಿಡುತ್ತಿರುವೆ . ಇನ್ನೊಂದು ವರ್ಷ ನಾನು ಕಿರಿಯ ನಾಗರೀಕ. ಒಂದು ವರ್ಷ ಪೂರೈಸುತ್ತಲೇ ಸರ್ಕಾರದ ಲೆಕ್ಖದಲ್ಲಿ ಹಿರಿಯ ನಾಗರೀಕ.
           ಆರು ದಶಕಗಳು ಮುಗಿಯುತ್ತಲೇ ಬಂದವಲ್ಲಾ!  ನಮ್ಮ ಪೂರ್ವಜರ ಲೆಕ್ಖದಲ್ಲಿ ಇನ್ನು ನಾಲ್ಕು ದಶಕಗಳು ಇಲ್ಲಿರಬೇಕಾಗಿದೆ. ಇರಬಹುದು-ನಾನೇನಾದರೂ ಸಮಾಜಕ್ಕೆ ಮಾಡುವುದಿದ್ದರೆ! 
              ನನ್ನನ್ನು ಆರು ದಶಕಗಳ ಕಾಲ ಬೆಳೆಸಿರುವ ಈ ಸಮಾಜಕ್ಕೆ  ನಾನು ಮಾಡಿದ್ದೇನು?  ಒಳ ಮುಖಮಾಡಿ ಚಿಂತಿಸಿದರೆ ಸಮಾಧಾನದ ಉತ್ತರ ಸಿಕ್ಕಿಲ್ಲ. ಸಮಾಜದಿಂದ ಪಡೆದಿದ್ದೆ ಹೆಚ್ಚು. ಏನಾದರೂ ಕೊಡಬೇಕೆಂದರೆ ಏನು ಕೊಡಲಿ? ಏನು ಕೊಡಲು ಸಾಧ್ಯ? ನನ್ನ ಅಂತರಾಳದ ಆಸೆ ಒಂದಿತ್ತು.   ಸಮಾಜ ಎಂಬುದು ಬಲು ವಿಶಾಲ ಪದ. ಆದರೆ  ನನ್ನ ಮೊದಲ ಆಧ್ಯತೆ ನನ್ನ   ಒಡ     ಹುಟ್ಟಿದವರು  ನನ್ನಷ್ಟು ನೆಮ್ಮದಿಯಿಂದ ಬದುಕಬೇಕು. ಕಾರಣ ನಾನು ಹುಟ್ಟಿದ ಮನೆ ಅಂತದ್ದು.  ಬಲು ಬಡತನದ ಮನೆ. ಎರಡು ಹೊತ್ತು ಊಟಕ್ಕೆ ಗತಿಯಿಲ್ಲ. ನನ್ನ ಚಿಕ್ಕಂದಿನಿಂದಲೂ ನನ್ನನ್ನು ಕಾಡಿದ್ದೇ       ಅದು. ನಮ್ಮ ಮನೆಯಲ್ಲಿ ನನ್ನ ಅಪ್ಪ-ಅಮ್ಮ, ಮತ್ತು ಮಕ್ಕಳಿಗೆ     ಎರಡುಹೊತ್ತು ಊಟಸಿಕ್ಕಿದರೆ    ಸಾಕು!  ನನ್ನ ಜೀವನದ ಮೂರು ದಶಕಗಳು ಕಳೆದದದ್ದು ಹೀಗೆ.ನನಗೊಂದು ಸರಕಾರೀ ಕೆಲಸ ಸಿಕ್ಕ ಮೇಲೆ ಅನ್ನದ ಸಮಸ್ಯೆ ಪರಿಹಾರವಾಗುತ್ತಾ ಬಂತು ಎಂಬುದು ಸತ್ಯ. ಆದರೆ ಅದಕ್ಕೆ ಪೂರ್ವದಲ್ಲಿ  ಜೀವನ ಎಂದರೆ ಅನ್ನಕ್ಕಾಗಿ ಪರಿತಪಿಸುವುದು ಅಷ್ಟೇ.ಹೌದು, ನಮ್ಮ ಮನೆಯಲ್ಲಿ ಬಡತನವಿದ್ದರೂ ಪ್ರೀತಿ ನೀಡಲು ನನ್ನ ಅಪ್ಪ-ಅಮ್ಮ, ಅಜ್ಜಿ, ಸೋದರತ್ತೆ[ ಬಾಲ್ಯ ವಿಧವೆ, ನಮ್ಮ ತಂದೆಯ ಅಕ್ಕ ] ದೊಡ್ಡಮ್ಮ[ ಬಾಲ್ಯ ವಿಧವೆ ನಮ್ಮ ತಂದೆಯ ಅಣ್ಣನ ಪತ್ನಿ] ಜೊತೆಗೆ ನಾವು ಆರು ಜನ ಮಕ್ಕಳು. ಹೌದು ನನ್ನ ಹೈಸ್ಕೂಲು ತರಗತಿಯಲ್ಲಿ ಶುರುವಾದ ನನ್ನ  ದುಡಿಮೆ [ಅನ್ನಕ್ಕಾಗಿ] ನಾನು ಸ್ವಯಂ ನಿವೃತ್ತಿ ತೆಗೆದುಕೊಂಡಾಗ ನಿಂತಿತು. 
ಇರಲಿ. ಈಗೇಕೆ? ಈ ಮಾತು ಎಂದರೆ  ಸುಮಾರು ನಾಲ್ಕು ದಶಕಗಳು ನನ್ನ ಆಧ್ಯತೆ ನಮ್ಮ  ಒಟ್ಟು ಕುಟುಂಬದ ಬಗ್ಗೆ. ಯಾರೂ ಹಸಿವಿನಿಂದ ಇರಬಾರದು. ಅಷ್ಟೇ! ಅಷ್ಟೇ!!

ಆನಂತರ ಕಳೆದೆರಡು ದಶಕಗಳಿಂದ ಸ್ವಲ್ಪ ಮನೆಯಿಂದ ಹೊರಗೆ ಗಮನ ಹರಿಸಲು ಸಾಧ್ಯವಾಯ್ತು. ಅಲ್ಲಿಯವರಗೆ  ಹೊಟ್ಟೆ ದೇವರ ಚಿಂತೆ ಬಿಟ್ಟರೆ ಬೇರೆ ಚಿಂತನೆ ಇರಲಿಲ್ಲ. ಆದರೆ ಕಳೆದೆರಡು ದಶಕಗಳಿಂದ  " ವೇದದ " ಕಿಂಚಿತ್ ಪರಿಚಯವಾಗುತ್ತಿದೆ. ಈಗ ಸತ್ಯದ ದಾರಿ ಕಾಣುತ್ತಿದೆ. ಈವರಗೆ ನಡೆದುಬಂದ ನಾನು, ನನ್ನ ಮನೆ ಯಿಂದ ಸ್ವಲ್ಪ ಹೊರ ನೋಟ ಸಾಧ್ಯವಾಗುತ್ತಿದೆ . ಈಗ  ನನ್ನ ಮನೆಕಡೆ ತಿರುಗಿ ನೋಡಿದಾಗ ಸ್ವಲ್ಪ ಬೇಸರವೇ ಆಗುತ್ತದೆ. ಕೇವಲ ಹೊಟ್ಟೆಪಾಡಿಗಾಗಿ ಮೂರು ದಶಕಗಳು ಕಳೆದು ಹೋಯ್ತಲ್ಲಾ! ನನ್ನ  ಬೆನ್ನಲ್ಲಿ ಬಿದ್ದವರಿಗೆ ಸತ್ಯದ ಕಿಂಚಿತ್ ಅರಿವು ಮಾಡಿಕೊಡಲು ಸಾಧ್ಯವಾಗಲಿಲ್ಲವಲ್ಲಾ! ಮಾಡಿದ್ದೆಲ್ಲಾ ವೇಸ್ಟ್! ಅನ್ನಿಸಿದೆ. ಅಂದು ಅನ್ನಕ್ಕಾಗಿ ದುಡಿಯುವುದು  ಅನಿವಾರ್ಯವಾಗಿತ್ತು.ಆ ಕಾಲ ದಾಟಿ ಈಗ ಒಂದಿಷ್ಟು ಅರಿವಿನೆಡೆಗೆ ಸಾಗುವ ಪ್ರಯತ್ನದಲ್ಲಿ ಎಲ್ಲರೊಡನೆ ಸಾಗೋಣ ಎಂದರೆ  ಇಲ್ಲ! ಇಲ್ಲಾ!! ಅವರಿಲ್ಲವೇ ಇಲ್ಲಾ!!! ಇನ್ನೂ ಅನ್ನಕ್ಕಾಗಿ, ಚಿನ್ನಕ್ಕಾಗಿ ಹಪಹಪಿಸುತ್ತಿರುವ ಎಲ್ಲರೊಡನೆ ನಾನಿರ ಬೇಕಾಗಿದೆ.ಬ್ರಹ್ಮಚರ್ಯ, ಗೃಹಸ್ಥ, ಆಶ್ರಮಗಳನ್ನು ದಾಟಿ ವಾನಪ್ರಸ್ಥಾಶ್ರಮ ಕಾಲ    ಆರಂಭವಾಗಿದೆ. ಇನ್ನಾದರೂ ಈ ಚಡಪಡಿಕೆ       ಬಿಟ್ಟು ಹೆಜ್ಜೆ ಇಡಬೇಕಿದೆ. ಬಹಳ ತಡವಾಗಿ ಲಭ್ಯವಾಗುತ್ತಿರುವ ವೇದದ ಜ್ಞಾನದ ಪ್ರಸಾರದಲ್ಲಿ  ಕಿಂಚಿತ್ತಾದರೂ ತೊಡಗಿಸಿ ಕೊಳ್ಳಲೇ  ಬೇಕಾಗಿದೆ . ಉಳಿದಿರುವ  ಆಯಸ್ಸನ್ನು ಸಾರ್ಥಕ ಗೊಳಿಸಿ ಕೊಳ್ಳ ಬೇಕಾಗಿದೆ. ಆ ಪರಮಾತ್ಮನು ಆ ಶಕ್ತಿ ನನಗೆ ಕೊಡಲೆಂದು   ಅಷ್ಟೇ ಅವನಲ್ಲಿ ನನ್ನ ಪ್ರಾರ್ಥನೆ.  

9 comments:

  1. ತಾವು ಈ ರೀತಿ ಯೋಚನೆ ಮಾಡುತ್ತಿರುವುದೇ ಒಂದು ಸಕಾರಾತ್ಮಕವಾದ ಹೆಜ್ಜೆ. ಲಕ್ಷಕ್ಕೆ ಒಬ್ಬರಿಗೂ ಬಾರದ ಯೋಚನೆ ನಿಮಗೆ ಬಂದಿದೆ ಎಂದರೆ ನೀವು ಆ ೯೯೦೦೦ ಜನಕ್ಕಿಂತ ಭಿನ್ನ ಎಂದು ಅರ್ಥವಲ್ಲವೇ.
    ಈ ರೀತಿಯ ಯೋಚನೆಗಳು, ಪೂರ್ವ ಸುಕೃತ ಮತ್ತು ಪರಮಾತ್ಮನ ಲೀಲಾ ವಿನೋದದಲ್ಲಿ ಒಂದು ಭಾಗ. ಕನಸು ಕಾಣುವವರೇ ಏನಾದರೂ ಸಾಧಿಸಬಹುದೆಂದು, ಮಾನ್ಯ ಜಿ.ಟಿ.ನಾರಾಯಣರಾಯರು ಹೇಳುತ್ತಿದ್ದರು.
    ನಿಮ್ಮ ಕನಸುಗಳು ಸಾಕಾರವಾಗಲಿ. ಶುಭಮಸ್ತು.

    ReplyDelete
  2. ಶುಭಾಶಯಗಳು ಸರ್.
    ನಿಮ್ಮ ವಿಚಾರಗಳು ನಮಗೆ ದಾರಿ ದೀಪ .
    ಸ್ವರ್ಣಾ

    ReplyDelete
  3. ಆತ್ಮೀಯರಾದ ರವಿ ಮತ್ತು ಸ್ವರ್ಣಾ,
    ನಿಮ್ಮದು ದೊಡ್ಡ ಮಾತು. ವೇದವನ್ನು ಅಧ್ಯಯನ ಮಾಡುತ್ತಾ ಸರಳವಾಗಿ ನನ್ನ ಮಾತುಗಳಲ್ಲಿ ಅದರಸಾರವನ್ನು ಸ್ನೇಹಿತರೊಡನೆ ಹಂಚಿಕೊಳ್ಳಬೇಕೆಂಬ ಹಾಗೂ ದುರ್ಬಲರಿಗೆ [ಹೀಗೆ ಹೇಳುವುದು ತಪ್ಪಾಗಬಹುದು ಭಾವ ಅರ್ಥವಾದರೆ ಸಾಕು] ಏನಾದರೂ ಕೈಲಾದ ನೆರವು ನೀಡುತ್ತಿರಬೇಕೆಂಬ ಆಸೆಯಂತೂ ಇದೆ. ತಕ್ಕಮಟ್ಟಿಗೆ ನನ್ನ ಕುಟುಂಬದ ಸಹಕಾರದಲ್ಲಿ ಅದು ನಡೆಯುತ್ತಿದೆ.ಒಳ್ಳೆಯ ಕೆಲಸಗಳು ನಿರಂತರವಾಗಿರಬೇಕು. ಅದಕ್ಕೆ ಭಗವಂತನ ಕೃಪೆ ಇರಬೇಕು.

    ReplyDelete
  4. ಶ್ರೀಧರರೇ,

    | ಧನ್ಯೋ ಗೃಹಸ್ಥಾಶ್ರಮ | ಎಂದಿದ್ದಾರೆ-ಪ್ರಾಜ್ಞರು. ಭಾರತೀಯ ಪದ್ಧತಿಯ ಸಂಸಾರಿ ಮಿಕ್ಕುಳಿದ ಹಲವು ಜೀವಗಳಿಗೆ ಆಧಾರಿ. ಅತಿಥಿ-ಅಭ್ಯಾಗತರ ಸೇವೆ, ಸಂತ-ಸನ್ಯಾಸಿಗಳ ಪಾದ ಸೇವೆ-ಭಿಕ್ಷೆ, ಭಕ್ತ-ಭಾವುಕ ಬಡಜನರಿಗೆ ದಾನ-ಧರ್ಮ, ಅಸಹಾಯರಿಗೆ ಕೈಲಾದ ಸಹಾಯ, ಆಪತ್ತಿನಲ್ಲಿರುವವರಿಗೆ ಮಾರ್ಗದರ್ಶನ, ಬ್ರಹ್ಮಚಾರಿಗಳಿಗೆ ಅಷ್ಟಿಷ್ಟು ಆತಿಥ್ಯ, ಗೋ-ಸೇವೆ, ಸಮಾಜದ ನಿಮ್ನ ವರ್ಗಗಳಿಗೆ ಆದರ್ಶಗಳ ಪ್ರಾತ್ಯಕ್ಷಿಕೆ, ಧರ್ಮ-ಕರ್ಮಗಳ ಜಿಜ್ಞಾಸೆ ಮತ್ತು ಧರ್ಮಮಾರ್ಗಿಗಳಿಗೆ ಪ್ರೋತ್ಸಾಹ, ಸಾಮಾಜಿಕ ಪಿಡುಗುಗಳ ನಿವಾರಣೆಗೆ ಸತತ ಪ್ರಯತ್ನ, ಕಾಡು-ನಾಡಿನ ಒಳಿತಿಗಾಗಿ ಪ್ರಯತ್ನ ....ಹೀಗೇ ಸಂಸಾರ ಮಧ್ಯದ ಸೊನ್ನೆಯಿಂದ ಭಾರ, ತಟ್ಟಿಸಿಕೊಳ್ಳದಿದ್ದರೆ-ಸಸಾರ! ಸಸಾರಮಾಡಿಕೊಂಡವರಿಗೆ ಇಹದ ಬಂಧನದಿಂದ ಮುಕ್ತಿ ಖಂಡಿತಕ್ಕೂ ಇಲ್ಲ. ಅದೇ ಸಂಸಾರಿಯಾಗಿ ಮೇಲೆ ಹೇಳಿದ ಕರ್ತವ್ಯಗಳನ್ನು ನಡೆಸಿದವರಿಗೆ ಪರದೆಡೆಗೆ ಮೆಟ್ಟಿಲು ಸಿಗುತ್ತಾ ಹೋಗುತ್ತದೆ. ದೇಹದ ಉಳಿವಿಗಾಗಿ ಉದರಂಭರಣೆ ಪ್ರತೀ ಜೀವಿಗೂ ಅನಿವಾರ್ಯ ಸಹಜ! ಆದರೆ ಅದರ ಜೊತೆಜೊತೆಗೇ ಅನುಭಾವದಿಂದ ಹಲವರಿಗೆ ಅನುಕೂಲ ಕಲ್ಪಿಸುವುದು ಸಂಸಾರಿಯು ನಡೆಸಬೇಕಾದ ಕಾರ್ಯ. ಸಮಾಜದ ಇಂತಹ ಹಲವು ರೀತಿಯ ವ್ಯಕ್ತಿಗಳಿಗೆ ಪರೋಕ್ಷ ಆಶ್ರಯ ನೀಡಬಹುದಾದ ಸಂಸಾರಧರ್ಮವನ್ನು ಸರಿಯಾಗಿ ಅವಲೋಕಿಸಿದ ಪ್ರಾಜ್ಞರು ಮೇಲಿನ ವಾಕ್ಯವನ್ನು ಸಂಸ್ಕೃತದಲ್ಲಿ ಹೇಳಿದ್ದಾರೆ.

    ಅರ್ಜುನ ಮತ್ತು ಕೃಷ್ಣ ಒಮ್ಮೆ ಸತ್ವ ಪರೀಕ್ಷೆಗೆ ತೊಡಗುತ್ತಾರೆ. ಹೊರಟ ಸಾಯಂಕಾಲ ಬಡವನೊಬ್ಬನ ಮನೆಯ ಮುಂದೆ ನಿಂತು " ಸ್ವಾಮೀ ನಾವು ಯಾತ್ರೆ ಹೊರಟಿದ್ದೇವೆ, ರಾತ್ರಿ ಕಳೆಯಲು ಸ್ವಲ್ಪ ಜಾಗ ಮತ್ತು ಹಸಿವಿಗೆ ಸ್ವಲ್ಪ ಆಹಾರ ಕೊಡುವಿರಾದರೆ ತಮ್ಮಲ್ಲಿ ಉಳಿಯಬಹುದೇ ?" ಆ ಬಡವ ನಿರ್ಗತಿಕ, ಇಡೀ ದಿನ ಊಟಮಾಡಿಲ್ಲ; ದಿನದ ಕೂಲಿಗೂ ಕೆಲಸ ಸಿಗದೇ ಇದ್ದ ಆ ದಿನ ಕೊನೆಯದಾಗಿ ಉಳಿದ ಲೋಟ ಹಾಲನ್ನು ಹೆಂಡತಿ ಆಗಷ್ಟೇ ಹೊರತಂದಿದ್ದಳು-ಕುಡಿಯಬೇಕೆನ್ನುವಷ್ಟರಲ್ಲಿ ಈ ಕಥೆ! ಬಡವ ಅವರನ್ನು ಒಳಗೆಕರೆದ. ತನ್ನ ಬಡತನದಲ್ಲಿ ಜಾಸ್ತಿ ಏನೂ ಕೊಡಲಾಗದುದಕ್ಕೆ ಕ್ಷಮೆಯಾಚಿಸಿ ಲೋಟದಲ್ಲಿದ್ದ ಹಾಲನ್ನೇ ನೀಡಿದ. ಹರುಕು ಕಂಬಳಿ-ಚಾಪೆಗಳನ್ನೇ ಹಾಸಿಕೊಟ್ಟು ಮಲಗಲು ವಿನಂತಿಸಿದ. ಬೆಳಗಾಗೆದ್ದು ಹೊರಟ ಕೃಷ್ಣ ಮನೆಯಿಂದ ಆಚೆ ಹೋಗುತ್ತಲೇ ಬಡವನ ಹಸು ಸತ್ತುಹೋಗುವಂತೇ ಶಪಿಸಿದ! ಎಂಥಾ ಅನ್ಯಾಯ !! ಅರ್ಜುನ ಕಂಗಾಲು-ಹಾಲು ಕುಡಿದ ಮನೆಗೆ ಹಾಲಾಹಲ ನೀಡುವ ಕೆಲಸವಲ್ಲವೇ ?

    ಮುನ್ನಡೆದು ಇಬ್ಬರೂ ಮಧ್ಯಾಹ್ನದ ಹೊತ್ತಿಗೆ ಒಬ್ಬ ಶ್ರೀಮಂತನ ಮನೆಗೆ ತಲ್ಪಿದರು. ಅಲ್ಲಿ ದೊಡ್ಡ ಸಮಾರಂಭ; ಎಷ್ಟೋ ಜನ ಬಂದವರಿದ್ದಾರೆ, ಬರುವವರಿದ್ದಾರೆ. " ಸ್ವಾಮೀ ನಾವು ಯಾತ್ರಿಕರು, ನಮಗೆ ಮಧ್ಯಾಹ್ನದ ಊಟ ನೀಡುವಂಥವರಾಗಿ "--ಕೃಷ್ಣ ಕರೆದ. ಶ್ರೀಮಂತನ ಆಳುಗಳು ಓಡೋಡಿ ಬಂದರು. ಭಿಕ್ಷುಕರಿಗೆಲ್ಲಾ ಇಲ್ಲಿ ಜಾಗವಿಲ್ಲಾ ಎನ್ನುತ್ತಾ ಎರಡೆರಡು ಬಿಟ್ಟು ಅವರಿಬ್ಬರನ್ನೂ ಸಾಗಹಾಕಿದರು. ಹೊರಬಂದ ಕೃಷ್ಣ "ಸಿರಿವಂತನ ಸಂಪತ್ತು ದುಪ್ಪಟ್ಟಾಗಲಿ " ಎಂದ! ಅರ್ಜುನ ಮತ್ತೆ ಕಂಗಾಲು!! ಹೊಡೆತ ತಿಂದ ಸಿರಿವಂತನ ಮನೆಗೆ ವರನೀಡಬೇಕೆ ?

    ಮುನ್ನಡೆಯುತ್ತಾ ಕೃಷ್ಣ ಅರ್ಜುನನಿಗೆ ಹೇಳಿದ, " ಅರ್ಜುನ ನಿನಗೆ ಸಹಜವಾಗಿ ಆಶ್ಚರ್ಯವಾಗಿದೆ. ಮೊದಲಿನವ ಕಡುಬಡವ, ಸತ್ಕರಿಸಿದರೂ ನಾನು ಶಪಿಸಿದೆ. ಆತನ ಜನ್ಮಾಂತರದ ಸಂಚಿತ ಪಾಪಕರ್ಮಗಳು ಅಂತ್ಯಗೊಂಡು ಆತ ಮುಂದೆ ಪರದಲ್ಲಿ ಸಾಧನೆಗೈವವನಿದ್ದಾನೆ! ಎರಡನೆಯವ ಕೊಟ್ಟಿದ್ದು ಹೊಡೆತ, ಆತನಿಗೆ ಭುವಿಯ ಮೋಹ ಇನ್ನೂ ಕಳಚಿಲ್ಲ; ಸದ್ಯಕ್ಕೆ ಕಳಚುವುದೂ ಇಲ್ಲ. ಆತ ಪುನರಪಿ ಹುಟ್ಟುತ್ತಾ ಕುಕೃತ್ಯ ಮಾಡುತ್ತಾ ಅದರ ಫಲಗಳನ್ನು ಅನುಭವಿಸುತ್ತಾ ನಡೆಯುತ್ತಾನೆ. ಅದನ್ನೇ ಹರಸಿದ್ದೇನೆ "
    ಅರ್ಜುನನಿಗೆ ಜ್ಞಾನೋದಯವಾಯ್ತು. ಇಂಥದ್ದೇ ಗಾರುಡಿಗ ವಿದ್ಯೆಯನ್ನು ಶ್ರೀಮನ್ನಾರಾಯಣ ನಾರದ ಮಹರ್ಷಿಗೂ ತಿಳಿಸಿದ್ದನಷ್ಟೇ ? ಪ್ರಾಪಂಚಿಕರಾದ ನಮಗೆ ಅರಿಷಡ್ವರ್ಗಗಳಿಂದ ಮುಕ್ತಿಯೋ ಅದನ್ನೇ ಬಳಸುವ ಯುಕ್ತಿಯೋ ಎಂದು ನಾವಂದುಕೊಂಡರೂ ಅವುಗಳ ವ್ಯಾಪ್ತಿಯಿಂದ ಆಚೆ ಬರುವುದು ಸುಲಭವೇ? ಆನಂದಲೋಕದಲ್ಲಿ ವಿಹರಿಸುವ ಆತ್ಮಕ್ಕೆ ಲೌಕಿಕದ ಈ ಬಾಧೆಗಳು ತಟ್ಟವು ಎಂಬುದು ಸಾಧಕ ಮಹಾತ್ಮರ ನುಡಿಯಷ್ಟೇ? ಆ ಸಾಧನಾ ಪಥದಲ್ಲಿ ನೀವು ನಡೆದಿದ್ದೀರಿ. ಸಮಾಜಕ್ಕೆ ಜಾಸ್ತಿ ನಾವೇನು ಕೊಡಲಾಗದಿದ್ದರೂ ಸಮಾಜಘಾತುಕತನ ಇರದಿದ್ದರೆ ಇಂದಿನ ದಿನ ಅದೇ ಒಂದು ಕೊಡುಗೆಯಾಗುತ್ತದೆ! ಅಂಥದ್ದರಲ್ಲಿ ಸಮಾಜದ ಅನಾಥ ಜೀವಗಳಲ್ಲಿ ಕೆಲವರ ಸೇವೆಗೈದು ಜನತೆಯಲ್ಲಿ ಪರೋಕ್ಷ ಜನಾರ್ದನನನ್ನು ಕಾಣಲು ಪ್ರಯತ್ನಿಸಿದ್ದೀರಿ. ಹೀಗಾಗಿ ನಿಮ್ಮ ಕೆಲಸ ಕೂಡ ಅಭಿನಂದನೀಯವೇ. ನಿಮಗೆ ಸರಕಾರ ಹಿರಿಯನಾಗರಿಕ ಎನ್ನಬಹುದಷ್ಟೇ ಬಿಟ್ಟರೆ ನಾವೆಲ್ಲಾ ಕಿರಿಯ ನಾಗರಿಕ ಅಂತಲೇ ಅನ್ನೋಣ ಅದಕ್ಕೇನಂತೆ. ನಿಮ್ಮಂಥವರು ಬಹುಕಾಲ ಬಾಳಬೇಕು-ಅದಕ್ಕಾಗಿ ನೀವಿನ್ನೂ ಕಿರಿಯರು ಅನ್ನುತ್ತಿದ್ದೇನೆ! ನಿಮ್ಮ ಸಂಕಲ್ಪಗಳು ಈಡೇರಲಿ. ಇಹದಲ್ಲಿ ಸಮೃದ್ಧಿ-ಪರದ ಸಾಧನೆಗೆ ಸೋಪಾನ ಎರಡೂ ನಿಮಗೊದಗಲಿ ಎಂಬ ತುಂಬು ಹಂಬಲದಿಂದ ನಿಮಗೆ ಇನ್ನೊಮ್ಮೆ ಜನ್ಮದಿನದ ಶುಭಾಶಯಗಳು.

    ReplyDelete
  5. ನಿಮ್ಮ ಶುಭ ಕಾಮನೆಗಳಿಗೆ ಧನ್ಯವಾದಗಳು.

    ReplyDelete
  6. Dear brother Sridhar,
    Shubhamastu, shubhamastu, shubhamastu.

    ReplyDelete
  7. ನಿಮ್ಮ ಶುಭ ಕಾಮನೆಗಳಿಗೆ ಧನ್ಯವಾದಗಳು

    ReplyDelete
  8. ಆತ್ಮೀಯ ಶ್ರೀಧರರವರಿಗೆ,
    ಹುಟ್ಟುಹಬ್ಬದ ಶುಭಾಶಯಗಳು. ಒಮ್ಮೆ A N ಮೂರ್ತಿರಾಯರ 100 ನೇ ಹುಟ್ಟುಹಬ್ಬಕ್ಕೆ ಶುಭಾಷಯ ಕೋರುತ್ತ"ನಿಮ್ಮ ಸಂದೇಶ ಜನತಗೆ ಏನು? " ಎಂದು ಆಕಾಶವಾಣಿ ಕೇಳಿದಾಗ " ನನಗಿನ್ನೂ ಕೇವಲ 100 ವರ್ಷ ಮಾತ್ರ " ಎಂದರು.
    ಶ್ರೀಧರ್ರವರೇ, ನಿಮಗಿನ್ನು ಅರವತ್ತೇ ವರ್ಷ. ನೀವು ಸಾಧಿಸ ಬೇಕಾದ್ದು ಬಹಳಷ್ಟು ಇದೆ. ನಿಮಗೆ ಸಾಧಿಸುವ ಛಲ ಮತ್ತು ಹುಮ್ಮಸ್ಸು ಇದೆ. ಈಗ ನಿಮಗೆ ಸಾಕಷ್ಟು ಸಮಯವೂ ಇದೆ.
    ನಿಮ್ಮೆಲ್ಲ ಆಸೆಗಳು ಪೂರೈಸಲೆಂದು ಆಶಿಸುತ್ತೇನೆ. ಧನ್ಯವಾದಗಳು.
    ಪ್ರಕಾಶ್.

    ReplyDelete
  9. ಆತ್ಮೀಯ ಪ್ರಕಾಶ್,
    ಶ್ರೀಯುತ ಸದ್ಯೋಜಾತರೆಂಬ ಸಂಸ್ಕೃತ ವಿದ್ವಾಂಸರು ಬೆಳಿಗ್ಗೆ ನನ್ನೊಡನೆ ಮಾತನಾಡುತ್ತಿರುವಾಗ ಅವರಿಗೆ ತಿಳಿಸಿದ ಮಾತನ್ನೇ ಪ್ರಾಮಾಣಿಕವಾಗಿ ನಿಮಗೂ ತಿಳಿಸುತ್ತೇನೆ.ಸದ್ವಿಚಾರಗಳ ಪ್ರಸಾರ ಕಾರ್ಯದಲ್ಲಿ ನಾನೊಬ್ಬ ಪೋಸ್ಟ್ ಮನ್ ಆಗಿ ಕೆಲಸಮಾಡುವುದರಲ್ಲಿ ನನಗೆ ಸಂತೋಷವಿದೆ. ಆ ಮಾತನ್ನೇ ನಿಮಗೂ ತಿಳಿಸಲು ಇಚ್ಚಿಸುತ್ತೇನೆ.ವೇದದಲ್ಲಡಗಿರುವ ವಿಚಾರಗಳನ್ನು ನಮ್ಮಂತಹ ಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸುವ ಮಹನೀಯರುಗಳು ಸಿಕ್ಕರೆ ಅವರ ವಿಚಾರಗಳನ್ನು ಪ್ರಕಟಿಸಲು ನಾನು ಪೋಸ್ಟ್ ಮನ್ ಕೆಲಸ ಮಾಡಲು ಸದಾ ಸಿದ್ಧ. ಅಷ್ಟುಮಾತ್ರ ನಾನು ಮಾದಬಹುದು. ಮಾಡುವೆ. ನಿಮ್ಮ ಸಹಕಾರ ಹೆಚ್ಚುಬೇಕು.

    ReplyDelete