Pages

Tuesday, March 6, 2012

ಬಲಿವೈಶ್ವದೇವಯಜ್ಞ


     ಯಜ್ಞದಲ್ಲಿ ಪ್ರಾಣಿಬಲಿಯನ್ನು ಸಮರ್ಥಿಸಿಕೊಳ್ಳಲು ಬಲಿವೈಶ್ವದೇವಯಜ್ಞವನ್ನು ಕೆಲವರು ಉಲ್ಲೇಖಿಸುತ್ತಿದ್ದು,, ಈ ಬಲಿವೈಶ್ವದೇವಯಜ್ಞವೆಂದರೆ ಏನು ಎಂಬುದನ್ನು ತಿಳಿಯಪಡಿಸುವುದೇ ಈ ಬರಹದ ಉದ್ದೇಶ. ವೈಶ್ವದೇವಯಜ್ಞಕ್ಕೂ ಪ್ರಾಣಿಬಲಿಗೂ ಸಂಬಂಧವೇ ಇಲ್ಲದಿರುವುದನ್ನು ವಾಚಕರು ಗಮನಿಸಬಹುದು.
-ಕ.ವೆಂ.ನಾಗರಾಜ್.


     ಬಲಿವೈಶ್ವದೇವಯಜ್ಞದಲ್ಲಿ ಈ ಕೆಳಗಿನ ೧೦ ಮಂತ್ರಗಳನ್ನು ಉಚ್ಛರಿಸಲಾಗುತ್ತದೆ. ಭೋಜನಕ್ಕಾಗಿ ಸಿದ್ಧಪಡಿಸಿದ ಆಹಾರ ಪದಾರ್ಥಗಳಲ್ಲಿ ಹುಳಿ, ಉಪ್ಪು, ಖಾರ, ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಆಹಾರದಲ್ಲಿ ಭಾಗವನ್ನು ಅಗ್ನಿಗೆ ಆಹುತಿ ನೀಡುತ್ತಾರೆ. ಮನೆಯ ಯಜಮಾನ ಅಥವ ಆತನ ಅನುಪಸ್ಥಿತಿಯಲ್ಲಿ ಆತನ ಪತ್ನಿ ಅಥವ ಸ್ತ್ರೀಯರೇ ಈ ಆಹುತಿಯನ್ನು ಅರ್ಪಿಸಬಹುದಾಗಿದೆ.
ಓಂ ಅಗ್ನಯೇ ಸ್ವಾಹಾ || ೧ ||
ಓಂ ಸೋಮಾಯ ಸ್ವಾಹಾ || ೨ ||
ಓಂ ಅಗ್ನಿ ಸೋಮಾಭ್ಯಾಂ ಸ್ವಾಹಾ || ೩ ||
ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ || ೪ ||
ಓಂ ಧನ್ವಂತರಯೇ ಸ್ವಾಹಾ || ೫ ||
ಓಂ ಕುಹ್ವೈ ಸ್ವಾಹಾ || ೬ ||
ಓಂ ಅನುಮತ್ಯೈ ಸ್ವಾಹಾ || ೭ ||
ಓಂ ಪ್ರಜಾಪತಯೇ ಸ್ವಾಹಾ || ೮ ||
ಓಂ ಸಹ ದ್ವಾವಾ ಪೃಥಿವೀಭ್ಯಾಂ ಸ್ವಾಹಾ || ೯ ||
ಓಂ ಸ್ವಿಷ್ಟಕೃತೇ ಸ್ವಾಹಾ || ೧೦ ||
     ಈ ಮಂತ್ರಗಳ ಅರ್ಥ ಅನುಕ್ರಮವಾಗಿ:
೧. ಪರಮಾತ್ಮನ ಸಾಕ್ಷಾತ್ಕಾರ ಮತ್ತು ಜಠರಾಗ್ನಿಯ ಪ್ರದೀಪ್ತತೆಗಾಗಿ ಈ ಆಹುತಿ,
೨. ಪರಮಾತ್ಮನ ಹಾಗೂ ಶಾಂತಿ, ಇತ್ಯಾದಿ ಸದ್ಗುಣಗಳ ಧಾರಣೆಗಾಗಿ ಈ ಆಹುತಿ,
೩. ಪ್ರಕಾಶಸ್ವರೂಪ, ಶಾಂತಿಯ ಆಗರ ಪರಮಾತ್ಮನ ಸಾಕ್ಷಾತ್ಕಾರ ಹಾಗೂ ಪ್ರಾಣಾಪಾನ ಪುಷ್ಟಿಗಾಗಿ ಈ ಆಹುತಿ,
೪. ಪರಮಾತ್ಮನ ವಿವಿಧ ಶಕ್ತಿಗಳ ಸಲುವಾಗಿ ಮತ್ತು ಸಮಸ್ತ ವಿದ್ವಜ್ಜನರ ಪ್ರಸನ್ನತೆಯ ಸಲುವಾಗಿ ಈ ಆಹುತಿ,
೫. ಭವರೋಗಹರ ಪರಮೇಶ್ವರನ, ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯನ ಹಾಗೂ ರೋಗನಿರೋಧಕ ಶಕ್ತಿಯ ಪ್ರಾಪ್ತಿಗಾಗಿ ಈ ಆಹುತಿ,
೬. ದೇವನ ವಿಸ್ಮಯಕರ ಸೃಷ್ಟಿಯ ಅರಿವಿಗೆ ಹಾಗೂ ಶರೀರಧಾರ್ಢ್ಯ, ಪ್ರಸನ್ನತೆಗಳಿಗಾಗಿ ಈ ಆಹುತಿ,
೭. ಜೀವಕರ್ಮಾನುಕೂಲ ಜ್ಞಾನ, ಅಧ್ಯಯನಾನುಕೂಲ ಬುದ್ಧಿಯುಳ್ಳ ಪರಮಾತ್ಮನ ಹಾಗೂ ವಿದ್ವಾಂಸರ ಪ್ರಸನ್ನತೆಗಾಗಿ ಈ ಆಹುತಿ,
೮. ಸಮಸ್ತ ಪ್ರಜೆಗಳ ಸ್ವಾಮಿ ಪರಮಾತ್ಮ ಹಾಗೂ ಸತ್ಸಂತಾನ ನಿರ್ಮಾತೃ ಪಿತೃಗಳಿಗಾಗಿ ಈ ಆಹುತಿ,
೯. ಪ್ರಕಾಶವನ್ನೂ, ಬ್ರಹ್ಮಾಂಡವನ್ನೂ ವಿಸ್ತಿರಿಸಿರುವ ಜಗದೀಶ್ವರನ ಹಾಗೂ ತೇಜಸ್ವಿ, ಜ್ಞಾನವಾನ್ ವಿದ್ವಾಂಸರ ಸಲುವಾಗಿ ಈ ಅಹುತಿ, ಮತ್ತು
೧೦. ಇಷ್ಟಾರ್ಥ ನೀಡುವ ಪರಮಾತ್ಮ ಹಾಗೂ ಸಹಾಯಕಾರೀ ಮಿತ್ರರ ಸಲುವಾಗಿ ಈ ಅಹುತಿ. 
     ಇದಾದ ನಂತರ ಒಂದು ಎಲೆಯಲ್ಲಿ ಉಪ್ಪು ಹಾಕಲ್ಪಟ್ಟ ಸಾರು, ಅನ್ನ, ಇತರ ಖಾದ್ಯ ಪದಾರ್ಥಗಳನ್ನು ಏಳು ಭಾಗಗಳಾಗಿ ಮಾಡಿ ಇಡಬೇಕು. ಇವನ್ನು "ಶ್ವಭ್ಯೋ ನಮಃ|, ಪತಿತೇಭ್ಯೋ ನಮಃ| ಶ್ವಪಗ್ಭೋ ನಮಃ|, ಪಾಪ ರೋಗಿಭ್ಯೋ ನಮಃ| ವಾಯುಸೇಭ್ಯೋ ನಮಃ\, ಕೃಮಿಭ್ಯೋ ನಮಃ|" ಎಂದು ಹೇಳಿ ದೀನ, ದುಃಖಿತ, ಹಸಿದ ಮಾನವರಿಗೂ, ನಾಯಿ, ಗೋವು, ಕಾಗೆ, ಇತ್ಯಾದಿಗಳಿಗೂ, ಕ್ರಿಮಿಕೀಟಗಳಿಗೂ ಹಂಚಬೇಕು. ಮೂಲ ಉದ್ದೇಶವೆಂದರೆ ಇರುವುದನ್ನು ತಾವು ತಿನ್ನುವ ಮುನ್ನ ಅಗತ್ಯವಿರುವವರಿಗೆ ಉಣಬಡಿಸಿ ತಿನ್ನಬೇಕು ಎನ್ನವುದೇ ಆಗಿದೆ. ಇಂತಹ ಸ್ವಾರ್ಥತ್ಯಾಗ, ಪರಹಿತ ಚಿಂತನೆಗೆ ಪ್ರೇರಿಸುವ ಕ್ರಿಯೆಯನ್ನು ಪ್ರಾಣಿಬಲಿಗೆ ಸಮರ್ಥಿಸಲು ಕೆಲವರು ಉಪಯೋಗಿಸಿಕೊಂಡಿರುವುದು ಮನಸ್ಸಿಗೆ ನೋವು ಕೊಡುವಂತಹುದು ಎನ್ನದೇ ವಿಧಿಯಿಲ್ಲ. 
[ಆಧಾರ: ಪಂ.ಸುಧಾಕರ ಚತುರ್ವೇದಿಯವರ ಲೇಖನ].

4 comments:

  1. ಅಧ್ವರ ಅಂದರೆ ಅಹಿಂಸೆ, ಅಂದರೆ ಯಜ್ಝ ಅಂದ ಮೇಲೆ ಯಜ್ಝದಲ್ಲಿ ಹಿಂಸೆಯ ಮಾತೆಲ್ಲಿಂದ ಬಂತು? ಪಶುಬಲಿ ಎಂಬುದು ಹಿಂಸೆ.. ಹಿಂಸೆ ಎಂಬುದು ’ಮಾನವ ಧರ್ಮ’ ಎಂದು ಒಪ್ಪುವ ಮಂದಿಗೆ ಇವೆಲ್ಲ ಅರ್ಥವಾಗುವುದಿಲ್ಲ... ತಮ್ಮ ಸ್ವಾರ್ಥಕ್ಕಾಗಿ ಮುಗ್ಧ ಜೀವಿಗಳನ್ನು ಬಲಿಯಾಗಿಸ ಹೊರಟ ಕಟುಕರು...

    ReplyDelete
  2. ಸಂದರ್ಭೋಚಿತವಾಗಿದೆ.ಧನ್ಯವಾದಗಳು

    ReplyDelete
  3. ನಾಗರಾಜ್ ಅವರ ಲೇಖನವನ್ನೂ ಓದಿದೆ.. ನಾನು ವೈಶ್ವದೆವವನ್ನು ಪ್ರಸ್ತಾಪಿಸಿದ ವಿಷಯವನ್ನು ಅವರು ತಪ್ಪಾಗಿ ಗ್ರಹಿಸಿದ್ದಾರೆನೋ. ಅನ್ನಿಸಿತು.. ಕಾರಣ, ಅದನ್ನ ನಾನು "ವೈದೀ ಹಿಂಸಾ" ಅನ್ನೋ ನ್ಯಾಯಶಾಸ್ತ್ರದ ಪ್ರತಿಪಾದನೆಗಾಗಿ ಹೇಳಿದ್ದು..

    ಶ್ರೀಯುತ ನಾಗರಾಜ್ ಅವರೇ,ಇನ್ನೊಂದು ಅಂಶವನ್ನು ಗಮನಿಸಿ. ನೀವೇ ಆ ಶ್ಲೋಕಗಳ ಅರ್ಥಗಳನ್ನು ತಿಳಿಸಿದ್ದೀರಿ.. ಓದಿ ಸಂತೋಷವಾಯಿತು..
    "೧) ಪರಮಾತ್ಮನ ಸಾಕ್ಷಾತ್ಕಾರ ಮತ್ತು ಜಠರಾಗ್ನಿಯ ಪ್ರದೀಪ್ತತೆಗಾಗಿ ಈ ಆಹುತಿ"
    -- ಅಂದ್ರೆ, ನಮ್ಮ ಜಥರದೊಳಗಿನ ಅಗ್ನಿಯ(ವೈಶ್ವಾನರಾಗ್ನಿ) ಪ್ರದೀಪ್ತತೆಗಾಗಿ ಅಂತ ಹೇಳಿ ಆಹುತಿ ಕೊಡುತ್ತೇವೆ.. ಎಲ್ಲಿ? ಜಥರಾಗ್ನಿಗೆನು. ಅಲ್ಲ..ಮುಂದೆ ಇರುವ ಅಗ್ನಿಗೆ.
    ನೀವೇ ಹೇಳಿದಂತೆ, "ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ" ಆಹಾರ ಪದಾರ್ಥಗಳನ್ನು, ಅಗ್ನಿಗೆ ಹಾಕುತ್ತೀರೆಂದರೆ, ಅಲ್ಲಿಗೆ ನೀವೂ ಹಿಂಸೆ ಮಾಡಿದಂತೆಯೇ ಆಯಿತಲ್ಲವೇ.. ಅದೇ ನನ್ನ ಪ್ರಶ್ನೆಯಾಗಿದೆ..
    ನೀವು ಮಾಡಿದ್ದೂ ಹಿಂಸೆ ಅಂತ ಒಪ್ಪಿಕೊಂಡಲ್ಲಿ, ಹಾಗಾದರೆ ಅಂಥಾ ಹಿಂಸೆಯನ್ನು ಯಾಕೆ ಮಾಡುತ್ತೀರಿ ಅನ್ನೋದು ನನ್ನ ಮುಂದಿನ ಪ್ರಶ್ನೆ.. "ಭಗವಂತನ ಸಾಕ್ಷಾತ್ಕಾರಕ್ಕಾಗಿ" ಅಂತ ನೀವು ಮತ್ತೆ ಉತ್ತರ ಹೇಳಬಹುದು.. ಇದೆ ಉತ್ತರವನ್ನು ಆ ಅಶ್ವಮೇಧದ ಕುದುರೆಬಲಿಗೆ ನಾನು ಕೊಡುತ್ತೇನೆ.. "ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ" ಅಂತ..

    "ದೇವರ ಸಾಕ್ಷಾತ್ಕಾರಕ್ಕಾಗಿ" ಸಸ್ಯಗಳನ್ನ ಆಹುತಿ ನೀಡುವುದು ದೋಷವಲ್ಲ, ಅಂದ ಮೇಲೆ, ಜೀವಿಯ ಮತ್ತೊಂದು ಪ್ರಾಕಾರವಾದ ಪ್ರಾಣಿಗಳನ್ನೂ ಅದೇ ಉದ್ದೇಶದಿಂದ ಆಹುತಿ ನೀಡಿದರೆ, ಅದನ್ನು ಹೇಗೆ ದೋಷ ಅಂತ ಹೇಳುತ್ತೀರಿ.? ತರ್ಕದ ಮೂಲಕ ಇದಕ್ಕೇನು ಉತ್ತರ ನೀಡುತ್ತೀರಿ.?
    Bhimasen Purohit

    ReplyDelete
    Replies
    1. ಶ್ರೀಧರರು ಮಾಡಿಕೊಟ್ಟ ಪರಿಚಯದಿಂದ ನೀವಿನ್ನೂ ತರುಣರಾಗಿದ್ದು ಇಂತಹ ವಿಷಯಗಳಲ್ಲಿ ಆಸಕ್ತಿ ತೋರುತ್ತಿರುವುದು ಸಂತಸಕರ ವಿಷಯ, ಭೀಮಸೇನ ಪುರೋಹಿತರೇ.
      ನಿಮ್ಮ ಮೇಲಿನ ಪ್ರತಿಕ್ರಿಯೆ ಕುರಿತು:
      ಸತ್ಯಾನ್ವೇಷಣೆಯಲ್ಲಿ ಪೂರ್ವಾಗ್ರಹ ಪಾತ್ರ ವಹಿಸಬಾರದು. ಚರ್ಚೆಯಲ್ಲಿ ಪಾಲುಗೊಳ್ಳುವ ಉಭಯಪಕ್ಷದವರೂ ತಮ್ಮ ನಿಲುವಿಗೆ ವಿರುದ್ಧವೆನಿಸಿದರೂ ಸತ್ಯವನ್ನು ಗ್ರಹಿಸಬೇಕು.
      1.ನೀವು ಹೊಸ ವಾದವನ್ನೇನೂ ಮಂಡಿಸಿಲ್ಲ. ಈ ಹಿಂದೆ ಕೇಳಿದ್ದಂತೆ ವೇದದಲ್ಲಿ ಪ್ರಾಣಿಬಲಿ ಸಮರ್ಥಿಸುವ ವೇದಮಂತ್ರಗಳಿದ್ದಲ್ಲಿ ತಿಳಿಸುವಿರಾ? ಮೂಲವಿಷಯಾಂತರವಾಗದಿರಲಿ. ಕೇವಲ ವಾದಕ್ಕಾಗಿ ಚರ್ಚೆ ಮುಂದುವರೆಯುವುದು ಸೂಕ್ತವಲ್ಲ.
      2. ಬಲಿವೈಶ್ವದೇವಯಜ್ಞ ಮಾಡಿದ ಅಡಿಗೆಯನ್ನು ಸೇವಿಸುವ ಮುನ್ನ ದೇವನನ್ನು ನೆನೆದು, ಅಗತ್ಯವಿರುವವರಿಗೆ ಹಂಚಿ ತಿನ್ನುವ ಉದಾತ್ತತೆ ಬೋಧಿಸುತ್ತದೆ. ಇದನ್ನೇ ಕುದುರೆ ಬಲಿಗೆ ಸಮರ್ಥನೆಯೆಂದರೆ ಒಪ್ಪಲಾಗದು. ಎಂತಹ ಆಹಾರ ಸೇವಿಸಬೇಕು, ಹೇಗೆ ಸೇವಿಸಬೇಕು ಎಂಬುದು ಪ್ರತ್ಯೇಕವಾದ ಚರ್ಚಾರ್ಹ ವಿಷಯವಾಗುವುದರಿಂದ ಇಲ್ಲಿ ಈ ಚರ್ಚೆ ಬೇಡ.
      ಅಧ್ಯಯನ, ಮನನ, ಮಥನಗಳಿಂದ ಸತ್ಯ ಹೊರಬರಲಿ. ನಿಮ್ಮಂತಹ ತರುಣರು ನಿಜಸತ್ಯದ ಪ್ರತಿಪಾದಕರಾಗಲಿ. ಕೇವಲ ಸಂಪ್ರದಾಯಗಳನ್ನು ಸತ್ಯವೆಂದು ಭಾವಿಸುವ ಪರಿಪಾಠ ದೂರವಾಗಲಿ, ಮನದ ಕತ್ತಲೆ ಕಳೆಯಲಿ.

      Delete