ಒಮ್ಮೊಮ್ಮೆ ಕೆಲವು ಪೂಜೆ ಪುನಸ್ಕಾರ, ವ್ರತ ಕತೆಗಳನ್ನು ಆಚರಿಸುವ ರೀತಿ ನೋಡಿದಾಗ ನಿಜವಾಗಿ ನಗು ಬರುತ್ತದೆ. ಪೂಜೆ ಮಾಡುವುದನ್ನು ನೋಡಿ ನಗು ಬರುತ್ತೆ ಅಂದಾಗ ಕೆಲವರಿಗೆ ಕೂಡಲೇ ಸಿಟ್ಟು ಬರಬಹುದು. ಆದರೆ ಸ್ವಲ್ಪ ಶಾಂತವಾಗಿ ಚಿಂತನ-ಮಂಥನ ಮಾಡಿದರೆ ನಗಬೇಕೋ ಅಳಬೇಕೋ ಅನ್ನೋದನ್ನು ನಾವೇ ನಿರ್ಧರಿಸಬಹುದು.
ಯಾಕಪ್ಪಾ ನಗು ಬರುತ್ತೆ ಅಂದರೆ, ಹೊಟ್ಟೆ ಹಸಿವಾದಾಗ ಏನು ಮಾಡಬೇಕು? ಅಂದರೆ ಉತ್ತರ ಯಾರಿಗೆ ಗೊತ್ತಿಲ್ಲ? ಊಟ ಮಾಡಬೇಕು" ಅಲ್ಲವೇ? ಅದು ಬಿಟ್ಟು ದೇವರಮುಂದೆ ಕುಳಿತು " ದೇವರೇ ನನಗೆ ಹೊಟ್ಟೆಹಸಿದಿದೆ,ಹೊಟ್ಟೆ ತುಂಬಿಸು, ಎಂದು ಪ್ರಾರ್ಥನೆ ಮಾಡುತ್ತಾ ದೇವರ ಮುಂದೆ ಕುಳಿತರೆ ಸ್ವಲ್ಪ ಸಮಯದಲ್ಲಿ ಹಸಿವು ಮರೆತು ಹೋಗಬಹುದು, ಅಷ್ಟೆ, ಅಲ್ಲವೇ? ಹಸಿವಾದಾಗ ಊಟಮಾಡಬೇಕು ತಾನೇ? ಅಷ್ಟೇ ಸರಳ ಇನ್ನುಳಿದ ಸಂಗತಿಗಳೂ ಕೂಡ. ಕಷ್ಟ ಬಂತು ಅಂತಾ ಅದನ್ನು ನೀಗಿಸಲು ಮಾಡಬೇಕಾದ ಪ್ರಯತ್ನವನ್ನು ಮಾಡದೆ ಕೇವಲ ವ್ರತಕತೆಗಳು,ಯಜ್ಞ ಯಾಗಾದಿಗಳು,ಪೂಜೆ ಪುನಸ್ಕಾರಗಳನ್ನು ಮಾಡಿದರೆ ಅವನ ಕಷ್ಟ ಹೋಗುವುದಾದರೂ ಹೇಗೆ? ಅಥವಾ ಸಾಧ್ಯವೇ? ತನ್ನ ಕರ್ತವ್ಯವನ್ನು ನಿರ್ವಹಿಸದೆ ಪ್ರಾರ್ಥಿಸಿದಾಗಲೆಲ್ಲಾ ಬಂದು ಕಷ್ಟ ಪರಿಹರಿಸಲು ಭಗವಂತನೇನು ನಮ್ಮ ಸೇವಕನೇ? ಮೊನ್ನೆ ಒಬ್ಬ ಮಹಾಶಯರು ನಮ್ಮ ಮನೆಗೆ ಬಂದಿದ್ದರು. ಸಾರ್ ವ್ಯಾಪಾರದಲ್ಲಿ ಕೋಟ್ಯಾಂತರ ರೂಪಾಯಿ ಲಾಸ್ ಆಯಿತು ಸಾರ್, ಅದಕ್ಕಾಗಿ ಸುದರ್ಶನ ಹೋಮ,ನವಗ್ರಹಹೋಮ............ಇತ್ಯಾದಿ ಹತ್ತಾರು ಹೋಮಗಳನ್ನು ಮಾಡಿಸಿದೆ, ಎಲ್ಲಾ ಪುಣ್ಯ ಕ್ಷೇತ್ರಗಳಿಗೂ ಹೋಗಿ ಬಂದೆ, ಭಗವಂತಾ ಯಾಕೋ ಇನ್ನೂ ನಮ್ಮ ಮೇಲೆ ಕಣ್ಣು ಬಿಟ್ಟಿಲ್ಲ! ಎಂದರು. "ನಿಮ್ಮ ಮೇಲೆ ಭಗವಂತನು ಕಣ್ಣು ಬಿಡುವುದೂ ಇಲ್ಲ "ಎಂದು ಮನಸ್ಸಿನಲ್ಲೇ ಅಂದುಕೊಂಡೆ. ವ್ಯಾಪಾರದಲ್ಲಿ ಲಾಸ್ ಆದ್ದರಿಂದ ಸಾಲಮಾಡಿ ಹೋಮಹವನಗಳನ್ನು ಮಾಡಿಸಿದ್ದಾರೆ, ಪುಣ್ಯ ಕ್ಷೇತ್ರಗಳಿಗೆ ಹೋಗಿಬಂದಿದ್ದಾರೆ.
ಮೊದಲೇ ನಷ್ಟ,ಅದರೊಟ್ಟಿಗೆ ಮತ್ತೆ ಸಾಲ!! ಇಂತವರಿಗೆ ಏನೆನ್ನಬೇಕು? ಬಹಳ ಜನರು ಏನೂ ಅನ್ನುವುದಿಲ್ಲ. ಕಾರಣ ತಾವೂ ಅದನ್ನೇ ಮಾಡುತ್ತಾರೆ.
ವ್ಯ್ವಹಾರದಲ್ಲಿ ನಷ್ಟವಾಯಿತೆಂದರೆ ಅದಕ್ಕೆ ಕಾರಣ ಹುಡುಕಬೇಕಿತ್ತು, ಅಲ್ಲವೇ? ನಷ್ಟವಾಯ್ತೆಂದರೆ ಅದಕ್ಕೆ ನಾಲ್ಕಾರು ಕಾರಣಗಳು ಇರಬಹುದು. ೧] ವ್ಯವಹಾರದ ಮೇಲೆ ತಪ್ಪಿದ ಹತೋಟಿ. ೨] ಸೋಮಾರಿತನ ೩] ದುಂದು ವೆಚ್ಚ ೪] ಅತಿಯಾಸೆಯಿಂದ ಜೂಜಿಗೆ ಸಮಾನವಾದ ವ್ಯವಹಾರ ಮಾಡಿರುವುದು.
ನಿತ್ಯವೂ ವ್ಯವಹಾರವನ್ನು ಮಾನಿಟರ್ ಮಾಡಿದ್ದರೆ ಕೋಟ್ಯಾಂತರ ರೂಪಾಯಿ ಲಾಸ್ ಆಗಲು ಕಾರಣವೇ ಇಲ್ಲ. ಅಲ್ಲವೇ? ಏನೋ ಮೋಸ ಆಗುತ್ತಿದೆ ಎಂದು ಆರಂಭದಲ್ಲಿಯೇ ತಿಳಿದು ಸರಿಪಡಿಸಿಕೊಳ್ಲಬಹುದಿತ್ತು. ಹತ್ತು ರೂಪಾಯಿಗೆ ನೂರು ರೂಪಾಯಿ ಲಾಭದ ದುರಾಸೆಯಲ್ಲಿ ವ್ಯವಹಾರಕ್ಕೆ ಹಣ ಚೆಲ್ಲಿದಾಗ ಆರಂಭದಲ್ಲಿ ಲಾಭದ ಆಸೆಹುಟ್ಟಿದರೂ ಒಮ್ಮೆಲೇ ಬಂದ ಲಾಭದ ಹತ್ತು ಪಟ್ಟು ನಷ್ಟ ನಂತರದಲ್ಲಿ ಆಗಬಾರದೆಂದೇನೂ ಇಲ್ಲವಲ್ಲಾ!
ಒಬ್ಬನಿಗೆ ಹೃದಯ ಸಂಬಂಧಿಖಾಯಿಲೆ ಬಂತು. ಅದಕ್ಕಾಗಿ ಒಂದು ಹೋಮ ಮಾಡಿಯಾಯ್ತು. ಮಗ ಬಿ.ಇ. ತೇರ್ಗಡೆ ಯಾಗಲಿಲ್ಲ. ಅದಕ್ಕಾಗಿ ಯಾವುದೋ ದೇವರಿಗೆ ಹರಕೆ! ಹೀಗೆ ಬಂದ ಕಷ್ಟಗಳಿಗೆಲ್ಲಾ ದೇವರ ಮೊರೆ!!
ಎಲ್ಲವೂ ನಮ್ಮ ಕೈಲೇ ಇದೆ ಅಲ್ಲವೇ? ವಿವೇಕದಿಂದ ವ್ಯವಹಾರ ಮಾಡಬೇಕು, ಜಾಣ್ಮೆಯಿಂದ ಜೀವನ ಮಾ
ಡ ಬೇಕು, ಕಷ್ಟ ಪಟ್ಟು ಕೆಲಸ ಮಾಡಬೇಕು, ನಾವು ಮಾಡುವ ಊಟದಲ್ಲಿ ,ನಮ್ಮ ದೈನಂದಿನ ಚಟುವಟಿಕೆಯಲ್ಲಿ ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲವೇ? ಶರೀರ ಒಪ್ಪದ ಆಹಾರವನ್ನು ತಿಂದು, ಶರೀರಕ್ಕೆ ಸೂಕ್ತ ವ್ಯಾಯಾಮವಿಲ್ಲದೆ, ಬೇಕಾಬಿಟ್ಟಿ ಜೀವನ ಮಾಡಿದಾಗ ಆರೋಗ್ಯ ಹದಗೆಡಬಾರದೆ?
ಬಹುಪಾಲು ಹೀಗೇ ನಡೆದಿದೆ ನಮ್ಮ ಜೀವನ. ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿ ನಂತರ ಫಲಾಫಲವನ್ನು ಆ ಭಗವಂತನಿಗೆ ಬಿಡುವುದು ಸರಿ.ಆಗಲೂ ಆಗುವ ಕಷ್ಟಗಳಿಗೆ ದೇವರಲ್ಲಿ ಪ್ರಾರ್ಥಿಸಬೇಕಾದುದೇನು?
ಬಂದಿರುವ ಕಷ್ಟಗಳನ್ನು ನಿಭಾಯಿಸಲು ಶಕ್ತಿಯನ್ನು ದೇವರಲ್ಲಿ ಕೇಳಬೇಕಾದ್ದು, ಸರಿ. ಆದರೆ ನಿಭಾಯಿಸಬೇಕಾದವರು ನಾವೇ ತಾನೇ?
ನಮ್ಮ ಮಿತ್ರರೊಬ್ಬರು ನನಗೆ ಹೇಳಿದರು" ನಮ್ಮ ಕಷ್ಟ ನಿಮಗೇನು ಗೊತ್ತಾಗಬೇಕು? ನೀವಾದರೂ ಒಳ್ಳೆಯ ಕೆಲಸದಲ್ಲಿದ್ದೀರಿ!"
ಪಾಪ! ಅವರಿಗೇನು ಗೊತ್ತು ಮೊದಲ ಇಪ್ಪತ್ತೈದು ವರ್ಷಗಳು ಪಟ್ಟಿರುವ ಭವಣೆ!!
ಆಗಿನ ಕಾಲದಲ್ಲಿ ಮನೆಮಂದಿಯೆಲ್ಲಾ ನಿದ್ರೆಗೆಟ್ಟು ಊಟದ ಎಲೆ ಹಚ್ಚಿದರೂ ಸಂಸಾರ ನಡೆಯುತ್ತಿರಲಿಲ್ಲ. ಹಸಿದಹೊಟ್ಟೆ ಯಲ್ಲಿ ಮಲಗಿದ ದಿನಗಳಿಗೇನೂ ಕಮ್ಮಿ ಇರಲಿಲ್ಲ. ಆದರೆ ನಮ್ಮ ತಾಯಿಯೊಡನೆ ನಿತ್ಯವೂ ಮನೆಮಂದಿಯೆಲ್ಲಾ ಬೆಳಿಗ್ಗೆ ಮತ್ತು ಸಂಜೆ ಒಂದೊಂದು ಗಂಟೆ ಬಿಡದೆ ಭಗವಂತನ ಸ್ಮರಣೆಯನ್ನು ಮಾಡುವುದು ಮಾತ್ರ ತಪ್ಪುತ್ತಿರಲಿಲ್ಲ. ಆದರೆ ಸಾಲಮಾಡಿ ತೀರ್ಥಯಾತ್ರೆಯನ್ನೂ ಮಾಡಲಿಲ್ಲ! ಹವನ ಹೋಮದ ಹೆಸರೂ ಕೇಳಿರಲಿಲ್ಲ!!
ನಿಜಕ್ಕೂ ಅರ್ಥ ಗರ್ಭಿತವಾಗಿದೆ..ಎಲ್ಲಕ್ಕೂ ದೇವರೇ ಹೊಣೆ ಅಂತ ಕುಳಿತರೆ ಏನೂ ಆಗುವುದಿಲ್ಲ. ಹುಟ್ಟಿಸಿದ ದೇವರು ಹುಲ್ಲು ಮೆಯಿಸುವುದಿಲ್ಲವೇ ಅಂತ ಹಿಂದೆ ಎಷ್ಟೋ ಮಕ್ಕಳನ್ನ ಹೆತ್ತು ನೋವನುಭವಿಸುತ್ತಿದ್ದ ಜನ ಒಂದೋ ಎರಡೋ ಸಂತತಿಯನ್ನ ಹೊಂದಿದ್ದರೆ ಸುಖವಾಗಿರುತ್ತಿದ್ದರು ಅಲ್ಲವೇ? ದೇವರನ್ನ ನಂಬಿ ಕೆಲಸ ಮಾಡದೆ ನಮ್ಮ ಕೆಲಸ ಕರ್ತವ್ಯಗಳಲ್ಲಿ ದೇವರನ್ನ ನೋಡಬೇಕು ಆಗ ನಮ್ಮ ಜೀವನ ಸಾರ್ಥಕವಾಗುವುದು. ಇದೆ ರೀತಿ ಜನ್ಮ ಪತ್ರಿಕೆ ನೋಡಿ ಈ ಬಾಲಕ ಉತ್ತಮ ಶಿಕ್ಷಾವಂತನಾಗುತ್ತಾನೆ ಅನ್ನುತ್ತಾರೆ ಆದರೆ ಅವನು ಅಧ್ಯಯನವನ್ನು ಮಾಡದೇ ಇದ್ದರೆ ಶಿಕ್ಷಾವಂತನಾಗುವುದಾದರೂ ಹೇಗೆ ಅಲ್ಲವೇ. ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ನಿಷ್ಥೆ ಶ್ರದ್ಧೆ ಇಲ್ಲದಿದ್ದರೆ ಏನೂ ಪ್ರಯೋಜನವಿಲ್ಲ.ಭಗವಂತ ಒಂದು ದಾರಿದೀಪವಿದ್ದಂತೆ, ಎಲ್ಲ ದಾರಿಯಲ್ಲೂ ಅವನ ಅನುಗ್ರಹವಿರುತ್ತೆ ಆದರೆ ದಾರಿಯೇ ತಪ್ಪಿದ್ದರೆ ದೇವರು ತಾನೇ ಏನು ಮಾಡಬಲ್ಲ.
ReplyDelete<< ಗಂಗೆಯನ್ನು ಎದುರಿಗೆ ಇಟ್ಟುಕೊಂಡು 'ಗಂಗಾ ಮಾತೆ, ನನಗೆ ಬಾಯಾರಿಕೆ ಆಗಿದೆ, ನನ್ನ ಬಾಯಾರಿಕೆ ನೀಗಿಸು' ಅಂದರೆ ಅವಳು ಬಾಯಾರಿಕೆ ಹೋಗಿಸುವುದಿಲ್ಲ. ನೀವು ಕೈಯಲ್ಲಿ ತೆಗೆದುಕೊಳ್ಳಬೇಕು, ಕುಡಿಯಬೇಕು, ಆಗ ಮಾತ್ರ ನಿಮ್ಮ ಬಾಯಾರಿಕೆ ಹೋಗೋದು. ಹಾಗಿಲ್ಲದೆ ಬರಿಯ ಮಾತಿನಿಂದ ಗಂಗೆ ಬಾಯಾರಿಕೆ ಹೋಗಿಸುವುದಿಲ್ಲ. ಸಾಧ್ಯವೇ ಇಲ್ಲ.>> ಇದು ಪಂ. ಚತುರ್ವೇದಿಗಳ ಮಾತು. ಸ್ವಪ್ರಯತ್ನವೇ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗ. ಒಳ್ಳೆಯ ವಿಚಾರ, ಶ್ರೀಧರ್.
ReplyDeleteಆತ್ಮೀಯ ಶ್ರೀಧರ್,
ReplyDeleteನಮಸ್ಕಾರ. ಯಾವಾಗಲು ಮನುಷ್ಯ ಪ್ರಯತ್ನಕ್ಕೆ ಮೊದಲಸ್ತಾನ. " ನೀನು ನಿನ್ನ ಕೆಲಸವನ್ನು ಮಾಡು, ನಾನು ನನ್ನ ಕೆಲಸವನ್ನು ಮಾಡುತ್ತೇನೆ " ಎಂದೇ ಕೃಷ್ಣನೂ ಹೇಳಿರುವುದು. ಅದಕ್ಕೆ " ಸಪ್ತಮಂ ದೈವಚಿಂತನಂ " ಎಂದೂ ಹೇಳಿರುವುದು. ೬ ಭಾಗ ನಮ್ಮ ಪ್ರಯತ್ನ 1 ಭಾಗ ಭಗವಂತನ ಸಂಕಲ್ಪ. 99 percent perspiration and 1 percent is inspiration . ಇವೆಲ್ಲ ಪುರುಷ ಪ್ರಯತ್ನವನ್ನೇ ಸಾರುತ್ತವೆ.
ಪ್ರಯತ್ನ ನಮ್ಮದು ಫಲಾಫಲ ಭಗವಂತನದು. ಪ್ರಯತ್ನ ಸರಿಯಾಗಿದ್ದರೆ ಫಲವು ಸರಿಯಾಗಿದ್ದೆ ಆಗಿರುತ್ತದೆ.
ಉತ್ತಮ ಚಿಂತನೆ
ಪ್ರಕಾಶ್
ಚಿಂತನೆ ಸರಿಯಹಾದಿಯಲ್ಲಿದೆ, ಎಂದು ಸಹಮತ ವ್ಯಕ್ತಪಡಿಸಿರುವ ಶ್ರೀ ಗಣೇಶ್ ಖರೆ, ಹಿರಿಯರಾದ ಶ್ರೀ ನಾಗರಾಜ್, ಆತ್ಮೀಯರಾದ ಶ್ರೀ ಪ್ರಕಾಶ್ ,ಇವರಿಗೆಲ್ಲಾ ಧನ್ಯವಾದಗಳು. ಹಲವರು ಓದಿದ್ದಾರೆಂಬ ಭರವಸೆಇದೆ. ಎಲ್ಲರಿಗೂ ಧನ್ಯವಾದಗಳು.
ReplyDeleteNanjunda Raju
ReplyDeleteTo: ವೇದಸುಧೆ
Date: 9 June 2012, 15:24
ಮಾನ್ಯರೇ, ಒಂದು ರೀತಿಯಲ್ಲಿ ನಿಮ್ಮ ಅನಿಸಿಕೆಯನ್ನು ಒಪ್ಪುವುದಾದರು, ಸಾಮಾನ್ಯವಾಗಿ
ಚೆನ್ನಾಗಿ ನಡೆಯುತ್ತಿದ್ದ ವ್ಯಾಪಾರ, ಅಥವಾ ಸಂಸಾರ ಕೆಲ ಮಟ್ಟಕ್ಕೆ ಬಂದಾಗ,
ವ್ಯಾಪಾರದಲ್ಲಿ ಎಸ್ಟೆ ಬುದ್ದಿವಂತಿಕೆ ಉಪಯೋಗಿಸಿದರೂ ನಷ್ಟ ಉಂಟಾದಾಗ ಮನಸು
ದುರ್ಬಲವಾಗುತ್ತದೆ ಯಾರು ಏನೇ ಹೇಳಿದರು ಮಾಡೋಣವೆನಿಸುತ್ತದೆ. ಮನೆ ದೇವರನ್ನು ಬಿಟ್ಟು
ಹೊಸ ದೇವರನ್ನು ಮೊರೆ ಹೋಗುತ್ತೇವೆ. ಇದರಿಂದ ಪುಟ್ಟಪರ್ತಿ ಸಾಯಿ ಬಾಬ, ಶಿರಡಿ
ಸಾಯಿಬಾಬ, ರಾಘವೇಂದ್ರ, ಅಯ್ಯಪ್ಪ, ಹುಟ್ಟಿಕೊಳ್ಳುತ್ತವೆ. ಇವನ ಬುದ್ದಿವಂತಿಕೆ
ಯಿಂದಲೋ, ಅದ್ರುಸ್ತದಿನದಲೋ, ಅವನ ಅಸೆ ಈಡೇರಿತುಎಂದರೆ ಪ್ರಚಾರ ಮಾಡುತ್ತಾರೆ, ನೀವು
ಮೊದಲು ಮಾಡಿದಂತೆ ದಿನಕ್ಕೆ ಎರಡು ಗಂಟೆ ದ್ಯಾನ ಮಾಡಲಿ, ಚಟಗಳಿಗೆ ಬಲಿಯಾಗದಿದ್ದರೆ
ಸಾಕು. ದೇವರಲ್ಲಿ ಭಕ್ತಿಯು ಇರಲಿ, ತಮ್ಮ ವ್ಯಪ್ಪರ ವ್ಯವಾಹಾರದಲ್ಲಿ ನಿಸ್ತೆಯು
ಇರಲಿ. ನೀವು ತಿಳಿಸಿರುವಂತೆ ಸಾದನೆ ಇರಬೇಕು. ಇಲ್ಲವಾದರೆ ಅ ದೇವರು ಏನು ಮಾಡಲಾರ
ಅಲ್ಲವೇ? ವಂದನೆಗಳು.