" ಅಹಿಂಸಾ, ಸತ್ಯ, ಆಸ್ತೆಯ, ಶೌಚ, ಇಂದ್ರೀಯನಿಗ್ರಹ " ಇವು ಪಂಚ ಮುಖ್ಯ ತತ್ವಗಳು ಎಂದು ಧರ್ಮ ಶಾಸ್ತ್ರಗಳು ಹೇಳುತ್ತವೆ. ಯಾರನ್ನು ಹಿಂಸೆಗೆ ಒಳಪಡಿಸದಿರುವುದು ; ಸತ್ಯವನ್ನೇ ನುಡಿಯುವುದು ; ಪರರ ವಸ್ತುಗಳನ್ನು ಕದಿಯದಿರುವುದು ; ದೇಹ ,ಮನಸ್ಸು, ಮತ್ತು ನಾವಾಡುವ ಮಾತಿನಲ್ಲಿ ಪವಿತ್ರತೆಯನ್ನು ಸಾಧಿಸುವುದು ; ಮತ್ತು ಪಂಚೆಂದ್ರಿಯಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು. ಇವೆ ಆ ಪಂಚ ಮಹಾ ತತ್ವಗಳು. ಮಹಾಭಾರತದಲ್ಲಿ ಇದರಲ್ಲಿ ಒಂದಾದ ಅಹಿಂಸೆಯ ಬಗ್ಗೆ ಹೇಳಿದೆ " ಅಹಿಂಸಾ ಪರಮೊಧರ್ಮಃ." ಅಹಿಂಸೆ ಪರಮ ಪವಿತ್ರ ಧರ್ಮವಾಗಿದೆ. ಈ ತತ್ವವನ್ನು ಪ್ರಪಂಚದ ಎಲ್ಲ ಧರ್ಮಗಳು ಒಪ್ಪಿಕೊಂಡಿವೆ. ಬೌದ್ಧ ಮತ್ತು ಕ್ರೈಸ್ತ ಧರ್ಮಗಳು ತಮ್ಮ ಗ್ರಂಥಗಳಲ್ಲಿ ಈ ವಿಚಾರವನ್ನು ವಿಶೇಷವಾಗಿ ಪ್ರತಿಪಾದಿಸಿದೆ.
ಹಿಂಸೆ ಎಂದರೆ ಕೇವಲ ಒಂದು ಜೀವಕ್ಕೆ ಹಾನಿ ಮಾಡುವುದು ಮಾತ್ರವಾಗುವುದಿಲ್ಲ, ಯಾರೊಬ್ಬರ ಮನಸ್ಸಿಗೆ ನೋವುಂಟು ಮಾಡುವುದು, ಮತ್ತೊಬ್ಬರಿಗೆ ನಮ್ಮ ನಡವಳಿಕೆಯಿಂದ ಆಗಬಹುದಾದ ಮಾನಸಿಕ ಕಿರಿಕಿರಿಯು ಸೇರುತ್ತದೆ. ಆದ್ದರಿಂದ, ಅಹಿಂಸೆ ಎಂದರೆ ಯಾರೊಬ್ಬರಿಗೂ ಯಾವ ರೀತಿಯಲ್ಲೂ ಹಿಂಸೆಯಾಗದಂತೆ ಬಾಳುವುದೇ ಆಗುತ್ತದೆ. ಪ್ರಪಂಚದ ಎಲ್ಲಾ ಧರ್ಮಗಳು ಅಹಿಂಸೆಯ ತತ್ವವನ್ನು ಪಾಲಿಸಬೇಕೆಂದು ಮತ್ತು ಹಿಂಸಾ ಮಾರ್ಗವನ್ನು ತ್ಯಜಿಸಬೇಕೆಂದು ಹೇಳುತ್ತವೆ. ಆದರೆ, ಯಾವುದೇ ರೀತಿಯಲ್ಲಿ ಹಿಂಸೆಗೆ ಆಸ್ಪದ ಕೊಡದ ಹಾಗೆ ಜೀವನವನ್ನು ನಡೆಸಲು ಸಾಧ್ಯವೇ?
ಒಂದು ಉದಾಹರಣೆಯನ್ನು ನೋಡೋಣ. ಒಬ್ಬ ಕೊಲೆಪಾತಕ ನಮ್ಮ ಮನೆಗೆ ನುಗ್ಗಿದ್ದ ಎಂದೇ ಅಂದುಕೊಳ್ಳೋಣ. ಅವನ ಕೈಯಲ್ಲಿ ಮಾರಕಾಸ್ತ್ರವಿದೆ. ಅವನು ನಮ್ಮ ಮಗನನ್ನೂ , ಮಗಳನ್ನೂ ಹೊಡೆಯಲು ಅಥವಾ ಅತ್ಯಾಚಾರ ಮಾಡಲು ಮುಂದಾಗಬಹುದು. ಹೆಂಡತಿ ಮಕ್ಕಳ ಪ್ರಾಣ ತೆಗೆಯಲು ಮುನ್ನುಗ್ಗಬಹುದು. ಕೊಲೆಯ ಬೆದರಿಕೆ ಒಡ್ಡಬಹುದು. ಮನೆಯಲ್ಲಿರುವ ಹಣ , ಒಡವೆ ದೋಚಲು ಪ್ರಯತ್ನಿಸಬಹುದು. ಒಬ್ಬೊಬ್ಬರಾಗಿ ಹಿಂಸೆಗೆ ಒಳಗಾಗಬಹುದು. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವು ನಮ್ಮ ಕುಟುಂಬದ ಸದಸ್ಯರನ್ನು ರಕ್ಷಿಸಲು ಮುಂದಾಗಬೇಡವೇ ? ನಮ್ಮನ್ನು ರಕ್ಷಿಸಲು ಯಾರು ಇಲ್ಲವೆಂದು ಹೇಳುತ್ತಾ ಕೂರಬೇಕೆ? ಅಹಿಂಸಾ ಪರಮೋ ಧರ್ಮಃ ಎಂದು ಕಣ್ಣು ಮುಚ್ಚಿ ಕೂರಬೇಕೆ? ಅಥವಾ ಅಹಿಂಸಾ ತತ್ವವನ್ನು ಮನೆಯವರಿಗೆಲ್ಲ ಹೇಳಿ ಸಮಾಧಾನ ಪಡಿಸಬೇಕೇ? ಅಥವಾ ನಮ್ಮ ಕುಟುಂಬದ ಎಲ್ಲಾ ಸದಸ್ಯರೂ ಒಗ್ಗಟ್ಟಾಗಿ ನಮ್ಮ ಕೈಲಾದ ಮಟ್ಟಿಗೆ ಆ ಪಾತಕಿಯನ್ನ ಎದುರಿಸಬೇಕೆ? ಅವನ ತಪ್ಪಿಗೆ ಶಿಕ್ಷೆಯನ್ನು ಕೊಡಿಸುವಲ್ಲಿ ಶ್ರಮಿಸಬೇಕೆ? ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಆ ಪಾತಕಿಯನ್ನು ಸಾಯಿಸಬೇಕಾದ ಪರಿಸ್ಥಿತಿ ಬಂದಾಗ ಏನು ಮಾಡಬೇಕು? ಈ ರೀತಿಯ ಹಲವಾರು ಪ್ರಶ್ನೆಗಳು ಸಹಜವಾಗಿ ನಮ್ಮೊಳಗೇ ಹುಟ್ಟಬಹುದು.
ಅಹಿಂಸೆಯನ್ನು ಭೋದಿಸುವ ನಮ್ಮ ಧರ್ಮ ಶಾಸ್ತ್ರಗಳು ಇಂಥ ವಿಷಮ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತಿಳಿಸಿವೆ. " ಯಾವುದೇ ವಿಚಾರ ಮಾಡದೆ ಇಂತಹ ಪಾತಕಿಗಳನ್ನು ಶಿಕ್ಷಿಸಲು ಮುಂದಾಗಬೇಕೆಂದು , ದಂಡಿಸಬೇಕೆಂದು ಹೇಳುತ್ತದೆ." ಮುಂದುವರೆದು " ಇಂತಹ ದುಷ್ಕೃತ್ಯ ಎಸಗುವ ವ್ಯಕ್ತಿ ಗುರುವಾಗಿರಬಹುದು , ಹಿರಿಯನಾಗಿರಬಹುದು, ಯುವಕನಾಗಿರಬಹುದು, ಅಥವಾ ವಿದ್ಯಾಸಂಪನ್ನನೆ ಆಗಿರಬಹುದು. ಆದರೆ ಇಂತಹವರಿಗೆ ಯಾವುದೇ ಕರುಣೆಯನ್ನು ತೋರಿಸಬಾರದು " ಎಂದೇ ಹೇಳುತ್ತದೆ. " ಇಂತಹ ಅನಿವಾರ್ಯ ಸಂಧರ್ಭದಲ್ಲಿ ಪಾತಕಿಯನ್ನು ಕೊಂದರು , ಮಾಡಿದ ಪಾಪ ಕೃತ್ಯಕ್ಕೆ ಯಾವ ಪಾಪದ ಲೇಶವು ಅಂಟುವುದಿಲ್ಲ " ಎನ್ನುತ್ತದೆ ಧರ್ಮ ಶಾಸ್ತ್ರಗಳು. ಇಂದಿನ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲೂ " ವಿಶೇಷ ಸಂಧರ್ಭದಲ್ಲಿ ಸ್ವಯಂ ರಕ್ಷಣೆಗಾಗಿ ಅತ್ಯಾಚಾರಿ, ಕೊಲೆಗಡುಕರನ್ನು ಕೊಲ್ಲುವುದು ಅಪರಾಧವಲ್ಲ " ಎನ್ನುವುದನ್ನು ಹಲವಾರು ವಿಚಾರಣೆಯ ಸಂಧರ್ಭದಲ್ಲಿ ಸಮರ್ಥಿಸಿದೆ.
ಇಂತಹುದೇ ಸಂಧಿಗ್ದದಲ್ಲಿ ಅರ್ಜುನನು ಧರ್ಮರಾಯನನ್ನು ಅಹಿಂಸೆಯ ಬಗ್ಗೆ ಒಂದು ಪ್ರಶ್ನೆಯನ್ನು ಕೇಳುತ್ತಾನೆ. " ಈ ಪ್ರಪಂಚದಲ್ಲಿ ನಮ್ಮ ಕಣ್ಣಿಗೆ ಕಾಣದ ಕೋಟ್ಯಾಂತರ ಜೀವಿಗಳು, ನಾವು ಊಹೆ ಕೂಡ ಮಾಡಿಕೊಳ್ಳಲಾಗದಂತೆ ನಮ್ಮ ಕಣ್ಣ ರೆಪ್ಪೆಗೆ ಬಡಿತಕ್ಕೆ ಸಿಕ್ಕಿ ಸಾಯುವಾಗ ಅಹಿಂಸಾ ತತ್ವ ಎಷ್ಟು ಸಮಂಜಸ? " ಇಂತಹ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ಭಾಗವತ ಹೀಗೆ ಹೇಳುತ್ತದೆ " ಜೀವೋ, ಜೀವಸ್ಯ , ಜೀವನಂ." ಉಪನಿಷತ್ತು ಹೇಳುತ್ತದೆ "ಜೀವನದಲ್ಲಿ ಪ್ರತಿಯೊಂದು ಅವಶ್ಯವೇ."
ಈ ಜಗತ್ತಿನಲ್ಲಿ ಅಹಿಂಸೆಯನ್ನು ಎಲ್ಲರು ಭೋಧಿಸುವವರೆ ಆದರೆ ದುಷ್ಟರನ್ನು ಶಿಕ್ಷಿಸುವವರು ಯಾರು? ದುಷ್ಟರಿಂದ ಸಾಮಾನ್ಯರಿಗೆ ರಕ್ಷಣೆ ಹೇಗೆ? ದುಷ್ಕೃತ್ಯ ಎಸಗುವವರನ್ನು ನಿಗ್ರಹಿಸುವ ಜೊತೆಗೆ ಶಿಷ್ಟರನ್ನು ರಕ್ಷಿಸುವ ಕಾರ್ಯ ಕೂಡಾ ಅಹಿಂಸಾ ತತ್ವದಷ್ಟೇ ಪ್ರಮುಖವಲ್ಲವೇ? ಈ ಬದುಕಿನಲ್ಲಿ ಕೇವಲ ಒಳ್ಳೆಯತನವಷ್ಟೇ ಮುಖ್ಯವಲ್ಲ , ಜೊತೆಗೆ ಒಳ್ಳೆಯದನ್ನು ಉಳಿಸಿಕೊಳ್ಳಲು ಹೋರಾಟವನ್ನು ನಡೆಸಬೇಕಾಗುತ್ತದೆ. ಇಂತಹ ಹೋರಾಟದ ಸಂಧರ್ಭದಲ್ಲಿ ಪಲಾಯನವಾದ ಎಂದಿಗೂ ಕೂಡದು. ಸಮರ್ಥವಾಗಿ ಎದುರಿಸುವ ಮನೋಸ್ತೈರ್ಯ ಹೊಂದಬೇಕಾಗುತ್ತದೆ. ಕೇವಲ ನೀತಿ ಪಾಠದಿಂದ ಜೀವನ ಸಾಗುವುದಿಲ್ಲ. ನೀತಿ, ಅನೀತಿಯ ವ್ಯತ್ಸ್ಯಾವನ್ನು ತಿಳಿದು ಯಾವ ಸಂಧರ್ಭಕ್ಕೆ ಯಾವುದು ಅವಶ್ಯಕ ಎಂಬುದರ ನಿರ್ಧಾರ ಮಾಡಬೇಕಾದ ವಿವೇಚನೆ ಮತ್ತು ವಿವೇಕ ಅವಶ್ಯಕ. ಇದನ್ನೇ ಶ್ರೀ ಕೃಷ್ಣ ಪರಮಾತ್ಮ ಭಗವಧ್ಗೀತೆಯಲ್ಲಿ ಅರ್ಜುನನಿಗೆ " ಕರ್ಮದಲ್ಲಿ ಆಕರ್ಮವನ್ನು, ಆಕರ್ಮದಲ್ಲಿ ಕರ್ಮವನ್ನು ಯಾವನು ನೋಡುತ್ತಾನೋ ಅವನೇ ಬುದ್ಧಿವಂತನು, ಅವನೇ ಯುಕ್ತನು, ಮತ್ತು ಸಕಲ ಕರ್ಮಗಳನ್ನು ಮಾಡಿದವನಾಗುತ್ತಾನೆ " ಎಂದು ಬೋಧಿಸಿದ್ದು .
ಹೆಚ್ ಏನ್ ಪ್ರಕಾಶ್
( ಈ ನನ್ನ ಚಿಂತನವು ಹಾಸನ ಆಕಾಶವಾಣಿ ಕೇಂದ್ರದಿಂದ ದಿನಾಂಕ 27 11 2009 ರಲ್ಲಿ ಬಿತ್ತರಗೊಂಡಿತ್ತು )
" ಕರ್ಮದಲ್ಲಿ ಆಕರ್ಮವನ್ನು, ಆಕರ್ಮದಲ್ಲಿ ಕರ್ಮವನ್ನು ಯಾವನು ನೋಡುತ್ತಾನೋ ಅವನೇ ಬುದ್ಧಿವಂತನು, ಅವನೇ ಯುಕ್ತನು, ಮತ್ತು ಸಕಲ ಕರ್ಮಗಳನ್ನು ಮಾಡಿದವನಾಗುತ್ತಾನೆ "
ReplyDeleteneeds more explanations.Please
ಆತ್ಮೀಯರೇ
ReplyDeleteಶ್ರೀ ಕೃಷ್ಣ ಕರ್ಮಕ್ಕೆ ಸಂಬಂಧ ಪಟ್ಟ ಹಾಗೆ ಕೆಲವು ಪದಗಳನ್ನು ಬಳಸುತ್ತಾನೆ. ಇವು ಸರಳವಾಗಿದ್ದರು ಅರ್ಥ ಮಾತ್ರ ಸೂಕ್ಷ್ಮವಾಗಿರುತ್ತದೆ. ಕರ್ಮ ಎಂದರೆ ಕೆಲಸ ಮಾಡುವುದು. ಏನಾದರೊಂದು ಕೆಲಸ ಮಾಡುತ್ತಲೇ ಇರುವುದು. ಲಾಭಕ್ಕೆ , ಕೀರ್ತಿಗೆ , ಅಧಿಕಾರಕ್ಕೆ ಇತ್ಯಾದಿ ಕೆಲಸ ಮಾಡುತ್ತಲೇ ಇರುವುದು. ಇದರ ಫಲಾಫಲಗಳು ನೆರಳಿನಂತೆ ಬೇಡ ಬೇಡವೆಂದರೂ ಬರುತ್ತವೆ.
ಎರಡನೆಯದು ವಿಕರ್ಮ. ನಾವು ಮಾಡಬೇಕಾದ ಕೆಲಸವನ್ನು ಮಾಡದೆ ಮತ್ತೊಬ್ಬರ ಕೆಲಸಕ್ಕೆ ಕೈ ಹಾಕುವುದು. ಉದಾಹರಣೆಗೆ ಕ್ಷತ್ರಿಯನು ಯುದ್ಧ ಮಾಡುವುದನ್ನು ಬಿಟ್ಟು ತಪಸ್ಸು ಮಾಡಲು ಹೊರಡುವುದು. ಸಮಾಜಕ್ಕೆ ವಿರೋಧವಾದ ಕಳ್ಳತನ, ದರೋಡೆ, ಸುಳ್ಳು ಹೇಳುವುದು ಇತ್ಯಾದಿಗಳನ್ನು ಮಾಡುವುದು. ಇವೆಲ್ಲ ವಿಕರ್ಮಗಳೇ.
ಮೂರನೆಯದು ಅಕರ್ಮ. ಆಕರ್ಮವೆಂದರೆ ಏನೂ ಕೆಲಸ ಮಾಡದೆ ಸುಮ್ಮನಿರುವುದಲ್ಲ. ಕರ್ಮದಲ್ಲಿ ನಿರತನಾಗಿದ್ದರು ಅದರ ಪಾಶಕ್ಕೆ ಸಿಕ್ಕದೆ ಕರ್ಮ ಮಾಡುವುದು. ಶ್ರೀ ಕೃಷ್ಣ ಮಾಡಿದಷ್ಟು ಆಕರ್ಮವನ್ನು ಪ್ರಾಯಶಃ ಮತ್ಯಾರು ಮಾಡಿರಲಾರರು. ಅದೆಷ್ಟೇ ಕರ್ಮ ಮಾಡಿದರು ಯಾವ ಬಂಧನಕ್ಕೂ ಗುರಿಯಾಗದೆ ನಿರ್ಲಿಪ್ತವಾಗಿ ನಿರ್ವಹಣೆ ಮಾಡಿದ್ದು ಶ್ರೀ ಕೃಷ್ಣ.
ಕೆಲವು ಕರ್ಮಗಳನ್ನು ಮಾಡುವಾಗ ಇನ್ನೊಬ್ಬರಿಗೆ ನೋವಾಗಬಹುದು , ವ್ಯಥೆಯಾಗಬಹುದು, ಹಿಂಸೆಯಾಗಬಹುದು . ಉದಾಹರೆಣೆಗೆ ಯೋಧ ಯುದ್ಧದಲ್ಲಿ ಶತ್ರುವನ್ನು ಕೊಲ್ಲುತ್ತಾನೆ. ವೈದ್ಯ ರೋಗಿಗೆ ಚಿಕಿತ್ಸೆ ಕೊಡುವಾಗ ನೋವನ್ನು ಕೊಡುತ್ತಾನೆ. ನ್ಯಾಯಧೀಶನು ಅನ್ಯಾಯ ಮಾಡಿದವನಿಗೆ, ಕೊಲೆ ಪಾತಕನಿಗೆ ಘೋರ ಶಿಕ್ಷೆ ವಿಧಿಸುತ್ತಾನೆ. ಇದೆಲ್ಲವನ್ನು ಹೊರಗಿನಿಂದ ನೋಡಿದವರಿಗೆ ಕ್ರೌರ್ಯವೆನಿಸಬಹುದು. ಆದರೆ, ಒಳಹೊಕ್ಕು ನೋಡುವಾಗ ಈ ಯಾವ ಕರ್ಮವೂ ತನ್ನ ಸ್ವಾರ್ಥಕಾಗಿ ಮಾಡಿದ್ದಲ್ಲ. ಈ ಎಲ್ಲ ಕರ್ಮವೂ ಯಾತನಾಮಯ ಎನಿಸಿದರು ಅದರ ಫಲ ಮಾತ್ರ ಕಲ್ಯಾಣಪ್ರಧವಾಗಿಯೇ ಇರುತ್ತದೆ. ಈ ಕರ್ಮ , ವಿಕರ್ಮ ಮತ್ತು ಆಕರ್ಮಗಳನ್ನು ನಿರ್ಧಾರ ಮಾಡಬೇಕಾದರೆ ಆಳಕ್ಕೆ ಇಳಿದು ನಿರ್ಧರಿಸಬೇಕಾಗುತ್ತದೆ.
ಬುದ್ಧಿವಂತನಾದವನು ಹೊರಗೆ ಕಾಣುವ ತೋರಿಕೆಯನ್ನು ಬೇಧಿಸಿಕೊಂಡು ಇರುವ ಸ್ಪಷ್ಟ ಉದ್ದೇಶವನ್ನು ನೋಡುತ್ತಾನೆ. ಯಾರಿಗೆ ತನ್ನ ಮನಸ್ಸನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆಯೋ , ಅವನು ಇತರರನ್ನು ಚೆನ್ನಾಗಿ ತಿಳಿದು ಕೊಳ್ಳಬಲ್ಲ. ಅವನು ಮಾತ್ರ ಆಕರ್ಮದಲ್ಲಿ ಕರ್ಮವನ್ನು, ಕರ್ಮದಲ್ಲಿ ಆಕರ್ಮವನ್ನು ಗುರುತಿಸಬಲ್ಲ. ಅವನನ್ನು ಶ್ರೀ ಕೃಷ್ಣ ಬುದ್ಧಿವಂತ, ಯೋಗಿ ಎಂದು ಕರೆದು ಈತನು ಎಲ್ಲ ಕರ್ಮಗಳನ್ನು ಮಾಡುವವನಾಗುತ್ತಾನೆ ಎಂದು ಹೇಳಿರುವುದು.
ಪ್ರಾಯಶಃ ನಿಮ್ಮ ಸಂಶಯ ಪರಿಹಾರವಾಗಿದೆ ಎಂದು ಭಾವಿಸುತ್ತೇನೆ. ಧನ್ಯವಾದಗಳು.
ಹೆಚ್ ಏನ್ ಪ್ರಕಾಶ್