Pages

Wednesday, August 1, 2012

ನಿಜದ ಹಾದಿಯಲ್ಲಿ ಸಾಗೋಣ

ವೇದಸುಧೆಯ ಆತ್ಮೀಯ ಬಂಧುಗಳೇ,

           ನಮ್ಮ  ಆಚರಣೆಗಳ ಬಗ್ಗೆ ಆಳವಾಗಿ ಚಿಂತನೆ ನಡೆಸಿದಾಗ ರೂಢಿಯಲ್ಲಿರುವ ನಮ್ಮ  ಹಲವು ಆಚರಣೆಗಳಿಗೆ ಅರ್ಥವಿಲ್ಲದಿರುವುದು ಮನವರಿಕೆ ಯಾಗುತ್ತದೆ. ಆದರೂ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಆಚರಣೆಗಳನ್ನು  ಬಿಡಲು  ಬಲು ಕಷ್ಟ.   ಈ ಸ್ಥಿತಿಯಲ್ಲಿ ನನ್ನನ್ನೂ ಸೇರಿದಂತೆ ಹಲವರು ತೊಳಲಾಡುತ್ತಿರುವುದು ಸುಳ್ಳಲ್ಲ. . ಹಲವರೊಡನೆ ಮಾತುಕತೆನಡೆಸಿದಾಗ ನನಗೆ  ಈ ಸಂಗತಿ ಮನವರಿಕೆಯಾಗಿದೆ.ಇರಲಿ. ಕೆಲವರು ಸತ್ಯದ ಮಾರ್ಗದಲ್ಲಿ ಚಿಂತನಾಶೀಲರಾಗಿರುವುದು ಒಳ್ಳೆಯ ಲಕ್ಷಣ ವಂತೂ ಹೌದು. ನಿಜವ ತಿಳಿಯುವ ಹಾದಿಯಲ್ಲಿ  ಪಂಡಿತ್  ಶ್ರೀ ಸುಧಾಕರ ಚತುರ್ವೇದಿಯವರು ಮತ್ತು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಹಾಗೂ ಇನ್ನೂ  ಕೆಲವರು   ಬೆರೆಳೆಣಿಕೆಯಲ್ಲಿ ನಮಗೆ ಕಾಣುತ್ತಾರೆ.ಒಮ್ಮೊಮ್ಮೆ  ಸತ್ಯವನ್ನು  ಕೇಳುವಾಗ ನಮಗೆ ಬಲು ಮುಜುಗರವಾಗುತ್ತದೆ. ಕಾರಣ    ನಾವು ಹಲವು ವರ್ಷಗಳಿಂದ ಕೆಲವು ಆಚರಣೆಗಳಿಗೆ ಅಂಟಿಕೊಂಡಿದ್ದೇವೆ. ಅದು ತಪ್ಪೆಂದು ನಾನು ಭಾವಿಸುವುದಿಲ್ಲ. ನಮ್ಮ ಹಿರಿಯರು ಆಚರಣೆಯಲ್ಲಿ ತಂದದ್ದನ್ನು ನಾವು ಆಚರಿಸಿಕೊಂಡು    ಬಂದಿದ್ದೇವೆ. ಅದರಿಂದಾಗಿ ನೂರಾರು ವರ್ಷಗಳ ಅನ್ಯ ಮತೀಯರ ದಾಳಿಯಾದರೂ   ನಮ್ಮ ಸಂಸ್ಕೃತಿ-ಪರಂಪರೆಗಳು  ಸಾವಿರಾರು ವರ್ಷಗಳಿಂದ  ಗಟ್ಟಿಯಾಗಿಯೇ ನಿಂತಿವೆ.ನಮ್ಮದು ವೇದ ಉದಿಸಿದ ನಾಡು. ವೇದವನ್ನು ಎಲ್ಲರೂ ಒಪ್ಪುವವರೇ. ಆದರೆ ವೇದವನ್ನು ಕೇವಲ ಮಂತ್ರಗಳ ರೂಪದಲ್ಲಿ ಕೇಳಿ ಅನಂದಿಸುವ ನಾವು ಅದರ ಅರ್ಥವನ್ನು ತಿಳಿಯುವ  ಸರಿಯಾದ ಪ್ರಯತ್ನ ಮಾಡುವಲ್ಲಿ ಸೋತಿದ್ದೇವೆ. ಹಾಗಾಗಿ ನಮಗೆ ವೇದದ ಬಗ್ಗೆ ಒಲವಿದ್ದರೂ ಅರ್ಥವನ್ನು ಸರಿಯಾಗಿ ಅರಿಯದ ಕಾರಣ ವೇದಬಾಹಿರವಾದ ಹಲವು ಆಚರಣೆಗಳನ್ನು ನಾವು ಮುಂದುವರೆಸಿಕೊಂಡೇ ಬಂದಿದ್ದೇವೆ. ವಿವಾಹ,ಉಪನಯನ ಮುಂತಾದ ಸಂಸ್ಕಾರ ನೀಡುವ ಸಂದರ್ಭದಲ್ಲೂ  ಅನಗತ್ಯವಾದ, ಅರ್ಥವಿಲ್ಲದ ಹಲವು ಆಚರಣೆಗಳನ್ನು ರೂಢಿಮಾಡಿಕೊಂಡು  ಮುಂದುವರೆಸಿಕೊಂಡು ಬಂದಿದ್ದೇವೆ. ಅದರಲ್ಲಿ ಇತ್ತೀಚಿನ ಆಚರಣೆ ಗಳೆಂದರೆ "ವೀಡಿಯೋ ತೆಗೆಯುವುದು" . ಎಷ್ಟರಮಟ್ಟಿಗೆ  ಇದು ದುಷ್ಪರಿಣಾಮ ಬೀರುತ್ತಿದೆ ಎಂದರೆ ಎಲ್ಲಾ ಕಾರ್ಯಕ್ರಮಗಳೂ  ವೀಡಿಯೋಗಾಗಿಯೇ ನಡೆಯುತ್ತವೆ. ವೀಡಿಯೋದಲ್ಲಿ ಚೆನ್ನಾಗಿ ಕಾಣಬೇಕೆಂಬ ಕಾರಣ ಕ್ಕಾಗಿಯೇ ಮದುವೆಯ ದಿನ   ಪಾರ್ಲರ್ ಗಳಿಗೆ ಹೋಗಿ ವಿವಾಹ ಮಂಟಪದಲ್ಲಿ ಕೂರಬೇಕಾದ ವಧು ಅಲಂಕಾರ ಮಾಡಿಕೊಂಡು ಬರುತ್ತಾಳೆ. ಅವಳ ತಲೆಕೂದಲನ್ನು ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು, ಮುಖಕ್ಕೆಲ್ಲಾ ಬಣ್ಣ    ಬಳಿಸಿಕೊಂಡು, ತಲೆಗೂದಲನ್ನು ಡೈ ಮಾಡಿಕೊಂಡು ತಾನು ಚೆನ್ನಾಗಿಕಾಣುತ್ತಾಳೆಂದು ಕೊಳ್ಳುತ್ತಾಳೆ. ಮದುವೆಮನೆಯಲ್ಲಿ  ಪುರೋಹಿತರು ಮಾಡಿಸುವ ಶಾಸ್ತ್ರ ಮುಗಿದರೆ ಸಾಕು, ವೀಡಿಯೋ ಚಿತ್ರೀಕರಣಕ್ಕಾಗಿ ಎಲ್ಲರೂ    ಹಾತೊರೆಯುತ್ತಿರುತ್ತಾರೆ. ಇದು ಈಗ ನಡೆಯುತ್ತಿದೆ. ಮುಂದೆ ಇದೇ ಒಂದು ಆಚರಣೆಯಾಗಿ ಉಳಿಯುವುದಿಲ್ಲವೇ? 
ನಮ್ಮ ಹಿಂದಿನವರು ಮನುಷ್ಯನ ಉತ್ತಮ ಆರೋಗ್ಯಕರ ಬದುಕಿಗಾಗಿ ರಚಿಸಿದ ಶೋಡಷ ಕರ್ಮಗಳು ಅವುಗಳ ಅರ್ಥವನ್ನು ಕಳೆದುಕೊಳ್ಳುತ್ತಿಲ್ಲವೇ? ಒಮ್ಮೆ ನಾವು ನಮ್ಮ ಸಧ್ಯದ ಸಾಮಾಜಿಕ ಪರಿಸ್ಥಿತಿಯಲ್ಲಿ  ನಮ್ಮ ಕೌಟುಂಬಿಕ ನೆಮ್ಮದಿಯಬಗ್ಗೆ  ಆತ್ಮಾವಲೋಕನ ಮಾಡಿಕೊಳ್ಲ ಬೇಡವೇ? 
         ನಮ್ಮ ಮನೆಯಲ್ಲಿ ನೆಮ್ಮದಿಯ ವಾತಾವರಣ ಇದೆಯೇ? ಇದ್ದರೆ ಸಂತೋಷ. ನಾವು ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದೇವೆಂದೇ ಅರ್ಥ. ನೆಮ್ಮದಿ ಎಂಬುದು  ನಿಜವಾದ ಅರ್ಥ ಉಳ್ಳದ್ದಾಗಿರಲೂ ಬೇಕು. ಒಂದು ವೇಳೆ ನೆಮ್ಮದಿ ಕಮ್ಮಿಯಾಗಿದ್ದರೆ ಆಗ ನಮಗೆ ಪ್ರಶ್ನೆ ಹಾಕಿಕೊಳ್ಳೋಣ. ನಮ್ಮ ನೆಮ್ಮದಿಯನ್ನು ಹಾಳು ಮಾಡಿದ ಸಂಗತಿಗಳು ಯಾವುವು? ನಮ್ಮ ಜೀವನ ಕ್ರಮ ಸರಿಯಾಗಿದೆಯೇ? ನಮ್ಮ ನಿತ್ಯ ಕರ್ಮಗಳು, ನಮ್ಮ ದೈನಂದಿನ ಜೀವನ ಕ್ರಮವು ನಮ್ಮ ಆರೋಗ್ಯ ಪೂರ್ಣ   ಬದುಕಿಗೆ  ಪೂರಕವಾಗಿದೆಯೇ?
ಯಾಕೆ ಇಷ್ಟೆಲ್ಲಾ ಹೇಳುತ್ತಿದ್ದೀನೆಂದರೆ  ವೇದದಲ್ಲಿ ಇರುವುದೇ ನೆಮ್ಮದಿಯ   ಜೀವನ ನಡೆಸುವ ಕಲೆ. ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಂತವರು ಸಾಕಷ್ಟು ಅಧ್ಯಯನ ಮಾಡಿ  ವೇದ ಮಂತ್ರಗಳ ಅರ್ಥವನ್ನು ನಮಗೆ ಸರಳ ವಾದ ರೀತಿಯಲ್ಲಿ ತಿಳಿಸುತ್ತಿದ್ದಾರೆ. ಅವರ ವಿಚಾರಗಳಿಗೆ ವೇದಸುಧೆಯು ಬಹಳ ಪ್ರಾಮುಖ್ಯತೆ ಕೊಟ್ಟಿದೆ. ಕಳೆದ ಒಂದು ವರ್ಷದಿಂದ ಅನಾರೋಗ್ಯ ದಿಂದ ನೆರಳಿ ಈಗ ಚೇತರಿಸಿಕೊಂಡು ವೇದಸುಧೆಯ ಓದುಗರಿಗಾಗಿ ಒಂದಿಷ್ಟು ವಿಚಾರಗನ್ನು ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ "ಶರ್ಮರ ಪುಟ" ದಲ್ಲಿ  ಸಾಕಷ್ಟು  ವೇದಮಂತ್ರಗಳ    ಅರ್ಥವಿವರಣೆಯ ಆಡಿಯೋ ಗಳು ಪ್ರಕಟವಾಗಿವೆ. ಅವೆಲ್ಲವೂ ನಮ್ಮ ಜೀವನಕ್ಕೆ ಉಪಯುಕ್ತವೇ ಆಗಿದೆ. ಇಷ್ಟಾದರೂ ಒಂದು ವಿಚಾರವನ್ನು            ಸ್ಪಷ್ಟ ಪಡಿಸಲು ಇಚ್ಛಿಸುತ್ತೇನೆ. ಶರ್ಮರು ಕೆಲವು ನಿಷ್ಟುರ ಮಾತುಗ ನ್ನಾಡುತ್ತಾರೆ. ಅವುಗಳನ್ನು ವೇದಮಂತ್ರದ ಆಧಾರದಿಂದ ಸಮರ್ಥಿಸುತ್ತಾರೆ. ಆದರೆ ಅವರ  ಯಾವುದೇ ವಿಚಾರಗಳು ವೇದಬಾಹಿರವಾಗಿದೆ, ಎಂದು ಯಾವುದೇ ವೇದ ಪಂಡಿತರು ಭಾವಿಸಿದರೆ, ದಯಮಾಡಿ ಅವರು ಆಧಾರಸಹಿತವಾಗಿ ವೇದಸುಧೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ವಿನಂತಿಸುತ್ತೇನೆ. ಅದಕ್ಕಾಗಿ ಅವರು ವೇದಸುಧೆಗೆ  ಒಂದು ಮೇಲ್ ಕಳಿಸಿದರೂ ಕೂಡ ಅದನ್ನು ಪ್ರಕಟಿಸಲು ವೇದಸುಧೆಯು ಬದ್ಧವಾಗಿದೆ. ಪೂರ್ವಾಗ್ರಹವನ್ನು ಬಿಟ್ಟು ನಿಜದ ಹಾದಿಯಲ್ಲಿ ಸಾಗೋಣವೆಂದು ವೇದಸುಧೆಯು ಬಯಸುತ್ತದೆ.

2 comments:

  1. ನಮಸ್ತೆ ಶ್ರೀಧರ್ ಅವರೇ.. ಮೇಲಿನ ನಿಮ್ಮೆಲ್ಲ ಮಾತುಗಳೇ ಒಪ್ಪಿಕೊಳ್ಳುವಂತದ್ದೆ. ನಮ್ಮಲ್ಲಿ ಎಷ್ಟೋ ರೂಢಿಗಳು ಪದ್ಧತಿಯಾಗಿವೆ, ಆದರೆ ಜನರಿಗೆ ರೂಢಿ ಮತ್ತು ಪದ್ಧತಿಯಲ್ಲಿನ ವ್ಯತ್ಯಾಸವೇ ತಿಳಿದಿಲ್ಲ, ರೂಢಿ ಎಂದರೆ ತಲೆತಲಾಂತರಗಳಿಂದ ಬಂದಿದ್ದು ಪದ್ಧತಿ ಎಂದರೆ ವೇದ ಶಾಸ್ತ್ರ ಪುರಾಣಗಳಲ್ಲಿ ಹೇಳಿದ್ದು ಎಂದು. ನಾವು ಸಂಖ್ಯೆ ಮೂರನ್ನು ಅಶುಭವೆಂದು ತಿಳಿದಿದ್ದೇವೆ, ಆದರೆ ಮೂರು ಅಶುಭವೆಂದು ಎಲ್ಲಿಯೂ ಹೇಳಿಯೇ ಇಲ್ಲ. ಹಿಂದೂ ಸಂಸ್ಕೃತಿಯಲ್ಲಿ ಮತ್ತು ವೇದದಲ್ಲಿ ಎಲ್ಲವನ್ನೂ ಮೂರು ಬಾರಿ ಮಾಡಬೇಕೆಂದು ಹೇಳಿದ್ದಾರೆ.ಉದಾಹರಣೆಗೆ ವಿವಾಹದಲ್ಲಿ ವಧುವಿನ ತಂದೆ "ಪ್ರದಾಸ್ಯಾಮಿ" ಎಂದು ಮೂರು ಬಾರಿ ಹೇಳಬೇಕೆಂದೇ ಇದೆ. "ನ ಗಚ್ಚೆತ್ ಬ್ರಾಹ್ಮಣತ್ರಯಂ" ಇದೆ ಒಂದು ವಿಷಯದಲ್ಲಿ ಮಾತ್ರ ಮೂರು ಜನ ಒಟ್ಟಿಗೆ ಹೋಗಬಾರದು ಎಂದು ಇರುವುದು. ಈ ವಿಷಯವಾಗಿ ಹೇಳಹೋದರೆ ಎಷ್ಟೋ ರೂಢಿಗಳು ಇವೆ ಅದು ಈಗ ಶಾಸ್ತ್ರದಲ್ಲಿ ಹೇಳಿದಂತೆಯೇ ಆಗಿಬಿಟ್ಟಿವೆ. ವಿವಾಹ ಉಪನಯನದಲ್ಲಂತೂ ಈ ರೂಢಿಗಳು ಸದಾ ನಮ್ಮ ತಲೆ ತಿನ್ನುತ್ತವೆ.. ಊರಿಂದ ಊರಿಗೆ ಹೋದಂತೆ ಈ ರೂಢಿಗಳು ಬದಲಾಗುತ್ತವೆ.. ಇವೆಲ್ಲ ಒಂದು ವಿಷಯವಾದರೆ ನೀವು ಹೇಳಿದಂತೆ ಸಮಾರಂಭಗಳಲ್ಲಿ ವೀಡಿಯೊ ಶೂಟಿಂಗ್ ಗಳಿಗೆ ಇತ್ತೀಚಿಗೆ ವಿಶೇಷ ಆದ್ಯತೆ ನೀಡಿರುವುದು ವಿಷಾದದ ಸಂಗತಿ. ಪುರೋಹಿತರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡುವ ಆಸೆಯಿದ್ದರೂ ತೆಪ್ಪಗಿರಬೇಕಾಗುತ್ತದೆ. ಷೋಢಶ ಸಂಸ್ಕಾರಗಳ ಕುರಿತು ಜನರಿಗೆ ಎಷ್ಟು ತಿಳಿಹೇಳಿದರೂ ಅದನ್ನ ಮಾಡಲು ಏನೋ ಮುಜುಗರ ನಮ್ಮವರಿಗೆ. ಇತ್ತೀಚಿಗೆ ಕೇವಲ ಜ್ಯೋತಿಷಿಗಳ ಸಲಹೆಯ ಮೇರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆಯೇ ಹೊರತು ಮನಬಂದು ಪುಷ್ಟಿ ಕರ್ಮ ಮಾಡುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಪುಣೆಯಲ್ಲಿ ಒಮ್ಮೆ ಸಂಪೂರ್ಣ ವೇದದ ಅರ್ಥ ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಮೊದಲೆರಡು ದಿನ ಸ್ವಲ್ಪ ಜನರಿದ್ದರು ಬಿಟ್ಟರೆ ಮುಂದೆ ಅದನ್ನ ಕೇಳುವವರೇ ಇಲ್ಲದಂತಾಗಿತ್ತು.ಇತ್ತೇಚೆಗೆ ಜನರಿಗೆ ರೂಢಿಗಳಲ್ಲಿಯೇ ನಂಬಿಕೆಯಿದೆ ಹೊರತು ವೇದದಲ್ಲಿ ಹೇಳಿದ ಮಂತ್ರಗಳಿಗಲ್ಲ.. ವೇದದಲ್ಲಿ ಹೇಳಿದ ಕೆಲವು ವಿಷಯಗಳು ನಂಬಲರ್ಹ ಅಂತ ಅನಿಸಿದರೂ ಅದು ನಿಜ.. ಇದು ಎಲ್ಲಿಂದ ಎಲ್ಲಿಗೆ ತಲುಪುವುದೋ ಹೇಳಲಸಾಧ್ಯ..

    ReplyDelete
  2. ಮಾನ್ಯರೇ, ಸಾಮಾನ್ಯವಾಗಿ ನಾವುಗಳು ಹಿರಿಯರು ಹೇಳಿದರನ್ತಲೋ, ಮೊದಲಿನಿಂದಲೂ
    ಆಚರಿಸುತ್ತಿದ್ದೇವೆ ಎಂದೋ, ಕೆಲವು ಆಚರಣೆಗಳನ್ನು ನಡೆಸುತ್ತಬಂದಿರುತ್ತೇವೆ. ಯಾವುದೇ
    ಕಾರ್ಯ ಮಾಡಬೇಕಾದರೂ ಸಹ ಪುರೋಹಿತರು ಹೇಳುವ ಮಂತ್ರಗಳನ್ನು ಕೇವಲ ಕೇಳುತ್ತೇವೆ. ಅದು
    ನಮಗೆ ಅರ್ಥವಾಗುವುದಿಲ್ಲ. ಅವರು ಹೇಳಿಕೊಟ್ಟಂತೆ ಮಾಡುತ್ತೇವೆ. ಎಂತಹ
    ವಿದ್ಯಾವಂತರಾದ್ರೂ ಸಹ ಸಂಸ್ಕೃತ ಬಾರದ ಕಾರಣ. ಅರ್ಥವಾಗುವುದಿಲ್ಲ.
    ಪ್ರಸ್ತುತ ಇದು ಒಳ್ಳೆಯ ಕಾರ್ಯಕ್ರಮ. ತಿಳಿದವರು ತಪ್ಪುಗಳನ್ನು ತಿಳಿಸಿ ಹೇಳಿದರೆ.
    ತಿಳಿಯದವರು ತಿಳಿದುಕೊಂಡು ತಪ್ಪನ್ನು ತಿದ್ದಿಕೊಳ್ಳಬಹುದು. ಮುಂದಿನ ಪೀಳಿಗೆಗೂ
    ತಿಳಿಸಬಹುದು. ಅಲ್ಲವೇ?
    -Nanjunda Raju

    ReplyDelete