ನ್ಯಾಯ
ದರ್ಶನ
ಪರಿಚಯ:
ಭಾರತೀಯ
ತತ್ವಜ್ಞಾನದಲ್ಲಿ ಆಸ್ತಿಕ (ವೇದಗಳನ್ನು ಒಪ್ಪಿಕೊಳ್ಳುವ) ದರ್ಶನೆಗಳೆಂದು ವರ್ಗೀಕರಿಸಲ್ಪಟ್ಟಿರುವ
ಆರು ದರ್ಶನಗಳಲ್ಲಿ ಗೋತಮ ಅಥವಾ ಗೌತಮ(ಕ್ರಿ.ಪೂ.೫೫೦)ನು ಪ್ರತಿಪಾದಿಸಿದ 'ಅಕ್ಷಪಾದ' ಎಂದೂ ಕರೆಯಲ್ಪಡುವ 'ನ್ಯಾಯ ದರ್ಶನ' ಮೊದಲಿನದು. (ವೇದಗಳನ್ನು
ಒಪ್ಪಿಕೊಳ್ಳದಿದ್ದವರನ್ನು ನಾಸ್ತಿಕರೆಂದು ಕರೆದರೇ ವಿನಹ ದೇವರನ್ನು ಒಪ್ಪಿಕೊಳ್ಳದಿದ್ದವರನ್ನಲ್ಲ
ಎನ್ನುವುದನ್ನು ಗಮನಿಸಿ.) ಕೆಲವೊಮ್ಮೆ ನ್ಯಾಯ ದರ್ಶನವನ್ನು ಉಲೂಕ ಅಥವಾ ಕಣಾದನ (ಕ್ರಿ.ಪೂ. ೬೦೦ ) 'ವೈಶೇಷಿಕ ದರ್ಶನ'ದೊಂದಿಗೆ ಒಂದೇ ಆಗಿ ಗುರುತಿಸಿದರೂ ಕೂಡ 'ನ್ಯಾಯ
ದರ್ಶನ'ಕ್ಕೆ ತನ್ನದೇ ಆದ ಪ್ರತ್ಯೇಕತೆಯಿದೆ. ಆದ್ದರಿಂದ ಇದನ್ನು ಬೇರೆ ಮತ್ತು ಸ್ವತಂತ್ರ ತತ್ವವಾಗಿ
ತಿಳಿದುಕೊಳ್ಳುವುದು ಒಳಿತು.
ಎಲ್ಲಾ ಭಾರತೀಯ ತತ್ವಶಾಸ್ತ್ರಗಳು ಪ್ರಮುಖವಾಗಿ
ಎರಡು ವಿಷಯಗಳ ಬಗ್ಗೆ ಅಧ್ಯಯನವನ್ನು ಕೈಗೊಳ್ಳುತ್ತವೆ. ಅವೆಂದರೆ 'ಪ್ರಮಾಣ'ಗಳು ಮತ್ತು 'ಪ್ರಮೇಯ'ಗಳು.
'ಪ್ರಮಾಣ'ಗಳೆಂದರೆ ನಂಬಲರ್ಹವಾದ ಜ್ಞಾನಗಳ ಮೂಲ ಮತ್ತು 'ಪ್ರಮೇಯ'ಗಳೆಂದರೆ ಅವುಗಳಿಂದ ಹೊಂದಬೇಕಾದ
ವಸ್ತುಗಳು.
ನ್ಯಾಯ ದರ್ಶನವು ಪ್ರಮಾಣಗಳಿಗೆ ಆದ್ಯತೆಯನ್ನು ಕೊಟ್ಟದ್ದರಿಂದ
ಅವುಗಳನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿ, ಭಾರತೀಯ ತತ್ವಶಾಸ್ತ್ರ ಚಿಂತನೆಗೆ ಭದ್ರವಾದ ಅಡಿಪಾಯವನ್ನು
ಹಾಕಿತು. ಆದ್ದರಿಂದ ಅದನ್ನು 'ನ್ಯಾಯವಿದ್ಯಾ', 'ತರ್ಕಶಾಸ್ತ್ರ' , ’ಆನ್ವೀಕ್ಷಕೀ' ಮೊದಲಾದ ಹೆಸರುಗಳಿಂದ ಕರೆದಿದ್ದಾರೆ.
ಸಾಹಿತ್ಯ:
ಗೌತಮನ 'ನ್ಯಾಯಸೂತ್ರ'ಗಳು ಈ ವಿಧಾನಕ್ಕೆ ಮೂಲಗ್ರಂಥವೆಂದು
ಪರಿಗಣಿಸಲ್ಪಟ್ಟಿದೆ. ಈ ಗ್ರಂಥವು ಐದು ಅಧ್ಯಾಯಗಳನ್ನೊಳಗೊಂಡು, ಪ್ರತಿಯೊಂದು ಅಧ್ಯಾಯವು ಎರಡೆರಡು
ಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಒಟ್ಟು ೫೨೮ ಸೂತ್ರಗಳು ಈ ಗ್ರಂಥದಲ್ಲಿ
ನಮಗೆ ದೊರೆಯುತ್ತವೆ. ಈ ಗ್ರಂಥಕ್ಕೆ ಭಾಷ್ಯ ಅಥವಾ ವ್ಯಾಖ್ಯಾನವನ್ನು ವಾಯನನು (ಕ್ರಿ.ಶ ೪೦೦) ಬರೆದಿರುತ್ತಾನೆ. ಉದ್ಯೋತಕರ (ಕ್ರಿ.ಶ.೭೦೦) ಎನ್ನುವವನು
ನ್ಯಾಯ ಭಾಷ್ಯಕ್ಕೆ 'ನ್ಯಾಯವಾರ್ತಿಕ' ಎನ್ನುವ ಉಪಭಾಷ್ಯವನ್ನು ಬರೆದಿದ್ದರೆ; ವಾಚಸ್ಪತಿ (ಕ್ರಿ.ಶ.೮೪೧) ನ್ಯಾಯಸೂತ್ರಗಳನ್ನು ಇನ್ನಷ್ಟು ವಿಶದ ಪಡಿಸಿ ಅದಕ್ಕೆ 'ತಾತ್ಪರ್ಯಟೀಕಾ'ವನ್ನು
ಬರೆದಿದ್ದಾನೆ. ಈ ಭಾಷ್ಯಗಳಿಗೆ ಅಂತಿಮ ಟಿಪ್ಪಣಿಯಾಗಿ ಉದಯನನು (ಕ್ರಿ.ಶ.೯೮೪)
'ತಾತ್ಪರ್ಯಟೀಕಾ ಪರಿಶುದ್ದಿ'ಯನ್ನು ಬರೆದಿದ್ದಾನೆ ಮತ್ತು ಅವನೇ ಇನ್ನೊಂದು ಕೃತಿ ಕುಸುಮಾಂಜಲಿಯನ್ನು
ರಚಿಸಿದ್ದಾನೆ. ಜಯಂತನ (ಕ್ರಿ.ಶ. ೮೮೦) 'ನ್ಯಾಯ ಮಂಜರಿ' ಮತ್ತು ಗಣೇಶನ
(ಕ್ರಿ.ಶ.೧೨೦೦) 'ತತ್ವಚಿಂತಾಮಣಿ' ಇವುಗಳು ಕೂಡ ಇಲ್ಲಿ ಉಲ್ಲೇಖಾರ್ಹವಾಗಿವೆ.
ಗಣೇಶನ 'ತತ್ವಚಿಂತಾಮಣಿ'ಯು ಹೊಸದಾದ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ಆಧುನಿಕ ದರ್ಶನವೊಂದಕ್ಕೆ
ದಾರಿಮಾಡಿಕೊಟ್ಟಿತು, ಅದನ್ನೇ "ನವ್ಯ-ನ್ಯಾಯ" ಪದ್ದತಿಯೆನ್ನುತ್ತಾರೆ. ಈ ಪದ್ದತಿಯು ಬಂಗಾಲ
ದೇಶದ ನವದ್ವೀಪವನ್ನು ಕೇಂದ್ರವಾಗಿರಿಸಿಕೊಂಡು ಅಭಿವೃದ್ಧಿ ಹೊಂದಿತು.
ಉಲ್ಲೇಖಾರ್ಹವಾದ ಇತರ ಗ್ರಂಥಗಳೆಂದರೆ: ಅಣ್ಣಮಭಟ್ಟನ
(ಕ್ರಿ.ಶ. ೧೬೫೦) 'ತರ್ಕಸಂಗ್ರಹ' ಮತ್ತು ವಿಶ್ವನಾಥ (ಕ್ರಿ.ಶ. ೧೬೫೦) ವಿರಚಿತ 'ಕಾರಿಕಾವಳಿ' ಅಥವಾ 'ಭಾಷಾಪರಿಚ್ಛೇದ' ಮತ್ತು ಅವಕ್ಕೆ ಬರೆದ 'ದೀಪಿಕಾ'
ಮತ್ತು 'ಸಿದ್ಧಾಂತ ಮುಕ್ತಾವಳಿ' ಎನ್ನುವ ಭಾಷ್ಯಗಳು.
ಹದಿನಾರು ಪದಾರ್ಥಗಳು:
ನ್ಯಾಯ ಪದ್ದತಿಯು ಹದಿನಾರು 'ಪದಾರ್ಥ' ಅಥವಾ ವಿಷಯಗಳನ್ನು
ಪ್ರತಿಪಾದಿಸಿ ಅವುಗಳನ್ನು ವಿಶದ ಪಡಿಸುತ್ತದೆ. ಅವುಗಳ ಒಂದು ಸ್ಥೂಲ ಪರಿಚಯವನ್ನು ಇಲ್ಲಿ ಮಾಡಿಕೊಳ್ಳಲು
ಪ್ರಯತ್ನಿಸಬಹುದು.
ಆ ಹದಿನಾರು ವಿಷಯಗಳು ಯಾವುವೆಂದರೆ: ಪ್ರಮಾಣಗಳು
(ನೈಜ ಜ್ಞಾನದ ಮೂಲಗಳು), ಪ್ರಮೇಯಗಳು (ನೈಜ ಜ್ಞಾನದ ಮೂಲಕ ತಿಳಿಯಬೇಕಾದ ವಿಷಯಗಳು), ಸಂಶಯ (ಶಂಕೆ),
ಪ್ರಯೋಜನ (ಉಪಯೋಗ ಅಥವಾ ಅಂತಿಮ ಉದ್ದೇಶ), ದೃಷ್ಟಾಂತ (ಉದಾಹರಣೆ/ನಿದರ್ಶನ), ಸಿದ್ಧಾಂತ (ತತ್ವ),
ಅವಯವ (ಅಂಗಗಳು), ತರ್ಕ (ಕ್ರಮಬದ್ಧ ಆಲೋಚನಾ ಸರಣಿ), ನಿರ್ಣಯ (ನಿರ್ಧಾರ), ವಾದ (ನಿಜವನ್ನು ತಿಳಿಯಲು
ಪ್ರತಿಪಾದಿಸುವ ಮಾತುಕತೆ), ಜಲ್ಪ (ಕೇವಲ ವಾದವನ್ನು ಗೆಲ್ಲಲ್ಲು ಮಾಡುವ ಹುನ್ನಾರ), ವಿತಂಡ (ವಿನಾಶಕಾರಕ
ಟೀಕೆ), ಹೇತ್ವಾಭಾಸ (ಮೇಲ್ನೋಟಕ್ಕೆ ಸರಿಯೆನಿಸಿದರೂ ಸರಿಯಲ್ಲದ ಕಾರಣ), ಛಲ (ಅಸಮಂಜಸ ಉತ್ತರ), ಜಾತಿ
(ತಪ್ಪು ತಿಳುವಳಿಕೆ ಅಥವಾ ವಿಶ್ಲೇಷಣೆ) ಮತ್ತು ನಿಗ್ರಹಸ್ಥಾನ (ವಾದದಲ್ಲಿ ಸೋಲನ್ನು ನಿರ್ಣಯಿಸುವ
ಒಂದು ಹಂತ).
ಅವುಗಳಲ್ಲಿ ಕೆಲವನ್ನು ಇಲ್ಲಿ ಸ್ಥೂಲವಾಗಿ ತಿಳಿದುಕೊಳ್ಳಬಹುದು.
ನ್ಯಾಯ ದರ್ಶನವು ನಾಲ್ಕು ರೀತಿಯ ಪ್ರಮಾಣಗಳನ್ನು ಒಪ್ಪಿಕೊಳ್ಳುತ್ತದೆ: ಪ್ರತ್ಯಕ್ಷ (ನೇರವಾದ ಅನುಭವ),
ಅನುಮಾನ (ನಿಷ್ಕರ್ಷೆ ಅಥವಾ ಕ್ರಮಬದ್ಧ ಜ್ಞಾನ), ಉಪಮಾನ (ಹೋಲಿಕೆ) ಮತ್ತು ಶಬ್ದ (ನುಡಿ ಸಾಕ್ಷ್ಯ)ಗಳು.
(ಶಬ್ದ ಪ್ರಮಾಣವನ್ನು 'ವಾಕ್ಯ ಪ್ರಮಾಣ' ಎಂದೂ ಕರೆಯುತ್ತಾರೆ ಇಲ್ಲಿ ಶಬ್ದವೆಂದರೆ ಶ್ರುತಿಯೆಂದೂ ಮತ್ತು
ವಾಕ್ಯಗಳು ಎಂದರೆ ಶ್ರುತಿಗಳಿಂದ ಉದಾಹರಿಸಿದ ವಾಕ್ಯ/ಸೂತ್ರ/ನುಡಿಗಟ್ಟುಗಳು ಎಂದು ತಿಳಿಯಬೇಕು.)
ಪ್ರಮೇಯಗಳು ಯಾವುವೆಂದರೆ: ಆತ್ಮ, ಶರೀರ, ಜ್ಞಾನೇಂದ್ರಿಯಗಳು
(ಜ್ಞಾನಕ್ಕೆ ಕಾರಣವಾದ ಕಣ್ಣು, ಕಿವಿ ಮೊದಲಾದ ಪಂಚೇಂದ್ರಿಯಗಳು), ವಿಷಯಗಳು (ಪಂಚೇಂದ್ರಿಯಗಳ ಲಕ್ಷ್ಯಗಳು/ವಿಷಯಗಳು
- ಬಣ್ಣ, ರೂಪ ಮುಂತಾದವುಗಳು), ಬುದ್ಧಿ (ಅರಿವು ಅಥವಾ ಜ್ಞಾನ), ಉಪಲಬ್ಧಿ (ದುಗುಡ/ಉದ್ವೇಗ/ಆತಂಕ),
ಮನಸ್(ಮನಸ್ಸು), ಪ್ರವೃತ್ತಿ (ಚಟುವಟಿಕೆ); ದೋಷ (ಮಾನಸಿಕ ನ್ಯೂನ್ಯತೆಗಳಾದ ರಾಗ, ದ್ವೇಷಗಳು ಅಥವಾ
ಅನುರಕ್ತಿ ಮತ್ತು ವ್ಯತಿರಿಕ್ತ ಭಾವಗಳು); ಪ್ರೇತ್ಯಭಾವ (ಪುನರ್ಜನ್ಮ); ಫಲ (ಪ್ರವೃತ್ತಿ ಅಥವಾ ಚಟುವಟಿಕೆಯಿಂದ
ಲಬ್ದವಾದದ್ದು - ನೋವು ಮತ್ತು ನಲಿವುಗಳು); ದುಃಖ (ಯಾತನೆ); ಮತ್ತು ಅಪವರ್ಗ (ಯಾತನೆಯಿಂದ ಸಂಪೂರ್ಣ
ಮುಕ್ತಿ).
ಮಾನವನ ಅಂತಿಮ ಗುರಿ ದುಃಖದಿಂದ ಸಂಪೂರ್ಣ ಬಿಡುಗಡೆ
ಪಡೆಯುವುದು ಅಂದರೆ 'ಅಪವರ್ಗ' ಅಥವಾ ಮೋಕ್ಷದ ಸ್ಥಿತಿಯನ್ನು ಹೊಂದುವುದು. ನಮಗೆ ಯಾವಾಗ 'ಅಪವರ್ಗ'
ಮತ್ತು ಇತರ ಅವಶ್ಯ ವಿಷಯಗಳ ಬಗೆಗೆ ತತ್ವಜ್ಞಾನ ಅಥವಾ ನಿಜವಾದ ಜ್ಞಾನ ಉಂಟಾಗುತ್ತದೆಯೋ ಆವಾಗ ಮಾತ್ರ
ನಾವು 'ಅಪವರ್ಗ'ದ ಸ್ಥಿತಿಯನ್ನು ಹೊಂದಬಹುದು. 'ಅಪವರ್ಗ' ಅಥವಾ ಮೋಕ್ಷವನ್ನು ಹೊಂದಲು ನಾವು 'ವೇದಾಂತ'
ಮೊದಲಾದ ಇತರ ಪ್ರಸಿದ್ಧ ದರ್ಶನಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ 'ಶ್ರವಣ' (ಶ್ರುತಿಗಳ ಬಗ್ಗೆ ತಿಳಿದುಕೊಳ್ಳುವುದು), 'ಮನನ'
(ಅವುಗಳ ಬಗ್ಗೆ ಆಲೋಚಿಸುವುದು) ಮತ್ತು 'ನಿದಿಧ್ಯಾಸನ' (ಧ್ಯಾನ) ಮೊದಲಾದ ವಿವಿಧ ಹಂತಗಳನ್ನು ಅನುಸರಿಸಬೇಕು.
ಹದಿನಾರು ಪದಾರ್ಥಗಳ ಉದ್ದನೆಯ ಪಟ್ಟಿಯಲ್ಲಿರುವ ಸಂಶಯ (ಶಂಕೆ), ದೃಷ್ಠಾಂತ (ಉದಾಹರಣೆ), ತರ್ಕ (ಕ್ರಮಬದ್ಧ
ಆಲೋಚನಾ ಸರಣಿ), ನಿರ್ಣಯ (ನಿರ್ಧಾರ) ಮತ್ತು ವಾದ (ನಿಜವನ್ನು ತಿಳಿಯಲು ಪ್ರತಿಪಾದಿಸುವ ಮಾತುಕತೆ) ಮುಂತಾದವುಗಳು 'ಕಾರ್ಯ ಮತ್ತು ಕಾರಣ'ಗಳ ಸರಣಿಯ ವಿವಿಧ ಮುಖಗಳು
ಹಾಗೂ ಸತ್ಯಾನ್ವೇಷಣೆಯ ಮಾರ್ಗ ಮತ್ತು ನಿಜವಾದ ಸತ್ಯ ಇವುಗಳನ್ನು ಅರಿಯುವಲ್ಲಿ ಸಹಾಯಕವಾಗುತ್ತವೆ.
ಹೀಗೆ ವಿವಿಧ ಹಂತಗಳನ್ನು ನಾವು ಹಾದುಹೋದಾಗ ಅದು
ನಮ್ಮನ್ನು ನ್ಯಾಯ ದರ್ಶನದಲ್ಲಿ ಪ್ರತಿಪಾದಿಸಲ್ಪಟ್ಟಿರುವ ಜ್ಞಾನದ ಸಿದ್ಧಾಂತದೆಡೆಗೆ ಕೊಂಡೊಯ್ಯುತ್ತದೆ.
ನ್ಯಾಯ ದರ್ಶನದ ಜ್ಞಾನ
ಸಿದ್ದಾಂತ:
ಒಂದು ವಸ್ತುವಿನ ನೈಜ ಸ್ವರೂಪ ಅಥವಾ ಆ ವಸ್ತುವಿನ
ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಬೇಕಾದರೆ ಅದನ್ನು ಪಡೆಯಲು ಸರಿಯಾದ ಮಾರ್ಗವನ್ನು ಅನುಸರಿಸಬೇಕು
ಮತ್ತು ಆ ಮಾರ್ಗದ ಬಗ್ಗೆ ಸರಿಯಾದ ತಿಳುವಳಿಕೆ ಕೂಡ ಆವಶ್ಯಕ.
ಜ್ಞಾನ ಸಿದ್ಧಾಂತವನ್ನು ನಾಲ್ಕು ಪ್ರತ್ಯೇಕ ಮತ್ತು
ವಿಭಿನ್ನವಾದ ನೈಜ ಜ್ಞಾನಮೂಲದ ವಿಧಾನಗಳ (ಪ್ರಮಾಣಗಳ) ಮೂಲಕ ಹೊಂದಬಹುದೆಂದು ನ್ಯಾಯ ದರ್ಶನವು ಪ್ರತಿಪಾದಿಸುತ್ತದೆ.
ಅವು ಯಾವುವೆಂದರೆ:
1) ಪ್ರತ್ಯಕ್ಷ
(ನೇರವಾದ ಅನುಭವ)
2) ಅನುಮಾನ (ಕ್ರಮಬದ್ಧ
ನಿಷ್ಕರ್ಷೆ/ಊಹೆ)
3) ಉಪಮಾನ (ಹೋಲಿಕೆ
ಅಥವಾ ದೃಷ್ಟಾಂತ/ಉದಾಹರಣೆ)
4) ಶಬ್ದ (ವಾಕ್ಯ
ಪ್ರಮಾಣ)
ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು;
ಅದೇನೆಂದರೆ ಈ ನಾಲ್ಕು ಪ್ರಮಾಣಗಳನ್ನು ನಾವು ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ಅವು "ಪ್ರಮಾ"
ಅಥವಾ "ನಿಬದ್ಧವಾದ ಜ್ಞಾನ" (ನಿಜವಾದ ಜ್ಞಾನ) ಇವುಗಳನ್ನು ನೀಡುತ್ತವೆ. ಇಲ್ಲಿ ನಾವು
ಪಡೆಯುವ ಜ್ಞಾನವು ಸ್ಮೃತಿ (ನೆನಪು), ಸಂಶಯ (ಶಂಕೆ) ಯಾ ಭ್ರಮೆ (ತಪ್ಪು ಗ್ರಹಿಕೆ) ಅಥವಾ ಹದಿನಾರು
ಪದಾರ್ಥಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಇತರೇ ವಿಷಯಗಳಿಂದ ಉಂಟಾಗುವ "ಅಪ್ರಮಾ" ಅಥವಾ
ಅಬದ್ಧ/ಸುಳ್ಳು ಜ್ಞಾನವಲ್ಲವೆನ್ನುವುದನ್ನು ಅರಿಯಬೇಕು. ಮತ್ತು ನಿಜವಾದ ಜ್ಞಾನವೆನ್ನುವುದು ವಸ್ತುವಿನ
ನೈಜ ಸ್ವರೂಪವನ್ನು ಪ್ರಚುರಪಡಿಸುತ್ತದೆನ್ನುವುದನ್ನು ಮರೆಯಬಾರದು.
ಈ ನಾಲ್ಕು ಪ್ರಮಾಣಗಳನ್ನು ಈಗ ಒಂದೊಂದಾಗಿ ತಿಳಿಯಲು
ಪ್ರಯತ್ನಿಸೋಣ.
1) ಪ್ರತ್ಯಕ್ಷ (ನೇರವಾದ ಅನುಭವ):
ಪ್ರಚೋದನೆಗೆ ಸ್ಪಂದಿಸುವ ಯಾವುದೋ ಒಂದು ಇಂದ್ರಿಯವನ್ನು
ತೆಗೆದುಕೊಳ್ಳೋಣ - ಉದಾಹರಣೆಗೆ, ಕಣ್ಣು ಒಂದು ಮೇಜನ್ನು ನೋಡುತ್ತದೆ ಎಂದು ಇಟ್ಟುಕೊಳ್ಳೋಣ. ಆಗ ಕಣ್ಣಿಗೆ
ಮೇಜಿನ ಬಗ್ಗೆ ಅಭಿವ್ಯಕ್ತಗೊಳ್ಳುವುದು ನಿಜವಾದ, ಸ್ಪಷ್ಟವಾದ ಮತ್ತು ಮಸುಕಾಗಿಲ್ಲದ ಜ್ಞಾನ. ದೂರದಲ್ಲಿ
ಕಾಣುವ ಒಂದು ಮರದ ಗೂಟವನ್ನು ನೋಡಿ ಅದು ಮನುಷ್ಯನೋ ಅಥವಾ ಗೂಟವೋ ಎಂದು 'ಸಂಶಯ'ಗೊಳ್ಳುವುದು ಮತ್ತು
ಮಂದ ಬೆಳಕಿನಲ್ಲಿ ತುಂಡು ಹಗ್ಗವನ್ನು ನೋಡಿ ನಿಜವಾದ ಹಾವೆಂದು ಭಾವಿಸುವ 'ಭ್ರಮೆ' ಇವುಗಳಿಂದ ಹೊರತಾದದ್ದು
ನಿಜವಾದ ಅಥವಾ ನಿಬದ್ದವಾದ ಜ್ಞಾನ. ಇಲ್ಲಿ ಎರಡೂ ಪ್ರತ್ಯಕ್ಷ ಅನುಭವಗಳಾದರೂ ಕೂಡ ಅವು ಅಬದ್ಧತೆಯಿಂದ
ಕೂಡಿವೆ.
ಮನಸ್ಸಿನ ಒಳಗಡೆ ಅನುಭವಿಸುವ ನೋವು ಅಥವಾ ನಲಿವು
ಇವುಗಳನ್ನು ಕೂಡ ಪ್ರತ್ಯಕ್ಷ ಪ್ರಮಾಣದ ವರ್ಗಕ್ಕೆ ಸೇರಿಸಬಹುದು. ಉನ್ನತವಾದ ಆಧ್ಯಾತ್ಮಿಕ ಸಾಧನೆಯನ್ನು
ಕೈಗೊಂಡ ಯೋಗಿಗಳ ಅತೀಂದ್ರಿಯ ಅನುಭವ (ಇಂದ್ರಿಯಗಳಿಗೆ ಗೋಚರವಲ್ಲದ ಅನುಭವ) ಮತ್ತು ಅಂತರಾತ್ಮದ ಗ್ರಹಿಕೆ
(Intuition/ಒಳ ಅರಿವು) ಇವುಗಳನ್ನು ಕೂಡ ಪ್ರತ್ಯಕ್ಷ ಪ್ರಮಾಣಕ್ಕೆ ಸೇರಿಸಬಹುದು. ಈ ಅನುಭವಗಳನ್ನು
'ಯೋಗಜ' ಅಥವಾ 'ಯೋಗಿಪ್ರತ್ಯಕ್ಷ' ಎಂದು ಕರೆಯುತ್ತಾರೆ.
2) ಅನುಮಾನ
(ಕ್ರಮಬದ್ಧ ನಿಷ್ಕರ್ಷೆ/ಊಹೆ):
ಅನುಮಾನ ಎನ್ನುವುದರ ಶಬ್ದಶಃ ಅರ್ಥವನ್ನು ಹೀಗೆ
ವಿವರಿಸಬಹುದು, 'ಮಾನ' ಎಂದರೆ ಜ್ಞಾನ ಮತ್ತು 'ಅನು' ಎಂದರೆ ಇನ್ನೊಂದನ್ನು ಅನುಸರಿಸುವುದು. ಒಟ್ಟಾರೆಯಾಗಿ
ಅನುಮಾನವೆಂದರೆ ಒಂದು ವಸ್ತುವಿನ ಜ್ಞಾನವನ್ನು ಅನುಸರಿಸಿ ಇನ್ನೊಂದು ವಸ್ತುವಿನ ಜ್ಞಾನವನ್ನು ಪಡೆಯುವುದು.
ಅನುಮಾನದಿಂದ ಹೊಂದಲ್ಪಡುವ ಜ್ಞಾನಕ್ಕೆ ಸಾಮಾನ್ಯವಾಗಿ ಕೊಡುವ ಉದಾಹರಣೆ ಎಂದರೆ ದೂರದಲ್ಲಿರುವ ಬೆಟ್ಟದಲ್ಲಿ
ಕಂಡುಬರುವ ಹೊಗೆಯಿಂದ ಅಲ್ಲಿ ಬೆಂಕಿ ಇದೆ ಎಂದು ತಿಳಿಯುವುದು; ಅಲ್ಲಿ ಬೆಂಕಿಯು ಪ್ರತ್ಯಕ್ಷವಾಗಿ ಕಾಣದಿದ್ದರೂ
ಕೂಡ.
ಅನುಮಾನದ ವಿಧಾನವನ್ನು ಈ ರೀತಿಯಾಗಿ ವಿವರಿಸಬಹುದು.
ಆ ಬೆಟ್ಟದ ಮೇಲೆ ಬೆಂಕಿ ಇದೆ; ಏಕೆಂದರೆ ಅಲ್ಲಿ ಹೊಗೆ ಉಗುಳಲ್ಪಡುತ್ತಿದೆ. ಬೇರೆ ಕಡೆಗಳಲ್ಲಿ ಎಲ್ಲೆಲ್ಲಿ
ಹೊಗೆ ಕಾಣಿಸಿಕೊಳ್ಳುತ್ತದೆಯೋ ಅಲ್ಲೆಲ್ಲಾ ಬೆಂಕಿ ಇರುತ್ತದೆ; ಉದಾಹರಣೆಗೆ ಅಡಿಗೆ ಮನೆ. ಈ ವಿಧಾನವನ್ನು
ವಿವರಿಸುವಾಗ ನ್ಯಾಯ ಶಾಸ್ತ್ರಗಳು ಕೆಲವೊಂದು ತಾಂತ್ರಿಕ ಪದಗಳನ್ನು ಉಪಯೋಗಿಸುತ್ತವೆ. ಇಲ್ಲಿ ಬೆಂಕಿ
ಇರುವುದನ್ನು ನಿರೂಪಿಸ ಬೇಕಾಗಿರುವುದರಿಂದ ಅದನ್ನು 'ಸಾಧ್ಯ' ಅಥವಾ 'ಪ್ರಧಾನ ಪ್ರತ್ಯಯ'ವೆಂದು ಕರೆಯುತ್ತಾರೆ.
ಬೆಟ್ಟದ ವಿಷಯವು ಕ್ರಮಬದ್ಧ ಊಹೆಯನ್ನು ಅನುಮೋದಿಸಲು ಸಾಂಧರ್ಭಿಕವಾಗಿ ಪ್ರಸ್ತಾವಿಸಲ್ಪಟ್ಟಿರುವುದರಿಂದ
ಅದನ್ನು 'ಪಕ್ಷ' ಅಥವಾ 'ಅಲ್ಪ ಪ್ರತ್ಯಯ'ವೆಂದು ಹೇಳುತ್ತಾರೆ. ಹೊಗೆಯು ಬೆಂಕಿಯ ಇರುವಿಕೆಯನ್ನು ಖಚಿತ
ಪಡಿಸುವ ಗುರುತು ಅಥವಾ ಸಂಕೇತವಾಗಿರುವುದರಿಂದ ಅದನ್ನು 'ಲಿಂಗ' (ಮಧ್ಯ ಪ್ರತ್ಯಯ) ಅಥವಾ 'ಹೇತು' ಅಥವಾ
'ಸಾಧನ' ಎಂದು ಕರೆಯುತ್ತಾರೆ.
ಅನುಮಾನ ಅಥವಾ ಕ್ರಮಬದ್ಧವಾದ ಜ್ಞಾನದಲ್ಲಿ
ಬಹುಮುಖ್ಯವಾದ ಅಂಶವೆಂದರೆ 'ಲಿಂಗ' ಮತ್ತು 'ಸಾಧ್ಯ' ಇವುಗಳಿಗೆ ಖಚಿತವಾದ ಅವಿನಾಭಾವ ಸಂಬಂಧವಿರಬೇಕು
- ಅದನ್ನೇ 'ವ್ಯಾಪ್ತಿ' ಎನ್ನುವ ಪಾರಿಭಾಷಿಕ ಶಬ್ದದಿಂದ ನ್ಯಾಯ ಶಾಸ್ತ್ರಗಳು ಪ್ರತಿಪಾದಿಸುತ್ತವೆ.
ಅನುಮಾನದಿಂದ ಗಳಿಸಿಕೊಂಡ ಜ್ಞಾನವನ್ನು 'ಅನ್ವಯ'(ಇದ್ದಾಗ ವ್ಯಕ್ತವಾಗುವುದು) ಮತ್ತು 'ವ್ಯತಿರೇಕ'(ಇಲ್ಲದಿದ್ದಾಗ
ವ್ಯಕ್ತವಾಗದೇ ಇರುವುದು) ವಿಧಾನಗಳ ಮೂಲಕ ಗಟ್ಟಿಗಳಿಸಿಕೊಳ್ಳಬಹುದು. ಒಂದೇ ಸತ್ಯವನ್ನು
ಪ್ರಚುರಪಡಿಸುವ ಈ ರೀತಿಯ ಧನಾತ್ಮಕವಾದ 'ಅನ್ವಯ' ಮತ್ತು ಋಣಾತ್ಮಕವಾದ 'ವ್ಯತಿರೇಕ' ಪದ್ದತಿಗಳನ್ನು
ಈ ರೀತಿಯಾಗಿ ವಿಶದ ಪಡಿಸಬಹುದು; ಎಲ್ಲೆಲ್ಲಿ ಹೊಗೆ ಇರುವುದೋ ಅಲ್ಲೆಲ್ಲಾ ಬೆಂಕಿಯಿರುವುದು, ಎಲ್ಲೆಲ್ಲಿ
ಹೊಗೆ ಇರುವುದಿಲ್ಲವೋ ಅಲ್ಲೆಲ್ಲಾ ಬೆಂಕಿ ಇರುವುದಿಲ್ಲ.
ಅನುಮಾನದ ವಿಷಯವನ್ನು ಕೈಗೆತ್ತಿಕೊಂಡ ನ್ಯಾಯ ಶಾಸ್ತ್ರದ
ಕೋವಿದರು ಹಲವಾರು ಧನಾತ್ಮಕ ಮತ್ತು ಋಣಾತ್ಮಕ ವಿಷಯಗಳ ಬಗ್ಗೆ ಪ್ರಸ್ತಾಪಿಸಿರುತ್ತಾರೆ.
ಅವುಗಳೆಂದರೆ 'ಸ್ವಾರ್ಥ' ಮತ್ತು 'ಪರಾರ್ಥ' ಅಥವಾ 'ಪೂರ್ವವತ್' ಮತ್ತು 'ಶೇಷವತ್' ಮೊದಲಾದ ಸೂಕ್ಷ್ಮ
ವಿಚಾರಗಳು. ಈ ರೀತಿಯ ವಿಷಯಗಳಿಗೆ ನಿತ್ಯ ಅನುಷ್ಠಾನದಲ್ಲಿ
ಯಾವುದೇ ಮಹತ್ವವಿಲ್ಲ, ಆದರೆ ಈ ರೀತಿಯ ಸೂಕ್ಷ್ಮ ವಿಚಾರಗಳನ್ನು ಆಧ್ಯಾತ್ಮಿಕ ಚರ್ಚೆಗಳ ಪ್ರತಿಪಾದನೆಯಲ್ಲಿ
ಎತ್ತಿಕೊಳ್ಳಬಹುದು.
3) ಉಪಮಾನ (ಹೋಲಿಕೆ):
"ಗೊತ್ತಿರುವ ವಿವರಣೆಯಿಂದ ಒಂದು ವಸ್ತುವನ್ನು
ಹೆಸರಿಸುವುದು" ಎನ್ನುವುದು ಉಪಮಾನಕ್ಕಿರುವ ವ್ಯಾಖ್ಯೆ. ಇದಕ್ಕೆ ಉದಾಹರಣೆಯಾಗಿ "ಗವಯ"
(ಕಾಡು ಹಸು) ಎಂದರೇನೆಂದು ಗೊತ್ತಿರದ ಒಬ್ಬ ಮನುಷ್ಯನಿಗೆ ಕಾಡಿನಲ್ಲಿ ವಾಸಿಸುವವನೊಬ್ಬ ಅದು ನಾಡ ಹಸುವಿನ
ರೀತಿಯಿರುತ್ತದೆ ಎಂದು ವಿವರಣೆ ಕೊಡುತ್ತಾನೆ. ಸ್ವಲ್ಪ
ಸಮಯದ ನಂತರ ಆ ಮನುಷ್ಯನು ಆ ರೀತಿಯಾದ ಪ್ರಾಣಿಯನ್ನು ಅರಣ್ಯದಲ್ಲಿ ಕಂಡ ತಕ್ಷಣ ಅದನ್ನು ಗವಯ (ಕಾಡು
ಹಸು) ಎಂದು ಗುರುತಿಸಿದರೆ ಅವನ ಜ್ಞಾನಕ್ಕೆ ಕಾರಣವಾದದ್ದು ಉಪಮಾನ ಎಂದು ತಿಳಿಯಬಹುದು.
ಕೆಲವು ಶಾಸ್ತ್ರಕಾರರು ಉಪಮಾನವನ್ನು ಪ್ರತ್ಯೇಕ
ಪ್ರಮಾಣವೆಂದು ಒಪ್ಪಿಕೊಳ್ಳುವುದಿಲ್ಲ ಮತ್ತು ಕೆಲವರು ಅದನ್ನು ಅನುಮಾನದ ಇನ್ನೊಂದು ರೂಪವೆಂದು ಪರಿಗಣಿಸುತ್ತಾರೆ.
4) ಶಬ್ದ (ವಾಕ್ಯ
ಪ್ರಮಾಣ):
ಶಬ್ದ ಅಥವಾ ವಾಕ್ಯ ಪ್ರಮಾಣವನ್ನು ನಂಬಲರ್ಹ ವ್ಯಕ್ತಿಯ
"ಹೇಳಿಕೆ" ಎಂದು ವಿವರಿಸಬಹುದು, ಮತ್ತು ಇದು ಎಲ್ಲ ಪ್ರಮಾಣಗಳಿಗೆ ಅಂತಿಮವಾದದ್ದು ಎಂದು
ನ್ಯಾಯ ಶಾಸ್ತ್ರವು ಹೇಳುತ್ತದೆ.
ಶಬ್ದವು ದೃಷ್ಟಾರ್ಥ(ಇಂದ್ರಿಯ ಗೋಚರ ವಸ್ತುಗಳಿಗೆ
ಸಂಭಂದಪಟ್ಟದ್ದು) ಅಥವಾ ಅದೃಷ್ಟಾರ್ಥ (ಇಂದ್ರಿಯಗಳಿಗೆ ಅಗೋಚರವಾದ ವಸ್ತುಗಳಿಗೆ ಸಂಭಂದಪಟ್ಟದ್ದು)
ಆಗಿರಬಹುದು.
ಅದೃಷ್ಟಾರ್ಥವು ಇಂದ್ರಿಯಾತೀತ ಸತ್ಯಗಳನ್ನು ಒಳಗೊಂಡಿರುತ್ತದೆ.
ವೇದೋಪನಿಷತ್ತು ಮೊದಲಾದ ಶಾಸ್ತ್ರಗಳಲ್ಲಿ ಉಲ್ಲೇಖಿಸಲ್ಪಟ್ಟ ಭಗವಂತ, ಆತ್ಮ ಮತ್ತು ಅಮರತ್ವದ ಬಗೆಗಿನ
ಹೇಳಿಕೆಗಳನ್ನು ಇಲ್ಲಿ ಉದಾಹರಿಸಬಹುದು. ಆದ್ದರಿಂದ ಶ್ರುತಿ ಅಥವಾ ವೇದಗಳನ್ನು ಶಬ್ದ ಎಂಬ ಅತ್ಯುನ್ನತ
ಭಾವದಿಂದ ಪರಿಗಣಿಸಲಾಗಿದೆ.
ಶಬ್ದ ಅಥವಾ ವಾಕ್ಯ ಪ್ರಮಾಣವು ನುಡಿಗಳ ಅಥವಾ ಸೂತ್ರರೂಪದ
ವಾಕ್ಯಗಳಿಂದ ತಿಳಿಯಲ್ಪಡುವುದರಿಂದ ಈ ವಾಕ್ಯಗಳ ತರ್ಕಬದ್ಧ ರಚನೆಯ ವಿಧಾನವನ್ನು ನ್ಯಾಯ ಶಾಸ್ತ್ರವು
ವಿಶದವಾಗಿ ಚರ್ಚಿಸುತ್ತದೆ. ಒಂದು ಬೌದ್ಧಿಕ ವಾಕ್ಯವು(ಸೂತ್ರವು) ನಾಲ್ಕು ಗುಣಗಳನ್ನು ಹೊಂದಿರುವುದು
ಆವಶ್ಯಕವಾಗಿದೆ, ಅವುಗಳೆಂದರೆ: ಆಕಾಂಕ್ಷಾ (ನಿರೀಕ್ಷೆ); ಯೋಗ್ಯತಾ (ಒಂದಕ್ಕೊಂದು ಪೂರಕವಿರಬೇಕು ಮತ್ತು
ವಿರೋಧಾಬಾಸಗಳಿಂದ ಮುಕ್ತವಾಗಿರಬೇಕು); ಸನ್ನಿಧಿ (ವಾಕ್ಯದಲ್ಲಿ ಪ್ರಯೋಗಿಸಲ್ಪಟ್ಟ ವಿವಿಧ ಶಬ್ದಗಳಿಗೆ
ಪರಸ್ಪರ ಸಂಭಂದವಿರಬೇಕು ಅಥವಾ ವಾಕ್ಯವು ಸಂಭದ್ದವಾಗಿರಬೇಕು/ಅಸಂಭದ್ದವಾಗಿರಬಾರದು) ಮತ್ತು ತಾತ್ಪರ್ಯ
(ಉದ್ದೇಶಿತ ಅರ್ಥ ಹೊಮ್ಮುವಂತಿರಬೇಕು).
ಭೌತಿಕ ಜಗತ್ತಿನ
ಬಗ್ಗೆ ನ್ಯಾಯ ಶಾಸ್ತ್ರದ ಸಿದ್ಧಾಂತ
ನ್ಯಾಯ ದರ್ಶನವು
ಬಹುಶಃ 'ವೈಶೇಷಿಕ ದರ್ಶನ' ನಂತರದ ಕೃತಿಯಾಗಿದ್ದು ಅದನ್ನನುಸರಿಸಿ ಅದರಲ್ಲಿ ಪ್ರತಿಪಾದಿಸಿರುವ ಸೃಷ್ಠಿ
ಸಿದ್ಧಾಂತವನ್ನು ಒಟ್ಟಾರೆಯಾಗಿ (ಇಡಿಯಾಗಿ) ಅಥವಾ ಸಂಪೂರ್ಣವಾಗಿ ಒಪ್ಪಿಕೊಂಡು ತನ್ನಲ್ಲಿ ಅಳವಡಿಸಿಕೊಂಡಿದೆ.
ಈ ಭೌತಿಕ ಜಗತ್ತು ನಾಲ್ಕು ವಿವಿಧ ರೀತಿಯ ಅಣುಗಳು ಅಥವಾ ಕಣಗಳಾದ ಪೃಥ್ವಿ (ಭೂಮಿ), ಅಪ್ (ನೀರು),
ತೇಜಸ್ (ಅಗ್ನಿ) ಮತ್ತು ವಾಯು (ಗಾಳಿ) ಇವುಗಳ ಸಮ್ಮಿಲನದಿಂದ ರಚಿತವಾದ ವಸ್ತುವಾಗಿದೆ. ಸೃಷ್ಠಿ ಕ್ರಿಯೆಯು
ಭೌತಿಕ ವಸ್ತುವಾದ 'ಆಕಾಶ'(ಎಲ್ಲ ವಸ್ತುಗಳ ಮೂಲ ರೂಪ) ಮತ್ತು ಅಭೌತಿಕ ವಸ್ತುಗಳಾದ 'ಕಾಲ' (ಸಮಯ) ಮತ್ತು
'ದಿಕ್' (ದಿಕ್ಕು) ಇವುಗಳನ್ನು ಸಹ ಒಳಗೊಂಡಿವೆ.
ಈ ರೀತಿಯ ಭೌತಿಕ ಹಾಗೂ ಅಭೌತಿಕ ವಸ್ತುಗಳಿಂದ ಮತ್ತು
ಜೀವಿಗಳ ಅದೃಷ್ಠ ಅಥವಾ ಕರ್ಮಗಳಿಗನುಸಾರವಾಗಿ ಸಂಪೂರ್ಣವಾದ ಈ ಪ್ರಪಂಚವನ್ನು ಈಶ್ವರನು ಸೃಷ್ಟಿಸುತ್ತಾನೆ.
ಈಶ್ವರ ಅಥವಾ ದೇವರು
ನ್ಯಾಯ ಪದ್ಧತಿಯು ಈಶ್ವರ ಅಥವಾ ದೇವರನ್ನು ಸೃಷ್ಟಿ,
ಸ್ಥಿತಿ ಮತ್ತು ಪ್ರಳಯ (ವಿನಾಶ)ಗಳಿಗೆ ಅಂತಿಮ ಕಾರಕನೆಂದು ಪ್ರತಿಪಾದಿಸುತ್ತವೆ. ಆದರೆ ಈಶ್ವರನು ಈ
ಜಗತ್ತನ್ನು ಶೂನ್ಯದಿಂದ ಅಥವಾ ತನ್ನೊಳಗಿನಿಂದ ಸೃಷ್ಟಿಸದೆ, ಬಾಹ್ಯವಾಗಿ ಲಭ್ಯವಿರುವ ಪರಮಾಣುಗಳು,
ದಿಕ್, ಕಾಲ, ಆಕಾಶ, ಮನಸ್ಸುಗಳು ಮತ್ತು ಆತ್ಮಗಳಿಂದ ರಚಿಸುತ್ತಾನೆ.
ಇಲ್ಲಿ ಸೃಷ್ಟಿ ಕಾರ್ಯವನ್ನು ಸರಳವಾಗಿ ಹೇಳಬೇಕೆಂದರೆ
ಹೊರಗೆ (ಬಾಹ್ಯವಾಗಿ) ಲಭ್ಯವಿರುವ ವಸ್ತುಗಳನ್ನು ಈಶ್ವರನು ಕ್ರಮಬದ್ಧವಾಗಿ ಜೋಡಿಸುತ್ತಾನೆ (ಸಂಯೋಜಿಸುತ್ತಾನೆ)
ಮತ್ತು ಈ ವಸ್ತುಗಳು ಭಗವಂತನ ಜೊತೆಯಲ್ಲಿ ಈ ಪ್ರಪಂಚದಲ್ಲಿ ಇದ್ದು, ಅವು ಜೀವಿಗಳ ಕರ್ಮಕ್ಕನುಸಾರವಾಗಿ
ಭಗವಂತನು ನಿರ್ಮಾಣ ಮಾಡುವ ನೈತಿಕ ವಿಶ್ವವನ್ನು ರಚಿಸಲು ಬಳಸಲ್ಪಡುತ್ತವೆ. ವಿವಿಧ ಭೌತಿಕ ವಸ್ತುಗಳು
ಜೀವಿಗಳ ನೈತಿಕ ಮತ್ತು ಆಧ್ಯಾತ್ಮಿಕ ಉನ್ನತಿಯ ಸಾಧನಗಳಾಗಿ ಪ್ರಯೋಜನಕ್ಕೆ ಬರುತ್ತವೆ. ಹೀಗಾಗಿ ಭಗವಂತನು
ಈ ಜಗತ್ತಿನ ಪ್ರಥಮ ರಚನಕಾರನಾಗಿ 'ನಿಮಿತ್ತ ಕಾರಣ'ನೆನಿಸುತ್ತಾನೆ ಮತ್ತು ಅದರ 'ಉಪಾದಾನ (ವಸ್ತುತಃ)
ಕಾರಣ'ನಲ್ಲ.
ಸೃಷ್ಟಿಯನ್ನು ರಚನೆ ಮಾಡಿದ ನಂತರ ಭಗವಂತನು ಅದರ
ನಿರ್ವಹಣೆಯನ್ನೂ ಮಾಡುತ್ತಾನೆ. ಅವನು ಈ ಸೃಷ್ಟಿ ವ್ಯವಸ್ಥೆಯ 'ನೈತಿಕ ಪಾಲಕ' ಅಥವಾ 'ಕರ್ಮಫಲದಾತ'
ಕೂಡ ಮತ್ತು ಅವನು 'ಶಿಷ್ಟ ಪೋಷಕ-ದುಷ್ಟ ಶಿಕ್ಷಕ'ನಾಗಿಯೂ ತನ್ನ ಕಾರ್ಯವನ್ನು ನಿರ್ವಹಿಸುತ್ತಾನೆ.
ನೈತಿಕತೆಯನ್ನು ಕಾಪಾಡಲು ಸೃಷ್ಟಿ ಚಕ್ರವು ಕೊನೆಗೊಂಡ ನಂತರ ಅವನೇ ಲಯ ಕರ್ತನಾಗಿ ಜಗತ್ತನ್ನು ವಿನಾಶಗೊಳಿಸುತ್ತಾನೆ.
ಅವನು ಈ ಕಾರ್ಯವನ್ನು ವಿನಾಶಕ್ಕೆ ಕಾರಣವಾದ ಶಕ್ತಿಗಳನ್ನು ಪೂರ್ತಿಯಾಗಿ ಬಿಡುಗಡೆಗೊಳಿಸುವುದರ ಮೂಲಕ
ಸಾಧಿಸುತ್ತಾನೆ.
ಭಗವಂತನು ಸರ್ವಜ್ಞನು, ಏಕೆಂದರೆ ಅವನು ಎಲ್ಲ ವಿಷಯಗಳ
ಮತ್ತು ಘಟನೆಗಳ ಕುರಿತಾಗಿ ನಿಖರವಾದ ತಿಳುವಳಿಕೆ ಹೊಂದಿರುತ್ತಾನೆ. ಭಗವಂತನು ನಿತ್ಯ ಪ್ರಜ್ಞೆಯನ್ನು
(ತಿಳುವಳಿಕೆ ಅಥವಾ ಜ್ಞಾನವನ್ನು) ತನ್ನ ಅಂತರ್ಭಾಗವಾಗಿ ಹೊಂದಿರುತ್ತಾನೆ. ಅದ್ವೈತ ವೇದಾಂತದಲ್ಲಿ
ಪ್ರತಿಪಾದಿಸಿರುವಂತೆ ಇಲ್ಲಿ ಭಗವಂತನು ಪ್ರಜ್ಞಾ ಅಥವಾ ಜ್ಞಾನದ ಸ್ವರೂಪನಲ್ಲ. (ಒಟ್ಟಾರೆಯಾಗಿ ಹೇಳಬೇಕೆಂದರೆ
ಭಗವಂತನು ಜ್ಞಾನವನ್ನು ತನ್ನೊಳಗೆ ಹೊಂದಿರುತ್ತಾನೆ ಅಂದರೆ ಅದು ಅವನ ಒಂದು ಅಂಶವೇ ಹೊರತು ಅದ್ವೈತ
ವೇದಾಂತದಲ್ಲಿ ಪ್ರತಿಪಾದಿಸಿರುವಂತೆ ಅವನ ಸ್ವರೂಪವೇ ಜ್ಞಾನವಲ್ಲ). ಇವಲ್ಲದೆ ಷಡೈಶ್ವರ್ಯಗಳೆಂದು ಕರೆಯಲ್ಪಡುವ
ಎಲ್ಲಾ ಆರು ಪರಿಪೂರ್ಣತೆಗಳನ್ನೂ ಭಗವಂತನು ಹೊಂದಿದ್ದಾನೆ. ಅವುಗಳು, ಜ್ಞಾನ (ತಿಳುವಳಿಕೆ), ಐಶ್ವರ್ಯ
(ಈಶ್ವರತ್ವ), ಯಶಸ್ಸು (ಗೆಲುವು), ಶ್ರೀ (ಸಂಪತ್ತು ಮತ್ತು ಸೌಂದರ್ಯ) ಮೊದಲಾದವು.
ನ್ಯಾಯ ಹಾಗೂ ವೈಶೇಷಿಕ ದರ್ಶನಗಳು ದೇವರ ಇರುವಿಕೆಗೆ
ಸುಮಾರು ಹತ್ತರಷ್ಟು ಕಾರಣಗಳನ್ನು ಕೊಡುತ್ತವೆ. ಇವುಗಳಲ್ಲೆಲ್ಲಾ ಪ್ರಮುಖವಾದದ್ದು ಯಾವುದೆಂದರೆ, ಈ
ಸೃಷ್ಟಿ ಕ್ರಿಯೆಯ ಹಿಂದೆ ಖಚಿತವಾಗಿ ಒಬ್ಬ ಅತೀ ಮೇಧಾವಿ ಕಾರಣಕರ್ತನಿರಬೇಕು. ಏಕೆಂದರೆ ಬಹುತೇಕ ಎಲ್ಲಾ
ವಸ್ತುಗಳು ಜಡವಾಗಿದ್ದು, ಆತ್ಮರು ಅಥವಾ ಜೀವರಿಗೆ ಪರಿಮಿತ ಜ್ಞಾನ ಮತ್ತು ಶಕ್ತಿ ಇದೆ. ಮತ್ತು ದಿನ
ನಿತ್ಯದ ಸಾಮಾನ್ಯ ಸಂಗತಿಗಳಿಗೆ ಅತೀತವಾಗಿರುವ ವಿಷಯಗಳ ಅವಗಾಹನೆಗೆ (ತಿಳುವಳಿಕೆಗೆ) ಅಂತಿಮ ಪ್ರಮಾಣವಾಗಿರುವ
ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ನುಡಿಗಳು ಈ ವಿಷಯವನ್ನು ದೃಢಪಡಿಸುತ್ತವೆ.
ಜೀವರು ಅಥವಾ ಪ್ರತ್ಯೇಕ
ಆತ್ಮಗಳು
ನ್ಯಾಯ ದರ್ಶನದ ಪ್ರಕಾರ ಜೀವರು ಅಥವಾ ಆತ್ಮರುಗಳ
ಸಂಖ್ಯೆಯು ಅನಂತವಾದದ್ದು. ಅವು ನಿತ್ಯವೂ ಮತ್ತು ನಾಶರಹಿತವೂ ಆಗಿವೆ. ಪ್ರಜ್ಞೆಯು (ಜ್ಞಾನವು) ಅವುಗಳ
ಅಂತರ್ಗತ ಭಾಗವಾಗಿರದೆ ಅದು ಅಣುವಿನ ಪ್ರಮಾಣದಷ್ಟಿರುವ ಮನಸ್ಸಿನ ಸಹಯೋಗದಿಂದ ಪಡೆದ ಗುಣವಾಗಿದೆ. ಆ
ಜೀವರುಗಳು ಸ್ವಯಂವಿಭುಗಳು ಅಂದರೆ ಅವು ಸರ್ವಾಂತರ್ಯಾಮಿಯಾಗಿ ಎಲ್ಲ ಕಡೆ ಇರುತ್ತವೆ. ಮನಸ್ಸು ಇಂದ್ರಿಯಗಳ
ಮೂಲಕ ಬಾಹ್ಯ ಪ್ರಪಂಚದೊಂದಿಗೆ ಸಂಭಂದವೇರ್ಪಡಿಸಿಕೊಂಡಾಗ ಜೀವಕ್ಕೆ ಎಲ್ಲ ರೀತಿಯ ಅನುಭವಗಳುಂಟಾಗುತ್ತವೆ.
ಎಲ್ಲಾ ದರ್ಶನಗಳಲ್ಲಿ ಪ್ರಚುರ ಪಡಿಸಿರುವಂತೆ ನ್ಯಾಯ
ದರ್ಶನವೂ ಕೂಡ ಜೀವನದ ಮೂಲ ಉದ್ದೇಶ 'ಅಪವರ್ಗ' ಅಥವಾ 'ಮೋಕ್ಷ'ವನ್ನು ಪಡೆದು ಜನನ-ಮರಣಗಳ ಕ್ರಿಯೆಯಿಂದ
ಬಿಡುಗಡೆ ಹೊಂದುವುದನ್ನು ಪ್ರತಿಪಾದಿಸುತ್ತದೆ. ಆದರೆ, ಬೇರೆ ದರ್ಶನಗಳು ಪ್ರಸ್ತುತ ಪಡಿಸುವಂತೆ ಮೋಕ್ಷ
ಹೊಂದುವುದೆಂದರೆ ಧನಾತ್ಮಕವಾಗಿ ನಿತ್ಯವಾದ ಆನಂದವನ್ನು ಪಡೆಯುವುದಲ್ಲ. ಆದರೆ ಋಣಾತ್ಮಕವಾಗಿ; ಇಡಿಯಾಗಿ(ಸಂಪೂರ್ಣವಾಗಿ)
ಮತ್ತು ಶಾಶ್ವತವಾಗಿ ಎಲ್ಲಾ ರೀತಿಯ ದುಃಖ ಮತ್ತು ಯಾತನೆಗಳಿಂದ ಮುಕ್ತನಾಗಿರುವುದು. ಏಕೆಂದರೆ ನೋವು
ಮತ್ತು ನಲಿವುಗಳು ಜೀವನದಲ್ಲಿ ಯಾವಾಗಲೂ ಇರುತ್ತವೆ ಮತ್ತು ಮನಸ್ಸು ಇಂದ್ರಿಯಗಳೊಂದಿಗೆ ಸಂಭಂದ ಹೊಂದಿರುವುದರಿಂದ
ಶಾಶ್ವತವಾಗಿ ದುಃಖರಹಿತವಾದ; ಕೇವಲ ನಲಿವು ಅಥವಾ ಸಂತೋಷ ಅಥವಾ ಆನಂದ ಇರುವುದಿಲ್ಲ. ಇದು ಈ ಋಣಾತ್ಮಕ
ಪ್ರತಿಪಾದನೆಯ ಹಿಂದಿರುವ ತರ್ಕಬದ್ಧ ಆಲೋಚನೆಯಾಗಿರಬಹುದು.
ಜೀವನು ತಾನು ದೇಹ ಮತ್ತು ಮನಸ್ಸು ಹಾಗು ಇಂದ್ರಿಯಗಳಿಂದ
ಪ್ರತ್ಯೇಕನಾದ ಆತ್ಮನು ಎಂಬ ತತ್ವಜ್ಞಾನ ಅಥವಾ ನಿಜವಾದ ಜ್ಞಾನವನ್ನು ಕಂಡುಕೊಂಡಾಗ 'ಮುಕ್ತಿ'ಯನ್ನು
ಅಥವಾ 'ಅಪವರ್ಗ'ವನ್ನು ಹೊಂದುತ್ತಾನೆ. ಇದನ್ನು ಪಡೆಯಲು ಜೀವನು ಮೂರು ರೀತಿಯ ಸಾಧನೆ (ಆಧ್ಯಾತ್ಮಿಕ
ನಿಯಮ)ಗಳನ್ನು ಕೈಗೊಳ್ಳಬೇಕು. ಅವು ಯಾವುವೆಂದರೆ 'ಶ್ರವಣ' (ಆತ್ಮದ ಬಗ್ಗೆ ಪ್ರಚುರವಾಗಿರುವ ಆಧ್ಯಾತ್ಮಿಕ
ವಿಷಯಗಳನ್ನು ಕೇಳುವುದು), 'ಮನನ' (ಅವುಗಳನ್ನು ಕುರಿತಾಗಿ ಆಲೋಚಿಸುವುದು ಅಂದರೆ ಆ ಜ್ಞಾನವನ್ನು ಮನಸ್ಸಿನಲ್ಲಿ
ಗಟ್ಟಿಯಾಗಿ ಸ್ಥಾಪಿಸಿಕೊಳ್ಳುವುದು) ಮತ್ತು 'ನಿದಿಧ್ಯಾಸನ' (ಮೊದಲೆರಡು ಸಾಧನಾ ವಿಧಾನಗಳಿಗೆ ಪೂರಕವಾಗಿ
ಆತ್ಮದ ಬಗ್ಗೆ ಧ್ಯಾನ ಮಾಡುವುದು). ಈ ರೀತಿಯ ಸಾಧನೆಯು ಕಾಲಕ್ರಮೇಣ ಎಲ್ಲಾ ರೀತಿಯ 'ಮಿಥ್ಯಾಜ್ಞಾನ'
ಅಥವಾ ತಪ್ಪು ತಿಳುವಳಿಕೆಗಳನ್ನು ನಾಶ ಮಾಡುತ್ತದೆ. ಆಗ ಜೀವನು ಅನುಭವಿಸಬೇಕಾದ ಭೌತಿಕ ಹಾಗು ಮಾನಸಿಕವಾದ
ನೋವು ಮತ್ತು ಯಾತನೆಗಳಿಗೆ ಕಾರಕವಾದ ಆಕರ್ಷಣೆ ಮತ್ತು ಪ್ರಚೋದನೆಗೊಳಪಡಿಸುವ ಎಲ್ಲಾ ರೀತಿಯ ಬಂಧನಗಳಿಂದ
ವಿಮುಕ್ತನಾಗುತ್ತಾನೆ.
ಉಪಸಂಹಾರ:
ಭಾರತೀಯ ತತ್ವಶಾಸ್ತ್ರ ಮತ್ತು ಆರು ಸನಾತನ ವಿಧಾನಗಳ
ಬಗ್ಗೆ ಇರುವ ಪ್ರಮುಖ ಆರೋಪವೆಂದರೆ ಅವು ಕ್ರಮಬದ್ಧ ಆಲೋಚನೆ ಅಥವಾ ಒಪ್ಪಬಹುದಾದಂತ ತರ್ಕಕ್ಕಿಂತ ಹೆಚ್ಚಾಗಿ
ಶಾಸ್ತ್ರ ಪ್ರಮಾಣ ಅಥವಾ ಶ್ರುತಿಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ವಿಷಯಗಳ ಮೇಲೆ ಆಧಾರ ಪಡುತ್ತವೆ.
ಆದರೆ ನ್ಯಾಯ ದರ್ಶನವು ಮೇಲ್ನೋಟಕ್ಕೆ ಕಾಣುವ ಈ ಅಭಾಸಕ್ಕೆ ಅವಶ್ಯಕತೆಗಿಂತಲೂ ಹೆಚ್ಚಾದ ಮತ್ತು ಕೂಲಂಕುಷವಾದ
ಹಾಗೂ ರಾಜಿ ಮಾಡಿಕೊಳ್ಳದ ತರ್ಕ ವಿಧಾನಗಳಿಂದ ಪರಿಹಾರವನ್ನು ಒದಗಿಸಿದೆ.
ಒಟ್ಟಾರೆಯಾಗಿ ನ್ಯಾಯ ದರ್ಶನವು ವಿವಿಧ ಪ್ರಕಾರದ
ತರ್ಕ ಶಾಸ್ತ್ರದ ಪ್ರತಿಪಾದಕರ-ಅದರಲ್ಲೂ ವಿಶೇಷವಾಗಿ ವೇದಾಂತ ದರ್ಶನಗಳ ವಿಶ್ಲೇಷಕರಿಗೆ ಗಟ್ಟಿಯಾದ
ಬುನಾದಿಯನ್ನು ಒದಗಿಸಿ ಕೊಟ್ಟಿತು.
-ಶ್ರೀಧರ್ ಭಂಡ್ರಿ
No comments:
Post a Comment