ಪರಿಚಯ
ಹಿಂದೂ
ತತ್ವಶಾಸ್ತ್ರದಲ್ಲಿ ಯಾವುದಾದರೂ ಪದ್ದತಿಯಲ್ಲಿ ಗ್ರಂಥ ಕರ್ತೃವಿಗಿಂತ ಆ ಗ್ರಂಥವೇ ಪ್ರಾಮುಖ್ಯತೆಯನ್ನು
ಪಡೆದಿದೆ ಎಂದರೆ ಅದು 'ಮೀಮಾಂಸಾ' ದರ್ಶನ ಮಾತ್ರವೇ. ಇದನ್ನು 'ಪೂರ್ವಮೀಮಾಂಸ ದರ್ಶನ'ವೆಂದೂ ಕರೆದಿದ್ದಾರೆ;
ಇದು ಪ್ರಾಥಮಿಕವಾಗಿ ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಕ್ಲಿಷ್ಟವಾದ ಯಜ್ಞ-ಯಾಗಾದಿಗಳ ವಿಧಿ-ವಿಧಾನಗಳನ್ನು
ಹೇಗೆ ಅರ್ಥೈಸಿಕೊಳ್ಳಬೇಕೆನ್ನುವುದನ್ನು ಕ್ರಮಬದ್ಧವಾಗಿ ತಿಳಿಸಿಕೊಡುತ್ತದೆ.
ವೈದಿಕ ವಿಧಿ-ವಿಧಾನಗಳು ನಂಬುವುದೇನೆಂದರೆ:
(೧) 'ಆತ್ಮ' ಎನ್ನುವ ವಸ್ತುವೊಂದು ಇದ್ದು;
ಅದು ದೇಹದ ಮರಣವನ್ನು ಅಧಿಗಮಿಸಿ ನಾವು ಮಾಡಿದ ಯಜ್ಞಯಾಗಾದಿಗಳ ಫಲವನ್ನು ಸ್ವರ್ಗದಲ್ಲಿ ಅನುಭವಿಸುತ್ತದೆ.
(೨) ಅಗೋಚರ ಶಕ್ತಿಯೆನ್ನುವುದೊಂದಿದ್ದು ಅದು
ಯಜ್ಞಯಾಗಾದಿಗಳ ಪರಿಣಾಮವನ್ನು ಜೋಪಾನವಾಗಿ ಭದ್ರಪಡಿಸುತ್ತದೆ.
(೩) ವೇದಗಳು 'ಅಸತ್ಯ'ವಲ್ಲ
(೪) ಈ ಪ್ರಪಂಚವು ನಿಜವಾದುದು;
(೫) ನಮ್ಮ ಜೀವನ ಮತ್ತು ನಾವು ಇಲ್ಲಿ ಕೈಗೊಂಡ
ಕಾರ್ಯಗಳು ನಿಜ ಅವು ಕೇವಲ ಸ್ವಪ್ನದಂತಲ್ಲ.
ಮೂಲ ಕೃತಿಗಳು
ಜೈಮಿನಿ
(ಕ್ರಿ.ಶ. ೨೦೦) ವಿರಚಿತ 'ಮೀಮಾಂಸಾಸೂತ್ರಾ' ಗ್ರಂಥವೇ ಈ ಪದ್ಧತಿಗೆ ಮೂಲ ಗ್ರಂಥ. ಅದು ಒಂದು ಬೃಹದ್ಗ್ರಂಥವಾಗಿದ್ದು
ಅದರಲ್ಲಿ ೨೫೦೦ ಸೂತ್ರಗಳನ್ನೊಳಗೊಂಡ ೧೨ ಅಧ್ಯಾಯಗಳು ಮತ್ತು ೬೦ ಉಪವಿಭಾಗಗಳು ಇವೆ. ಶಬರ ಸ್ವಾಮಿನ್
(ಕ್ರಿ.ಶ.೪೦೦) ಬರೆದ 'ಭಾಷ್ಯ'ವೇ ಮೀಮಾಂಸ ಸೂತ್ರಗಳಿಗೆ ಅಧಿಕೃತ ವ್ಯಾಖ್ಯಾನವನ್ನು ಕೊಡುತ್ತದೆ. ಶಬರ
ಭಾಷ್ಯಕ್ಕೆ ಎರಡು ಟೀಕಾಗ್ರಂಥಗಳಿವೆ - ಪ್ರಭಾಕರ(ಕ್ರಿ.ಶ. ೬೫೦) ವಿರಚಿತ ಇನ್ನೂ ಕೈಬರಹದ ರೂಪದಲ್ಲಿ
ಲಭ್ಯವಿರುವ 'ಬೃಹತಿ' ಗ್ರಂಥವು ಮೊದಲನೆಯದು ಹಾಗೂ ಕುಮಾರಿಲ ಭಟ್ಟ(ಕ್ರಿ.ಶ. ೭೦೦)ನು ಮೂರು ಭಾಗಗಳಲ್ಲಿ
ಬರೆದ; 'ಶ್ಲೋಕವಾರ್ತಿಕ', 'ತಂತ್ರವಾರ್ತಿಕ' ಮತ್ತು 'ಟಪ್ಟೀಕಾ' ಎರಡೆನೆಯದು. ಶಾಲಿಕನಾಥ(ಪ್ರಭಾಕರನ
ಶಿಷ್ಯ)ನ 'ಪ್ರಕರಣಪಂಚಿಕ', ಪಾರ್ಥಸಾರಥಿ(ಕ್ರಿ.ಶ. ೯೦೦)ಯ 'ಶಾಸ್ತ್ರದೀಪಿಕ', ಮಾಧ್ವ ವಿದ್ಯಾರಣ್ಯ(ಕ್ರಿ.ಶ.
೧೩೫೦) ವಿರಚಿತ 'ನ್ಯಾಯಮಾಲಾವಿಸ್ತಾರ' ಮತ್ತು ಲೌಗಾಕ್ಷಿ ಭಾಸ್ಕರ(೧೭ನೇ ಶತಮಾನ)ನ 'ಅರ್ಥಸಂಗ್ರಹ' ಈ ದರ್ಶನದ ಬಗ್ಗೆ ಲಭ್ಯವಿರುವ ಇತರೇ ಕೃತಿಗಳು.
ಜ್ಞಾನದ ಬಗೆಗಿನ ಸಿದ್ಧಾಂತ
ವೇದಗಳ
ಅಂತಿಮ ಪ್ರಭುತ್ವವನ್ನು ಸ್ಥಾಪಿಸಲು 'ಮೀಮಾಂಸ ದರ್ಶನ'ವು ಒಂದು ವಿವರವಾದ ಪದ್ಧತಿಯನ್ನು ಅಭಿವೃದ್ಧಿ
ಪಡಿಸಿದೆ ಮತ್ತು ಇದನ್ನು ಇತರೇ ದರ್ಶನಗಳ ಪ್ರತಿಪಾದಕರು; ಅದರಲ್ಲೂ ವಿಶೇಷವಾಗಿ 'ವೇದಾಂತ ದರ್ಶನ'ಕಾರರು
ಕೂಡ ಒಪ್ಪಿಕೊಂಡಿದ್ದಾರೆ.
ಯಾವುದೇ
ಒಂದು ಜ್ಞಾನವು ಮಾನ್ಯತೆಯನ್ನು ಗಳಿಸಬೇಕಾದರೆ ಅದು ಮೂರು ನಿಯಮಗಳನ್ನು ಪೂರೈಸಬೇಕಾಗುತ್ತದೆ. ಅವೆಂದರೆ:
೧) ಅದು ಪೂರ್ವದಲ್ಲಿ ಗೊತ್ತಿಲ್ಲದ ಹೊಸದೊಂದು
ಮಾಹಿತಿಯನ್ನು ಹೊರಹಾಕಬೇಕು.
೨) ಅದು ಪ್ರಚಲಿತವಿರುವ ಯಾವುದಾದರೂ ಜ್ಞಾನದಿಂದ
ಸುಳ್ಳೆಂದು ನಿರೂಪಿತವಾಗಬಾರದು.
೩) ಆ ಜ್ಞಾನವನ್ನು ಉಂಟು ಮಾಡುವ ಪರಿಸ್ಥಿತಿಗಳು
ದೋಷಮುಕ್ತವಾಗಿರಬೇಕು.
'ಮೀಮಾಂಸ'ವು
ಎರಡು ವಿಧವಾದ ಜ್ಞಾನವನ್ನು ಒಪ್ಪಿಕೊಳ್ಳುತ್ತವೆ: 'ಪ್ರತ್ಯಕ್ಷ' (ತಕ್ಷಣದ್ದು) ಮತ್ತು 'ಪರೋಕ್ಷ'(ತದನಂತರದ್ದು).
'ಪರೋಕ್ಷ ಜ್ಞಾನ'ವು ಐದು ಬಗೆಯದಾಗಿರುತ್ತದೆ; 'ಅನುಮಾನ'(ನಿಷ್ಕರ್ಷೆ/ಕ್ರಮಬದ್ಧ ಜ್ಞಾನ), 'ಉಪಮಾನ'(ಹೋಲಿಕೆ),
'ಶಬ್ದ'(ನುಡಿ ಪ್ರಮಾಣ) - ಇದನ್ನು 'ಆಪ್ತವಾಕ್ಯ'(ನಂಬಲರ್ಹ ವ್ಯಕ್ತಿಯ ಹೇಳಿಕೆ)ವೆಂದೂ ಕರೆದಿದ್ದಾರೆ,
'ಅರ್ಥಾಪತ್ತಿ' (ಸಮರ್ಥನೆ ಅಥವಾ ಅನಿಸಿಕೆ) ಮತ್ತು 'ಅನುಪಲಬ್ಧಿ'(ಮನಗಾಣದೇ ಇರುವುದು/ಗ್ರಹಿಸಲಾಗದ್ದು).
ಇವುಗಳನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು:
'ಪ್ರತ್ಯಕ್ಷ'
(ನೇರವಾದ ಅಥವಾ ತಕ್ಷಣದ ಗ್ರಹಿಕೆ/ತಿಳಿವು/ಅನುಭವ)ವು ಎರಡು ವಿಧವಾದ ಹಂತಗಳಲ್ಲಿ ಅಭಿವೃದ್ಧಿಯಾಗುತ್ತದೆ.
ಜ್ಞಾನೇಂದ್ರಿಯವೊಂದು ಯಾವುದಾದರೂ ಒಂದು ವಸ್ತುವಿನ ಸಂಪರ್ಕಕ್ಕೆ ಬಂದ ಕೂಡಲೇ, ಏನೋ ಇದೆ ಎನ್ನುವುದರ
ಬಗ್ಗೆ ಸಾಮಾನ್ಯ ತಿಳುವಳಿಕೆ ಉಂಟಾಗುತ್ತದೆ. ಇದನ್ನು 'ನಿರ್ವಿಕಲ್ಪಪಕ-ಪ್ರತ್ಯಕ್ಷ' ಎಂದು ಕರೆಯುತ್ತಾರೆ.
ಮುಂದಿನ ಹಂತದಲ್ಲಿ, ಆ ವಸ್ತುವಿನ ಎಲ್ಲಾ ವಿವರಗಳು ಪೂರ್ವಾನುಭವದ ಜ್ಞಾನದಿಂದ ತಿಳಿಯಲ್ಪಡುತ್ತದೆ.
ಇದನ್ನು 'ಸವಿಕಲ್ಪಕ-ಪ್ರತ್ಯಕ್ಷ' ಎನ್ನುತ್ತಾರೆ.
ನಾವು
ಮೂಲ ವಸ್ತುವಿಗೆ ಸಂಭಂದಿಸಿದ 'ಲಿಂಗ' ಅಥವಾ 'ಸಂಕೇತ'ವನ್ನು ನೋಡಿದಾಗ, 'ಅನುಮಾನ'(ಕ್ರಮಬದ್ಧ ಜ್ಞಾನ)ವು
ಆ ವಸ್ತುವಿನ ತಿಳುವಳಿಕೆಯನ್ನು ಪರೋಕ್ಷವಾಗಿ ಒದಗಿಸುತ್ತದೆ. ಉದಾಹರಣೆಗೆ, ದೂರದ ಬೆಟ್ಟದ ಮೇಲೆ ಹೊಗೆಯನ್ನು
ನೋಡಿ ಅಲ್ಲಿ ಬೆಂಕಿಯಿದೆಯೆಂದು ತೀರ್ಮಾನಿಸುತ್ತೇವೆ (ಬೆಂಕಿಯನ್ನು ಪ್ರತ್ಯಕ್ಷವಾಗಿ ಕಾಣದಿದ್ದರೂ
ಕೂಡ); ಏಕೆಂದರೆ ನಮ್ಮ ಪೂರ್ವ ಅನುಭವದಲ್ಲಿ ಹೊಗೆಯು ಅವಿನಾಭಾವವಾಗಿ ಬೆಂಕಿಯ ಜೊತೆಯಲ್ಲಿರುವುದನ್ನು
ಗಮನಿಸಿರುತ್ತೇವಾದ್ದರಿಂದ.
'ಉಪಮಾನ'(ಹೋಲಿಕೆ)ವು
ಇನ್ನೊಂದು ಜ್ಞಾನದ ಮೂಲ. ಒಂದು ಮೂಗಿಲಿಯನ್ನು ನೋಡಿದ ನಂತರ ಅದು ತಾನು ಹಿಂದೆ ನೋಡಿದ ಇಲಿಯಂತೆ ಇರುವುದನ್ನು
ವ್ಯಕ್ತಿಯು ನೆನೆಪಿಸಿಕೊಳ್ಳುತ್ತಾನೆ. ಅಗ ಅವನ ಅರಿವಿಗೆ ತಾನು ಗ್ರಹಿಸಿದ ಮೂಗಿಲಿಯು, ಇಲಿಯಂತಿರುವುದು
ಕಂಡುಬರುವುದು. ಈ ರೀತಿಯ ಜ್ಞಾನವು ನಮಗೆ ಉಪಮಾನದಿಂದ ಲಭ್ಯವಾಗುತ್ತದೆ.
’ಶಬ್ದ'(ನುಡಿ/ವಾಕ್ಯ
ಸಾಕ್ಷ್ಯ)ವು ಮುಂದಿನ ಜ್ಞಾನದ ಮೂಲ. 'ಮೀಮಾಂಸ ದರ್ಶನ'ವು ವೇದಗಳ ನಿರ್ವಿವಾದಿತ ಪ್ರಾಮಾಣ್ಯವನ್ನು
ನಿರೂಪಿಸ ಬೇಕಾದುದರಿಂದ; ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಟ್ಟಿದೆ.
ನಂಬಲರ್ಹ
ವ್ಯಕ್ತಿಯ ನುಡಿಗಳು ಸತ್ಯವೆಂದು ಗಣಿಸಲ್ಪಡುತ್ತವೆ, ಇದನ್ನೇ 'ಆಪ್ತವಾಕ್ಯ'ವೆಂದಿದ್ದಾರೆ.
'ಶಬ್ದ'
ಪ್ರಮಾಣವು ಎರಡು ರೀತಿಯದಾಗಿರುತ್ತದೆ; ಪೌರುಷೇಯ (ವ್ಯಕ್ತಿಗತ ಅಥವಾ ಆಪ್ತವಾಕ್ಯ) ಮತ್ತು ಅಪೌರುಷೇಯ
(ಮಾನವಾತೀತ). ಎರಡನೆಯದು ವೇದಗಳನ್ನು ಸೂಚಿಸುತ್ತದೆ
ಏಕೆಂದರೆ ಅವು ಮಾನವ ಮಾತ್ರರಿಂದ ಸೃಷ್ಟಿಸಲ್ಪಟ್ಟಿಲ್ಲ.
ವೇದಗಳು ಅಂತಿಮ ಪ್ರಮಾಣಗಳಾಗಿದ್ದು ಅವು ಕಟ್ಟಳೆಗಳನ್ನು ನಿರ್ದೇಶಿಸುವ ಗ್ರಂಥಗಳಾಗಿವೆ ಮತ್ತು ಅವು
ನಮಗೆ ಅಗೋಚರವಾದ ವಿಷಯಗಳನ್ನು ತಿಳಿಸುತ್ತವೆ ಮತ್ತು ಅಜ್ಞಾನವನ್ನು ಪರಿಹರಿಸುತ್ತವೆ. ಮತ್ತು ಅವುಗಳ
ಮೂಲ ಉದ್ದೇಶ ಮತ್ತು ಗುರಿ ಯಜ್ಞಯಾಗಾದಿಗಳ ಕ್ರಿಯೆಯನ್ನು ಪ್ರಚುರಪಡಿಸುವುದೇ ಆಗಿದೆ.
ವೇದಗಳು
ನಿತ್ಯವಾಗಿದ್ದು, ಮುದ್ರಿತ ಪುಸ್ತಕ ಅಥವಾ ಬಾಯಿಂದ ಬಾಯಿಗೆ ಹರಿದ ಮಂತ್ರಗಳಾಗಿರದೆ ಅವುಗಳಲ್ಲಿ ನಿತ್ಯ
ಸತ್ಯವಾದ ಬೋಧನೆಗಳಿವೆ. ಈ ಬೋಧನೆಗಳನ್ನು ಋಷಿ ಮುನಿಗಳು ಪ್ರತಿ ಯುಗದಲ್ಲಿಯೂ ನಮಗೆ ತಿಳಿಸಿ ಕೊಡುತ್ತಾರೆ.
ವೇದಗಳು
ಮುಖ್ಯವಾಗಿ ಯಜ್ಞ-ಯಾಗಾದಿಗಳು ಮತ್ತು ಅವಕ್ಕೆ ಸಂಭಂದಪಟ್ಟ ವಿಧಾನಗಳನ್ನು ಆದೇಶಿಸುವುದರಿಂದ ('ವಿಧಿ'ಸುವುದರಿಂದ); ಯಾವ ವಾಕ್ಯಗಳಲ್ಲಿ ಆದೇಶಾತ್ಮಕ ಕ್ರಿಯಾಪದಗಳು - 'ವಿಧಿಲಿನ್'
ಅಡಕವಾಗಿಯೋ (ಉದಾಹರಣೆಗೆ; "ಸ್ವರ್ಗಕಾಮೋ
ಯಜೇತ" - ಸ್ವರ್ಗವನ್ನು ಭಯಸುವವನು ಯಾಗವನ್ನು ಮಾಡಬೇಕು ಎನ್ನುವ ಆದೇಶಾತ್ಮಕ ಭಾವನೆ) ಅಂತಹವುಗಳನ್ನು
ಮಾತ್ರ 'ವಿಧಿ'ಗಳೆಂದು ಅಥವಾ 'ಅಧಿಕಾರಯುತ'ವಾದವುಗಳೆಂದು ಪರಿಗಣಿಸಿ ಉಳಿದವುಗಳನ್ನು ಅವಕ್ಕೆ ಪೂರಕವಾಗಿರುವ
ವಾಕ್ಯಗಳೆಂದು ಪರಿಗಣಿಸ ಬೇಕು. ಈ ರೀತಿಯ ಕ್ರಿಯಾಪದಗಳು ಕೇಳುಗರಲ್ಲಿ ತಾವು ಯಾಗವನ್ನು ಮಾಡಬೇಕು ಎನ್ನುವ ಬಯಕೆಯನ್ನುಂಟು ಮಾಡುವ ಅಂತಃಶಕ್ತಿಯಿಂದ ಕೂಡಿರುತ್ತವೆ.
ಇದನ್ನೇ 'ಭಾವನಾ' ಎಂದು ಹೇಳುತ್ತಾರೆ. ಬಯಕೆಯನ್ನು ಅಡಕವಾಗಿಸಿಕೊಂಡ ವೇದದ ನುಡಿಗಳನ್ನು 'ಶಬ್ದಿಭಾವನ'
(ಶಬ್ದ=ನುಡಿ) ಎನ್ನುತ್ತಾರೆ. ಈ ರೀತಿಯ ನುಡಿಗಳನ್ನು ಕೇಳಿದಾಕ್ಷಣ, ಕೇಳಿದವನಿಗೆ ಅದರಿಂದ ಪ್ರಯೋಜನವನ್ನು
ಪಡೆಯುವ ಉತ್ಕಟ ಬಯಕೆಯೂ ಉಂಟಾಗುತ್ತದೆ. ಈ ರೀತಿಯ ಬಯಕೆಯುಂಟಾದಾಗ ಅದನ್ನು 'ಅರ್ಥಿಭಾವನ' (ಅರ್ಥಿ=ಉಪಯೋಗ/ಪ್ರಯೋಜನ)
ಎಂದು ಕರೆಯಲಾಗಿದೆ.
ಮೇಲೆ ಹೇಳಿರುವ ವಿಷಯವನ್ನು ಸ್ಪಷ್ಟವಾಗಿ
ಅರಿಯಬೇಕೆಂದರೆ ವೇದದಲ್ಲಿನ ವಾಕ್ಯಗಳನ್ನು ಸರಿಯಾದ ಅರ್ಥ ಮತ್ತು ವಿಶ್ಲೇಷಣೆಗಳ ಮೂಲಕ ತಿಳಿದುಕೊಳ್ಳಬೇಕು.
ಇದಕ್ಕಾಗಿ ಮೀಮಾಂಸವು ಆರು ಹಂತಗಳನ್ನು ಸೂಚಿಸುತ್ತದೆ; 1) ಉಪಾಕರ್ಮ(ಪ್ರಾರಂಭ), 2) ಉಪಸಂಹಾರ(ತೀರ್ಮಾನ),
3) ಅಭ್ಯಾಸ(ಒತ್ತುಕೊಡುವುದಕ್ಕಾಗಿ ಪುನರುಚ್ಛಾರ), 4) ಅಪೂರ್ವತ (ಹಿಂದೆ ಬೇರೆ ಯಾವುದೇ ರೀತಿಯಿಂದ
ತಿಳಿಯಲಾಗದ್ದು), 5) ಫಲ (ಪ್ರಯೋಜನ) ಅಥವಾ ಅರ್ಥವಾದ
(ಕೇವಲ ಪ್ರಶಂಸೆ) 6) ಮತ್ತು ಉಪಪತ್ತಿ (ತರ್ಕ ಮತ್ತು
ಕಾರಣ).
ಒಮ್ಮೆ ಸರಿಯಾದ ಅರ್ಥವು ಸ್ಥಿರವಾದಲ್ಲಿ,
ವಿಧಿಗಳನ್ನು ಕೈಗೊಳ್ಳಬಹುದು.
'ಅರ್ಥಾಪತ್ತಿ'(ಸಮರ್ಥನೆ ಅಥವಾ
ಅನಿಸಿಕೆ)ಯು, ಸಾಮಾನ್ಯವಾಗಿ ಅಸಮಂಜಸವೆನಿಸುವ ಒಂದು ಅರ್ಥೈಸಲಾಗದ ಸಂಗತಿಯನ್ನು ವಿವರಿಸಲು ಅನಿವಾರ್ಯ.
ಉದಾಹರಣೆಗೆ, ಒಬ್ಬ ವ್ಯಕ್ತಿಯು ಹಗಲಿನಲ್ಲಿ ಏನನ್ನೂ ತಿನ್ನದೇ ಇದ್ದರೂ ಕೂಡ ದಪ್ಪನಾಗುತ್ತಿರುವುದು
ಕಂಡುಬಂದರೆ, ನಾವು ಅವನು ರಾತ್ರಿಯಲ್ಲಿ ರಹಸ್ಯವಾಗಿ ತಿನ್ನುತ್ತಿರಬೇಕೆಂದು ಊಹಿಸಿ ನಿರ್ಭಯವಾಗಿ ಸಮರ್ಥಿಸಬಹುದು.
'ಅರ್ಥಾಪತ್ತಿ'ಯಿಂದ ಲಭ್ಯವಾದ ಜ್ಞಾನವು ಪ್ರತ್ಯೇಕವಾಗಿರುವುದು ಏಕೆಂದರೆ ಈ ರೀತಿಯ ತಿಳುವಳಿಕೆಯು
ನಮಗೆ ಬೇರೆ ಯಾವುದೇ ವಿಧಾನದಿಂದ ಉಂಟಾಗುವುದಿಲ್ಲ.
'ಅನುಪಲಬ್ಧಿ'(ಗ್ರಹಿಸಲಾಗದ್ದು)
ಕೂಡ ಜ್ಞಾನವನ್ನು ಪಡೆಯುವ ಮೂಲವೆಂದು ಒಪ್ಪಲಾಗಿದೆ; ಏಕೆಂದರೆ ಅದು ತಕ್ಷಣವೇ ನಮಗೆ ಇಲ್ಲದಿರುವ ವಸ್ತುವಿನ
ಬಗ್ಗೆ ತಿಳುವಳಿಕೆಯನ್ನುಂಟು ಮಾಡುತ್ತದೆ. ಮೇಜಿನ ಮೇಲೆ ಈ ಮುಂಚೆ ಇದ್ದ ಒಂದು ಜಾಡಿಯ ಇಲ್ಲದಿರುವುದು
ಕಂಡು ಬಂದರೆ; ಅದರ ಇಲ್ಲದಿರುವಿಕೆಯು ಗೋಚರವಾಗುತ್ತದೆ.
ಪ್ರಾಸಂಗಿಕವಾಗಿ, ಮೀಮಾಂಸ ದರ್ಶನಕಾರರು
ದೋಷಗಳು ಹೇಗೆ ಒಳನುಸುಳತ್ತವೆಂದು ತಮ್ಮದೇ ಆದ ವಿವರಣೆಗಳನ್ನು ಮತ್ತು ಸಿದ್ಧಾಂತಗಳನ್ನು ಕೊಡುತ್ತಾರೆ.
ಇದು ಎರಡು ರೀತಿಯ ಅಭಿಪ್ರಾಯಗಳಿಗೆ ಎಡೆ ಮಾಡಿ ಕೊಟ್ಟಿದೆ.
ಮಸುಕಾದ ಬೆಳಕಿನಲ್ಲಿ ಹಗ್ಗವನ್ನು
ಹಾವೆಂದು ಗ್ರಹಿಸಿದಾಗ; ಈಗ ನೋಡುತ್ತಿರುವ ಹಗ್ಗ ಮತ್ತು ಈ ಹಿಂದೆ ನೋಡಿದ ಹಾವು ಎರಡೂ ನಿಜವಾದವು;
ಇಲ್ಲಿ ನೆನಪಿನ ಶಕ್ತಿಯ ಅಚಾತುರ್ಯದಿಂದ (ಸರಿಯಾಗಿ
ಕಾರ್ಯನಿರ್ವಹಿಸದೇ ಇರುವುದರಿಂದ) ಎರಡು ವಸ್ತುಗಳ ಬಗೆಗಿನ ಜ್ಞಾನದ ಮಿಶ್ರಣವಾಗಿ ಅದು ಭಯದ ಪ್ರಕ್ರಿಯೆಗೆ
ಕಾರಣವಾಯಿತು. ಇದನ್ನು 'ಅಖ್ಯಾತಿವಾದ'(ಮಿಥ್ಯಾ ಜ್ಞಾನದ ಅಲ್ಲಗಳೆಯುವಿಕೆ ಅಥವಾ ಭ್ರಮೆಯಿಂದುಂಟಾದ
ತಿಳುವಳಿಕೆಯನ್ನು ನಿರಾಕರಿಸುವುದು) ಎಂದು ಕರೆಯುತ್ತಾರೆ.
ಎರಡನೆಯದಾದ 'ವಿಪರೀತಖ್ಯಾತಿವಾದ'ವು,
ದೋಷವು ಎರಡು ನಿಜವಾದ ಆದರೆ ಪ್ರತ್ಯೇಕವಾದ ವಸ್ತುಗಳಿಗೆ ತಪ್ಪಾದ ಸಂಭಂದವನ್ನು ಕಲ್ಪಿಸುವುದರಲ್ಲಿದೆ
ಎಂದು ಪ್ರತಿಪಾದಿಸುತ್ತದೆ. (ಎರಡು ಬೇರೆ ಬೇರೆಯಾದ ಆದರೆ ನಿಜವಾದ ವಸ್ತುಗಳಿಗೆ ತಪ್ಪಾದ ಸಂಭಂದವನ್ನು
ಕಲ್ಪಿಸುವುದರಲ್ಲಿ ದೋಷವು ಅಡಗಿದೆ ಎಂದು ಎರಡನೆಯದಾದ 'ವಿಪರೀತಖ್ಯಾತಿ'ವಾದವು ಪ್ರತಿಪಾದಿಸುತ್ತದೆ.)
ಅಭೌತಿಕತೆ ಅಥವಾ ಅಧ್ಯಾತ್ಮ
(ಅ) ಪ್ರಪಂಚ
ಅದ್ವೈತ ಮೊದಲಾದ ಸಿದ್ಧಾಂತಗಳಿಗೆ
ಹೊರತಾಗಿ ಮೀಮಾಂಸ ದರ್ಶನವು ಅಸಂಖ್ಯಾತ ವಸ್ತುಗಳಿಂದ ಕೂಡಿರುವ ಈ ವಿಶ್ವವು ಸತ್ಯವೆಂದು ನಂಬುತ್ತದೆ. ಮೀಮಾಂಸ ದರ್ಶನದ ಪ್ರಕಾರ ಈ ಪ್ರಪಂಚವು, ಗ್ರಹಣೇಂದ್ರಿಯಗಳಿಂದ
ಕೂಡಿದ ಜೀವಿಗಳನ್ನು ಒಳಗೊಂಡಿದ್ದು; ಅದರಲ್ಲಿ ಜೀವಿಗಳು ತಾತ್ಕಾಲಿಕವಾಗಿ ವಾಸಿಸಿ ತಮ್ಮ ಕರ್ಮಕ್ಕನುಸಾರವಾಗಿ
ಒಳ್ಳೆಯ ಅಥವಾ ಕೆಟ್ಟ ಫಲಗಳನ್ನು ಅನುಭವಿಸುತ್ತವೆ. ವಿವಿಧ ಪ್ರಾಪಂಚಿಕ ವಸ್ತುಗಳು ಜೀವಿಗಳು ಒಳ್ಳೆಯ
ಅಥವಾ ಕೆಟ್ಟ ಫಲವನ್ನು ಅನುಭವಿಸಲು ಪೂರಕ ಸಾಧನಗಳಾಗಿವೆ.
(ಬ) ಆತ್ಮ
ಪ್ರಪಂಚದಲ್ಲಿ ಅಸಂಖ್ಯಾತವಾದ ಜೀವಾತ್ಮಗಳಿವೆ. ಅವುಗಳು ಶಾಶ್ವತವಾದರೂ
ಕೂಡ ಅವು ನಿಜವಾದ ದೇಹವನ್ನು ಹೊಂದಿದ್ದಾಗ ತಾವು ನಿಜವಾದ ಪ್ರಪಂಚದಲ್ಲಿ ಕೈಗೊಂಡ ಸುಕರ್ಮ ಅಥವಾ ಕುಕರ್ಮಗಳಿಗನುಸಾರವಾಗಿ
ಜನ್ಮಾಂತರಗಳನ್ನು/ಪುನರ್ಜನ್ಮವನ್ನು ಹೊಂದುತ್ತವೆ.
ಆತ್ಮಕ್ಕೆ ತನ್ನದೇ ಆದ ಅರಿವೆನ್ನುವುದು
ಇರುವುದಿಲ್ಲ. ಅದರಲ್ಲಿ ಅರಿವು ಅಥವಾ ತಿಳುವಳಿಕೆಯು ಅದು ಮನಸ್ಸು, ಜ್ಞಾನೇಂದ್ರಿಯಗಳು ಮತ್ತು ವಿಷಯ
ವಸ್ತುಗಳೊಂದಿಗೆ ಸಹಯೋಗ ಹೊಂದಿದಾಗ ಉದ್ಭವವಾಗುತ್ತದೆ. ಇದು ವಿಶೇಷವಾಗಿ ಜ್ಞಾನೇಂದ್ರಿಯಗಳು ಅಥವಾ
ಗ್ರಹಣೇಂದ್ರಿಯಗಳು ತಮಗೆ ಸಂಭಂದಪಟ್ಟ ವಿಷಯ ವಸ್ತುಗಳೊಂದಿಗೆ ಸಂಪರ್ಕವೇರ್ಪಡಿಸಿಕೊಂಡಾಗ ಉಂಟಾಗುತ್ತದೆ.
ಗಾಢ ನಿದ್ರೆಯಲ್ಲಿ ಸ್ಪೃಹೆಯಿಲ್ಲದಿರುವುದು/ಅರಿವು ಇಲ್ಲದಿರುವುದು ಆತ್ಮಕ್ಕೆ ತನ್ನದೇ ಆದ ಅರಿವು
ಇರುವುದಿಲ್ಲವೆನ್ನುವುದನ್ನು ನಿರೂಪಿಸುತ್ತದೆ.
ವ್ಯಕ್ತಿಯೊಬ್ಬನು ಸ್ವರ್ಗವನ್ನು
ಪಡೆಯಲು 'ಜ್ಯೋತಿಸ್ತೋಮ' ಯಜ್ಞವನ್ನು ಕೈಗೊಂಡನೆಂದುಕೊಳ್ಳಿ; ಆಗ ಅದರ ಸುಪ್ತ ಪ್ರಭಾವವು ಸೂಕ್ಷ್ಮ
ರೂಪದಲ್ಲಿ ಆತ್ಮದಲ್ಲಿ ನೆಲೆಸಿದ್ದು; ಆ ವ್ಯಕ್ತಿಯ ಮರಣಾನಂತರ ಅದರ ಫಲವು ಉಂಟಾಗುತ್ತದೆ. ಹೀಗೆ ಸುಪ್ತವಾಗಿರುವ
ಮತ್ತು ಅಗೋಚರವಾದ ಶಕ್ತಿ ಅಥವಾ ಸತ್ವವನ್ನು 'ಅಪೂರ್ವ'ವೆನ್ನುತ್ತಾರೆ.
ವೇದಗಳು ಪೂರ್ಣವಾಗಿ ಮನುಷ್ಯನನ್ನು
ಕರ್ಮ(ಯಜ್ಞ-ಯಾಗಗಳು) ಮಾಡಲು ಆದೇಶಿಸುವುದರಿಂದ, ಪ್ರತಿಯೊಬ್ಬ ಮನುಷ್ಯನು ಕರ್ತವ್ಯಕ್ಕಾಗಿ ಕರ್ತವ್ಯ
ಮಾಡಲು ಬದ್ಧನಾಗಿರುತ್ತಾನೆ. ಯಜ್ಞಕ್ರಿಯೆಯು ಮಾಡತಕ್ಕದ್ದು; ಏಕೆಂದರೆ ವೇದಗಳು ಹಾಗೆ ಮಾಡೆಂದು ಆದೇಶಿಸುತ್ತವೆಯಾದ್ದರಿಂದ;
ಅವನ್ನು ಮಾಡಲಾರೆನೆಂದು ಅಥವಾ ಅವನ್ನು ಬೇರೆ ವಿಧಾನದಿಂದ ಮಾಡುತ್ತೇನೆನ್ನದೆ ಅನಿವಾರ್ಯವಾಗಿ ಅವನ್ನು
ಮಾಡದೇ ವಿಧಿಯಿಲ್ಲ!
ಈ ರೀತಿಯ ಕರ್ತವ್ಯಗಳನ್ನು ಎರಡು
ವಿಶಾಲವಾದ ಗುಂಪುಗಳಾಗಿ ವಿಂಗಡಿಸಿದ್ದಾರೆ; ಅವೆಂದರೆ 'ನಿತ್ಯ' ಅಥವಾ ದಿನನಿತ್ಯ ಕೈಗೊಳ್ಳಲೇ ಬೇಕಾದ
ಕರ್ಮಗಳು ಮತ್ತು 'ನೈಮಿತ್ತಿಕ' ಅಥವಾ ಸಾಂದರ್ಭಿಕವಾದ (ಆದರೆ ಕೈಗೊಳ್ಳಲೇ ಬೇಕಾದ) ಕರ್ಮಗಳು. ಇವು
ಆತ್ಮನ ನೈತಿಕತೆಯನ್ನು ಉತ್ತಮಪಡಿಸಿ ಅದನ್ನು ಪರಿಶುದ್ಧಗೊಳಿಸುತ್ತವೆ.
(ಕ) ಮೋಕ್ಷ ಅಥವಾ
ಮುಕ್ತಿ
ಒಬ್ಬ ವ್ಯಕ್ತಿ ಹೊಂದಬಹುದಾದ ಅತ್ಯುನ್ನತ
ಒಳಿತೆಂದರೆ (ನಿಃಶ್ರೇಯಸವೆಂದರೆ), ಜನ್ಮಾಂತರಗಳ ಸರಪಳಿಯಿಂದ ಸಂಪೂರ್ಣ ಬಿಡುಗಡೆ. ಈ ಸ್ಥಿತಿಯಲ್ಲಿ
ಆತ್ಮನು ಸಂಪೂರ್ಣವಾಗಿ ಯಾತನೆ ಮತ್ತು ದುಃಖಗಳಿಂದ ಮುಕ್ತನಾಗಿರುತ್ತಾನೆ ಆದರೆ ಆ ಸ್ಥಿತಿಯಲ್ಲಿ ಆತ್ಮನಿಗೆ
ಅರಿವು ಮತ್ತು ಆನಂದವಿರುವುದಿಲ್ಲ!
ಬಹುಶಃ ಜೀವನದ ಅಂತಿಮ ಗುರಿಯು ಸ್ವರ್ಗದಲ್ಲಿ
'ನಿತ್ಯಾನಂದ'ವನ್ನು ಪಡೆಯುವುದು ಮೀಮಾಂಸ ದರ್ಶನದ ಗುರಿಯಾಗಿತ್ತೆಂದು ತೋರುತ್ತದೆ; ಆದರೆ ಈಗ ಲಭ್ಯವಿರುವ
ಸಾಹಿತ್ಯವು ಅದನ್ನು ಅನುಮೋದಿಸುವುದಿಲ್ಲ.
ಮೋಕ್ಷವನ್ನು ಹೊಂದುವುದು ಹೇಗೆ?
ಎನ್ನುವುದನ್ನು ಬಹುಶಃ ಬಹಳ ಸರಳವಾಗಿ ಮೀಮಾಂಸ ದರ್ಶನದಲ್ಲಿ ಉತ್ತರಿಸಿದ್ದಾರೆನಿಸುತ್ತದೆ. 'ಕಾಮ್ಯಕರ್ಮ'ಗಳನ್ನು
ಅಥವಾ ಆಸೆಯಿಂದೊಡಗೂಡಿದ ಕರ್ಮಗಳನ್ನು ಮಾಡದೇ ಇರುವುದರಿಂದ ಪುನರ್ಜನ್ಮವು ಉಂಟಾಗುವುದಿಲ್ಲ. ಇಷ್ಟವಿಲ್ಲದೆ
ಮಾಡಿದ ಪಾಪಕಾರ್ಯಗಳ ಫಲವನ್ನು ವಿವಿಧ ರೀತಿಯ 'ಪ್ರಾಯಶ್ಚಿತ್ತ'ವನ್ನು ಮಾಡಿಕೊಳ್ಳುವುದರ (ಪಾಪಗಳಿಂದ
ಮುಕ್ತಿಹೊಂದುವ ಯಜ್ಞಕರ್ಮಗಳನ್ನು ಮಾಡುವುದರಿಂದ) ಮೂಲಕ ತೊಡೆದುಹಾಕಬಹುದು. 'ನಿತ್ಯ' ಮತ್ತು 'ನೈಮಿತ್ತಿಕ'
ಕರ್ಮಗಳನ್ನು ಮಾಡುವುದರಿಂದ 'ಚಿತ್ತಶುದ್ಧಿ' ಅಥವಾ ಮನಸ್ಸಿನ ಶುದ್ಧತೆ ಉಂಟಾಗುತ್ತದೆ; ಒಂದು ವೇಳೆ
ಈ ಕರ್ಮಗಳನ್ನು ಕೈಗೊಳ್ಳದಿದ್ದರೆ 'ಪ್ರತ್ಯವಾಯದೋಷ' ಅಥವಾ 'ಕರ್ಮರಾಹಿತ್ಯ ದೋಷ'ವುಂಟಾಗಿ ಅದು ಮೋಕ್ಷದ
ಹಾದಿಯಲ್ಲಿ ತೊಡಕಾಗಿ ಪರಿಣಮಿಸುತ್ತದೆ. ಪ್ರಾರಬ್ಧಕರ್ಮವು (ಈ ಜನ್ಮಕ್ಕೆ ಕಾರಣವಾದ ಕರ್ಮವು) ಅದನ್ನು
ಈ ಜನ್ಮದಲ್ಲಿ ಅನುಭವಿಸುವುದರಿಂದ ಕರಗಿಹೋಗುತ್ತದೆ. ಆದ್ದರಿಂದ ಈ ದೇಹವು ಬಿದ್ದುಹೋದ ನಂತರ ಯಾವುದೇ
ಶೇಷವು ಉಳಿಯದಿರುವುದರಿಂದ ಆತ್ಮವು ಈ ಲೋಕಕ್ಕೆ ಮತ್ತೆ ಹಿಂತಿರುಗುವುದಿಲ್ಲ. ಮೇಲೆ ತಿಳಿಸಿರುವ ಕರ್ಮಗಳನ್ನು
ಕೈಗೊಳ್ಳುವುದರ ಪರಿಣಾಮವಾಗಿ ಮುಕ್ತಿಯು ತನ್ನಷ್ಟಕ್ಕೇ ತಾನೇ ಉಂಟಾಗುತ್ತದೆ.
(ಡ) ಈಶ್ವರ ಅಥವಾ
ಭಗವಂತ
ಮೀಮಾಂಸ ದರ್ಶನದ ಮತ್ತೊಂದು ಪ್ರಶ್ನೆಯೆಂದರೆ
ಅದು ದೇವರು ಅಥವಾ ಈಶ್ವರನು ಇದ್ದಾನೋ ಇಲ್ಲವೋ ಎನ್ನುವುದನ್ನು ಚರ್ಚಿಸಿ; ದೇವರ ಅಸ್ತಿತ್ವವನ್ನು ಅಲ್ಲಗಳೆಯುವುದು.
ಈ ಭೌತಿಕ ಜಗತ್ತನ್ನು ಉಂಟು ಮಾಡುವ ವಸ್ತುಗಳು ಯಾವಾಗಲೂ ಶಾಶ್ವತವಾಗಿ ಅಸ್ತಿತ್ವದಲ್ಲಿರುವುದರಿಂದ
ಮತ್ತು ಜೀವಾತ್ಮರ ಅದೃಷ್ಟ ಅಥವಾ ಕರ್ಮಗಳಿಗನುಸಾರವಾಗಿ ಈ ವಸ್ತುಗಳು ಪ್ರಚೋದನೆಗೊಳಪಟ್ಟು ಸೃಷ್ಟಿ
ಕ್ರಿಯೆಯನ್ನು ಉಂಟು ಮಾಡುತ್ತವೆಯಾದ್ದರಿಂದ, ಸೃಷ್ಟಿಯನ್ನು ರಚಿಸಲು ಯಾವುದೇ ವ್ಯಕ್ತಿಗತ ಭಗವಂತ ಅಥವಾ
ಕರ್ತೃವಿನ ಅವಶ್ಯಕತೆಯನ್ನು ಒಪ್ಪಿಕೊಳ್ಳುವ ಪ್ರಮೇಯವಿಲ್ಲ. (ವಿಶ್ವದಲ್ಲಿರುವ ವಸ್ತುಗಳು ಶಾಶ್ವತ
ಮತ್ತು ಜೀವ ಅಥವಾ ಆತ್ಮಗಳ ಕರ್ಮಕ್ಕನುಸಾರವಾಗಿ ಈ ಸೃಷ್ಟಿ ಕ್ರಿಯೆಯು ಸಹಜವಾಗಿ ಜರುಗುತ್ತದೆಯಾದ್ದರಿಂದ
ಇದನ್ನು ನಿಯಂತ್ರಿಸುವ ಅಥವಾ ಅದಕ್ಕೆ ದಿಶೆಯನ್ನು ಕೊಡುವ ಇನ್ನೊಬ್ಬ ವ್ಯಕ್ತಿ ಅಥವಾ ಭಗವಂತನ ಅವಶ್ಯಕತೆಯಿಲ್ಲ;
ಆದ್ದರಿಂದ ಅವನ ಇರುವಿಕೆಯನ್ನು ಮೀಮಾಂಸ ದರ್ಶನವು ಅಲ್ಲಗಳೆಯುತ್ತದೆ.)
ಉಪಸಂಹಾರ
ಒಂದು ಸೋಜಿಗದ ಸಂಗತಿಯೆಂದರೆ ವೇದಗಳ
ಪ್ರಭುತ್ವವನ್ನು ಎತ್ತಿಹಿಡಿಯಲು ಹೋದ ಪದ್ಧತಿಯು ಆ ಗ್ರಂಥವನ್ನೇ ಭಗವಂತನನ್ನಾಗಿಸಿ ಅದನ್ನು ಸೃಜಿಸಿದ
ವ್ಯಕ್ತಿಯನ್ನೇ (ಭಗವಂತನನ್ನೇ) ಬಹಿಷ್ಕರಿಸುತ್ತವೆ!
ಭಗವಂತನ ಸಂಗತಿ ಒತ್ತಟ್ಟಿಗಿರಲಿ, ವೈದಿಕ ಕ್ರಿಯೆಗಳಲ್ಲಿ ತಮ್ಮ ಆಹುತಿಗಳನ್ನು ಸ್ವೀಕರಿಸಲು ಮೊರೆಯಿಡುವ
ಇಂದ್ರ, ಮಿತ್ರ, ವರುಣ ಮೊದಲಾದವರನ್ನೂ ಕೂಡ ಕಟ್ಟು ಕಥೆಗಳಲ್ಲಿನ ಅಥವಾ ನಾಟಕಗಳಲ್ಲಿನ 'ಕಾಲ್ಪನಿಕ
ಪಾತ್ರ'ಗಳೆಂದು ಮೀಮಾಂಸ ದರ್ಶನದ ಪ್ರತಿಪಾದಕರು ಪರಿಗಣಿಸುತ್ತಾರೆ.
ಅಂತಿಮ ಕೇಡನ್ನು ಹೋಗಲಾಡಿಸಿಕೊಳ್ಳಲು
(ಮೋಕ್ಷದ ಹಾದಿಯನ್ನು ಸುಗುಮಗೊಳಿಸಿಕೊಳ್ಳಲು); ಕರ್ಮ(ಯಾಗ, ಯಜ್ಞ ಅಥವಾ ವೈದಿಕ ಕ್ರಿಯೆ)ಗಳನ್ನು ಮಾಡುವುದನ್ನು
ಅತಿಯಾಗಿ ಹೇರಿದ್ದರಿಂದ ಅಥವಾ ವಿಪರೀತವಾಗಿ ಪ್ರತಿಪಾದಿಸಿದ್ದರಿಂದ ಮೀಮಾಂಸ ದರ್ಶನವು ತನ್ನ ಸಮಾಧಿಯನ್ನು
ತಾನೇ ತೋಡಿಕೊಂಡು, ಅದರ ಜೀವಂತ ಅಸ್ತಿತ್ವವನ್ನು ಕಳೆದುಕೊಂಡಿತೆಂದು ಘಂಟಾಘೋಷವಾಗಿ ಹೇಳಿದರೆ ತಪ್ಪಿಲ್ಲವೆನಿಸುತ್ತದೆ.
ಆದರೂ ಕೂಡ, ಮೀಮಾಂಸ ದರ್ಶನದ 'ಜ್ಞಾನ
ಸಿದ್ಧಾಂತ' ಮತ್ತು ಅದು ವೈದಿಕ ನುಡಿಗಟ್ಟುಗಳು ಅಥವಾ 'ಸೂತ್ರ'ಗಳನ್ನು ವಿಶ್ಲೇಷಿಸುವ ವಿಧಾನಗಳನ್ನು
ಶ್ರದ್ಧೆಯಿಂದ ಅಭ್ಯಸಿಸಿದರೆ ಅವು ನಮಗೆ ವೇದಾಂತ ಪದ್ಧತಿಗಳನ್ನು ಚೆನ್ನಾಗಿ ಅರಿತುಕೊಳ್ಳುವುದರಲ್ಲಿ
ಸಹಾಯಕವಾಗುತ್ತವೆ.
*******
No comments:
Post a Comment