Pages

Wednesday, August 8, 2012

ಮಂತ್ರಕ್ಕೆ ಮಾವಿನಕಾಯಿ ಉದುರೀತೇ

ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದೇ ಒಂದಿಷ್ಟು ಅಧ್ಯಯನ ಮಾಡಲು,ಸಿಕ್ಕಬೇಕಾಗಿದ್ದ ವಯಸ್ಸಿನಲ್ಲಿ ಸಿಗದಿದ್ದ ಅವಕಾಶಗಳು ಈಗಲಾದರೂ ಸಿಕ್ಕುತ್ತಿದೆ. ಅದಕ್ಕಾಗಿ ಗುರುಗಳಾದ ಶ್ರೀ ಸುಧಾಕರಶರ್ಮರು, ಶ್ರೀ ವಿಶ್ವನಾಥಶರ್ಮರನ್ನು ಸ್ಮರಿಸುತ್ತೇನೆ.ಈಗ ವಿಚಾರಕ್ಕೆ ಬರುವೆ. ಯಾವಾಗಲೂ ಶ್ರೀ ಸುಧಾಕರಶರ್ಮರು ಒಂದು ಮಾತನ್ನು ಸ್ಪಷ್ಟ ವಾಗಿ ಹೇಳುತ್ತಲೇ ಇರುತ್ತಾರೆ," ಏನೇ ಮಾಡ ಬೇಕಾದರೂ ಅದರ ಅರ್ಥ ತಿಳಿದುಕೊಂಡು ಮಾಡಿ, ಆಗ ತಾನೇ ತಾನಾಗಿ ಯಾವುದು ಮಾಡಬೇಕು, ಯಾವುದು ಮಾಡುವುದರಿಂದ ಪ್ರಯೋಜನವಿಲ್ಲ ಎಂಬುದು ನಿಮಗೇ ಅರ್ಥವಾಗುತ್ತೆ" .ಆರಂಭದಲ್ಲಿ ಅವರ ಮಾತನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. "ಎಲ್ಲ ವಿಚಾರಗಳಿಗೂ ವೇದವೇ ಮೂಲ. ಅದರ ಹೊರತಾಗಿ ನೀವು ಎಲ್ಲೆಲ್ಲಿ ಸುತ್ತಿ ಬಂದರೂ ಮತ್ತೆ ನೀವು ವೇದವನ್ನು ಆಶ್ರಯಿಸಿದಾಗಲೇ  ನಿಮಗೆ ಪರಿಹಾರ ದೊರಕುವುದು, ಎಂದು ಕಟು      ವಾಗಿಯೇ ಹೇಳುತ್ತಾರೆ-ಸುಧಾಕರ ಶರ್ಮರು.  ನಾನೂ ಒಂದಿಷ್ಟು ಅವರ ಆಡಿಯೋ ಕೇಳಿ, ಚತುರ್ವೇದಿಗಳು ವೇದದ ಬಗ್ಗೆ ಸರಳ ವಾಗಿ ಬರೆದಿರುವ ಸಾಹಿತ್ಯವನ್ನು ಓದಿ, ಕೆಲವು ವೇದಮಂತ್ರಗಳ ಅರ್ಥವನ್ನು ತಿಳಿದೊಕೊಳ್ಳುವ ಪ್ರಯತ್ನ ಮಾಡುತ್ತಿರುವಾಗ ನನಗೆ ಮೊದಮೊದಲು ನನ್ನ ಮನದಲ್ಲಿ ಈ ರೀತಿ ಭಾವನೆಗಳು ಮೂಡಿದವು...

1.ಅಗ್ನಿಮೀಳೇ ಪುರೋಹಿತಂ ಜ್ಞಸ್ಯದೇವ ಮೃತ್ವಿಜಮ್|
ಹೋತಾರಂ ರತ್ನ ಧಾತಮಂ||

ಈ ಮಂತ್ರಕ್ಕೆ ಅರ್ಥವನ್ನು  ನೋಡಿದಾಗ...

ಅನಾದಿಹಿತಕಾರಿಯೂ,ಎಲ್ಲಕ್ಕಿಂತಲೂ ಎಲ್ಲರಿಗಿಂತಲೂ ಶ್ರೇಷ್ಠನೂ,ಋತುಪರಿವರ್ತನಕಾರಿಯೂ,ಸತ್ಕರ್ಮ ಪ್ರಕಾಶಕನೂ,ಸರ್ವದಾತೃವೂ, ಸರ್ವ ಗೃಹೀತೃವೂ,ಪ್ರಕಾಶಮಯ ಗ್ರಹೋಪಗ್ರಹಗಳ ಸರ್ವೋಚ್ಛಧಾರಕನೂ, ಆದ ಸರ್ವಾಗ್ರಣೀ ತೇಜೋಮಯ ಪ್ರಭುವನ್ನು ಸ್ತುತಿಸುತ್ತೇನೆ.

......ಪದಗಳ ಅರ್ಥ ನೋಡಿದ್ದಾಯ್ತು. ಏನು ಇದರಿಂದ ಪ್ರಯೋಜನ? ಹೀಗೆ ಯಾವ ಮಂತ್ರವನ್ನು ನೋಡಿದಾಗಲೂ, ಇಲ್ಲಾ ಭಗವಂತನ ಸ್ತುತಿ, ಇಲ್ಲವೇ ಶಾಂತಿಕೊಡು, ಪುಷ್ಟಿಕೊಡು,...ಇತ್ಯಾದಿ...ಇತ್ಯಾದಿ.... ಈ ಮಂತ್ರಗಳನ್ನು   ಒಳಗೊಂಡಿರುವ  ವೇದವನ್ನು ಸುಧಾಕರ ಶರ್ಮರು" ಜೀವನ ವಿಜ್ಞಾನ  ಅಂತಾರಲ್ಲಾ!! ಏನಿದೆ, ಇದರಲ್ಲಿ?!!

ಅನೇಕ ದಿನಗಳು  ಯಾವ ಮಂತ್ರವನ್ನು ನೋಡಿದರೂ ಹೀಗೆಯೇ ಅನ್ನಿಸುತ್ತಿತ್ತು. ನನಗೆ ಖುಷಿಯನ್ನೇ ಕೊಡುವುದಿಲ್ಲ ವಲ್ಲಾ! ಅನ್ನಿಸುತ್ತಿತ್ತು.

ಗಾಯತ್ರಿ ಮಂತ್ರದ ಅರ್ಥವನ್ನು ಒಮ್ಮೆ  ಮನಸ್ಸಿನಲ್ಲೇ ಚಿಂತನೆ ನಡೆಸಿದೆ   | ಧಿಯೋ ಯೋ ನ: ಪ್ರಚೋದಯಾತ್|  ...ಅಂದರೆ...."ನನ್ನಲ್ಲಿ ಧೀ ಶಕ್ತಿಯನ್ನು ಪ್ರಚೋದಿಸು"
ಗಾಯತ್ರಿ ಮಂತ್ರದಿಂದ  ಅದೆಷ್ಟು ಜನರು ಸ್ಪೂರ್ಥಿ ಪಡೆದಿದ್ದಾರೆ! ಅದರಲ್ಲಿ ಅದೆಂತಹ ಅದ್ಭುತ ಶಕ್ತಿ!!...ಹೀಗೆಯೇ ಯೋಚಿಸುವಾಗ ಶರ್ಮರ     ಮಾತು ನೆನಪಾಯ್ತು. ಅರ್ಥವನ್ನು ತಿಳಿದು ಆಚರಿಸಿ. ಅಂದರೆ ನನ್ನಲ್ಲಿ ಧೀಶಕ್ತಿಯನ್ನು ಪ್ರಚೋದಿಸು, ಎಂದು ಭಗವಂತನಲ್ಲಿ ಪ್ರಾರ್ಥಿಸಿ ನಾನು ರಗ್ ಹೊದ್ದು  ಬೆಚ್ಚಗೆ ಮಲಗಿದರೆ  ಫಲಸಿಗುತ್ತದೆಯೇ? ಸಾಧ್ಯವೇ ಇಲ್ಲ. ಸಾವಿರ ಸಾವಿರ ಗಾಯತ್ರಿ ಮಂತ್ರ ಜಪ ಮಾಡಿ ಅಂತಾ ಹೇಳ್ತಾರೆ, ಅದರರ್ಥವೇನು?   ಪ್ರತಿ ಭಾರಿ ಮಂತ್ರವನ್ನು ಹೇಳಿದಾಗಲೂ ಅದರ ಅರ್ಥವನ್ನು ಅನುಸಂಧಾನ ಮಾಡಿಕೊಂಡಾಗ ನಮ್ಮಲ್ಲಿ " ಧೀಶಕ್ತಿ " ಹೆಚ್ಚಾಗದೇ ಇದ್ದೀತೇ?

ಹಾಗೆಯೇ ನಮಗೆ ಶಕ್ತಿ ಕೊಡು, ಶಾಂತಿ ಕೊಡು, ನೆಮ್ಮದಿ ಕೊಡು, ಎಂದೆಲ್ಲಾ ಮಂತ್ರಗಳ ಅರ್ಥ ಇದೆ. ಮಂತ್ರ ಹೇಳಿದ ಮಾತ್ರಕ್ಕೆ  ನಮಗೆ ಶಕ್ತಿಯಾಗಲೀ, ನೆಮ್ಮದಿಯಾಗಲೀ, ಶಾಂತಿಯಾಗಲೀ ದೊರಕಲು ಸಾಧ್ಯವೇ? ಮಂತ್ರಕ್ಕೆ ಮಾವಿನಕಾಯಿ ಉದುರೀತೇ? ಖಂಡಿತಾ ಸಾಧವಿಲ್ಲ. ಹಾಗಾದರೆ... ಮಂತ್ರ ದಿಂದ ಪ್ರಯೋಜನ ಇಲ್ಲವೇ?
ಖಂಡಿತಾ ಇದೆ.ಆದರೆ ಅದರ ಅರ್ಥದ ಅನುಸಂಧಾನ ಮಾಡಿಕೊಂಡು ಅದರಂತೆ ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳಬೇಕು, ಅದಕ್ಕೆ ತಕ್ಕಂತೆ ನಮ್ಮ ಜೀವನ ಕ್ರಮವನ್ನು ರೂಢಿಸಿಕೊಳ್ಳಬೇಕು,  ಶಕ್ತಿ ನಮಗೆ ಬೇಕೆಂದರೆ ಒಳ್ಳೆಯ ಆಹಾರವನ್ನು ಒಳ್ಳೆಯ ಆಲೋಚನೆಯೊಂದಿಗೆ ಸ್ವೀಕರಿಸಬೇಕು, ಶಾಂತಿ, ನೆಮ್ಮದಿ ಬೇಕೆಂದರೆ ನಾವು ಅದಕ್ಕೆ ನ್ಯಾಯ ಒದಗಿಸುವಂತೆ ಜೀವನ ಮಾಡಬೇಕು. ಸತ್ಯ ಪಥದಲ್ಲಿ ನಡೆಯಬೇಕು, ವಂಚನೆ ಮಾಡಕೂಡದು, ನಿಸ್ವಾರ್ಥ ಬದುಕು ನಡೆಸಬೇಕು.

ಅಂತೂ ನಿತ್ಯವೂ ವೇದ ಮಂತ್ರಗಳನ್ನು ಅರ್ಥ ಅನುಸಂಧಾನ ಮಾಡಿಕೊಂದು ಪಠಿಸಿದರೆ ನಮ್ಮ  ಜೀವನ ಕ್ರಮ ಶಿಸ್ತು ಬದ್ಧ ವಾದೀತು. ಆಗ ತಾನೇ ತಾನಾಗಿ ಮಂತ್ರದಲ್ಲಿ ನಾವು ಪ್ರಾರ್ಥಿಸಿದಂತೆ ಸುಖ,ನೆಮ್ಮದಿ, ಶಾಂತಿ ಎಲ್ಲವೂ ಸಿಗುವುದರಲ್ಲಿ ಸಂಶಯವಿಲ್ಲ. ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಹೇಳಿದ ಒಂದು ಮಾತು ನೆನಪಾಗುತ್ತೆ  "  ಅರ್ಧ ಗಂಟೆ ಧ್ಯಾನ
 ಮಾಡಬೇಕೆಂದರೆ ದಿನದಲ್ಲಿ ಉಳಿದ 23 ಗಂಟೆ 30ನಿಮಿಷಗಳು ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಅಂದರೆ ನಮ್ಮ ಬದುಕು  ಹೇಗಿದ್ದರೆ ಧ್ಯಾನದ ಒಂದು ಉತ್ತಮ ಸ್ಥಿತಿ ಲಭಿಸೀತು, ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕಲ್ಲವೇ?

1 comment:

  1. ಶ್ರೀಧರರೇ, ಮಂತ್ರಗಳ ಅರ್ಥಗೊತ್ತಿಲ್ಲದೇ ಪೂಜೆ ನಡೆಸುವುದು ಕುರುಡರು ಆನೆ ಬಣ್ಣಿಸಿದ್ದಕ್ಕೆ ಸಮವಾಗುತ್ತದೆ! ಮಂತ್ರ ಸಂತುಲಿತ ಜೀವನವನ್ನೇ ಅನುಷ್ಠಾನದಲ್ಲಿರಿಸಿಕೊಂಡಾಗ ಮೊದಮೊದಲು ಮಂತ್ರಗಳ ಆಯಗಲ ಗೊತ್ತಾಗದಿದ್ದರೂ ಕ್ರಮೇಣ, ಆಂಗ್ಲ ಭಾಷೆಯ ಪದಗಳನ್ನು ಅವರಿವರು ಬಳಸುವಾಗ ಸಾಂದರ್ಭಿಕವಾಗಿ ಅರ್ಥಮಾಡಿಕೊಳ್ಳುವಂತೇ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು; ಅರಿತವರು ಎಂದು ಮನ ಒಪ್ಪುವವರ ಹತ್ತಿರ ಕೇಳಿ ತಿಳಿದುಕೊಳ್ಳಬೇಕು, ಹೀಗೆಲ್ಲಾ ಮಾಡುವುದರಿಂದ ಮಾತ್ರ ವೇದಮಂತ್ರಗಳ ಬಳಕೆಯ ಗೊತ್ತುಗುರಿ ನಮಗೆ ತಿಳಿಯುತ್ತದೆ. ನಿಮ್ಮ ಹಾದಿಯಲ್ಲಿ ನಾನೂ ಸದಾ ಇದ್ದೇನೆ, ನೀವೇ ತುಸು ಮುಂದಿರಬಹುದು, ಧನ್ಯವಾದ

    ReplyDelete