Pages

Thursday, September 27, 2012

ಸಿರ್ಸಿಯ ವೇದಾಧ್ಯಾಯೀ ಶ್ರೀ ಪರಮೇಶ್ವರ್ ಅವರ ಬಿಚ್ಚು ಮಾತುಗಳು



ವೇದಸುಧೆಯ ಅಭಿಮಾನಿಗಳಾದ ಸಿರ್ಸಿಯ ವೇದಾಧ್ಯಾಯೀ ಶ್ರೀ ಪರಮೇಶ್ವರ್  ಇವರು ಸಂಸ್ಕೃತ MA ಪದವೀದರರು. ಸಿರ್ಸಿಯಲ್ಲಿ ವೈದಿಕ ವೃತ್ತಿ ಮಾಡುತ್ತಿರುವ ಶ್ರೀಯುತರು ದಿನದಲ್ಲಿ ಬಹುಭಾಗವನ್ನು ಅಧ್ಯಯನಕ್ಕಾಗಿ ಮೀಸಲಿಟ್ಟಿರುವುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಶ್ರೀಯುತರೊಡನೆ ಅಂತರ್ಜಾಲದಲ್ಲಿ ಕರೆಮಾಡಿ ನಮ್ಮ ಸಂಭಾಷಣೆಯನ್ನು ಅವರ ಅನುಮತಿ ಪಡೆದು ರೆಕಾರ್ಡ್ ಮಾಡಿರುವೆ. ಇಲ್ಲಿ ಪ್ರಕಟಿಸುವುದಾಗಿ ನಾನು ಶ್ರೀಯುತರ ಗಮನಕ್ಕೆ ತಂದಿಲ್ಲವಾದರೂ ವೇದಸುಧೆಯೊಡನೆ ಮಾಡಿದ ಸಂವಾದ ನಿಮಗಾಗಿ ತಾನೇ.  ಶ್ರೀಯುತರು ಈ ಮೇಲ್ ಮೂಲಕ ವ್ಯಕ್ತಪಡಿಸಿದ ಅವರ ಅಭಿಪ್ರಾಯಗಳ ಜೊತೆಗೆ ಸಂಭಾಷಣೆಯ ಆಡಿಯೋ ಇಲ್ಲಿದೆ.
ಶ್ರಿಧರರೆ,
ವೈದಿಕರ (ಪುರೋಹಿತರ) ಇಂದಿನ ಪರಿಸ್ಥಿತಿಗೆ ನಾಕಂಡಂತೆ ಮುಖ್ಯವೆನಿಸುವ ಕಾರಣಗಳು...
     ೧ ಅತೃಪ್ತಿ.
        ಸಾಮಾಜಿಕ ಏರು ಪೇರುಗಳಿಗೆ ನೇರವಾಗಿ ಬಲಿಯಾದ ಪುರೋಹಿತರು ಅತೃಪ್ತರಾಗಿದ್ದಾರೆ. ಗೌರವಮಾತ್ರದಿಂದ ಜೀವನ ನಿರ್ವಹಣೆ ಕಷ್ಟಸಾಧ್ಯ! ಪೌರೋಹಿತ್ಯವನ್ನು ಉದ್ಯೋಗ ಎನ್ನಲು ಸಾಧ್ಯವಾಗುತ್ತಿಲ್ಲಾ! ಹಾಗಂತ ಇವರು ನಿರುದ್ಯೋಗಿಗಳೂ ಅಲ್ಲ!
    ೨ ವಿದ್ಯಾರ್ಹತೆ ಕೊರತೆ.
      ಎಲ್ಲೂ ಸಲ್ಲದವ ಇಲ್ಲಿ ಸಲ್ಲುತ್ತಾನೆ! ಇಲ್ಲಿ ಯಾರೂ ಪ್ರಶ್ನಿಸುವುದಿಲ್ಲಾ ಎಂಬ ವಿಶ್ವಾಸ. ಅಲ್ಲದೆ ಇಲ್ಲಿ ಓದಿದವನೂ-ಓದದವನೂ ಸಮಾನ ಸಂಮಾನಕ್ಕೆ ಒಳಗಾಗುತ್ತಾನೆ. ಸ್ವತಃ ಯಜಮಾನನಿಗೂ ವೈದಿಕದ ಜ್ಞಾನವಿಲ್ಲದಿರುವುದು. ಹೀಗೆ ಇಬ್ಬರಲ್ಲೂ ಅರ್ಹತೆ ಪ್ರಶ್ನಾತೀತವಾಗಿದೆ!!!
    ೩ ಅನಧಿಕೃತ ಸ್ಥಿತಿ.
       ಈ ಸಮಾಜದಲ್ಲಿ ಪುರೋಹಿತನ ನಿಲುವು ಅಧಿಕೃತವಾಗಿಲ್ಲ. ಎಲ್ಲಕಡೆಯಿಂದ ಮುಚ್ಚುಮರೆ ತುಂಬಿದೆ. (ಜಾತಿ-ಮತ-ಪಂಥ-ಮಡಿ-ಮೈಲಿಗೆ-ಬುಧ್ಧಿವಾದ-ಬುಧ್ಧಿಜೀವಿಗಳವಾದ-ಶ್ರದ್ಧೆ-ನಂಬಿಕೆ ಇತ್ಯಾದಿ)
    ೪ ಭವಿಷ್ಯವಾದಿಗಳ ಅಟ್ಟಹಾಸ.
       ಇಂದು ಭವಿಷ್ಯವಾದಿಗಳು ವೈದ್ಯರಂತೆಯೂ, ವೈದಿಕರು ಔಷಧಿವಿತರಕರಂತೆಯೂ ಆಗಿದ್ದಾರೆ. ಸಂಸ್ಕಾರವೋ, ಚಿತ್ತಶುದ್ಧಿಯೋ ಮೂಲವಾಗಬೇಕಿದ್ದ ಕರ್ಮ, ಇಂದು ಸ್ವಾರ್ಥ ಸಾಧನೆಗೆ ಹೆಚ್ಚು ಬಳಕೆಯಾಗುತ್ತಿದೆ.
     ೫ ಆಡಂಬರ ಮತ್ತು ಸಾಂಪ್ರದಾಯಿಕತೆ.
       ಆಡಂಬರ ಮುಖ್ಯವಾಗಿ ಸಂಸ್ಕಾರಕರ್ಮಗಳು ಅರ್ಥಹೀನವಾಗಿವೆ. ಮತ್ತು ಸಾಂಪ್ರದಾಯಿಕ ಆಚರಣೆ ಜನಜನಿತವಾಗಿ, ಅಲ್ಲಲ್ಲಿ ಹೊಸ ಹೊಸ ಸಂಪ್ರದಾಯಗಳು ಎದ್ದು, ಕರ್ಮವನ್ನೇ ತಿಂದುಹಾಕಿವೆ.
ಇನ್ನು ವೇದೋಕ್ತ ಕರ್ಮಗಳು ಎಂಬ ವಿಷಯವಾಗಿ...
ಶ್ರುತಿವಿಹಿತ ಕರ್ಮಗಳನ್ನು ಶ್ರೌತಕರ್ಮಗಳೆಂದೂ, ಸ್ಮೃತಿವಿಹಿತಕರ್ಮಗಳನ್ನು ಸ್ಮಾರ್ತಕರ್ಮಗಳೆಂದೂ ವಿಂಗಡಿಸಿದ್ದಾರೆ. ಹೆಚ್ಚಾಗಿ ನಮ್ಮ ಆಚರಣೆ ಸ್ಮಾರ್ತವೇ ಆಗಿದೆ. ಹೀಗೆ ಹಿನ್ನೆಲೆಯಿರುವ ಕರ್ಮ ಮುನ್ನೆಡೆಗೆ ಕಾರಣ ಎಂಬಲ್ಲಿ ಸಂಶಯವಿಲ್ಲಾ!
ಶ್ರುತಿ - ಸ್ಮೃತಿ - ಸೂತ್ರ - ಕಾರಿಕಾ - ಪ್ರಯೋಗ ಈ ಕ್ರಮದಲ್ಲಿ ಕರ್ಮಕ್ಕೆ ಹತ್ತಿರವಾದದ್ದು ಪ್ರಯೋಗ. ಸೂತ್ರಾದಿಯಾಗಿ ಪ್ರಯೋಗಾಂತ ಗ್ರಂಥಗಳು ಕಲ್ಪಗ್ರಂಥಗಳು. ಈ ಕಲ್ಪಗಳನ್ನು ಆಧರಿಸಿಬಂದ ಕರ್ಮಗಳನ್ನು ಮಾನ್ಯವೆಂದೂ, ಕಪೋಲ ಕಲ್ಪಿತ ಕರ್ಮಗಳನ್ನು ಅಮಾನ್ಯವೆಂದೂ ನಿರ್ಧರಿಸೋಣ ಅಲ್ಲವೇ!!!???

No comments:

Post a Comment