Pages

Friday, September 7, 2012

ಪ್ರವರ

ಸಾಮಾನ್ಯವಾಗಿ ರೂಢಿಯಲ್ಲಿರುವ ಬ್ರಾಹ್ಮಣ ಕುಟುಂಬಗಳಲ್ಲಿ ಮಕ್ಕಳಿಗೆ ಉಪನಯನ ಮಾಡಿದಮೇಲೆ ಮನೆಗೆ ಯಾರೇ ಹಿರಿಯರು ಬಂದರೂ ಅಪ್ಪ-ಅಮ್ಮ ಮಕ್ಕಳಿಗೆ ತಪ್ಪದೆ ಹೇಳುವುದು" ಪ್ರವರ ಹೇಳಿ ನಮಸ್ಕಾರ ಮಾಡು". ಉಪನಯನವಾದಮೇಲೆ ಯಾವ ಮಂತ್ರ ಬಾರದಿದ್ದರೂ ಪ್ರವರವನ್ನು ಮಾತ್ರ ಕಂಠಪಾಠಮಾಡಿ ಬಂದಹಿರಿಯರಿಗೆಲ್ಲಾ ಪ್ರವರವನ್ನು ಒಪ್ಪಿಸಿ ಬಿಟ್ಟರೆ ಸಾಕು, ಅಪ್ಪ-ಅಮ್ಮನಿಗೆ ಬಲು ಸಂತೋಷ. ನನ್ನ ಮಗ ಎಷ್ಟು ಚೆನ್ನಾಗಿ ಪ್ರವರ ಹೇಳ್ತಾನೆ! ಗೊತ್ತಾ? ಎಲ್ಲರ ಮುಂದೂ ಹೇಳಿಸಿದ್ದೇ ಹೇಳಿಸಿದ್ದು. ಇತ್ತೀಚೆಗೆ ನನಗೆ ಬಲು ದ್ವಂದ್ವ ಕಂಡದ್ದು ಈ ಪ್ರವರದಲ್ಲಿ. ಆ ಬಗ್ಗೆ  ಸ್ವಲ್ಪ ಚಿಂತನ-ಮಂಥನ ನಡೆಸೋಣ.
ಪ್ರವರದಲ್ಲಿನ ಕೆಲವು ಸಾಲುಗಳ ನೆನಪು ಮಾಡುವೆ

ಚತುಸ್ಸಾಗರ ಪರ್ಯಂತಮ್ ಗೋ ಬ್ರಾಹ್ಮಣೇಭ್ಯ: ಶುಭಂ ಭವತು  ...................... ತ್ರಯಾ ಋಷೇಯ ಪ್ರವರಾನ್ವಿತ .................ಗೋತ್ರ: ..................... ಸೂತ್ರ: ...................ಶಾಖಾಧ್ಯಾಯೀ ..................ಶರ್ಮ ಅಹಂಭೋ ಅಭಿವಾದಯೇ

ಬ್ರಹ್ಮೋಪದೇಶ ಮಾಡುವಾಗ ಸತ್ಯವನ್ನೇ ಹೇಳುತ್ತೇನೆಂದು ಪ್ರಮಾಣ  ಮಾಡುವ  ವಟು ಪ್ರತಿನಿತ್ಯ ಪ್ರವರ ಹೇಳುವಾಗ  ತನಗರಿವೇ ಇಲ್ಲದೆ   ಎಷ್ಟೊಂದು ಸುಳ್ಳು ಹೇಳಬೇಕಾಗುತ್ತದೆ ! ಹಾಗೇ ಗಮನಿಸಿ
1. ಮೊದಲನೆಯದಾಗಿ  ನಮ್ಮ ಕುಟುಂಬದ ,ನಮ್ಮ ಬಂಧುಬಳಗದ ಹಿತವನ್ನೇ ಬಯಸದ ನಾವು    ನಿಜವಾಗಿ  ನಾಲ್ಕು ಸಾಗರಗಳ ಪರ್ಯಂತ ಇರುವ ಪ್ರದೇಶದಲ್ಲಿನ  ಗೋವುಗಳ ಮತ್ತು ಬ್ರಾಹ್ಮಣರ ಶುಭವನ್ನು ಬಯಸುತ್ತೇವೆಯೇ? [ ಎಲ್ಲಾ ಪ್ರಾಣಿಗಳ ಎನ್ನಲು     ಗೋ ಮತ್ತು ಎಲ್ಲಾ ಮಾನವರ  ಎನ್ನಲು   ಬ್ರಾಹ್ಮಣ ಪದ ಬಳಕೆಯಾಗಿದೆ] ಆದರೂ ನಾವು ಗೋ ಮತ್ತು ಬ್ರಾಹ್ಮಣ ಎಂದಷ್ಟೇ ಭಾವಿಸಿದರೂ ಕೂಡ ಅಷ್ಟು ವಿಶಾಲ ಚಿಂತನೆಯನ್ನು ನಾವು ಮಾಡುತ್ತೇವೆಯೇ? ಮಕ್ಕಳಿಗೆ ಕಲಿಸುಇತ್ತೇವೆಯೇ?
2. ಋಕ್/ಯಜು....ಮೊದಲಾದ ವೇದಶಾಖೆಯನ್ನು  ಅಧ್ಯಯನ ಮಾಡುತ್ತಿರುವ [ ಶಾಖಾಧ್ಯಾಯೀ]  ಇಂತವನಾದ ನಾನು ನಿಮಗೆ ನಮಸ್ಕರಿಸುವೆ. ಇಲ್ಲೂ ಗಮನಿಸ ಬೇಡವೇ? ಪ್ರವರ ಹೇಳುವವರಲ್ಲಿ  ಪ್ರತಿಶತ ಎಷ್ಟು ಜನ  ವೇದಾಧ್ಯಯನ ಮಾಡುತ್ತಾರೆ?  ಪ್ರತಿಶತ ಐದು ಇರಬಹುದೇ?  ಮಕ್ಕಳ ಬಾಯಲ್ಲಿ ಸುಳ್ಳನ್ನೇ  ಹೇಳಿಸುತ್ತೀವಲ್ಲವೇ? 

ಪ್ರವರ ಹೇಳಿಕೊಂಡು ನಮಸ್ಕರಿಸುವುದು ತಪ್ಪೆಂದು ನಾನು ಹೇಳುತ್ತಿಲ್ಲ. ಆದರೆ ನಾವು ಅದರಂತೆ ನಡೆಯುತ್ತೇವೆಯೇ? ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಡವೇ? 
ಇದೇ ರೀತಿ .....
ಸರ್ವೇ ಭವಂತು ಸುಖಿನ:....ಮಂತ್ರ ಹೇಳುವಾಗಲೂ ನನ್ನ ಮನದಲ್ಲಿ ಈ ದ್ವಂದ್ವ ನನ್ನನ್ನು ಚುಚ್ಚುತ್ತದೆ. ಅಷ್ಟೇ ಅಲ್ಲ , ನಾವು ಹೇಳುವ ಬಹುಪಾಲು ವೇದ ಮಂತ್ರಗಳಲ್ಲಿ "ಭಗವಂತನು ಒಬ್ಬನೇ" "ಅವನು ನಿರಾಕಾರ" ಎಂದೂ  " ಮಾನವ ಕುಲವೆಲ್ಲಾ  ಒಂದೇ. ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಎನ್ನುವ ಮಾತುಗಳು  ಅದೆಷ್ಟು ಮಂತ್ರಗಳಲ್ಲಿ ಬರುತ್ತದೆಯೋ!  ವೇದಮಂತ್ರವನ್ನು ಗಟ್ಟಿಯಾಗಿ ಹೇಳುತ್ತಾ  ಸುತ್ತ ಮುತ್ತಲ ಜನರಿಗೆಲ್ಲಾ ಮಂತ್ರ  ಕೇಳಿದರೂ  ನಮ್ಮ ಮನಸ್ಸು ಹೃದಯಕ್ಕೇ  ಕೇಳಿರುವುದಿಲ್ಲ. ನಿಜವಾಗಿ ಕೇಳಿದ್ದರೆ ನಾವು ಭೇದ ಭಾವ ಮಾಡುತ್ತಿರಲಿಲ್ಲ.   ನಮಗೆ ತೋಚಿದಂತೆಲ್ಲಾ ಆಕಾರವನ್ನು     ಭಗವಂತನಿಗೆ ಕೊಡುತ್ತಿರಲಿಲ್ಲ. ಭಗವಂತನನ್ನು ದೇವಾಲದಲ್ಲಿ ಕೂಡಿಹಾಕುತ್ತಿರಲಿಲ್ಲ. ನಮ್ಮ ಬುಡದಲ್ಲೇ ಇರುವ ದೀನ-ದುರ್ಬಲರ ಹಸಿವಿನ ಮುಖವನ್ನು ನೋಡಿ ಕೊಂಡು ವಿಗ್ರಹದ ಮುಂದೆ ಹಣ್ಣು-ಕಾಯಿ ಇಟ್ಟು ನೈವೇದ್ಯವನ್ನೂ ಮಾಡುತ್ತಿರಲಿಲ್ಲ. 

3 comments:

  1. ಆತ್ಮೀಯ ಶ್ರೀಧರ್,
    ನಿಮ್ಮ ವಿಚಾರ ಸರಿಯೇ. ಆದರೆ, ನಮ್ಮ ಜೀವನವನ್ನು ಒಮ್ಮೆ ಅವಲೋಕಿಸಿದಾಗ ನಾವು ಮಾಡುತ್ತಿರುವುದು ಎಷ್ಟು ಸರಿಯಿರಬಹುದು? ಎಷ್ಟಕ್ಕೆ ಆತ್ಮೆವಿಮರ್ಷೆ ಮಾಡಿಕೊಂಡಿರ ಬಹುದು? ಎಷ್ಟನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿರಬಹುದು? ಈ ನಿಮ್ಮ ಪ್ರಶ್ನೆ ಕೂಡ ಅನುಭವದ ಆಧಾರದ ಮೇಲೆ ಬಂದಿರುವುದು ತಾನೇ? ಯಾವುದೇ ಆದರು ತಪ್ಪಿನ ಅರಿವಾಗುವುದು ಸರಿಯದ್ದುದರ ಪರಿಚಯವಾದ ಮೇಲೆಯೇ!
    ಮಹರ್ಷಿ ರಮಣರು ಹೇಳುತ್ತಾರೆ " ಈಗೇನು ನೀನು ಮಾಡುತ್ತಿರುವೆ ಅದನ್ನು ಮುಂದುವರೆಸು, ದಿನ ಕಳೆದಂತೆ ನಿನ್ನಲ್ಲೊಂದು ಪ್ರಶ್ನೆ ಉದ್ಭವಿಸಿದರೆ ಅದಕ್ಕೆ ಉತ್ತರ ಕಾಣಲು ಪ್ರಯತ್ನಿಸು. ಗುರುಹಿರಿಯರ ಮಾರ್ಗದರ್ಶನ ಪಡೆ. ನಿನಗೆ ಸರಿಯೆನಿಸಿದ್ದನ್ನು ಮಾಡು. ಸಾಧನೆಗೆ ಇವೆಲ್ಲ ಪೂರಕವಾದ ಮೆಟ್ಟಿಲುಗಳು. ಬೆಳೆದಂತೆ ವಿಷಯ ವಿಷದ ವಾಗುತ್ತದೆ."
    ಧನ್ಯವಾದಗಳು.

    ReplyDelete
  2. ಹೌದು ಪ್ರಕಾಶ್, ನನ್ನ ವಯೋಮಾನದಲ್ಲಿ ಐದು ದಶಕಗಳು ಕಳೆದು ಹೋಗಿದೆ. ನನ್ನ ಅಂತರಾಳದಲ್ಲಿ ಮೂಡಿದ ವಿಚಾರವನ್ನು ತಟ್ಟನೆ ಹಂಚಿಕೊಂಡು ಬಿಡುವ ಸ್ವಭಾವ. ಯಾರು ಏನು ಅಂದು ಕೊಳ್ಳುತ್ತಾರೋ, ಎಲ್ಲಿ ಖಂಡಿಸುತ್ತಾರೋ, ಎನ್ನುವ ಚಿಂತೆಯನ್ನೂ ಮಾಡಲು ಹೋಗುವುದಿಲ್ಲ. ನನ್ನ ಮನದಲ್ಲಿ ಮೂಡಿದ್ದು ತಪ್ಪು ಎಂದು ತಿಳಿದವರು ಹೇಳಿದಾಗ ಅದು ನನಗೆ ಮನದಟ್ಟಾದಲ್ಲಿ ಮತ್ತೆ ತಿದ್ದಿಕೊಳ್ಳುವುದಕ್ಕೆ ಹಿಂದೆಗೆಯುವುದಿಲ್ಲ. ಅಂತೂ ಸತ್ಯದ ಹುಡುಕಾಟ ನಡೆದೇ ಇರುತ್ತದೆ.ಒಟ್ಟಿನಲ್ಲಿ ಜೀವನ ಪೂರ್ಣ ಸತ್ಯವನ್ನು ಹುಡುಕಾಡುತ್ತಲೇ ಒಂದು ದಿನ ಹೊರಟುಬಿಡುವುದು ಅಷ್ಟೇ!

    ReplyDelete
  3. <>
    ಅವನ ಲೀಲೆ ನೋಡಿ ಬೆರಗಾಗುವುದಷ್ಟೇ ನಮ್ಮ ಕೆಲಸ!!

    ReplyDelete