Pages

Tuesday, February 14, 2012

ಈ ಸಂಸಾರವೆಂಬ ಸಾವಿನ ಮನೆಯಿಂದ ಕಾಪಾಡು

ಶ್ರೀ ಸುಬ್ರಹ್ಮಣ್ಯರು  ವಿವೇಕ ಚೂಡಾಮಣಿ    ಗ್ರಂಥದಿಂದ ಆಯ್ದ ಭಾಗಗಳನ್ನು ಅದ್ಭುತವಾಗಿ ವೇದಸುಧೆಯಲ್ಲಿ ಬರೆಯುತ್ತಿದ್ದಾರೆ. ವೇದಸುಧೆಯ ಉದ್ಧೆಶವಾದರೋ ಒಂದು ಸದ್ವಿಚಾರಗಳ ಪ್ರಕಟವಾದಾಗ ನಮ್ಮ ಜೀವನಕ್ಕೆ ಅದು ಎಷ್ಟು ಉಪಯೋಗವಾಗುತ್ತದೆ , ಎಂಬುದು ತಿಳಿಯಬೇಕು. ಅಂದರೆ ಅದರ ಬಗ್ಗೆ ಒಂದಿಷ್ಟು ಚರ್ಚೆ ಆದಾಗ  ಅದರ ಹೂರಣದ ಅರಿವಾಗುತ್ತದೆ. ಇಂದಿನ   ವಿವೇಕ ಚೂಡಾಮಣಿಯ ಭಾಗವನ್ನು  ಓದಿದ ನಾನು ಅಲ್ಲಿ ಪ್ರತಿಕ್ರಿಯಿಸಿದರೆ  ಉದ್ದವಾದೀತು, ಎಂಬ ಆತಂಕದಿಂದ ಅದನ್ನೇ ಒಂದು ಲೇಖನವಾಗಿ ಪ್ರಕಟಿಸಿರುವೆ 

              ಇದೊಂದು ಅತ್ಯಂತ ಯೋಗ್ಯವಾದ ಚಿಂತನ-ಮಂಥನ ಮಾಡಬೇಕಾದ ವಿಷಯ.ಸಂಸಾರವನ್ನು ಸಾವಿನ ಮನೆ ಎಂದರು. ವೇದಾಂತಿ ಗಳನ್ನು  ಈ ಬಗ್ಗೆ ಆಕ್ಷೇಪಿಸುವುದುಂಟು. ಶಂಕರರು "  ಸಂಸಾರಂ ದು:ಖಮಯಂ ,ಶಾರೀರಂ ರೋಗಮಯಂ " ಎಂದೆಲ್ಲಾ ಹೇಳಿದರಲ್ಲಾ! ಹಾಗಾದರೆ ಸಂಸಾರವೆಂದರೆ ಬರೀ ದ:ಖ ವೆ? , ಶರೀರವು    ಯಾವಾಗಲೂ ರೋಗಮಯವೇ?  ಅದೇ ರೀತಿ ಇಲ್ಲಿ ಸಂಸಾರವನ್ನು ಸಾವಿನ ಮನೆ ಎಂದಿದ್ದಾರೆ. 
ಈ ಬಗ್ಗೆ ಚರ್ಚಿಸ ಬೇಕಾದರೆ  ಮೊದಲುನಿಸ್ಸಂಕೋಚವಾಗಿ, ನಿರ್ಮಲ ಮನಸ್ಸಿನಿಂದ ಮನದಾಳದ ಮಾತಿಗೆ ಅಕ್ಷರ ಕೊಡಬೇಕು. ಸಾಮಾನ್ಯವಾಗಿ ಬರೆಯುವ ಬರಹವೇ ಬೇರೆಯಾಗಿರುತ್ತದೆ, ಮನದೊಳಗಿನ ವಿಚಾರವೇ ಬೇರೆಯಾಗಿರುತ್ತದೆ. ಅದೂ ತನ್ನ ಸಂಸಾರದ ವಿಚಾರದಲ್ಲಿ ಬರೆದಾಗ ಓದುಗರು ಏನೆಂದು ಕೊಂಡಾರು? ಎಂಬ ಭಯ! ಅನುಭವವೆಂದರೆ ಮೊದಲಿಗೆ ಅವನದ್ದು, ನಂತರ ಕಂಡಿದ್ದು, ಕೇಳಿದ್ದು. ಅದರಲ್ಲಿ ಸ್ವಂತ ಅನುಭವವೇ ಹೆಚ್ಚು  ಸತ್ಯ.  ಇನ್ನು ವಿಷಯಕ್ಕೆ ನೇರ ಬರುವೆ.

ನಿಜ ಹೇಳಿ, ಸಂಸಾರವೆಂಬುದು ಸ್ವರ್ಗವೋ? ಅಥವಾ ಸಾವಿನ ಮನೆಯೋ? 

ಮನುಷ್ಯನಿಗೆ ಸಂಸಾರದ ಅನುಭವ ಆರಂಭವಾಗುವುದು ಜನ್ಮದಿ೦ದಲೇ ಆದರೂ  ಬ್ರಹ್ಮಚರ್ಯ ಜೀವನದಲ್ಲಿ  ಸಂಸಾರದ ಅನುಭವ ಅಷ್ಟರ ಮಟ್ಟಿಗೆ ಆಗಲಾರದು. ತಂದೆ ತಾಯಿಯ ಸುಖ ದು:ಖಗಳನ್ನು  ಕಣ್ಣಾರೆ ನೋಡುತ್ತಿದ್ದರೂ ಅದಕ್ಕೂ ಮೀರಿದ ಪತಿ -ಪತ್ನಿಯರ ಜೀವನಾನುಭವವೇ ಬೇರೆ. ಅದರಲ್ಲಿ  ಎಲ್ಲವೂ ಇದೆ. ಸಾಮಾನ್ಯವಾಗಿ ವಿವಾಹವಾಗುವಾಗ ಗೃಹಮೈತ್ರಿ ಕೂಟ ವೆಂಬುದನ್ನು ನೋಡುತ್ತಾರೆ. ಅದರ ಬಗ್ಗೆ ನನಗೆ ತಿಳಿಯದು . ಬಹುಶ: ಜೀವನ ಪರ್ಯಂತ ಮೈತ್ರಿಯಿಂದ ,ಪರಸ್ಪರ ಹೊ೦ದಾಣಿಕೆಯಿ೦ದ ಸಾಮರಸ್ಯದಿಂದ ಸುಖವಾಗಿ ಬಾಳಲು , ಪತಿ-ಪತ್ನಿಯರ ಗುಣ ಸ್ವಭಾವಗಳನ್ನು  ಹೊ೦ದಿಸಿಕೊ೦ಡು ವಿವಾಹ ಮಾಡುವ ಪ್ರಕ್ರಿಯೆ ಇದ್ದಿರಬಹುದು. ಜಾತಕದಿ೦ದ ಅದೆಷ್ಟು  ತಿಳಿಯುತ್ತದೋ ನನಗೆ ಅರಿವಿಲ್ಲ. ಅಂತೂ ಜಗತ್ತನ್ನು ನೋಡುವಾಗ  ಬಹುಪಾಲು ಸಂಸಾರಗಳು ನೋವಿನ ನರಕಗಳಾಗಿ ಕೊನೆಗೆ ಆತ್ಮಹತ್ಯೆ ಯಲ್ಲಿ ಕೊನೆಗಾಣುವ ನೂರಾರು ಉಧಾಹರಣೆ ಗಳನ್ನೂ ನೋಡಬಹುದು. ಅಥವಾ ಸಂಸಾರತೊರೆದು ಸನ್ಯಾಸ ಸ್ವೀಕರಿಸಿರುವ ಉಧಾಹರ ಣೆಗಳೂ      ಇಲ್ಲದಿಲ್ಲ. 

ಹೀಗೇಕೆ? ಎಂದು ಚಿಂತಿಸಿದಾಗ  ಸಂಸಾರ ನಿರ್ವಹಣೆಗೆ ಸರಿಯಾದ ಮಾರ್ಗದರ್ಶನದ ಕೊರತೆ , ಅಥವಾ ಅರಿವಿನ ಕೊರತೆ ,ಎಂದು ಹೇಳಬಹುದು. 

ವೇದದ ಬಗ್ಗೆ ತಿಳಿಯುತ್ತಾ ಹೋದಾಗಲೆಲ್ಲಾ  ಸುಖೀ ಸಂಸಾರಕ್ಕೆ ಅಗತ್ಯವಾದ ಹಲವು ಮಂತ್ರಗಳು ಅಲ್ಲಿವೆ.  ವೇದಾಧ್ಯಾಯೀ ಸುಧಾಕರಶರ್ಮರ ಉಪನ್ಯಾಸಗಳನ್ನು ಕೇಳುವಾಗ  ವೇದಗಳಲ್ಲಿ   ಎಲ್ಲವೂ ಇದೆ ಎಂಬ ಭಾವ ಮೂಡುತ್ತಾದರೂ  ಅವುಗಳನ್ನು ಅರ್ಥೈಸುವವರಾರು? ವೇದವೆ೦ದರೆ ಒ೦ದಿಷ್ಟು ಮ೦ತ್ರಗಳನ್ನು  ಕ೦ಠಪಾಠ ಮಾಡುವುದು ,ಎ೦ದಷ್ಟೇ ಹಲವರ ನಿಲುವು. ಆದರೆ  "ಅದೊ೦ದು ಜೀವನ ಸೂತ್ರ " ಎನ್ನುತ್ತಾರೆ, ಸುಧಾಕರ ಶರ್ಮರು. ಇಲ್ಲಿ ವೇದಾ೦ತ ಕ್ಕೂ   ವೇದಕ್ಕೂ  ಒಂದಿಷ್ಟು  ಗೊ೦ದಲ ನಿರ್ಮಾಣವಾಗುತ್ತೆ.  ವೇದಾ೦ತವೆ೦ಬುದು ವೇದದ ಕಡೆಯ ಭಾಗವೆ೦ದು  ತಿಳಿಯಬೇಕಾದರೆ ಮೊದಲು ವೇದ ವನ್ನು   ತಿಳಿಯಬೇಕಲ್ಲವೇ?   ಆ ಕೆಲಸ ಆಗಬೇಕಾಗಿದೆ. ಸ೦ಸಾರವ೦ಬುದು  " ಸಾವಿನ ಮನೆಯೋ ಅಥವಾ ನೆಮ್ಮದಿಯ ಗೂಡೋ" ಎ೦ಬುದು ಸ್ಪಷ್ಟ ವಾಗಬೇಕಾದರೆ ನಮಗೆ ವೇದ ಮತ್ತು ವೇದಾ೦ತದ ಅರಿವು ಇರಬೇಕಾಗುತ್ತದೆ.  ಇ೦ದಿನ ಪರಿಸ್ಥಿತಿಯಲ್ಲಿ ವೇದಸುಧೆಗೆ ವೇದಾ೦ತ ತಿಳಿಸುವವರು ಹಲವರು ಲಭ್ಯ , ಆದರೆ ವೇದದ ತಿರುಳನ್ನು  ಸರಳವಾಗಿ ತಿಳಿಸಿ ಜನರ ನೆಮ್ಮದಿಯ ಬಾಳಿಗೆ ಅನುಕೂಲವಾಗುವವರು ಬೇಕು. 

         ಪತಿ ಪತ್ನಿಯರ ಮನಸ್ಥಾಪದಲ್ಲಿ  ಆತ್ಮಹತ್ಯೆ ಮಾಡಿಕೊ೦ಡ ಮಗನ ಭಾವಚಿತ್ರ ದ ಮು೦ದೆ ಕಣ್ಣೀರಿಡುತ್ತಿರುವ ತಾಯಿ

ದುರ್ಬಲ ಮನಸ್ಸಿನವರು ಪ್ರಾಣಕ್ಕೆ ಸ೦ಚಕಾರ ತ೦ದು ಕೊಳ್ಳುತ್ತಾರೆ , ಗಟ್ಟಿಮನಸ್ಸಿನವರು ಸ೦ಸಾರ ದೂಡುತ್ತಾರೆ. ಅಷ್ಟೇ. ನಿಜಕ್ಕೂ ಇದೊ೦ದು  ನಮ್ಮ ಸಮಾಜದ ದೊಡ್ಡ ಸಮಸ್ಯೆಯೇ ಹೌದು. ಇದಕ್ಕಿ೦ತಲೋ  ಹೆಚ್ಚು ಆತ೦ಕದ  ವಿಷಯವೆ೦ದರೆ  ವಿದ್ಯಾರ್ಥಿಗಳ ಆತ್ಮಹತ್ಯೆ! ಚಿಕ್ಕಪುಟ್ಟ  ವಿಷಯಗಳಿಗೆ ಜೀವನಕ್ಕೆ ಕೊನೆ ಎಳೆಯುತ್ತಿರುವ ನೂರಾರು  ಉಧಾಹರಣೆಗಳಿವೆ.         ಇದಕ್ಕೆ ಕಾರಣ, ಆತ್ಮಸ್ಥೈರ್ಯದ ಕೊರತೆ. ಇವೆಲ್ಲಕ್ಕೂ ಪರಿಹಾರ ವೇದದಲ್ಲಿದೆ. ತಿಳಿಸಿ  ಕೊಡುವವರಿಗಾಗಿ  ನಾವು ಹುಡುಕಬೇಕಿದೆ. ಓದುಗರೂ ಕೂಡ  ನಮ್ಮ ಪ್ರಯತ್ನಕ್ಕೆ ನೆರವಾಗಬಹುದು.

4 comments:

  1. ವಿವೇಕ ಚೂಡಾಮಣಿಯ ಪ್ರಸ್ತುತ ಉಲ್ಲೇಖಿತ 'ಸಂಸಾರವೆಂಬ ಸಾವಿನ ಮನೆ' ಎಂಬುದು ಭೌತಿಕ ಸಾವಿನ ಬಗ್ಗೆ ಇರಲಾರದು.

    ReplyDelete
  2. [ಪರಿಹರಿಸಲು ಆಗದಿರುವ ಸಂಸಾರವೆಂಬ ಜಂಜಡಗಳ ಕಾಳ್ಗಿಚ್ಚಿನಿಂದ ಬೆಂದು-ನೊಂದು ದುರದೃಷ್ಟವೆಂಬ ಬಿರುಗಾಳಿಯಿಂದ ಅದುರಿ-ಬೆದರಿ ನಿನ್ನಲ್ಲಿಯೇ ಶರಣು ಬಂದಿರುವ ನನ್ನನ್ನು ಈ ಸಂಸಾರವೆಂಬ ಸಾವಿನ ಮನೆಯಿಂದ ಕಾಪಾಡು; ಏಕೆಂದರೆ ಬೇರೆ ಯಾವ ಗುರುವನ್ನೂ ರಕ್ಷಕನನ್ನೂ ನಾನರಿಯೆನು]

    ವಿವೇಕ ಚೂಡಾಮಣಿಯಲ್ಲಿ ಸಂಸಾರವೆಂಬ ಸಾವಿನ ಮನೆ ಎಂದರೆ ಲೌಕಿಕ ಕಷ್ಟ ಕಾರ್ಪಣ್ಯಗಳೆಂದೇ ಅರ್ಥ ವಲ್ಲವೇ? ಸಾವು ಬಂದರೆ ಪರವಾಗಿಲ್ಲ. ಸಾಯದೆ ಸಂಸಾರ ಜಂಜಾಟ ದಲ್ಲಿ ತೊಳಲುತ್ತಿರುವ ಹಲವು ಉಧಾಹರಣೆಗಳು ಇಲ್ಲವೇ? ವೇದಜ್ಞಾನವಾದರೂ ನೆಮ್ಮದಿಯ ಜೀವನಕ್ಕೆ ಸಹಾಯಕವಾಗುವುದೆಂಬ ಪೂರ್ಣ ಭರವಸೆ ನನ್ನದು. ವೇದದ ಮೂಲಕ ಜೀವನದ ನಿಜಅರಿವು ಮೂಡಿಸುವ ಪ್ರಯತ್ನ ನಮ್ಮದಾಗಲಿ, ಎಂಬುದು ನನ್ನಾಸೆ.

    ReplyDelete
  3. ಶ್ರೀಯುತರೇ,

    ಈ ಬಗ್ಗೆ ಚರ್ಚೆ ನಡೆದದ್ದು ಕಂಡು ಸಂತೋಷವಾಯಿತು. ಮೇಲಿನ ವಾಕ್ಯದಲ್ಲಿ 'ಈ' ಅಥವಾ 'ಇಂತಹ' (ಇಂತಹ ಎನ್ನುವುದೇ ಇಲ್ಲಿ ಹೆಚ್ಚು ಪ್ರಶಸ್ತ) ಸಾವಿನಿಂದ ಎಂದು ಹೇಳಿರುವುದು ಸಂಸಾರದ ಜಂಜಡಗಳನ್ನು ಉಲ್ಲೇಖಿಸಿ ಎಂದು ತಿಳಿಯಬಹುದು. ವ್ಯಾವಹಾರಿಕ ಲೋಕದಲ್ಲಿ ಹಣ ಸಂಪಾದನೆಯಿಂದ ಬರುವ ಸುಖ-ನೆಮ್ಮದಿ (ಅದೇ ಮೂಲದಿಂದ) ಇವೆಲ್ಲವೂ ವ್ಯಾವಹಾರಿಕ ಜಗತ್ತಿನಲ್ಲೇ ಇರುವಂತೆ ಮಾಡಿಬಿಡುತ್ತದೆ ಪರಮಾರ್ಥವನ್ನು ತಲುಪಲು ಅವಕಾಶ ಕೊಡುವುದಿಲ್ಲ ಎನ್ನುವುದು ಶಂಕರ ಭಾಷ್ಯದ ತಿರುಳು. ಶಂಕರರ ದೃಷ್ಟಿಯಲ್ಲಿ ಪರಮಾರ್ಥವೆಂದರೆ ಆತ್ಮಜ್ಜ್ಜಾನವೊಂದೇ !. ಆತ್ಮೋಧ್ದಾರಕ್ಕೆ ತಡೆಯಾಗುವ ಎಲ್ಲ ವಸ್ತ್ತುಗಳೂ ಶಂಕರರ ದೃಷ್ಟಿಯಲ್ಲಿ ಮೃತ್ಯುವಿಗೇ ಸಮಾನವಾದುದು. Strength is life weakness is death ಎನ್ನುವಂತೆ. ನಮ್ಮಲ್ಲಿ ಒಂದು ಆಡುನುಡಿ ಇದೆ ' ಗೆದ್ದವನು ಸೋತ, ಸೋತವನು ಸತ್ತ' :) ಎಂದು. ಆತ್ಮಜ್ಞಾನವನ್ನು ಪಡೆಯುವ ಶಿಷ್ಯನು ತನ್ನ ಮೋಕ್ಷಾಪೇಕ್ಷೆಯನ್ನು ತೀವ್ರತರವಾಗಿ ಪ್ರಕಟಿಸಬೇಕಾಗುತ್ತದೆ ಮತ್ತು ಆ ಪ್ರಕಟಿಸುವಿಕೆಯು ಹೀಗಿರಬೇಕು ಎಂದು ಶಂಕರರು ತಿಳಿಗೊಳಿಸಿದ್ದಾರೆ ಎಂದು ತಿಳಿಯಬಹುದು.
    ಧನ್ಯವಾದಗಳು.

    ReplyDelete
  4. ನಾನು ಆತ್ಮಹತ್ಯೆಯ [ಪದ ಪ್ರಯೋಗ ತಪ್ಪೆಂಬ ಅರಿವಿದೆ] ಚಿತ್ರ ಹಾಕಲು ಕಾರಣವಿದೆ. ಜೀವನದಲ್ಲಿ ನೆಮ್ಮದಿ ಇಲ್ಲದೆ ಬಾಳುವುದು ಸಾವಿಗಿಂತಲೂ ಹೀನಾಯ. ಪಾಪ! ಚಿತ್ರದಲ್ಲಿರುವ ಮನುಷ್ಯ ಸತ್ತು ಗೆದ್ದ. ಹಲವರು ಬದುಕಿ ಸೋತಿದ್ದಾರೆ.ನನ್ನ ನಿಲುವು ಎಂದರೆ ನಮಗೆ ಜ್ಞಾನದ ಕೊರತೆಯಿಂದ ಜೀವನವನ್ನು ಸುಖವಾಗಿ ನಡೆಸಲು ಬಹುಪಾಲು ಜನರಿಗೆ ಸಾಧ್ಯವಾಗುತ್ತಿಲ್ಲ. ವೇದ-ವೇದಾಂತಗಳ ಅರಿವಿನಿಂದ ಇದಕ್ಕೆ ಉತ್ತರ ಲಭ್ಯ.
    ನಮ್ಮ ಲೌಕಿಕ ವ್ಯವಹಾರಗಳಿಂದ ಪಾರಮಾರ್ಥಿಕ ಚಿಂತನೆ ಬರುವವರೆಗೂ ಸಂಸಾರದ ಜಂಜಾಟಗಳು[ಸಾವು] ಇದ್ದದ್ದೇ.ಅಧ್ಯಾತ್ಮದ ಅರಿವು ಮೂಡಿಸುವ ಹೆಚ್ಚಿಸುವ ಕೆಲಸದ ಅಗತ್ಯತೆ ಹಿಂದೆಂದಿಗಿಂತ ಇಂದು ಹೆಚ್ಚು ಅವಶ್ಯ.

    ReplyDelete