Pages

Wednesday, April 17, 2013

ಬಾಲಸಂಸ್ಕಾರ ಶಿಬಿರ ಹಿನ್ನೋಟ

              

 ಬ್ಲಾಗ್ ನಲ್ಲಿ ವೇದದ ಬಗ್ಗೆ ಲೇಖನಗಳನ್ನು ಬರೆಯುವುದು, ಉಪನ್ಯಾಸಗಳ ಆಡಿಯೋ ಹಾಕುವುದು ಮತ್ತು ವೀಡಿಯೋಗಳನ್ನು ಅಪ್ ಲೋಡ್ ಮಾಡುವುದು, ಇತ್ಯಾದಿಗಳು     ಕಂಪ್ಯೂಟರ್ ಮುಂದೆ ಕುಳಿತು ಮಾಡುವ ವೇದದ ಕೆಲಸ. ಆದರೆ ನೇರವಾಗಿ ವೇದಗಳ ಉಪನ್ಯಾಸಗಳನ್ನು ಏರ್ಪಡಿಸುವುದು, ವೇದಪಾಠ ತರಗತಿಗಳನ್ನು ನಡೆಸುವುದು ,ಇವೆಲ್ಲಾ ಅಶ್ಟು ಸುಲಭದ ಕೆಲಸವೇನಲ್ಲ. ಕಳೆದ ವರ್ಷ ಆಗಸ್ಟ್ ೧೯ ರಂದು   ಹಾಸನದಲ್ಲಿ  ಆರಂಭಿಸಿದ ಸಾಪ್ತಾಹಿಕ ವೇದ ಪಾಠಕ್ಕೆ ಬರುತ್ತಿದ್ದ ವೇದಾಧ್ಯಾಯಿಗಳು        ಕೆಲವೇ ತಿಂಗಳುಗಳಲ್ಲಿ ನಿತ್ಯ  ವೇದಾಭ್ಯಾಸ ಮಾಡಲು ಅಪೇಕ್ಷಿಸಿ ನಿರಂತರ ವೇದಾಭ್ಯಾಸವು ಆರಂಭವಾಯ್ತು.
              ಹೀಗಿರುವಾಗಲೇ ಬೇಸಿಗೆ ರಜೆ ಆರಂಭವಾಯ್ತು. ಎಲ್ಲರೂ ಚರ್ಚೆ ಮಾಡಿ ಮಕ್ಕಳಿಗೆ ಒಂದು ವೇದ ಶಿಬಿರವನ್ನು ಮಾಡಬಾರದೇಕೆ? ಎಂಬ ಆಲೋಚನೆ ಬಂತು. ಸರಿ, ಚರ್ಚಿಸಿದೆವು.  ಕೆಲಸ ಆರಂಭಿಸಿಯೇ ಬಿಟ್ಟೆವು. ಕೇವಲ ವೇದ ಶಿಬಿರವೆಂದರೆ ಮಕ್ಕಳು ಬರುವುದು  ಕಷ್ಟವೆಂದರಿತು " ಮಕ್ಕಳ ಸಂಸ್ಕಾರ ಶಿಬಿರದ"  ಹೆಸರಲ್ಲಿ  ಪ್ರತಿ ದಿನ  ಮೂರು ಗಂಟೆಯಂತೆ ದಿನಾಂಕ 7.4.2013  ರಿಂದ ಹತ್ತು ದಿನಗಳು ನಡೆಸಬೇಕೆಂದು ತೀರ್ಮಾನಿಸಿ  ಆರಂಭಿಸಿಯೇ ಬಿಟ್ಟೆವು. ಅರ್ಧ ಗಂಟೆಗಳ ಐದು ಅವಧಿಗಳು. ಅರ್ಧಗಂಟೆ ಅಲ್ಫೋಪಹಾರದ ಅವಧಿ ಸೇರಿ ಒಟ್ಟು ಮೂರು ಗಂಟೆಗಳು. ಕಥೆ, ಆಟ, ಎರಡು ಅವಧಿಯ ವೇದಪಾಠ ಮತ್ತು ಮಕ್ಕಳ ಸುಪ್ತ ಪ್ರತಿಭೆಯನ್ನು    ಅನಾವರಣಗೊಳಿಸಲು ಒಂದು ಅವಧಿ. ಹೀಗೆ ಸಮಯಸಾರಿಣಿ ಸಿದ್ಧ ಗೊಳಿಸಿದೆವು. ಮೂರು ಶಿಬಿರ ಗೀತೆಗಳನ್ನು ನಿಸ್ಚಯಗೊಳಿಸಿದೆವು. ಪುಟ್ಟ ಪುಟ್ಟ 25 ಮಂತ್ರಗಳನ್ನು ಆರಿಸಿ, ಮಂತ್ರಗಳು, ಶಿಬಿರಗೀತೆ, ವೇದಭಾರತಿಯ ಪರಿಚಯ, ಸಮಯಸಾರಿಣಿ, ಸೂಚನೆಗಳು, ಎಲ್ಲವೂ ಒಳಗೊಂಡಂತೆ ಪುಟ್ಟ ಹೊತ್ತಿಗೆಯೊಂದನ್ನು ಮುದ್ರಿಸಿದೆವು. ಹಿರಿಯರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಗಳು ಅವರ ಶಾಲೆಯ ಆವರಣದ ಜೊತೆಗೆ ಪೀಠೋಪಕರನಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿದರು. ಮಿತ್ರ ಕುಮಾರ್ ಧ್ವನಿವರ್ಧಕ ವ್ಯವಸ್ಥೆ ಗೊಳಿಸಿದರು.
                        ಎಲ್ಲಾ ವಿಷಯಗಳಿಗೂ ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿದೆವು. ಯಾರಿಗೂ ಸಂಭಾವನೆ ಇಲ್ಲ. ಮಕ್ಕಳ ಹತ್ತಿರ ಅವರ ಕಮಿಟ್ ಮೆಂಟ್ ಗಾಗಿ ಐವತ್ತು ರೂಪಾಯಿ ಸಂಭಾವನೆ ಪಡೆದೆವು. ನಾವು ನಲವತ್ತು ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶ ಎಂದು ಪ್ರಕಟಿಸಿದ್ದರೂ ಅದು ಎಂಬತ್ತಾಗುವುದನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಆದರೆ  ನಮ್ಮೊಡನಿರುವ ವೇದಾಧ್ಯಾಯಿಗಳು ಟೊಂಕಕಟ್ಟಿ  ನಿಂತಮೇಲೆ  ಚಿಂತಿಸಲು ನಮಗೆ ಆಸ್ಪದವೇ ಇರಲಿಲ್ಲ. ಎಂಟು ದಿನಗಳಿಗೆ ನಮ್ಮ ವೇದಾಧ್ಯಾಯಿಗಳೇ ಅವರ ಮನೆಯಿಂದ ಅಲ್ಪೋಪಹಾರ[ ಕೋಸಂಬ್ರಿ, ಉಸ್ಲಿ, ಅವಲಕ್ಕಿ, ಇತ್ಯಾದಿ ಮತ್ತು ಜ್ಯೂಸ್, ಬಾದಾಮಿ ಹಾಲು ಮೊದಲಾದ] ಮಾಡಿ ತರಲು ಒಪ್ಪಿದರು. ಮತ್ತೊಬ್ಬ ಮಿತ್ರರು ಒಂದು ದಿನ ಪುಳಿಯೋಗರೆ ,ಮೊಸರನ್ನ, ಆಂಬೊಡೆ, ಗಸಗಸೆ ಪಾಯ್ಸ ಮಾಡಿಸಿದರು. ಇದೆಲ್ಲಾ ಗಮನಿಸಿದ ಶಿಬಿರಾರ್ಥಿಗಳ ಇಬ್ಬರು ಪೋಷಕರು ಇನ್ನೆರಡು ದಿನಗಳಿಗೂ ಅಲ್ಪೋಪಹಾರ  ಕೊಡಲು   ಮುಂದೆ ಬಂದರು.
                ಮಿತ್ರರಾದ ಪಾಂಡುರಂಗ ಅವರು ಅವರ ಮುದ್ರಣಾಲಯದಲ್ಲಿ  ಆಹ್ವಾನ ಪತ್ರಿಕೆ, ಪುಟ್ಟ   ಹೊತ್ತಿಗೆ ಮತ್ತು  ಅಗತ್ಯವಾದ ಎಲ್ಲಾ ಮುದ್ರಣವನ್ನು ಉಚಿತವಾಗಿ ಮಾಡಿಕೊಟ್ಟರು. ಶಿಬಿರದಲ್ಲಿ ಒಂದು ದಿನ  " ಮಾತೃವಂದನ, ಮತ್ತು ಭಾರತ ಮಾತಾ ಪೂಜನ  ವಿಶೇಷಕಾರ್ಯಕ್ರಮಗಳನ್ನು ಯೋಜಿಸಿದೆವು. ಮಕ್ಕಳ ಪೋಷಕರೆಲ್ಲಾ ಬಂದಮೇಲೆ ಅವರನ್ನು ಸುಮ್ಮನೆ ಕಳಿಸಲು ಸಾಧ್ಯವೇ?  ಅಂದೂ  ಪುಳಿಯೋಗರೆ, ಮೊಸರನ್ನ, ಪಾಯ್ಸ ಸೇವೆ ಯಾಯ್ತು. ಇನ್ನು ಕೊನೆಯ ದಿನ " ಅಗ್ನಿಹೋತ್ರ " ಯೋಜಿಸಿದೆವು. ಅಗ್ನಿ ಹೋತ್ರ ನಡೆದ ಮೇಲೆ ಪ್ರಸಾದ ವಿಲ್ಲವೆಂದರೆ ಹೇಗೆ? ಸರಿ! ಚಿತ್ರಾನ್ನ, ಪಾಯ್ಸ ಸೇವೆ ಯಾಯ್ತು.ಮಿತ್ರ ಚಿನ್ನಪ್ಪನವರು ಫೋಟೋ/ವೀಡಿಯೋ ಗಳನ್ನು ಉಚಿತವಾಗಿ ತೆಗೆದರು. ಮಿತ್ರ ಪ್ರಭಾಕರ್ ಎಲ್ಲಾ ಪತ್ರಿಕೆಗಳಲ್ಲಿ  ಸುದ್ಧಿ ಮಾಡಿದರೆ ಮಿತ್ರರಾದ ಪ್ರಮೋದ್ ಅವರ ಆಮೋಘ್ ಚಾನಲ್ ಮತ್ತು ಅವರೇ ಸಂಪಾದಕರಾಗಿರುವ "ಜನಮಿತ್ರ "ಪತ್ರಿಕೆಯ ಸಹಕಾರ ಕೊಟ್ಟರು.
               ಅಬ್ಭಾ! ನಾವು ಆರಂಭದಲ್ಲಿ  ಇದೆಲ್ಲಾ ಯೋಚಿಸಿಯೇ ಇರಲಿಲ್ಲ. ಆದರೆ ಎಲ್ಲವೂ ತಾನೇ ತಾನಾಗಿ ನಡೆದು ಹೋಯ್ತು. ತುಂಬಾ ಖುಷಿಕೊಟ್ಟ    ವಿಚಾರ ಯಾವುದು ಗೊತ್ತಾ?  ಆರೇಳು   ಜನ ವೇದಾಧ್ಯಾಯಿಗಳು  ತಮ್ಮ ಕುಟುಂಬವನ್ನು ಈ ದಿನಗಳಲ್ಲಿ ಮರೆತೇ ಬಿಟ್ಟಿದ್ದರು. ಮಕ್ಕಳು ಬರುವ ಮುಂಚೆ  ಶಿಬಿರ ಸ್ಥಾನ ಶುಚಿಯಾಗಿರಬೇಡವೇ? ಶಿಬಿರ 9.30 ಕ್ಕೆ ಆರಂಭವಾದರೆ ನಾವೆಲ್ಲಾ ಬೆಳಿಗ್ಗೆ 8.00 ಗಂಟೆಗೇ ಶಿಬಿರಸ್ಥಾನದಲ್ಲಿ ಹಾಜರ್. ಇಬ್ಬರು ಮೂವರು ಕಸ ಗುಡಿಸಿದರೆ ಉಳಿದವರು ನೆಲ ತೊಳೆಯುವ ಕಾಯಕವನ್ನು ಎಷ್ಟು ಶ್ರದ್ಧೆಯಿಂದ ಮಾಡಿದರೆಂದರೆ ಆಗೆಲ್ಲಾ ನನಗೆ ನೆನಪಾಗುತ್ತಿದ್ದುದು ವೇದದ ಮಾತು" ಶ್ರೇಷ್ಠತಮ ಕರ್ಮವೇ ಯಜ್ಞ"
               ಶಿಬಿರ ಮುಗಿಯಿತು. ಆದರೆ ಅದೇ ಮಕ್ಕಳು ಬರುವ 21.4.2013 ರಿಂದ ನಿತ್ಯವೂ ವೇದ ಪಾಠಕ್ಕೆ ಈಶಾವಾಸ್ಯಮ್ ಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಶಿಬಿರ ನಡೆಸಿದ್ದು ಸಾರ್ಥಕವಾಗಲಿಲ್ಲವೇ? 

No comments:

Post a Comment