“ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:” ಇದು ಶ್ರೀ ಕೃಷ್ಣನ ಮಾತು. ಮಾನ ಎಂದರೆ ಮರ್ಯಾದೆ, ಗೌರವ ಎಂಬ
ಅರ್ಥದ ಜೊತೆಗೆ ಅಳತೆಯ ಪ್ರಮಾಣವೆಂತಲೂ ಅರ್ಥವಿದೆ.
ಅಪಮಾನ ಎಂದರೆ ಮಾನಕ್ಕೆ ವಿರುದ್ಧವಾದ ಅಗೌರವ, ಅವಮರ್ಯಾದೆ ಎಂದೂ ಅರ್ಥವಿದೆ.” ಶತ್ರು-ಮಿತ್ರರನ್ನು
ಮತ್ತು ಮಾನಾಪಮಾನವನ್ನು ಸಮನಾಗಿ ಕಾಣು ಎಂಬುದು ಶ್ರೀ ಕೃಷ್ಣನ ಸಂದೇಶ. ಈ ಒಂದು ಸಂದೇಶವನ್ನು ನಮ್ಮ
ಜೀವನಕ್ಕೆ ಹೆಗೆ ಅನ್ವಯಿಸಿಕೊಳ್ಳಬಹುದು, ಇಂದು ವಿಚಾರ ಮಾಡೋಣ.
ಯಾರಾದರೂ
ನಮ್ಮನ್ನು ಹೊಗಳಿದಾಗ ನಮಗಾಗುವ ಸಂತೋಷಕ್ಕೆ ಪಾರವೇ ಇಲ್ಲ.ಹೊಗಳಿದವರ ಬಗ್ಗೆ ನಾವು ಮೆಚ್ಚಿದ್ದೇ ಮೆಚ್ಚಿದ್ದು!! ಅದೇ ರೀತಿ ಯಾರಾದರೂ ನಮ್ಮನ್ನು ತೆಗಳಿದರೆ ನಾವು ಕುಸಿದೇ
ಹೋಗಿಬಿಡುತ್ತೇವೆ.” ಎಂತಾ ಮನುಷ್ಯ ಈತ! ನನ್ನನ್ನು
ಹೀಗೆ ಅಂದು ಬಿಟ್ಟ ನಲ್ಲಾ! ಅವನಿಗೆ ಸರಿಯಾಗಿ ಬುದ್ಧಿ ಕಲಿಸದಿದ್ದರೆ ನನ್ನ ಹೆಸರು ……..ನೇ ಅಲ್ಲ! ಏನೋ
ಇವನೇ ಶ್ರೀರಾಮ ಚಂದ್ರನೇನೋ ಎಂಬಂತೆ ಹೆಸರನ್ನು ಪಣಕ್ಕೆ
ಒಡ್ಡಿ ಬಿಡುತ್ತೇವೆ. ತೆಗಳಿದವನನ್ನು ಎಲ್ಲಾ ಶಬ್ಧಗಳಿಂದಲೂ ಠೀಕಿಸಿಬಿಡುತ್ತೇವೆ.ಸಾಮಾನ್ಯವಾಗಿ ನೊರಕ್ಕೆ ನೂರರಷ್ಟು ಜನರ ಸ್ವಭಾವ ಇದೇ ತಾನೇ? ಹೊಗಳಿಕೆ ಮತ್ತು ತೆಗಳಿಕೆ
ವಿಚಾರದಲ್ಲಿ ಈರೀತಿಯ ನಮ್ಮ ವರ್ತನೆಯಿಂದ ನಮಗೆ ತೊಂದರೆ ತಪ್ಪಿದ್ದಲ್ಲ. ಹಾಗಾದರೆ ನಾವು ಹೊಗಳಿಕೆ
ತೆಗಳಿಕೆಯನ್ನು ಹೇಗೆ ಸ್ವೀಕರಿಸಬೇಕು? ಎರಡಕ್ಕೂ ನಾವು ತಟಸ್ಥವಾಗಿರಬೇಕು.ತಟಸ್ಥವಾಗಿರುವುದಾದರೂ ಹೇಗೆ?
ಒಬ್ಬರು ನಮ್ಮನ್ನು ಹೊಗಳಿದಾಗ ಖುಷಿಪಡದೇ ಇರಲು ಸಾಧ್ಯವೇ?ಹೊಗಳುವುದಷ್ಟೇ ಅಲ್ಲ ಕೆಲವರು ಶಾಲು ಹೊದಿಸಿ
ಸನ್ಮಾನವನ್ನೂ ಮಾಡುತ್ತಾರೆ,ಪತ್ರಿಕೆಯಲ್ಲಿ ಮೆಚ್ಚಿ ಬರೆಯುತ್ತಾರೆ. ಇಂತಾ ಸಂದರ್ಬದಲ್ಲಿ ನಾವು ಸುಮ್ಮನಿರಲು
ಹೇಗೆ ಸಾಧ್ಯ? ನಮಗೆ ಭಾವನೆಯೇ ಇಲ್ಲವೇ? ಹಾಗೆಯೇ ಒಬ್ಬರು ನಮ್ಮನ್ನು ತೆಗಳಿದರೆ ನಮಗೆ ಬೇಸರವಾಗದಿರಲು
ನಾವೇನು ಕಲ್ಲೇ? ನಮಗೆ ಭಾವನೆಗಳಿಲ್ಲವೇ, ಸ್ಪಂಧನ ಇಲ್ಲವೇ, ಹೊಗಳಿಕೆ-ತೆಗಳಿಕೆಗೆ ನಾವು ತತಸ್ಥವಾಗಿರುವುದು
ಹೇಗೆ?
ತಟಸ್ಥವಾಗಿರಲು
ಸಾಧ್ಯ. ಅದೇ ಈಗ ವಿಚಾರಮಾಡಬೇಕಾದ ವಿಷಯ. ಮೊದಲು ನಾವು
ಮಾಡಬೇಕಾದುದಾದರೂ ಏನು? ಆತ್ಮವಿಮರ್ಶೆ! ನಾನೇನು ಎಂಬುದನ್ನು ಮೊದಲು ತೀರ್ಮಾನ ಮಾಡಿಕೊಳ್ಳಬೇಕಾದವನು
ನಾನೇ. ಹೊಗಳಿಕೆ ತೆಗಳಿಕೆ ಮಾತು ಒಂದುಕಡೆ ಇರಲಿ. ಆದರೆ ನಾನೇನು ಎಂಬುದನ್ನು ಕರಾರುವಾಕ್ಕಾಗಿ ನಿರ್ಧರಿಸುವವನು ನಾನೇ! ಮತ್ಯಾರಿಂದಲೂ ಅದು ಸಾಧ್ಯವಿಲ್ಲ.
ಏಕಾಂತದಲ್ಲಿ ಕುಳಿತು ನನ್ನ ಬಗ್ಗೆ ನಾನು ಯೋಚಿಸಬೇಕು? ನಾನು ಏನು ಎಂಬುದನ್ನು ಅರ್ಥಮಾಡಿಕೊಳ್ಳಲು
ಕೆಲವು ಅಂಶಗಳನ್ನು ಅಳತೆ ಗೋಲಾಗಿ ಇಟ್ಟುಕೊಳ್ಳಬೇಕು. ಅದರಲ್ಲಿ ಮೊದಲನೆಯ ಅಂಶ “ ಆಸೆ”
ನನ್ನಲ್ಲಿ
ಆಸೆ ಎಷ್ಟಿದೆ? ಎಂಬುದನ್ನು ನಾನೇ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ನನಗೆ ಆಸೆ ಎಷ್ಟಿದೆ? ಯಾವ ಯಾವ
ವಿಚಾರದಲ್ಲಿ ಆಸೆ ಇದೆ?ನನ್ನ ಅಗತ್ಯಕ್ಕೆ ತಕ್ಕಂತೆ ಆಸೆ ಇದೆಯೇ? ಅಗತ್ಯ ಪೂರೈಸಿದ ಕೂಡಲೇ ಸುಮ್ಮನಾಗುತ್ತೇನೆಯೇ?
ಆಸೆ ಒಂದು ಮಿತಿಯಲ್ಲಿದೆಯೇ? ಹೆಚ್ಚಿದೆಯೇ? ಅಥವಾ ಕಡಿಮೆ ಇದೆಯೇ? ಅದನ್ನು ಗುರುತಿಸಿಕೊಳ್ಳಬೇಕು.
ಎರಡನೆಯ
ಅಂಶ “ಕೋಪ”. ಕೋಪದ ವಿಚಾರದಲ್ಲೂ ಅಷ್ಟೆ. ಅದರ ಪ್ರಮಾಣ
ಎಷ್ಟು.ಕೋಪ ಯಾವ್ಯಾವ ಕಾರಣಕ್ಕೆ ಬರುತ್ತೆ?
ಒಂದು ಮಿತಿಯಲ್ಲಿದೆಯೇ? ಹೆಚ್ಚಿದೆಯೇ? ಅಥವಾ ಕಡಿಮೆ ಇದೆಯೇ? ಇದರ ಜೊತೆಗೇ ಕಂಡು ಬರುವ ಮತ್ತೊಂದು
ಅಂಶ “ಸಹನೆ”. ಒಮ್ಮೊಮ್ಮೆ ಹೀಗೆ ಅನ್ನಿಸುವುದುಂಟು” ತಡಿಯುವ ವರೆಗೂ ತಡೆದೆ, ಇನ್ನೊಂದು ಮಾತನ್ನು
ಆಮನುಷ್ಯ ಆಡಿದ್ದರೆ ಅವನ ಕಪಾಳಕ್ಕೆ ಭಾರಿಸುತ್ತಿದ್ದೆ!!”
ಇಂತಾ ಅನುಭವ ನಮಗೆ ಆಗಿದೆಯಲ್ಲವೇ?
ಮೂರನೆಯ
ಅಂಶ “ನಾನು ಯಾವು ಯಾವುದಕ್ಕೆ ಎಷ್ಟೆಷ್ಟು ಅಂಟಿಕೊಂಡಿದ್ದೇನೆ?” ಒಮ್ಮೊಮ್ಮೆ ಹೀಗೆ ಅನ್ನಿಸದೇ ಇರದು”
ನನಗೆ ಇದು ಆಗಲೇ ಬೇಕು, ಇದಾಗದಿದ್ದರೆ ನನಗೆ ನನಗೆ
ಸಹಿಸಲು ಸಾಧ್ಯವೇ ಇಲ್ಲ. ಹೀಗೆ ಯಾವ್ಯಾವ ವಿಚಾರಕ್ಕೆ, ಯಾವ್ಯಾವ ವಸ್ತುವಿಗೆ, ಯಾವ್ಯಾವ ವ್ಯಕ್ತಿಗೆ
ಎಷ್ಟೆಷ್ಟು ಅಂಟಿಕೊಂಡಿದ್ದೇನೆ? ಎಷ್ಟೆಷ್ಟು ಅಂಟು
ಬಿಡಿಸಿಕೊಂಡಿದ್ದೇನೆ? ಅಥವಾ ಅಂಟಿಯೂ ಅಂಟದಂತೆ ಇದ್ದೇನೆ? ಇದನ್ನು ನಾನೇ ತೀರ್ಮಾನ ಮಾಡ ಬೇಕಲ್ಲವೇ?
ನಾಲ್ಕನೆಯ
ಅಂಶ “ನನ್ನಲ್ಲಿ ಎಷ್ಟು ಅಹಂಕಾರವಿದೆ?” ಮತ್ತೊಬ್ಬರ ಮಾತನ್ನು ಕೇಳುವಷ್ಟು ಮಟ್ಟಿಗೆ ನನ್ನ ಮಾನಸಿಕತೆ
ಇದೆಯೇ? ಮತ್ತೊಬ್ಬರು ಹೇಳಿದ ಮಾತಿನಲ್ಲಿ ಸತ್ಯವನ್ನು ಸ್ವೀಕರಿಸುವ ಮನ:ಸ್ಥಿತಿ ನನಗಿದೆಯೇ? ಅಥವಾ
ಒಬ್ಬರು ಹೇಳಿದ್ದನ್ನೆಲ್ಲಾ ಸತ್ಯ ಎಂದು ನಂಬುವ ಪೆದ್ದುತನ ಇದೆಯೇ?ಇದನ್ನೆಲ್ಲಾ ನನ್ನೊಳಗೇ ಪ್ರಶ್ನಿಸಿಕೊಳ್ಳಬೇಕು.
ಕೊನೆಯ
ಅಂಶವೆಂದರೆ ಯಾರ್ಯಾರ ವಿಚಾರದಲ್ಲಿ ನನಗೆ ಹೊಟ್ಟೆಉರಿ ಇದೆ? ಯಾರ್ಯಾರ ವಿಚಾರದಲ್ಲಿ ನನಗೆ ಅಸಹನೆ ಇದೆ?
ಒಬ್ಬರನ್ನು ನೋಡಿ ಅವರಿಗೆ ಅಷ್ಟೊಂದಿದೆ! ನನಗಿಲ್ಲವಲ್ಲಾ! ಅವರಿಗೆ ಸಿಕ್ಕಿರುವುದು ನನಗೆ ಸಿಕ್ಕಿಲ್ಲವಲ್ಲಾ!
ಎಂದು ಹೋಲಿಕೆ ಮಾಡಿಕೊಂಡು ನನ್ನ ಮನಸ್ಥಿತಿಯನ್ನು ಎಷ್ಟರ ಮಟ್ಟಿಗೆ ನಾನು ಕೆಡಸಿಕೊಳ್ಳುತ್ತೇನೆ? ಎಂಬುದನ್ನು
ಗುರುತಿಸಿಕೊಳ್ಳ ಬೇಕು.
ಈ
ಮೇಲಿನ ಅಂಶಗಳ ಜೊತೆಗೆ ಇನ್ನೂ ಹಲವು ಪ್ರಶ್ನೆಗಳನ್ನು ನಮಗೆ ನಾವೇ ಹಾಕಿ ನಮ್ಮ ಉತ್ತರವನ್ನು ನಾವೇ
ಹುಡುಕಿಕೊಳ್ಲಬಹುದು. ಹೀಗೆ ಮಾಡಿದಾಗ ನನ್ನ ಯೋಗ್ಯತೆ ಇಷ್ಟು, ನನ್ನ ಸಾಮರ್ಥ್ಯ ಇಷ್ಟು, ನನ್ನ ದೋಷಗಳು
ಇಷ್ಟು, ಎಂದು ನನ್ನ ಬಗ್ಗೆ ನಾನೇ ಒಂದು ಚಿತ್ರವನ್ನು ಹಾಕಿಕೊಳ್ಳಲು ಸಾಧ್ಯ. ಒಂದು ಎಚ್ಚರಿಕೆ ಇರಬೇಕು, ಇದನ್ನು ಮಾಡುವಾಗ ಪ್ರಾಮಾಣಿಕವಾಗಿ
ಮಾಡಬೇಕು. ನನ್ನಲ್ಲಿರುವ ದೋಷವನ್ನು ನಾನು ಒಪ್ಪಿಕೊಳ್ಳಬೇಕು.ನನ್ನಲ್ಲಿರುವ ದೋಷವನ್ನು ಮರೆಮಾಚ ಬಾರದು,
ಅಥವಾ ಈ ದೋಷಕ್ಕೆ ಕಾರಣ ನಾನಲ್ಲ, ಎಂದು ಬೇರೆ ಯಾರದೋ ಮೇಲೆ ಹೊರಿಸಲೂ ಬಾರದು.ನನ್ನಲ್ಲಿ ದೋಷ ಇಟ್ಟುಕೊಂಡು ಬೇರೆಯವರ ಮೇಲೆ ಬೆಟ್ಟುಮಾಡಿ ತೋರಿಸುವುದು ಪ್ರಾಮಾಣಿಕತೆ
ಎನಿಸುವುದಿಲ್ಲ. ಹೀಗೆ ಆತ್ಮವಿಮರ್ಶೆ ಮಾಡಿಕೊಂಡಾಗ ನನ್ನ ಯೋಗ್ಯತೆ ಎಷ್ಟು? ಎಂಬ ಪ್ರಮಾಣ ನಮಗೆ ಗೊತ್ತಾಗುತ್ತದೆ.
ಪರಿಪೂರ್ಣತೆಗೆ ನೂರು ಅಂಕಗಳೆಂದಾದರೆ ಅದರಲ್ಲಿ ನನ್ನ ಯೋಗ್ಯತೆಗೆ ನಲವತ್ತೈದು ಅಂಕ ಬರಬಹುದು ,ಎಂದು ನಾನು ಅಂದಾಜು ಮಾಡಿಕೊಳ್ಳುತ್ತೇನೆಂದು
ಭಾವಿಸೋಣ. ಈಗ ಹೊಗಳಿಕೆ ಎಂದರೇನು? ವಿಚಾರ ಮಾಡೋಣ. ನನ್ನ ಯೋಗ್ಯತೆಗೆ ನಾನೇ ಕಟ್ಟಿದ ಬೆಲೆ ನಲವತ್ತೈದು,
ಆದರೆ ಮತ್ತೊಬ್ಬರು ನನ್ನನ್ನು ಅತಿಯಾಗಿ ಹೊಗಳಿ ಅದು ಎಂಬತ್ತು ಎಂಬತ್ತೈದು ಪ್ರಮಾಣದ್ದೆಂದು ನನಗನ್ನಿಸಿದರೆ
ಆಗ ನಾವು ಅಲ್ಲಿ ಸಂದೇಹ ಪಡಬೇಕು. ನನ್ನ ಯೋಗ್ಯತೆಗೆ ಮೀರಿ ಇವರು ನನ್ನನ್ನು ಹೊಗಳುತ್ತಿದ್ದಾರೆಂದರೆ
ಇದು ಡೇಂಜರ್! ಎಂಬುದನ್ನು ನಾನು ಊಹಿಸಬೇಕು. ಇಲ್ಲೇನೋ ಅಪಾಯವಿದೆ! ನನ್ನ ಯೋಗ್ಯತೆಗಿಂತ ಹೆಚ್ಚಾಗಿ
ಇವರು ನನ್ನನ್ನು ಉಬ್ಬಿಸುತ್ತಿದ್ದಾರೆಂದರೆ ಇವರು ಇಲ್ಲಿ ನನ್ನಿಂದೇನೋ ಲಾಭಪಡೆಯುವ ಉಪಾಯ ವಿರಬಹುದು!
ಅಥವಾ ಇವರಿಗೆ ಅಂದಾಜುಮಾಡಲು ಗೊತ್ತಿಲ್ಲ, ಎಂದು ತಿಳಿದು ನಾವು ತಟಸ್ಥವಾಗಿ ಇರಬೇಕು.
ತೆಗಳಿಕೆ
ವಿಚಾರದಲ್ಲೂ ಇದೇ ಸೂತ್ರ ಅನ್ವಯಿಸಿಕೊಳ್ಲಬೇಕಾಗುತ್ತದೆ. ನನ್ನ ಯೋಗ್ಯತೆ ನಲವತ್ತೈದೆಂದು ನನಗೆ ಗೊತ್ತಿದೆ.
ಆದರೆ ನನ್ನನ್ನು ನಿಂದನೆ ಮಾಡಬೇಕೆಂಬ ವ್ಯಕ್ತಿ ನನ್ನೊಡನೆ ಬಹಳ ಹೀನಾಯವಾಗಿ ವರ್ತಿಸುತ್ತಾನೆ. ನನ್ನ ಯೋಗ್ಯತೆಯನ್ನು ಇಪ್ಪತ್ತು
ಅಂಕಕ್ಕಿಂತಲೂ ಕಡಿಮೆ ಬರುವಂತೆ ಅವನ ತೆಗಳಿಕೆ ಇರುತ್ತೆ. ಆಗಲೂ ನಾವು ಕುಸಿದುಹೋಗುವ ಅಗತ್ಯವಿಲ್ಲ.
ನನ್ನ ನಿಜವಾದ ಯೋಗ್ಯತೆಗೆ ನಾನೆ ಬೆಲೆ ಕಟ್ಟಿಕೊಂಡಾಗಿದೆ. ಈ ಮನುಷ್ಯ ಇಷ್ಟು ಹೀನಾಯವಾಗಿ ಮಾತನಾದಬೇಕಾದರೆ
ಅವನಿಗೆ ನನ್ನ ಯೋಗ್ಯತೆಯನ್ನು ಅಳೆಯುವ ಯೋಗ್ಯತೆ ಇಲ್ಲ,
ಎಂಬುದು ಮೊದಲನೆಯ ಅಂಶ. ಎರಡನೆಯದು ಇದರಲ್ಲೇನೋ ಒಂದು ದುರುದ್ಧೇಶವಿರಬಹುದು. ನಾನು ಅದನ್ನು ಸ್ವೀಕರಿಸಬೇಕಿಲ್ಲ.
ಯೋಗ್ಯತೆಇಲ್ಲದವನು ಕಟ್ಟಿದ ಬೆಲೆಗೆ ನಾನು ತಲೆಕೆದಸಿಕೊಳ್ಳಬೇಕಾಗಿಲ್ಲ.
ಈಗಲೂ ನಾನು ತಟಸ್ಥನಾಗೇ ಇರಬೇಕು.ಕಾರಣ ನನ್ನ ಯೋಗ್ಯತೆಯನ್ನು ಅತಿಯಾಗಿ ಹೊಗಳುವ ಅಗತ್ಯವೂ ನನಗಿಲ್ಲ,
ಹಾಗೂ ನನ್ನ ಯೋಗ್ಯತೆಯನ್ನು ಕೀಳಾಗಿ ಅಂದಾಜುಮಾಡಿದವರ ಬಗ್ಗೆಯೂ ನಾನು ತಲೆ ಕೆಡಸಿಕೊಳ್ಲಬೇಕಾಗಿಲ್ಲ.
ಕಾರಣ ಅವರಿಗೆ ನನ್ನನ್ನು ಅಂದಾಜು ಮಾಡುವ ಯೋಗ್ಯತೆ
ಯಿಲ್ಲ ,ಎಂಬುದನ್ನು ನಾನು ಅರಿತುಕೊಳ್ಳಬೇಕು.
ಇನ್ನೊಂದು
ಅತಿಮುಖ್ಯ ಸಂಗತಿಎಂದರೆ ಯಾರು ಎಷ್ಟೇ ಹೊಗಳಲಿ, ಅದರಲ್ಲಿ ಹೆಚ್ಚಿನದನ್ನು ಬಿಟ್ಟು ನನ್ನ ಯೋಗ್ಯತೆಗೆ
ಎಷ್ಟು ಹೊಂದುತ್ತದೋ ಅಷ್ಟನ್ನು ಸ್ವೀಕರಿಸುವುದು. ಅಂದರೆ ನಾನೇ ನನಗೆ ಕೊಟ್ಟುಕೊಂಡಿ ರುವ ಅಂಕ ನಲವತ್ತೈದು. ಅವರು ಎಂಬತ್ತು ಕೊಟ್ಟಿದ್ದರೂ ನಾನು
ಸ್ವೀಕರಿಸಬೇಕಾಗಿರುವುದು ನಲವತ್ತೈದು ಮಾತ್ರ.ಹಾಗೆಯೇ ತೆಗಳುವವರು ಕೀಳಾಗಿ ತೆಗಳಿದ್ದರೂ ಅವರು ನನಗೆ
ಇಪ್ಪತ್ತು ಅಂಕ ನೀಡಿದ್ದರೂ ನಾನು ಅದನ್ನು ಸ್ವೀಕರಿಸಬೇಕಾಗಿಲ್ಲ ,ನನ್ನ ಅಂಕ ನಲವತ್ತೈದೆಂಬುದನ್ನು
ಆಗಲೂ ಅರ್ಥಮಾಡಿಕೊಳ್ಳಬೇಕು.ಹಾಗೆಯೇ ಇನ್ನೊಂದು ಅಂಶ ಕೂದ ಗಮನಿಅಸಬೇಕು. ನಿನ್ನಲ್ಲಿ ನಲವತ್ತೈದು ಅಂಕಗಳಷ್ಟು
ಯೋಗ್ಯತೆ ಇದ್ದರೂ ಇನ್ನೂ ಐವತ್ತೈದರಷ್ಟು ದೋಷವಿದೆ, ಎಂದು ಹೇಳಿದವರ ಬಗ್ಗೆ ನಮ್ಮ ಪ್ರತಿಕ್ರಿಯೆ ಹೇಗಿರಬೇಕು
ಅಂತವರಿಗೆ ಮೊದಲು ಧನ್ಯವಾದ ಹೇಳಿ, ಈ ದೋಷಗಳನ್ನು ಸರಿಪಡಿಸಿಕೊಳ್ಳಲು ನಾನೇನು ಮಾದಬೇಕೆಂದು ಧನಾತ್ಮಕವಾಗಿ
ವಿಚಾರ ಮಾಡಿದಾಗ ಅವರ ತೆಗಳಿಕೆಯೂ ನಮಗೆ ವರವೇ ಆಗುತ್ತದೆ. ಹೀಗೆ ವಿಚಾರಮಾಡಿ ಜೀವನವನ್ನು ಸ್ವೀಕರಿಸುತ್ತಾ
ಹೋದರೆ ನಮ್ಮ ಜೀವನ ಮಟ್ಟ ಸುಧಾರಿಸಲು ಸಾಧ್ಯವಿಲ್ಲವೇ? ಏನಂತೀರಾ?
[ಪ್ರೇರಣೆ: ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಮಾತುಗಳು]
-ಹರಿಹರಪುರಶ್ರೀಧರ್
ಹೌದು ನಮ್ಮ ಮೌಲ್ಯ ನಮಗೆ ತಿಳಿದಿದ್ದರೆ ಒಳ್ಳೆಯದು
ReplyDeleteಚೆನ್ನಾಗಿದೆ