ನನಗೆ ಬಹಳ ಸಂತೋಷವಾಗಿತ್ತು. 'ಆಗಲಾರದು, ಕಷ್ಟ' ಎಂದುಕೊಂಡಿದ್ದ ಕೆಲಸವೊಂದು ಯಶಸ್ವಿಯಾಗಿ ಪೂರ್ಣವಾಗಿಬಿಟ್ಟಿತ್ತು. ನನಗೇ ನಂಬಲಾಗುತ್ತಿರಲಿಲ್ಲ. "ನೀವು ಇಲ್ಲದಿದ್ದರೆ ಈ ಕೆಲಸ ಆಗುತ್ತಲೇ ಇರಲಿಲ್ಲ. ನೀವು ಗ್ರೇಟ್ ಸಾರ್" ಎಂಬಂತಹ ಮಾತುಗಳು ಕೇಳಿಬಂದಾಗ ಉಬ್ಬಿಹೋಗಿದ್ದೆ. 'ನನ್ನಿಂದಲೇ ಈ ಕೆಲಸ ಆಗಿದ್ದು, ಇಲ್ಲದಿದ್ದರೆ ಆಗುತ್ತಿರಲಿಲ್ಲ'ವೆಂಬ ಭಾವನೆ ನನಗೂ ಬಂದು ಹೆಮ್ಮೆಪಡುತ್ತಿದ್ದಾಗಲೇ ಬಂದಿದ್ದ ಅವನು ನನ್ನನ್ನು ನೋಡಿ ಮುಗುಳ್ನಗುತ್ತಾ ಕರೆದಿದ್ದ: "ಬಾ ಇಲ್ಲಿ."
ನಾನು: (ನಗುತ್ತಲೇ) ಏನು ಸಮಾಚಾರ?
ಅವನು: ಈ ಕೆಲಸ ನೀನೇ ಮಾಡಿದ್ದಾ? ಬಹಳ ಚೆನ್ನಾಗಿದೆ.
ನಾನು: ನಿನಗೂ ಗೊತ್ತಿದೆ, ನಾನೇ ಮಾಡಿದ್ದು ಅಂತ. ತಮಾಷೆ ಮಾಡಬೇಡ. ಎಲ್ಲರೂ ಹೇಳ್ತಾ ಇರೋದನ್ನೂ ಕೇಳ್ತಲೇ ಇದೀಯ.
ಅವನು: ಎಲ್ಲರೂ ಏನಾದರೂ ಹೇಳಲಿ. ನಿನಗೆ ಏನು ಅನ್ನಿಸುತ್ತೆ ಅದನ್ನು ಹೇಳು.
ನಾನು: (ಗಂಭೀರವಾಗಿ) ಅನುಮಾನ ಏಕೆ? ನಾನೇ ಇದನ್ನು ಮಾಡಿದ್ದು.
ಅವನು: ಹಾಗಲ್ಲಪ್ಪಾ. ನಾನು ಕೇಳಿದ್ದು ನೀನು ಅಂದರೆ ಯಾರು ಅಂತ!
ನಾನು: (ಅನುಮಾನದಿಂದ ನೋಡುತ್ತಾ) ನಾನು ಯಾರು ಅಂದರೆ ಏನರ್ಥ? ನಿನ್ನ ಎದುರಿಗೆ ನಿಂತಿರುವ ನನ್ನ ಆರಡಿ ಎತ್ತರದ ಶರೀರವೂ ಕಾಣ್ತಾ ಇಲ್ವಾ?
ಅವನು: ಓ! ಈ ಶರೀರ ನಿನ್ನದಾ?
ನಾನು: ಮತ್ತೇನು ನಿನ್ನದಾ?
ಅವನು: ಹೋಗಲಿ ಬಿಡು. ನಿನ್ನ ಶರೀರ ಅಂದೆಯಲ್ಲಾ, ಅದು ನೀನು ಹೇಳಿದಂತೆ ಕೇಳುತ್ತಾ?
ನಾನು: (ಇವನಿಗೆ ತಲೆ ಕೆಟ್ಟಿರಬೇಕೆಂದುಕೊಂಡು) ನನಗೆ ಸಮಯವಿಲ್ಲ. ಇನ್ನೊಮ್ಮೆ ಮಾತನಾಡೋಣ.
ಅವನು: ನಿನಗೆ ಸಮಯವಿಲ್ಲ. ಆಯಿತು. ನಾನು ಹೇಳುವುದನ್ನು ಬೇಗ ಹೇಳಿಬಿಡುತ್ತೇನೆ. ಈ ಶರೀರ ನಿನ್ನದು. ನೀನು ಹೇಳಿದಂತೆ ಅದು ಕೇಳಿ ಈ ಕೆಲಸ ಮಾಡಿಬಿಟ್ಟಿತು. ಭೇಷ್! ಈಗ ನೀನು ಉಸಿರಾಡ್ತಾ ಇರೋದರಿಂದ ನಿನ್ನ ಶರೀರ ಬದುಕಿದೆ. ಆ ಉಸಿರಾಡೋ ಕೆಲಸದ ಕಂಟ್ರೋಲು ನಿನ್ನ ಕೈಲಿದೆಯಾ? ಹುಟ್ಟಿದ ಕ್ಷಣದಿಂದಲೇ ನಿನಗೆ ಏನೂ ಗೊತ್ತಿಲ್ಲದಿದ್ದಾಗಿನಿಂದಲೇ ಈ ಉಸಿರಾಟ ನಡೀತಿದೆ. ಎಚ್ಚರವಿಲ್ಲದೆ ನೀನು ನಿದ್ದೆ ಮಾಡುತ್ತಿದ್ದಾಗಲೂ ಉಸಿರಾಟ ನಡೀತಾನೇ ಇರುತ್ತೆ. ಈಗ ಹೇಳು, ಈ ಉಸಿರಾಟ ನಿನ್ನಿಂದ ಆಗುತ್ತಿದೆಯಾ ಅಥವ ಬೇರೆ ಯಾರಾದರೂ ಮಾಡಿಸುತ್ತಿದ್ದಾರಾ? ನಿನ್ನಿಂದಲೇ ಉಸಿರಾಟ ಆಗುತ್ತಿದೆ ಅನ್ನವುದಾದರೆ ಈ ಉಸಿರಾಡುವ ಆಟ ನೀನು ನಿಲ್ಲಿಸುವುದೇ ಇಲ್ಲ. ಏಕೆಂದರೆ ನೀನು ಸಾಯಲು ಇಷ್ಟಪಡುವುದೇ ಇಲ್ಲ, ಅಲ್ಲವೇ?
ನಾನು: (ಗೊಂದಲದಿಂದ) ಆಂ?. . . .
ಅವನು: ನಿನ್ನ ಶರೀರದಲ್ಲಿ ರಕ್ತ ಸುತ್ತುತ್ತಲೇ ಇರುತ್ತೆ. ಕೆಟ್ಟ ರಕ್ತ ಹೃದಯಕ್ಕೆ ಹೋಗುತ್ತೆ. ಶುದ್ಧವಾಗಿ ಹೊರಬರುತ್ತೆ. ಕೆಟ್ಟ ರಕ್ತ ಹರಿಯುವ ರಕ್ತನಾಳವೇ ಬೇರೆ, ಒಳ್ಳೆಯ ರಕ್ತ ಹರಿಯುವ ನಾಳಗಳೇ ಬೇರೆ ಇವೆ. ಈ ರಕ್ತ ಹೀಗೇ ಹರಿಯುವಂತೆ ನೀನು ಮಾಡ್ತಾ ಇದೀಯಾ? ಅದನ್ನು ನೀನೇ ಕಂಟ್ರೋಲ್ ಮಾಡ್ತಾಇದೀಯಾ?
ನಾನು: (ತಲೆ ಪರಚಿಕೊಳ್ಳುತ್ತಾ) ಅಯ್ಯೋ!!
ಅವನು: ಸಿಟ್ಟು ಮಾಡಿಕೋಬೇಡ. ನಿನ್ನ ಹೃದಯ ಇದೀಯಲ್ಲಾ, ಅದು ನೀನು ಹುಟ್ಟಿದಾಗಿನಿಂದಲೂ ಲಬ್ ಡಬ್ ಅಂತ ಪುರುಸೊತ್ತಿಲ್ಲದೆ ಹೊಡಕೊಳ್ತಾನೇ ಇದೆ. ಅದಕ್ಕೆ ಯಾವಾಗಲಾದರೂ ಪುರುಸೊತ್ತು ಕೊಡ್ತೀಯಾ? ಕೊಡಕ್ಕೆ ನಿನಗೆ ಆಗುತ್ತಾ? ನಿನ್ನ ಕೈಲಿ ಆಗೋದಿದ್ದರೆ ಅದಕ್ಕೆ ನೀನು ಯಾವತ್ತೂ ವಿಶ್ರಾಂತಿ ಕೊಡೋದೇ ಇಲ್ಲ, ಅಲ್ವಾ? ಏಕೆಂದರೆ ಅದಕ್ಕೆ ವಿಶ್ರಾಂತಿ ಕೊಟ್ಟರೆ ನೀನು ಎಲ್ಲಿ ಇರ್ತೀಯಾ?
ನಾನು: (ಮೆತ್ತಗಾಗಿದ್ದೆ) ನೀನು ಏನು ಹೇಳಬೇಕೆಂದಿದ್ದೀಯಾ? ನೇರವಾಗಿ ಹೇಳು, ಪ್ಲೀಸ್.
ಅವನು: ಪುರುಸೊತ್ತಿಲ್ಲ ಅಂದಿದ್ದೆ? ಹೋಗಲಿ ಬಿಡು. ನಿನ್ನ ತಲೆ ತಿನ್ನುವುದರಿಂದ ನನಗೇನೂ ಲಾಭವಿಲ್ಲ. ನೋಡು, ನೀನು ಉಸಿರಾಡ್ತಾ ಇದೀಯಾ, ನಿನ್ನ ಹೃದಯ ಕೆಲಸ ಮಾಡ್ತಾ ಇದೆ. ಇವೆಲ್ಲದರ ಮೇಲೆ ನಿನ್ನ ಕಂಟ್ರೋಲು ಇಲ್ಲವೇ ಇಲ್ಲ. ಅದನ್ನು ಕಂಟ್ರೋಲು ಮಾಡುತ್ತಿರುವವನೇ ಬೇರೆ ಅಂತ ನಿನಗೆ ಗೊತ್ತಾಯ್ತಲ್ಲಾ, ಅಷ್ಟು ಸಾಕು. ನಿನ್ನ ಕಂಟ್ರೋಲೇ ಇಲ್ಲದೆ, ಬೇರೆಯವರ ಕಂಟ್ರೋಲಿನಿಂದ ಓಡ್ತಾ ಇರೋ ಈ ದೇಹದ ಸಹಾಯದಿಂದ ಮಾಡಿದ ಕೆಲಸ ಮಾತ್ರ ನೀನು ಮಾಡಿದ್ದು ಅಂತ ಹೇಗಾಗುತ್ತೆ?
ಅವನು ಈ ರೀತಿಯಲ್ಲಿ ಏನೇನೋ ಮಾತನಾಡುತ್ತಿದ್ದಾಗ ಅರಿವಿಲ್ಲದೆ ನಾನು ಕಣ್ಣು ಮುಚ್ಚಿ ಯೋಚಿಸುತ್ತಿದ್ದವನು, ಅವನು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿದಾಗ ಫಕ್ಕನೆ ಕಣ್ಣು ಬಿಟ್ಟು ನೋಡಿದೆ. ನೋಡಿದರೆ ಅವನು ಅಲ್ಲಿ ಇರಲೇ ಇಲ್ಲ. "ಏಯ್, ಎಲ್ಲಿದೀಯಾ?" ಎಂದು ಕೂಗಿದೆ. "ಹೇಳು, ನೀನು ಹೇಳಿದ್ದು ನನಗೆ ಕೇಳುತ್ತೆ. ನಾನು ಇಲ್ಲೇ ಇದ್ದೇನೆ" ಎಂಬ ಮಾತು ಕೇಳಿಸಿತು. ಆ ಮಾತುಗಳು ನನ್ನ ಒಳಗಿನಿಂದಲೇ ಬಂದಂತೆ ಅನ್ನಿಸಿತು.
ನಾನು: ಹಾಂ? ನೀನು ನನ್ನೊಳಗೆ ಇದ್ದೀಯಾ? ಅಲ್ಲಿಗೆ ಹೇಗೆ ಹೋದೆ?
ಅವನು: ನಾನು ಇರುವುದೇ ಇಲ್ಲಿ. ಇಲ್ಲಿ ಬಿಟ್ಟು ಇನ್ನು ಎಲ್ಲಿಗೆ ಹೋಗಲಿ? ನೀನು ಇರುವ ಹೊತ್ತಿಗೇ ನಾನೂ ಇರೋದು. ನೀನಿಲ್ಲದಿದ್ದರೆ ನಾನೆಲ್ಲಿ ಇರ್ತಾ ಇದ್ದೆ? ನನ್ನನ್ನು ಕಂಟ್ರೋಲು ಮಾಡೋನೇ ನೀನು! ನೀನಿಲ್ಲದೆ ನಾನಿಲ್ಲ.
ನನಗೆ ತಲೆ ಕೆಟ್ಟುಹೋದಂತಾಯಿತು. 'ನಾನಿಲ್ಲದೆ ಅವನಿಲ್ಲವಂತೆ! ನನ್ನ ಮೇಲೆ ನನಗೇ ಕಂಟ್ರೋಲಿಲ್ಲ. ನನ್ನನ್ನು ಕಂಟ್ರೋಲು ಮಾಡೋನೇ ಬೇರೆ ಇರುವಾಗ, ನಾನು ಅವನನ್ನು ಕಂಟ್ರೋಲು ಮಾಡ್ತೀನಂತೆ!' ಎಂದು ನಗುವೂ ಬಂತು. ಹೀಗೇ ಯೋಚಿಸುತ್ತಿದ್ದವನಿಗೆ ಏನೋ ಹೊಳೆಯಿತು. ಹೌದು, ನನ್ನನ್ನು ಕಂಟ್ರೋಲು ಮಾಡುತ್ತಿರುವವನು 'ಅವನೇ' ಇರಬೇಕು! ಕರೆಕ್ಟ್!! ಅವನೇ!! ಈಗ ಸರಿಯಾಯಿತು. ನನ್ನನ್ನು ಅವನು, ಅವನನ್ನು ನಾನು ಕಂಟ್ರೋಲ್ ಮಾಡ್ತಾ ಇದೀವಿ. ನನ್ನನ್ನು ಅವನು ಕಂಟ್ರೋಲ್ ಮಾಡುತ್ತಿರುವುದರಿಂದ ಅವನೇ ಗ್ರೇಟ್! ನಾನು ಇರುವುದರಿಂದಲೇ ಅವನು ಇರೋದು! ಅದಕ್ಕೇ ನಾನೂ ಗ್ರೇಟ್!!
ನಾನಿಲ್ಲದೆ ಅವನಿಲ್ಲ, ಅವನಿಲ್ಲದೆ ನಾನಿಲ್ಲ! ಹೀಗೆ ನನ್ನಷ್ಟಕ್ಕೇ ನಾನೇ ಜಂಬಪಟ್ಟುಕೊಳ್ಳುತ್ತಿದ್ದಾಗ ಮೂಢನ ಗೊಣಗು ಕೇಳಿಸಿತು:
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನೆನಬೇಡ ನಿನದೆನಬೇಡ
ಜಗವೃಕ್ಷ ರಸ ಹರಿವ ಕೊಂಬೆ ನೀನು ಮೂಢ||
-ಕ.ವೆಂ.ನಾಗರಾಜ್.
ಎಲ್ಲಾ ವಿಚಾರವೂ ಅದ್ಭುತವಾಗಿದೆ. ಆದರೆ.....".ನಾನಿಲ್ಲದೆ ಅವನಿಲ್ಲ" ಇಲ್ಲಿ ಸ್ವಲ್ಪ ಗೊಂದಲ ಕಾಡ್ತಾ ಇದೆ. ನಾನೊಂದು ಯಂತ್ರ ಅಷ್ಟೆ. ಅದನ್ನು ನಡೆಸುವ ಶಕ್ತಿ ಅವನೇ. ನಾನಿಲ್ಲದಿದ್ದರೆ ಬೇರೊಂದು ಯಂತ್ರ ಹುಡುಕಿಕೊಳ್ಳುತ್ತಾನೆ. ಈ ಯಂತ್ರದ ಭಾಗಗಳೂ ಕೂಡ ಅನನಿಲ್ಲದೆ ಅಲ್ಲಾಡದು!! ಹೀಗಿರುವಾಗ "ನನ್ನದೇನೂ ಇಲ್ಲ,ಅವನದೇ ಎಲ್ಲಾ" ಎಂಬುದು ನನ್ನ ಗಟ್ಟಿ ನಿಲುವು.ಆದರೂ ಯಶಸ್ಸು ದೊರೆತಾಗ ಸಂತೋಷ ಪಟ್ಟಿದ್ದಿದೆ!!
ReplyDeleteಪ್ರಿಯ ಶ್ರೀಧರ, ನಾನಿಲ್ಲದೆ ಅವನಿಲ್ಲವೆಂಬ ಬಗ್ಗೆ ನಾನು ಹೇಳಿದ್ದು ಹೀಗೆ: ಅವನಿದ್ದಾನೆ, ಆದರೆ ಅವನು ಇದ್ದಾನೆಂದು ಗೊತ್ತಾಗುವುದು ನಾನಿದ್ದಾಗಲೇ! ನಾನೇ ಇಲ್ಲದಿದ್ದರೆ ಅವನಿದ್ದಾನೆಂದು ನನಗೆ ಗೊತ್ತಾಗುವುದು ಹೇಗೆ? :)) ಹಾಸ್ಯದ ಲೇಪ ಕೊಟ್ಟಿರುವ ರೀತಿ ಇದು! 'ನಾನು' ಮತ್ತು 'ಅವನು'ಗಳ ಅಸ್ತಿತ್ವಕ್ಕೆ ಅರ್ಥ ಬರುವುದೂ ಮತ್ತೊಂದು ಮೂರನೆಯದು ಇದ್ದಾಗ!!
ReplyDeleteVery nice article.. :-)
ReplyDeleteVery nice article.. :-)
ReplyDeleteThanks, Kiran shetty. :)
DeleteVery fine....
ReplyDeleteThanks, Ravi. :)
Delete