Pages

Tuesday, October 1, 2013

ಭಗವಂತನ ಅಸ್ತಿತ್ವ

ಭಗವಂತನ ಅಸ್ತಿತ್ವವನ್ನು ತಿಳಿಯಲು ಈ ಒಂದು ವೇದ ಮಂತ್ರವನ್ನು ಅರ್ಥಮಾಡಿಕೊಳ್ಳಬೇಕು. ಪ್ರಯತ್ನ ಪಡೋಣ.
ಇದು ಶ್ರೀ ಸುಧಾಕರಶರ್ಮರ ಉಪನ್ಯಾಸದ ಒಂದು ಬರಹ ರೂಪ.

ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತ: ||
ಈ ಮಂತ್ರವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ
ತದೇಜತಿ ಪದವನ್ನು  ಬಿಡಿಸಿದಾಗ ತತ್ ಏಜತಿ ಎಂದಾಗುತ್ತದೆ. ತತ್ ಅಂದರೆ ಅದು ಏಜತಿ ಅಂದರೆ ಎಲ್ಲಕ್ಕೂ ಗತಿಯನ್ನು ಕೊಡುತ್ತದೆ. ನಾವು ಹಿಂದಿನ ಮಂತ್ರದಲ್ಲಿ ಸುಪರ್ಣಾ ಎನ್ನುವ ಪದದ ಅರ್ಥವನ್ನು ವಿವರವಾಗಿ ತಿಳಿದಿದ್ದೇವೆ. ಸುಪರ್ಣಾ ಎಂದರೆ ಗತಿಶೀಲ ಎಂದು ಅರ್ಥಮಾಡಿಕೊಂಡಿದ್ದೇವೆ. ಅಣುಚೇತನವು ಗತಿ ಶೀಲವಾದರೆ ವಿಶ್ವಚೇತನವು ತಾನು ಚಲಿಸದೆ ಜಡ ಅಸ್ತಿತ್ವಕ್ಕೂ ಮತ್ತು ಅಣುಚೇತನಕ್ಕೂ ಚಾಲನೆಯನ್ನು ಕೊಡುತ್ತಾದ್ದರಿಂದ ಅದೂ ಗತಿಶೀಲವೇ ಎಂದು ಅರ್ಥಮಾಡಿಕೊಂಡಿದ್ದೇವೆ.
ಈಗ ಈ ಮಂತ್ರಭಾಗದ ಅರ್ಥ ನೋಡೋಣ. ತತ್ ಏಜತಿ ಅಂದರೆ ತತ್ ಅಂದರೆ ಆ ವಿಶ್ವಚೇತನ ಶಕ್ತಿಯು, ಏಜತಿ  ಎಂದರೆ ಇಡೀ ಬ್ರಹ್ಮಾಂಡಕ್ಕೆ ಚಾಲನೆಯನ್ನು ಕೊಡುತ್ತದೆ. ಸರಳವಾದ ಎರಡು ಪದಗಳ ಅರ್ಥ ತಿಳಿದುಕೊಳ್ಳೋಣ. ಚಲನೆ ಎಂದರೇನು? ಒಂದು ವಸ್ತುವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರವಾಗಿದ್ದರೆ ಅದಕ್ಕೆ ಚಲನೆ ಉಂಟಾಗಿದೆ ಎಂದು ಹೇಳಬಹುದಲ್ಲವೇ? ಬದಲಾವಣೆ ಎಂದರೇನು? ಒಂದು ಕಿತ್ತಲೆ ಹಣ್ಣು ಒಂದು ಸ್ಥಳದಲ್ಲಿದೆ,ಅದು ಅಲ್ಲೇ ಇದೆ. ಆದರೆ ನಾಲ್ಕು ದಿನಗಳಲ್ಲಿ ಕೊಳೆಯಲು ಆರಂಭಿಸಿ ಅದರ ರೂಪ ಪರಿವರ್ತನೆ ಯಾಗಿದೆ. ಇದಕ್ಕೆ ಬದಲಾವಣೆ ಎನ್ನಬಹುದಲ್ಲವೇ?
ತತ್ ಏಜತಿ ಎಂದರೆ ಆ ವಿಶ್ವ ಚೇತನ ಶಕ್ತಿಯು ಸಕಲ ಜೀವರಾಶಿಗಳ ಚಲನೆ ಮತ್ತು ಬದಲಾವಣೆಗೆ ಕಾರಣವಾಗಿದೆ.ಎಲ್ಲೇ ಬದಲಾವಣೆ ಇರಲಿ ಅಥವಾ ಚಲನೆ ಇರಲಿ ಅದರ ಹಿಂದೆ ವಿಶ್ವಚೇತನ ಶಕ್ತಿಯು ಅದಕ್ಕೆ ಕಾರಣವಾಗಿದೆ. ಮಂತ್ರದ ಮುಂದಿನ ಪದವನ್ನು ನೋಡೋಣ. ತನ್ನೈಜತಿ ಪದವನ್ನು ಬಿಡಿಸಿದಾಗ   ತತ್ ನ ಏಜತಿ ಅಂದರೆ ಅದು [ವಿಶ್ವಚೇತನ ಶಕ್ತಿಯು] ನ ಏಜತಿ ಅಂದರೆ ಚಲಿಸುವುದಿಲ್ಲ. ಹಾಗೂ ಅದು ಬದಲಾವಣೆಗೂ ಒಳಗಾಗುವುದಿಲ್ಲ. ಚಲಿಸದ ಮತ್ತು ಬದವಾವಣೆಗೆ ನಿಲುಕದ ನಿತ್ಯ ನೂತನವಾದ  ಇದನ್ನು ಕಾಲಾತೀತ ಎನ್ನುತ್ತೇವೆ. ವಿಶ್ವಚೇತನ ಶಕ್ತಿಯು ಯಾಕೆ ಚಲಿಸುವುದಿಲ್ಲ ವೆಂಬುದನ್ನು ಈಗಾಗಲೇ ತಿಳಿದುಕೊಂಡಿದ್ದೇವೆ. ನೆನಪು ಮಾಡಿಕೊಳ್ಳಬೇಕೆಂದರೆ ವಿಶ್ವಚೇತನ ಶಕ್ತಿಯು ಸರ್ವವ್ಯಾಪಿಯಾಗಿರುವುದರಿಂದ ಚಲಿಸಲು ಅದಕ್ಕೆ ಅದಿಲ್ಲದಿರುವ ಸ್ಥಳವೇ ಇಲ್ಲವಲ್ಲಾ! ಅದರ ಸೂಕ್ಷ್ಮ ಗುಣ ಸ್ವಭಾವವು ಹೇಗಿರುತ್ತದೆಂದರೆ ಅದು ಎಲ್ಲಾ ಕಾಲದಲ್ಲೂ ಬದಲಾವಣೆ ಇಲ್ಲದೆ ಒಂದೇ ರೀತಿ ಇರುತ್ತದೆ.ಅದು ನಿತ್ಯ ನೂತನವಾಗಿರುತ್ತದೆ. ಅಂದರೆ ಇಂದಿಗೆ ಹೊಸದು,ನಾಳೆಯೂ ಹೊಸದಾಗಿಯೇ ಇರುತ್ತದೆ. ಐವತ್ತು ಸಾವಿರವರ್ಷಗಳ  ಹಿಂದೆಯೂ ಹೀಗೆಯೇ ಇತ್ತು. ಯಾವ ಬದಲಾವಣೆ ಇಲ್ಲ. ಅಂದರೆ ಈ ವಿಶ್ವಚೇತನ ಶಕ್ತಿಯು ವಿಶೇಷರೀತಿಯಲ್ಲಿ ಹೊಸ [ನವ] ದಾಗಿರುತ್ತದಾದ್ದರಿಂದ ಇದನ್ನು  ಪ್ರ+ನವ= ಪ್ರಣವ ಎಂತಲೂ ಕರೆಯುತ್ತೇವೆ. ಪ್ರ+ನವ= ಪ್ರನವ ಆಗಬೇಕಲ್ಲವೇ? ಪ್ರ ಅಕ್ಷರದಲ್ಲಿ ರಕಾರವಿರುವುದರಿಂದ ವ್ಯಾಕರಣಶಾಸ್ತ್ರದಂತೆ ಅದರ ಮುಂದಿನ ನ ಅಕ್ಷರವು ಣ ಕಾರವಾಗಿ ಉಚ್ಚರಿಸಲ್ಡುತ್ತದೆ. ಬೇರೆ ಎಲ್ಲದರ ಚಲನೆಗಳಿಗೂ ಬದಲಾವಣೆಗಳಿಗೂ ಈ ಪ್ರಣವ ಶಕ್ತಿಯು ಕಾರಣವಾಗಿದ್ದರೂ  ತತ್ ನ ಏಜತಿ ಅದು ಚಲಿಸುವುದಿಲ್ಲ.
ಮುಂದಿನ ಮಂತ್ರಭಾಗ ತದ್ದೂರೇ ಪದವನ್ನು ಬಿಡಿಸಿದಾಗ ತತ್ ದೂರೇ ಅಂದರೆ ಅದು ತುಂಬಾ ದೂರದಲ್ಲಿದೆ, ತದ್ವಂತಿಕೇ ಪದವನ್ನು ಬಿಡಿಸಿದಾಗ ತತ್ ಉ ಅಂತಿಕೇ ಅಂದರೆ ಅದು ಅಷ್ಟೇ ಹತ್ತಿರದಲ್ಲೂ ಇದೆ. ಇದೊಂದು ವಿಚಿತ್ರ ಮಾತಾಗಿ ತೋರುತ್ತದಲ್ಲವೇ? ಅದು ದೂರದಲ್ಲಿದೆ ಅಂದೊಡನೆ ಪುನ: ಅದು ಹತ್ತಿರದಲ್ಲೂ ಇದೆ ಎಂಬುದು ಮಂತ್ರದ ಅರ್ಥ. ಹಾಗೆಂದರೇನು?
ಇಲ್ಲಿ ಹೇಳಿರುವ ದೂರ ಮತ್ತು ಹತ್ತಿರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಹೊಳೇನರಸೀಪುರಕ್ಕೆ ಹೋಲಿಸಿದಾಗ ಮೈಸೂರು ದೂರದಲ್ಲಿದೆ. ಚನ್ನರಾಯಪಟ್ಟಣಕ್ಕಿಂತ ಬೆಂಗಳೂರುದೂರದಲ್ಲಿದೆ. ಅಥವಾ ಬೆಂಗಳೂರಿಗಿಂತ ಚನ್ನರಾಯಪಟ್ಟಣ ಹತ್ತಿರದಲ್ಲಿದೆ. ಇದು ನಮಗೆ ಅರ್ಥವಾಗುವ ದೂರ ಮತ್ತು ಹತ್ತಿರ ಪದಗಳ ಅರ್ಥ.ಇದು ಸ್ಥಳದ ದೃಷ್ಟಿಯಿಂದ ದೂರ.ಆದರೆ ಇನ್ನೂ ಎರಡು ದೂರಗಳಿವೆ. ಒಂದು ಕಾಲದ ದೃಷ್ಟಿಯಿಂದ ದೂರ. ರಾಮನ ಕಾಲಕ್ಕೆ ಹೋಲಿಸಿದಾಗ ಮಹಾತ್ಮಗಾಂದಿಯ ಕಾಲ ನಮಗೆ ಹತ್ತಿರ. ಮಹಾತ್ಮ ಗಾಂಧಿಯ ಕಾಲಕ್ಕೆ ಹೋಲಿಸಿದಾಗ ರಾಮನ ಕಾಲ ದೂರ. ಅಲ್ಲವೇ? ಮತ್ತೊಂದು ದೂರವಿದೆ. ಇದು ಮನಸ್ಸಿನ ದೃಷ್ಟಿಯಿಂದ  ಜ್ಞಾನದ ದೃಷ್ಟಿಯಿಂದ ದೂರ. ನಿಮ್ಮ ಪಕ್ಕದಲ್ಲೇ ನಿಮ್ಮೊಡನೆ ಒಬ್ಬರು ಮಾತನಾಡುತ್ತಾಕುಳಿತಿದ್ದಾರೆ,ಎಂದುಕೊಳ್ಳಿ. ಆದರೆ ಅದೇ ಸಮಯದಲ್ಲಿ  ನಿಮ್ಮ ಮನಸ್ಸು ಅಮೆರಿಕೆಯಲ್ಲಿರುವ ನಿಮ್ಮ ಮಗಳಬಗ್ಗೆ ಚಿಂತಿಸುತ್ತಿದೆ. ಈಗ ನಿಮಗೆ ಯಾರು ಹತ್ತಿರ? ಅಮೆರಿಕೆಯಲ್ಲಿರುವ ನಿಮ್ಮ ಮಗಳೋ ಅಥವಾ ಹರಟೆಹೊಡೆಯಲು ಬಂದಿರುವ ನಿಮ್ಮ ಸ್ನೇಹಿತರೋ? ಸಹಜವಾಗಿ ಮಗಳು ನಿಮಗೆ ಹತ್ತಿರವಾಗುತ್ತಾಳೆ ಅಲ್ಲವೇ? ಅವಳು ಸಾವಿರಾರು ಮೈಲು ದೂರದಲ್ಲಿರುವ ಅಮೆರಿಕೆಯಲ್ಲಿದ್ದಾಳೆ. ಅವಳು ನಿಮಗೆ ಹತ್ತಿರವಾದಳು, ಆದರೆ ಪಕ್ಕದಲ್ಲೇ ಇರುವ ನಿಮ್ಮ ಸ್ನೇಹಿತರು ನಿಮ್ಮ ಮಗಳಿಗಿಂತ ದೂರವಾಗುತ್ತಾರೆ. ಅಲ್ಲವೇ? ಅಂದರೆ ನಮ್ಮ ಮನಸ್ಸು, ಜ್ಞಾನ ಎಲ್ಲಿರುತ್ತದೋ ಅದು ಹತ್ತಿರ ಎಲ್ಲಿ ಇರುವುದಿಲ್ಲವೋ ಅದು ದೂರ. ಈ ಮೂರೂ ತರದ ದೂರಗಳನ್ನು ಅರ್ಥಮಾಡಿಕೊಂಡಾಗ  ಭಗವಂತನ ವಿಚಾರದ ತದ್ದೂರೇ ತದ್ವಂತಿಕೇ ಪದಗಳು ನಮಗೆ ಅರ್ಥವಾಗುತ್ತದೆ. ಭಗವಂತನು ಸರ್ವವ್ಯಾಪಿಯಾದ್ದರಿಂದ ಅವನು ಎಲ್ಲಾ ಕಡೆ ಇದ್ದಾನಾದ್ದರಿಂದ ಅವನು ಸ್ಥಳದ ದೃಷ್ಟಿಯಿಂದ ಹತ್ತಿರ. ಕಾಲದ ದೃಷ್ಟಿಯಿಂದ ಯೋಚಿಸುವಾಗ ಶ್ರೀ ರಾಮ ಶ್ರೀ ಕೃಷ್ಣರ ಕಾಲದಲ್ಲಿದ್ದ ಭಗವಂತನೇ ಈಗಲೂ ಇದ್ದಾನೆ. ಅವನು ಸಾರ್ವಕಾಲಿಕನಾದ್ದರಿಂದ ಅವನು ಹತ್ತಿರವೇ. ಸ್ಥಳ ಹಾಗೂ ಕಾಲದ ದೃಷ್ಟಿಯಿಂದ ಭಗವಂತನು ಎಲ್ಲೆಲ್ಲೂ ಇದ್ದು ನಮ್ಮಲ್ಲೂ ಯಾವಕಾಲದಲ್ಲೂ ಇರುವುದರಿಂದ ಅವನು ಹತ್ತಿರವೆಂದಾಯ್ತು. ಹಾಗಾದರೆ ಇನ್ಯಾವ ದೃಷ್ಟಿಯಿಂದ ಅವನು ದೂರ ಅಥವಾ ಹತ್ತಿರವಾಗಬಹುದು? ಉಳಿದದ್ದು ಮನಸ್ಸಿನದೃಷ್ಟಿಯಿಂದ ಮತ್ತು  ಜ್ಞಾನದ ದೃಷ್ಟಿಯಿಂದ ಹತ್ತಿರ ಅಥವಾ ದೂರ. ನಮಗೆ ಭಗವಂತನಲ್ಲಿ ಮನಸ್ಸಿದ್ದರೆ ಅವನು ನಮಗೆ ಹತ್ತಿರ ಮನಸ್ಸಿಲ್ಲದಿದ್ದರೆ ದೂರ , ಅಷ್ಟೆ.
ಮುಂದಿನ ಮಂತ್ರಭಾಗವನ್ನು ನೋಡೋಣ.

ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತ: ||
ತತ್ ಅಂತರಸ್ಯ ಸರ್ವಸ್ಯ ತತ್ ಸರ್ವಸ್ಯ ಅಸ್ಯ ಬಾಹ್ಯತ:
ಈ ಭಗವಚ್ಚಕ್ತಿಯು ಎಲ್ಲದರ ಒಳಗೂ ಇದೆ. ಮತ್ತು ಎಲ್ಲದರ ಹೊರಗೂ ಇದೆ. ಅಂದರೆ ಎಲ್ಲವೂ ಇದರೊಳಗಿದೆ. ಇದೂ ಎಲ್ಲದರ ಒಳಗೂ ಇದೆ. ಈ ರೀತಿಯಲ್ಲಿರುವ ವಿಶ್ವ ವ್ಯಾಪಕ ಶಕ್ತಿಯ  ಅಥವಾ ವಿಶ್ವಚೇತನ ಶಕ್ತಿಯ ವಿವರಣೆ ಇಲ್ಲಿದೆ. ಎಲ್ಲದರ ಚಾಲಕ ಶಕ್ತಿಯಾಗಿದ್ದೂ ಅದು ಮಾತ್ರ ಸ್ವತ: ಚಾಲನೆಗೆ ಮತ್ತು ಬದಲಾವಣೆಗೆ ಸಿಕ್ಕುವುದಿಲ್ಲ. ಅದು ಎಲ್ಲದರ ಒಳಗೂ ಇರುವುದರಿಂದ ಮತ್ತು ಎಲ್ಲವೂ ಅದರೊಳಗೆ    ಇರುವುದರಿಂದ  ಜ್ಞಾನದ ದೃಷ್ಟಿಯಿಂದ ಅದು ನಮ್ಮಿಂದ ಅತಿದೂರದಲ್ಲೂ ಇರಬಹುದು, ಆದರೆ ಅದರಲ್ಲಿ ನಮ್ಮ ಜ್ಞಾನಹೋದಾಗ ಅದು ಅತಿ ಹತ್ತಿರವೂ ಆಗಬಹುದು. ಅದು ಎಷ್ಟು ಹತ್ತಿರಲ್ಲಿರ ಬಹುದೆಂದರೆ ನಮ್ಮ ಜ್ಞಾನ ಕೆಲಸಮಾಡುವ ಮಿದುಳಿನ ಕಣಕಣದಲ್ಲೂ ಆ ವಿಶ್ವಚೇತನ ಶಕ್ತಿ ಇದೆ.ಅಂದರೆ ಅಣುಚೇತನವಾದ ನನ್ನೊಂದಿಗೇ ಆ ವಿಶ್ವಚೇತನ ಶಕ್ತಿಯೂ ಇದೆ. ಹಾಗಾದರೆ ಭಗವತ್ ಸಾಕ್ಷಾತ್ಕಾರಕ್ಕೆ ಅತ್ಯಂತ   ಹತ್ತಿರವಾದ ಸ್ಥಳ ಯಾವುದು? ಎಂದಾಗ ಅದು ಅಣುಚೇತನದ ಅಂತರಂಗವೇ ಆಗಿದೆಯಲ್ಲವೇ? ಅಂದರೆ ಅಂತರಂಗದಿಂದ ಸ್ವಲ್ಪ ಹೊರ ನೋಡಿದರೂ ಭಗವಂತನು ನಮಗೆ ದೂರವಾದಂತೆಯೇ ಅಲ್ಲವೇ? ಅಂದರೆ ಭಗವಂತನನ್ನು ಕಾಣಲು ಸರಿಯಾದ ಸ್ಥಳವು  ನಮ್ಮ ಅಂತರಂಗವೇ ಆಗಿದೆ. ನಮ್ಮಲ್ಲೇ ಇರುವ ಭಗವಂತನನ್ನು ಹೊರಗೆ ಹುಡುಕಬೇಕೇ?ಕೈಯ್ಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆಯಬೇಕೇ?
ನಿನ್ನ ಅಂತರಂಗದಲ್ಲೆ ಭಗವಂತನಿರುವಾಗ ಅವನನ್ನು ಹುಡುಕೊಕೊಂಡು ಎಲ್ಲಿಗೆ ಹೋಗುವೆ ನೀನು? ನಿನ್ನ ಅಂತರಂಗದಲ್ಲಿರುವ ಭಗವಂತನನ್ನು ಗುರುತಿಸಲು ನಿನಗೆ ಸಾಧ್ಯವಿಲ್ಲದಿದ್ದರೆ ಗುರುತಿಸುವೆಯಾದರೂ ಎಲ್ಲಿ? ಮನೆಯಲ್ಲಿರುವ ವಸ್ತುವನ್ನು ನೀನು ಗುರುತಿಸಲು ಸಾಧ್ಯವಿಲ್ಲದಿದ್ದರೆ ಬೀದಿಯಲ್ಲಿ ಸಿಕ್ಕೀತೇ? ಏಕೆಂದರೆ ಮಂತ್ರವೇ ತಿಳಿಸುವಂತೆ
 ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತ: ||
ಈ ಭಗವಚ್ಚಕ್ತಿಯು ಎಲ್ಲದರ ಒಳಗೂ ಇದೆ. ಮತ್ತು ಎಲ್ಲದರ ಹೊರಗೂ ಇದೆ. ಅಂದರೆ ಎಲ್ಲವೂ ಇದರೊಳಗಿದೆ. ಇದೂ ಎಲ್ಲದರ ಒಳಗೂ ಇದೆ. ಬ್ರಹ್ಮಾಂಡದ ಅಣುಅಣುವಿನಲ್ಲಿಯೂ ಅಂದರೆ ಅದು ಜಡದ ಅಣುವಾಗಿರಬಹುದು ಅಥವಾ ಅಣುಚೇತನದ ಅಣುವಾಗಿರಬಹುದು, ಎಲ್ಲಾ ಅಣು ಅಣುವಿನಲ್ಲೂ ಆ ಭಗವಚ್ಚಕ್ತಿ ವ್ಯಾಪಿಸಿಕೊಂಡಿದೆ.ಅದಕ್ಕಾಗಿ ಭಗವಂತನನ್ನು ಸರ್ವವ್ಯಾಪಿ ಎನ್ನುತ್ತಾರೆ. ಅಷ್ಟೇ ಅಲ್ಲ ಇಡೀ ಬ್ರಹ್ಮಾಂಡವು  ಈ ಭಗವಚ್ಚಕ್ತಿಯ ಒಳಗಿದೆ. ಆದ್ದರಿಂದ ಭಗವಂತನಿಲ್ಲದ ಜಾಗವಿಲ್ಲ. ಎಲ್ಲೆಲ್ಲೂ ಭಗವಂತನಿದ್ದಾನೆ. ಎಲ್ಲವೂ ಭಗವಂತನಲ್ಲಿದೆ.ಈ ಸೂಕ್ಷ್ಮವು ಅರ್ಥವಾದರೆ ಭಗವಂತನನ್ನು ಅರ್ಥಮಾಡಿಕೊಳ್ಳುವುದು ಸುಲಭವೂ ಸರಳವೂ ಆಗುತ್ತದೆ.
ಇರುವ ವಸ್ತುವನ್ನು ಮತ್ತು ಆ ವಸ್ತುವು ಯಾವುದರಲ್ಲಿದೆಯೋ ಅದನ್ನು ಎರಡು ಶಬ್ಧಗಳಲ್ಲಿ ಕರೆಯುತ್ತೇವೆ. ಒಂದು ವ್ಯಾಪ್ಯ ಮತ್ತೊಂದು ವ್ಯಾಪಕ. ಇಲ್ಲಿ ನಮಗೆ ಗೊಂದಲ ಉಂಟಾಗಬಾರದು. ಸಾಮಾನ್ಯವಾಗಿ ಭಗವಂತನ ವಿಚಾರದಲ್ಲಿ ಈ ಅಂಶದಲ್ಲಿ ಜನರಲ್ಲಿ ಸ್ವಲ್ಪ ಗೊಂದಲ ಇದೆ. ಯಾವುದು ಆವರಿಸಿಕೊಳ್ಳುತ್ತದೋ ಅದು ವ್ಯಾಪಕ. ಯಾವುದರೊಳಗೆ ವ್ಯಾಪಿಸಿಕೊಳ್ಳುತ್ತದೋ ಅದು ವ್ಯಾಪ್ಯ.ಇಡೀ ಬ್ರಹ್ಮಾಂಡವು ವ್ಯಾಪ್ಯ. ಅದರಲ್ಲಿ ಸಂಪೂರ್ಣವಾಗಿ ವ್ಯಾಪಿಸಿಕೊಂಡಿರುವ ಸರ್ವ ವ್ಯಾಪಕ ಶಕ್ತಿ ವಿಶ್ವಚೇತನ ಶಕ್ತಿಯಾದ ಭಗವಂತ. ನಮ್ಮ ಒಂದೊಂದು ಅಣು ಅಣುವಿನಲ್ಲೂ ಈ ಭಗವಚ್ಚಕ್ತಿ ವ್ಯಾಪಿಸಿಕೊಂಡಿದೆ. ಆದರೆ ಈ ಶರೀರವು ವ್ಯಾಪ್ಯವೇ ಹೊರತೂ ವ್ಯಾಪಕವಲ್ಲ. ಸುಲಭವಾದ ಉಧಾಹರಣೆ ನೋಡೋಣ.ಒಂದು ಲೋಟದಲ್ಲಿ ಹಾಲನ್ನು ತುಂಬಲಾಗಿದೆ. ಇದರಲ್ಲಿ ಲೋಟವು ವ್ಯಾಪ್ಯ. ಹಾಲು ಲೋಟದಲ್ಲಿ ವ್ಯಾಪಿಸಿದೆಯಾದ್ದರಿಂದ ಅದು  ವ್ಯಾಪಕ. ಇದರಿಂದ ನಮಗೆ ಒಂದು ಸ್ಪಷ್ಟತೆ ಇರುವುದು ಅವಶ್ಯಕ.ವ್ಯಾಪ್ಯ ಮತ್ತು ವ್ಯಾಪಕ ಒಂದೇ ಅಲ್ಲ. ವ್ಯಾಪ್ಯವನ್ನು ಪ್ಯಾಪಕವು ವ್ಯಾಪಿಸಿಕೊಂಡಿರುವುದು ಸತ್ಯ,ಲೋಟವನ್ನು ಹಾಲು ವ್ಯಾಪಿಸಿಕೊಂಡಿರುವುದು ಸತ್ಯ. ಆದರೆ ಹಾಲು ಮತ್ತು ಲೋಟ ಒಂದೇ ಅಲ್ಲ. ವ್ಯಾಪಕವೇ ಬೇರೆ.ವ್ಯಾಪ್ಯವೇ ಬೇರೆ. ಇದು ಜಡವಸ್ತು ವ್ಯಾಪ್ಯವಾಗಿದೆ. ಇದರಲ್ಲಿ ವಿಶ್ವಚೇತನ ಶಕ್ತಿಯು ವ್ಯಾಪಿಸಿಕೊಂಡಿದೆ. ಅದು ವ್ಯಾಪಕ. ಆದ್ದರಿಂದ  ಕಣ್ಣಿಗೆ ಕಾಣುವ ಈ ಜಡವಸ್ತು ಮತ್ತು ಇದರಲ್ಲಿ ವ್ಯಾಪಿಸಿರುವ ವಿಶ್ವಚೇತನಶಕ್ತಿ ಎರಡೂ ಒಂದೇ ಅಲ್ಲ. ಎರಡೂ ಬೇರೆ ಬೇರೆಯೇ ಆಗಿದೆ. ಈ ಕಣ್ಣಿಗೆ ಕಾಣುತ್ತಿರುವ ಜಡವಸ್ತುವಿಗೆ ಇತಿಮಿತಿ ಇದೆ. ಆದರೆ ಇದರಲ್ಲಿ ವ್ಯಾಪಿಸಿರುವ ಆ ವಿಶ್ವಚೇತನ ಶಕ್ತಿಗೆ ಇತಿಮಿತಿಯೇ ಇಲ್ಲ. ಅದು ಇದರಲ್ಲೂ ಇದೆ,ಇದರ ಹೊರಗಿರುವ ಬೇರೆ ವಸ್ತುವಿನಲ್ಲೂ ಇದೆ. ಕಾರಣ ಈ ವಿಶ್ವಚೇತನ ಭಗವಚ್ಚಕ್ತಿಯು ಸರ್ವವ್ಯಾಪಕ.ಅಂದರೆ ಈ ಸರ್ವವ್ಯಾಪಕ ಶಕ್ತಿಯು ಕೇವಲ ಈ ವಸ್ತುವಿಗೆ  ಸೀಮಿತವಲ್ಲ. ಇದರಲ್ಲೂ ಇದೆ. ಬೇರೆಯದರಲ್ಲೂ ಇದೆ. ಎಲ್ಲೆಲ್ಲೂ ಇದೆ. ಅದಿಲ್ಲದ ಸ್ಥಳವೇ ಇಲ್ಲ. ಭಗವಚ್ಚಕ್ತಿಗೆ ಇತಿಮಿತಿಯೇ ಇಲ್ಲ. ಆದರೆ ಭೌತಿಕವಾದ ಈ ಜಡವಸ್ತುವಿಗೆ ಇತಿಮಿತಿ ಇದೆ.ಭೌತಿಕ ಜಗತ್ತನ್ನು ವ್ಯಾಪಿಸಿಕೊಂಡಿ ರುವ ವಿಶ್ವಚೇತನ ಶಕ್ತಿಗೆ ಯಾವ ಮಿತಿಯೂ ಇಲ್ಲ.ನಾವು ಕೇವಲ ಒಂದು ವಸ್ತುವಿನಲ್ಲಿ ಮಾತ್ರವೇ ವಿಶ್ವಚೇತನ ಶಕ್ತಿಯನ್ನು ನೋಡುವುದಾದರೆ ಅದು ನನ್ನ ತಪ್ಪು ಗ್ರಹಿಕೆಯಷ್ಟೆ. ಕಾರಣ ಆ ವಿಶ್ವಚೇತನ ಭಗವಚ್ಚಕ್ತಿಯು ಆ ವಸ್ತುವಿನಾಚೆಗೂ ವ್ಯಾಪಿಸಿದೆ. ಅಂದರೆ ಪ್ರತಿಯೊಂದು    ಅಣುಅಣುವಿನಲ್ಲೂ ಈ ಭಗವ್ಚ್ಚಕ್ತಿಯನ್ನು ನೋಡಬಹುದು. ಈ ಮಂತ್ರದ ಆಧಾರದ ಮೇಲೆ ಚಿಂತನೆಯನ್ನು ಮುಂದಿನವಾರ ಮುಂದುವರೆಸೋಣ.
[ ಈ ಉಪನ್ಯಾಸವನ್ನು ಕೇಳಿದ ನಂತರ ನನ್ನ ಮನದಲ್ಲಿ ಮೂಡಿದ ಭಾವನೆಗಳಿಗೆ ಅಕ್ಷರ ಕೊಟ್ಟಾಗ ಮೂಡಿಬಂದ ಕವನ ಇಲ್ಲಿದೆ]

ನೀನಿಲ್ಲೆ ಇರುವಾಗ ಎಲ್ಲಿ ಹೋಗಲಿ ನಾನು
ಎಲ್ಲಿಹುಡುಕಲಿ ನಾನು ಏನ ಹುಡುಕಲಿ ನಾನು||

ಮನೆಯಲ್ಲೇ ನೀನಿರುವೆ, ಮನದಲ್ಲೇ ತುಂಬಿರುವೆ
ನೀನಿಲ್ಲೆ ಇರುವಾಗ ಎಲ್ಲಿ ಹೋಗಲಿ ನಾನು||

ನಾನಿಡುವ ಅಡಿಅಡಿಯು ನಿನ್ನದೇ ನಡೆನಡೆಯು
ಸತ್ಯಪಥದಾ ನಡೆಯು ಮುಕ್ತಿಮಾರ್ಗಕೆ ಅಡಿಯು||

ಸಂಸಾರ ಸಾಗರದಿ ಸಿಲುಕಿ ಬಳಲಿಹೆ ನಾನು
ಸಾಗರವ ದಾಟಿಸುವ ಅಂಬಿಗನು ನೀನು||

ನಿನ್ನ ನಂಬಿಹೆ ನಾನು ಎನ್ನ ಬಿಡದಿರು ನೀನು
ಮೋಹಪಾಶದ ಬಲೆಯ ತುಂಡಿರಿಸು ನೀನು||

No comments:

Post a Comment