Pages

Wednesday, March 5, 2014

ಜೀವನ ವೇದ - 5


ಸದಾ ಮಿತ್ರರಾಗಿ ಬಾಳೋಣ            
ನಾವು ಸಾಮಾನ್ಯವಾಗಿ ಹೇಳುವ ಒಂದು ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ

ಓಂ ಸಹ ನಾವವತು ಸಹ ನೌ ಭುನಕ್ತು
ಸಹ ವೀರ್ಯಂ ಕರವಾವಹೈ |
ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ||
ಓಂ ಶಾಂತಿ: ಶಾಂತಿ: ಶಾಂತಿ: ||

ಅರ್ಥ :
ಸಹನಾ ವವತು = ಎಲ್ಲರೂ ಪರಸ್ಪರ ಒಬ್ಬರು ಇನ್ನೊಬ್ಬರ ರಕ್ಷಣೆಯನ್ನು  ಮಾಡೋಣ
ಸಹ ನೌ ಭುನಕ್ತು = ಎಲ್ಲರೂ ಪರಮ ಪ್ರೀತಿಯಿಂದ ಆನಂದವನ್ನು ಅನುಭವಿಸೋಣ
ಸಹ ವೀರ್ಯಂ ಕರವಾವಹೈ = ನಾವೆಲ್ಲರೂ ಪುರುಷಾರ್ಥದಿಂದ ಎಲ್ಲರ ಸಾಮರ್ಥ್ಯವನ್ನು ವರ್ಧಿಸೋಣ
ತೇಜಸ್ವಿ ನೌ ಅಧೀತಮಸ್ತು = ನಮ್ಮೆಲ್ಲರ ತೇಜಸ್ಸು ವರ್ಧಿಸಲಿ
ಮಾ ವಿದ್ವಿಷಾವಹೈ = ನಾವೆಲ್ಲರೂ ಪರಸ್ಪರ ವಿರೋಧವನ್ನು ಎಂದಿಗೂ ಮಾಡದಂತೆ,
ಮಿತ್ರರಾಗಿ ಸದಾ ಇರುವಂತೆ ಮಾಡು

ಭಾವಾರ್ಥ:

ನಾವೆಲ್ಲರೂ ಪರಸ್ಪರ ರಕ್ಷಣೆ ಮಾಡಿಕೊಳ್ಳೋಣ. ಎಲ್ಲರೂ ಪರಸ್ಪರ ಪ್ರೀತಿಯಿಂದ ಆನಂದವನ್ನು ಅನುಭವಿಸುವಂತಾಗಲಿ. ನಮ್ಮೆಲ್ಲರ ತೇಜಸ್ಸು ವರ್ಧಿಸಲಿ. ನಾವೆಲ್ಲರೂ ಪರಸ್ಪರ ವಿರೋಧವನ್ನು ಎಂದಿಗೂ ಮಾಡದಂತೆ, ಮಿತ್ರರಾಗಿ ಸದಾ ಇರುವಂತಾಗಲಿ.

ಈ ಮಂತ್ರದ ಅರ್ಥವು ಎಷ್ಟು ಸೊಗಸಾಗಿದೆ! ಭಗವಂತಾ, ನನ್ನನ್ನು ಕಾಪಾಡು ಎಂದು ಕೇಳಲಿಲ್ಲ, ಬದಲಿಗೆ ನಮ್ಮನ್ನು ಪರಸ್ಪರ ರಕ್ಷಣೆ ಮಾಡಿಕೊಳ್ಳೋಣವೆಂಬ ಸಂಕಲ್ಪ.ಇಲ್ಲಿ ಸ್ವಾರ್ಥದ ಸುಳಿವೂ ಇಲ್ಲ. ಎಲ್ಲರೂ ಒಟ್ಟಿಗೆ ಆನಂದವನ್ನು ಅನುಭವಿಸೋಣ. ನಮ್ಮೆಲ್ಲರ ತೇಜಸ್ಸು ವರ್ಧಿಸಲಿ. ಅಬ್ಭಾ! ಪ್ರಾರ್ಥನೆಯಲ್ಲಿ ಎಂತಹ ವಿಶಾಲ ಮನೋಭಾವ! ನನ್ನೊಬ್ಬನ ತೇಜಸ್ಸನ್ನು ವರ್ಧಿಸೆಂದು ಕೇಳ  ಲಿಲ್ಲ, ಬದಲಿಗೆ ನಮ್ಮೆಲ್ಲರ ತೇಜಸ್ಸು ವರ್ಧಿಸಲಿ!  ನಮ್ಮ ಮಧ್ಯೆ ವಿರೋಧವು ಎಂದಿಗೂ ಬಾರದಿರಲಿ!ನಾವೆಲ್ಲಾ ಸದಾ ಮಿತ್ರರಾಗಿ ಇರುವಂತೆ ಮಾಡು. ಒಂದೊಂದು ಮಾತೂ ಅದ್ಭುತ!

ಈ ಮಂತ್ರಕ್ಕೂ ಭೋಜನಕ್ಕೂ ಏನೂ ಸಂಬಂಧವಿಲ್ಲ. ಆದರೂ ಊಟಮಾಡುವಾಗ ಹೇಳುವ ಪದ್ದತಿ ಬೆಳೆದು ಬಂದಿದೆ. ತಪ್ಪೇನಿಲ್ಲ. ಊಟದ ಸಮಯದಲ್ಲಿ ಶಾಂತವಾಗಿ ಕುಳಿತಿರುತ್ತಾರೆ, ಆ ಸಮಯದಲ್ಲಿ ಈ ಮಂತ್ರವನ್ನು ಹೇಳುವುದರಿಂದ ಜನರಿಗೆ ಒಳ್ಳೆಯ ಸಂದೇಶ ಕೊಟ್ಟಂತಾಗುತ್ತದೆ ಎಂದು ರೂಢಿಗೆ ಬಂದಿರಬಹುದು. ಆದರೆ ಎಷ್ಟುಜನ ಈ ಮಂತ್ರದ ಅರ್ಥವನ್ನು ತಿಳಿದು ಹೇಳುತ್ತಾರೆ?
ಈ ಮಂತ್ರದ ಅರ್ಥವನ್ನು ತಿಳಿದು ಹೇಳಿದ್ದೇ ಆದರೆ ನಾವು ಅದರಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳುವುದು ಕಷ್ಟವೇನಲ್ಲ. ಅರ್ಥವನ್ನು ತಿಳಿದು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿದಾಗ ಮಂತ್ರವು ಸಾರ್ಥಕವಾಗುತ್ತದೆ.

ಅನ್ನದಾತನನ್ನು ರಕ್ಷಿಸು
ಭೋಜನ ಸಮಯಕ್ಕೆಂದೇ ನಮ್ಮ ಋಷಿಮುನಿಗಳು ಮಾಡಿರುವ ಯಜುರ್ವೇದದ ಮಂತ್ರ ಒಂದಿದೆ. ಆ ಮಂತ್ರದ ಬಗ್ಗೆಯೂ ತಿಳಿಯೋಣ.

ಅನ್ನಪತೇನ್ನಸ್ಯ ನೋ ದೇಹ್ಯನಮೀವಸ್ಯ ಶುಷ್ಮಿಣ: |
ಪ್ರಪ್ರ ದಾತಾರಂ ತಾರಿಷಊರ್ಜಂ ನೋ ಧೇಹಿ ದ್ವಿಪದೇ ಚತುಶ್ಪದೇ ||
[ಯಜು-ಅಧ್ಯಾಯ-೧೧ ಮಂತ್ರ-೮೩]

 ಅರ್ಥ:
ಅನ್ನಪತೇ = ಅನ್ನಗಳ ರಕ್ಷಕನಾದ ಯಜಮಾನನೇ
ಅನ್ನಸ್ಯ = ಅನ್ನವನ್ನು
ನ: = ನಮಗೆ
ದೇಹಿ = ಕೊಡು
ಅನಮೀವಸ್ಯ = ರೋಗವನ್ನುಂಟುಮಾಡದಿರುವುದೂ, ಸುಖಕರವೂ ಆದ
ಶುಷ್ಮಿಣ: = ಹೆಚ್ಚು ಬಲಕಾರವೂ ಆದ ಅನ್ನವನ್ನು [ನಮಗೆ ಕೊಡು]
ಪ್ರ ಪ್ರ = ಶ್ರೇಷ್ಠವಾದ [ಅನ್ನವನ್ನು ನಮಗೆ ಕೊಡು]
ದಾತಾರಮ್ = ಅನ್ನದಾತನನ್ನು
ತಾರಿಷ: = ಸಂರಕ್ಷಿಸು
ಊರ್ಜಮ್ = ಪರಾಕ್ರಮವನ್ನು
ನ: = ನಮಗೆ
ಧೇಹಿ = ಉಂಟುಮಾಡಿಕೊಡು
ದ್ವಿಪದೇ = ಎರಡು ಕಾಲಿನ ಪ್ರಾಣಿಗಳಿಗೆ   [ಮನುಷ್ಯರಿಗೆ ಬಲವನ್ನು ಉಂಟುಮಾಡು]
ದ್ವಿಪದೇ = ನಾಲ್ಕು ಕಾಲಿನ ಪ್ರಾಣಿಗಳಿಗೆ [ಬಲವನ್ನು ಉಂಟುಮಾಡು]
ಭಾವಾರ್ಥ:
ಹೇ ಭಗವಂತಾ, ಹೆಚ್ಚು ಬಲಕಾರವೂ, ಸುಖಕರವೂ, ರೋಗವನ್ನುಂಟುಮಾಡದಿರುವ ಶ್ರೇಷ್ಠವಾದ ಅನ್ನವನ್ನು ನಮಗೆ ನೀಡು. ಪ್ರಾಣಿಗಳಿಗೂ, ಮನುಷ್ಯರಿಗೂ ಶ್ರೇಷ್ಠವಾದ ಹಾಗೂ ಪರಾಕ್ರಮವನ್ನು ಉಂಟುಮಾಡುವ  ಅನ್ನವನ್ನು[ಆಹಾರವನ್ನು] ನೀಡುತ್ತಿರುವ ಅನ್ನದಾತನನ್ನು ಸಂರಕ್ಷಿಸು.
ನಿಜವಾಗಿ ನಾವು ಊಟಮಾಡುವಾಗ ನಮ್ಮ ಮನಸ್ಸಿನಲ್ಲಿ ಉದ್ಭವಿಸಬೇಕಾದ ವಿಚಾರಗಳು ಏನೆಂಬುದನ್ನು ಈ ಮಂತ್ರವು ಎಷ್ಟು ಸೊಗಸಾಗಿ ವರ್ಣಿಸಿದೆ ಎಂದರೆ ,ಈ ಮಂತ್ರಗಳ ಶಬ್ಧದಲ್ಲಿ     ಅಡಗಿರುವ  ಅಂತರಾರ್ಥವನ್ನು ಗಮನಿಸ ಬೇಕು. ನಮಗೆ ಎಂತಹ ಆಹಾರಬೇಕೆಂದು ಭಗವಂತನಲ್ಲಿ ನಮ್ಮ ಪ್ರಾರ್ಥನೆ ಇದೆ? ಹೆಚ್ಚು ಬಲಕಾರವೂ, ಸುಖಕರವೂ, ರೋಗವನ್ನುಂಟುಮಾಡದಿರುವ ಶ್ರೇಷ್ಠವಾದ ಅನ್ನವನ್ನು ಕೊಡು, ಎಂಬುದು ಭಗವಂತನಲ್ಲಿ ನಮ್ಮ ಪ್ರಾರ್ಥನೆ. ಭಗವಂತನು ನಮಗೆ ಪರಿಶುದ್ಧವಾದ, ಪುಷ್ಠಿದಾಯಕವಾದ ಆಹಾರವನ್ನೇ ಕೊಟ್ಟಿದ್ದಾನೆ. ರೈತ ಬೆಳೆದಾಗ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಆನಂತರ ನಾವೇನು ಮಾಡುತ್ತೇವೆ? ಅನ್ನವು ಬೆಳ್ಳಗಿರಬೇಕೆಂದು ಹೆಚ್ಚು ಪಾಲೀಶ್ ಮಾಡಿದ ಅಕ್ಕಿಯಲ್ಲಿ ಅನ್ನ ಮಾಡುತ್ತೇವೆ. ಅಕ್ಕಿಯ ಪೌಷ್ಠಿಕಾಂಶವೆಲ್ಲವೂ ಪಾಲೀಶ್ ಮಾಡಿದಾಗ ಹೊಟ್ಟಿನ ಪಾಲಾಗಿರುತ್ತದೆ [ ಅದನ್ನು ಹಸುಗಳಿಗೆ ಆಹಾರವಾಗಿ ಬಳಸಿದರೂ ಪರವಾಗಿಲ್ಲವೆನ್ನಿ] ಇನ್ನು ಅಕ್ಕಿಯಲ್ಲಿ ಉಳಿದದ್ದೇನು? ಅನ್ನ ಮಾತ್ರ ಬೆಳ್ಳಗಿರುತ್ತದೆ ಹೊರತೂ ಅದರಲ್ಲಿ ಪೌಷ್ಟಿಕಾಂಶವಿರುವುದಿಲ್ಲ.
ಕುಕ್ಕರ್ ನಲ್ಲಿ ಬೇಯಿಸಿದ ಅಡುಗೆಯ ಬಗ್ಗೆ ದಿ|| ರಾಜೀವ್ ದೀಕ್ಷಿತ ಅವರ ಮಾತುಗಳನ್ನು ಕೇಳಿ.   ಒಂದು ಮಗುವಿನ ಜನ್ಮ ವಾಗಲು ತಾಯಿಯ ಗರ್ಭದಲ್ಲಿ ಒಂಬತ್ತು ತಿಂಗಳು ಇರಬೇಕಲ್ಲವೇ? ಒಂದು ಬೆಳೆ ಸರಿಯಾಗಿ ಬರಲು ಅದಕ್ಕೆ ಅಗತ್ಯವಾದ ಮೂರ್ನಾಲ್ಕು ತಿಂಗಳು ಬೇಕಲ್ಲವೇ? ಹಾಗೆಯೇ ಒಂದು ಉತ್ತಮವಾದ ಕಾಳು ಬೇಳೆ,ಅಕ್ಕಿ ಬೇಯಲು ಅದಕ್ಕೆ ನಿರ್ಧಿಷ್ಠ ಸಮಯ, ಹಿತವಾದ ಶಾಖ, ಗಾಳಿ, ಬೆಳಕು, ಎಲ್ಲವೂ ಇದ್ದರೆ ಬೇಯಿಸಿದ ಆಹಾರವು ಆರೋಗ್ಯದಾಯಕವಾಗಿರುತ್ತದೆ. ಹಾಗಲ್ಲದೆ ಕುಕ್ಕರ್ ನಲ್ಲಿ ಬೇಯಿಸಿದ ತರಕಾರಿ, ಬೇಳೆ ಕಾಳುಗಳು, ಅಕ್ಕಿ ಕೂಡ ಸಹಜವಾಗಿ ಬೇಯದೆ ಅತ್ಯಂತ ಕಡಿಮೆ ಸಮಯದಲ್ಲಿ ಬೆಂದಂತಾಗಿ ಗಾಳಿ, ಬೆಳಕು ಇಲ್ಲದೆ  ಅದರ ಪೌಷ್ಟಿಕಾಂಶವೆಲ್ಲವೂ ನಾಶವಾಗಿರುತ್ತದೆ. ನಾವು ನಿತ್ಯವೂ ಇದೇ ಆಹಾರವನ್ನು ಸೇವಿಸುತ್ತೇವೆ,ಅಲ್ಲವೇ?
 ಹೀಗಿರುವಾಗ ಭಗವಂತನು ಕರುಣಿಸಿದ ಪುಷ್ಠಿದಾಯಕ ಆಹಾರವನ್ನು ಹಾಳುಗೆಡವಿದವರು ನಾವೇ ಅಲ್ಲವೇ? ಇನ್ನು ನಾವು ತಿನ್ನುವ ತರಕಾರಿ, ಹಣ್ಣು ಹಂಪಲು, ಎಲ್ಲವೂ ವಿಷಯುಕ್ತ. ಮನುಷ್ಯನ ದುರಾಸೆಯ ಫಲವಾಗಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದಲ್ಲದೆ, ಕ್ರಿಮಿಗಳು ಬಾರದಂತೆ ಕ್ರಿಮಿನಾಶಕಗಳ ಸಿಂಪಡಿಸುವುದರಿಂದ ಹಣ್ಣು ತರಕಾರಿಗಳ ಮೂಲಕ ನಾವು ವಿಷವನ್ನೇ ಸೇವಿಸುತ್ತೇವೆ.

 ಇಂದಿನ ಪೀಳಿಗೆಗೆ   ನಾಡ  ಹಸುವಿನ ಹಾಲಿನ ರುಚಿಯೇ ಗೊತ್ತಿಲ್ಲದಿರಬಹುದು. ನಮ್ಮ ದೇಶದಲ್ಲಿ ಗೋವನ್ನು ಪ್ರತ್ಯಕ್ಷ ದೇವತೆಯಂತೆ ಕಾಣುತ್ತಿದ್ದೆವು. ಕಾರಣವೂ ಇತ್ತು. ಮನೆಮಂದಿಗೆಲ್ಲಾ ಹಾಲು, ಮೊಸರು, ಬೆಣ್ಣೆ , ತುಪ್ಪವು ಹಸುವಿನಿಂದ ದೊರಕುತ್ತಿದ್ದರೆ ಎತ್ತು ಕೃಷಿಗೆ ಸಹಕಾರಿ ಯಾಗಿತ್ತು. ದನಗಳ ಸಗಣಿಯೇ ಬೆಳೆಗೆ ಗೊಬ್ಬರವಾಗಿತ್ತು. ಇದೆಲ್ಲಾ ಆ ಭಗವಂತನ ಕೃಪೆಯಲ್ಲವೇ? ಆದರೆ ನಮ್ಮ ದುರಾಸೆಯ ಪರಿಣಾಮವಾಗಿ ನಾಡಹಸುಗಳ ಸಂತತಿ ಕ್ಷೀಣಿಸಲು ನಾವೇ ಕಾರಣರಾದೆವು.ಅಲ್ಲವೇ?

ಮಂತ್ರದಲ್ಲಿ ಹೇಳಿರುವ ಮತ್ತೊಂದು ಅಂಶವೆಂದರೆ ಹೇ ಭಗವಂತಾ, ನಮಗೆ ಆರೋಗ್ಯಯುತವಾದ ಆಹಾರವನ್ನು ನೀಡಿರುವ ಅನ್ನದಾತನನ್ನು ಕಾಪಾಡು. ಅನ್ನದಾತನೆಂದರೆ ಯಾರು? ಭಗವಂತನೇ? ಅವನನ್ನೇ ಅವನು ಕಾಪಾಡಿಕೊಳ್ಳಬೇಕೇ? ಇಲ್ಲ, ಪ್ರತ್ಯಕ್ಷವಾಗಿ ನಮಗೆ ಅನ್ನವನ್ನು ನೀಡುವ ನಿಜವಾದ ಅನ್ನದಾತನೆಂದರೆ ರೈತ. ಆ ರೈತನ ಸ್ಥಿತಿ ಇಂದು ಹೇಗಾಗಿದೆ, ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ರೈತ ಬೆಳೆವ ಬೆಳೆಗೆ ಸೂಕ್ತಬೆಲೆ ಸಿಗದೆ ಆತ್ಮಹತ್ಯೆ    ಮಾಡಿಕೊಳ್ಳುವ ಪರಿಸ್ಥಿತಿ! ಆದರೆ ನಮ್ಮ ಋಷಿಮುನಿಗಳ ಚಿಂತನೆ ಎಂದರೆ ನಮಗೆ ಅನ್ನ ಕೊಡುವ ರೈತನು ಸಂತೋಷವಾಗಿರಬೇಕು. ನಮ್ಮ ಋಷಿಮುನಿಗಳ ಚಿಂತನೆ ನಮ್ಮ ಜನರಿಗೆ ನಮ್ಮನ್ನು ಆಳುವವರಿಗೆ ಅರ್ಥವಾಗಬೇಕಲ್ಲವೇ?

1 comment:

  1. ಧನ್ಯವಾದಗಳು ಶ್ರೀಧರ್ ಜೀ,
    ಈ ವಾರ ಬಹಳಷ್ಟು ಉಪಯುಕ್ತ ಮತ್ತು ಅಗತ್ಯವಾದ ಮಾಹಿತಿಗಳನ್ನು ನಮಗಾಗಿ ನೀಡಿದ್ದೀರಿ.
    ಓಂ ಸಹ ನಾವವತು ಸಹ ನೌ ಭುನಕ್ತು
    ಸಹ ವೀರ್ಯಂ ಕರವಾವಹೈ |
    ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ||
    ಓಂ ಶಾಂತಿ: ಶಾಂತಿ: ಶಾಂತಿ: ||
    ಈ ಮಂತ್ರ ನಿಜವಾಗಿಯೂ ಊಟಕ್ಕೆ ಸಂಬಂಧ ಪಟ್ಟಿದ್ದು ಅಂದುಕೊಂಡಿದ್ದೆ. ಕೆಲದಿನಗಳ ಹಿಂದೆ ನನ್ನ ಮಿತ್ರನೊಬ್ಬ ಹೀಗೆ ಕೇಳಿದ- ನಮ್ಮ ಶಾಲೆಯಲ್ಲಿ ಊಟದ ಸಮಯದಲ್ಲಿ ಈ ಮಂತ್ರವನ್ನು ಹೇಳುತ್ತಾರೆ, ನಿಮ್ಮ ವೇದದ ಪ್ರಕಾರ ಅದರ ಅರ್ಥವೇನು?. ನಾನು ಪೇಚಿಗೆ ಸಿಲುಕಿದ್ದೆ. ಅರ್ಥಕ್ಕಾಗಿ ಹುಡುಕುತ್ತಿರುವಾಗಲೇ ನನಗೆ ಅಗತ್ಯವೆಂಬಂತೆ ನೀವು ಪೋಸ್ಟ್ ಮಾಡಿದ್ದೀರಿ. ಅದರ ಅರ್ಥ ನೋಡಿ ಆಶ್ಚರ್ಯವಾಗಿದೆ. ಇಷ್ಟೊಂದು ಅದ್ಭುತ ಭಾವಾರ್ಥವಿರುವ ಮಂತ್ರವನ್ನು ನಾವು ಸುಮ್ಮನೆ ಕಂಠಪಾಠ ಮಾಡಿ ಹೇಳುತ್ತಿದ್ದೆವಲ್ಲಾ ಎಂಬ ಬೇಸರ. ಈ ರೀತಿಯ ಇನ್ನೂ ಹೆಚ್ಚಿನ ಮಂತ್ರಗಳನ್ನು ಅದರ ಭಾವಾರ್ಥದೊಂದಿಗೆ ನಮಗಾಗಿ ತಿಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ.
    ವೇದ ಭಾಷೆಯು ಅರ್ಥವಾಗದ ಕಾರಣದಿಂದಾಗಿ ವೇದ ಮಂತ್ರಗಳು ಪುರೋಹಿತರಿಗೆ ಮಾತ್ರ ಸೀಮಿತವಾಗಿದೆ. ಹೀಗೆ ಮುಂದುವರೆದರೆ ನಾವು ನಮಗೆ ಅತ್ಯಗತ್ಯವಾದ ಜ್ಞಾನದಿಂದ ವಂಚಿತರಾಗಿ ಅಜ್ಞಾನಿಗಳಾಗಿಯೇ ಬದುಕಬೇಕಾಗುತ್ತದೇನೋ?.

    ReplyDelete