Pages

Sunday, June 29, 2014

ಯಶಸ್ಸಿನ ಪಥದಲ್ಲಿ ಸಾಗುತ್ತಿರುವ ವೇದಭಾರತಿ

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || 
ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
"ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ."
     ಹಾಸನದ ವೇದಭಾರತಿ ತನ್ನದೇ ಆದ ರೀತಿಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವೇದ ಅರ್ಥಾತ್ ಜ್ಞಾನ ಸಮಾಜದ ಎಲ್ಲ ಆಸಕ್ತರಿಗೂ ತಲುಪಲಿ ಎಂಬ ಸದಾಶಯದಿಂದ 'ಎಲ್ಲರಿಗಾಗಿ ವೇದ' ಎಂಬ ಘೋಷ ವಾಕ್ಯದೊಂದಿಗೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆಯನ್ನು ಪ್ರಾರಂಭದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ ಪೋಷಿಸಿ ಬೆಳೆಸಿದವರು ಹರಿಹರಪುರ ಶ್ರೀಧರ್ ಮತ್ತು ಕವಿನಾಗರಾಜರು. ನಂತರದಲ್ಲಿ ಹಲವಾರು ಸಮಾನಮನಸ್ಕರ ಬೆಂಬಲ, ಪ್ರೋತ್ಸಾಹಗಳೂ ಸಿಕ್ಕಿ ಇಂದು ಒಂದು ಗುರುತಿಸಲ್ಪಡುವ ಸಂಘಟನೆಯಾಗಿದೆ. ಶ್ರೀ ಸುಧಾಕರ ಶರ್ಮರವರು ವೇದದ ಬೆಳಕಿನಲ್ಲಿ ನೀಡಿದ ಹಲವು ಉಪನ್ಯಾಸಗಳಿಂದ ಪ್ರಭಾವಿತರಾಗಿ 'ವೇದಸುಧೆ' ಹೆಸರಿನಲ್ಲಿ ಒಂದು ಅಂತರ್ಜಾಲ ಬ್ಲಾಗ್ ಅನ್ನು ಅಕ್ಟೋಬರ್, ೨೦೧೦ರಲ್ಲಿ ಪ್ರಾರಂಭಿಸಲಾಯಿತು. ಈ ಬ್ಲಾಗ್ ಎಷ್ಟು ಜನಪ್ರಿಯವಾತೆಂದರೆ ಇದರಲ್ಲಿ ವೇದದ ಹಿನ್ನೆಲೆಯಲ್ಲಿನ ಹಲವಾರು ಬರಹಗಳಿಗೆ, ಚರ್ಚೆಗಳಿಗೆ ಸಿಕ್ಕ ಪ್ರತಿಕ್ರಿಯೆಗಳು ಪ್ರೋತ್ಸಾಹದಾಯಕವಾಗಿದ್ದವು. ಆರೋಗ್ಯಕರ ಚರ್ಚೆಗಳು ಜ್ಞಾನದ ಹರವನ್ನು ಹೆಚ್ಚಿಸಲು ಸಹಕಾರಿಯಾದವು. ಇದುವರೆಗೆ ೧೨೨೦ ಬರಹಗಳು ಈ ಬ್ಲಾಗಿನಲ್ಲಿ ಪ್ರಕಟವಾಗಿ ಇದುವರೆವಿಗೆ ಸುಮಾರು ೧,೨೫,೦೦೦ ಪುಟವೀಕ್ಷಣೆಗಳಾಗಿವೆ. ಬ್ಲಾಗ್ ಪ್ರಾರಂಭವಾದ ನಂತರದಲ್ಲಿ ಒಂದು ವರ್ಷ ಪೂರ್ಣವಾದ ಸಂದರ್ಭದಲ್ಲಿ ವಾರ್ಷಿಕೋತ್ಸವ ಮಾಡಿ ಆ ಸಂದರ್ಭದಲ್ಲಿ ವಿದ್ವಾಂಸರುಗಳಿಂದ ವಿಚಾರಗೋಷ್ಠಿ , ಅಗ್ನಿಹೋತ್ರದ ಪ್ರಾತ್ಯಕ್ಷಿಕೆ, ವೇದದ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬ ಉಪನ್ಯಾಸ ಏರ್ಪಡಿಸಲಾಗಿತ್ತು. ೨೦೧೧ರಲ್ಲಿ ವೇದಸುಧೆ ಹೆಸರಿನಲ್ಲಿ ಒಂದು ವೆಬ್ ಸೈಟ್ ಅನ್ನು ಪ್ರಾರಂಭಿಸಲಾಯಿತು. ಈ ವೆಬ್ ಸೈಟಿನಲ್ಲಿ ಅನೇಕ ಪ್ರಬುದ್ಧ ವೈಚಾರಿಕ ಬರಹಗಳು, ಮಾಹಿತಿಗಳು, ವಿಡಿಯೋ, ಆಡಿಯೋಗಳು ಸಾರ್ವಜನಿಕರ ಅವಗಾಹನೆಗೆ ಲಭ್ಯವಿದೆ. ಬ್ಲಾಗ್ ಮತ್ತು ವೆಬ್ ಸೈಟಿನ ವಿಳಾಸ: 

     ನಂತರದ ದಿನಗಳಲ್ಲಿ ಏರ್ಪಡಿಸಿದ್ದ ಶ್ರೀ ಸುಧಾಕರ ಶರ್ಮರಿಂದ ಒಂದು ವಾರದ ಕಾಲ ಉಪನ್ಯಾಸ ಮಾಲೆ, ಸಾರ್ವಜನಿಕರೊಡನೆ ಮುಕ್ತ ಸಂವಾದ ಜನಮನವನ್ನು ಸೆಳೆಯುವಲ್ಲಿ, ವೈಚಾರಿಕ ಚಿಂತನೆ ಉದ್ದೀಪಿಸುವಲ್ಲಿ ಯಶಸ್ವಿಯಾದವು. ಕಳೆದ ವರ್ಷ ಮೂರು ದಿನಗಳ 'ವೇದೋಕ್ತ ಜೀವನ ಶಿಬಿರ' ನಡೆಸಿದ್ದು ಆ ಶಿಬಿರದಲ್ಲಿ ಹಾಸನ ಜಿಲ್ಲೆಯ ೩೦ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ೪೦ ಶಿಬಿರಾರ್ಥಿಗಳು ಭಾಗವಹಿಸಿದ್ದರು. ದೂರದ ಪೂನಾದಿಂದಲೂ ಒಬ್ಬರು ಭಾಗವಹಿಸಿದ್ದರು. ಪ್ರತಿದಿನ ಸಾಯಂಕಾಲ ಸಾರ್ವಜನಿಕರಿಗೆ ಉಪನ್ಯಾಸ ಏರ್ಪಡಿಸಿತ್ತು. ಕೊನೆಯ ದಿನದಂದು ನಾಲ್ವರು ಮಹಿಳೆಯರೂ ಸೇರಿದಂತೆ ಏಳು ಜನರು ಉಪನಯನ ಸಂಸ್ಕಾರ ಪಡೆದು ಯಜ್ಞೋಪವೀತ ಧಾರಣೆ ಮಾಡಿಸಿಕೊಂಡಿದ್ದು ಉಲ್ಲೇಖನೀಯ. ಇದು ಟಿವಿಯ ವಿವಿಧ ಚಾನೆಲ್ಲುಗಳ ಮೂಲಕ ಬಿತ್ತರವಾಗಿ ಗಮನ ಸೆಳೆದಿತ್ತು. ಸ್ವಾಮಿ ಚಿದ್ರೂಪಾನಂದಜಿಯವರಿಂದ ಒಂದು ವಾರದ ಕಾಲ 'ಗೀತಾಜ್ಞಾನಯಜ್ಞ' ನಡೆಸಲಾಯಿತು. ಕಳೆದ ವರ್ಷದಿಂದ ಮಕ್ಕಳಲ್ಲೂ ವೇದಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಬಾಲಶಿಬಿರಗಳನ್ನು ನಡೆಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಈಗಲೂ ವೇದಮಂತ್ರಗಳನ್ನು ಹೇಳುತ್ತಿರುವುದು, ಕಲಿಕೆ ಮುಂದುವರೆಸುತ್ತಿರುವುದು ಮುದ ನೀಡುವ ಸಂಗತಿಯಾಗಿದೆ.
     ವೇದ ಎಂದರೆ ಕೇವಲ ಪೂಜಾ ಮಂತ್ರಪಾಠಗಳಲ್ಲ, ಒಂದು ವರ್ಗಕ್ಕೆ ಮೀಸಲಲ್ಲ. ಈ ಜ್ಞಾನ ಸಂಪತ್ತು ಸಮಸ್ತ ಮಾನವಕುಲದ ಆಸ್ತಿಯಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಲು ಅರ್ಹರು. ವೇದಗಳಲ್ಲಿ ಎಲ್ಲೂ ಅಸಮಾನತೆಯ ಸೋಂಕಿಲ್ಲ, ಬದಲಾಗಿ ಸಮಸ್ತ ಜೀವರಾಶಿಯ ಶ್ರೇಯೋಭಿವೃದ್ಧಿ ಬಯಸುವ ಸಂದೇಶಗಳಿವೆ. ವೇದಗಳನ್ನು ಪುರಾಣಗಳು ಮತ್ತು ಕಟ್ಟುಕಥೆಗಳೊಂದಿಗೆ ಸೇರಿಸಿ ಅಥವ ಸಮೀಕರಿಸಿ ವಿಶ್ಲೇಷಿಸುವುದು ವೇದಕ್ಕೆ ಬಗೆಯುವ ಅಪಚಾರವಾಗುತ್ತದೆ. ಕರುಣಾಮಯಿ ಪರಮಾತ್ಮ ಜೀವಜಗತ್ತಿನ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಇವನು ಆಸ್ತಿಕ, ನನ್ನನ್ನು ಹಾಡಿ ಹೊಗಳುತ್ತಾನೆ, ಪೂಜಿಸುತ್ತಾನೆ ಎಂದು ಅವನಿಗೆ ವಿಶೇಷ ಅನುಗ್ರಹ ಕೊಡುವುದಿಲ್ಲ. ಅವನು ನಾಸ್ತಿಕ, ನನ್ನನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದುಕೊಂಡು ಅವನಿಗೆ ಅನ್ನ, ನೀರು ಸಿಗದಂತೆ ಮಾಡುವುದೂ ಇಲ್ಲ. ಬಿಸಿಲು, ಮಳೆ, ಗಾಳಿ, ಬೆಂಕಿ, ಆಕಾಶಗಳೂ ಸಹ ಅನುಸರಿಸುವುದು ಪರಮಾತ್ಮನ ತಾರತಮ್ಯವಿಲ್ಲದ ಭಾವಗಳನ್ನೇ ಅಲ್ಲವೇ? ಹೀಗಿರುವಾಗ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಿ, ತಪ್ಪುಗಳ ವಿವೇಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ, ಪೂರ್ವಾಗ್ರಹಗಳನ್ನು ಬದಿಗಿಟ್ಟು ಚಿಂತನೆ ಮಾಡುವ ಮನೋಭಾವ ಮೂಡಿದರೆ ಅದು ನಿಜಕ್ಕೂ ಒಂದು ವೈಚಾರಿಕ ಕ್ರಾಂತಿಯೆನಿಸುತ್ತದೆ.  ಈ ನಿಟ್ಟಿನಲ್ಲಿ ಜನಜಾಗೃತಿ ಮಾಡಲು ವೇದಭಾರತಿ ಎರಡು ವರ್ಷಗಳ ಹಿಂದೆ ಯಾವುದೇ ಜಾತಿ, ಮತ, ಪಂಗಡ, ಲಿಂಗ, ವಯಸ್ಸಿನ ತಾರತಮ್ಯವಿಲ್ಲದೆ ಆಸಕ್ತ ಎಲ್ಲರಿಗೂ ವೇದಮಂತ್ರಗಳನ್ನು ಅಭ್ಯಸಿಸುವ ಅವಕಾಶ ಕಲ್ಪಿಸಿ ಸಾಪ್ತಾಹಿಕ ವೇದಾಭ್ಯಾಸ ತರಗತಿ ಪ್ರಾರಂಭಿಸಿತು. ಒಂದೆರಡು ತಿಂಗಳ ನಂತರ ಇದು ಪ್ರತಿನಿತ್ಯದ ತರಗತಿಯಾಗಿ ಮಾರ್ಪಟ್ಟಿದೆ.  ಕಳೆದ ಏಳೆಂಟು ತಿಂಗಳುಗಳಿಂದ ನಿತ್ಯ ಅಗ್ನಿಹೋತ್ರವನ್ನು ಸಾಮೂಹಿಕವಾಗಿ ಮಾಡಲಾಗುತ್ತಿದೆ. ಅಗ್ನಿಹೋತ್ರದ ಮಹತ್ವ, ಮಂತ್ರಗಳ ಅರ್ಥವನ್ನು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಮೈಸೂರು, ಬೆಂಗಳೂರು, ಹಂಪಾಪುರ, ಅರಸಿಕೆರೆ ಮುಂತಾದೆಡೆಯಲ್ಲೂ ಈ ಪರಿಚಯ ಕಾರ್ಯ, ಜಾಗೃತಿ ಮೂಡಿಸುವ ಕೆಲಸಗಳಾಗಿವೆ. 
     ಪ್ರತಿನಿತ್ಯ ಹಾಸನದ ಹೊಯ್ಸಳನಗರದ 'ಈಶಾವಾಸ್ಯಮ್'ನಲ್ಲಿ ಸಾಯಂಕಾಲ ೬ರಿಂದ೭ರವರೆಗೆ ನಡೆಯುವ ವೇದಾಭ್ಯಾಸ ಸತ್ಸಂಗದ ಸ್ವರೂಪ ಪಡೆದುಕೊಂಡಿದೆ. ಪರಮಾತ್ಮಸ್ತುತಿ, ಅಗ್ನಿಹೋತ್ರ, ನಂತರ ವೇದಮಂತ್ರಗಳ ಸಾರವೆಂಬಂತಿರುವ ಎರಡು ಭಜನೆಗಳು, ವೇದಮಂತ್ರಗಳ ಅಭ್ಯಾಸ ನಡೆಯುತ್ತದೆ. ವೇದಮಂತ್ರಗಳ ಅರ್ಥ ತಿಳಿಸುವುದರೊಂದಿಗೆ ಆರೋಗ್ಯಕರ ಚರ್ಚೆಗೂ ಅವಕಾಶವಿರುತ್ತದೆ. ಆಗಾಗ್ಯೆ ಸಾಧು-ಸಂತರ, ಜ್ಞಾನವೃದ್ಧರ ಉಪನ್ಯಾಸಗಳನ್ನೂ ಏರ್ಪಡಿಸಲಾಗುತ್ತದೆ. ಪ್ರತಿನಿತ್ಯ ಸುಮಾರು ೨೦ರಿಂದ೩೦ ಆಸಕ್ತರು ಪಾಲುಗೊಳ್ಳುತ್ತಿದ್ದಾರೆ. ಆಸಕ್ತಿ ಇರುವ ಯಾರಿಗೇ ಆಗಲಿ, ಇಲ್ಲಿ ಮುಕ್ತ ಪ್ರವೇಶವಿದೆ. ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಕೇವಲ ಸ್ವಂತದ ಅಭಿವೃದ್ಧಿಗಾಗಿ ಬಯಸುವುದಲ್ಲ, ಸಮಾಜಮುಖಿಯಾಗಿ ನಮ್ಮ ನಡವಳಿಕೆಗಳು, ಮನೋಭಾವ ವೃದ್ಧಿಸಲಿ ಎಂಬ ಸದುದ್ದೇಶದ ಚಟುವಟಿಕೆಗಳನ್ನು ನಡೆಸುವುದು, ಸಜ್ಜನ ಶಕ್ತಿಯ ಜಾಗರಣೆಗೆ ತನ್ನದೇ ಆದ ರೀತಿಯಲ್ಲಿ ಮುಂದುವರೆಯುವುದು ವೇದಭಾರತಿಯ ಧ್ಯೇಯವಾಗಿದೆ. ವೇದದ ಈ ಕರೆಯನ್ನು ಸಾಕಾರಗೊಳಿಸುವತ್ತ ಸಜ್ಜನರು ಕೈಗೂಡಿಸಲಿ ಎಂದು ಆಶಿಸೋಣ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
"ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ."
-ಕ.ವೆಂ.ನಾಗರಾಜ್.

ಜನಮಿತ್ರದಲ್ಲಿ: ದಿ. 8.6.2014ರಂದು ಪ್ರಕಟಿತ.

ಜನಹಿತದಲ್ಲಿ 9.6.2014ರಂದು ಪ್ರಕಟಿತ:



Saturday, June 28, 2014

ಏಕಲ್ ವಿದ್ಯಾಲಯದ ಆಚಾರ್ಯರ ಅಭ್ಯಾಸ ವರ್ಗ

ಹಾಸನ ಜಿಲ್ಲೆಯ ಕೊಣನೂರು ಸಮೀಪ ಇರುವ ತರಗಳಲೆಯಲ್ಲಿ ನಡೆದ ಏಕಲ್ ವಿದ್ಯಾಲಯದ ಆಚಾರ್ಯರ ಅಭ್ಯಾಸ ವರ್ಗದಲ್ಲಿ ಹಾಸನ ವೇದಭಾರತಿಯ ಸದಸ್ಯರು ಪಾಲ್ಗೊಂಡು ಅಗ್ನಿಹೋತ್ರ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶ್ರೀ ಹರಿಹರಪುರಶ್ರೀಧರ್ ಅವರು ವೇದದ ಸರಳ ಪರಿಚಯಮಾಡಿಕೊಟ್ಟು  ವೇದವು ಎಲ್ಲರಿಗಾಗಿ  ಎಂದು ವಿವರಿಸಿದರು. ಅಗ್ನಿಹೋತ್ರದ ಅರ್ಥವನ್ನು ತಿಳಿದ ಆಚಾರ್ಯರುಗಳು ತಾವು ಅಗ್ನಿಹೋತ್ರ ಕಲಿಯುವ ಆಸಕ್ತಿ ವ್ಯಕ್ತಪಡಿಸಿದರು.ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಏಕಲ್ ವಿದ್ಯಾಲಯ ಚಟುವಟಿಕೆಗಳು ಪ್ರಶಂಸನೀಯವಾಗಿವೆ.












Tuesday, June 24, 2014

ಹಾಸನದ ಕ.ವಿ.ಪ್ರ.ನಿ.ನಿ ಅಧಿಕಾರಿಗಳು ಮತ್ತು ನೌಕರ ವೃಂದದಿಂದ ಗುರುವಂದನಾ ಕಾರ್ಯಕ್ರಮದಲ್ಲಿ ಅಗ್ನಿಹೋತ್ರ


ಹಾಸನದ ಕ.ವಿ.ಪ್ರ.ನಿ.ನಿ ಮತ್ತು ಸೆಸ್ಕ್ ಅಧಿಕಾರಿಗಳು ಮತ್ತು ನೌಕರರು ಕೆ.ಇ.ಬಿ.ಸೀತಾರಾಮ ಮಂದಿರದಲ್ಲಿ ಆದಿಚುಂಚನಗಿರಿ ಶ್ರೀ ಕ್ಷೇತ್ರದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸರಸ್ವತೀ ಸ್ವಾಮೀಜಿಯವರಿಗೆ ದಿನಾಂಕ ೨೪.೬.೨೦೧೪ ರಂದು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ನಡೆದು ಶ್ರೀಗಳು ಪೂರ್ಣಾಹುತಿಯನ್ನು ಸಮರ್ಪಿಸಿ ವೇದದ ಮಹತ್ವದ ಬಗ್ಗೆ ಉಪನ್ಯಾಸವನ್ನು ನೀಡಿದರು. ಸ್ವಾಮೀಜಿಯವರ ಉಪನ್ಯಾಸದ ವೀಡಿಯೋವನ್ನು ಸಧ್ಯದಲ್ಲೇ ಅಳವಡಿಸಲಾಗುವುದು.


Sunday, June 15, 2014

ಅಂಧ ಮಕ್ಕಳ ಶಾಲೆಯಲ್ಲಿ ಪರಿಸರ ಜಾಗೃತಿ ಯಜ್ಞ

ಅದೊಂದು ಸುಂದರ ಕಾರ್ಯಕ್ರಮ. ಅಂಧಮಕ್ಕಳೊಡನೆ ಮೂರ್ನಾಲ್ಕು ಗಂಟೆ ಕಳೆದ ಮಧುರ ಕ್ಷಣಗಳು. ಪರಿಸರ ಜಾಗೃತಿ ಕಾರ್ಯಕ್ರಮ.ಸ್ಪಂಧನ ವೇದಿಕೆ ಮತ್ತು ವೇದಭಾರತಿಯ ಕಾರ್ಯಕರ್ತರು ಜೊತೆಗೂಡಿ ಮಾಡಿದ ಕಾರ್ಯಕ್ರಮ. ಎಲ್ಲಾ ಮಕ್ಕಳೂ ಹವಿಸ್ಸೊಂದನನ್ನು ಯಜ್ಞಕ್ಕೆ ಅರ್ಪಿಸಿದಾಗ ಅವರ ಮುಖದ ಮೇಲೆ ಅದೆಂತಹ ಆನಂದ!!















ಹಾಸನದ ಎಂ.ಕೃಷ್ಣಾ ಅಂಧಮಕ್ಕಳ ಶಾಲೆಯಲ್ಲಿ ಇಂದು ಸ್ಪಂಧನ ವೇದಿಕೆ ಮತ್ತು ವೇದಭಾರತಿಯ ಸಹಯೋಗದೊಡನೆ ಪರಿಸರ ಜಾಗೃತಿ ಕಾರ್ಯಕ್ರಮದ ನಿಮಿತ್ತ "ಪರಿಸರ ಜಾಗೃತಿ ಯಜ್ಞ" ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಲಲಾಗಿತ್ತು. ಆರಂಭದಲ್ಲಿ ವೇದಭಾರತಿಯ ಸದಸ್ಯರುಗಳಿಂದ ಅಗ್ನಿಹೋತ್ರ ನಡೆಯಿತು. ಎಲ್ಲಾ ಅಂಧಮಕ್ಕಳೂ ಯಜ್ಞಕ್ಕೆ ಹವಿಸ್ಸನ್ನು ಅರ್ಪಿಸುವಾಗ ಆನಂದ ಪರವಶರಾದರು. ಉತ್ತಮ ಪರಿಸರಕ್ಕಾಗಿ ಅಗ್ನಿಹೋತ್ರದ ಲಾಭವನ್ನು ವೇದಭಾರತಿಯ ಸಂಯೋಜಕರಾದ ಶ್ರೀ ಹರಿಹರಪುರಶ್ರೀಧರ್ ಅವರು ತಿಳಿಸುತ್ತಾ ಅಗ್ನಿಹೋತ್ರದ ಮಂತ್ರಗಳಿಂದ ಅಂತರಂಗ ಶುದ್ಧಿಯಾದರೆ ಅಗ್ನಿಹೋತ್ರದಲ್ಲಿ ಬಳಸುವ ತುಪ್ಪ, ಸಮಿತ್ತು ಮತ್ತು ಗಿಡ ಮೂಲಿಕೆಗಳು ಅಗ್ನಿಯಲ್ಲಿ ದಹನವಾಗಿ ಉಂಟಾಗುವ ರಾಸಾಯನಿಕ ಕ್ರಿಯೆಯಿಂದ ಪರಿಸರ ಶುದ್ಧವಾಗುವುದೆಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ಮಲ್ಲೇಶಗೌಡರು ಭೂತಾಯಿ ಮತ್ತು ಹೆತ್ತತಾಯಿಯ ಮಹತ್ವವನ್ನು ತಿಳಿಸುತ್ತಾ , ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಮರೆತು ಸಮಾಜವು ಹಾದಿತಪ್ಪುತ್ತಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು.

ಸಮಾರಂಭದ ನಂತರ ಶಾಲಾ ಹೊರ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡಲಾಯ್ತು. ಕಾರ್ಯಕ್ರಮದಲ್ಲಿ ಸ್ಪಂಧನ ವೇದಿಕೆಯ ಪ್ರಮುಖರೂ ವೇದಭಾರತಿಯ ಕಾರ್ಯದರ್ಶಿಗಳೂ ಆದ ಶ್ರೀಮತಿ ಕಲಾವತಿ, ಶಾಲೆಯ ಆದಳಿತಾಧಿಕಾರಿಗಳಾದ ಪ್ರೊ.ಜಯರಾಮ್ ಹಾಗೂ ವೇದಭಾರತಿ ಮತ್ತು ಸ್ಪಂಧನ ವೇದಿಕೆಯ ಸದಸ್ಯರುಗಳು ಪಾಲ್ಗೊಂಡಿದ್ದರು. ಆರಂಭದಲ್ಲಿ ನಿವೃತ್ತ ತಹಸಿಲ್ದಾರ್ ಮತ್ತು ವೇದಭಾರತಿಯ ಉಪಾಧ್ಯಕ್ಷರಾದ ಶ್ರೀ ಜಗದೀಶ್ ಅವರು ಸ್ವಾಗತಿಸಿದರೆ ಕೊನೆಯಲ್ಲಿ ಶ್ರೀಮತಿ ಉಮಾಜಗದೀಶ್ ಅವರು ವಂದನಾರ್ಪಣೆ ಮಾಡಿದರು.ಇಡೀ ಕಾರ್ಯಕ್ರಮವನ್ನು ಶ್ರೀಮತಿ ಕಲಾವತಿ ಅಚ್ಚುಕಟ್ಟಾಗಿ ನಿರ್ವಹಿಸಿದವರು.

Thursday, June 12, 2014

ಭಗವಂತನ ಅಸ್ತಿತ್ವದಬಗ್ಗೆ ನಿಜ ಅರಿವುಂಟುಮಾಡುವ ಕೆಲಸ ಹೆಚ್ಚು ಹೆಚ್ಚು ನಡೆಯದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ.


 ಧರ್ಮ,ದೇವರು, ಆಸ್ತಿಕತೆ,ನಾಸ್ತಿಕತೆ.......ಈ ಪದಗಳೆಲ್ಲಾ ಅದೆಷ್ಟು ಅರ್ಥವನ್ನು ಕಳೆದುಕೊಂಡು ಬಿಟ್ಟಿವೆ! ಈ ಪದಗಳ ಹೆಸರಲ್ಲಿ ಅದೆಷ್ಟು ಮೋಸ,ಅನ್ಯಾಯ ನಡೆಯುತ್ತಿದೆ! ಇದೇ ವಿಷಯಗಳಲ್ಲಿ ಅದೆಷ್ಟು ಸಂಘರ್ಷಗಳು,ಹೋರಾಟಗಳು ನಡೆಯುತ್ತಿವೆ!
   ಇವು ಸಾಮಾಜಿಕ ಕಳಕಳಿ ಇರುವ ಎಲ್ಲರೂ ಚಿಂತನ-ಮಂಥನ ನಡೆಸಬೇಕಾದ ವಿಷಯಗಳು. ಯಾವ ಪೂರ್ವಾಗ್ರಹವಿಲ್ಲದೆ ಇಂದಿನ ಸಾಮಾಜಿಕ ಸ್ಥಿತಿಯ ಬಗ್ಗೆ ವಿಚಾರ  ಮಾಡೋಣ.ಯಾರೇ ಒಬ್ಬ ಈ ದೇಶದ ಪ್ರಜೆ ಮುಕ್ತವಾಗಿ ನಿಸ್ಪೃಹವಾಗಿ, ಪ್ರಾಂಜಲಮನಸ್ಸಿನಿಂದ  ನೋಡಿದಾಗ ಕಂಡುಬರುವ ಸಂಗತಿಗಳನ್ನು ಉಲ್ಲೇಖಿಸುತ್ತೇನೆ.

      ಸಧ್ಯಕ್ಕೆ ಹಿಂದೂ ಮತೀಯರಲ್ಲಿನ ಗೊಂದಲಗಳ ಬಗ್ಗೆ ಮಾತ್ರ ಇಲ್ಲಿ ಪ್ರಸ್ತಾಪ ಮಾಡಬಯಸುವೆ. ಅದರ ಅರ್ಥ ಅನ್ಯಮತಗಳಲ್ಲಿ ಈ ರೀತಿಯ ಗೊಂದಲಗಳಿಲ್ಲವೆಂದಲ್ಲ. ಆ ವಿಷಯಗಳು ಇಂದಿನ ನನ್ನ ಚಿಂತನೆಯ ವಿಷಯವಲ್ಲ.

      ದೇವರ ಬಗ್ಗೆ ಮತ್ತು  ಧರ್ಮದ ಬಗ್ಗೆ  ಎರಡು ವಿಪರೀತವಾದಗಳು, ನಡವಳಿಕೆಗಳನ್ನು ನಾವು ಕಾಣಬಹುದಾಗಿದೆ. ಒಂದು ದೇವರು ಎಂಬುದೇ ಸುಳ್ಳು. ದೇವರೇ ಇಲ್ಲ,ಇದು ಒಂದು ವಾದ. ಇದನ್ನು ವಿಚಾರವಾದ ಎಂದು ಕರೆದುಕೊಳ್ಳಲಾಗಿದೆ. ಇನ್ನೊಂದು ವಾದವಿದೆ. ಅದು ದೇವರ ಹೆಸರಿನಲ್ಲಿ ಸಮಾಜದಲ್ಲಿ ಮೌಢ್ಯವನ್ನು ಬಿತ್ತರಿಸುತ್ತಾ ನೈಜ ವಿಚಾರಗಳನ್ನು ಬದಿಗೆ ಸರಿಸಿ ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಸಮಾಜವನ್ನು ಪ್ರಪಾತಕ್ಕೆ ತಳ್ಳಿ ಅದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನರ ಗುಂಪು. ಇದರಲ್ಲಿ ಕೆಲವು ಜ್ಯೋತಿಷಿಗಳು, ಕಾವಿ ಧರಿಸಿ  ನಿಜ ಸಂನ್ಯಾಸಕ್ಕೆ ವಂಚನೆ ಮಾಡುತ್ತಿರುವ ಕೆಲವು ಬಾಬಾಗಳು, ಶಕ್ತಿಯ ಆರಾಧನೆಯ ಹೆಸರಲ್ಲಿ ವಂಚಿಸುವ ಕೆಲವರು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

      ಈ ಎರಡನೆಯ ಪಂಥವನ್ನು ಕಣ್ಮುಂದೆ ಇಟ್ಟುಕೊಂಡು ಮೊದಲಿನ ಪಂಥದವರು ನಡೆಸುತ್ತಿರುವ ದುಶ್ಕೃತ್ಯಕ್ಕೆ ತಾಜಾ ಉಧಾಹರಣೆ ಎಮ್.ಎಮ್,ಕಲ್ಬುರ್ಗಿಯವರ ಪ್ರಕರಣ. ಅನಂತಮೂರ್ತಿಯಂತವರು ಬೆಳೆಯಲು ಈ ಎರಡನೆಯ ಪಂಥದವರೇ ಕಾರಣ. ದೇವರ ವಿಗ್ರಹದ ಮೇಲೆ ಮೂತ್ರ ವಿಸರ್ಜನೆ ಮಾಡಿದೆ ! ಏನೂ ಆಗಲಿಲ್ಲ!! ಎನ್ನುವ ಈ ಮನುಷ್ಯನಿಗೆ ಜ್ಞಾನಪೀಠ ಪ್ರಶಸ್ತಿ ಕೊಡುವ ಸರ್ಕಾರ !!!

ಇಂತಾ ಪರಿಸ್ಥಿತಿಗೆ ಮುಖ್ಯಕಾರಣವೇನು ಗೊತ್ತೇ? ಧರ್ಮ ಮತ್ತು ದೇವರ ನಿಜವಾದ ಅರ್ಥವನ್ನು ತಿಳಿದುಕೊಂಡವರ ಮೌನ.

       ಸಾಮಾನ್ಯವಾಗಿ ಯಾವುದೇ ದೇವಾಲಯಗಳನ್ನು ನೋಡಿ. ಅಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಹಳ ಸುಂದರವಾಗಿ  ದೇವರ ಅಲಂಕಾರ ಮಾಡಿರಲಾಗಿರುತ್ತದೆ. ಭಕ್ತರು ಅದರಿಂದ ಆಕರ್ಷಿತರಾಗಿ ಅಲ್ಲಿ ಜಮಾಯಿಸುತ್ತಾರೆ. ದೇವರಿಗೆ  ಪೂಜೆ,ಪಂಚಾಮೃತಾಭಿಷೇಕ, ಮಂಗಳಾರತಿ,ಪ್ರಸಾದ ವಿನಿಯೋಗ ಎಲ್ಲವೂ ನಡೆಯುತ್ತದೆ. ಅಪರೂಪಕ್ಕೊಮ್ಮೆ ಅದೇ ದೇವಾಲಯದಲ್ಲಿ ಉಪನ್ಯಾಸಗಳು ನಡೆಯುತ್ತವೆ. ಒಂದೆರಡು ಗಂಟೆ ದೇವರ ನಾನಾ ಲೀಲೆಗಳ ಬಗ್ಗೆ ಉಪನ್ಯಾಸಕರು ಬಣ್ಣಿಸಿದರೂ ಕೊನೆಗೆ ಅವರ ಬಾಯಲ್ಲಿ ಅಂತಿಮ ಸತ್ಯವನ್ನು ಹೇಳದೆ ಇರಲು ಸಾಧ್ಯವಾಗುವುದಿಲ್ಲ. ಭಗವಂತ ನಿರಾಕಾರಿ, ಅವನು ಜ್ಯೋತಿ ಸ್ವರೂಪ,ನಿತ್ಯತೃಪ್ತ, ನಿತ್ಯ ಶುದ್ಧ,ಅವನು ಸರ್ವಾಂತರ್ಯಾಮಿ. ಈ ಮಾತುಗಳು ಅವರ ಬಾಯಿಂದ ಹೊರಬೀಳುತ್ತವೆ, ನಿಜ ಹೇಳಬೇಕೆಂದರೆ ಕೊನೆಯ ಅವರ ಒಂದೆರಡು ಮಾತುಗಳಿಂದ  ಅಲ್ಲಿಯವರಗೆ ಮಾಡಿದ್ದ ಉಪನ್ಯಾಸವು ತನ್ನ ಸಾರವನ್ನು ಕಳೆದುಕೊಂಡುಬಿಡುತ್ತದೆ.ಆದರೆ ಸಾಮಾನ್ಯವಾಗಿ ಜನರು ಕೊನೆಯ ಈ ಮಾತುಗಳನ್ನು  ಗಮನವಿಟ್ಟು ಕೇಳುವುದೇ ಇಲ್ಲ, ಅಲ್ಲಿಯವರಗೆ ಮಾಡಿದ್ದ ಉಪನ್ಯಾಸದಲ್ಲಿ ಹೇಳಿದ್ದ ಭಗವಂತನ ಲೀಲಾ ಪ್ರಸಂಗಗಳೇ ಅವರ ಕಣ್ಮುಂದೆ ಇರುತ್ತದೆ, ಭಗವಂತನ ಲೀಲೆಯನ್ನು ಕೇಳಿ ಅವರ ಕಿವಿ ಪಾವನವಾಯ್ತೆಂದು ಭಾವಿಸಿಬಿಟ್ಟಿರುತ್ತಾರೆ. ಆ ಸಂದರ್ಭಕ್ಕೆ ಜನರಿಗೆ  ಅಷ್ಟು ಸಾಕಾಗಿರುತ್ತದೆ.

       ಯಾರೇ ಸಾದು ಸಂತರು ಭಗವಂತನ ಬಗ್ಗೆ ಪ್ರವಚನ ನೀಡುವಾಗಲೂ ಭಗವಂತ ಸರ್ವಾಂತರ್ಯಾಮಿ,ಅವನು ನಿರಾಕಾರಿ ಎಂದೇ ಹೇಳುತ್ತಾರೆ.ಆದರೂ ಅವರ ಮಠ ಮಂದಿರಗಳಲ್ಲಿ  ಅದ್ಧೂರಿಯಾಗೇ ವಿಗ್ರಹಾರಾಧನೆ ನಡೆಯುತ್ತದೆ. ಅದೊಂದು ಶಕ್ತಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಅದರೆ ಭಗವಂತನನ್ನು ಒಂದು ವಿಗ್ರಹರೂಪದಲ್ಲಿ ಆರಾಧಿಸುವ ಆಚರಣೆ ಬೆಳೆದು ಬಂದುಬಿಟ್ಟಿದೆ. ಈ ನಂಬಿಕೆ ಗಟ್ಟಿಯಾಗಿ ಹಿಂದುಗಳಲ್ಲಿ ನೆಲೆಯೂರಿಬಿಟ್ಟಿದೆ. ಮನುಷ್ಯನಿಗೆ ಬೇಕಾಗಿರುವುದು ನೆಮ್ಮದಿ. ಅವನ ನಂಬಿಕೆಯಿಂದ ಅವನಿಗೆ ನೆಮ್ಮದಿಯು ಸಿಗುತ್ತದೆಂದಾದರೆ  ಅವನ ನೆಮ್ಮದಿಗೆ ಭಂಗ ತರುವ ಹಕ್ಕು ಯಾರಿಗೂ ಇಲ್ಲ. ಅನಂತ ಮೂರ್ತಿಯವರ ಪ್ರಕರಣದಲ್ಲಿ ಆಗಿರುವುದು ಇದೇ ತಪ್ಪು. ಅನಂತಮೂರ್ತಿಯವರ ನಂಬಿಕೆ ಅವರಿಗೆ.ಅದನ್ನು ಯಾರೂ ಪ್ರಶ್ನಿಸುತ್ತಿಲ್ಲ.ಆದರೆ ಬಹುಜನರ ನಂಬಿಕೆಗೆ ಕೊಡಲಿಪೆಟ್ಟು ಬಿದ್ದಾಗ ಸಿಡಿದೇಳದೆ ಇದ್ದಾರೆ? ಇದು ಬಹಳ ಸಹಜ ಮನೋಭಾವ.
          ಇಂತ ದೊಡ್ದವರೆನಿಸಿಕೊಂಡವರು ಮಾಡುವ ಈ  ದುಷ್ಟ  ಕೆಲಸದಿಂದ ಅದರ ಲಾಭ ಪಡೆಯುವವರು ಯಾರು ಗೊತ್ತೇ? ಇಲ್ಲಿ ಪ್ರಸ್ತಾಪಿಸಿರುವ ಎರಡನೆಯ ಪಂಥದವರು!! ಇಂತಾ ಒಂದೊಂದು ಘಟನೆಗಳು ನಡೆದಾಗಲೂ ಇದರ ಸಾವಿರಪಟ್ಟು ಹೆಚ್ಚುವುದು ಮೌಢ್ಯ ಮಾತ್ರ!!

       ನಮ್ಮ ದೇಶಕ್ಕೆ ಭವ್ಯ ಪರಂಪರೆ ಇದೆ. ಸಹಸ್ರಾರು ಜನ ಋಷಿಮುನಿಗಳು  ತಪಸ್ಸು ಮಾಡಿ ಸತ್ಯದ ದರ್ಶನ ಮಾಡಿಕೊಂಡಿದ್ದಾರೆ. ಅವರಿಗಾದ ಸತ್ಯದರ್ಶನವೇ ವೇದ ಎಂದು ಕರೆಯಲ್ಪಟ್ಟಿತು. ಇದು ಯಾವುದೇ ಜಾತಿ,ಮತಕ್ಕೆ ಸೀಮಿತವಲ್ಲ. ಇಡೀ ಮನುಕುಲದ ಚಿಂತನೆ ವೇದದಲ್ಲಿದೆ. ನೆಮ್ಮದಿಯ ಬಾಳಿನ ಸೂತ್ರಗಳನ್ನು ನಮ್ಮ ಋಷಿಮುನಿಗಳು ನೀಡಿದ್ದಾರೆ.  ನಮ್ಮ ಋಷಿಮುನಿಗಳು ಕೊಟ್ಟ ಒಂದೆರಡು ಚಿಂತನೆಗಳನ್ನು ಸ್ಮರಿಸೊಣ..............

ಏಕಂ ಸತ್ ವಿಪ್ರಾ ಬಹುದಾ ವದಂತಿ 

      ಸತ್ಯ ಎಂಬುದು ಒಂದು. ವಿಶೇಷ ಪ್ರಜ್ಞಾವಂತರು ಅದನ್ನು ನಾನಾ ಹೆಸರುಗಳಿಂದ ಕರೆಯುತ್ತಾರೆ. ಅದನ್ನೇ ವಚನ ಕಾರರು "ದೇವನೊಬ್ಬ ನಾಮ ಹಲವು" ಎಂದು ಹೇಳಿದರು.

          ಯಾರೋ ಒಬ್ಬನಿಗೆ ಗಣೇಶ, ಮತ್ತೊಬ್ಬನಿಗೆ ಕೃಷ್ಣ, ಇನ್ನೊಬ್ಬನಿಗೆ ದುರ್ಗಿ,ಇನ್ನು ಕೆಲವರಿಗೆ ಮಾರಮ್ಮ.ಇನ್ನು ಕೆಲವರಿಗೆ ವಿಗ್ರಹವೇ ಬೇಕಿಲ್ಲ.ಕಣ್ಮುಚ್ಚಿ ಕುಳಿತು ಅವನ ಧ್ಯಾನದಲ್ಲಿ ತಲ್ಲೀನರಾಗುತ್ತಾನೆ. ಇದೆಲ್ಲಾ ಅವರವರ ಬೌದ್ಧಿಕ ಸ್ತರಗಳು, ಅವರವರ ನಂಬಿಕೆಗಳು, ಈ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ.ಆದರೆ ನಿಜವಾಗಿ ಚರ್ಚಿಸಬೇಕಾದ್ದು ಮತ್ತು ಜಾಗೃತಿ ಮೂಡಿಸಬೇಕಾದುದು ಯಾರನ್ನು?
        ದೇವರನ್ನು ನಂಬದವರ ತಂಟೆಗೆ ಹೋಗುವ ಅಗತ್ಯವಿಲ್ಲ. ಆದರೆ ದೇವರ ಹೆಸರಲ್ಲಿ ವಂಚನೆಗೆ ಒಳಗಾಗುವವರಲ್ಲಿ ಅರಿವನ್ನು ಮೂಡಿಸುವ ಅಗತ್ಯವಿದೆ. ಅವರ ಬಗ್ಗೆ ಕನಿಕರ ಪಡಬೇಕಾಗಿದೆ. ಅವರಲ್ಲಿ ದೇವರ ಬಗ್ಗೆ   ನಂಬಿಕೆಗಿಂತಲೂ ಹೆಚ್ಚು ಭಯವು ಮನೆಮಾಡಿದೆ. ಇಂತಹ  ಭಯದಿಂದಲೇ ಅಂತವರು ಕಂಡಕಂಡಲ್ಲಿ ಕೈ ಮುಗಿಯುತ್ತಾರೆ! ಸಿಕ್ಕ ಬಾಬಾ ಗಳ ಕಾಲಿಗೆ ಬೀಳುತ್ತಾರೆ. ಅವರಲ್ಲಿ ಹೆದರಿಕೆ! ಈ ಬಾಬಾ ಏನಾದರೂ ತೊಂದರೆ ಮಾಡಿ ಬಿಟ್ಟರೆ! ದೇವರು ನಮ್ಮ ಮೇಲೆ ಸಿಟ್ಟಾಗಿ ಬಿಟ್ಟರೆ!!
ಇದಕ್ಕೆ ತಾಜಾ ಉಧಾಹರಣೆಯಂತೆ  ಇತ್ತೀಚೆಗೆ ನಡೆದಿರುವ ಹಲವು ಕೆಟ್ಟಘಟನೆಗಳು ನಮ್ಮ ಕಣ್ ತೆರಸಬೇಕು. 

ಹಳ್ಳಿಯ ಮುಗ್ಧಬಾಲಿಕೆಯೊಬ್ಬಳು  ಅನಾರೋಗ್ಯ ಪೀಡಿತಳಾಗುತ್ತಾಳೆ. ಒಬ್ಬ ಜ್ಯೋತಿಷಿಯ ಹತ್ತಿರ ಆಕೆಯನ್ನು ಕರೆದುಕೊಂಡು ಹೋಗುತ್ತಾರೆ. ತಂದೆ ತಾಯಿಯರನ್ನು ಮನೆಗೆ ಕಳಿಸಿ ತಾನು ಆ ಬಾಲಿಕೆಗೆ ವಿಶೇಷ ಚಿಕಿತ್ಸೆಯನ್ನು ಕೊಡುವ ಹೆಸರಲ್ಲಿ ತನ್ನ ಕೆಟ್ಟ ಕಾಮಕ್ಕೆ ಆ ಬಾಲಿಕೆಯನ್ನು ಬಲಿತೆಗೆದುಕೊಳ್ಳುತ್ತಾನೆ.ಇಂತಾ ಎಷ್ಟು ಘಟನೆಗಳು ಬೇಕು!!!!

        ಅಂತಾ ಮುಗ್ಧರಲ್ಲಿ ತಿಳಿದವರು ಧೈರ್ಯವನ್ನು ತುಂಬುವ ನಿಜದ ಅರಿವುಂಟು ಮಾಡಿಸುವ ಕೆಲಸವನ್ನು ಮಾಡಬೇಡವೇ? ಈ ಜಾಗೃತಿಯ ಕೆಲಸ ಮಾಡಲು   ವೇದದ ಅರಿವು ಬೇಕು.

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್ ||


       ನಮ್ಮ ಋಷಿಮುನಿಗಳ ಚಿಂತನೆ ನೋಡಿ ಹೇಗಿದೆ! ಎಲ್ಲರೂ ಸುಖವಾಗಿರಲಿ. ಎಲ್ಲರೂ ಆರೋಗ್ಯವಂತರಾಗಿರಲಿ.ಯಾರಿಗೂ ದುಃಖವು ಬರುವುದು ಬೇಡ. ಎಲ್ಲಾ ಎಂದರೆ ಯಾರು? ಕೇವಲ ನಮ್ಮ ಮನೆಯವರೇ? ನಮ್ಮೂರಿನವರೇ? ನಮ್ಮ ದೇಶದವರೇ? ಅಲ್ಲ.ಇಡೀ ವಿಶ್ವದವರು.ಅಷ್ಟೇ ಅಲ್ಲ. ಇಡೀ ಭೂಮಂಡಲದ ಎಲ್ಲಾ ಜೀವಿಗಳೂ ಸುಖವಾಗಿರಲೆಂಬುದು ನಮ್ಮ ನಮ್ಮ ಋಷಿಮುನಿಗಳ ಆಶಯ. ಕಾರಣ ಅಣು ರೇಣುತೃಣ ಕಾಷ್ಟಗಳಲ್ಲೂ ಭಗವಂತನಿದ್ದಾನೆಂದು ಅವರಿಗೆ ಗೊತ್ತಿತ್ತು. ಈ ಚಿಂತನೆಯು ಮಾನವರಲ್ಲಿ ಬೆಳೆಯುವವರೆಗೂ  ಜ್ಯೋತಿಷಿಯ ಅತ್ಯಾಚಾರಕ್ಕೆ ಬಲಿಯಾದ ಬಾಲಿಕೆಯಂತವರೂ, ವಿಗ್ರಹದ ಮೇಲೆ ಮೂತ್ರ ಮಾಡುವ ದುಷ್ಟ ಚಿಂತನೆಯ ವಿಕೃತ ಸ್ವಭಾವದ ಜನರೂ ಇದ್ದೇ ಇರುತ್ತಾರೆ. ಭಗವಂತನ ಅಸ್ತಿತ್ವದಬಗ್ಗೆ ನಿಜ ಅರಿವುಂಟುಮಾಡುವ ಕೆಲಸ ಹೆಚ್ಚು ಹೆಚ್ಚು ನಡೆಯದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ.  ಭಗವಂತನ ನಿರಾಕರಣೆ ಮತ್ತು ಭಗವಂತನ ಬಗೆಗಿನ ಮೌಢ್ಯ ಎರಡೂ ವಿಚಾರದಲ್ಲಿ ಜಾಗೃತಿಯುಂಟಾಗಿ ನಿಜವ ಅರಿಯುವ ಕೆಲಸ ಆಗಬೇಕಾಗಿದೆ. ಅದು ಜಗತ್ತಿನ ಮೊಟ್ಟಮೊದಲ ಸಾಹಿತ್ಯವಾದ ವೇದದ ಅರಿವಿನಿಂದ ಮಾತ್ರ ಸಾಧ್ಯ.

Monday, June 2, 2014

ಸ್ತ್ರೀಯರಿಗೆ ಉಪನಯನ ಸಂಸ್ಕಾರ ಮಾಡಬಹುದೇ?



ಋಗ್ವೇದದ ಒಂದು ಮಂತ್ರ ಏನು ಹೇಳುತ್ತದೆ, ನೋಡೋಣ.

ದೇವಾ ಏತಸ್ಯಾಮವದಂತ ಪೂರ್ವೇ

ಸಪ್ತಋಷಯಸ್ತಪಸೇ ಯೇ ನಿಷೇದುಃ |

ಭೀಮಾ ಜಾಯಾ ಬ್ರಾಹ್ಮಣಸ್ಯೋಪನೀತಾ

ದುರ್ಧಾಂ ದಧಾತಿ ಪರಮೇ ವ್ಯೋಮನ್ ||

[ಋಕ್. ೧೦.೧೦೯.೪]

ಅರ್ಥ:
ಯೇ = ಯಾವ
ಸಪ್ತ ಋಷಯಃ = ಪಂಚ ಜ್ಞಾನೇಂದ್ರಿಯಗಳು ಮತ್ತು ಮನಸ್ಸು ಬುದ್ಧಿಗಳು
ತಪಸೇ ನಿಷೇಸುದುಃ = ಜ್ಞಾನಸಾಧನೆಗಾಗಿ ಅವಸ್ಥಿತವಾದವೋ
ಪೂರ್ವೇ ದೇವಾ: = ಆ ಶ್ರೇಷ್ಠದಿವ್ಯ ಶಕ್ತಿಗಳು
ಏತಸ್ಯಾಮ್ = ಇವಳಲ್ಲಿ
ಅವದಂತ = ಉಪದೇಶಮಾಡುತ್ತವೆ
ಬ್ರಾಹ್ಮಣಸ್ಯ = ಬ್ರಾಹ್ಮಣನ-ಬ್ರಹ್ಮವೇತ್ತನ
ಭೀಮಾ ಜಾಯಾ = ಮಹಾತೇಜಸ್ವಿಯಾದ ಪತ್ನಿಯು
ಉಪನೀತಾ = ಉಪನೀತಳಾಗಿ
ಪರಮೇ ವ್ಯೋಮನ್ = ಪರಮರಕ್ಷಕನಾದ ಪರಮಾತ್ಮನಲ್ಲಿ ಸ್ಥಿತಳಾಗಿ
ದುರ್ಧಾಮ್ = ಧರಿಸಲು ಕಷ್ಟಕರವಾದ ಯೋಗ್ಯತೆಯನ್ನು
ದಧಾತಿ =ಧರಿಸುತ್ತಾಳೆ

ಭಾವಾರ್ಥ :
 ಈ ವೇದಮಂತ್ರವು ಸ್ತ್ರೀಯರು ವೇದವನ್ನು ಕಲಿಯಬಹುದೇ? ಬಾರದೇ ? ಅವರಿಗೆ ಉಪನಯನ ಸಂಸ್ಕಾರ ಮಾಡಬಹುದೇ ? ಬಾರದೇ? ಎಂಬುದಕ್ಕೆ ಎಂತಹ ಅದ್ಭುತ ಉತ್ತರವನ್ನು ಕೊಟ್ಟಿದೆ! ನಾವು ಮಂತ್ರದ ಆಳಕ್ಕೆ ಹೋಗಿ ಅರ್ಥಮಾಡಿಕೊಂಡಾಗ ನಮಗೆ ಇಂತಹ ಅನುಮಾನಗಳು ಮಾಯವಾಗಲೇ ಬೇಕು. ಈ ಮಂತ್ರ ಏನು ಕರೆ ಕೊಡುತ್ತದೆ?
  ಪುರುಷನಂತೆಯೇ ಸ್ತ್ರೀಯರಿಗೂ ಕೂಡ ಜ್ಞಾನಸಾಧನೆಗಾಗಿ ಭಗವಂತನು ಪಂಚ ಜ್ಞಾನೇಂದ್ರಿಯಗಳು ಮತ್ತು ಮನಸ್ಸು ಬುದ್ಧಿಗಳನ್ನು ದಯಪಾಲಿಸಿದ್ದಾನೆ.ಪುರುಷನಂತೆಯೇ ಸ್ತ್ರೀ ಕೂಡ ಜ್ಞಾನಸಾಧನೆ ಮಾಡಬಲ್ಲಳು. ಬ್ರಾಹ್ಮಣನ-ಬ್ರಹ್ಮವೇತ್ತನ ಮಹಾತೇಜಸ್ವಿಯಾದ ಪತ್ನಿಯು ಉಪನೀತಳಾಗಿ ಪರಮರಕ್ಷಕನಾದ ಪರಮಾತ್ಮನಲ್ಲಿ ಸ್ಥಿತಳಾಗಿ ಧರಿಸಲು ಕಷ್ಟಕರವಾದ ಯೋಗ್ಯತೆಯನ್ನು ಧರಿಸುತ್ತಾಳೆ. ಈ ವೇದಮಂತ್ರದ ಮೊದಲ ಭಾಗವನ್ನು ಒಪ್ಪಿದರೂ ಎರಡನೆಯ ಭಾಗದಲ್ಲಿ ಬ್ರಾಹ್ಮಣನ ಮಹಾತೇಜಸ್ವಿಯಾದ ಪತ್ನಿಯು ಎಂಬುದನ್ನು ಅರ್ಥಮಾಡಿಕೊಳ್ಳುವಾಗ ಜಾತಿಬ್ರಾಹ್ಮಣರ ಪತ್ನಿ ಎಂದೂ ಕೂಡ ಅರ್ಥೈಸಿ ವೇದದ ಮೂಲಾರ್ಥಕ್ಕೆ ಅಪಚಾರವಾಗುವ ಸಂದರ್ಭಗಳಿವೆ.

ಆದ್ದರಿಂದ ಬ್ರಾಹ್ಮಣ ಎಂಬುದು ಜಾತಿ ಸೂಚಕವಲ್ಲ, ಅದು ವರ್ಣ ಸೂಚಕ, ಎಂಬುದನ್ನು ಗಟ್ಟಿಮಾಡಿಕೊಂಡರೆ ವೇದದ ಕರೆಯನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಬ್ರಹ್ಮಜ್ಞಾನದ ಹಂಬಲವಿರುವ, ವೇದಾಧ್ಯಯನ ಮಾಡುತ್ತಾ, ಇಡೀ ಸಮಾಜದ ಹಿತಕ್ಕಾಗಿ ದುಡಿಯುವವನು ಬ್ರಾಹ್ಮಣ.ಅವನ ಕರ್ತವ್ಯವನ್ನು ತಿಳಿದುಕೊಂಡಾಗ ಯಾರನ್ನು ಬ್ರಾಹ್ಮಣನೆನ್ನಬಹುದು ,ಎಂಬುದು ನಮಗೆ ಅರ್ಥವಾಗುತ್ತದೆ. ಯಾವ ತಂದೆ-ತಾಯಿಯರ ಗರ್ಭದಲ್ಲಿ ಜನಿಸಿದ್ದರೂ ಸಹ ಅವನ ಗುಣ ಸ್ವಭಾವಗಳಿಗನುಗುಣವಾಗಿ  ಬ್ರಾಹ್ಮಣ, ಕ್ಷತ್ರಿಯ, ವೈಷ್ಯ,ಶೂದ್ರ ಎಂಬ ನಾಲ್ಕು ವರ್ಣಗಳಲ್ಲಿ ಸೂಕ್ತವಾದ ವರ್ಣವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವನಿಗಿರುತ್ತಿತ್ತು. ಇದು ಗುರುಕುಲದಲ್ಲಿ ಗುರುಗಳು ಅವನ ಗುಣ-ಸ್ವಭಾವಗಳನ್ನು ನೋಡಿ ಸಲಹೆ ಕೊಡುತ್ತಿದ್ದರು. ಅದರಂತೆ ಆ ವರ್ಣವನ್ನು    ಅವನು ಸ್ವೀಕರಿಸುತ್ತಿದ್ದ. ಕ್ಷಾತ್ರಭಾವ ಉಳ್ಳವನು ಕ್ಷತ್ರಿಯ ವರ್ಣ ಸ್ವೀಕರಿಸಿದರೆ, ಸೇವೆ ಮಾಡುವ ಸ್ವಭಾವ ಮತ್ತು ಸಾಮರ್ಥ್ಯ ಇರುವವನು   ಶೂದ್ರವರ್ಣವನ್ನು ಆಯ್ಕೆ ಮಾಡಿಕೊಳ್ಲುತ್ತಿದ್ದನು. ಆದರೆ ಕಾಲ ಗತಿಸಿದಂತೆ ಗುರುಕುಲಗಳೆಲ್ಲಾ ಮಾಯವಾಗಿ ಯಾರೋ ಪೂರ್ವಜರು  ಆರಿಸಿ ಕೊಂಡಿದ್ದ ವರ್ಣವೇ ಮುಂದುವರೆದು ಅದು ಈಗ ಜಾತಿಯ ಹೆಸರು ಪಡೆದುಕೊಂಡಿರಬಹುದಾಗಿರುವುದರಿಂದ ಇಷ್ಟೊಂದು ಅವಾಂತರಕ್ಕೆ ಕಾರಣವಾಗಿರಬಹುದು. ಆದರೆ ಮತ್ತೀಗ ವೇದಯುಗವೇ ಆರಂಭವಾಗಿದೆ ಎಂದರೆ ಅಚ್ಚರಿಯಾಗಬಹುದು. ದೇಶದಲ್ಲಿರುವ ಪ್ರಖ್ಯಾತ ವೈದ್ಯರುಗಳು, ಇಂಜಿನಿಯರುಗಳು, ಪ್ರೊಫೆಸರುಗಳು ಯಾವ ಜಾತಿಗೂ ಸೀಮಿತವಾಗಿಲ್ಲ. ಅಲ್ಲದೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಎಷ್ಟು ಜನ ವಾಹನಚಾಲಕರೋ, ವ್ಯಾಪಾರಿಗಳೋ, ಶ್ರಮಜೀವಿಗಳೋ ಆಗಿ ಕೆಲಸ ಮಾಡುತ್ತಿಲ್ಲ! ಅದು ಅವರವರ ಸ್ವಭಾವ ಮತ್ತು ಸಾಮರ್ಥ್ಯಕ್ಕನುಗುಣವಾಗಿ ಈಗಾಗಲೇ ಸ್ಥಾನಪಡೆದಿರುವುದನ್ನು ಗಮನಿಸಬಹುದಾಗಿದೆ. ಈಗ ಬ್ರಾಹ್ಮಣನ ಕರ್ತವ್ಯದ ಬಗ್ಗೆ ವೇದವು ಏನು ಹೇಳುತ್ತದೆ? ನೋಡೋಣ. ಆಗ ಬ್ರಾಹ್ಮಣನ ಪತ್ನಿ ಎಂದರೆ ಯಾರು ಎಂಬುದು ನಮಗೆ ಅರ್ಥವಾಗದೆ ಇರದು.


ಬ್ರಾಹ್ಮಣಾಸಃ ಸೋಮಿನೋ ವಾಚಮಕ್ರತ ಬ್ರಹ್ಮ ಕೃಣ್ವಂತಃ ಪರಿವತ್ಸರೀಣಮ್ |
ಅಧ್ವರ್ಯವೋ ಘರ್ಮಿಣಃ ಸಿಸ್ವಿದಾನಾ ಆವಿರ್ಭವಂತಿ ಗುಹ್ಯಾ ನ ಕೇ ಚಿತ್ ||
[ಋಕ್- ೭.೧೦೩.೮]

ಅರ್ಥ:
ಸೋಮಿನಃ = ಬ್ರಹ್ಮಾನಂದದ ಸವಿಯನ್ನು ಕಾಣುವವರೂ
ಅಧ್ವರ್ಯವಃ = ಅಹಿಂಸಕರೂ
ಘರ್ಮಿಣಃ = ತಪಸ್ವಿಗಳೂ
ಸಿಸ್ವಿದಾನಾಃ = ಪರಿಶ್ರಮದಿಂದ ಬೆವರುವವರೂ
ಬ್ರಾಹ್ಮಣಾಸಃ = ಬ್ರಾಹ್ಮಣರು, ಅವರು
ಪರಿವತ್ಸರೀಣಂ ಬ್ರಹ್ಮಂ ಕೃಣ್ವಂತಃ = ಸಮಸ್ತ ವಿಶ್ವದಲ್ಲಿಯೂ ವೇದ ಜ್ಞಾನವನ್ನು ಪಸರಿಸುತ್ತಾ
ಕೇಚಿತ್ ಗುಹ್ಯಾ ನ = ಕೆಲವರು ಗುಪ್ತವಾಗಿದ್ದವರಂತೆ
ಆವಿರ್ಭವಂತಿ = ಬೆಳಕಿಗೆ ಬರುತ್ತಾರೆ
ಭಾವಾರ್ಥ :-
 ಭಗವದುಪಾಸನೆಯಿಂದ ಆನಂದಪ್ರಾಪ್ತಿ, ಅಹಿಂಸಾತತ್ವ, ತಪಸ್ಸು ಮತ್ತು ಆಧ್ಯಾತ್ಮಿಕ ಸಾಧನೆ, ಕಷ್ಟಸಹಿಷ್ಣುತೆ-ಇವು ಬ್ರಾಹ್ಮಣನ ಲಕ್ಷಣಗಳು. ಅವರು ಸದಾ ಹರಟುತ್ತಾ ತಿರುಗುವುದಿಲ್ಲ. ಗುಪ್ತಸಾಧನೆಗೆ ಗಮನವಿತ್ತು ಆತ್ಮಶಕ್ತಿಯನ್ನು ಬೆಳೆಸಿಕೊಂಡು ಸಂಪೂರ್ಣ ವಿಶ್ವದಲ್ಲೇ ಬ್ರಹ್ಮ ಜ್ಞಾನವನ್ನು ಹರಡುತ್ತಾರೆ. ಇಂತವರು ಬ್ರಾಹ್ಮಣರು . ಇವರ ಪತ್ನಿಯನ್ನು ವೇದವು ಭೀಮಾ ಜಾಯಾ  ಅಂದರೆ  ಮಹಾತೇಜಸ್ವಿಯಾದ  ಪತ್ನಿ ಎಂದು ಕರೆದಿದೆ.
ಈಗ ಲೇಖನದ ಆರಂಭಕ್ಕೆ ಹೋಗೋಣ. ಅಂದರೆ ಬ್ರಾಹ್ಮಣನ ಪತ್ನಿಯು ಉಪನೀತಳಾಗಲು ಅರ್ಹಳು ಎಂದರೆ ಜಾತಿಯ ಬ್ರಾಹ್ಮಣ ಎಂದು ತಿಳಿಯಬಾರದಲ್ಲವೇ? ಬ್ರಹ್ಮಜ್ಞಾನವನ್ನು ಆಸಕ್ತಿಯಿಂದ ಕಲಿತು, ಪ್ರಸಾರ ಮಾಡುವವರೆಲ್ಲರೂ ಬ್ರಾಹ್ಮಣರೇ ಆಗಿದ್ದಾರೆ. ಅಂತೆಯೇ ಎಲ್ಲಾ ಸ್ತ್ರೀಯರೂ ಕೂಡ ಯಾರಿಗೆ ವೇದಾಧ್ಯಯನದಲ್ಲಿ ಆಸಕ್ತಿಯಿದೆ, ಅವರೆಲ್ಲರೂ ಉಪನೀತರಾಗಲು ಅರ್ಹರು. ಈ ಸಂದರ್ಭದಲ್ಲಿ ಉಪನಯನವೇಕೇ? ಎಂಬುದನ್ನು ಸರಳವಾಗಿ ತಿಳಿದುಕೊಂಡರೆ ಉಚಿತವಲ್ಲವೇ?
ಉಪನಯನ ಸಂಸ್ಕಾರಕ್ಕಿಂತ ಮುಂಚಿನ ಒಂಬತ್ತು ಸಂಸ್ಕಾರಗಳ ಸರಳ ಸೂಕ್ಷ್ಮ  ಪರಿಚಯ ಮಾಡಿಕೊಂಡು ನಂತರ ಉಪನಯನ ಸಂಸ್ಕಾರದ ಬಗ್ಗೆ ತಿಳಿದುಕೊಳ್ಳೋಣ.  ಮನುಷ್ಯನಿಗೆ ಎಲ್ಲಿಂದ ಸಂಸ್ಕಾರ ಆರಂಭವಾಗುತ್ತದೆ? ಮಗುವು ಹುಟ್ಟುವುದಕ್ಕಿಂತ ಮುಂಚಿನಿಂದಲೇ ಅದಕ್ಕೆ ಸಂಸ್ಕಾರ ಆರಂಭವಾಗುತ್ತದೆಂದರೆ- ರೂಢಿಯಲ್ಲಿ ಹಲವರು ಆಚರಿಸಿದರೂ ಹೌದಾ!! ಎಂದು ಹುಬ್ಬು ಹಾರಿಸದೇ ಇರಲಾರರು!!
ಸಂಪ್ರದಾಯದಂತೆ  ಗಂಡು-ಹೆಣ್ಣಿನ ಮದುವೆ ಆಗುತ್ತದೆ. ವೇದೋಕ್ತ ವಿವಾಹ ಸಂಸ್ಕಾರದಲ್ಲಿ ಅಲ್ಲೊಂದು ಇಲ್ಲೊಂದು ವೇದಮಂತ್ರವನ್ನು ಬಳಸಿ ಉಳಿದೆಲ್ಲವನ್ನೂ ಪದ್ದತಿಯಲ್ಲಿ ನಡೆದುಬಂದಿರುವ ಆಚರಣೆಯಂತೆ ಮದುವೆ ನಡೆಯುತ್ತದೆನ್ನುವುದು ಸತ್ಯ. ಆದರೆ ಮಾಡುವ ಹಲವು ಸಂಸ್ಕಾರಗಳ ಅರ್ಥ ಮಾಡಿಸಿದವರಿಗೇ ಗೊತ್ತಿರುವುದು ಕಡಿಮೆ, ಅಥವಾ ವಧು-ವರರಿಗೆ ಅರ್ಥವನ್ನು ತಿಳಿದುಕೊಂಡು ಆಚರಿಸುವ ವ್ಯವದಾನ ಇರುವುದಿಲ್ಲ. ಗರ್ಭದಾನ ಸಂಸ್ಕಾರದಿಂದ ಆರಂಭವಾಗಿ ಉಪನಯನದ ವರಗೆ ಹತ್ತು ಸಂಸ್ಕಾರಗಳಿವೆ. ಆನಂತರ ಆರು ಸಂಸ್ಕಾರಗಳು. ಒಟ್ಟು ಹದಿನಾರು.

೧]ಗರ್ಭದಾನ :-ವಧು-ವರರು ವಿವಾಹವಾಗಿ ದಂಪತಿಗಳು ಮೊದಲಭಾರಿ ದೇಹಸಂಗವನ್ನು ಮಾಡುವ ಮುನ್ನ ಆಚರಿಸುವ ಸಂಸ್ಕಾರವೇ ಗರ್ಭದಾನ ಸಂಸ್ಕಾರ.
೨]ಪುಂಸವನ:- ಗರ್ಭಿಣಿಯ  ಶಕ್ತಿ ಹೆಚ್ಚಿಸಲು ಮಾಡುವ ಸಂಸ್ಕಾರ
೩]ಸೀಮಂತೋನ್ನಯನ:- ಗರ್ಭಿಣಿಯ ಮನಸ್ಸು ಉಲ್ಲಾಸವಾಗಿರಲು ಮಾಡುವ ಸಂಸ್ಕಾರ. ಇವೆರಡ  ರಿಂದಲೂ ಗರ್ಭಸ್ಥಶಿಶುವಿನ ಮೇಲೆ ಉತ್ತಮ ಸಂಸ್ಕಾರವಾಗುತ್ತದೆ
೪]ಜಾತಕರ್ಮ:- ಶಿಶು ಜನನವಾದ ಕೂಡಲೇ ಮಾಡುವ ಸಂಸ್ಕಾರ. ವಿಶೇಷ ಹೋಮವನ್ನು ಮಾಡಿ ತಂದೆಯು ಬೆಳ್ಳಿ ಅಥವಾ ಚಿನ್ನದ ಕಡ್ಡಿಯಿಂದ ಮಗುವಿನ ನಾಲಿಗೆಯ ಮೇಲೆ ಓಂಎಂದು ಬರೆಯುತ್ತಾ ಕಿವಿಯಲ್ಲಿ ವೇದೋಸಿ ಅಂದರೆ ನೀನು ಜ್ಞಾನಮಯ , ಎಂದು ಉಚ್ಛರಿಸುವನು.
೫]ನಾಮಕರಣ:- ಮಗುವಿಗೆ ೧೧ ದಿನ ಅಥವಾ ೧೦೧ ದಿನ ಅಥವಾ ಒಂದು ವರ್ಷವಾದಾಗ ಮಾಡುವ ಸಂಸ್ಕಾರ
೬]ನಿಷ್ಕ್ರಮಣ:- ಮಗುವಿಗೆ ನಾಲ್ಕು ತಿಂಗಳಾದಾಗ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ನೀನು ಸೂರ್ಯನಂತೆ ಪ್ರಕಾಶಮಾನನಾಗು ಎಂಬ ಸಂಸ್ಕಾರ
೭]ಅನ್ನಪ್ರಾಶನ:- ಮಗುವಿಗೆ ಅನ್ನವನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಬಂದಾಗ ವಿಶೇಷ ಹೋಮವನ್ನು ಮಾಡಿ ಮೃದುವಾದ ಅನ್ನವನ್ನು ತಿನ್ನಿಸಲಾಗುತ್ತದೆ
೮] ಚೂಡಾಕರ್ಮ:- ಹುಟ್ಟಿನಿಂದ ಬಂದ ತಲೆಗೂದಲು ಆರೋಗ್ಯಕರವಲ್ಲ. ಆದ್ದರಿಂದ ಅದನ್ನು ತೆಗೆದು ಹೊಸದಾಗಿ ಪುಷ್ಕಳವಾಗಿ ಕೂದಲು ಬರಲು ಮಾಡುವ ಸಂಸ್ಕಾರ.
೯]ಕರ್ಣವೇಧ:- ಕಿವಿಯನ್ನು ಚುಚ್ಚುವ ಸಂಸ್ಕಾರ. ಇದರಿಂದ ಹಲವು ರೋಗಗಳು ಬರುವುದು ತಪ್ಪುತ್ತದೆ. ಈ ಸಂಸ್ಕಾರ ಮಾಡುವಾಗ ಶಿಶುವಿನ ಕಿವಿಯಮೇಲೆ ಒಳ್ಳೆಯ ಮಾತುಗಳೇ  ನಿನ್ನ ಕಿವಿಯಮೇಲೆ  ಬೀಳಲಿ ಎಂದು ಪ್ರಾರ್ಥಿಸಲಾಗುತ್ತದೆ.
೧೦]ಉಪನಯನ : ಮಾನವ ಜೀವನದಲ್ಲಿ ಇದು ಹತ್ತನೆಯ ಮತ್ತು ಅತ್ಯಂತ ಮಹತ್ವಪೂರ್ಣ ಸಂಸ್ಕಾರ.ಎಂಟು ವರ್ಷದ ಬಾಲಕ/ಬಾಲಿಕೆಗೆ ಮಂತ್ರಪೂರ್ವಕವಾಗಿ ಮೂರೆಳೆಯ ಯಜ್ಞೋಪವೀತವನ್ನು ಧಾರಣೆಮಾಡಿಸಲಾಗುತ್ತದೆ. ಮನಃಶುದ್ಧಿ, ವಚಃಶುದ್ಧಿ,ಕಾಯಶುದ್ಧಿ- ಈ ಮೂರು ಶುದ್ಧಿಗಳನ್ನು ಸೂಚಿಸುವ ಯಜ್ಞೋಪವೀತದ ಮಹತ್ವವನ್ನು ಬಾಲಕ/ಬಾಲಕಿಗೆ ಮಂತ್ರಮೂಲಕ ಬೋಧಿಸಲಾಗುತ್ತದೆ.
ಅಂದು ಉಪನೀತನಾದ ವಟುವು ಅನೃತಾತ್ ಸತ್ಯಮುಪೈಮಿ [ಯಜು-೧.೫] ಅಂದರೆ ಅಸತ್ಯದಿಂದ ಸರಿದು ಸತ್ಯದ ಕಡೆಗೆ ಅಡಿ ಇಡುತ್ತೇನೆ ಎಂಬ ಮಹಾವ್ರತವನ್ನು ಸ್ವೀಕರಿಸುತ್ತಾನೆ. ವ್ರತ ಎಂದರೆ ಜೀವನ ಪರ್ಯಂತ ಪಾಲಿಸುವುದು ಎಂದು ಅರ್ಥ. ಉಪನಯನ ಎಂದರೆ ಹತ್ತಿರ ಕರೆದುಕೊಳ್ಳುವುದು ಎಂದರ್ಥ.ಆಚಾರ್ಯರು ಈ ಸಂಸ್ಕಾರವನ್ನು ನೀಡಿ ಬಾಲಕ/ಬಾಲಿಕೆಯನ್ನು ಶಿಕ್ಷಣಕ್ಕಾಗಿ ತನ್ನ ಬಳಿ ಕರೆದುಕೊಳ್ಳುತ್ತಾನೆ ಇದಾದ ನಂತರ ಹನ್ನೊಂದನೆಯ ಸಂಸ್ಕಾರವೇ ವೇದಾರಂಭ.ಈಗ ಹೇಳಿ ಈ ಸಂಸ್ಕಾರ ಯಾರಿಗೆ ಬೇಡ?
-ಹರಿಹರಪುರಶ್ರೀಧರ್