Pages

Thursday, June 12, 2014

ಭಗವಂತನ ಅಸ್ತಿತ್ವದಬಗ್ಗೆ ನಿಜ ಅರಿವುಂಟುಮಾಡುವ ಕೆಲಸ ಹೆಚ್ಚು ಹೆಚ್ಚು ನಡೆಯದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ.


 ಧರ್ಮ,ದೇವರು, ಆಸ್ತಿಕತೆ,ನಾಸ್ತಿಕತೆ.......ಈ ಪದಗಳೆಲ್ಲಾ ಅದೆಷ್ಟು ಅರ್ಥವನ್ನು ಕಳೆದುಕೊಂಡು ಬಿಟ್ಟಿವೆ! ಈ ಪದಗಳ ಹೆಸರಲ್ಲಿ ಅದೆಷ್ಟು ಮೋಸ,ಅನ್ಯಾಯ ನಡೆಯುತ್ತಿದೆ! ಇದೇ ವಿಷಯಗಳಲ್ಲಿ ಅದೆಷ್ಟು ಸಂಘರ್ಷಗಳು,ಹೋರಾಟಗಳು ನಡೆಯುತ್ತಿವೆ!
   ಇವು ಸಾಮಾಜಿಕ ಕಳಕಳಿ ಇರುವ ಎಲ್ಲರೂ ಚಿಂತನ-ಮಂಥನ ನಡೆಸಬೇಕಾದ ವಿಷಯಗಳು. ಯಾವ ಪೂರ್ವಾಗ್ರಹವಿಲ್ಲದೆ ಇಂದಿನ ಸಾಮಾಜಿಕ ಸ್ಥಿತಿಯ ಬಗ್ಗೆ ವಿಚಾರ  ಮಾಡೋಣ.ಯಾರೇ ಒಬ್ಬ ಈ ದೇಶದ ಪ್ರಜೆ ಮುಕ್ತವಾಗಿ ನಿಸ್ಪೃಹವಾಗಿ, ಪ್ರಾಂಜಲಮನಸ್ಸಿನಿಂದ  ನೋಡಿದಾಗ ಕಂಡುಬರುವ ಸಂಗತಿಗಳನ್ನು ಉಲ್ಲೇಖಿಸುತ್ತೇನೆ.

      ಸಧ್ಯಕ್ಕೆ ಹಿಂದೂ ಮತೀಯರಲ್ಲಿನ ಗೊಂದಲಗಳ ಬಗ್ಗೆ ಮಾತ್ರ ಇಲ್ಲಿ ಪ್ರಸ್ತಾಪ ಮಾಡಬಯಸುವೆ. ಅದರ ಅರ್ಥ ಅನ್ಯಮತಗಳಲ್ಲಿ ಈ ರೀತಿಯ ಗೊಂದಲಗಳಿಲ್ಲವೆಂದಲ್ಲ. ಆ ವಿಷಯಗಳು ಇಂದಿನ ನನ್ನ ಚಿಂತನೆಯ ವಿಷಯವಲ್ಲ.

      ದೇವರ ಬಗ್ಗೆ ಮತ್ತು  ಧರ್ಮದ ಬಗ್ಗೆ  ಎರಡು ವಿಪರೀತವಾದಗಳು, ನಡವಳಿಕೆಗಳನ್ನು ನಾವು ಕಾಣಬಹುದಾಗಿದೆ. ಒಂದು ದೇವರು ಎಂಬುದೇ ಸುಳ್ಳು. ದೇವರೇ ಇಲ್ಲ,ಇದು ಒಂದು ವಾದ. ಇದನ್ನು ವಿಚಾರವಾದ ಎಂದು ಕರೆದುಕೊಳ್ಳಲಾಗಿದೆ. ಇನ್ನೊಂದು ವಾದವಿದೆ. ಅದು ದೇವರ ಹೆಸರಿನಲ್ಲಿ ಸಮಾಜದಲ್ಲಿ ಮೌಢ್ಯವನ್ನು ಬಿತ್ತರಿಸುತ್ತಾ ನೈಜ ವಿಚಾರಗಳನ್ನು ಬದಿಗೆ ಸರಿಸಿ ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಸಮಾಜವನ್ನು ಪ್ರಪಾತಕ್ಕೆ ತಳ್ಳಿ ಅದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನರ ಗುಂಪು. ಇದರಲ್ಲಿ ಕೆಲವು ಜ್ಯೋತಿಷಿಗಳು, ಕಾವಿ ಧರಿಸಿ  ನಿಜ ಸಂನ್ಯಾಸಕ್ಕೆ ವಂಚನೆ ಮಾಡುತ್ತಿರುವ ಕೆಲವು ಬಾಬಾಗಳು, ಶಕ್ತಿಯ ಆರಾಧನೆಯ ಹೆಸರಲ್ಲಿ ವಂಚಿಸುವ ಕೆಲವರು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

      ಈ ಎರಡನೆಯ ಪಂಥವನ್ನು ಕಣ್ಮುಂದೆ ಇಟ್ಟುಕೊಂಡು ಮೊದಲಿನ ಪಂಥದವರು ನಡೆಸುತ್ತಿರುವ ದುಶ್ಕೃತ್ಯಕ್ಕೆ ತಾಜಾ ಉಧಾಹರಣೆ ಎಮ್.ಎಮ್,ಕಲ್ಬುರ್ಗಿಯವರ ಪ್ರಕರಣ. ಅನಂತಮೂರ್ತಿಯಂತವರು ಬೆಳೆಯಲು ಈ ಎರಡನೆಯ ಪಂಥದವರೇ ಕಾರಣ. ದೇವರ ವಿಗ್ರಹದ ಮೇಲೆ ಮೂತ್ರ ವಿಸರ್ಜನೆ ಮಾಡಿದೆ ! ಏನೂ ಆಗಲಿಲ್ಲ!! ಎನ್ನುವ ಈ ಮನುಷ್ಯನಿಗೆ ಜ್ಞಾನಪೀಠ ಪ್ರಶಸ್ತಿ ಕೊಡುವ ಸರ್ಕಾರ !!!

ಇಂತಾ ಪರಿಸ್ಥಿತಿಗೆ ಮುಖ್ಯಕಾರಣವೇನು ಗೊತ್ತೇ? ಧರ್ಮ ಮತ್ತು ದೇವರ ನಿಜವಾದ ಅರ್ಥವನ್ನು ತಿಳಿದುಕೊಂಡವರ ಮೌನ.

       ಸಾಮಾನ್ಯವಾಗಿ ಯಾವುದೇ ದೇವಾಲಯಗಳನ್ನು ನೋಡಿ. ಅಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಹಳ ಸುಂದರವಾಗಿ  ದೇವರ ಅಲಂಕಾರ ಮಾಡಿರಲಾಗಿರುತ್ತದೆ. ಭಕ್ತರು ಅದರಿಂದ ಆಕರ್ಷಿತರಾಗಿ ಅಲ್ಲಿ ಜಮಾಯಿಸುತ್ತಾರೆ. ದೇವರಿಗೆ  ಪೂಜೆ,ಪಂಚಾಮೃತಾಭಿಷೇಕ, ಮಂಗಳಾರತಿ,ಪ್ರಸಾದ ವಿನಿಯೋಗ ಎಲ್ಲವೂ ನಡೆಯುತ್ತದೆ. ಅಪರೂಪಕ್ಕೊಮ್ಮೆ ಅದೇ ದೇವಾಲಯದಲ್ಲಿ ಉಪನ್ಯಾಸಗಳು ನಡೆಯುತ್ತವೆ. ಒಂದೆರಡು ಗಂಟೆ ದೇವರ ನಾನಾ ಲೀಲೆಗಳ ಬಗ್ಗೆ ಉಪನ್ಯಾಸಕರು ಬಣ್ಣಿಸಿದರೂ ಕೊನೆಗೆ ಅವರ ಬಾಯಲ್ಲಿ ಅಂತಿಮ ಸತ್ಯವನ್ನು ಹೇಳದೆ ಇರಲು ಸಾಧ್ಯವಾಗುವುದಿಲ್ಲ. ಭಗವಂತ ನಿರಾಕಾರಿ, ಅವನು ಜ್ಯೋತಿ ಸ್ವರೂಪ,ನಿತ್ಯತೃಪ್ತ, ನಿತ್ಯ ಶುದ್ಧ,ಅವನು ಸರ್ವಾಂತರ್ಯಾಮಿ. ಈ ಮಾತುಗಳು ಅವರ ಬಾಯಿಂದ ಹೊರಬೀಳುತ್ತವೆ, ನಿಜ ಹೇಳಬೇಕೆಂದರೆ ಕೊನೆಯ ಅವರ ಒಂದೆರಡು ಮಾತುಗಳಿಂದ  ಅಲ್ಲಿಯವರಗೆ ಮಾಡಿದ್ದ ಉಪನ್ಯಾಸವು ತನ್ನ ಸಾರವನ್ನು ಕಳೆದುಕೊಂಡುಬಿಡುತ್ತದೆ.ಆದರೆ ಸಾಮಾನ್ಯವಾಗಿ ಜನರು ಕೊನೆಯ ಈ ಮಾತುಗಳನ್ನು  ಗಮನವಿಟ್ಟು ಕೇಳುವುದೇ ಇಲ್ಲ, ಅಲ್ಲಿಯವರಗೆ ಮಾಡಿದ್ದ ಉಪನ್ಯಾಸದಲ್ಲಿ ಹೇಳಿದ್ದ ಭಗವಂತನ ಲೀಲಾ ಪ್ರಸಂಗಗಳೇ ಅವರ ಕಣ್ಮುಂದೆ ಇರುತ್ತದೆ, ಭಗವಂತನ ಲೀಲೆಯನ್ನು ಕೇಳಿ ಅವರ ಕಿವಿ ಪಾವನವಾಯ್ತೆಂದು ಭಾವಿಸಿಬಿಟ್ಟಿರುತ್ತಾರೆ. ಆ ಸಂದರ್ಭಕ್ಕೆ ಜನರಿಗೆ  ಅಷ್ಟು ಸಾಕಾಗಿರುತ್ತದೆ.

       ಯಾರೇ ಸಾದು ಸಂತರು ಭಗವಂತನ ಬಗ್ಗೆ ಪ್ರವಚನ ನೀಡುವಾಗಲೂ ಭಗವಂತ ಸರ್ವಾಂತರ್ಯಾಮಿ,ಅವನು ನಿರಾಕಾರಿ ಎಂದೇ ಹೇಳುತ್ತಾರೆ.ಆದರೂ ಅವರ ಮಠ ಮಂದಿರಗಳಲ್ಲಿ  ಅದ್ಧೂರಿಯಾಗೇ ವಿಗ್ರಹಾರಾಧನೆ ನಡೆಯುತ್ತದೆ. ಅದೊಂದು ಶಕ್ತಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಅದರೆ ಭಗವಂತನನ್ನು ಒಂದು ವಿಗ್ರಹರೂಪದಲ್ಲಿ ಆರಾಧಿಸುವ ಆಚರಣೆ ಬೆಳೆದು ಬಂದುಬಿಟ್ಟಿದೆ. ಈ ನಂಬಿಕೆ ಗಟ್ಟಿಯಾಗಿ ಹಿಂದುಗಳಲ್ಲಿ ನೆಲೆಯೂರಿಬಿಟ್ಟಿದೆ. ಮನುಷ್ಯನಿಗೆ ಬೇಕಾಗಿರುವುದು ನೆಮ್ಮದಿ. ಅವನ ನಂಬಿಕೆಯಿಂದ ಅವನಿಗೆ ನೆಮ್ಮದಿಯು ಸಿಗುತ್ತದೆಂದಾದರೆ  ಅವನ ನೆಮ್ಮದಿಗೆ ಭಂಗ ತರುವ ಹಕ್ಕು ಯಾರಿಗೂ ಇಲ್ಲ. ಅನಂತ ಮೂರ್ತಿಯವರ ಪ್ರಕರಣದಲ್ಲಿ ಆಗಿರುವುದು ಇದೇ ತಪ್ಪು. ಅನಂತಮೂರ್ತಿಯವರ ನಂಬಿಕೆ ಅವರಿಗೆ.ಅದನ್ನು ಯಾರೂ ಪ್ರಶ್ನಿಸುತ್ತಿಲ್ಲ.ಆದರೆ ಬಹುಜನರ ನಂಬಿಕೆಗೆ ಕೊಡಲಿಪೆಟ್ಟು ಬಿದ್ದಾಗ ಸಿಡಿದೇಳದೆ ಇದ್ದಾರೆ? ಇದು ಬಹಳ ಸಹಜ ಮನೋಭಾವ.
          ಇಂತ ದೊಡ್ದವರೆನಿಸಿಕೊಂಡವರು ಮಾಡುವ ಈ  ದುಷ್ಟ  ಕೆಲಸದಿಂದ ಅದರ ಲಾಭ ಪಡೆಯುವವರು ಯಾರು ಗೊತ್ತೇ? ಇಲ್ಲಿ ಪ್ರಸ್ತಾಪಿಸಿರುವ ಎರಡನೆಯ ಪಂಥದವರು!! ಇಂತಾ ಒಂದೊಂದು ಘಟನೆಗಳು ನಡೆದಾಗಲೂ ಇದರ ಸಾವಿರಪಟ್ಟು ಹೆಚ್ಚುವುದು ಮೌಢ್ಯ ಮಾತ್ರ!!

       ನಮ್ಮ ದೇಶಕ್ಕೆ ಭವ್ಯ ಪರಂಪರೆ ಇದೆ. ಸಹಸ್ರಾರು ಜನ ಋಷಿಮುನಿಗಳು  ತಪಸ್ಸು ಮಾಡಿ ಸತ್ಯದ ದರ್ಶನ ಮಾಡಿಕೊಂಡಿದ್ದಾರೆ. ಅವರಿಗಾದ ಸತ್ಯದರ್ಶನವೇ ವೇದ ಎಂದು ಕರೆಯಲ್ಪಟ್ಟಿತು. ಇದು ಯಾವುದೇ ಜಾತಿ,ಮತಕ್ಕೆ ಸೀಮಿತವಲ್ಲ. ಇಡೀ ಮನುಕುಲದ ಚಿಂತನೆ ವೇದದಲ್ಲಿದೆ. ನೆಮ್ಮದಿಯ ಬಾಳಿನ ಸೂತ್ರಗಳನ್ನು ನಮ್ಮ ಋಷಿಮುನಿಗಳು ನೀಡಿದ್ದಾರೆ.  ನಮ್ಮ ಋಷಿಮುನಿಗಳು ಕೊಟ್ಟ ಒಂದೆರಡು ಚಿಂತನೆಗಳನ್ನು ಸ್ಮರಿಸೊಣ..............

ಏಕಂ ಸತ್ ವಿಪ್ರಾ ಬಹುದಾ ವದಂತಿ 

      ಸತ್ಯ ಎಂಬುದು ಒಂದು. ವಿಶೇಷ ಪ್ರಜ್ಞಾವಂತರು ಅದನ್ನು ನಾನಾ ಹೆಸರುಗಳಿಂದ ಕರೆಯುತ್ತಾರೆ. ಅದನ್ನೇ ವಚನ ಕಾರರು "ದೇವನೊಬ್ಬ ನಾಮ ಹಲವು" ಎಂದು ಹೇಳಿದರು.

          ಯಾರೋ ಒಬ್ಬನಿಗೆ ಗಣೇಶ, ಮತ್ತೊಬ್ಬನಿಗೆ ಕೃಷ್ಣ, ಇನ್ನೊಬ್ಬನಿಗೆ ದುರ್ಗಿ,ಇನ್ನು ಕೆಲವರಿಗೆ ಮಾರಮ್ಮ.ಇನ್ನು ಕೆಲವರಿಗೆ ವಿಗ್ರಹವೇ ಬೇಕಿಲ್ಲ.ಕಣ್ಮುಚ್ಚಿ ಕುಳಿತು ಅವನ ಧ್ಯಾನದಲ್ಲಿ ತಲ್ಲೀನರಾಗುತ್ತಾನೆ. ಇದೆಲ್ಲಾ ಅವರವರ ಬೌದ್ಧಿಕ ಸ್ತರಗಳು, ಅವರವರ ನಂಬಿಕೆಗಳು, ಈ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ.ಆದರೆ ನಿಜವಾಗಿ ಚರ್ಚಿಸಬೇಕಾದ್ದು ಮತ್ತು ಜಾಗೃತಿ ಮೂಡಿಸಬೇಕಾದುದು ಯಾರನ್ನು?
        ದೇವರನ್ನು ನಂಬದವರ ತಂಟೆಗೆ ಹೋಗುವ ಅಗತ್ಯವಿಲ್ಲ. ಆದರೆ ದೇವರ ಹೆಸರಲ್ಲಿ ವಂಚನೆಗೆ ಒಳಗಾಗುವವರಲ್ಲಿ ಅರಿವನ್ನು ಮೂಡಿಸುವ ಅಗತ್ಯವಿದೆ. ಅವರ ಬಗ್ಗೆ ಕನಿಕರ ಪಡಬೇಕಾಗಿದೆ. ಅವರಲ್ಲಿ ದೇವರ ಬಗ್ಗೆ   ನಂಬಿಕೆಗಿಂತಲೂ ಹೆಚ್ಚು ಭಯವು ಮನೆಮಾಡಿದೆ. ಇಂತಹ  ಭಯದಿಂದಲೇ ಅಂತವರು ಕಂಡಕಂಡಲ್ಲಿ ಕೈ ಮುಗಿಯುತ್ತಾರೆ! ಸಿಕ್ಕ ಬಾಬಾ ಗಳ ಕಾಲಿಗೆ ಬೀಳುತ್ತಾರೆ. ಅವರಲ್ಲಿ ಹೆದರಿಕೆ! ಈ ಬಾಬಾ ಏನಾದರೂ ತೊಂದರೆ ಮಾಡಿ ಬಿಟ್ಟರೆ! ದೇವರು ನಮ್ಮ ಮೇಲೆ ಸಿಟ್ಟಾಗಿ ಬಿಟ್ಟರೆ!!
ಇದಕ್ಕೆ ತಾಜಾ ಉಧಾಹರಣೆಯಂತೆ  ಇತ್ತೀಚೆಗೆ ನಡೆದಿರುವ ಹಲವು ಕೆಟ್ಟಘಟನೆಗಳು ನಮ್ಮ ಕಣ್ ತೆರಸಬೇಕು. 

ಹಳ್ಳಿಯ ಮುಗ್ಧಬಾಲಿಕೆಯೊಬ್ಬಳು  ಅನಾರೋಗ್ಯ ಪೀಡಿತಳಾಗುತ್ತಾಳೆ. ಒಬ್ಬ ಜ್ಯೋತಿಷಿಯ ಹತ್ತಿರ ಆಕೆಯನ್ನು ಕರೆದುಕೊಂಡು ಹೋಗುತ್ತಾರೆ. ತಂದೆ ತಾಯಿಯರನ್ನು ಮನೆಗೆ ಕಳಿಸಿ ತಾನು ಆ ಬಾಲಿಕೆಗೆ ವಿಶೇಷ ಚಿಕಿತ್ಸೆಯನ್ನು ಕೊಡುವ ಹೆಸರಲ್ಲಿ ತನ್ನ ಕೆಟ್ಟ ಕಾಮಕ್ಕೆ ಆ ಬಾಲಿಕೆಯನ್ನು ಬಲಿತೆಗೆದುಕೊಳ್ಳುತ್ತಾನೆ.ಇಂತಾ ಎಷ್ಟು ಘಟನೆಗಳು ಬೇಕು!!!!

        ಅಂತಾ ಮುಗ್ಧರಲ್ಲಿ ತಿಳಿದವರು ಧೈರ್ಯವನ್ನು ತುಂಬುವ ನಿಜದ ಅರಿವುಂಟು ಮಾಡಿಸುವ ಕೆಲಸವನ್ನು ಮಾಡಬೇಡವೇ? ಈ ಜಾಗೃತಿಯ ಕೆಲಸ ಮಾಡಲು   ವೇದದ ಅರಿವು ಬೇಕು.

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್ ||


       ನಮ್ಮ ಋಷಿಮುನಿಗಳ ಚಿಂತನೆ ನೋಡಿ ಹೇಗಿದೆ! ಎಲ್ಲರೂ ಸುಖವಾಗಿರಲಿ. ಎಲ್ಲರೂ ಆರೋಗ್ಯವಂತರಾಗಿರಲಿ.ಯಾರಿಗೂ ದುಃಖವು ಬರುವುದು ಬೇಡ. ಎಲ್ಲಾ ಎಂದರೆ ಯಾರು? ಕೇವಲ ನಮ್ಮ ಮನೆಯವರೇ? ನಮ್ಮೂರಿನವರೇ? ನಮ್ಮ ದೇಶದವರೇ? ಅಲ್ಲ.ಇಡೀ ವಿಶ್ವದವರು.ಅಷ್ಟೇ ಅಲ್ಲ. ಇಡೀ ಭೂಮಂಡಲದ ಎಲ್ಲಾ ಜೀವಿಗಳೂ ಸುಖವಾಗಿರಲೆಂಬುದು ನಮ್ಮ ನಮ್ಮ ಋಷಿಮುನಿಗಳ ಆಶಯ. ಕಾರಣ ಅಣು ರೇಣುತೃಣ ಕಾಷ್ಟಗಳಲ್ಲೂ ಭಗವಂತನಿದ್ದಾನೆಂದು ಅವರಿಗೆ ಗೊತ್ತಿತ್ತು. ಈ ಚಿಂತನೆಯು ಮಾನವರಲ್ಲಿ ಬೆಳೆಯುವವರೆಗೂ  ಜ್ಯೋತಿಷಿಯ ಅತ್ಯಾಚಾರಕ್ಕೆ ಬಲಿಯಾದ ಬಾಲಿಕೆಯಂತವರೂ, ವಿಗ್ರಹದ ಮೇಲೆ ಮೂತ್ರ ಮಾಡುವ ದುಷ್ಟ ಚಿಂತನೆಯ ವಿಕೃತ ಸ್ವಭಾವದ ಜನರೂ ಇದ್ದೇ ಇರುತ್ತಾರೆ. ಭಗವಂತನ ಅಸ್ತಿತ್ವದಬಗ್ಗೆ ನಿಜ ಅರಿವುಂಟುಮಾಡುವ ಕೆಲಸ ಹೆಚ್ಚು ಹೆಚ್ಚು ನಡೆಯದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ.  ಭಗವಂತನ ನಿರಾಕರಣೆ ಮತ್ತು ಭಗವಂತನ ಬಗೆಗಿನ ಮೌಢ್ಯ ಎರಡೂ ವಿಚಾರದಲ್ಲಿ ಜಾಗೃತಿಯುಂಟಾಗಿ ನಿಜವ ಅರಿಯುವ ಕೆಲಸ ಆಗಬೇಕಾಗಿದೆ. ಅದು ಜಗತ್ತಿನ ಮೊಟ್ಟಮೊದಲ ಸಾಹಿತ್ಯವಾದ ವೇದದ ಅರಿವಿನಿಂದ ಮಾತ್ರ ಸಾಧ್ಯ.

No comments:

Post a Comment