Pages

Monday, July 28, 2014

ಹಾಸನದ ವೇದಭಾರತಿ ಸತ್ಸಂಗದಲ್ಲಿ -ಭಜನ್

ಹಾಸನದ ವೇದಭಾರತಿಯ ಆಶ್ರಯದಲ್ಲಿ ನಿತ್ಯವೂ ಸಂಜೆ 6.00 ರಿಂದ 7.00 ರ ವರಗೆ ನಡೆಯುವ ಸತ್ಸಂಗದಲ್ಲಿ ಈ ಭಜನೆಯನ್ನೂ ಕೂಡ ಹಾಡುವೆವು.
 


ಭಜನ್ -೧

ಜ್ಯೋತೀಸ್ವರೂಪ ಭಗವನ್ | ಆ ದಿವ್ಯ ಜ್ಯೋತಿ ನೀಡು |
ಈ ತಿಮಿರ ರಾಶಿ ಹರಿದು | ಮನವಾಗೆ ಬೆಳಕ ಬೀಡು || ೧||

ಪ್ರಾಸಾದ ಕುಟಿಗಳಲ್ಲಿ | ಧನಿ ದೀನರಲ್ಲಿ ದೇವ |      
ವೈಶಮ್ಯ ದ್ವಂದ್ವದಲ್ಲಿ ನೀಡೆಮಗೆ ಸಾಮ್ಯ ಭಾವ || ೨||

ನರರೆಲ್ಲ ಸರಿಸಮಾನ | ಎಂಬೀ ಪ್ರಬುದ್ಧ ಭಾವ |    
ಉರದಲ್ಲಿ ಮೂಡುವಂತೆ| ಧೃತಿ ನೀಡು ಸತ್ಪ್ರಭಾವ || ೩||

ದೀನರ್ಗೆ ನೋವನಿತ್ತು | ಸಂಪತ್ತ ಗಳಿಸದಂತೆ |          
ನೀ ನೀಡು ಶುದ್ಧಮತಿಯಾ | ಪರಹಿಂಸೆಗೆಳೆಸದಂತೆ|| ೪||

ಮನದಲ್ಲಿ ಮಾತಿನಲ್ಲಿ | ಮೈಯಲ್ಲಿ ಸತ್ಯಮಾತ್ರ |       
ಮೊನೆವಂತೆ ಆತ್ಮಬಲವ | ನೀಡೈ ಜಗದ್ವಿಧಾತ್ರ || ೫||

ಸಲೆ ಕಷ್ಟಕೋಟಿ ಬರಲಿ |ನಮಗಾದರಾತ್ಮಧಾತಾ |         
ತಲೆ ಮಾತ್ರ ಬಾಗದಿರಲಿ | ಅನ್ಯಾಯದೆದುರು ಧಾತಾ || ೬||

ಪಾಪಾಚರಣ ವಿರಕ್ತಿ | ಜೀವಾತ್ಮರಲನುರಕ್ತಿ|          
ತಾಪಾಪಹಾರ ಶಕ್ತಿ | ನೀಡೆಮಗೆ ನಿನ್ನ ಭಕ್ತಿ || ೭||

ಬಾಧಾ ಕಠೋರ ಕ್ಲೇಶ | ಪ್ರತಿನಿತ್ಯ ಸಹಿಪೆವಾವು |         
ವೇದೋಕ್ತ ಧರ್ಮ ಮಾತ್ರ | ಬಿಡೆವಡಸಿದೊಡೆಯೆ ಸಾವು|| ೮||     



ಭಾವಾರ್ಥ

                ಹೇ ಜ್ಯೋತಿ ಸ್ವರೂಪನಾದ ಪರಮಾತ್ಮನೇ, ನೀನು ಸ್ವಯಂ ಪ್ರಕಾಶ, ಸ್ವಯಂ ಜ್ಯೋತಿ.  ನೀನು ನನಗೆ ಆ ನಿನ್ನ ದಿವ್ಯ ಪ್ರಕಾಶಮಯವಾದ ಜ್ಯೋತಿ ಸ್ವರೂಪವನ್ನು ಅನುಗ್ರಹಿಸು. ನನ್ನ ಮನದಲ್ಲಿ ಆ ನಿನ್ನ ಚೈತನ್ಯಸ್ವರೂಪವು ಕಾಣುವಂತಾಗಲಿ. ನನ್ನಲ್ಲಿರುವ ಅಜ್ಞಾನವೆಂಬ ಕತ್ತಲು ನಿವಾರಣೆಯಾಗಿ ನಿನ್ನ ಪರಂಜ್ಯೋತಿ ಸ್ವರೂಪ ಜ್ಞಾನವೆಂಬ ಬೆಳಕು ನನ್ನ ಮನದಲ್ಲಿ ಮೂಡುವಂತೆ ಅನುಗ್ರಹಿಸು.

                ಓ ದೇವನೇ, ಸರ್ವಾಂತರ್ಯಾಮಿಯಾದ ಪರಮಾತ್ಮನೇ,  ಭವ್ಯ ಭವದಲ್ಲಾಗಲಿ, ಕುಟೀರದಲ್ಲಾಗಲಿ, ಧನಿಕರಲ್ಲಾಗಲಿ, ದೀನರಲ್ಲಾಗಲಿ, ಎಲ್ಲೆಲ್ಲಿಯೂ, ಎಲ್ಲರಲ್ಲಿಯೂ, ವಿಷಮತೆಯ, ಭೇದಭಾವದ ದ್ವಂದ್ವದಲ್ಲಿಯೂ ಈ ಬಡವ, ಬಲಿದ, ಉಚ್ಛ, ನೀಚ, ಪಂಡಿತ, ಪಾಮರರೆಂಬ ವಿಷಮಭಾವವನ್ನು, ಭೇದಭಾವವನ್ನು ತೊಡೆದು ಈ ಮಾನವರೆಲ್ಲರೂ ಒಂದಾಗಿ ಬಾಳಲನುವಾಗುವ ಸಮತಾಭಾವನೆಯನ್ನು ಮಾನವರಾದ ನಮಗೆ ನೀಡು.
(ಬ್ರಹ್ಮಜ್ಞಾನ ದೊರೆತಾಗ ಶ್ರೀಮಂತ ಬಡವ ಎಂಬ ವ್ಯತ್ಯಾಸವಾಗಲಿ ಗುಡಿಸಲು ಭವನ ಎಂಬ ಅಂತರವಾಗಲಿ ಮೂಡುವುದಿಲ್ಲ. ಪರಬ್ರಹ್ಮನ ದೃಷ್ಟಿಯುಳ್ಳವನಿಗೆ ದೇಶ-ಕಾಲ, ಕೃತ-ಅಕೃತ, ದ್ವೈತ-ಅದ್ವೈತ, ಪುಣ್ಯ-ಪಾಪ, ಧರ್ಮ-ಅಧರ್ಮ, ಜನನ-ಮರಣ, ರಾಗ-ದ್ವೇಷ, ಬಂಧ-ಮೋಕ್ಷ, ಮುಂತಾದವುಗಳ್ಳಲ್ಲಿ, ದ್ವಂದ್ವ ಭಾವವಿರುವುದಿಲ್ಲ; ಅಂತಹ ಸಾಮ್ಯತಾ ಮನೋಭಾವವನ್ನು ನಮಗೆ ನೀಡು.)
       
                ಹೇ ದೇವನೇ ಎಲ್ಲಾ ಮಾನವರು ಸರಿಸಮಾನರು,  ಎಂಬ ಪ್ರಬುದ್ಧ ಭಾವವು ನಮ್ಮ  ಹೃದಯದಲ್ಲಿ ಸದಾ ಮೂಡುವಂತೆ ಧೈರ್ಯವನ್ನು ವಿವೇಕವನ್ನು, ಸತ್-ಶಕ್ತಿಯಾದ ಭಗವಂತನೇ ನೀನು ನಮಗೆ ದಯಪಾಲಿಸು.

                ಬಡವರಿಗೆ ನೋವನಿತ್ತು, ಪರರನ್ನು ಹಿಂಸಿಸಿ ಐಶ್ವರ್ಯ ಗಳಿಸದಂತಹ ಶುದ್ಧಬುದ್ಧಿಯನ್ನು ನಮಗೆ ದಯಪಾಲಿಸು.

                ಹೇ ಜಗತ್-ಸೃಷಿಕರ್ತನಾದ ಪರಮಾತ್ಮನೇ ನನ್ನ ಮನಸ್ಸಿಸಲ್ಲಿ, ಮಾತಿನಲ್ಲಿ, ಮತ್ತು ನನ್ನ ಕೃತಿಯಲ್ಲಿ ಸತ್ಯ ದೃಷ್ಟಿ, ಸತ್ಯ ಸಂಕಲ್ಪ ಮಾತ್ರ ಹುಟ್ಟುವಂತೆ ಶಕ್ತಿಯನ್ನು ನೀಡು. ಹೀಗೆ ನನ್ನ ಮನಸ್ಸಿನಲ್ಲಿರುವ ಸತ್ಯವೇ ಮಾತಾಗಿ, ಮಾತೇ ಕೃತಿಯಾಗಿ, ಹೊರಹೊಮ್ಮಲಿ.

                ನಮಗಾದರಾತ್ಮನಾದ ಒಡೆಯನೇ ಎಷ್ಟೇ ದೊಡ್ಡ ಕಷ್ಟಕೋಟಲೆಗಳು ಬಂದರೂ, ಅನ್ಯಾಯದೆದುರು ತಲೆಬಾಗುವ ಸ್ಥಿತಿ ಬರದಿರಲಿ, ಆ ಶಕ್ತಿಯನ್ನು ದಯಪಾಲಿಸು.

         ಹೇ ಪ್ರಭುವೇ ಪಾಪಚರಣೆಯಿಂದ ವಿರಕ್ತಿಯನ್ನು(ಬಿಡುಗಡೆಯನ್ನು), ಸಕಲ ಜೀವಾತ್ಮರಲ್ಲಿ ಅನುರಾಗವನ್ನು, ಪ್ರೀತಿಯನ್ನು, ತಾಪತ್ರಯಗಳನ್ನು ದೂರಮಾಡುವ ಶಕ್ತಿಯನ್ನು, ನಿನ್ನಲ್ಲಿ ಅಮಿತವಾದ ಭಕ್ತಿಯನ್ನು ನಮಗೆ ನೀಡು.
ನಮಗೆ ಒದಗಬಹುದದ ತಾಪತ್ರಯಗಳೂ ಮೂರು ವಿಧ :
 ೧) ಆಧ್ಯಾತ್ಮಿಕ : ಚಿಂತೆ, ಭಯ ಮೊದಲಾದುವುಗಳಿಂದ ಉಂಟಾಗುವ ತೊಂದರೆ.
 ೨) ಆಧಿಭೌತಿಕ : ದುರ್ಬಲನಾದವನಿಗೆ ಪ್ರಬಲನಿಂದ ಉಂಟಾಗುವ ತೊಂದರೆ.
 ೩) ಆಧಿದೈವಿಕ :ಚಂಡಮರುತ, ಭೂಕಂಪ, ಜ್ವಾಲಾಮುಖಿ, ಹಿಮಪಾತ, ಅತಿವೃಷ್ಟಿ, ಅನಾವೃಷ್ಟಿ, ಸಿಡಿಲು, ಜಲಪ್ರವಾಹ ಮುಂತಾದುವುಗಳಿಂದ ಉಂಟಾಗುವ ತೊಂದರೆ. 


                ಓ ಪರಂಜ್ಯೋತಿ ಸ್ವರೂಪನೇ ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಪ್ರತಿನಿತ್ಯ ಎಷ್ಟೇ ಕಠೋರವಾದ ನೋವು-ಕಷ್ಟ-ಕ್ಲೇಶಗಳೂ ಬಂದರೂ ನಾವು ಸಹಿಸಬಲ್ಲೆವು, ಆದರೆ ವೇದೋಕ್ತ ಧರ್ಮ ಮಾರ್ಗವನ್ನು ಬಿಡಲಾರೆವು. ವೇದೋಕ್ತ ಧರ್ಮಕ್ಕೆ ಮಾತ್ರ ಏನಾದರೂ ಚ್ಯುತಿ, ತಡೆ ಬಂದರೆ ಪ್ರಾಣತ್ಯಾಗವಾದರೂ ಚಿಂತೆಯಿಲ್ಲ, ವೇದೋಕ್ತ ಧರ್ಮವನ್ನು ಕಾಪಾಡುವೆವು ಅಂತಹ ಶಕ್ತಿಯನ್ನು ನೀನು ನಮಗೆ ದಯಪಾಲಿಸು.
----------------------------------------------------------------
ಭಜನ್ -೨

ಓಂ ಜಯ್ ಜಗದೀಶ ಪಿತಾ, ಪ್ರಭು ಜಯ್ ಜಗದೀಶ ಪಿತಾ |
ವಿಶ್ವ ವಿರಂಚ ವಿಧಾತಾ, ಜಗತ್ರಾತಾ ಸವಿತಾ || ಓಂ||

ಅನಂತ,ಅನಾದಿ,ಅಜನ್ಯಾ, ಅವಿಚಲ ಅವಿನಾಶೀ|
ಸತ್ಯ ಸನಾತನ ಸ್ವಾಮೀ, ಶಂಕರ ಸುಖರಾಶೀ || ಓಂ||

ಸೇವಕಜನ ಸುಖದಾಯಕ, ಜನನಾಯಕ ತುಮ ಹೋ |
ಶುಭ ಸುಖ ಶಾಂತಿ ಸುಮಂಗಲ, ವರದಾಯಕ ತುಮ ಹೋ ||ಓಂ||

ಮೈ ಸೇವಕ ಶರಣಾಗತ, ತುಮ ಮೇರೆ ಸ್ವಾಮೀ |
ಹೃದಯಪಟಲ ಮೇ ಪ್ರಕಟೋ, ಪ್ರಭು ಅಂತರ್ಯಾಮೀ ||ಓಂ||

ಕಾಮಕ್ರೋಧಮದಮೋಹ ಕಪಟಛಲ್, ವ್ಯಾಪೇ ನಹೀ ಮನ ಮೇ |
ಲಗನ ಲಗೇ ಮಮ ಮನಕೀ, ಗುಣ ತೇರೇ ವರ್ಣನ ಮೇ ||ಓಂ|| 

ನಿತ್ಯ ನಿರಂಜನ ನಿಶಿದಿನ, ತೇರೋ ಹೀ ಜಾಪ ಕರೇ |
ತವ ಪ್ರತಾಪ ಸೇ ಸ್ವಾಮೀ ತೀನೋ ಹಿ ತಾಪ ಹರೇ ||ಓಂ||

ಪತಿತ ಉದ್ಧಾರಣ ತಾರಣ  ಶರಣಾಗತ ತೇರೀ |
ಭೂಲೇ ನ ಭಟಕೇ ಭ್ರಮಮೇ  ನಿರ್ಮಲ ಮತಿ ಮೇರೀ ||ಓಂ||

ಶುದ್ಧ ಬುದ್ಧಿ ಸೇ ಮನ ಮೇ ತೇರೋ ಹೀ ವರಣ ಕರೇ |
ಸಬ್ ವಿಧ್ ಛಲಬಲ ತಜ ಕೇ ತೇರೋ ಹೀ ಶರಣ ಪಡೇ ||ಓಂ|| 

ಭಾವಾರ್ಥ: 

ಜಗತ್ತಿಗೆ ಒಡೆಯನಾದ ತಂದೆಯೇ, ಸಮಸ್ತ ಜಗತ್ತಿನ ಪ್ರಭುವೇ, ವಿಶ್ವವನ್ನೇ ನಿರ್ಮಿಸಿದ ಬ್ರಹ್ಮನೇ, ಜಗತ್ತನ್ನು ರಕ್ಷಿಸುವ ಸೂರ್ಯನೇ ನಿನಗೆ ಜಯವಾಗಲಿ.

ಭಕ್ತನಿಂದ ಪರಮಾತ್ಮನ ಸ್ತುತಿ:
        ಪ್ರಭುವೇ ನೀನು ಆದಿ ಅಂತ್ಯಗಳಿಲ್ಲದವನೂ, ಹುಟ್ಟು ಸಾವುಗಳಿಲ್ಲದವನೂ, ಅವಿಚಲನಾಗಿರುವ ಕಾರಣ ಸರ್ವವ್ಯಾಪಿಯೂ ಅಗಿದ್ದೀ, ಒಡೆಯನೇ, ನೀನು ಸತ್ಯ ಸ್ವರೂಪಿಯೂ, ಅನಾದಿ ಕಾಲದಿಂದಲೂ ಇರುವವನೂ, ಇನ್ನು ಎಂದೆಂದಿಗೂ ಇರುವವನೂ, ಮಂಗಳಕರನೂ, ಸುಖ ಸಂತೋಷಗಳ ನಿಧಿಯೂ ನೀನಾಗಿದ್ದಿ.

        ನಿನ್ನನ್ನು ಸದಾ ಸೇವಿಸುವ (ಪೂಜಿಸುವ, ಆರಾಧಿಸುವ, ಉಪಾಸಿಸುವ)ವರಿಗೆ ಸುಖವನ್ನು ನೀಡುವವನು, ಸಮಸ್ತ ಜೀವರಾಶಿಗಳಿಗೆ ಒಡೆಯನೂ ನೀನಾಗಿದ್ದಿ, ಮಂಗಳ ಸ್ವರೂಪನೂ, ಸುಖಸ್ವರೂಪನೂ, ಶಾಂತಿ ಸ್ವರೂಪನೂ, ಬೇಕಾದ ವರಗಳನ್ನು ನೀಡುವ ವರದಾಯಕನೂ ನೀನಾಗಿದ್ದಿಯೆ.

ಭಕ್ತನ ವಿನಂತಿ:
        ಓ ನನ್ನ ಸ್ವಾಮಿಯೇ, ಒಡೆಯನೇ, ನಾನು ನಿನ್ನ ಸೇವಕನು, ನಿನ್ನನ್ನು ಶರಣುಹೊಂದಿದವನು, ನೀನಾದರೋ ಎಲ್ಲೆಲ್ಲೂ ಇರುವ ಅಂತರ್ಯಾಮಿ, ದಯಮಾಡಿ ನನ್ನ ಹೃದಯದಲ್ಲಿ ಪ್ರಕಟಗೊಂಡು ನಿನ್ನ ಸ್ವರೂಪವನ್ನು ನನಗೆ ಅನುಗ್ರಹಿಸು.

ಭಕ್ತನ ಗುಣಗಳು
        ಕಾಮ-ಕ್ರೋಧ-ಮದ-ಮೋಹ-ಕಪಟ-ಹಠ  ಮೊದಲಾದ ದುರ್ಗುಣಗಳು ನನ್ನ ಮನಸ್ಸನ್ನು ಆವರಿಸಿಲ್ಲ, ಇವುಗಳಿಗೆ ನನ್ನ ಮನದಲ್ಲಿ ಜಾಗವು ಇಲ್ಲವೇ ಇಲ್ಲ. ಇವುಗಳ ಬದಲು ನಿನ್ನ ಗುಣಗಳ ವರ್ಣನೆಯನ್ನು ಮಾಡಲು ನಿನ್ನನ್ನು ಸ್ತುತಿಸಲು, ನನ್ನ ಮನಸ್ಸಿನಲ್ಲಿ ಬಯಕೆಯುಂಟಾಗುತ್ತಿದೆ.

ಭಕ್ತನ ಕೋರಿಕೆ
        ಓಡೆಯನೇ, ನಿತ್ಯನೂ, ನಿರಂಜನನೂ, ಆದ ನಿನ್ನನ್ನು ನಾವು ಹಗಲಿರುಳು ಜಪಿಸುತ್ತೇವೆ. ನಿನ್ನ ಶಕ್ತಿಯಿಂದ ನನ್ನ ತಾಪತ್ರಯಗಳನ್ನು ದೂರಮಾಡು.

ಭಕ್ತನ ಆಸೆ   
        ಭಗವಂತನೇ, ನೀನಾದರೂ ಕಷ್ಟದಲ್ಲಿರುವವರನ್ನು ಉದ್ಧರಿಸುವವನೂ, ಶರಣಾದವರನ್ನು ರಕ್ಷಿಸಿ ಕಾಪಾಡುವವನೂಆಗಿದ್ದೀಯೆ.  ನಿನ್ನನ್ನು ನಾವು ದಾರಿತಪ್ಪಿ ಭ್ರಮೆಯಿಂದ ಮರೆಯಲಾರೆವು, ನಮ್ಮದು ನಿನ್ನನ್ನೇ ಅನುದಿನವೂ ಧ್ಯಾನಿಸುವ ನಿರ್ಮಲ ಮನಸ್ಸಾಗಿದೆ.

ಭಕ್ತನ ಸಂಕಲ್ಪ      
        ಪ್ರಭುವೇ, ಶುದ್ಧವಾದ ಬುದ್ಧಿಯಿಂದ, ಮನಃಪೂರ್ವಕವಾಗಿ ನಮ್ಮ ಮನಸ್ಸಿನಲ್ಲಿ ನಿನ್ನ ವರ್ಣನೆಯನ್ನೇ ಮಾಡುತ್ತೇವೆ. ಎಲ್ಲಾ ವಿಧವಾದ ಹಠ-ಬಲವನ್ನು ಅಮೂಗ್ರವಾಗಿ ದೂರಗೊಳಿಸಿ ನಿನ್ನನ್ನೇ ಶರಣು ಹೊಂದುತ್ತೇವೆ.             


- ಬೈರಪ್ಪಾಜಿ, ವೇದಭಾರತೀ, ಹಾಸನ

No comments:

Post a Comment