Pages

Thursday, November 27, 2014

ಜೀವನವೇದ-೪೦



      ಸೂರ್ಯನು ಜಗತ್ತಿಗೆ ಬೆಳಕು ಕೊಟ್ಟರೆ ಅವನಲ್ಲಿ ಆಶಕ್ತಿ ಕೊಟ್ಟವನಾರು?

ನಿತ್ಯವೂ ಅಗ್ನಿಹೋತ್ರವನ್ನು ಮಾಡುವಾಗ ಮಂತ್ರಗಳ ಅರ್ಥವನ್ನು ನಾವು ಸರಿಯಾಗಿ ತಿಳಿದುಕೊಂಡರೆ ಆಧ್ಯಾತ್ಮಿಕವಾಗಿ ನಾವು ಬೆಳೆಯಬಲ್ಲೆವು. ಅಗ್ನಿಹೋತ್ರವನ್ನು ಮಾಡುವಾಗ ಪಂಚಘೃತಾಹುತಿಯಾದನಂತರ ಪಠಿಸುವ ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ. 

ಓಂ ದೇವ ಸವಿತಃ ಪ್ರ ಸುವ ಯಜ್ಞಂ ಪ್ರ ಸುವ ಯಜ್ಞಪತಿಂ ಭಗಾಯ |
ದಿವ್ಯೋ ಗಂಧರ್ವಃ ಕೇತಪೂಃ ಕೇತಂ ನಃ ಪುನಾತು ವಾಚಸ್ಪತಿರ್ವಾಚಂ ನಃ ಸ್ವದತು || 
[ಯಜು ಅಧ್ಯಾಯ-೩೦ ಮಂತ್ರ-೧]
ಅನ್ವಯ :
ದೇವ = ದಿವ್ಯಸ್ವರೂಪನಾದ
ಸವಿತಃ = ಸಂಪೂರ್ಣ ಸಂಪದ್ಭರಿತ ಜಗದುತ್ಪಾದಕ ಭಗವಂತನೇ
ಯಜ್ಞಂ = ಯಜ್ಞವನ್ನು
ಪ್ರ ಸುವ = ಪ್ರಕರ್ಷವಾಗಿ ಸಂಪಾದಿಸು
ಯಜ್ಞಪತಿಂ = ಯಜ್ಞ ರಕ್ಷಕನನ್ನು
ಭಗಾಯ = ಐಶ್ವರ್ಯಕ್ಕಾಗಿ
ಪ್ರಸುವ = ಸಂಪನ್ನಗೊಳಿಸು
ದಿವ್ಯಃ = ದಿವ್ಯನೂ
ಗಂಧರ್ವಃ = ಪೃಥಿವೀಧಾರಕನಾದ ಭವಂತನು
ಕೇತಪೂಃ = ಜ್ಞಾನವನ್ನು ಪಾವನ ಗೊಳಿಸುವ ಭವಂತನು
ಕೇತಂ = ಜ್ಞಾನವನ್ನು
ನಃ = ನಮಗೆ
ಪುನಾತು = ಪವಿತ್ರಗೊಳಿಸಲಿ
ವಾಚಸ್ಪತಿಃ = ವೇದವಾಣಿಯ ಧಾರಕನಾದ ಭವಂತನು
ವಾಚಂ = ವಾಣಿಯನ್ನು
ನಃ = ನಮಗೆ
ಸ್ವದತು = ಆಸ್ವಾದಿಸಲಿ

ಭಾವಾರ್ಥ :
ದಿವ್ಯಸ್ವರೂಪನಾದ ಸಂಪೂರ್ಣ ಸಂಪದ್ಭರಿತ ಜಗದುತ್ಪಾದಕ ಭಗವಂತನೇ, ಯಜ್ಞ ರಕ್ಷಕನನ್ನು ಐಶ್ವರ್ಯಕ್ಕಾಗಿ ಸಂಪನ್ನಗೊಳಿಸು.  ದಿವ್ಯನೂ ಪೃಥಿವೀಧಾರಕನಾzವನೂ, ಜ್ಞಾನವನ್ನು ಪಾವನ ಗೊಳಿಸುವವನೂ ಆದ ಭಗವಂತನು ನಮ್ಮ  ಜ್ಞಾನವನ್ನು ಪವಿತ್ರಗೊಳಿಸಲಿ. ವೇದವಾಣಿಯ ಧಾರಕನಾದ ಭವಂತನು  ನಮ್ಮ ವಾಣಿಯನ್ನು ಮಧುರಗೊಳಿಸಲಿ.
ಅಗ್ನಿಹೋತ್ರವನ್ನು ಮಾಡುವಾಗ ಪಂಚಘೃತಾಹುತಿಯಾದನಂತರ ಸಹಜವಾಗಿ ಯಜ್ಞವು ಪ್ರಜ್ವಲಿಸುತ್ತದೆ. ಆಗ ಯಜ್ಞದ ನಾಲ್ಕೂ ದಿಕ್ಕಿನಲ್ಲಿ ಕುಳಿತಿರುವ ಋತ್ವಿಜರೆಲ್ಲರೂ ಈ ಮಂತ್ರವನ್ನು ಪಠಿಸುತ್ತಾ ಬಲದಿಂದ ಎಡಕ್ಕೆ ಉದ್ಧರಣೆಯಿಂದ ನೀರನ್ನು ಹರಿಯಬಿಡುತ್ತಾರೆ. ಇದರ ಭೌತಿಕ ಉದ್ದೇಶ ಎರಡು. ೧] ಕ್ರಿಮಿಕೀಟಗಳು ಯಜ್ಞದೊಳಕ್ಕೆ ಪ್ರವೇಶಿಸದಿರಲೆಂಬುದು            ೨] ಯಜ್ಞವೇದಿಯ ಅಕ್ಕಪಕ್ಕದಲ್ಲಿರುವ ಸಮಿತ್ತುಗಳಿಗೆ ಬೆಂಕಿಯು ವ್ಯಾಪಿಸದಿರಲೆಂಬುದು.
ಈ ಮಂತ್ರಕ್ಕೂ ಋತ್ವಿಜರು ಮಾಡುವ ಕ್ರಿಯೆಗೂ ಸಂಬಂಧವಿದೆಯೇ ಎಂದರೆ ಇಲ್ಲ ಎಂದೇ ಹೇಳಬೇಕು. ಈ ಮಂತ್ರದಲ್ಲಿರುವ ಆಧ್ಯಾತ್ಮಿಕ  ಅರ್ಥವನ್ನು ಮುಂದೆ ತಿಳಿಯೋಣ. ಆದರೆ ಯಜ್ಞದಲ್ಲಿ ತುಪ್ಪದ ಆಹುತಿಯಾದಾಗ ಯಜ್ಞವು ಪ್ರಜ್ವಲಿಸುವುದರಿಂದ ಬೆಂಕಿಯ ಕಿಡಿ ಯಜ್ಞದಿಂದ ಹೊರಗೆ ಚಿಮ್ಮುವ ಸಾಧ್ಯತೆ ಇದೆ.   ಯಜ್ಞದಿಂದ ಹೊರಸಿಡಿದ ಅಂತಾ ಕಿಡಿಗಳು ಆರಿಹೋಗಲೆಂಬುದಷ್ಟೇ ಉದ್ದೇಶ. ಈ ಮಂತ್ರವು ಯಜ್ಞದ ಸುತ್ತ ನೀರು ಹರಿಯಬಿಡಲೆಂದೇ ಇರುವ ಮಂತ್ರವೆಂದು ತಿಳಿಯಬಾರದು.
ಈ ಮಂತ್ರದ ಆಧ್ಯಾತ್ಮಿಕ ಅರ್ಥದ ಬಗ್ಗೆ ವಿಚಾರ ಮಾಡೋಣ. ಸಾಮಾನ್ಯವಾಗಿ ವೇದಮಂತ್ರಗಳಲ್ಲಿ ಭಗವಂತನನ್ನು ನೂರಾರು ನಾಮಗಳಿಂದ ಕರೆಯಲಾಗಿದೆ. ಈ ಮಂತ್ರದಲ್ಲಿ ಜಗದುತ್ಪಾದಕ ಭಗವಂತನನ್ನು ಸ್ಮರಿಸಲು ಸವಿತಃ, ದಿವ್ಯಗುಣಸಂಪನ್ನನಾದ್ದರಿಂದ ದಿವ್ಯಃ, ಪೃಥಿವೀ ಧಾರಕನಾದ್ದರಿಂದ ಗಂಧರ್ವಃ, ಜ್ಞಾನವನ್ನು ಪುನೀತಗೊಳುಸುವವನಾದ್ದರಿಂದ ಕೇತಪೂಃ, ವಾಣಿಯನ್ನು ಮಧುರಗೊಳಿಸುವನಾದ್ದರಿಂದ ವಾಚಸ್ಪತಿಃ ಎಂದು ಆಯಾ ವಿಷಯಗಳಿಗೆ ಸೂಕ್ತವಾಗಿ ಕರೆಯಲಾಗಿದೆ. ಮನುಷ್ಯರಲ್ಲಿ  ದಾನ ಮಾಡುವ ಗುಣವಿದ್ದವನನ್ನು ದಾನಿಯೆಂದೂ, ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುವವನನ್ನು ಧೈರ್ಯಗಾರನೆಂದೂ, ಕರುಣೆ ತೋರಿಸುವವನಿಗೆ ಕರುಣಾಳು ಎಂದೂ ನಾವು ಕರೆಯುವುದಿಲ್ಲವೇ? ಮನುಷ್ಯರಾದರೂ ಒಂದೊಂದು ಸ್ವಭಾವ ಒಬ್ಬೊಬ್ಬರಿಗಿರಬಹುದು. ಆದರೆ ಭಗವಂತನ ವಿಚಾರದಲ್ಲಿ   ಆಯಾಗುಣವಾಚಕಗಳಿಂದ ಒಬ್ಬನೇ ಭಗವಂತನನ್ನು  ಬೇರೆ ಬೇರೆ ಹೆಸರುಗಳಿಂದ ಕರೆಯಲಾಗಿದೆ ಅಷ್ಟೆ. 
ಅಂತೂ ಈ ಸಂದರ್ಭದಲ್ಲಿ  ನಮ್ಮ ಜ್ಞಾನವನ್ನು ಪವಿತ್ರಗೊಳಿಸು, ನಮ್ಮ ವಾಣಿಯನ್ನು ಮಧುರಗೊಳಿಸು, ಹೀಗೆ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಅಗ್ನಿಹೋತ್ರವನ್ನು ಮಾಡುವಾಗ ಪ್ರಾತಃಕಾಲದಲ್ಲಿ ನಾಲ್ಕು ತುಪ್ಪದ ಆಹುತಿಗಳನ್ನು ಕೊಡಲಾಗುತ್ತದೆ. ಆ ಸಂದರ್ಭದಲ್ಲಿ ಪಠಿಸುವ ಯಜುರ್ವೇದದ ೩ನೇ ಅಧ್ಯಾಯದ ೯ ಮತ್ತು ೧೦ನೇ ಮಂತ್ರಗಳ ಬಗ್ಗೆ ಇಲ್ಲಿ ವಿಚಾರ ಮಾಡೋಣ.
ಓಂ ಸೂರ್ಯೋಜ್ಯೋತಿರ್ಜ್ಯೋತಿಃ ಸೂರ್ಯಃ ಸ್ವಾಹಾ |
ಸೂರ್ಯನು ಜ್ಯೋತಿರ್ಯುಕ್ತನು. ಆದರೆ ಜ್ಯೋತಿರ್ಯುಕ್ತನಾದ ಆ ಭಗವಂತನು  ಆ ಸೂರ್ಯನಿಗೂ ಸೂರ್ಯನು. ಇದು ಸತ್ಯ. ಅಂದರೆ ಸೂರ್ಯನು ನಮಗೆ ಬೆಳಕು-ಶಾಖ ಕೊಡುತ್ತಾನೆ.ಆದರೆ   ಆ ಸೂರ್ಯನಿಗೆ    ಆ ಸಾಮರ್ಥ್ಯ ಕೊಟ್ಟವರಾರು? ಅವನೇ ಭಗವಂತ.ಇದು ಸತ್ಯ.
ಓಂ ಸೂರ್ಯೋ ವರ್ಚೋಜ್ಯೋತಿರ್ವರ್ಚಃ ಸ್ವಾಹಾ |
ಸೂರ್ಯನು ಬಲಪ್ರದನು.ಆದರೆ ಜ್ಯೋತಿರ್ಮಯನಾದ  ಆ ಭಗವಂತನು ಆ ಸೂರ್ಯನಿಗೂ ಬಲಪ್ರದನು.ಇದು ಸತ್ಯ. ನಮ್ಮ ಶರೀರ ಮತ್ತು ಆತ್ಮಬಲವನ್ನು ಪ್ರಕಾಶಪಡಿಸುವವನು ಸೂರ್ಯ.ಆದರೆ ಸೂರ್ಯನಿಗೆ ಆ ಶಕ್ತಿ ಕೊಡುವವನು ಭಗವಂತನೇ ಆಗಿದ್ದಾನೆ.ಇದು ಸತ್ಯ.
ಓಂ ಜ್ಯೋತಿಃ ಸೂರ್ಯಃ ಸೂರ್ಯೋ ಜ್ಯೋತಿಃ ಸ್ವಾಹಾ |
ಆ ಸೂರ್ಯನು ನಮಗೆಲ್ಲಾ ಜ್ಞಾನವನ್ನುಂಟುಮಾಡುವ ಜ್ಯೊತಿಪ್ರಭುವಾಗಿದ್ದಾನೆ. ಆ ಸೂರ್ಯನಿಗೂ ಸೂರ್ಯನಾಗಿ ಆಜ್ಯೋತಿಪ್ರಭುವಾದ ಭಗವಂತನಿದ್ದಾನೆ.ಇದು ಸತ್ರ್ಯ.
ಸಜೂರ್ದೇವೇನ ಸವಿತ್ರಾ ಸಜೂರುಷಸೇಂದ್ರವತ್ಯಾ |
ಜುಷಾಣಃ ಸೂರ್ಯೋ  ವೇತು ಸ್ವಾಹಾ ||
ಭಾವಾರ್ಥ:
  ಸೂರ್ಯೋದಯ ಸಮಯದಲ್ಲಿ  ಜಗದುತ್ಪದಕನಾದ ಆ ಭಗವಂತನು ನಮ್ಮಲ್ಲಿ ಆಧ್ಯಾತ್ಮಿಕ ಕಾಮನೆಯನ್ನು ಉದ್ದೀಪನಗೊಳಿಸಲಿ, ನಮ್ಮಲ್ಲಿ ಉತ್ಸಾಹವನ್ನು ಹೆಚ್ಚಿಸಲಿ ಎಂಬ ಭಾವನೆಯೊಂದಿಗೆ ಈ ವಿಶೇಷ ಆಹುತಿಗಳನ್ನು ಕೊಡುತ್ತೇನೆ.ಎಂಬುದು ಈ ಮಂತ್ರದ ಭಾವಾರ್ಥ.
ಅಗ್ನಿಹೋತ್ರವನ್ನು ಮಾಡುವಾಗ  ಸಾಯಂ ಕಾಲದಲ್ಲಿ ನಾಲ್ಕು ತುಪ್ಪದ ಆಹುತಿಗಳನ್ನು ಕೊಡಲಾಗುತ್ತದೆ. ಆ ಮಂತ್ರಗಳ ಬಗ್ಗೆ ಇಲ್ಲಿ ವಿಚಾರ ಮಾಡೋಣ.
ಓಂ ಅಗ್ನಿರ್ಜ್ಯೋತಿಜ್ಯೋತಿರಗ್ನಿಃ ಸ್ವಾಹಾ ||
ಅಗ್ನಿಯು ಪ್ರಕಾಶಸ್ವರೂಪನು. ಆದರೆ ಈ ಅಗ್ನಿಗೆ ಪ್ರಕಾಶಕೊಟ್ತವನು ಜ್ಯೋತಿಸ್ವರೂಪನಾದ ಆ ಭಗವಂತನು.ಇದು ಸತ್ಯ.
ಓಂ ಅಗ್ನಿರ್ವರ್ಚೋ ಜ್ಯೋತಿರ್ವರ್ಚಃ ಸ್ವಾಹಾ ||
ಅಗ್ನಿಯು ಬಲಪ್ರದನು. ಆದರೆ ಈ ಅಗ್ನಿಗೆ ಬಲವನ್ನು ಕೊಟ್ಟವನು ಜ್ಯೋತಿಸ್ವರೂಪನಾದ ಆ ಭಗವಂತನು.ಇದು ಸತ್ಯ.
ಅಗ್ನಿರ್ಜ್ಯೋತಿರ್ಜ್ಯೋತಿರಗ್ನಿಹಿಃ ಸ್ವಾಹಾ |
ಅಗ್ನಿಯು ಪ್ರಕಾಶವನ್ನು ನೀಡುವವನು, ಆದರೆ ಅಗ್ನಿಗೆ ಆ ಪ್ರಕಾಶವನ್ನು ನೀಡಿದವನು ಜ್ಯೊತಿರ್ಮಯನಾದ ಆ ಭಗವಂತನು. ಇದು ಸತ್ಯ.
ಓಂ ಸಜೂರ್ದೇವೇನ ಸವಿತ್ರಾ ಸಜೂ ರಾತ್ರೇಂದ್ರವತ್ಯಾ |
ಜುಷಾಣೋ ಅಗ್ನಿರ್ವೇತು ಸ್ವಾಹಾ ||
  ಭಾವಾರ್ಥ:
ಸೂರ್ಯಾಸ್ತ ಸಮಯದಲ್ಲಿ  ಜಗದುತ್ಪದಕನಾದ ಆ ಭಗವಂತನು ನಮ್ಮಲ್ಲಿ ಆಧ್ಯಾತ್ಮಿಕ ಕಾಮನೆಯನ್ನು ಉದ್ದೀಪನಗೊಳಿಸಲಿ, ನಮ್ಮಲ್ಲಿ ಉತ್ಸಾಹವನ್ನು ಹೆಚ್ಚಿಸಲಿ ಎಂಬ ಭಾವನೆಯೊಂದಿಗೆ ಈ ವಿಶೇಷ ಆಹುತಿಗಳನ್ನು ಅಗ್ನಿಗೆ ಕೊಡುತ್ತೇನೆ.ಎಂಬುದು ಈ ಮಂತ್ರದ ಭಾವಾರ್ಥ.
ಆಧ್ಯಾತ್ಮಿಕನೆಲೆಯಲ್ಲಿ ಈ ಮಂತ್ರಗಳನ್ನು ಅರ್ಥಮಾಡಿಕೊಳ್ಳುವುದಾದರೆ ಬೆಳಿಗ್ಗೆ ನಾವು ಸೂರ್ಯನನ್ನು ಮತ್ತು  ರಾತ್ರಿ ಅಗ್ನಿಯನ್ನು ನೋಡಿದಾಗ ನಮಗೆ  ಆಭಗವಂತನನ್ನು ನಾವು ಹೀಗೆ ಸ್ಮರಣೆ ಮಾಡಿಕೊಳ್ಳಬೇಕು  ಪ್ರಚಂಡ ಶಕ್ತಿಯನ್ನು ಹೊಂದಿರುವ ಆ ಸೂರ್ಯನಲ್ಲಿ ಈ ಪ್ರಚಂಡ ಶಕ್ತಿಗೆ ಕಾgಣರಾರು? ಅಗ್ನಿಯಲ್ಲಿ ಈ ಶಾಖವನ್ನು ಕೊಟ್ಟವನಾರು? ಹೀಗೆ ಯೋಚಿಸುವಾಗ ಆಭಗವಂತನಲ್ಲದೆ ಮತ್ತೊಬ್ಬನಿಲ್ಲ ಎನ್ನುವುದು ಮನದಟ್ಟಾಗದೆ ಇರದು. ಹೀಗೆ ಹಗಲು ರಾತ್ರಿಗಳಲ್ಲಿ ಭಗವಂತನ ಸ್ಮರಣೆ ಮಾಡುತ್ತಾ ನಮ್ಮಲ್ಲಿ ಆಧ್ಯಾತ್ಮಿಕಕಾಮನೆಯನ್ನು ಆ ಭಗವಂತನು ಉದ್ದೀಪಿಸಲಿ ಎಂಬ ಭಾವನೆಯೊಂದಿಗೆ ಈ ವಿಶೇಷ ಆಹುತಿಗಳನ್ನು ಕೊಡಬೇಕೆಂಬುದು ಉದ್ದೇಶ. 
ಹೀಗೆ ಪ್ರಾತಃಕಾಲದಲ್ಲಿ ಮತ್ತು ಸಾಯಂ ಕಾಲದಲ್ಲಿ ಆ ಭಗವಂತನು ನಮ್ಮಲ್ಲಿ ಚೈತನ್ಯವನ್ನು ಹೆಚ್ಚಿಸಲಿ, ಜಗತ್ತಿನ ಈ ಚಟುವಟಿಕೆಗಳಿಗೆಲ್ಲಾ ಆ ಭಗವಂತನೇ ಕಾರಣನೆಂಬ ವಿಶ್ವಾಸವು ನಮ್ಮಲ್ಲಿ ಗಟ್ಟಿಯಾಗುತ್ತಾಹೋಗಲಿ, ಎಂಬ ವಿಚಾರವನ್ನು ನಮ್ಮ ಮನದಲ್ಲಿ ತಂದುಕೊಳ್ಳುತ್ತಾ ವಿಶೇಷ ಆಹುತಿಗಳನ್ನು ಯಜ್ಞದಲ್ಲಿ ಕೊಡುವುದರಿಂದ ಆಧ್ಯಾತ್ಮಿಕವಾಗಿ ನಾವು ಗಟ್ಟಿಯಾಗಲು ಸಾಧ್ಯವಾಗಲಾರವೇ?
ಅಲ್ಲದೆ ಸೂರ್ಯೋದಯದಲ್ಲಿ ದಿನವು ಆರಂಭಕಾಲದಲ್ಲಿ ಆ ಭಗವಂತನ ಸ್ಮರಣೆ ಮಾಡಿ ಅಗ್ನಿಹೋತ್ರವನ್ನು ಮಾಡಿ ದಿನದ ಚಟುವಟಿಕೆಯನ್ನು ಆರಂಭಿಸಿ ಸೂರ್ಯಾಸ್ತಸಮಯದಲ್ಲಿ ಪುನಃ ಅಗ್ನಿಹೋತ್ರವನ್ನು ಮಾಡಿ ವಿಶ್ರಮಿಸಿದರೆ ಇಡೀ ದಿನವು ಉಲ್ಲಾಸವಾಗಿ ಕಳೆದು ರಾತ್ರಿ ಸುಖವಾಗಿ ನಿದ್ರೆ ಬಾರದೆ ಇರದು. ಈ ಉದ್ದೇಶದಿಂದ ನಾವು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ದಿನಕ್ಕೆ ಎರಡು ಬಾರಿ ಅಗ್ನಿಹೋತ್ರವನ್ನು ಮಾಡುವುದು ಅತ್ಯಂತ ಲಾಭದಾಯಕ ಕ್ರಿಯೆಯಾಗಿದೆ.
-ಹರಿಹರಪುರಶ್ರೀಧರ್

ವೇದಭಾರತಿಯಲ್ಲಿ ಡಾ.ಜೆಸ್ಸಿ ಉಪನ್ಯಾಸ

ಅಮೆರಿಕೆಯ  ಡಾ. ಜೆಸ್ಸಿ ಯವರು  ಡಾ. ಗಣಪತಿ ಸ್ತಪತಿಯವರಿಂದ ಪ್ರೇರಿತರಾಗಿ  ಭಾರತೀಯ ವಾಸ್ತುಶಿಲ್ಪದಲ್ಲಿ  ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿರುವ ವ್ಯಕ್ತಿ. ವೇದಸುಧೆ ಬ್ಲಾಗ್ ಮೂಲಕ ನನ್ನ ಸಂಪರ್ಕ ಸಾಧಿಸಿ ಒಮ್ಮೆ ಬೆಂಗಳೂರಿಗೆ ಬಂದು ನನ್ನೊಡನೆ   ಪಂ.ಸುಧಾಕರಚತುರ್ವೇದಿಯವರನ್ನೂ ಮತ್ತು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರನ್ನೂ ಭೇಟಿಮಾಡಿದ್ದವರು .  ದಿನಾಂಕ 2.1.2015 ರಂದು  ಹಾಸನದ ವೇದಭಾರತಿಯು  ನಡೆಸುವ ಅಗ್ನಿಹೋತ್ರದಲ್ಲಿ ಪಾಲ್ಗೊಂಡು ಒಂದು ಉಪನ್ಯಾಸವನ್ನು ನೀಡಲಿದ್ದಾರೆ.
ಅವರ ಕಿರು ಪರಿಚಯ ಇಲ್ಲಿದೆ.
• Chancellor of the American University of Mayonic Science and Tecnology. www.aumscience.com. Teach building architecture of sthapatya veda and vaastu shastras to architects, builders, and lay people. study with the most prominent traditional Indian architect in the world, Dr. V. Ganapati Sthapati. He is the Shilpi Guru of AUM S&T and in fact the world's only recognized Shilpi Guru. Know the real and authentic Vaastu Shastras.














Saturday, November 22, 2014

വേദപുഷ്പാഞ്ജലി - ഭാഗം 3







ಈ ವೀಡಿಯೋ ದಯಮಾಡಿ ನೋಡಿ. ಜನಸಾಮಾನ್ಯರಿಗೆ ವೇದದ ಅರಿವು ಮೂಡಿಸಲು ಆಚಾರ್ಯ ರಾಜೇಶ್ ಪರಿಶ್ರಮ ಅದ್ಭುತ. ವೇದದ ಕೆಲಸವು ಆಗುತ್ತಿಲ್ಲವೆಂಬ ಅಭಿಪ್ರಾಯ ನನ್ನದಲ್ಲ. ಆದರೆ ಜಾತಿ/ಮತ/ಪಂಥ ಭೇದವಿಲ್ಲದೆ ಎಲ್ಲರಿಗೂ ವೇದದ ಅರಿವು ಮೂಡಿಸುತ್ತಿರುವ ಶ್ರೀ ರಾಜೇಶ್ ಆಚಾರ್ಯರಿಗೆ ನಮೋನಮಃ

ವೇದದ ಅರಿವು ಮೂಡಿಸುವ ಆಂದೋಲನ ಆರಂಭಿಸೋಣ ಬನ್ನಿ,

           ಕೇರಳದ ಆಚಾರ್ಯ ರಾಜೇಶ್ ಅವರ ಎಲ್ಲಾ ಕಾರ್ಯಕ್ರಮಗಳೂ ನನ್ನನ್ನು ಆಕರ್ಶಿಸುತ್ತಿವೆ. ಅವರಂತೆ ವೇದವು ಹಳ್ಳಿ ಹಳ್ಳಿಗಷ್ಟೇ ಅಲ್ಲ, ಗೊಲ್ಲರ ಹಟ್ಟಿಗೂ ಮುಟ್ಟಬೇಕಾಗಿದೆ. ಸ್ನೇಹಿತರೇ, ಹಾಸನಕ್ಕೆ ನೂರು ಕಿಲೋಮೀಟರ್ ದೂರದೊಳಗೆ ಯಾವ ಹಳ್ಳಿಯಲ್ಲಿ ಕರೆದರೂ ನಾನು ನಮ್ಮ ವೇದ ಭಾರತಿಯ ಸದಸ್ಯರೊಡನೆ ಬರಲು ಸಿದ್ಧ. ಹಣ ಖರ್ಚುಮಾಡಬೇಕಾಗಿಲ್ಲ. ಅಗ್ನಿಹೋತ್ರ ಕಲಿಕೆ, ವೇದದ ಸರಳ ಪರಿಚಯ ಕಾರ್ಯಕ್ರಮವನ್ನು ಎಲ್ಲೇ ಯೋಜಿಸಿದರೂ ನಾವು ಬರಲು ಸಿದ್ಧ. ಸಾಮಾಜಿಕ ಸಾಮರಸ್ಯಕ್ಕೆ ವೇದವು ಅತ್ಯಂತ ಸಹಕಾರಿ.ಬನ್ನಿ, ವೇದದ ಅರಿವು ಮೂಡಿಸುವ ಆಂದೋಲನ ಆರಂಭಿಸೋಣ. ನಿಮ್ಮ ಯಾವುದೇ ಸಲಹೆಯನ್ನು vedasudhe@gmail.com ಗೆ ಮೇಲ್ ಮಾಡಿ.

                    ಕೇರಳದಲ್ಲಿ ಆಚಾರ್ಯ ರಾಜೇಶ್, ಕರ್ನಾಟಕದಲ್ಲಿ ವೇದಾಧ್ಯಾಯೀ ಶ್ರೀಸುಧಾಕರಶರ್ಮ


Thursday, November 20, 2014

ಅಂತರ್ಜಾಲದಲ್ಲಿ ಉಪನ್ಯಾಸ

 ನನ್ನ ಆತ್ಮೀಯ ಗೆಳೆಯರೇ,

ಹಾಸನದ ವೇದಭಾರತಿವತಿಯು ಈಗಾಗಲೇ ಎರಡು-ಮೂರು ವರ್ಷಗಳಿಂದ " ಎಲ್ಲರಿಗಾಗಿ ವೇದ" ಎಂಬ ಉದ್ದೇಶವನ್ನಿಟ್ಟುಕೊಂಡು ನಿತ್ಯ ಸತ್ಸಂಗ ನಡೆಸುತ್ತಿದೆ. ಸತ್ಸಂಗದಲ್ಲಿ  ಜಾತಿಭೇದ ಬಿಟ್ಟು ಎಲ್ಲರೂ ಸೇರಿ ಅಗ್ನಿಹೋತ್ರ ,ವೇದಪಠಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತೀ ಬುಧವಾರ ವಿಶೇಷ ಸತ್ಸಂಗ ನಡೆಯುತ್ತಿದೆ. ಅದರಲ್ಲಿ ಯಾರದಾದರೂ  ವೇದ ಪಂಡಿತರ ಉಪನ್ಯಾಸ ಇರುತ್ತದೆ. 

ನಮಗೆಲ್ಲಾ ಪ್ರೇರಕರು ಬೆಂಗಳೂರಿನ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರು ಇನ್ನು ಕೆಲವು ದಿನ ಹೊರ ಪ್ರವಾಸ ಮಾಡುವಂತಿಲ್ಲ. ಆದರೆ ನಾವು ಅವರನ್ನು ಬಿಡುವಂತಿಲ್ಲ. ಅವರ ಮಾರ್ಗದರ್ಶನದಲ್ಲಿ ಸಾಗಬೇಕೆಂದು ಅಂತರ್ಜಾಲದ ಮೂಲಕ   ಅವರ ಉಪನ್ಯಾಸ ಕೇಳುವ ಮತ್ತು  ಅವರೊಡನೆ ಮಾತನಾಡಿ ನಮ್ಮ ಸಮಸ್ಯೆಗಳಿಗೆ ಉತ್ತರ ಪಡೆಯುವ    ದಿಕ್ಕಿನಲ್ಲಿ ಆಲೋಚನೆ ನಡೆಸಿದ್ದೇವೆ. ವಾರದಲ್ಲಿ ಎರಡು ದಿನ ಆನ್ ಲೈನ್  ಪಾಠಮಾಡಲು ಅವರು ಒಪ್ಪಿದ್ದಾರೆ. ಅಲ್ಲದೆ ಜಗತ್ತಿನಲ್ಲಿ ಅಲ್ಲಲ್ಲಿ ಚದುರಿಹೋಗಿರುವ  ಉಪನ್ಯಾಸಕರಿಂದಲೂ ಉಪನ್ಯಾಸ ಕೇಳಬೇಕೆಂಬ ಆಸೆಯೂ ಇದೆ. ಸ್ಕೈಪ್ ಅಥವಾ ಗೂಗಲ್ ಮೂಲಕ ಯೋಜನೆ ರೂಪಿಸಬೇಕೆಂದು ಕೊಂಡಿದ್ದೇವೆ.

ಈಗಾಗಲೇ  ಅಂತರ್ಜಾಲದ ಸಹಿತ ಕಂಪ್ಯೂಟರ್ ಸಿದ್ಧವಿದೆ. ನಮಗೀಗ ನಾವು ಸುಮಾರು ನಲವತ್ತು ಐವತ್ತು ಜನರು ನೋಡುವಂತೆ ಪ್ರೊಜೆಕ್ಟರ್ ಕೊಂಡು  ಅದನ್ನು ಕಂಪ್ಯೂಟರ್ ಗೆ ಕನೆಕ್ಟ್ ಮಾಡಬೇಕಾಗಿದೆ. 

ಈ ಬಗ್ಗೆ  ಹೆಚ್ಚು ಮಾಹಿತಿ ಇದ್ದವರು  vedasudhe@gmail.com ಗೆ ಮೇಲ್ ಮಾಡಿ   ಸಲಹೆ ಕೊಡುವಿರಾ? ಮುಂದಿನ ದಿನಗಳಲ್ಲಿ  ಹೊರಗಿರುವ ಸ್ನೇಹಿತರೂ ಸ್ಕೈಪ್/ಗೂಗಲ್ ಮೂಲಕ ಕೂಡ ಪಾಠ ಕೇಳುವ ವ್ಯವಸ್ಥೆ ಮಾಡಿಕೊಳ್ಳಬಹುದೆಂದು ಭಾವಿಸುವೆ. ಸರಿಯಾದ ಯೋಜನೆ ರೂಪಿಸಬೇಕಾಗಿದೆ. ಸಾಮಾನ್ಯವಾಗಿ ಆಗುವ ಖರ್ಚು ಮತ್ತು ಅಗತ್ಯ ಸಲಕರಣೆಗಳ ಬಗ್ಗೆ ದಯಮಾಡಿ ಸಲಹೆ ಕೊಟ್ಟು ಉಪಕರಿಸಿ.

ಅಂತೆಯೇ ಒಂದು ಸದ್ವಿಚಾರದ ಪ್ರಚಾರಕ್ಕಾಗಿ ಇರುವ vedasudhe.com ನಿರ್ವಹಣೆ ಮಾಡಲು ಯಾರಾದರೂ ಮುಂದೆ ಬಂದರೆ ಬಹಳ ಸಹಾಯವಾಗುತ್ತೆ. ತಾಂತ್ರಿಕ ಅರಿವಿನ ಕೊರತೆಯಿಂದ ಅದನ್ನು ಪೂರ್ಣ ಬಳಸಲು ಸಾಧ್ಯವಾಗಿಲ್ಲ.

ಅಂತೆಯೇ ಅಂತರ್ಜಾಲದಲ್ಲಿ ಉಪನ್ಯಾಸ ಮಾಡಲು ಆಸಕ್ತಿ ಇರುವ ಪಂಡಿತರ ಬಗ್ಗೆ ನಮಗೆ ವಿವವರ ಕೊಡಿ

-ಹರಿಹರಪುರಶ್ರೀಧರ್

ಸಂಯೋಜಕ
ವೇದಭಾರತೀ, ಹಾಸನ

Saturday, November 15, 2014

ಇಬ್ಬರು ಮಹನೀಯರ ಮಾರ್ಗದರ್ಶನದಲ್ಲಿ -ಎಲ್ಲರಿಗಾಗಿ ವೇದ

 ಕೇರಳದ ಕೆಲವು ಚಿತ್ರಗಳು!ಹಾಸನದ ಕೆಲವು ಚಿತ್ರಗಳು! ಒಂದು ಕಡೆ ಕೇರಳದ ಆಚಾರ್ಯ ರಾಜೇಶ್ ಮತ್ತೊಂದು ಕಡೆ ಬೆಂಗಳೂರಿನ ವೇದಾಧ್ಯಾಯೀ ಶ್ರೀ ಸುಧಾಕರಶರ್ಮ.

ವೇದದ ಕೆಲಸಕ್ಕೆ ಯಾವ ಗಡಿ! ಸಾಗರಗಳನ್ನೂ ದಾಟಿರುವಾಗ!!

 "ಎಲ್ಲರಿಗಾಗಿ ವೇದ " ಎಂಬ ವೇದಭಾರತಿಯ ಉದ್ದೇಶಕ್ಕೆ ಹೊಂದುವ ಕೇರಳದ ಆಚಾರ್ಯ ರಾಜೇಶ್ ಅವರ ಕೆಲಸವನ್ನು ಗಮನಿಸಿದಾಗ   ಆಚಾರ್ಯ ರಾಜೇಶ್ ಮತ್ತು ವೇದಭಾರತಿಯ ಚಿಂತನೆಗಳಿಗೆ ಸಾಮ್ಯತೆಯು ಗೊತ್ತಾಗುತ್ತದೆ.

ವೇದಭಾರತಿಯು ಅಗ್ನಿಹೋತ್ರಕ್ಕೆ ಕೊಟ್ಟಿರುವಂತೆಯೇ ಮಹತ್ವವನ್ನು ಆಚಾರ್ಯ ರಾಜೇಶ್ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿರುವುದನ್ನು ಗಮನಿಸಬಹುದು. ಅವರದು ಸುಮಾರು ಹದಿನೈದು ವರ್ಷಗಳ ಸಾಹಸ ಯಾತ್ರೆ. ವೇದಭಾರತೀ ಈಗಿನ್ನೂ ಮೂರನೇ ವರ್ಷದಲ್ಲಿ ಪದಾರ್ಪಣೆ ಮಾಡುತ್ತಿರುವ ಶಿಶು.

ಆಚಾರ್ಯರ ಮಾರ್ಗದರ್ಶನ ಪಡೆಯಲು ಯಾವ ಅಡ್ದಿಯೂ ಇಲ್ಲ. ಆಚಾರ್ಯರು  ಅಲ್ಲಿನ ದೇವಾಲಯಗಳನ್ನೇ ಕೇಂದ್ರವಾಗಿಟ್ಟು ಕೊಂಡಿದ್ದಾರೆ. ವೇದಭಾರತಿಯದೂ ಅದೇ ಪ್ರಯತ್ನ.ನಮಗೆ ಮಾರ್ಗದರ್ಶನ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು.ವೇದಭಾರತಿಗೆ ರಾ.ಸ್ವ.ಸಂಘದ ಹಿರಿಯರಾದ ಶ್ರೀ ಸು.ರಾಮಣ್ಣ ನವರ ಸಹಿತ ಹಲವರ ಮಾರ್ಗದರ್ಶನ ಸಿಕ್ಕಿದೆ. ಹುಬ್ಬಳ್ಳಿಯ ಆರ್ಷ ವಿದ್ಯಾಲಯದ ಪೂಜ್ಯ ಶ್ರೀ ಚಿದ್ರೂಪಾನಂದರೂ ಸಹ ಮಾರ್ಗದರ್ಶನ ಮಾಡುತ್ತಿದ್ದಾರೆ. ಶ್ರೀ   ರಾಮಕೃಷ್ಣ ಮಿಷನ್ ಸೇರಿದಂತೆ ಹಲವಾರು ಯತಿಗಳು ವೇದಭಾರತಿಯ ಕಾರ್ಯವನ್ನು   ಗಮನಿಸುತ್ತಿದ್ದಾರೆ.

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಅನಾರೋಗ್ಯದಿಂದ ಹೊರ ಊರುಗಳಿಗೆ ಪ್ರವಾಸ ಮಾಡುವ ಸ್ಥಿತಿಯಲ್ಲಿಲ್ಲ. ಆದರೆ ವೇದಭಾರತಿಯು ಎಲ್ಲೆ ಕಾರ್ಯಕ್ರಮಗಳನ್ನು ಆಯೋಜಿಸಿದರೂ  ಬೆಂಗಳೂರಿನ ಅವರ ಮನೆಯಲ್ಲೇ ಕುಳಿತು ದೂರವಾಣಿ ಮೂಲಕವೇ ಶರ್ಮರು ಮಾಡುವ ಉಪನ್ಯಾಸವನ್ನು  ಮೈಕ್ ಗೆ  ಸಂಪರ್ಕಿಸಿ ಕಾರ್ಯಕ್ರಮದಲ್ಲಿ ಅವರ ಪ್ರವಚನವನ್ನು ಪ್ರಸ್ತುತ ಪಡಿಸಲಾಗುತ್ತಿದೆ.
   ಜನಸಾಮಾನ್ಯರಿಗೆ ವೇದದ ಅರಿವು ಮೂಡಿಸುತ್ತಿರುವ   ಆಚಾರ್ಯ ರಾಜೇಶ್ ಮತ್ತು  ವೇದಾಧ್ಯಾಯೀ ಸುಧಾಕರ ಶರ್ಮರ  ಚಿಂತನೆಯನ್ನು ಸಾಕಾರಗೊಳಿಸುವಲ್ಲಿ ವೇದಾಭಿಮಾನಿಗಳ ಸಹಕಾರ  ಇನ್ನೂ ಹೆಚ್ಚು  ಲಭ್ಯವಾಗಲೆಂಬುದು ವೇದಭಾರತಿಯ ಅಪೇಕ್ಷೆ.

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಆರೋಗ್ಯ ಪೂರ್ಣವಾಗಿ ಸುಧಾರಿಸಿಬಿಟ್ಟರೆ ವೇದಭಾರತಿಯ ಕೆಲಸ ಇನ್ನೂ ಹೆಚ್ಚು ಊರುಗಳಿಗೆ ವಿಸ್ತರಿಸುವುದರಲ್ಲಿ ಅನುಮಾನವಿಲ್ಲ. ಅವರ ಆರೋಗ್ಯ ಸುಧಾರಿಸಲೆಂಬುದೇ ಭಗವಂತನಲ್ಲಿ ನಮ್ಮ ಪ್ರಾರ್ಥನೆ.



ಆಚಾರ್ಯ ರಾಜೇಶ್ 
ವೇದಾಧ್ಯಾಯೀ ಶ್ರೀಸುಧಾಕರಶರ್ಮ
                 

ಕೇರಳದಲ್ಲಿ  ಆಚಾರ್ಯ ರಾಜೇಶ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅಗ್ನಿಹೋತ್ರ 

ಕೇರಳದಲ್ಲಿ ಮಹಿಳೆಯರೇ ಮಾಡುತ್ತಿರುವ ಅಗ್ನಿಹೋತ್ರ

 ಆಚಾರ್ಯ ರಾಜೇಶ್ ಮಾರ್ಗದರ್ಶನದಲ್ಲಿ ಸಾಮೂಹಿಕ ಅಗ್ನಿಹೋತ್ರ

ಜಾತಿಭೇದವಿಲ್ಲದೆ ಎಲ್ಲರಿಗಾಗಿ-ದೇವಾಲಯಗಳಲ್ಲಿ ಅಗ್ನಿಹೋತ್ರ ಕೇರಳದ ದೇವಾಲಯದಲ್ಲಿ

ಹಾಸನ ವೇದಭಾರತಿಯಿಂದ ದೇವಾಲಯದಲ್ಲಿ ಸಾಮೂಹಿಕ ಅಗ್ನಿಹೋತ್ರ

ವೇದಭಾರತಿಯ ಸಾಮೂಹಿಕ ಅಗ್ನಿಹೋತ್ರದಲ್ಲಿ RSS ಹಿರಿಯರಾದ ಶ್ರೀ ಸು.ರಾಮಣ್ಣ  ಮತ್ತು    ಹುಬ್ಬಳ್ಳಿಯ ಆರ್ಷವಿದ್ಯಾಲಯದ                           ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತೀ

Sunday, November 9, 2014

Wednesday, November 5, 2014

ಚಿಕ್ಕ ಪ್ರಮಾಣದ ಸಾಮೂಹಿಕ ಅಗ್ನಿಹೋತ್ರ

ದಿನಾಂಕ 10.11.2014 ರಂದು ಮೊದಲಭಾರಿಗೆ ವೇದಭಾರತಿಯಿಂದ ಸಾಮೂಹಿಕ ಅಗ್ನಿಹೋತ್ರ ಮಾಡ  ಬೇಕಾಗಿದೆ. ಅಂದು ಭಾಗವಹಿಸುವವರೆಲ್ಲಾ ಹೊಸಬರು. ಅವರಿಂದ ಅಗ್ನಿಹೋತ್ರ ಮಾಡಿಸುವಾಗ ಅನುಸರಿಸಬೇಕಾದ ಕ್ರಮ ಹೇಗಿರಬೇಕೆಂಬುದಕ್ಕೆ ಇಂದು ಹತ್ತು ಜನರು ಐದು ಹೋಮ ಕುಂಡದಲ್ಲಿ ಒಂದು ಸ್ಯಾಂಪಲ್  ಸಾಮೂಹಿಕ ಅಗ್ನಿಹೋತ್ರವನ್ನು ನಡೆಸಿದೆವು.ಇರುವವರೆಲ್ಲಾ ಹೊಸಬರೆಂದು ಭಾವಿಸಿ ಎಲ್ಲಾ ಸೂಚನೆಗಳನ್ನು ಕೊಡುತ್ತಾ ಹೊಸಬರಿಂದ ಮಾಡಿಸುವಂತೆ ಮಾಡಿಸಿದೆವು. 6.00 ಗಂಟೆಗೆ ಸರಿಯಾಗಿ ಓಂಕಾರ ನಂತರ ಈಶ್ವರಸ್ತುತಿಯೊಂದಿಗೆ ಆರಂಭವಾದ ಅಗ್ನಿಹೋತ್ರವು 6.30 ಕ್ಕೆ ಮುಗಿಯಿತು. ನಂತರ ಹತ್ತು ನಿಮಿಷ ವೇದದ ಭಜನೆ ಮಾಡಿದೆವು. ಸಾಮೂಹಿಕ ಅಗ್ನಿಹೋತ್ರದ ದಿನವೂ ಸಹ ಅರ್ಧ ಗಂಟೆ ಅಗ್ನಿಹೋತ್ರ, ಹತ್ತು ನಿಮಿಷ ಭಜನೆ ,ಹತ್ತು ನಿಮಿಷ ಸೂಚನೆಗಳು  ನಂತರ  10 ನಿಮಿಷ ಪುಸ್ತಕ ಬಿಡುಗಡೆ ,30 ನಿಮಿಷ ಸ್ವಾಮೀಜಿಯವರ ಉಪನ್ಯಾಸ ವಾದರೆ 30 ನಿಮಿಷ ಸು.ರಾಮಣ್ಣನವರ ಭಾಷಣ  ಇರುತ್ತದೆ.  ಪ್ರಸಾದ ವಿತರಣೆಯ ನಂತರ ಕಾರ್ಯಕ್ರಮ ಮುಗಿಯುತ್ತದೆ.

ಹಾಸನದಲ್ಲಿ ವೇದಭಾರತಿಯಿಂದ ಸಾಮೂಹಿಕ ಅಗ್ನಿಹೋತ್ರ



ಮನುಷ್ಯನು ಯಾವ ಜಾತಿಗಾದರೂ ಸೇರಿರಲಿ,ಯಾವ ಮತಕ್ಕಾದರೂ ಸೇರಿರಲಿ, ಯಾವ ಧರ್ಮಕ್ಕಾದರೂ ಸೇರಿರಲಿ, ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಭಗವಂತನನ್ನು ಆರಾಧಿಸದೆ ಇರಲು ಅವನಿಗೆ ಸಾಧ್ಯವಿಲ್ಲ. ದೇವರಿಲ್ಲ ಎನ್ನುವನಿಗೂ ಕೂಡ ತನ್ನ ಊಹೆಗರಿಯದ ಶಕ್ತಿಯೊಂದು ಜಗತ್ತನ್ನು ನಿಯಂತ್ರಿಸುತ್ತಿದೆ, ಎಂಬ ಅರಿವು ಆಗ್ಗಾಗೆ ಆಗುತ್ತಲೇ ಇರುತ್ತದೆ. ವೈದ್ಯೋ ನಾರಾಯಣೋ ಹರಿಃ ಎಂದರೂ ಕೂಡ ಹಲವು ವೇಳೆ ವೈದ್ಯರೂ ಕೂಡ ತಾನು ಎಲ್ಲಾ ಪ್ರಯತ್ನವನ್ನೂ ಮಾಡಿದ್ದಾಗಿದೆ, ಇನ್ನು ದೈವೇಚ್ಛೆ! ಎನ್ನುವ ಮಾತು ಕೇಳಿದ್ದೇವೆ.

ಹೌದು, ಭಗವಂತನ ಅಸ್ತಿತ್ವವನ್ನು ನಂಬದೇ ಇರುವವರೂ ಕೂಡ ತನ್ನ ಊಹೆಗೂ ಮೀರಿದ ಶಕ್ತಿಯೊಂದಿದೆ ಎಂದು ನಂಬಲೇ ಬೇಕು.ಅದನ್ನು ಅವನು ಏನೆಂದಾದರೂ ಕರೆದುಕೊಳ್ಳಲಿ. ಹಗಲು-ರಾತ್ರಿ ಎಂಬುದು ಒಮ್ಮೆಯೂ ವೆತ್ಯಾಸವಾಗಲೇ ಇಲ್ಲವಲ್ಲಾ! ಯಾರು ಈ ವ್ಯವಸ್ಥೆ ಮಾಡಿದವರು? ಎಂದಾಗ ಕೆಲವರು ಅದು ಪ್ರಕೃತಿ ಸಹಜ ವ್ಯವಸ್ಥೆ ಎಂದು ಬಿಡುತ್ತಾರೆ. ಸರಿ, ಹಾಗೆಂದರೇನು? ಅದರ ನಿಯಂತ್ರಕರಾರು? ಈ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. ಆದರೂ ದೇವರನ್ನು ನಂಬುವುದಿಲ್ಲವೆಂದು ವಾದಿಸುವವರಿದ್ದಾರೆ.ಇರಲಿ. ನಾಸ್ತಿಕವಾದ ಬೆಳೆಯಲು ಹಲವು ಭಾರಿ ಆಸ್ತಿಕರ ವಿಚಿತ್ರ ನಡವಳಿಕೆಯೂ ಕಾರಣ. ಈ ಲೇಖನದ ಉದ್ಧೇಶ ಇದಲ್ಲ.

ದೇವರನ್ನು ನಂಬುವವರು ನಿತ್ಯವೂ ದೇವರ ಆರಾಧನೆ ಮಾಡುತ್ತೇವೆ. ದೇವರಿಗೆ ನೈವೇದ್ಯ ಮಾಡುತ್ತೇವೆ. ಆ ಭಗವಂತನಿಗೆ ಅರ್ಪಿಸಿದೆವೆಂಬ ಭಾವದಿಂದ ಪ್ರಸಾದ ರೂಪದಲ್ಲಿ ಆ ನೈವೇದ್ಯವನ್ನು ನಾವೇ ಸೇವಿಸುತ್ತೇವೆ. ಇಂತಾ ಭಕ್ತಿಭಾವ ಬೇಕು.ಇರಲಿ. ಆದರೆ ನಾವು ಯಾವ ಯಾವ ರೀತಿಯಲ್ಲಿ ಭಗವಂತನನ್ನು ಆರಾಧಿಸಿದರೂ ಅವನನ್ನು ಕಲ್ಪಿಸಿಕೊಳ್ಳಬಹುದೇ ಹೊರತೂ ನೋಡಲು ಸಾಧ್ಯವಿಲ್ಲ. ಅವನು ಸರ್ವವ್ಯಾಪಿಯಾದ್ದರಿಂದ ನಮ್ಮ ಒಳಗೇ ಇರುವ ಆ ಭಗವಂತನೇ ನಮಗೆ ಬಲು ಹತ್ತಿರದವನು.

ಇನ್ನು ಅವನನ್ನು ನಮ್ಮ ಹೊರಗೆ ಕಾಣಬೇಕೆಂದರೆ ಚೇತನರೂಪದಲ್ಲಿರುವ ತಂದೆ-ತಾಯಿಯರಲ್ಲಿ,ಗುರುಗಳಲ್ಲಿ ಕಾಣಬಹುದು. ಗೋಮಾತಾ ಪ್ರತ್ಯಕ್ಷ ದೇವತಾ ಎನ್ನುತ್ತಾರೆ. ನಮಗೆ ಜನ್ಮಕೊಟ್ಟು ಸಲಹಿದ ತಂದೆತಾಯಿ, ವಿದ್ಯೆ ಕೊಟ್ಟ ಗುರುಗಳು, ನಮ್ಮ ಜೀವನಪೂರ್ಣ ಹಾಲು ಕೊಟ್ಟು ಸಲಹಿದ ಗೋಮಾತೆ ನಮಗೆ ಪ್ರತ್ಯಕ್ಷ ದೇವತೆಗಳು. ತಂದೆ,ತಾಯಿ, ಗುರು ಮತ್ತು ಗೋಮಾತೆಯ ಸೇವೆಯನ್ನು ಮಾಡುವುದೇ ಭಗವಂತನ ಪೂಜೆ.

ಪಂಚ ಭೂತಗಳಿಂದ ಈ ಶರೀರವು ಆಗಿದ್ದು ಜಗತ್ತೂ ಕೂಡ ಪಂಚಭೂತಗಳಿಂದಲೇ ಆಗಿದೆ. ಆದ್ದರಿಂದ ಈ ಪಂಚಭೂತಗಳಾದ ನೀರು,ಗಾಳಿ,ಭೂಮಿ,ಆಕಾಶ ಮತ್ತು ಅಗ್ನಿ-ಇವುಗಳೂ ದೇವತೇ ಗಳೆ ಆಗಿವೆ.

ನಮ್ಮ ಪೂರ್ವಜರಾದ ಋಷಿಮುನಿಗಳು ನಮ್ಮಂತೆ ವಿಗ್ರಹವನ್ನು ಆರಾಧಿಸಲಿಲ್ಲ. ಬದಲಿಗೆ ಪ್ರಕೃತಿಯನ್ನು ಪೂಜಿಸಿದರು. ಸೂರ್ಯನನ್ನು, ಅಗ್ನಿಯನ್ನು ಆರಾಧಿಸಿದರು. ಸೂರ್ಯನನ್ನು ಕುರಿತು ತಪಸ್ಸು ಮಾಡಿದರೆ, ಪ್ರತ್ಯಕ್ಷ ಅಗ್ನಿಯಲ್ಲಿ ಹೋಮವನ್ನು ಮಾಡಿ ಯಜ್ಞಕ್ಕೆ ಹವಿಸ್ಸನ್ನು ಅರ್ಪಿಸಿ ಅಗ್ನಿದೇವತೆಯು ಸ್ವೀಕರಿಸುವುದನ್ನು ಕಂಡರು.

ನಾವು ಬಾಯಿ ಮೂಲಕ ಸ್ವೀಕರಿಸಿದ ಆಹಾರವು ನಮ್ಮ ಜೀರ್ಣಕೋಶಗಳಲ್ಲಿ ಜೀರ್ಣವಾಗಿ ರಸವಾಗಿ ಪರಿವರ್ತಿತವಾಗಿ ರಕ್ತದ ಮೂಲಕ ಶರೀರದ ಅಂಗಾಂಗಗಳಿಗೆಲ್ಲಾ ತಲುಪುವುದಲ್ಲವೇ ಅದೇ ರೀತಿಯಲ್ಲಿ ಯಜ್ಞದಲ್ಲಿ ಕ್ರಿಯೆ ನಡೆಯುತ್ತದೆಂದರೆ ನಿಮಗೆ ಅಚ್ಚರಿಯಾಗಬಹುದು.

ಯಜ್ಞದಲ್ಲಿ ಅರ್ಪಿಸಿದ ಹವಿಸ್ಸು ಸೂಕ್ಷ್ಮಾಣುಗಳಾಗಿ ಪರಿವರ್ತಿತವಾಗಿ ಮೊದಲು ಗಾಳಿಯಲ್ಲಿ ಸೇರಿ ನಮಗೆ ಪ್ರಾಣವಾಯುವಿಗೆ ಕಾರಣವಾಗುವುದು. ಅಷ್ಟೇ ಅಲ್ಲ ನಂತರ ಮೇಘಮಂಡಲವನ್ನು ಸೇರಿ ಅದರಲ್ಲಿನ ಜಲಕ್ಕೆ ಸೇರುವುದು. ಮಳೆಯೊಡನೆ ಮತ್ತೆ ಭೂಮಿ ತಲುಪಿ ಸಸ್ಯ ಸಂಮೃದ್ಧಿಗೆ ಕಾರಣವಾಗುವುದು. ಆದುದರಿಂದಲೇ ನಮ್ಮ ಋಷಿಮುನಿಗಳು ಅಗ್ನಿರ್ವೈದೇವಾನಾಂ ಮುಖಮ್ ಎಂದರು. ಅಂದರೆ ಅಗ್ನಿಯು ದೇವತೆಗಳಿಗೆ ಬಾಯಿ ಎಂದು ಎಂದು ಪರಿಶೋಧಿಸಿ ತಿಳಿದುಕೊಂಡರು. ಒಂದು ವಿಚಾರ ಗೊತ್ತಿರಬೇಕು. ಯಜ್ಞದಲ್ಲಿ ಔಷಧೀಯ ಗುಣಗುಳುಳ್ಳ ಹವಿಸ್ಸನ್ನು ಅರ್ಪಿಸಿದಾಗ ಮಾತ್ರವೇ ವಾಯು ಶುದ್ಧಿಯಾಗುತ್ತದೆ. ಅದಕ್ಕಾಗಿಯೇ ಅರಳೀ ಸಮಿತ್ತು ಮತ್ತು ಹಸುವಿನತುಪ್ಪದ ಜೊತೆಗೆ ಹಿಮಾಲದಿಂದ ತರಿಸಿರುವ ಗಿಡಮೂಲಿಕೆಗಳ ಪುಡಿಯನ್ನು ಮಾತ್ರವೇ ವೇದಭಾರತಿಯು ನಿತ್ಯವೂ ನಡೆಸುವ ಅಗ್ನಿಹೋತ್ರದಲ್ಲಿ ಉಪಯೋಗಿಸುತ್ತೇವೆ.

ಆದ್ದರಿಂದ ಇಷ್ಟು ವೈಜ್ಞಾನಿಕವಾಗಿ ಚಿಂತನ-ಮಂಥನ ಮಾಡಿಯೇ ನಮ್ಮ ಪೂರ್ವಜರು ತಮ್ಮ ನೆಮ್ಮದಿಯ ಬದುಕಿಗಾಗಿ ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಎರಡು ಹೊತ್ತು ಅಗ್ನಿಹೋತ್ರವನ್ನು ಮಾಡುತ್ತಾ ಆರೋಗ್ಯಪೂರ್ಣ ಬದುಕು ನಡೆಸಿದರು. ಮಧ್ಯ ಕಾಲದಲ್ಲಿ ಅಗ್ನಿಹೋತ್ರವನ್ನು ಕೆಲವರು ಮಾತ್ರ ಮುಂದುವರೆಸಿದರೆ ಜನಸಾಮನ್ಯರಿಂದ ಮರೆಯಾಗಿರುವುದನ್ನು ಕಾಣುತ್ತೇವೆ. ಕಾರಣ ಏನಾದರೂ ಇರಲಿ. ಆದರೆ ಇಂದಿನ ಹಲವಾರು ಸಾಮಾಜಿಕ- ಪ್ರಾಕೃತಿಕ ಸಮಸ್ಯೆಗಳನ್ನು ನೋಡಿದಾಗ ಇವುಗಳ ಪರಿಹಾರಕ್ಕೆ ಅಗ್ನಿಹೋತ್ರವು ದೊಡ್ದ ಪ್ರಮಾಣದ ಕೊಡುಗೆ ನೀಡಬಲ್ಲದು. ಅದರ ಅಧ್ಯಯನ ಮತ್ತು ಪ್ರಯೋಗಗಳು ಸಾಕಷ್ಟು ನಡೆದು ಪಾಶ್ಚಿಮಾತ್ಯರೂ ಸಹ ಅಗ್ನಿಹೋತ್ರದ ಪ್ರಯೋಜನ ಪಡೆಯುತ್ತಿದ್ದಾರೆ.

ಯಜ್ಞದಲ್ಲಿ ಹವಿಸ್ಸನ್ನು ಅರ್ಪಿಸಿದಾಗ ಪ್ರಕೃತಿಯ ಮೇಲೆ ಒಳ್ಳೆಯ ಪರಿಣಾಮವಾಗುತ್ತದೆಂಬುದನ್ನು ಒಪ್ಪಿದರೂ ಈ ಮಂತ್ರಗಳೇಕೆ? ಹಾಗೆಯೇ ಹವಿಸ್ಸನ್ನು ಯಜ್ಞಕ್ಕೆ ಹಾಕಿದರೆ ಆಗದೇ ಎಂದು ಪ್ರಶ್ನಿಸುವವರಿದ್ದಾರೆ. ಅಗ್ನಿಹೋತ್ರದ ಆರಂಭದ ಕೆಲವು ಮಂತ್ರಗಳ ಅರ್ಥವನ್ನು ತಿಳಿದರೆ ಅದರ ಮಹತ್ವ ನಮಗೆ ಅರ್ಥವಾಗುತ್ತದೆ. ಅಗ್ನಿಹೋತ್ರದ ಬಾಹ್ಯ ಪರಿಣಾಮಗಳು ವಾಯುಮಂಡಲವನ್ನು ಶುದ್ಧಿಮಾಡಿದರೆ ಅಗ್ನಿಹೋತ್ರದಲ್ಲಿ ಹೇಳುವ ಮಂತ್ರಗಳು ನಮ್ಮ ಆಂತರ್ಯವನ್ನು ಶುದ್ಧಿಮಾಡಲು ನೆರವಾಗುತ್ತವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ವಿಚಾರ ಮಾಡೋಣ.

ಆರಂಭದಲ್ಲಿ ಆಚಮನ ಮಾಡುವಾಗ ಭಗವಂತನನ್ನು ಸ್ಮರಿಸುತ್ತಾ ತೈತ್ತರೀಯ ಅರಣ್ಯಕ ಮಂತ್ರವನ್ನು ಹೇಳುತ್ತೇವೆ.

ಓಂ ಅಮೃತೋಪಸ್ತರಣಮಸಿ ಸ್ವಾಹಾ

ಓಂ ಅಮ್ರುತಾಮಪಿಧಾನಮಸಿ ಸ್ವಾಹಾ

ಓಂ ಸತ್ಯಂ ಯಶಃ ಶ್ರೀರ್ಮಯೀ ಶ್ರೀಃ ಶ್ರಯತಾಂ ಸ್ವಾಹಾ

ಹೇ ಪ್ರಭೂ ,ನೀನು ನಮಗೆ ಆಧಾರವಾಗಿದ್ದೀಯೇ,ನೀನು ಎಲ್ಲೆಲ್ಲಿಯೂ ಆವರಿಸಿದ್ದೀಯೆ, ನನ್ನಲ್ಲಿ ಸತ್ಯವೂ, ಯಶವೂ, ಸೌಂದರ್ಯವೂ, ಸಂಪತ್ತೂ, ನೆಲೆಗೊಳ್ಳಲಿ ಎಂಬುದು ಈ ಮಂತ್ರಗಳ ಅರ್ಥ.

ನಂತರ ನಮ್ಮ ಅಂಗಾಂಗಗಳನ್ನು ಸ್ಪರ್ಶಿಸುತ್ತಾ ಈ ಕೆಳಗಿನ ಮಂತ್ರಗಳನ್ನು ಹೇಳುತ್ತೇವೆ

ಓಂ ವಾಂಙ್ಮ ಆಸ್ಯೇಸ್ತು [ ನನ್ನ ನಾಲಿಗೆಯಲ್ಲಿ ವಾಕ್‌ಶಕ್ತಿ ಸ್ಥಿರವಾಗಿರಲಿ]

ಓಂ ನಸೋರ್ಮೇ ಪ್ರಾಣೋಸ್ತು [ನನ್ನ ಮೂಗಿನಲ್ಲಿ ಪ್ರಾಣಶಕ್ತಿ ಇರಲಿ]

ಓಂ ಅಕ್ಷ್ಣೋರ್ಮೇ ಚಕ್ಷುರಸ್ತು [ನನ್ನ ಕಣ್ಣುಗಳಲ್ಲಿ ದರ್ಶನಶಕ್ತಿ ಇರಲಿ]

ಓಂ ಕರ್ಣಯೋರ್ಮೇ ಶ್ರೋತ್ರಮಸ್ತು [ನನ್ನ ಕಿವಿಗಳಲ್ಲಿ ಶ್ರವಣ ಶಕ್ತಿ ಇರಲಿ]

ಓಂ ಬಾಹ್ವೋರ್ಮೇ ಬಲಮಸ್ತು [ನನ್ನ ಬಾಹುಗಳಲ್ಲಿ ಬಲವಿರಲಿ]

ಓಂ ಊರ್ವೋರ್ಮೇ ಓಜೋಸ್ತು [ನನ್ನ ತೊಡೆಗಳಲ್ಲಿ ಓಜಸ್ಸಿರಲಿ]

ಓಂ ಅರಿಷ್ಟಾನಿ ಮೇsಂಗಾನಿ ತನೂಸ್ತನ್ವಾ ಮೇ ಸಹಸಂತು

[ನನ್ನ ಎಲ್ಲಾ ಅಂಗಾಂಗಗಳೂ ಸಮರ್ಥವಾಗಿರಲಿ]

ಅಂಗಾಂಗ ಸ್ಪರ್ಷ ಮಾಡುತ್ತಾ ಇಷ್ಟೆಲ್ಲಾ ಹೇಳಿದ ನಂತರ ಅಗ್ನಿಹೋತ್ರದಲ್ಲಿ ಹವಿಸ್ಸನ್ನು ಅರ್ಪಿಸುವಾಗ ಇದಂ ನ ಮಮ ಅಂದರೆ ಈ ಯಜ್ಞವನ್ನು ನನ್ನ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಅಂದರೆ ಸಮಾಜದ ಅಭ್ಯುದಯಕ್ಕಾಗಿ ಈ ಯಜ್ಞವನ್ನು ಮಾಡುತ್ತಿದ್ದೇನೆಂದು ಪ್ರತಿದಿನವೂ ಹೇಳುತ್ತೇವೆ. ಈ ನೆಲೆಯಲ್ಲಿ ಅಂಗಸ್ಪರ್ಷ ಮಂತ್ರಗಳನ್ನು ಅರ್ಥ ಮಾಡಿಕೊಳ್ಳೋಣ.

ಓಂ ವಾಂಙ್ಮ ಆಸ್ಯೇಸ್ತು ಎನ್ನುವ ಮಂತ್ರವನ್ನು ಹೇಳುವಾಗ ನನ್ನ ನಾಲಿಗೆಯಲ್ಲಿ ಇಂದು ಒಳ್ಳೆಯ ಮಾತುಗಳೇ ಬರಲಿ ಎಂದು ಸಂಕಲ್ಪಿಸಬೇಕು. ಅಂತೆಯೇ ಕಿವಿಯಲ್ಲಿ ಒಳ್ಳೆಯದನ್ನೇ ಕೇಳೋಣ, ಕಣ್ಣಿನಿಂದ ಒಳ್ಳೆಯದನ್ನೇ ಕಾಣೋಣ, ನಮ್ಮ ಶರೀರವು ಒಳ್ಳೆಯದನ್ನೇ ಮಾಡಲಿ ಎಂದು ಬೆಳಿಗ್ಗೆ ಒಮ್ಮೆ ಸಂಕಲ್ಪಮಾಡಿದರೆ ನಮ್ಮಿಂದ ಅಚಾತುರ್ಯ ಆಗಲಾರದಲ್ಲವೇ? ಆದ್ದರಿಂದ ಮಂತ್ರವನ್ನು ಹೇಳುತ್ತಾ ಅಗ್ನಿಹೋತ್ರವನ್ನು ಮಾಡುವುದರಿಂದ ನಮ್ಮ ಅಂತರಂಗ ಶುದ್ಧಿಯಾಗುವುದು.

ಇಂತಹ ಒಂದು ಚಿಕ್ಕದಾದ , ಸರಳವಾದ ಅಗ್ನಿಹೋತ್ರವನ್ನು ಎಲ್ಲರೂ ಕಲಿಯೋಣ ಬನ್ನಿ. ನಿತ್ಯವೂ ಮಾಡುವ ಅಗ್ನಿಹೋತ್ರಕ್ಕೆ ಮೂರ್ನಾಲ್ಕು ಚಮಚ ಹಸುವಿನ ತುಪ್ಪ ಖರ್ಚಾಗುತ್ತದಷ್ಟೆ. ಆದರೆ ಅದರ ಲಾಭ ಅಪಾರ.

ಅಗ್ನಿಹೋತ್ರವನ್ನು ಯಾವ ಜಾತಿಭೇದ,ಲಿಂಗಭೇದ,ವಯಸ್ಸಿನ ಭೇದವಿಲ್ಲದೆ ಮಾಡಬಹುದು. ಬ್ರಹ್ಮಚಾರಿಗಳೂ ಮಾಡಬಹುದು. ದಂಪತಿಗಳು ಒಟ್ಟಾಗಿ ಕುಳಿತು ಮಾಡಬಹುದು.ಅಥವಾ ಒಬ್ಬರೇ ಮಾಡಿದರೂ ಅದರ ಫಲ ಇದ್ದೇ ಇದೆ.

ದಿನಾಂಕ ೧೦.೧೧.೨೦೧೪ ರಂದು ಸೋಮವಾರ ಸಂಜೆ ೬.೦೦ ಗಂಟೆಗೆ ಹುಬ್ಬಳ್ಳಿಯ ಸ್ವಾಮಿ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಸಾಮೂಹಿಕ ಅಗ್ನಿಹೋತ್ರವನ್ನು ಹಾಸನದ ನೆಹರು ರಸ್ತೆಯಲ್ಲಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಏರ್ಪಡಿಸಲಾಗಿದೆ.ಎಲ್ಲರೂ ಉಚಿತವಾಗಿ ಪಾಲೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ದೇವಾಲಯದ ಹೊರಭಾಗದಲ್ಲಿ ಎಲ್ಲಾ ವಿವರವನ್ನೂ ಪ್ರಕಟಿಸಲಾಗಿದೆ. ಎಲ್ಲರಿಗೂ ವೇದಭಾರತಿಯು ಹೃದಯಪೂರ್ವಕ ಸ್ವಾಗತ ಕೋರುತ್ತದೆ. ಹೆಚ್ಚಿನ ಮಾಹಿತಿಗಾಗಿ ೯೬೬೩೫೭೨೪೦೬ ಸಂಪರ್ಕಿಸಿ.



-ಹರಿಹರಪುರಶ್ರೀಧರ್ಸಂಯೋಜಕ, ವೇದಭಾರತೀ, ಹಾಸನ