ಸ್ನೇಹಿತರೇ,
ಹಲವು ದಿನಗಳಿಂದ ವೇದಸುಧೆಯಲ್ಲಿ ಬರೆಯಲಾಗಿರಲಿಲ್ಲ.ಕ್ಷಮೆ ಇರಲಿ. ಇತ್ತೀಚೆಗೆ ವೇದಭಾರತಿಯ ಚಟುವಟಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ ವಿಶ್ವಹಿಂದು ಪರಿಷತ್ತಿನಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ ಸಾಮರಸ್ಯ ಪ್ರಮುಖ್ -ಹೊಣೆಯೂ ನನ್ನ ಹೆಗಲಿಗೇರಿದೆ.
ನಾನು ವಿಶ್ವಹಿಂದು ಪರಿಷತ್ತಿನ ಚಟುವಟಿಕೆಗಳಿಗೆ ಮತ್ತೊಮ್ಮೆ ಕಾಲಿಟ್ಟಾಗ " ವಿಶ್ವಹಿಂದು ಪರಿಷತ್ತಿನಲ್ಲಿ ವೇದಕ್ಕೆಲ್ಲಿ ಆಧ್ಯತೆ ಕೊಡುತ್ತಾರೆ! " ಎನ್ನುವ ಅನುಮಾನ ಮಿತ್ರರಾದ ವಾಸುದೇವರಾಯರಿಗೆ! ಅವರ ಮೂಲಕ ನಿಮಗೂ ಅನುಮಾನ ಪರಿಹರಿಸಬೇಕಾದ್ದು ನನ್ನ ಕರ್ತವ್ಯ ಅಲ್ಲವೇ?
ಹಲವರಿಗೆ ನನ್ನ ಪೂರ್ವಾಪರ ಗೊತ್ತಿದೆ, ಎಂದು ಭಾವಿಸುವೆ. ಮೂಲತಃ RSS ಕಾರ್ಯಕರ್ತನಾದ ನಾನು ತಾರುಣ್ಯದಲ್ಲಿ ನೇರವಾಗಿ ಸಂಘಕಾರ್ಯದಲ್ಲಿ ತೊಡಗಿಸಿಕೊಂಡಿದ್ದವನು ನಂತರ ವಿಶ್ವಹಿಂದು ಪರಿಷತ್ತಿನ ಹಾಸನ ಜಿಲ್ಲಾ ಕಾರ್ಯದರ್ಶಿಯಾಗಿ ಐದಾರು ವರ್ಷಗಳು ಜವಾಬ್ದಾರಿ ನಿರ್ವಹಿಸಿದೆ. ಧಾರ್ಮಿಕ ಕಾರ್ಯಕ್ರಮಗಳಿಂದ ಅಧ್ಯಾತ್ಮದತ್ತ ಒಲವು ಬಂದಿದ್ದರಿಂದ ರಾಮಕೃಷ್ಣಾಶ್ರಮ, ಚಿನ್ಮಯ ಮಿಷನ್ ಗೆ ಸೇರಿದ ಹಲವಾರು ಸ್ವಾಮೀಜಿಗಳಿಂದ ಆಗಿಂದಾಗ್ಗೆ ಉಪನ್ಯಾಸವನ್ನು ಏರ್ಪಾಡು ಮಾಡಿ ,ಈ ಕೆಲಸಗಳಲ್ಲಿ ನಾಲ್ಕಾರು ವರ್ಷ ಕಳೆಯುವಾಗ ಸಂಪರ್ಕಕ್ಕೆ ಬಂದವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರ ನೇರವಾದ ಮಾತು ನನ್ನನ್ನು ಕಟ್ಟಿ ಹಾಕಿದ್ದಾಯ್ತು. ಆದರೂ ಸಂಘದಲ್ಲಿ ಪಡೆದಿದ್ದ ಸಂಸ್ಕಾರದ ಫಲವಾಗಿ ಶರ್ಮರೊಡನೆ ಸಾಕಷ್ಟು ಚರ್ಚೆಮಾಡುತ್ತಿದ್ದರೂ ಗೊತ್ತಿಲ್ಲದೆ ಅವರನ್ನು ಅನುಸರಿಸಲು ಶುರುವಾದೆ. ಅವರ ವಿಚಾರಗಳ ಪ್ರಚಾರಕ್ಕೆಂದು ಶುರುಮಾಡಿದ್ದು "ವೇದಸುಧೆ"
ವೇದಸುಧೆಯಲ್ಲಿ ಶರ್ಮರ ವಿಚಾರದ ಜೊತೆಗೆ ನನ್ನ ಅಂತರಾಳದ ವಿಚಾರವನ್ನೂ ಬಿಚ್ಚಿಡುತ್ತಾ ಸಾಗಿದ್ದಾಯ್ತು. ನಂತರ "ಎಲ್ಲರಿಗಾಗಿ ವೇದ" ಎಂಬ ಉದ್ದೇಶವನ್ನಿಟ್ಟುಕೊಂಡು ಆರಂಭವಾದದ್ದು "ವೇದಭಾರತೀ" ಅದರ ಚಟುವಟಿಕೆ ಹೆಚ್ಚಾದಾಗ ಸಹಜವಾಗಿ ಬ್ಲಾಗ್ ನಲ್ಲಿ ಬರೆಯಲು ಸಮಯವೇ ಸಿಗಲಿಲ್ಲ.
ಯಾವಾಗ ವೇದಭಾರತಿಯ ಚಟುವಟಿಕೆಗಳು ಹೆಚ್ಚಾಯ್ತು ಸಹಜವಾಗಿ RSS ಹಿರಿಯರಿಗೂ ವೇದಭಾರತಿಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿ ಹಿರಿಯರ ಗೌರವಕ್ಕೆ ಪಾತ್ರವಾಯ್ತು. ಯಾವಾಗಲೂ ಸಂಘದ ಸಂಪರ್ಕ ಬಿಡದ ನನ್ನನ್ನು ಒಂದಲ್ಲಾ ಒಂದು ಸಂಘದ ಕಾರ್ಯಕ್ರಮಗಳಲ್ಲಿ ಬೌದ್ಧಿಕ್ [ಭಾಷಣ] ಮಾಡಲು ಕರೆಯುವುದು ಹೆಚ್ಚಾಯ್ತು. ಸಂಘದ ಹಿರಿಯರ ಸಂಪರ್ಕ ಹೆಚ್ಚಾದ ಪರಿಣಾಮ ವಿ.ಹಿಂ.ಪ ದ ಹೆಚ್ಚಿನ ಹೊಣೆಯನ್ನು ನಿರ್ವಹಿಸಬೇಕೆಂಬ ಸಲಹೆ ಬಂದಾಗ ನಿರಾಕರಿಸಲಿಲ್ಲ.
ಯಾಕೆ ಗೊತ್ತಾ?
ಅದಾಗಲೇ ವಿ.ಹಿಂ.ಪ ಪ್ರಾಂತ ಭೈಠಕ್ ಹಾಸನದಲ್ಲಾದಾಗ ವೇದಭಾರತಿಯವರು ನಡೆಸಿಕೊಟ್ಟ ಅಗ್ನಿಹೋತ್ರದಿಂದ ಅದರ ಉದ್ಘಾಟನೆಯಾಯ್ತು. ಸಂಘದ ಜ್ಯೇಷ್ಠ ಪ್ರಚಾರಕರಾದ ಶ್ರೀ ಸು.ರಾಮಣ್ಣನವರಂತೂ "ಎಲ್ಲರಿಗಾಗಿ ವೇದ" ಎಂಬ ವೇದಭಾರತಿಯ ಫಲಕವನ್ನು ನೋಡಿ ಆನಂದ ಫುಲಕಿತರಾದರು. ಅವರ ಪ್ರವಾಸದಲ್ಲೆಲ್ಲಾ ವೇದಭಾರತಿಯ ಚಟುವಟಿಕೆಗಳನ್ನು ಹೆಮ್ಮೆಯಿಂದಲೇ ಹೇಳುತ್ತಾ ಹೋದರು.
ಇದೆಲ್ಲಾ ಚಟುವಟಿಕೆಗಳಿಂದ ವೈಯಕ್ತಿಕವಾಗಿ ನನಗೂ "ಎಲ್ಲರಿಗಾಗಿ ವೇದ" ಎಂಬ ವೇದಭಾರತಿಯ ಉದ್ದೇಶವನ್ನು ವಿ.ಹಿಂ.ಪ ಮೂಲಕ ರಾಜ್ಯದಲ್ಲಿ ಪರಿಚಯಿಸಬೇಕೆಂಬ ಆಸೆ ಇತ್ತು. ಅದರಂತೆ ಕಳೆದ ತಿಂಗಳು ಶ್ರೀರಂಗಪಟ್ಟಣದಲ್ಲಿ ನಡೆದ ರಾಜ್ಯಮಟ್ಟದ ವಾನಪ್ರಸ್ಥೀ ಶಿಬಿರದಲ್ಲಿ ಅಗ್ನಿಹೋತ್ರ ಮಾಡಿ ವೇದದ ಪರಿಚಯ ಮಾಡಿಕೊಟ್ಟಿದ್ದೇವೆ. ಬರುವ ಶುಕ್ರವಾರ ಬೇಲೂರಿನಲ್ಲಿ ನಡೆಯುವ " ಗ್ರಾಮ ವಿಕಾಸ ಕಾರ್ಯಕ್ರಮದ ರಾಜ್ಯ ಮಟ್ಟದ ಶಿಬಿರದಲ್ಲಿ ಸಾಮೂಹಿಕ ಅಗ್ನಿಹೋತ್ರ ಮಾಡುತ್ತಿದ್ದೇವೆ.
ಇಷ್ಟೆಲ್ಲಾ ಬರೆಯಲು ಕಾರಣವನ್ನು ಮೊದಲೇ ತಿಳಿಸಿರುವೆ.
ಹಿಂದೂಗಳನ್ನು ಸಂಘಟಿಸಲು ಹೊರಟಿರುವ ವಿ.ಹಿಂ.ಪ ಸಹಜವಾಗಿ ನಮ್ಮ ಸಂಪ್ರದಾಯಗಳನ್ನು ಪೋಷಿಸಿಕೊಂಡೇ ನಡೆಯಬೇಕು. ಕೆಲವು ವೇದಕ್ಕೆ ಪೂರಕವಾದರೆ ಕೆಲವು ಪೂರಕವಲ್ಲ. ಆದರೂ ಮಾನವೀಯತೆಗೆ ಮಾರಕವಾಗದೆ ಸಮಾಜದಲ್ಲಿ ಸಾಮರಸ್ಯ ಉಳಿಸುವ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತಾ ಅಗ್ನಿಹೋತ್ರವನ್ನು ಹೆಚ್ಚು ಜನರು ಮಾಡುವಂತಾಗಬೇಕು, ವೇದದಲ್ಲಿನ ಮಾನವೀಯ ಮೌಲ್ಯಗಳಿಗೆ ಒತ್ತುಕೊಡುವ ಮಂತ್ರಗಳನ್ನು ಜನರಿಗೆ ಪರಿಚಯಿಸಬೇಕೆಂಬುದು ನನ್ನ ಅಂತರಾಳದ ಬಯಕೆ. ನನ್ನಾಸೆಗೆ ಭಗವಂತನ ಬೆಂಬಲವಿದೆ.ಅದರಿಂದಲೇ ವಿ.ಹಿಂ.ಪದಲ್ಲಿ ಹೆಚ್ಚಿನ ಹೊಣೆಯನ್ನು ಒಪ್ಪಿ ಕ್ರಿಯಾಶೀಲನಾಗಿರುವೆ.
No comments:
Post a Comment