Pages

Wednesday, September 23, 2015

ಹೃದಯ ಹೃದಯಗಳ ಬೆಸೆಯೋಣ

RSS ಸರಸಂಘಚಾಲಕರು ಏನು ಹೇಳಿದರೆಂಬುದು ನಮ್ಮ ಮುಖ್ಯ ಮಂತ್ರಿಗಳಿಗೆ ಅರ್ಥವಾಗಲಿಲ್ಲವೇ? ಅಥವಾ ಅದರಲ್ಲೂ ರಾಜಕೀಯವೇ? ಎಷ್ಟುದಿನ ನೀವು ಒಂದು ವರ್ಗವನ್ನು ಪ್ರತ್ಯೇಕವಾಗಿಟ್ಟುಕೊಂಡೇ ರಾಜಕಾರಣ  ಮಾಡಲು ಬಯಸುತ್ತೀರಿ ರಾಜಕೀಯ ಮುಖಂಡರೇ? ಸಾಮಾಜಿಕವಾಗಿ ಹಿಂದುಳಿದಿದ್ದ ವ್ಯಕ್ತಿಯನ್ನು ಮೇಲೇಳಲು ಬಿಡುವುದೇ ಇಲ್ಲವಲ್ಲಾ ನೀವು! ಇಷ್ಟಕ್ಕೂ  RSS ಸರಸಂಘಚಾಲಕರು ಹೇಳಿದ್ದೇನು?  ಒಂದು ವರ್ಗಕ್ಕೆ  ಶಾಶ್ವತವಾಗಿ ಮೀಸಲಾತಿಯನ್ನು ಕೊಡುತ್ತಾ ಆ ವರ್ಗವನ್ನು ಪ್ರತ್ಯೇಕವಾಗಿಟ್ಟು  ರಾಜಕಾರಣ ಮಾಡಬೇಕೋ, ಅಥವಾ ಮುಖ್ಯವಾಹಿನಿಯಲ್ಲಿ ಒಂದಾಗುವಂತೆ  ಸ್ವಾಭಿಮಾನದಿಂದ ಗೌರವದಿಂದ ಬಾಳುವಂತೆ ಮಾಡಬೇಕೋ? ಒಂದು ಕಡೆ ಮೀಸಲಾತಿಯ ಕೂಗು! ಮತ್ತೊಂದೆಡೆ ಅದನ್ನು  ವೈಭವೀಕರಿಸುತ್ತಾ ಹಿಂದುಳಿದ ವರ್ಗಕ್ಕೆ ಮಾಡುವ ಅವಮಾನ! ಮೀಸಲಾತಿ ಯಿಂದ ಶಿಕ್ಷಣ  ಪಡೆದು ಸರ್ಕಾರದಲ್ಲಿ ಒಂದು ಉನ್ನತ ಹುದ್ಧೆಯನ್ನು ಪಡೆದು ವೈದ್ಯನೋ, ಇಂಜಿನಿಯರೋ ಆದ ಮೇಲೆ ಆಕುಟುಂಬ ಸ್ವಾಭಿಮಾನದಿಂದ ಬಾಳುತ್ತಾ ಮೀಸಲಾತಿಯಿಂದ ಹೊರಬರಬಾರದೇ? ಕೇವಲ ಆ ಒಂದು ಜಾತಿಯಲ್ಲಿ ಹುಟ್ಟಿದನೆಂಬ ಕಾರಣಕ್ಕೆ ಶ್ರೀಮಂತಿಕೆ ಬಂದಮೇಲೂ ಮೀಸಲಾತಿ ಇರಲಿ, ಎಂಬುದು ಆ ವ್ಯಕ್ತಿಗೆ ಮಾಡುವ ಅವಮಾನ.ಅಷ್ಟೇ ಅಲ್ಲ  ಸರ್ಕಾರದಿಂದ ಸವಲತ್ತು ಸಿಗುತ್ತದೆಂದಾದರೆ ಎಂತಾ ಶ್ರೀಮಂತನೂ "ಬರುವುದು ಬರಲಿ" ಎನ್ನುವ ಸ್ವಭಾವ ಹೊಂದಿರುತ್ತಾನೆ. ಆದರೆ ನಾನೊಬ್ಬ ಈ ದೇಶದ ಮತ್ತು ಈ ಸಮಾಜದ ಜವಾಬ್ದಾರಿಯುತ ಪ್ರಜೆ ಎಂಬ ಭಾವನೆಯನ್ನು ಬೆಳೆಸುವುದು ಯಾವಾಗ?
ಈಗಲಾದರೂ ಮೀಸಲಾತಿಯ ಬಗ್ಗೆ ಒಂದು ಅಧ್ಯಯನ ಯಾಕೆ ನಡೆಯ ಬಾರದು? ಮೀಸಲಾತಿಯಿಂದ ಒಂದು ಉತ್ತಮ ಹುದ್ಧೆ ಪಡೆದಿರುವವರ ಶೇಕಡಾ ಎಷ್ಟು ಮಂದಿ  ಎಂಬ ಅಂಕಿ ಅಂಶ ಸಿಗಬಾರದೇ? ಹಾಗೆಯೇ ಇನ್ನೂ ಎಷ್ಟು  ಜನ ಹಿಂದುಳಿದ ಸ್ಥಿತಿಯಲ್ಲೇ ಇದ್ದಾರೆ? ಯಾಕೆ ಮುಂದುವರೆಯಲಿಲ್ಲ? ಅದಕ್ಕೆ ಕಾರಣವೇನು? ನಿಜವಾಗಿ ಮೀಸಲಾತಿಯ ಸೌಲಭ್ಯ ಎಷ್ಟು ಪಡೆದರು? ಅಥವಾ ಮೀಸಲಾತಿಯ ಹೆಸರಲ್ಲಿ ಬೇರೆ ಉಳ್ಳವರು ಸೌಲಭ್ಯ ಲಪಟಾಯಿಸಿದರೇ? ಒಂದು ಅಧ್ಯಯನ ಆಗಬಾರದೇ?
ಅಂತೆಯೇ ಮುಂದುವರೆದ ಜಾತಿಯಲ್ಲಿ ಹುಟ್ಟಿದವರಾದ ಮಾತ್ರಕ್ಕೆ ನರಕದಲ್ಲಿ ನೆರಳಬೇಕೆ? ಅವರ ಆರ್ಥಿಕ ಸ್ಥಿತಿಯ ನೈಜ ಅಧ್ಯಯನ ಆಗಬಾರದೇ?
ಸರಸಂಘಚಾಲಕರ ಮಾತಿನಲ್ಲಿ ಇದಕ್ಕಿಂತ ಹೆಚ್ಚು ಹೃದಯದ ಭಾವನೆಗಳಿದೆ. ಈ ದೇಶದ ಕಟ್ಟ ಕಡೆಯ ವ್ಯಕ್ತಿಯ  ಬದುಕಿನ ಮಟ್ಟ ಸುಧಾರಿಸಬೇಕೆಂಬ ಕಾಳಜಿ ಇದೆ. ಅದೇಕೆ ನಮ್ಮ ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ?
ಬೇಕಾಗಿರುವುದು ಹೃದಯ ಹೃದಯಗಳ ಸಂಬಂಧ! ಸಾಮಾಜಿಕ ಸಾಮರಸ್ಯ! ಕೇವಲ ಸಂಘರ್ಷವಲ್ಲ. ಬಲವಂತದಿಂದ ಕಸಿದುಕೊಳ್ಳುವ ಪ್ರವೃತ್ತಿಯಿಂದ ಸಮಾಜದಲ್ಲಿ ಶಾಶ್ವತವಾಗಿ ವೈರತ್ವ ಉಳಿಯುತ್ತದೆ. ಆದರೆ ಹೃದಯ ಪರಿವರ್ತನೆ ಮಾಡಿ ಸಮಾನ ಬದುಕು ಎಲ್ಲರಿಗೂ ಸಿಗುವಂತಾಗಬೇಕು. ಎಲ್ಲಾ ಸಾಮಾಜಿಕ ಸಂಘಟನೆಗಳೂ ಹೃದಯವಂತಿಕೆಗೆ ಗಮನ ಕೊಟ್ಟಿದ್ದೇ ಆದರೆ ಇಂದಲ್ಲಾ ಇನ್ನು ಹತ್ತು ವರ್ಷದಲ್ಲಾದರೂ ಭಾರತದ ಎಲ್ಲರೂ ಗೌರವದಿಂದ ಬದುಕು ನಡೆಸುವಂತಾಗುತ್ತದೆ. ಇಲ್ಲವಾದರೆ  ಮೇಲು-ಕೀಳನ್ನು ಶಾಶ್ವತವಾಗಿ ಸಮಾಜದಿಂದ ದೂರಮಾಡುವುದು ಮರೀಚಿಕೆಯಾಗುತ್ತದೆ.

No comments:

Post a Comment