ಅದು 1973 ಹಾಸನದಲ್ಲಿ ITI ನಲ್ಲಿ ತರಬೇತಿ ಪಡೆಯುತ್ತಿದ್ದೆ. ಸಂಘದ ಕಾರ್ಯಾಲಯದಲ್ಲಿ ವಾಸ. ಸ್ವಯಂಸೇವಕರ ಮನೆಯಲ್ಲಿ ಊಟ. ಸಂಘದ ಒಂದು ಸಾಯಂ ಶಾಖೆಯ ಮುಖ್ಯ ಶಿಕ್ಷಕ್. ಈಗಿನ ಹಾಸನ ನಗರ ಸಂಘಚಾಲಕರಾದ ಶ್ರೀ ಪಾರಸ್ ಮಲ್ ಕೂಡ ಒಂದು ಪ್ರಭಾತ್ ಶಾಖೆಯ ಮುಖ್ಯ ಶಿಕ್ಷಕ್. ಆಗ ಫುಡ್ ಇನ್ಸ್ಪೆಕ್ಟರ್ ಆಗಿದ್ದ ಕವಿ ನಾಗರಾಜ್ ಹಾಸನದ ಒಂದು ಭಾಗಕ್ಕೆ ಭಾಗ ಕಾರ್ಯವಾಹರು. ಅಲ್ಲಿಂದ ನಾಗರಾಜರ ಪರಿಚಯ. ಆನಂತರ ಬೆಂಗಳೂರು, ಕೆ,ಜಿಎಫ್ ಸುತ್ತಿ ಪುನಃ 1979 ಕ್ಕೆ ಹಾಸನ ಜಿಲ್ಲೆಗೆ ನಾ ಬಂದರೂ 1992 ಕ್ಕೆ ಹಾಸನ ನಗರಕ್ಕೆ ಬಂದಾಗ ಅವರೂ ಬೇರೆ ಸ್ಥಳಗಳಲ್ಲಿ ಸೇವೆ ಮಾಡಿ ಹಾಸನಕ್ಕೆ ಬಂದಿದ್ದರು. ಅದಕ್ಕೆ ಮುಂಚೆ ಕೆಲವು ವರ್ಷ ಹೊಳೆನರಸೀಪುರದಲ್ಲಿ ಜೊತೆಗಿದ್ದೆವು. ಆಹೊತ್ತಿಗೆ ನಾನು ಸಂಘದ ಜಿಲ್ಲಾ ಸಹಕಾರ್ಯವಾಹ, ಜಿಲ್ಲಾ ಸೇವಾ ಪ್ರಮುಖ, ವಿ.ಹಿಂಪ ಜಿಲ್ಲಾ ಕಾರ್ಯದರ್ಶಿ ಹೀಗೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದೆ. 1992 ಕ್ಕೆ ಹಾಸನ ಕ್ಕೆ ಬಂದಾಗ ನಾವಿಬ್ಬರೂ " ಸೇವಾಭಾರತಿಯ ಹೆಸರಲ್ಲಿ ಒಟ್ಟಿಗೆ ಅದ್ಭುತವಾದ ಕೆಲಸ ಮಾಡಿದೆವು. ಕಳೆದ 8-10 ವರ್ಷಗಳಿಂದ ಒಟ್ಟಾಗಿ ಚಿಂತನೆ ಶುರುಮಾಡಿ "ವೇದಭಾರತಿಯ ಆರಂಭ ಮಾಡಿದೆವು.ಅದಕ್ಕೆ ಪ್ರೇರಣೆ ಶ್ರೀ ಸುಧಾಕರ ಶರ್ಮರು ಮತ್ತು ಬೇಲೂರಿನ ವಿಶ್ವನಾಥಶರ್ಮರು.
ಹಾಸನದಲ್ಲಿ ವೇದಭಾರತಿಯಂತೂ ಮನೆಮಾತಾಗುವಂತೆ ಹತ್ತಾರು ಕಾರ್ಯಕ್ರಮ ಮಾಡಿದೆವು. ಆ ಹೊತ್ತಿಗೆ ನಾವು ಆರಂಭ ಮಾಡಿದ್ದ " ವೇದಸುಧೆ " ಬ್ಲಾಗ್ ಪ್ರಪಂಚ ದಲ್ಲಿರುವ ಹತ್ತಾರು ದೇಶಗಳಲ್ಲಿ ಅಭಿಮಾನಿಗಳನ್ನು ಹೊಂದುವಂತೆ ಬೆಳೆದು ಒಂದು ಬ್ಲಾಗ್ ನ ವಾರ್ಷಿಕೋತ್ಸವವನ್ನು ಮಾಡಿ ಇತಿಹಾಸ ನಿರ್ಮಿಸಿತು.ಈ ಏಳೆಂಟು ವರ್ಷಗಳಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ ವೇದದ ಅರಿವು ಮೂಡಿಸುವ ಮತ್ತು ಚಿಂತನೆ ಗಳನ್ನೊಳಗೊಂಡ ಕಾಲ್ಮ್ ಬರೆಯಲು ಆರಂಭಿಸಿದೆವು.ನನ್ನದು "ಜೀವನ ವೇದ " ಪುಸ್ತಕ ಬಿಡುಗಡೆಯಾದರೆ, ನಾಗರಾಜರ "ಆದರ್ಶದ ಬೆನ್ನಹತ್ತಿ" " ಮೂಢ" ಪುಸ್ತಕಗಳ ಬಿಡುಗಡೆಯಾದವು.
ಯಾಕೆ ಇಷ್ಟೆಲ್ಲಾ ಬರೆದೆ ನೆಂದರೆ ಒಂದು ವಿಚಾರವನ್ನಿಟ್ಟುಕೊಂಡು ದಶಕಗಳ ಕಾಲ ಸ್ನೇಹ ಮುಂದುವರೆಸಿಕೊಂಡು ಒಟ್ಟೊಟ್ಟಿಗೆ ಕೆಲಸ ಮಾಡುವುದು ಸುಲಭವೇನಲ್ಲ. ನಾಗರಾಜರೋ ಸಿದ್ಧಾಂತಕ್ಕೆ ಒಪ್ಪದ ವಿಚಾರವನ್ನು ನೇರವಾಗಿ ವಿರೋಧಿಸುವ ನೇರವ್ಯಕ್ತಿ. ನಾನು ಸ್ವಲ್ಪ ಫ್ಲೆಕ್ಸಿಬಲ್. ಹಾಗಾಗಿ ಚಿಕ್ಕ ಮಕ್ಕಳಂತೆ ಮುನಿಸಿ ಕೊಳ್ಳುವುದು, ಸಮಾಧಾನ ಪಟ್ಟುಕೊಳ್ಳುವುದು ಮಾಮೂಲಾಗಿತ್ತು.
ಹೀಗೆ ನಾಲ್ಕು ದಶಕಗಳಿಂದ ಒಟ್ಟಾಗಿದ್ದವರು ವೇದ ಭಾರತಿಯ ಸೇವೆಯನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಅಪೇಕ್ಷಿಸುತ್ತಿರುವ ಸಂದರ್ಭದಲ್ಲಿ ಅನಿವಾರ್ಯವಾಗಿ ಸ್ವಲ್ಪ ಸಮಯ ಬೆಂಗಳೂರಿಗೆ ಶಿಫ್ಟ್ ಆಗುತ್ತಿದ್ದಾರೆ. ತಾಯಿಯ ಆರೋಗ್ಯ ಶಿತಿಲವಾಗಿದೆ. ಅದಕ್ಕಾಗಿ ಅವರ ತಾಯಿಯ ಆರೋಗ್ಯ ಸುಧಾರಿಸಲೆಂದು ಭಗವಂತನಲ್ಲಿ ಪ್ರಾರ್ಥಿಸಿ " ಅಗ್ನಿಹೋತ್ರವನ್ನು ಇಂದು ಮಾಡಿದೆವು. ಜೊತೆಗೆ ಬೆಂಗಳೂರಿಗೆ ತಾತ್ಕಾಲಿಕವಾಗಿ ಬೆಂಗಳೂರಿಗೆ ಬೀಳ್ಕೊಟ್ಟಿದ್ದೇವೆ.
ನಾಗರಾಜ್ ಗೆ ಹೇಳುತ್ತಿರುವೆ.....
ನೀವೆಲ್ಲಿ ಹೋದರು ಬರಲೇ ಬೇಕು
ನಮ್ಮೊಡನೆ ನೀವ್ ಇರಲೇ ಬೇಕು
ವೇದ ಭಾರತಿಯ ಮರೆಯುವಂತಿಲ್ಲ
ವೇದಭಾರತಿಯೇ ನಮಗೆಲ್ಲಾ !!!!!!
No comments:
Post a Comment