Pages

Monday, February 25, 2019

ಅಡಗೂರು ಲಕ್ಷ್ಮೀ ನಾರಾಯಣ ದೇವಾಲಯ





ಜಗದ್ವಿಖ್ಯಾತ ದೇವಾಲಯಗಳ ಬೀಡು ಹಾಸನದ ಜಿಲ್ಲಾ ಕೇಂದ್ರದಿಂದ ಶಿಲಾಬಾಲಿಕೆಯರ ನಾಡು ಹಳೇಬೀಡಿಗೆ ಹೋಗುವ ಮಾರ್ಗದಲ್ಲಿ ಹಳೇಬೀಡಿಗೆ 9 ಕಿಲೋ ಮೀಟರ್ ದೂರದಲ್ಲಿರುವ ಊರು ಅಡಗೂರು.
ಚಂದ್ರದ್ರೋಣ ಪರ್ವತ ಶ್ರೇಣಿಯಿಂದ ಸುತ್ತುವರಿದ ಅಡಗೂರು ಅರೆಮಲೆನಾಡಿನ ಪುಟ್ಟಗ್ರಾಮ.

ಅಡಗೂರು ಗ್ರಾಮದ ಉತ್ತರ ಭಾಗದಲ್ಲಿ ಹೊಯ್ಸಳ ವಾಸ್ತು ವೈಭವದಿಂದ ಕೂಡಿದ ಶ್ರೀಲಕ್ಷ್ಮೀನಾರಾಯಣ ದೇವಾಲಯವಿದೆ. ಈ ದೇವಾಲಯ ಕೂಡ ಹೊಯ್ಸಳ ಶೈಲಿಯ ಇತರ ದೇವಾಲಯಗಂತೆ ನಕ್ಷತ್ರಾಕಾರದ ಜಗಲಿಯ ಮೇಲಿದೆ. ಮುಖಮಂಟಪ, ಸುಖನಾಶಿ, ಭುವನೇಶ್ವರಿ, ಗರ್ಭಗೃಹ, ಜಾಲಂದ್ರಗಳು ಇಲ್ಲಿವೆ. ಹೊರ ಬಿತ್ತಿಗಳಲ್ಲಿ ಸೂಕ್ಷ್ಮ ಕೆತ್ತನೆಗಳಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದಂತೆ ಹೊಯ್ಸಳರ ಕಾಲದ ದೇವಾಲಯ ಎಂಬುದನ್ನು ಇದು ಹೊರನೋಟದಿಂದಲೇ ಸಾಬೀತುಪಡಿಸುತ್ತದೆ.  ಮೂರು ಗರ್ಭಗುಡಿ, ಮೂರು ಗೋಪುರ ಹೊಂದಿರುವ ಈ ದೇವಾಲಯ ತ್ರಿಕೂಟಾಚಲ. ದೇವಾಲಯ ಪೂರ್ವಾಭಿಮುಖವಾಗಿದ್ದು, 10-11ನೇ ಶತಮಾನದಲ್ಲೇ ಇದರ ನಿರ್ಮಾಣವಾಗಿದೆ ಎಂದು ತಜ್ಞರು ಊಹಿಸುತ್ತಾರೆ. ಶಾಸನಗಳಲ್ಲಿ ಇಲ್ಲಿನ ದೇವರಿಗೆ ವಡಗು ನಾರಾಯಣ ಎಂಬ ಉಲ್ಲೇಖವಿದೆ.
ಮಧ್ಯದ ಪ್ರಧಾನ ಗರ್ಭಗೃಹದಲ್ಲಿ ಶ್ರೀಲಕ್ಷ್ಮೀನಾರಾಯಣನ ಮನಮೋಹಕ ವಿಗ್ರಹವಿದೆ. ಎಡ ಮತ್ತು ಬಲ ಭಾಗದಲ್ಲಿರುವ ಗರ್ಭಗೃಹಗಳಲ್ಲಿ ಶ್ರೀ ವೇಣುಗೋಪಾಲ ಮತ್ತು ತಾಯಿ ಸರಸ್ವತಿಯ ವಿಗ್ರಹಗಳಿವೆ. ಈ ಶಿಲ್ಪಗಳಲ್ಲಿ ಹೊಯ್ಸಳ ವಾಸ್ತು ಶಿಲ್ಪದ ವೈಭವ ಎದ್ದು ಕಾಣುತ್ತದೆ.
ಇತಿಹಾಸಜ್ಞರು ಊಹಿಸುವ ರೀತ್ಯ ಕದಂಬ ವಂಶದ ಪತನಾ ನಂತರ ಚದುರಿದ ಕದಂಬ ವಂಶೀಯರು ಸಕಲೇಶಪುರದಲ್ಲಿ ಬಂದು ನೆಲೆಸಿದರು. ಇವರನ್ನು ಉತ್ತರ ಕದಂಬ ವಂಶೀಯರು ಎಂದು ಹೇಳಲಾಗುತ್ತದೆ. ಇವರು 10-11ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಿಸಿದ್ದಾರೆ. ತದ ನಂತರ 12-13ನೇ ಶತಮಾನದಲ್ಲಿ ಇದನ್ನು ಹೊಯ್ಸಳರು ಪುನರ್ನಿರ್ಮಾಣ ಮಾಡಿದ್ದಾರೆ.
ಊರಿನ ಕೋಟೆಯ ದ್ವಾರಕ್ಕೆ ಹೊಂದಿಕೊಂಡಂತಿರುವ ಜಟಾಮುಡಿಧಾರಿಯಾಗಿರುವ ಶ್ರೀಗಣೇಶನ ಬೃಹತ್ ವಿಗ್ರಹವಿದೆ. ವರಪ್ರದ ಗಣಪ ಎಂದು ಖ್ಯಾತನಾಗಿರುವ ಈ ಗಣಪ ಪ್ರವಾಸಿಗರ ಕೇಂದ್ರಬಿಂದು.
ಈ ದೇವಾಲಯಕ್ಕೆ ಸಮೀಪದಲ್ಲೇ ಇರುವ ಶ್ರೀವರ್ಧಮಾನ ಬಸದಿಯೂ ಸುಂದರವಾಗಿದೆ. 
ಮಾಹಿತಿ : ಶ್ರೀ ನಟರಾಜ ಪಂಡಿತ್.

No comments:

Post a Comment