Pages

Showing posts with label ವಿಶೇಷ ಸಾಧಕರು. Show all posts
Showing posts with label ವಿಶೇಷ ಸಾಧಕರು. Show all posts

Thursday, January 3, 2013

ಸಾಧಕ ಶ್ರೀ ನ.ಕೃಷ್ಣಪ್ಪ






ಹಿರಿಯ ಆರೆಸ್ಸೆಸ್ ಪ್ರಚಾರಕರಾದ ನ ಕೃಷ್ಣಪ್ಪನವರ ಕುರಿತು ಕಿರುತೆರೆ ನಿರ್ದೇಶಕ ಟಿ .ಎನ್ ಸೀತಾರಾಂ ಲೇಖನ
Na Krishnappa, Senior RSS Pracharak, (A noted Cancer Survivor in Karnataka)


ಕ್ಯಾನ್ಸರ್ ಎಂಬ ಭಯಾನಕ ವ್ಯಾಧಿಯನ್ನು ಯಶಸ್ವಿಯಾಗಿ ಎದುರಿಸಿ ಅರೋಗ್ಯ ಪೂರ್ಣ ಜೀವನ ಸಾಗಿಸುತ್ತಿರುವ ಸಾಧಕರ ಜೀವನ-ಸಾಧನೆಯ ಕುರಿತು ಬೆಳಕು ಚೆಲ್ಲುವ ಪುಸ್ತಕವೇ ಮೃತ್ಯು ಮಿತ್ರ . ಬೆಂಗಳೂರಿನ ಜಿ ಎಸ ಭಟ್ ಬರೆದಿರುವ ಈ ಪುಸ್ತಕವನ್ನು ಪ್ರಕಟಿಸಿದವರು ಗೋವರ್ಧನ್ ಅಂಕೋಲೆಕರ್. ಕ್ರಿಕೆಟಿಗ ಯುವರಾಜ್ ಸಿಂಗ್, ಕಲಾವಿದ ಎನ್ ಮುರಳೀಧರ್ ಕಷಿಕರ್, ಅಲೆಕ್ಸಾಂಡರ್, ರಮಿ  ಸೇಥ್, ಬ್ಯಾಂಕ್ ಮ್ಯಾನೇಜರ್ ಶ್ರೀಕಾಂತ್ , ಮಾಯಾ ತಿವಾರಿ ಸೇರಿದಂತೆ ಅನೇಕರ ಜೀವನಗಾಥೆಯನ್ನು ಓದುಗರಿಗೆ ಪರಿಚಯಿಸುತ್ತದೆ ಮೃತ್ಯು ಮಿತ್ರ .  ಕ್ಯಾನ್ಸರ್ ನ್ನು ತಮ್ಮ ಶಿಸ್ತು ಬದ್ಧ ಜೀವನ ಶೈಲಿಯ ಮೂಲಕ ಬಹು ವರ್ಷದ ಹಿಂದೆಯೇ ಗೆದ್ದು ಸಂತೃಪ್ತಿಯ ಜೀವನ ನಡೆಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಹಿರಿಯ ಪ್ರಚಾರಕರಾದ ನ ಕೃಷ್ಣಪ್ಪನವರ ಬದುಕನ್ನೂ ಓದುಗರಿಗೆ ತೆರೆದಿಡುತ್ತದೆ ಈ ಪುಸ್ತಕ. ಕೃಷ್ಣಪ್ಪನವರ ಕುರಿತು ಕಿರುತೆರೆ ನಿರ್ದೇಶಕ, ಕಲಾವಿದ ಟಿ .ಎನ್  ಸೀತಾರಾಂ ಬರೆದಿರುವ ಲೇಖನವನ್ನು ಇಲ್ಲಿ ನೀಡಲಾಗಿದೆ.- ಸಂ

TN Seetharam, Noted TV Serial Director, Actor
(ಮೃತ್ಯು ಮಿತ್ರ ಪುಸ್ತಕಕ್ಕೆ ಬರೆದ ಮುನ್ನಡಿಯಿಂದ)

ನೆಚ್ಚಿನ ಕೃಷ್ಣಪ್ಪನವರಿಗೆ ಪ್ರಣಾಮಗಳು.

ನೆನಪಿದೆಯಾ? ಕೃಷ್ಣಪ್ಪನವರೆ ಹೀಗೆ ಪತ್ರ ಶುರು ಮಾಡುವುದನ್ನು ನೀವೇ ನನಗೆ ಕಲಿಸಿಕೊಟ್ಟಿದ್ದು. 1932[1952]ರಲ್ಲಿ ನಾನಿನ್ನೂಚಿಕ್ಕ ಹುಡುಗ.ಮಿಡ್ಲ್‌ಸ್ಕೂಲ್‌ನಲ್ಲಿಓದುತ್ತಿದ್ದೆನೆಂದು ನೆನಪು.ಯಾವುದೋಅನಾರೋಗ್ಯಕ್ಕೆ ನನ್ನನ್ನು ಚಿಕ್ಕಬಳ್ಳಾಪುರದ ಮಿಷನ್ ಆಸ್ಪತ್ರೆಗೆ ಸೇರಿಸಿದ್ದರು.ಅಲ್ಲಿ ನನ್ನ ವಿಳಾಸಕ್ಕೆ ನೀವು ನೆಚ್ಚಿನರಾಜ, ಅಕ್ಕರೆಯ ನೆನಪುಗಳು ಎಂದು ರುಜು ಮಾಡಿ 9 ಪುಟಗಳ ಒಂದು ಪತ್ರ ಬರೆದಿದ್ದಿರಿ (ಮನೆಯಲ್ಲಿ ನನ್ನನ್ನುರಾಜಎಂದುಕರೆಯುತ್ತಿದ್ದರು). ನನ್ನನ್ನುಅದಕ್ಕೆ ಮುಂಚೆ ನೀವು 5-6 ಬಾರಿ ನಮ್ಮ ಮನೆಯ ಹತ್ತಿರವಿದ್ದ ಮೈದಾನದಲ್ಲಿ ನೋಡಿದ್ದೀರಿ ಅಷ್ಟೆ. ಆದರೆ ನಾನು ಯಾತನೆಯಿಂದ ಮನಸ್ಸೆಲ್ಲ ಮಂಕಾಗಿ ಮಲಗಿದ್ದಾಗ – ಒಬ್ಬ 10 ವರ್ಷದ ಚಿಕ್ಕ ಹುಡುಗನಿಗೆಅಂತಃಕರಣ, ವಿಶ್ವಾಸ ಮತ್ತು ಭರವಸೆತುಂಬಿದ ೯ ಪುಟದ ಪತ್ರ ಬರೆದಿದ್ದಿರಿ. ಖಾಯಿಲೆ ಬಿದ್ದಿರುವಚಿಕ್ಕಅಪರಿಚಿತ ಹುಡುಗನ ಮೇಲೆ ಯಾರುತೋರಿಸುತ್ತಾರೆಅಂಥ ವಿಶ್ವಾಸ ಈ ಕಾಲದಲ್ಲಿ? ಆ ಪತ್ರ ಬಂದಾಗ ಖಾಯಿಲೆಯಿಂದ ಮಲಗಿದ್ದ ನಾನು ಅಪರೂಪದ ಸಂಭ್ರಮ ಪಟ್ಟಿದ್ದೆ. ನನಗೆ ಮೊದಲ ಪತ್ರವಿರಬೇಕು. ಪತ್ರದ ತುಂಬಾ ಅಂತಃಕರಣ, ಸುಂದರ ಅಕ್ಷರಗಳು, ಸ್ವಚ್ಛ ಭಾಷೆ. ಅಂಥ ಪತ್ರವನ್ನು ನಾನು ಮುಂಚೆ ನೋಡಿಯೂ ಇರಲಿಲ್ಲ. ಆಮೇಲೆ ನಮ್ಮ ಮನೆಯಲ್ಲಿ ಎಷ್ಟೋ ವರ್ಷ ನಿಮ್ಮ ಪತ್ರದ್ದೇ ಮಾತು. ಪತ್ರಬರೆದರೆಕೃಷ್ಣಪ್ಪನವರಥರ ಬರೆಯಬೇಕು ಎಂದು ಎಲ್ಲರೂ ಅಂದುಕೊಳ್ಳುವಷ್ಟು ಸುಂದರವಾಗಿತ್ತು ನಿಮ್ಮ ಪತ್ರ.ಪಾಯಶಃ ನಿಮ್ಮ ಪತ್ರದ ಭಾಷೆ ಮತ್ತು ಅಂತರ್ಗತ ಭಾವ ಕೋಶತೆ ನನ್ನನ್ನು ಸಾಹಿತ್ಯ ಮತ್ತು ಕಲೆಯಕಡೆ ಸೆಳೆದವು ಎಂದು ನನ್ನ ಭಾವನೆ.

ನಿಮಗೇ ಗೊತ್ತು ನಮ್ಮತಂದೆಕಾಂಗ್ರೆಸ್‌ನವರು.ತುಂಬಾ ಶಿಸ್ತಿನ ಮನುಷ್ಯರು. ಹಳೆಯ ಕಾಂಗ್ರೆಸ್‌ನವರಿಗೆ ಸಂಘದವರನ್ನು ಕಂಡರೆ ಕೋಪವಿರುತ್ತಿದ್ದ ದಿನಗಳು. ಅಂಥಾ ನಮ್ಮ ಮನೆಯಲ್ಲಿಕೂಡ ನಿಮ್ಮನ್ನುಕಂಡೆ ನಮ್ಮ ಮನೆಯಎಲ್ಲರಿಗೂ ಎಷ್ಟು ಪ್ರೀತಿ ವಿಶ್ವಾಸ. ನೆನಪಿದೆಯಾ?ಅಷ್ಟು ವಿಶ್ವಾಸ, ಅಂತಃಕರಣತಮ್ಮಲ್ಲಿಕಾಣುತ್ತಿದ್ದೆವು ನಾವು.

ನಾನು ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗ ಕರ್ಮಠ ವಾತಾವರಣದಲ್ಲಿ ಬೆಳೆದ ಹುಡುಗ.ಮತ ಮತ್ತು ಧರ್ಮಗಳು ಒಂದೇಎಂದು ನಂಬಿದ ವಾತಾವರಣ ಅದು. ಬೇರೆ ಜಾತಿಯವರ ಮನೆಯಲ್ಲಿ ನೀರು ಕುಡಿಯಲೂ ಕೂಡ ಬೇಡವೆನ್ನುತ್ತಿದ್ದ ಸಂಪ್ರದಾಯ. ನೀವು ಕಾರ್ಯಾಲಯದಲ್ಲಿ ವಾಸಮಾಡುತ್ತಿದ್ದಿರಿ. ಊಟಕ್ಕೆ ಯಾರದಾದರೂ ಮನೆಗೆ ಹೋಗುತ್ತಿದ್ದಿರಿ. ನೀವು ಜಾತಿ ಆಧಾರದ ವಿಂಗಡಣೆಯನ್ನುಎತ್ತಿ ಹಿಡಿಯುವ ಸಂಘಟನೆಗೆ ಸೇರಿದವರೆಂದು ನಮ್ಮ ಬೀದಿಯಲ್ಲಿಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ ಅತ್ಯಂತ ಕೆಳಜಾತಿಗೆ ಸೇರಿದ ಹುಡುಗನೊಬ್ಬನ ಗುಡಿಸಲಿಗೆ ಆಗಾಗ ನೀವು ಊಟಕ್ಕೆ ಹೋಗುತ್ತಿದ್ದುದನ್ನು ನಾನು ನೋಡಿ ಗಾಬರಿಗೊಳ್ಳುತ್ತಿದ್ದೆ. ಮಂಕಾಗುತ್ತಿದ್ದ ನನಗೆ ಜಾತಿಯ ತಾರತಮ್ಯ ಎಷ್ಟು ಅರ್ಥಹೀನ ಎಂಬುದನ್ನು ನನ್ನಚಿಕ್ಕ ವಯಸ್ಸಿನ ಬುದ್ಧಿಗೆ ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದಿರಿ. ನೋಡು ರಾಜ, ನಮ್ಮ ಮನೆಯಲ್ಲೂ ಬಾವಿಯಿಂದ ನೀರು ತರುತ್ತಾರೆ,  ಅವರ ಮನೆಯಲ್ಲಿಯೂ ಬಾವಿಯಿಂದ ನೀರು ತರುತ್ತಾರೆ. ಅಲ್ಲಿಗೆ ನೀರು ಒಂದೇ….. ಭೂಮಿಯಲ್ಲಿ ಬೆಳೆದ ಭತ್ತದಿಂದ ಅಕ್ಕಿಯಾಗುತ್ತಷ್ಟೆ. ಅಕ್ಕಿಗೆ ಅಕ್ಕಿ ಒಂದೇ. ಬೆಂಕಿಗೆ ಮೈಲಿಗೆ ಇಲ್ಲ. ಅಲ್ಲಿಗೆ ಅವರ ಮನೆಯಲ್ಲಿ ಮಾಡುವ ಅನ್ನಕ್ಕೂ ನಮ್ಮರೀತಿಯಲ್ಲಿ ಮಾಡುವ ಅನ್ನಕ್ಕೂ ಏನು ವ್ಯತ್ಯಾಸ?ಎರಡೂ ಒಂದೇ ಅಲ್ಲವೆ ಎಂದು ನಗುತ್ತಾ ನನ್ನನ್ನು ಸಮಾಧಾನ ಮಾಡುತ್ತಿದ್ದಿರಿ. ನಾನು ನಂತರ ಎಷ್ಟೋ ವರ್ಷ ಕಾಲೇಜಿನ ಬಾಳುಗಳಲ್ಲಿ ಜಾತಿಯ ಒಂದು ಮಾತು ಬಂದರೆ ಅದೇ ಉದಾಹರಣೆಕೊಟ್ಟು ಎಲ್ಲರನ್ನು ಬೆರಗುಗೊಳಿಸುತ್ತಿದ್ದೆ. ನಿಜವಾಗಿಯೂ ನಿರ್ಮಲ ಮನಸ್ಸಿನ ಜಾತ್ಯಾತೀತ ವ್ಯಕ್ತಿ ನೀವು.

ನೀವು ನಂಬಿದ ಸಂಘಟನೆಯ ಸೈದ್ಧಾಂತಿಕ ತತ್ವಗಳಿಗೆ ನಾನು ಬಹುದೂರ ಹೋಗಿ ಸಮಾಜವಾದಿ ಪಕ್ಷಕ್ಕೆ ಸೇರಿದಾಗಲೂ ನಿಮ್ಮ ಬಗೆಗಿನ ವೈಯಕ್ತಿಕಗೌರವ ನನಗೆ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಅಂಥದೊಡ್ಡ ವ್ಯಕ್ತಿ ನೀವು. ಆಗ ನಿಮಗೆ 28-30 ವಯಸ್ಸು ಅನಿಸುತ್ತೆ.ದೇಹದ ಮತ್ತು ಬದುಕಿನಆಕರ್ಷಣೆಯ ವಿರುದ್ಧ ಹೋರಾಟ ಮಾಡುವುದು ಸುಲಭದ ಮಾತಲ್ಲ. ಆದರೆ ಆ ವಯಸ್ಸಿನಲ್ಲಿ ನೀವು ಎಂಥ ನಿಸ್ಪೃಹ ಬದುಕು ಬದುಕುತ್ತಿದ್ದಿರಿಎಂದು ಅನೇಕ ವರ್ಷಗಳ ನಂತರ ನನಗೆ ಅರಿವಾಗತೊಡಗಿತು. ಈ ಸಮಾಜಕ್ಕೆ ನನ್ನ ಬದುಕುಅರ್ಪಣೆ ಎಂದುಆತ್ಮವಿಶ್ವಾಸದ ನಗೆ ಬೀರುತ್ತಾ ಹೇಳುತ್ತಿದ್ದಿರಿ. ನಿಮ್ಮಔಷಧಿಗಾಗಿ ಕೊಂಡುಕೊಂಡ ಒಂದು ಆಗಿನ ಮೂರು ಪೈಸೆಯ ನಿಂಬೆಹಣ್ಣಿನ ಲೆಕ್ಕ ಕೂಡ ಬರೆದುಕೊಳ್ಳುತ್ತಿದ್ದಿರಿ. ಅದನ್ನು ನಿಮ್ಮಕೇಂದ್ರ ಶಾಖೆಗೆ ಕಳುಹಿಸುತ್ತಿದ್ದರೋ ಏನೋ ಗೊತ್ತಿಲ್ಲ. ಅಷ್ಟು ನಿಸ್ಪೃಹ ಮನುಷ್ಯರು ನೀವು. ನಾನು ಮೆಚ್ಚುವ ಗಾಂಧಿಯಂತಅತ್ಯಂತ ಸರಳ ಬದುಕನ್ನು ಬದುಕಿದ ಮನುಷ್ಯ ನೀವು.ಕೃಷ್ಣಪ್ಪನವರೆ ನಿಮ್ಮ ಬುದ್ಧಿಶಕ್ತಿಗೆ, ನಿಮ್ಮ ವಿದ್ಯಾಭ್ಯಾಸಕ್ಕೆ ನಿಮ್ಮ ಚಮಕಿಗೆ ನೀವು ಸುಲಭವಾಗಿಐಎಎಸ್ ಮಾಡಿದೊಡ್ಡಅಧಿಕಾರಿಯಾಗಬಹುದಿತ್ತು.ಏನು ಬೇಕಾದರೂ ಆಗಬಹುದಿತ್ತು.ಆದರೆ ನೀವು ಅದೆಲ್ಲವನ್ನು ಧಿಕ್ಕರಿಸಿ ಸಂಘಟನೆಗೆ ನಿಮ್ಮನ್ನು ಸಮರ್ಪಿಸಿಕೊಂಡಿರಿ.

ನಿಮ್ಮ ಸಂಘಟನೆಯ ಬಗ್ಗೆ ನನ್ನದೇಆದ ವಿರೋಧವಿದೆ.ಭಾರತವನ್ನುಅಮೆರಿಕಾದ ಮಡಿಲಲ್ಲಿ ಇಡಲುಕಾರಣವಾದ ಸಂಘಟನೆ ಎಂಬ ಆಳದ ಸಿಟ್ಟು ಇದೆ.ಆರ್ಥಿಕ ಸಮಾನತೆಯ ಬಗ್ಗೆ ಚಕಾರವೆತ್ತದೆ ಧರ್ಮದ ವಿಚಾರದಲ್ಲಿ ಮಾತ್ರಉದ್ವಿಗ್ನರಾಗುವವರು ಎಂಬ ಆಕ್ಷೇಪಣೆ ನನ್ನದು. ನಾನು ಸೈದ್ಧಾಂತಿಕವಾಗಿ ಬೇರೆದಾರಿ ಹಿಡಿದರೂಕೂಡ ಇಂದಿಗೂ ನನ್ನ ಮನಸ್ಸಿನಲ್ಲಿ ಮತ್ತು ಹೃದಯಲ್ಲಿಅತ್ಯಂತಆತ್ಮೀಯಗುರುವಿನಂತೆ ನಿಂತವರಲ್ಲಿ ನೀವು ಮೊದಲಿಗರು.ನಾನು ದೂರ ಹೋದೆನೆಂದುಕೋಪಗೊಂಡವರು ನೀವಲ್ಲ. ಬದಲಿಗೆ ಎಷ್ಟೋ ವರ್ಷಗಳ ನಂತರ ಮಾಯಾಮೃಗತೆಗೆದದ್ದು ನಾನೇ ಎಂದುಗೊತ್ತಾದಾಗ ನನ್ನನ್ನು ಹುಡುಕಿಕೊಂಡು ಬಂದುಆತ್ಮೀಯವಾಗಿಅಪ್ಪಿಕೊಂಡು ಹೆಮ್ಮೆಪಟ್ಟ ಬಂಧು ನೀವು.

ನಾನು  ಜೀವನದಲ್ಲಿ ಮೊದಲು ಓದಿದಕಾದಂಬರಿ ಭೈರಪ್ಪನವರ ’ಧರ್ಮಶ್ರೀ’ಯನ್ನು ನಾನು ಹೈಸ್ಕೂಲಿನಲ್ಲಿದ್ದಾಗ ಓದಿಸಿದವರು ನೀವು. ಶಿವರಾಮ ಕಾರಂತರಕಾದಂಬರಿ ಓದಿಸಿದವರು ನೀವು.ಜೆ.ಪಿ.ಯವರ ಪುಸ್ತಕ ’ಕಮ್ಯುನಿಸಂ ನಿಂದ ಸೋಷಿಲಿಸಂವರೆಗೆ’ ಎಂಬ ಪುಸ್ತಕ ಓದಿಸಿ ರಾಜಕೀಯ ಚಿಂತನೆಯನ್ನು ನನ್ನಲ್ಲಿ ಶುರು ಮಾಡಿದವರು ನೀವು.ನಿಮ್ಮ ಬಗ್ಗೆ ನನಗೆ ತೀರಿಸಲಾಗದಋಣವಿದೆ.

ಅಂತಹ ನೀವು ಕ್ಯಾನ್ಸರ್‌ ರೋಗಕ್ಕೆತುತ್ತಾಗಿರುವಿರೆಂದು ಗೊತ್ತಾದಾಗ ನಾನು ತುಂಬಾ ನೋವು ಅನುಭವಿಸಿದ್ದೆ. ಆದರೆ ಆ ಕ್ಯಾನ್ಸರನ್ನು ನಿಮ್ಮದೇ ಇಚ್ಛಾ ಶಕ್ತಿಯಿಂದ ನಗುನಗುತ್ತಾಗೆದ್ದವರು ನೀವು. ನೀವು ಕ್ಯಾನ್ಸರನ್ನುಗೆದ್ದ ಬಗ್ಗೆ ಓದುತ್ತಿದ್ದಾಗ ಬದುಕಿನಲ್ಲಿ ಹೊಸ ಭರವಸೆ ಮೂಡಿಸುತ್ತಿದ್ದೀರಿ. ಸಣ್ಣಪುಟ್ಟ ಕಷ್ಟಗಳಿಗೆ ಹೆದರಿ ಹಿಂಜರಿಯುವ ನಮ್ಮಂಥವರಿಗೆ ನೀವು ದಾರಿ ದೀಪವಾಗಿ ನಿಂತಿದ್ದೀರಿ. ನೀವು ಬರಿಯ ನಿಮ್ಮ ಖಾಯಿಲೆ ವಾಸಿ ಮಾಡಿಕೊಳ್ಳುತ್ತಾ ಆತ್ಮಕೇಂದ್ರಿತವಾಗಿ ಕಾಲವನ್ನು ಕಳೆಯಲಿಲ್ಲ. ಬದಲಿಗೆ ಹೀಗೆ ಕ್ಯಾನ್ಸರ್‌ನಿಂದ ಸೋತಿರುವ ಸಾವಿರಾರು ಮಾದರಿಯಜನರನ್ನು ಭೇಟಿ ಮಾಡುತ್ತಾಅವರಿಗೆ ಬದುಕಿನಲ್ಲಿ ಭರವಸೆ ಮತ್ತುಜೀವೋತ್ಸಾಹವನ್ನುತುಂಬಿದ್ದೀರಿ.ಇದಕ್ಕಿಂತ ಸಾರ್ಥಕವಾದದ್ದುಇನ್ನೇನಿದೆ?

ನನ್ನಅಮ್ಮ ಸಾವಿನ ಅಂತ್ಯದಲ್ಲಿ ನರಳುತ್ತಾ ಮಲಗಿದ್ದಾಗ ನೀವು ಅವರನ್ನು ಭೇಟಿ ಮಾಡಿ ಮನೆಯವರಿಗೆಧೈರ್ಯಕೊಟ್ಟಿದ್ದೀರಿ.

ಇಡೀ ಬದುಕಿನಲ್ಲಿಇಷ್ಟೊಂದು ಮಾನವೀಯತೆಯನ್ನು, ಆತ್ಮೀಯತೆಯನ್ನುಇಟ್ಟುಕೊಂಡ ಮನುಷ್ಯರನ್ನು ನಾನು ನೋಡಿದ್ದುಕಡಿಮೆ.ನೀವು, ನಿಮ್ಮ ಬದುಕು ಸಹೃದಯರಿಗೆಒಂದು ಪಠ್ಯ ಪುಸ್ತಕ.

ನಿಮ್ಮ ಈಗಿನ ಪುಸ್ತಕ ಓದುತ್ತಾ ಹೋದಂತೆ ನನ್ನಲ್ಲಿ ಈ ನೆನಪುಗಳೆಲ್ಲಾ ಬಂದವು. ಅಂಥಎಲ್ಲ ಸಂತೋಷಕರ ನೆನಪುಗಳಿಗಾಗಿ ನಿಮಗೆ ನನ್ನ ಅನಂತಾನಂತ ಕೃತಜ್ಞತೆಗಳು.

ಟಿ.ಎನ್. ಸೀತಾರಾಮ್

ಕಿರುತೆರೆ ಕಲಾವಿದರು ಮತ್ತು ನಿರ್ದೇಶಕರು

(ಮೃತ್ಯು ಮಿತ್ರ ಪುಸ್ತಕಕ್ಕೆ ಬರೆದ ಮುನ್ನಡಿಯಿಂದ)

ಕೃಪೆ: ವಿಶ್ವ ಸಂವಾದ,ಕರ್ನಾಟಕ
--

Thursday, November 1, 2012

ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ




ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.  ಇದೇ ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಸರ್ಕಾರವು ಪಂಡಿತರನ್ನು ಸನ್ಮಾನಿಸಲಿದೆ. 116 ವರ್ಷ ವಯೋವೃದ್ಧರಾದ        ಚತುರ್ವೇದಿಗಳು ಒಂದು ನೂರುವರ್ಷಗಳಿಂದ ನಾಲ್ಕೂ ವೇದಗಳನ್ನು ಅಭ್ಯಾಸಮಾಡುತ್ತಿದ್ದಾರೆಂಬುದು ಅತ್ಯಂತ ಸಂತಸದ ಮತ್ತು ಆಶ್ಚರ್ಯದ ಸಂಗತಿಯೂ ಹೌದು. ವೇದಸುಧೆಯು ಪಂಡಿತರಿಗೆ ಸಾಸ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತದೆ.
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ

Tuesday, July 24, 2012

ಭಗವಾನ್ ರಮಣ ಮಹರ್ಷಿಗಳು

ದಿನಾಂಕ 22.07.2012 ರಂದು ಹಾಸನದಲ್ಲಿ ನಡೆದ ಚಿನ್ಮಯ ಸತ್ಸಂಗದಲ್ಲಿ ತಿಪಟೂರು ಚಿನ್ಮಯ ಕೇಂದ್ರದ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ರಮಣ ಮಹರ್ಶಿಗಳ ಬಗ್ಗೆ ಪ್ರವಚನ ಮಾಡಿದರು. ಪ್ರವಚನದ, ಭಜನೆಯ ಮತ್ತು ಪ್ರವಚನಕ್ಕೆ ಪೂರಕವಾದ ಶ್ರೀ ಶಂಕರಾಚಾರ್ಯ ವಿರಚಿತ ನಿರ್ವಾಣಷಟ್ಕದ ಆಡಿಯೋ ಕ್ಲಿಪ್ ಗಳನ್ನು ಈ ಕೆಳಗೆ ನೀಡಲಾಗಿದೆ.




Monday, July 23, 2012

ಅನರ್ಘ್ಯ ರತ್ನಗಳು





ಸೂಫಿ ಸಾಧಕರಲ್ಲಿ ಹಲವಾರು ಮಹಿಳೆರದೂ   ಪಾತ್ರವಿದೆ.  ಅವರಲ್ಲಿ ಆರನೇ ಶತಮಾನದಲ್ಲಿ ಇದ್ದ ರಬಿಯಾ ಒಬ್ಬ ಮಹಾನ್ ಸಾಧಕಿ.  ಆಕೆಗೆ ಭಗವಂತನಲ್ಲಿ ಅಪಾರವಾದ ನಂಬುಗೆ ಮತ್ತು ಶರಣಾಗತಿ.  ಈಕೆಯ ಜೀವನದಲ್ಲಿ ನಡೆದ ಒಂದು ಘಟನೆ ಇವಳ ಸಂಪೂರ್ಣ  ಶರಣಾಗತಿಯನ್ನು ಸಾದರ ಪಡಿಸುತ್ತದೆ.

ತನಗೆ ಇದ್ದ ಪ್ರಾಯದ ಅವಳಿ  ಗಂಡು ಮಕ್ಕಳು ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ಅಸು ನೀಗುತ್ತಾರೆ.   ಇವರ ಪಾರ್ಥಿವ ಶರೀರವನ್ನು ಮನೆಗೆ ತಂದ ಸುತ್ತಮುತ್ತಲಿನವರು ರಬಿಯಾಗೆ ಎಲ್ಲವನ್ನು ವಿವರಿಸುತ್ತಾರೆ. ತನಗಾದ ದುಃಖವನ್ನು ಕ್ಷಣಮಾತ್ರದಲ್ಲಿ ಸಾವರಿಸಿಕೊಂಡು, ಆ ಮಕ್ಕಳ ಪಾರ್ಥಿವ ಶರೀರವನ್ನು ಒಂದು ಕೋಣೆಯಲ್ಲಿ ಇರಿಸಿಕೊಂಡಳು.   ತನ್ನನ್ನು ಸಂತೈಸಲು ಬಂದವರಿಗೆ " ದಯಮಾಡಿ ನೀವೆಲ್ಲ ಈಗ ಇಲ್ಲಿಂದ ಹೋಗಿ.  ನನ್ನ ಯಜಮಾನರು ಬರುವ ಸಮಯ.  ಅವರಿಗೆ ಒಮ್ಮೆಲೇ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ.  ಅವರನ್ನು ಸಂತೈಸಿ ನಂತರ   ಹೇಳುತ್ತೇನೆ " ಎಂದು ಎಲ್ಲರನ್ನು ಬೀಳ್ಕೊಟ್ಟಳು.

ಸ್ವಲ್ಪ ಸಮಯದಲ್ಲೇ ಬಂದ ಗಂಡನಿಗೆ ಎಂದಿನಂತೆ ಉಣ್ಣಲು ಬಡಿಸಿ, ನಂತರದಲ್ಲಿ ನಿಧಾನವಾಗಿ ಮಾತಿಗೆ ಎಳೆಯುತ್ತ  " ನಾನು ನಿಮ್ಮಲ್ಲಿ ಒಂದು ವಿಚಾರವನ್ನು ಹಲವಾರು ವರ್ಷಗಳಿಂದ ಹೇಳದೆ ರಹಸ್ಯವಾಗಿ ಇಟ್ಟಿರುವೆ. ಇದಕ್ಕಾಗಿ ನೀವು ನನ್ನನ್ನು ಕ್ಷಮಿಸಬೇಕು.  ಇಂದು ಆ ವಿಚಾರವನ್ನು ಹೇಳಲೇ ಬೇಕಾದ ಸಮಯ ಬಂದಿದೆ. " ಎಂದು ಪೀಟಿಕೆ ಹಾಕಿದಳು.  ರಬಿಯಾಲನ್ನು  ಅಪಾರ ಗೌರವದಿಂದ ನೋಡುತ್ತಿದ್ದ  ಗಂಡ ಕಾತರದಿಂದ "ಅದೇನು?" ಎಂದು ಕೇಳಿದ.  " ಬಹಳ ವರ್ಷಗಳ ಹಿಂದೆ ನಮ್ಮ ಮನೆಗೆ ಬಂದ ಒಬ್ಬ ಸಾಧು ಪುರುಷರು ನನ್ನಲ್ಲಿ ಎರಡು ಅನರ್ಘ್ಯ ರತ್ನಗಳನ್ನು ಕೊಟ್ಟು, ಇದನ್ನು ಜೋಪಾನವಾಗಿ   ಕಾಪಾಡು, ನಾನು ಬೇಕಾದಾಗ ಬಂದು ವಾಪಾಸು ಪಡೆಯುತ್ತೇನೆ. ಎಂದು ಹೇಳಿ ಹೋದವರು ವರ್ಷಗಳು ಕಳೆದರು ಬರಲೇ ಇಲ್ಲ.  ನಾನು ಆ ರತ್ನಗಳನ್ನು ನನ್ನವೇ ಎಂದು ಅದರ ಮೇಲೆ ಮೋಹ ಬೆಳೆಸಿಕೊಂಡು ಬಿಟ್ಟೆ.  ಆದರೆ, ಅವರು ಈಗ ಬಂದು ಅವರ  ರತ್ನಗಳನ್ನು ವಾಪಾಸು ಕೇಳುತ್ತಿದ್ದಾರೆ.  ದಿಕ್ಕೇ ತೋಚದೆ ನಿಮ್ಮನ್ನು ಕೇಳಿ ಕೊಡುವೆನೆಂದು ಹೇಳಿ ಕಳುಹಿದೆ.  ಈ ಗ ಹೇಳಿ ನಾನೇನು ಮಾಡಲಿ? "  ಎಂದು ಖಿನ್ನಳಾಗಿ ಹೇಳಿದಳು.   ಸಾವಕಾಶವಾಗಿ ಎಲ್ಲವನ್ನು ಕೇಳಿದ ಗಂಡ " ರಬಿಯ, ನಿನಗೆ ಹೇಳುವುದೇನಿದೆ?  ಪರರ ವಸ್ತುವನ್ನು ಎಂದೂ ನೀನು ಇಟ್ಟುಕೊಂಡವಳಲ್ಲ.  ಈಗ ಯಾಕೆ ಆ ಚಿಂತೆ? ಅವರ ರತ್ನಗಳನ್ನು ಅವರಿಗೆ ವಾಪಾಸು ಕೊಟ್ಟುಬಿಡು." ಎಂದು ಸ್ಪಷ್ಟವಾಗಿ ಹೇಳಿದ.

ಈ ಮಾತು ಕೇಳಿದ ನಂತರ ರಬಿಯ ತನ್ನ ಗಂಡನ ಕೈ ಹಿಡಿದುಕೊಂಡು  ಮಕ್ಕಳ ಶವ ಇರಿಸಿದ್ದ ಕೋಣೆಗೆ ಕರೆದೊಯ್ದಳು.  ಮಕ್ಕಳ ಶವ ನೋಡಿದ ಗಂಡ ಪ್ರಜ್ಞೆ ತಪ್ಪಿದ.   ಸಾವರಿಸಿಕೊಂಡ ನಂತರ, ರಬಿಯ ಸಮಾಧಾನದಿಂದ ಹೇಳಿದಳು, " ಇವೆ, ಆ ಅನರ್ಘ್ಯ ರತ್ನಗಳು.  ಭಗವಂತ ನಮ್ಮಲಿ ಜೋಪಾನವಾಗಿ ಇಡಬೇಕೆಂದು ಹೇಳಿ ಕಳುಹಿಸಿದ್ದ.  ಇಂದು ಅವನು ವಾಪಾಸು ಕೇಳಿದ. ಆತನ ರತ್ನಗಳನ್ನು ಇಲ್ಲಿಯವರೆಗೆ ಜೋಪಾನ ಮಾಡಿದ್ದೇವೆ .  ಈಗ ಕೊಡಬೇಕಲ್ಲವೇ?  ಬನ್ನಿ ಅವನ ರತ್ನಗಳನ್ನು ಸಂತೋಷದಿಂದ ಹಿಂತಿರುಗಿಸೋಣ."  ಎಂದು ಇಬ್ಬರು ಸೇರಿ ಶವ ಸಂಸ್ಕಾರ ನೆರೆವೇರಿಸಿದರು.

ರಬಿಯಾಲ ಜೀವನದಲ್ಲಿ ಇದೊಂದು ಬಹು ದೊಡ್ಡ ಪರೀಕ್ಷೆಯಾಗಿತ್ತು.  ಆ ಸಮಯದಲ್ಲೂ ತನ್ನ ಚಿತ್ತವನ್ನು ಕಳೆದುಕೊಳ್ಳದೆ ಸಮಚಿತ್ತದಿಂದ ಸಂಪೂರ್ಣವಾಗಿ ಭಗವಂತನಲ್ಲಿ ಶರಣಾಗತಿ ಹೊಂದಿದಳು. ಇವಳ ಜೀವನದ  ಆದರ್ಶಗಳು ಇಂದಿಗೂ ಜನಮಾನಸದಲ್ಲಿ   ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.