Pages

Sunday, November 7, 2010

ವೇದಗಳು ಅಪೌರುಷೇಯವೇ?: ಒಂದು ಜಿಜ್ಞಾಸೆ

                    


ನನ್ನ ಪತ್ನಿಯು ಅವರಮ್ಮನ ಮನೆಗೆ ಹೋಗಿ ದೀಪಾವಳಿ ಹಬ್ಬ ಆಚರಿಸುತ್ತಿದ್ದರೆ ನಮ್ಮ ಮನೆಯಲ್ಲಿ ಮಿತ್ರರುಗಳಾದ ಕವಿ ನಾಗರಾಜ್,ಪತ್ರಕರ್ತರಾದ ಶ್ರೀ ಪ್ರಭಾಕರ್, ಸಂಘದ ಕಾರ್ಯಕರ್ತರಾದ ಶ್ರೀ ಹೊ.ಸು.ರಮೇಶ್-ಇವರುಗಳೊಡನೆ ಒಂದು ಚಿಂತನ-ಮಂಥನ ನಡೆದಿತ್ತು.ಅದೊಂದು ಅನೌಪಚಾರಿಕ ಮಾತುಕತೆ.  ವೇದದ ಬಗ್ಗೆ ಅತ್ಯಂತ ಶ್ರದ್ಧೆಯನ್ನು ಹೊಂದಿರುವ ಎಲ್ಲರಲ್ಲೂ ಒಂದು ಪ್ರಶ್ನೆ ಕಾಡಿತ್ತು. ವೇದವು  ಅಪೌರುಷೇಯ ಹೇಗೆ? ಒಂದೆರಡು ಗಂಟೆಗಳ ಕಾಲ ನಮ್ಮ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ನಂತರ ಇಲ್ಲಿ ನಡೆದ ಅನೌಪಚಾರಿಕ ಚರ್ಚೆಯನ್ನು ವೇದಸುಧೆಯಲ್ಲಿ ಪ್ರಕಟಿಸಿ ಶ್ರೀ ಸುಧಾಕರ ಶರ್ಮರ ಉತ್ತರ ಪಡೆಯಲು ನಿರ್ಧರಿಸಿದೆವು. ವೇದಸುಧೆಯ ಅಭಿಮಾನಿಗಳೇ, ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
ಶ್ರೀ ಸುಧಾಕರ ಶರ್ಮರಲ್ಲಿ ಮನವಿ:
ಇಲ್ಲಿ ನಾವು ಹಂಚಿಕೊಂಡಿರುವ ಅಂಶಗಳು ವೇದವನ್ನು ತಿಳಿಯದ ಅತಿಸಾಮಾನ್ಯ ವ್ಯಕ್ತಿಗಳಿಂದ, ಆದರೆ ವೇದಗಳ ಬಗ್ಗೆ ಅತ್ಯಂತ ಗೌರವ ಹೊಂದಿರುವ ಮತ್ತು ಜಗತ್ತಿನ ಅಮೂಲ್ಯ ರತ್ನವೆಂಬ ಭಾವನೆ ಇರುವಂತವರಿಂದ ಎಂಬುದನ್ನು ಗಮನಿಸಿ ನಮಗೆ ಅರ್ಥವಾಗುವಂತೆ ಸರಳವಾಗಿ ಸಮಾಧಾನದ ವಿವರಣೆ ಕೊಡಲು ಅತ್ಯಂತ ವಿನಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ.
-ಹರಿಹರಪುರಶ್ರೀಧರ್
-------------------------------------

ಮೊದಲಿಗೆ ಶ್ರೀ ಪ್ರಭಾಕರ್ ಅವರ ವಿಚಾರಗಳನ್ನು ನೋಡೋಣ.

------------------------------------
ಚತುರ್ವೇದಗಳ ಕುರಿತು ನನಗಿದ್ದ ಅತ್ಯಲ್ಪ ಅರಿವು ವಿಸ್ತೃತವಾಗಲು ಮಾನ್ಯ ಸುಧಾಕರ ಶರ್ಮರ ಉಪನ್ಯಾಸಗಳು ಹಾಗೂ ಮೊದಲ ಬಾರಿಗೆ ಅವರನ್ನು ಪರಿಚಯಿಸಿಕೊಟ್ಟ ಮಿತ್ರರೂ ಹಾಗೂ ಹಿತೈಷಿಗಳೂ ಆದ ಹರಿಹರ ಪುರ ಶ್ರೀಧರ್ ಅವರುಗಳೇ ಕಾರಣ. ಮೊದಲು ಇವರಿಬ್ಬರಿಗೆ ನನ್ನ ಧನ್ಯವಾದಗಳು.

ವೇದಗಳು ಅಪೌರುಷೇಯ ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ವೇದಗಳ ಬಗ್ಗೆ ನನಗೆ ಅಪಾರ ಗೌರವ ಹಾಗೂ ಶ್ರದ್ಧೆ ಇದೆ. ಏಕೆಂದರೆ ಅವು ನಿತ್ಯ ಸತ್ಯಗಳು ಹಾಗೂ ಅಹಿಂಸೆಯನ್ನು ಬೋಧಿಸುತ್ತವೆ. ಅವುಗಳ ಬೋಧನೆ ಅನುಸರಿಸುವ ಜೀವಾತ್ಮಗಳು ಮುಕ್ತಿ ಪಡೆಯುವುದು ಖಚಿತ. ಹೀಗಾಗಿ ಅವುಗಳನ್ನು ಮನುಕುಲಕ್ಕೆ ನೀಡಿದ ಆ``ಮಹಾಪುರುಷ''ರಿಗೆ ನನ್ನ ಅನಂತಾನಂತ ಪ್ರಣಾಮಗಳು.
ನನ್ನ ಪ್ರಶ್ನೆ ಇಷ್ಟೆ: ಎಲ್ಲವೂ ಸರಿಯೇ; ಆದರೆ ವೇದಗಳು ಎಷ್ಟೇ ಪ್ರಾಚೀನವಾಗಿದ್ದರೂ ಅವು ಅಪೌರುಷೇಯ ಹೇಗೆ? ಸುಧಾಕರ ಶರ್ಮರೂ ಸೇರಿದಂತೆ ವೇದಾಧ್ಯಯಿಗಳೆಲ್ಲರೂ ಹೇಳುವ ಪ್ರಕಾರ, ಮನುಕುಲದ ಸಂವಿಧಾನವೆನಿಸಿದ ವೇದಗಳನ್ನು `ಯೂಸರ್ ಮ್ಯಾನ್ಯುಯೆಲ್ ' ರೀತಿಯಲ್ಲಿ ಆ ಪರಮಾತ್ಮನೇ ಈ ಸೃಷ್ಟಿಯ ಜತೆಗೇ ನೀಡಿದ್ದಾನೆ!

ವೇದಗಳು ಹಾಗೂ ಪರಮಾತ್ಮ- ಇವೆರಡನ್ನೂ ನಂಬುವ ನಮ್ಮಂಥವರಿಗೇ ಜಿಜ್ಞಾಸೆ ಕಾಡುತ್ತದೆ ಎಂದ ಮೇಲೆ, ಇವೆರಡನ್ನೂ ತಿರಸ್ಕರಿಸುವ ಮಟ್ಟದಲ್ಲಿರುವ ಇಂದಿನ ಆಧುನಿಕ ಪೀಳಿಗೆ ಅಷ್ಟು ಸುಲಭವಾಗಿ ಹಾಗೂ ಸಹಜವಾಗಿ ಈ ಸಮಾಧಾನವನ್ನು ನಂಬುವುದಿಲ್ಲ. ಅಂದ ಮೇಲೆ ಈ ಪ್ರಶ್ನೆ ಹಾಗೂ ಸಮಾಧಾನಕ್ಕೆ ಇನ್ನಷ್ಟು ಸಮರ್ಥನೆ ಅಗತ್ಯ ಎನಿಸಿದೆ.
ನನಗೂ ಈ ಅನುಮಾನ ಪರಿಹಾರವಾಗಿರಲಿಲ್ಲ. ಹೀಗಾಗಿ ಇತ್ತೀಚೆಗೆ ಹಾಸನಕ್ಕೆ ಭೇಟಿ ನೀಡಿ ಉಪನ್ಯಾಸ ನೀಡುತ್ತಿದ್ದ ಸಂದರ್ಭದಲ್ಲಿ ಸನ್ಮಾನ್ಯ ಸುಧಾಕರ ಶರ್ಮರನ್ನು ಈ ಕುರಿತು ಪ್ರಶ್ನಿಸಿದಾಗ ಅವರು ಹೇಳಿದ ಒಟ್ಟಾರೆ ಸಾರಾಂಶವೆಂದರೆ, `...ಮನುಷ್ಯನ ಅಂತರಾತ್ಮದಲ್ಲಿ ಈ ಸತ್ಯಗಳು ಅಂತರ್ಗತವಾದರೆ ಸಾಕು; ಅದು ತಾನಾಗೆ ಹೊರಬರುತ್ತದೆ...'.
ಒಂದು ಅರ್ಥದಲ್ಲಿ ಇದು ಸತ್ಯ. ಏಕೆಂದರೆ ಯಾರು ಏನೇ ಮಾತನಾಡಲು ಅಥವಾ ಬರೆಯಲು ಅದರಲ್ಲಿನ `ಸರಕು', ಸ್ವತಃ ಅವನದಾಗಿರುವುದಿಲ್ಲ; ಬದಲಿಗೆ ಅವನಿಗೆ ಉಂಟಾದ ಭಗವತ್ಪ್ರೇರಣೆಯಿಂದಾಗಿ ಆತ ಮಾತನಾಡಿರುತ್ತಾನೆ; ಅಥವಾ ಬರೆದಿರುತ್ತಾನೆ ಎಂದೇ ಭಾವಿಸೋಣ...

ನನ್ನ ಜಿಜ್ಞಾಸೆ ಏನೆಂದರೆ, ಈ ಸೃಷ್ಟಿಯಾದಾಗ ಆ ಭಗವಂತನು ಅದರ ಜತೆಗೇ `ವೇದ ಭಾಷೆಯಲ್ಲಿ ರಚಿತವಾದ ಈ ವೇದಗಳನ್ನೂ' ಪವಾಡವೆಂಬಂತೆ ಯಾರಿಗೆ ತಾನೇ ನೀಡಿರಲು ಸಾಧ್ಯ? `ಹೌದು; ಈ ಸೃಷ್ಟಿಯಲ್ಲಿದ್ದ ಮನುಷ್ಯರ ಕೈಗೇ ಭಗವಂತೆ ಇದನ್ನು ಹಸ್ತಾಂತರಿಸಿದ' ಎಂಬುದನ್ನು ಒಪ್ಪಿಕೊಂಡಾಗ ಮಾತ್ರ ಅವು ಅಪೌರುಷೇಯವಾಗಲು ಸಾಧ್ಯ! ನಿರ್ವಿಕಾರ, ನಿರ್ಗುಣ, ನಿರಾಮಯವಾದ ಆ ವಿಶ್ವಚೇತನ ಶಕ್ತಿ (ಭಗವಂತ) ವೇದಗಳನ್ನು ರಚಿಸಿ ನೀಡಿರುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಕಾಲ, ದೇಶ, ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ, ಎಷ್ಟೇ ಲಕ್ಷಾಂತರ ವರ್ಷಗಳ ಹಿಂದಾಗಲಿ; ಸಾರ್ವಕಾಲಿಕವಾಗಿ ಯಾರಿಗೇ ಆಗಲಿ ಅಂತರ್ಗತವಾಗಿರುವ ಒಂದು ಸಂವೇದನೆ ಅಥವಾ ಒಂದು ಮಾತನ್ನು ಮತ್ತೊಬ್ಬರಿಗೆ ತಲುಪಿಸಲು ಒಂದು ಮಾಧ್ಯಮ; ಅಂದರೆ ಭಾಷೆಯ ಅಥವಾ ಇಂದ್ರಿಯಗಳ ನೆರವು ಅತ್ಯಗತ್ಯ. ಉದಾ: `ಕುಳಿತುಕೊಳ್ಳಿ' ಎಂಬ ಸಂದೇಶವನ್ನು ಎದುರಿಗಿದ್ದವರಿಗೆ ತಲುಪಿಸಬೇಕೆಂದುಕೊಳ್ಳಿ. ಆಗ ಒಂದು ವೇಳೆ ಭಾಷೆ ಬಾರದಿದ್ದರೂ ಮೌನವಾಗಿಯೇ ತಲೆಯಾಡಿಸಿಯೋ ಅಥವಾ ಕೈ ತೋರಿಸಿಯೋ ಆ ಸಂದೇಶವನ್ನು ತಲುಪಿಸುತ್ತೇವೆ. ವೇದಗಳಿಗೂ ಇದು ಅನ್ವಯಿಸುತ್ತದೆ ಎಂಬುದು ನನ್ನ ಅಭಿಪ್ರಾಯ. ಆದರೆ ಶತ ಶತಮಾನಗಳಷ್ಟು ಹಿಂದಿನ ಕಾಲಮಾನದ ತೊಡಕು ಇರುವುದರಿಂದ ಈ ಪ್ರಕ್ರಿಯೆ ಹೇಗೆ ಸಾಗಿ ಬಂದಿರಬಹುದು; ಇದಕ್ಕಾಗಿ ಯಾವ ಮಾಧ್ಯಮ ಬಳಸಿರಬಹುದು ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ.
ಹೀಗೆಯೇ ಮುಂದುವರೆದು ಯೋಚಿಸಿದಾಗ, ಮೊದಲು ವೇದ ಭಾಷೆ ಹುಟ್ಟಿಕೊಂಡ ನಂತರವೇ ವೇದಗಳು ಹಾಗೂ ವೇದಾಂಗಗಳ ರಚನೆಯನ್ನು ಯಾರೋ ಮಹಾತ್ಮರೊಬ್ಬರು ಅಥವಾ ಇಂತಹ ಮಹಾತ್ಮರ ಗುಂಪು ಮಾಡಿರಲೇಬೇಕು. ಹಾಗಿದ್ದ ಮೇಲೆ ಅವು ಅಪೌರುಷೇಯ ಆಗಲು ಹೇಗೆ ಸಾಧ್ಯ? ಇಂತಹ ಮಹಾತ್ಮರು ಅಥವಾ ಋಷಿ ಮುನಿಗಳಿಗೆ ಇಂತಹ ಮಹಾನ್ ಕೃತಿಯನ್ನು ರಚಿಸಲು ಆ ವಿಶ್ವ ಚೇತನ ಶಕ್ತಿಯ ಪ್ರೇರಣೆಯಿತ್ತು ಎನ್ನುವುದಾದರೆ ಅದನ್ನು ನಿರ್ವಿವಾದವಾಗಿ ಒಪ್ಪಿಕೊಳ್ಳಬಹುದು. ಈ ರೀತಿ ಯೋಚಿಸಿದಾಗ ಈ ಜಗತ್ತಿನಲ್ಲಿ ವೇದಗಳು ಎಲ್ಲೆಡೆ ಪ್ರಸಾರಗೊಳ್ಳಲೆಂದು ರೂಪುಗೊಂಡ ಪ್ರಥಮ ಭಾಷೆಯೇ `ವೇದ ಭಾಷೆ' ಎಂದಾಯಿತು. ಈ ಭಾಷೆ ಆರಂಭದಲ್ಲಿ ಮೌಖಿಕವಾಗಿಯೇ ಇದ್ದು, ಕಾಲಾನಂತರ ಲಿಪಿ ರೂಪುಗೊಂಡಿರಲೂಬಹುದು. ಋಷಿ ಮುನಿಗಳ ಬಾಯಿಂದ ಹೊರಟ ವೇದಗಳು ಕಿವಿಯಿಂದ ಕಿವಿಗೆ ಹರಡಿ, ಲಿಪಿ ರೂಪುಗೊಂಡ ಬಳಿಕ ಕಾಲಾನಂತರ ಕೃತಿಗೆ ಇಳಿದಿರಲಿಕ್ಕೂ ಸಾಕು. ನಂತರ ಸನ್ಮಾನ್ಯ ಯಾಸ್ಕರು ರಚಿಸಿದ ನಿರುಕ್ತವೂ ಸೇರಿದಂತೆ ವೇದಾಂಗಗಳು ಹುಟ್ಟಿರಬಹುದು.
ಒಟ್ಟಾರೆ, ಈ ವಿಶ್ವದಲ್ಲಿ ಆ `ವಿಶ್ವ ಚೇತನ ಶಕ್ತಿ' ಕುರಿತಾದ ತಮ್ಮ ತಪಸ್ಸು, ಯೋಗ ಶಕ್ತಿ, ನಡೆ, ನುಡಿ, ಜೀವನ ವಿಧಾನ ಮುಂತಾದ ಮಹಾನ್ ಸಾಧನೆಗಳ ಫಲದಿಂದಾಗಿ ನಮ್ಮ ಋಷಿ ಮುನಿಗಳಿಗೇ ಭಗತ್ಪ್ರೇರಣೆಯಾಗಿ, ಅವರುಗಳೇ ವೇದಗಳನ್ನು ರಚಿಸಿ ಪ್ರಚುರಪಡಿಸಿರಬೇಕೆಂಬುದು ನನ್ನ ಅಭಿಪ್ರಾಯ. ಅಂದ ಮೇಲೆ ವೇದಗಳು `ಪೌರುಷೇಯ'ವೇ ಹೊರತು ಅಪೌರುಷೇಯವಲ್ಲ. ಅನೇಕ ಋಷಿ ಮುನಿಗಳಿಂದ ರಚಿತವಾಗಿ, ಶತ ಶತಮಾನಗಳ ಕಾಲ ನಮ್ಮ ಪರಂಪರೆಯಲ್ಲಿ ಸಾಗಿ ಬಂದ ಈ ಅಪಾರ ಜ್ಞಾನ ರಾಶಿಯನ್ನು ವೇದ ವ್ಯಾಸರು ಪೂರ್ಣ ಅಧ್ಯಯನ ಮಾಡಿ, ಕ್ರೋಢೀಕರಿಸಿ ಕೊಟ್ಟಿರಲೂಬಹುದು. !?- ನೀವೇನಂತೀರಿ?

ಎಚ್.ಎಸ್. ಪ್ರಭಾಕರ,
ಪತ್ರಕರ್ತ, ಹಾಸನ/ದಾವಣಗೆರೆ.
------------------------------------------------------------

ಹರಿಹರಪುರ ಶ್ರೀಧರರ ಅನಿಸಿಕೆ:
ವೇದದ ಮೂಲ ಹುಡುಕಲು ಅಧ್ಯಯನವಂತೂ ಬೇಕಾಗುತ್ತದೆ. ನಾನು  ಅಧ್ಯಯನ ಮಾಡಿಲ್ಲ. ಆದರೆ ವೇದವು ಅಪೌರುಷೇಯವೆನ್ನುವ ಮಾತನ್ನು  ಪೂರ್ಣವಾಗಿ ಒಪ್ಪಲು  ನನ್ನ ಮನ ಹಿಂದೆ ಬೀಳುತ್ತದೆ.  ಒಂದೆರಡು ಪದ್ಯವನ್ನು ಬರೆದು ಅದರಲ್ಲಿ  ಆನಂದವನ್ನು  ಅನುಭವಿಸಿರುವ ನಾನು [ "ಆನಂದ" -ಈ ಪದದ ಮಹತ್ವದ ಅರಿವಿದೆಯಾದರೂ ಸಾಮಾನ್ಯವಾಗಿ ನಾವು   ಆನಂದವಾಯ್ತೆನ್ನುವ ಮಾತನಾಡುತ್ತೇವೆ]  ಸಾಹಿತ್ಯ ವಿದ್ಯಾರ್ಥಿಯಲ್ಲದ, ಯಾವ ಅಧ್ಯಯನವನ್ನೂ  ಮಾಡಿರದ ನನ್ನ ಕೈನಲ್ಲಿ ಈ ಪದ್ಯವನ್ನು ಬರೆಯಲು ಸಾಧ್ಯವಾದ್ದಾದರೂ ಹೇಗೆ!? ಎಂದು ಹಲವು  ಭಾರಿ ಅಂದುಕೊಳ್ಳುತ್ತೇನ.ಆಗ ಸಹಜವಾಗಿ ಅದು ಭಗವದ್ ಪ್ರೇರಣೆಯೇ ಅಲ್ಲದೆ ಮತ್ತೇನೂ ಅಲ್ಲ,  ಎಂಬ ಸಮಾಧಾನ ಉತ್ತರವಾಗುತ್ತದೆ. ಈ ನನ್ನ ಅನುಭವವನ್ನೇ ಆಧಾರವಾಗಿಟ್ಟುಕೊಂಡು ವೇದಗಳಿಗೂ  ಇದನ್ನೇಆನ್ವಯಿಸುತ್ತೇನೆ. ಚಿಕ್ಕ-ಪುಟ್ಟ ಪದ್ಯ ರಚನೆಯೇ ನನ್ನದಲ್ಲವೆಂದಮೇಲೆ ಇಂತಹ  ಅನರ್ಘ್ಯ ರತ್ನವಾದ ವೇದಗಳನ್ನು ಯಾವ ಮನುಷ್ಯನೂ ತನ್ನ ಸ್ವಸಾಮರ್ಥ್ಯದಿಂದ ರಚಿಸಲು  ಸಾಧ್ಯವಿಲ್ಲದ ಮಾತೆಂಬುದನ್ನು ಸಹಜವಾಗಿ ಒಪ್ಪಬಹುದು. ಸೃಷ್ಟಿಯ ಜೊತೆ ಜೊತೆಗೇ ವೇದವನ್ನೂ  ಭಗವಂತನು ಕೊಟ್ಟಿದ್ದಾನೆಂಬುದು ಶೀ ಸುಧಾಕರಶರ್ಮರ ವ್ಯಾಖ್ಯೆ.[ಆದರೆ ಸಧಾಕರಶರ್ಮರು ಇದು   ನನ್ನ ಮಾತಲ್ಲ, ವೇದದಲ್ಲಿಯೇ ಇದನ್ನು ತಿಳಿಸಿದೆ ಎಂದು ಆಧಾರವನ್ನು  ನೀಡುತ್ತಾರೆ] ಈ ಮಾತನ್ನು ಒಪ್ಪಲು ಈ ಕೆಳಕಂಡ ಅಂಶಗಳು ನನಗೆ ಅಡ್ಡಿಯಾಗುತ್ತವೆ.
1.ಸೃಷ್ಟಿಯ ಜೊತೆಗೇ ವೇದವನ್ನು ಭಗವಂತನು ಕರುಣಿಸಿದ್ದರೆ ಅದರ ಭಾಷಾಮಾಧ್ಯಮ ಏನಾಗಿತ್ತು?
2. ಒಬ್ಬ ಋಷಿ ವೇದವನ್ನು ಉಚ್ಛರಿಸಿದರೆ ಜೊತೆಯಲ್ಲಿದ್ದ ಇನ್ನುಳಿದ ಶಿಷ್ಯರು ಅದನ್ನು  ಅನುಸರಿಸಿದರು, ಎಂಬುದು ವೇದಪಾಠ ಕಲಿಕೆಯ ರೀತಿ, ಎಂದು ಕೇಳಿದ್ದೇನೆ. ಅಂದರೆ ಬಾಯಿಂದ  ಕಿವಿಗೆ ವೇದವನ್ನು ಹೇಳುತ್ತಾ ವೇದವನ್ನು ಕಲಿತರೆಂಬ ಮಾತಿದೆ. ಸರಿ, ಆದರೆ ಮೂಲದಲ್ಲಿ  ಒಂದು ಮಂತ್ರದ ರಚನೆ ಹೇಗಾಯ್ತು? ಎಂಬುದು ಗೊತ್ತಾಗುವುದೇ ಇಲ್ಲ.
3.  ಹಲವಾರು ಋಷಿಗಳು ತಮ್ಮ ತಪಸ್ಸಿನ ಬಲದಿಂದ ಲಭ್ಯವಾದ ಭಗವಂತನ ಕೃಪೆಯಿಂದ  ವೇದಮಂತ್ರಗಳನ್ನು ಕಂಡುಕೊಂಡು ಅದಕ್ಕೆ ರೂಪಕೊಟ್ಟರೆಂಬುದು  ನನ್ನ ಅನಿಸಿಕೆ
4. ಅಂದರೆ ವೇದದ ರಚನೆಗೆ ಮುಂಚೆಯೇ ಭಾಷೆಯೊಂದು ಇದ್ದಿರಬೇಕು.

5. ಸುಮ್ಮನೆ ವೇದವು ಅಪೌರುಷೇಯವೆಂದರೆ ಅದು ಮೂಲದಲ್ಲಿ ಮನುಷ್ಯರನ್ನು ತಲುಪಿದ್ದಾದರೂ ಹೇಗೆ? ಎಂಬುದಕ್ಕೆ ಉತ್ತರ ಸಿಗುವುದಿಲ್ಲ.

6. ವೇದವನ್ನು ಜಗತ್ತಿನ ಮೊದಲ ಸಾಹಿತ್ಯವೆಂದು ಹೇಳಬಹುದೇನೋ, ಕಾರಣ, ವೇದವನ್ನು ಯಾರೇ ಒಬ್ಬ ವ್ಯಕ್ತಿ ಯಾವುದೋ ಒಂದು ಕಾಲದಲ್ಲಿ ರಚಿಸಿಲ್ಲ.

7.ವೇದವು  ಇಡೀ ಮಾನವ ಕುಲಕ್ಕೆಕೊಟ್ಟ ಯೂಸರ್ ಮ್ಯಾನ್ಯುಯಲ್ ಎಂಬುದು ಶರ್ಮರಮಾತನ್ನು  ಒಪ್ಪುತ್ತೇನಾದರೂ ಅಂದಿನ ಜಗತ್ತಿನ ವ್ಯಾಪ್ತಿ ಎಷ್ಟಿತ್ತೆಂಬುದು ಗೊತ್ತಾಗುವುದಿಲ್ಲ.  ಪ್ರಾಯಶ: ಜಗತ್ತಿನ ಮೂಲವೂ ಭಾರತವೇ ಆಗಿರಬೇಕು.ಭಾರತಕ್ಕೆ ಹೊಂದಿಕೊಂಡಂತೆ ಇದ್ದಿರಬಹುದಾದ  ಚಿಕ್ಕಪುಟ್ಟ ಪ್ರದೇಶಗಳೇ ಜಗತ್ತೆನಿಸಿರಬೇಕು.ನಮ್ಮ ದೇಶವನ್ನು ಭಾರತವೆನ್ನಿ,  ಆರ್ಯಾವರ್ತವೆನ್ನಿ, ಹಿಂದು ದೇಶವೆನ್ನಿ-ಅದು ಬೇರೆಯಮಾತು.
8.ಇಂತಹ ಒಂದು ಅನರ್ಘ್ಯರತ್ನದ ಸರಿಯಾದ ಉಪಯೋಗ ಆಗಲಿಲ್ಲವೇಕೆ? ಇದ್ದ ಅಡ್ಡಿ ಆತಂಕಗಳೇನು? ಎಂಬುದರಬಗ್ಗೆ ಶ್ರೀ ಶರ್ಮರು ವಿವರಿಸಬೇಕು.
9. ವೇದವನ್ನು ಯಾಸ್ಕರು ರಚಿಸಿದ ನಿರುಕ್ತದ ಸಹಾಯದಿಂದ ಅರ್ಥ ಮಾಡಿಕೊಂಡರೆ ಮಾತ್ರ  ಮಾನವನ ಉನ್ನತಿಗೆ ಅಗತ್ಯವಾದ ಹಲವು ಸೂತ್ರಗಳು ಅಲ್ಲಿ ಸಿಗುತ್ತವೆ. ಹಾಗಾದರೆ ಯಾಸ್ಕರು ನಿರುಕ್ತವನ್ನು ರಚಿಸುವ ಮುಂಚೆ ವೇದವನ್ನು ಹೇಗೆ ಅರ್ಥ ಮಾಡಿಕೊಂಡರು? ನಿರುಕ್ತದ ರಚನೆಯಾದದ್ದು ಅಂದರೆ ಯಾಸ್ಕರ ಕಾಲ ಯಾವಾಗ? ವ್ಯಾಸರು ವೇದಗಳನ್ನು ವಿಂಗಡಿಸಿ ಅದಕ್ಕೊಂದು ರೂಪ ಕೊಟ್ಟರೇ? ವ್ಯಾಸರು ವೇದವನ್ನು ಅರ್ಥ ಮಾಡಿಕೊಂಡಿದ್ದಾದರೂ ಹೇಗೆ? ಅಂದರೆ   ಮೊದಲ ಮನುಷ್ಯನ ಸೃಷ್ಟಿಯಾದಾಗ ಅವನು ವೇದವನ್ನು ಹೇಗೆ ಅರ್ಥ ಮಾಡಿಕೊಂಡ?
ಹೀಗೆ ಹಲವು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಶ್ರೀ ಶರ್ಮರು ಎಲ್ಲವನ್ನೂ ವೇದಮಂತ್ರಗಳ ಮೂಲಕವೇ ನಮ್ಮಂತ ಸಾಮಾನ್ಯರಿಗೆ ಸಮಾಧಾನಪಡಿಸುವುದೂ ಕಷ್ಟವೇ. ಆದರೂ ಶರ್ಮರೇ ನಮಗೆ ಸಮಾಧಾನ ಹೇಳಬೇಕು.
----------------------------------------------------------------
 ಕವಿನಾಗರಾಜರ  ಅನಿಸಿಕೆ:


  ನಾನೊಬ್ಬ ಸಾಮಾನ್ಯ. ಹೇಳಬೇಕೆಂದರೆ 'ಪಂಡಿತನು ನಾನಲ್ಲ, ಪಾಂಡಿತ್ಯವೆನಗಿಲ್ಲ; ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ.' ಮನಸ್ಸಿಗೆ ಒಪ್ಪುವ ವಿಚಾರಗಳನ್ನು ಯಾರು ಹೇಳಿದರೂ ಸ್ವೀಕರಿಸುವ ಮನೋಭಾವ ನೀಡಿದ ಭಗವಂತನಿಗೆ ನಾನು ಋಣಿ. ಶ್ರೀಧರ ತಿಳಿಸಿದಂತೆ ಒಂದೆರಡು ಗಂಟೆಗಳು ಉಪಯುಕ್ತ ಚರ್ಚೆ ನಡೆಸಿದ ಸಮಾಧಾನವಿದೆ. ಶ್ರೀಯುತ ಪ್ರಭಾಕರ ಮತ್ತು ಶ್ರೀಧರ್ ಈಗಾಗಲೇ ಎತ್ತಿದ ಅಂಶಗಳಿಗೆ ಪೂರಕವಾಗಿ ನನ್ನ ಸಂದೇಹಗಳನ್ನೂ ಮುಂದಿಡಲು ಪ್ರಯತ್ನಿಸಿರುವೆ. 

1. ವೇದಗಳು ಅಪೌರುಷೇಯ ಎಂಬ ಬಗ್ಗೆ ನನಗೆ ಸಮಾಧಾನಕರ ಮಾಹಿತಿ  ಸಿಗಬೇಕಿದೆ. ಮೂರು ಬಗೆಯ ಅಸ್ತಿತ್ವಗಳ -ಜಡ, ಜೀವಾತ್ಮ(ಅಣುಚೇತನ)
 ಮತ್ತು ಪರಮಾತ್ಮ(ವಿಶ್ವಚೇತನ)- ಬಗ್ಗೆ ಶ್ರೀ ಶರ್ಮರ ಉಪನ್ಯಾಸ ಪ್ರೇರಣಾದಾಯಕವಾಗಿದ್ದು, ಕೆಲವು ಮೂಲಭೂತ ಸಂದೇಹಗಳನ್ನು ದೂರ ಮಾಡಿವೆ. ಈ ಕುರಿತು ಕೆಲ ಸಣ್ಣಪುಟ್ಟ ಸಂದೇಹಗಳಿದ್ದರೂ ಅವು ಈಗಿನ ಚರ್ಚೆಗೆ ಸಂಬಂಧಪಡದುದಾಗಿರುವುದರಿಂದ ಇಲ್ಲಿ ಪ್ರಸ್ತಾಪಿಸುವುದಿಲ್ಲ.
2. ವೇದಗಳು ಅಪೌರುಷೇಯವಾಗಿದ್ದರೆ ಮಾನವನಿಗೆ ತಲುಪಿದ್ದು ಹೇಗೆ ಮತ್ತು ಯಾರಿಂದ?
3. ವೇದಗಳು ಸಾರ್ವಕಾಲಿಕ, ಉತ್ತಮ ಮತ್ತು ಸತ್ಯದ ವಿಚಾರಗಳನ್ನು ಹೊಂದಿರುವುದಾದರೂ ಅವು ಭಗವಂತನ ಸೃಷ್ಟಿಯಾಗಿದ್ದರೆ ಜಗತ್ತಿನ ಹೆಚ್ಚಿನ ಜನರು ಈಗ ಬಳಸುವ ಭಾಷೆಯಲ್ಲಿ ಏಕೆ ಇಲ್ಲ?
4.ಭಗವಂತ ಸರ್ವವ್ಯಾಪಿಯಾಗಿರಬೇಕೆಂದರೆ ನಿರಾಕಾರಿಯಾಗಿರಬೇಕು ಎಂಬುದನ್ನು ಒಪ್ಪಬಹುದು. ಚಲಿಸದೆ ಚಲಿಸುವ, ನೋಡದೆ ನೋಡುವ, ಮಾಡದೆ ಮಾಡುವ, ಎಲ್ಲಾ ಆಗು ಹೋಗುಗಳಿಗೆ ಸರ್ವಶಕ್ತ ಭಗವಂತನೇ  ಕಾರಣ ಎಂಬ ಅರ್ಥದಲ್ಲಿ ವೇದಗಳು ಆತನ ಸೃಷ್ಟಿ  ಎಂದು ಒಪ್ಪಬಹುದಾದರೂ, ನಿಜ ಅರ್ಥದಲ್ಲಿ ಅವನ ಪ್ರೇರಣೆಯಿಂದ ಋಷಿ-ಮುನಿಗಳು, ವಿದ್ವಾಂಸರುಗಳಿಂದ ರಚಿತವಾಗಿರಬಹುದೆನ್ನಬಹುದೆ? ಅಗಾಧ ವಿಚಾರಗಳು, ವಿಸ್ತಾರತೆ, ವೈವಿಧ್ಯತೆಗಳನ್ನು ಗಮನಿಸಿದರೆ ಭಗವತ್ಪ್ರೇರಣೆಯಿಂದ ರಚಿತವಾದ ವೇದಗಳು ಒಬ್ಬರ ಕೃತಿಯೆಂದು ಹೇಳುವುದು ಕಷ್ಟ.
5. ವೇದಗಳು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ ಅನೇಕ ಕಲ್ಪನೆಗಳು, ತಪ್ಪು ಅಭಿಪ್ರಾಯಗಳು ಮೂಡಿರುವ ಸಾಧ್ಯತೆ ಇದೆ. ಭಗವಂತ ಸಾಕಾರ ಅಥವ ನಿರಾಕಾರನೇ ಎಂಬ ಬಗ್ಗೆ ಸಹ ಇರುವ ವಿವಾದ ಒಂದು ನಿದರ್ಶನ
--------------------------------------------
ಒಳ್ಳೆಯ ಪ್ರಶ್ನೆಗಳು ಶ್ರೀಧರ್ ಅವರೆ. ಇದರ ಬಗ್ಗೆ ನನ್ನದೂ ಕೆಲವು ಅಭಿಪ್ರಾಯಗಳನ್ನು (ತಿಳಿವಿನಿಂದ ಅಲ್ಲ, ಹೀಗಿರಬಹುದೇನೋ ಅನ್ನುವ ಅನುಮಾನದಿಂದ) ಯಾವಾಗಲೊಮ್ಮೆ ಬರೆಯುವೆ)- ಸುಧಾಕರ ಶರ್ಮರ ಉತ್ತರವನ್ನು ನೋಡಲು ನಾನೂ ಕಾತುರನಾಗಿದ್ದೇನೆ.
-ರಾಮಪ್ರಸಾದ್,ಕ್ಯಾಲಿಫೋರ್ನಿಯಾ

Friday, November 5, 2010

ಮೂಢ ಉವಾಚ

ಮೂಢ ಉವಾಚ -10

ಮನೆಯ ಮೇಲೆ ಮನೆ ಕಟ್ಟಿ ಉಬ್ಬಿದೊಡಿಲ್ಲ|
ನಗ ನಾಣ್ಯ ಸಿರಿ ಸಂಪದವ ತುಂಬಿಟ್ಟರಿಲ್ಲ||
ನಿಂತ ನೀರು ಕೊಳೆತು ನಾರುವುದು ನೋಡ|
ಕೂಡಿಟ್ಟವರ ಪಾಡು ಬೇರಲ್ಲ ಮೂಢ||


ಆಳಿದವರಳಿದುಳಿಸಿಹುದೇನು ಕೇಳು|
ಮನೆ ಮಹಲು ಸಿರಿ ನಗವ ಕೊಂಡೊಯ್ವರೇನು?
ಅವಗುಣವ ಶಪಿಸಿ ಜನರು ಗುಣವ ನೆನೆವರು|
ಎರಡು ದಿನದಲಿ ಎಲ್ಲ ಮರೆಯುವರು ಮೂಢ||
*****************
-ಕವಿನಾಗರಾಜ್.

ಅಕೌಂಟ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು

ಪ್ರಿಯ ಬಂಧುಗಳೇ,
ನನ್ನ ಮಿತ್ರರಾದ ಶ್ರೀ ರಾಮ್ ಪ್ರಸಾದ್, ಶ್ರೀ ರಾಕೇಶ್ ಹಾಗೂ ನನ್ನ ಮಗ ಶ್ರೀಕಂಠ-ಇವರುಗಳು ನನಗೊಂದು ಮೇಲ್ ಕಳುಹಿಸಿ ನನ್ನ ಆರ್ಕುಟ್ ಅಕೌಂಟ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಅಶ್ಲೀಲ ಕೊಂಡಿಯೊಂದನ್ನು ಹಲವರಿಗೆ ಮೇಲ್ ಮಾಡಿರುವ ಬಗ್ಗೆ ಎಚ್ಛರಿಸಿದ್ದಾರೆ. ಅಂತರ್ಜಾಲದ ಸದುಪಯೋಗ ಪಡಿಸಿಕೊಳ್ಳಲು ಕೆಲವರಿಂದ ಪ್ರಯತ್ನ ಸಾಗುತ್ತಿದ್ದರೆ, ಇನ್ನು ಕೆಲವರು ಅದರ ದುರುಪಯೋಗ ಮಾಡುತ್ತಿದ್ದು ಕಿರಿಕಿರಿಗೆ ಕಾರಣರಾಗುತ್ತಾರೆ. ಅಂತೂ ಎಲ್ಲರಿಗೂ ಆ ಭಗವಂತನು ಸನ್ಮತಿ ಕೊಡಲೆಂದು ಪ್ರಾರ್ಥಿಸುತ್ತಾ, ವೇದಸುಧೆಯ ಅಭಿಮಾನಿಗಳಿಗೆ ಯಾರಿಗಾದರೂ ಈ ರೀತಿಯ ಕೊ೦ಡಿ  ಬಂದಿದ್ದರೆ  ಅದನ್ನು ಶಾಶ್ವತವಾಗಿ ಅಳಿಸಿ ವೇದಸುಧೆಯ ಸದ್ವಿಚಾರಗಳನ್ನು ಸ್ವೀಕರಿಸಬೇಕಾಗಿ ಕೋರುವೆ.ಅಂತೂ ಆರ್ಕುಟ್ ಅಕೌಂಟ್ ನ್ನು ಶಾಶ್ವತವಾಗಿ ಡಿಲೀಟ್ ಮಾಡಿ ನಿಟ್ಟುಸಿರು ಬಿಟ್ಟಿರುವೆ. ಅನಿವಾರ್ಯವಾಗಿ ಎಲ್ಲಾ ಪಾಸ್ ವರ್ಡ್ ಬದಲಿಸಬೇಕಾಯ್ತು.ಒಂದು ಅಂಶವನ್ನಂತೂ ಈ ಘಟನೆ ಸಾಬೀತು ಪಡಿಸಿತು-" ಸಂವೇದನಾಶೀಲ ಸ್ನೇಹಿತರು ಕಾಲಕಾಲದಲ್ಲಿ ಎಚ್ಛರಿಸುತ್ತಾ ಮಾರ್ಗದರ್ಶನ ಮಾಡುತ್ತಾರೆ". 
-ಶ್ರೀಧರ್

ಯೋಚಿಸಲೊ೦ದಿಷ್ಟು... ೧೬

೧.ಕತ್ತಲೆ ಎ೦ಬುದು ಬೆಳಕಿನ ವಿರುಧ್ಧವಲ್ಲ!ಅದು ಬೆಳಕಿನ ಗೈರನ್ನು ಸೂಚಿಸುತ್ತದೆ!ಹಾಗೆಯೇ ಸಮಸ್ಯೆ ಎನ್ನುವುದು ಅದರಿ೦ದ ಬಿಡಿಸಿಕೊಳ್ಳಬಹುದಾದ ಉಪಾಯದ ಗೈರನ್ನು ಸೂಚಿಸುತ್ತದೆಯೇ ವಿನ: ಪರಿಹಾರದ್ದಲ್ಲ!
೨. ಸತ್ಸ೦ಗವೆನ್ನುವುದು ಸುಗ೦ಧ ಗ್ರ೦ಥಿಗೆಗಳನ್ನು ಮಾರುವ ಅ೦ಗಡಿಯಲ್ಲಿ ಹೊಕ್ಕ೦ತೆ! ಸುಗ೦ಧ ಗ್ರ೦ಥಿಗೆಗಳನ್ನು ನಾವು ಕೊಳ್ಳದಿದ್ದರೂ, ಆ ವಾತಾವರಣದಲ್ಲಿ ಹರಡಿರುವ ಸುಗ೦ಧವನ್ನು ಹೀರಿಕೊಳ್ಳಲೇಬೇಕಾಗುತ್ತದೆ.

೩.ಜೀವನದಲ್ಲಿ ಕೊರತೆಯೇ ಅವಕಾಶಗಳನ್ನು ಸೃಷ್ಟಿಸುತ್ತದೆ!ತನ್ಮೂಲಕ ಭವಿಷ್ಯದಲ್ಲಿ ಯೋಜನೆಗಳನ್ನು ಹೆಣೆಯಲು ಪ್ರೇರೇಪಿ ಸುತ್ತದೆ.

೪. “ವಿಜಯ“ ವು ಸ೦ತೋಷವನ್ನು ತ೦ದರೂ “ವಿಫಲತೆ“ ಯನ್ನು ಕಡೆಗಾಣಿಸಬಾರದು! ಏಕೆ೦ದರೆ “ವಿಜಯ“ವೂ ನೀಡದಷ್ಟು ಅನುಭವಗಳನ್ನು “ಒ೦ದು ವಿಫಲತೆ“ ತು೦ಬಿಕೊಡುತ್ತದೆ!

೫.ಸ೦ಬ೦ಧಗಳಲ್ಲಿ ಹಾಗೂ ಮಿತೃತ್ವಗಳಲ್ಲಿ ಒಬ್ಬನು ತನ್ನ ನ೦ಬಿಕೆಯನ್ನು ದೃಢಪಡಿಸಲೋಸುಗವಾಗಿ ಸಾಕ್ಷ್ಯಗಳನ್ನು ಹಾಜರು ಪಡಿಸುವಾಗಲೇ ಪರಸ್ಪರ ಸ೦ಬ೦ಧಗಳು ಕಡಿದು ಹೋಗುವ ಮಟ್ಟವನ್ನು ತಲುಪಿವೆ ಎ೦ದು ಖಚಿತ ಪಡಿಸಿಕೊಳ್ಳಬಹುದು.

೬. ಪ್ರತಿಯೊ೦ದನ್ನೂ ಸರಿಯಾಗಿ ಅರ್ಥೈಸಿಕೊ೦ಡು,ಅವುಗಳನ್ನು ವಿಮರ್ಶಿಸಿಕೊಳ್ಳುವ ಮಟ್ಟವನ್ನು ತಲುಪಿದೆವೆ೦ದರೆ, ನಮ್ಮ ಜೀವನವನ್ನು ಆನ೦ದವಾಗಿ ಕಳೆಯಲು ನಾವು ಸಮರ್ಥರು ಎ೦ದರ್ಥ.

೭. ಮಗು ಹುಟ್ಟಿದ ಕೂಡಲೇ ಮೊದಲು ಅಳುತ್ತದೆ, ನ೦ತರ ನಗುತ್ತದೆ! ಅ೦ತೆಯೇ ಯಾರೂ ಹುಟ್ಟಿನಿ೦ದಲೇ ಆನ೦ದವನ್ನು ಪಡೆದು ಬ೦ದಿರುವುದಿಲ್ಲ. ಆದರೆ ಆನ೦ದವನ್ನು ಪಡೆಯಲು ಯಾ ಅನುಭವಿಸಲು ಜೀವನದಲ್ಲಿ ಸದಾ ಅವಕಾಶಗಳು ನಮಗೆ ದೊರೆಯುತ್ತಲೇ ಇರುತ್ತವೆ!

೮.ಸಾಧನೆಯ ಹಾದಿಯಲ್ಲಿನ ಪ್ರತಿಯೊ೦ದೂ ಕಷ್ಟಗಳನ್ನು ಅಪ್ಪಿಕೊಳ್ಳಲೇಬೇಕು.ಏಕೆ೦ದರೆ ನಿರಾಶೆ ಹಾಗೂ ನೋವುಗಳಿ ಗಿ೦ತ ಉತ್ತಮವಾದ “ಗುರು“ವಿಲ್ಲ ಹಾಗೆಯೇ ಭವಿಷ್ಯದ ವಿಜಯದ ಗಳಿಕೆಗೆ “ವಿಫಲತೆ“ಗಿ೦ತ ಉತ್ತಮವಾದ “ಹೆದ್ದಾರಿ“ ಮತ್ತೊ೦ದಿಲ್ಲ!

೯. “ಆಕರ್ಷಣೆ“ ಎ೦ಬುದು ತಾತ್ಕಾಲಿಕವಾದ ಮೋಹವಷ್ಟೇ! ನಿಜವಾದ “ಪ್ರೇಮ“ವೇ ಶಾಶ್ವತವಾದ ಆಕರ್ಷಣೆ!

೧೦. ನಮ್ಮ ಸಿಟ್ಟಿನ ಪರಿಣಾಮವು ಯಾವಾಗಲೂ ನಮ್ಮ ಸಿಟ್ಟಿಗೇಳುವ ಕಾರಣಕ್ಕಿ೦ತ ಹೆಚ್ಚು ನೋವನ್ನು ತರುತ್ತದೆ!

೧೧. “ಅಹ೦ಕಾರ“ವು ಕಣ್ಣಿಗೆ ತು೦ಬಿಕೊ೦ಡ ಧೂಳಿನ೦ತೆ! ಧೂಳನ್ನು ತೊಳೆದುಕೊಳ್ಳದೇ, ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಅ೦ತೆಯೇ ಅಹ೦ಕಾರವನ್ನು ತೊಡೆದುಕೊಳ್ಳದೇ, ನಮಗೆ ಯಾವೊ೦ದನ್ನೂ ಸರಿಯಾಗಿ ಗಮನಿಸಲು ಸಾಧ್ಯವಾಗದು!

೧೨. ಜೀವನದಲ್ಲಿ ಸ್ಪರ್ಧಾತ್ಮಕ ಗುರಿಯನ್ನು ಇಟ್ಟುಕೊ೦ಡು, ಅದನ್ನು ಸಾಧಿಸುವಲ್ಲಿ ನಿಖರತೆಯನ್ನು ತೋರಬೇಕು, ಚಿ೦ತನೆ ಗಳು ಶುಧ್ಧವೂ ಸಕಾರಾತ್ಮಕವೂ ಆಗಿದ್ದಲ್ಲಿ ಜೀವನವೊ೦ದು ಅರ್ಥಪೂರ್ಣ ಕಾವ್ಯವಾಗುತ್ತದೆ.

೧೩. ಜನರು ನಮ್ಮನ್ನು ಬೇಸರಪಡಿಸಿದಾಗ ಅವರ ವ್ಯಕ್ತಿತ್ವವನ್ನು ಅಳೆಯುವದಕ್ಕಿ೦ತ ನಾವು ಅವರನ್ನು ಬೇಸರ ಪಡಿಸಿದಾಗ ಅವರಲ್ಲುದಯಿಸುವ ಭಾವನೆಗಳ ಮೂಲಕ ಅವರ ವ್ಯಕ್ತಿತ್ವವನ್ನು ತೀರ್ಮಾನಿಸಬೇಕು.

೧೪. ಯಾರನ್ನೂ ಅತಿಯಾಗಿ ನೆಚ್ಚಿಕೊಳ್ಳುವುದು ಹಿತವಲ್ಲ! ಏಕೆ೦ದರೆ ಅದು ನಮ್ಮನ್ನು ನಾವೇ ಅತಿಯಾಗಿ ನೋಯಿಸಿಕೊಳ್ಳು ವುದರೊ೦ದಿಗೆ ಕೊನೆಯಾಗುತ್ತದೆ!

೧೫. ಪ್ರಪ೦ಚದಲ್ಲಿ ಎಲ್ಲರೂ ಏಕರೂಪದ ನಿಪುಣರಲ್ಲ !ಆದರೆ ಎಲ್ಲರಿಗೂ ಅವರವರ ನಿಪುಣತೆಯನ್ನು ಒರೆಗೆ ಹಚ್ಚುವ೦ತ ಏಕರೂಪ ಅವಕಾಶಗಳು ಮಾತ್ರ ಬ೦ದೊದಗುತ್ತಲೇ ಇರುತ್ತವೆ!

Monday, November 1, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -6

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -6



ಋಗ್ವೇದದಲ್ಲಿ:-


ಯೇ ತ್ರಿಂಶತಿ ತ್ರಯಸ್ಪರೋ ದೇವಾಸೋ ಬರ್ಹಿರಾಸದನ್|
ವಿದನ್ನಹ ದ್ವಿತಾಸನನ್|| (ಋಕ್. 8.28.1)


[ಯೇ] ಯಾವ, [ತ್ರಿಂಶತಿ ತ್ರಯಃ ಪರಃ ದೇವಾಸಃ] ಮೂವತ್ತಮೂರು ದೇವತೆಗಳು, [ಬರ್ಹಿ ಆಸದನ್] ಆಸನಾರೂಢರಾಗಿದ್ದಾರೋ [ದ್ವಿತಾಸನನ್] ಜಡರೂಪದಲ್ಲಿಯೂ ದಾನ ನೀಡುತ್ತಾ [ನಃ ವಿದನ್] ನಮಗೆ ಪ್ರಾಪ್ತರಾಗಲಿ;

ಎಂದು ಓದುತ್ತೇವೆ. ಅಥರ್ವವೇದದಲ್ಲಿ:-


ತ್ರಯಂಸ್ತ್ರಿಂಶತ್ತ್ರಿಶತಾಃ ಷಟ್ ಸಹಸ್ರಾಃ ಸರ್ವಾಂತ್ಸ ದೇವಾಂಸ್ತಪಸಾ ಪಿಪರ್ತಿ|| (ಅಥರ್ವ.11.5.2.)


ಆ ತಪಸ್ವಿಯು 6333 ದೇವತೆಗಳನ್ನು ತನ್ನ ತಪಸ್ಸಿನಿಂದ ತೃಪ್ತಿಗೊಳಿಸುತ್ತಾನೆ-


ಎಂದು ಹೇಳಿದೆ. ಯಜುರ್ವೇದದಲ್ಲಿ:-


ಅಗ್ನಿರ್ದೇವತಾ ವಾತೋ ದೇವತಾ ಸೂರ್ಯೋ ದೇವತಾ ಚಂದ್ರಮಾ ದೇವತಾ
ವಸವೋ ದೇವತಾ ರುದ್ರಾ ದೇವತಾssದಿತ್ಯಾ ದೇವತಾ ಮರುತೋ ದೇವತಾ
ವಿಶ್ವೇ ದೇವಾ ದೇವತಾ ಬೃಹಸ್ಪತಿರ್ದೇವತೇಂದ್ರೋ ದೇವತಾ ವರುಣೋ ದೇವತಾ|| (ಯಜು. 14.20)


ಎಂಬ ಮಂತ್ರದಲ್ಲಿ ಅಗ್ನಿ, ವಾಯು, ಸೂರ್ಯ, ಚಂದ್ರ, ವಸುಗಳು, ಬೃಹಸ್ಪತಿ, ಇಂದ್ರ, ವರುಣ ಅವರೆಲ್ಲಾ ದೇವತೆಗಳು ಎಂದು ಹೇಳಿದೆ. ಆದರೆ ವೇದಗಳಲ್ಲೆಲ್ಲಿಯೂ ಈ ದೇವತೆಗಳೇ ಪರಮಾತ್ಮ ಎಂದು ಹೇಳಿಲ್ಲ. ಉಪಾಸನೆಯ ಪ್ರಕರಣದಲ್ಲಿ ಈ ದೇವತೆಗಳು ಉಪಾಸ್ಯರು ಎಂದು ಅಂಗೀಕರಿಸಿಲ್ಲ. ಈ ವಿದ್ವಾಂಸರಿಗೆ ಭ್ರಾಂತಿಯುಂಟಾಗಲು, ಈ ದೇವತೆಗಳ ಹೆಸರಿನಿಂದಲೇ ಪರಮಾತ್ಮನನ್ನು ನಿರ್ದೇಶಿಸಿರುವುದೂ ಒಂದು ಕಾರಣವಾಗಿದೆ. ಆದರೂ ವೇದಗಳು ಅತಿ ಸ್ಪಷ್ಟವಾಗಿ, ನಾನಾ ಹೆಸರುಗಳಿದ್ದರೂ ಪರಮಾತ್ಮನಿರುವುದೇನೋ ಒಬ್ಬನೇ ಎಂದು ಸ್ಪಷ್ಟವಾಗಿ ಸಾರಿವೆ. ಉದಾಹರಣೆಗೆ:

ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸ ಸುಪರ್ಣೋ ಗರುತ್ಮಾನ್|
ಏಕಂ ಸದ್ ವಿಪ್ರಾ ಬಹುಧಾ ವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ|| (ಋಕ್. 1.164.46)


[ಅಗ್ನಿಂ] ತೇಜೋಮಯ ಪ್ರಭುವನ್ನು [ಇಂದ್ರಂ, ಮಿತ್ರಂ, ವರುಣಮ್] ಇಂದ್ರ, ಮಿತ್ರ, ವರುಣ ಎಂದು [ಅಹುಃ] ಕರೆಯುತ್ತಾರೆ. [ಅಥೋ] ಹಾಗೆಯೇ [ಸಃ] ಆ ಪ್ರಭುವು [ದಿವ್ಯಃ] ದಿವ್ಯನೂ [ಸುಪರ್ಣಃ} ಸುಪರ್ಣನೂ [ಗರುತ್ಮಾನ್] ಗರುತ್ಮಂತನೂ ಅಹುದು. [ಸತ್ ಏಕಮ್] ಸತ್ತತ್ವ ಇರುವುದೇನೋ ಒಂದೇ. [ವಿಪ್ರಾಃ] ವಿಶೇಷ ಪ್ರಜ್ಞಾವಂತರಾದ ಜ್ಞಾನಿಗಳು [ಬಹುಧಾ ವದಂತಿ] ಅನೇಕ ರೀತಿಯಲ್ಲಿ ವರ್ಣಿಸುತ್ತಾರೆ. [ಅಗ್ನಿಂ] ಅದೇ ತೇಜೋರೂಪವನ್ನು [ಯಮಂ ಮಾತರಿಶ್ವಾನಂ ಅಹುಃ]ಯಮ, ಮಾತರಿಶ್ವಾ - ಎನ್ನುತ್ತಾರೆ.


ಇನ್ನು ಭ್ರಾಂತಿಗವಕಾಶವೆಲ್ಲಿ? ಇದೇ ಹೆಸರುಗಳಿಂದ ಬೇರೆ ದೇವತೆಗಳನ್ನು ನಿರ್ದೇಶಿಸಿದ ಮಾತ್ರಕ್ಕೆ ಅಥವಾ ಪರಮಾತ್ಮನನ್ನು ಬೇರೆ ಬೇರೆ ಹೆಸರುಗಳಿಂದ ಕರೆದ ಮಾತ್ರಕ್ಕೆ ಒಬ್ಬ ಪರಮಾತ್ಮ ನೂರಾರು ಪರಮಾತ್ಮರುಗಳಾಗಿ ಹೋಗುವುದಿಲ್ಲ. ಇದೊಂದು ಮಂತ್ರದ ಕಡೆ ದೃಷ್ಟಿ ಹರಿಸೋಣ:-


ಯೋ ನಃ ಪಿತಾ ಜನಿತಾ ಯೋ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ|
ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ|| (ಯಜು.10.82.3)


[ಯಃ] ಯಾವನು [ನಃ ಪಿತಾ] ನಮ್ಮ ತಂದೆಯೋ [ಜನಿತಾ] ಉತ್ಪಾದಕನೋ [ಯಃ] ಯಾವನು [ವಿಧಾತಾ] ನಿಯಾಮಕನೋ [ವಿಶ್ವಾ ಧಾಮಾನಿ ಭುವನಾನಿ ವೇದ] ಸಮಸ್ತ ನೆಲೆಗಳನ್ನೂ, ಲೋಕಗಳನ್ನೂ ಬಲ್ಲನೋ [ಯಃ] ಯಾವನು [ಏಕ ಏವ] ಒಬ್ಬನೇ ಒಬ್ಬನು [ದೇವಾನಾಂ ನಾಮಧಾ] ದೇವತೆಗಳ ಹೆಸರನ್ನೆಲ್ಲಾ ಧರಿಸುವವನಾಗಿದ್ದಾನೋ [ತಂ ಸಂಪ್ರಶ್ನಂ] ಆ ಮಹಾಜಿಜ್ಞಾಸುವಾದ ಪ್ರಭುವನ್ನು [ಅನ್ಯಾ ಭುವನಾ ಯಂತಿ] ಬೇರೆಲ್ಲಾ ಲೋಕಗಳನ್ನು ಪಡೆದುಕೊಳ್ಳುತ್ತವೆ.


ಒಬ್ಬನೇ ಒಬ್ಬ ಎಲ್ಲಾ ಎಲ್ಲಾ ದೇವತೆಗಳ ಹೆಸರನ್ನೂ ಧರಿಸುತ್ತಾನೆ - ಎಂದು ವೇದವೇ ಘೋಷಿಸುತ್ತಿರುವಾಗ, ವೇದಗಳಲ್ಲಿ ಅನೇಕೇಶ್ವರವಾದವಿದೆ ಎನ್ನುವುದಕ್ಕೆ ಅವಕಾಶವಾದರೂ ಎಲ್ಲಿದೆ? ಈ ವಾದಕ್ಕೆ ಪೂರ್ಣವಿರಾಮ ಹಾಕುವ ಈ ಕೆಳಗಿನ ಮಂತ್ರವನ್ನು ನೋಡಿರಿ:-


ನ ದ್ವಿತೀಯೋ ನ ತೃತೀಯಶ್ಚತುರ್ಥೋ ನಾಪ್ಯುಚ್ಚತೇ|
ನ ಪಂಚಮೋ ನ ಷಷ್ಠಃ ಸಪ್ತಮೋ ನಾಪ್ಯುಚ್ಚತೇ|
ನಾಷ್ಟಮೋ ನಾ ನವಮೋ ದಶಮೋ ನಾಪ್ಯುಚ್ಚತೇ|
ತಮಿದಂ ನಿಗತಂ ಸಹಃ ಸ ಏಷ ಏಕ ಏಕವೃದೇಕ ಏವ|| (ಅಥರ್ವ.13.4.16-18,20)


[ನ ದ್ವಿತೀಯಃ] ಎರಡನೆಯ ಪರಮಾತ್ಮನಿಲ್ಲ. [ನ ತೃತೀಯಃ] ಮೂರನೆಯವನೂ ಇಲ್ಲ. [ಚತುರ್ಥಃ ಅಪಿ ನ ಉಚ್ಯತೇ] ನಾಲ್ಜನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಪಂಚಮಃ] ಐದನೆಯವನಿಲ್ಲ. [ನ ಷಷ್ಠಃ] ಆರನೆಯವನಿಲ್ಲ. [ಸಪ್ತಮಃ ಅಪಿ ನ ಉಚ್ಯತೇ] ಏಳನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಅಷ್ಟಮಃ] ಎಂಟನೆಯವನಿಲ್ಲ. [ನ ನವಮಃ] ಒಂಬತ್ತನೆಯವನಿಲ್ಲ. [ದಶಮಃ ಅಪಿ ನ ಉಚ್ಯತೇ] ಹತ್ತನೆಯವನ ನಿರ್ದೇಶನವೂ ಇಲ್ಲ. [ಇದಂ ಸಹಃ] ಈ ಶಕ್ತಿ [ತಂ ನಿಗತಮ್] ಅವನಲ್ಲಿಯೇ ಅಡಕವಾಗಿದೆ. [ಸಃ ಏಷಃ] ಆ, ಈ ಪ್ರಭುವು [ಏಕಃ] ಒಬ್ಬನೇ ಆಗಿದ್ದಾನೆ. [ಏಕವೃತ್] ಒಬ್ಬನೇ ವ್ಯಾಪಕನಾಗಿದ್ದಾನೆ. [ಏಕ ಏವ] ಇರುವುದು ಒಬ್ಬನೇ ಒಬ್ಬನು.


ಈ ರೀತಿ ಎಲ್ಲಾ ಸಂದೇಹಗಳು ಅಡಗಿಹೋಗುತ್ತವೆ. ಭಗವಂತನಿರುವುದು ಒಬ್ಬನೇ. ಅವನು ನಿರಾಕಾರ-ನಿರ್ವಿಕಾರನು, ಸರ್ವಜ್ಞ-ಸರ್ವವ್ಯಾಪಕ-ಸರ್ವದ್ರಷ್ಟನು. ಅವನು ಸದಾ ಅಶರೀರನೇ. ಅವನು ಶಕ್ತಿರೂಪನು; ವ್ಯಕ್ತಿರೂಪನಲ್ಲ. ಅವನು ಮೇಲಿಂದ ಕೆಳಗಿಳಿದು ಬರುವನು, ಅವತಾರವೆತ್ತುವನು - ಎನ್ನುವುದು ಕೇವಲ ಭ್ರಾಂತಿ ಮಾತ್ರ. ಅವನೇ ಸೃಷ್ಟಿಕರ್ತನು.

Saturday, October 30, 2010

ಯೋಚಿಸಲೊ೦ದಿಷ್ಟು... ೧೫

೧.ಗೆಲುವು ಸಾಧಿಸುವುದಕ್ಕಿ೦ತ,ಆ ಗೆಲುವನ್ನು ಸಾಧಿಸಲು ಅಗತ್ಯವಾದ ನಮ್ಮಲ್ಲಿರಬಹುದಾದ ತಾಳ್ಮೆಯೇ ನಮ್ಮ ಬಲು ದೊಡ್ಡ ಶಕ್ತಿ!

೨. ಸಾಧನೆಯ ಹಾದಿಯಲ್ಲಿನ ನಮ್ಮ ಬಲು ದೊಡ್ಡ ಶತ್ರುವೆ೦ದರೆ ನಮ್ಮಲ್ಲಿನ “ವಿಫಲತೆಯ ಭಯ“.ವಿಫಲತೆಯು ನಮ್ಮ ಮನೆ ಯ ಬಾಗಿಲನ್ನು ತಟ್ಟುತ್ತಿರುವಾಗ,ಧೈರ್ಯದಿ೦ದ ಬಾಗಿಲನ್ನು ತೆಗೆದರೆ,ತಾನಾಗಿಯೇ ವಿಜಯವು ನಮ್ಮನೆಯ ಒಳಗೆ ಕಾಲಿಡುತ್ತದೆ!

೩. ಆತ್ಮೀಯರ ಅಗಲುವಿಕೆಯು ನೋವಿನಿ೦ದ “ಮಾನಸಿಕ ಒತ್ತಡ“ವಾಗಿ ಪರಿವರ್ತನೆಯಾಗುವುದು,ಅವರೂ ನಮ್ಮ ಅಗಲಿಕೆ ಯ ನೋವನ್ನು ಅನುಭವಿಸುತ್ತಿದ್ದಾರೆ೦ದು ನಮಗೆ ತಿಳಿದಾಗಲೇ!

೪. ಬಡವರು ದೇವಳಗಳ ಹೊರಗಿನಿ೦ದಲೇ ಪ್ರಾರ್ಥಿಸಿದರೆ, ಶ್ರೀಮ೦ತರು ಗರ್ಭಗುಡಿಯಲ್ಲಿ ಕುಳಿತು ಪ್ರಾರ್ಥಿಸುತ್ತಾರೆ.

೫. ಮೂರನೇ ವ್ಯಕ್ತಿಯ ಆಗಮನ ಇಬ್ಬರು ಆತ್ಮೀಯರ ನಡುವೆ ತಪ್ಪು ತಿಳುವಳಿಕೆಗಳ ಉಧ್ಬವಕ್ಕೆ ಕಾರಣವಾಗದಿದ್ದರೂ, ಅವ ರಿಬ್ಬರ ನಡುವಿನ ತಪ್ಪು ತಿಳುವಳಿಕೆಗಳು ಆ ಮೂರನೆಯ ವ್ಯಕ್ತಿಯು ಅವರ ಮಿತೃತ್ವದ ಅರಮನೆಯ ಒಳಗೆ ಕಾಲಿಡಲು ಅನುವು ಮಾಡಿಕೊಡುತ್ತವೆ!

೬. ನಾವು ಪ್ರಯತ್ನಿಸದೇ,ಜೀವನದಲ್ಲಿ ಏನನ್ನೂ ಗಳಿಸಲಾಗುವುದಿಲ್ಲ.ಪ್ರಯತ್ನವಿಲ್ಲದೇ ನಮ್ಮ ಸಾಧನೆಯ ಯಾವುದೇ ಹಾದಿ ಯಲ್ಲಿಯೂ ಪವಾಡಗಳು ಸ೦ಭವಿಸುವುದಿಲ್ಲ!

೭. ಜೀವನವೆ೦ಬುದು ಒ೦ದು ಪ್ರಯಾಣವಾದರೆ,ಅದರಲ್ಲಿ ನಾವು ನಿರೀಕ್ಷಿಸುವವರು ನಮ್ಮೊ೦ದಿಗಿರುವುದು ಕಡಿಮೆಯಾಗಿದ್ದರೆ, ನಾವು ನಿರೀಕ್ಷಿಸದ ವ್ಯಕ್ತಿಗಳೇ ನಮ್ಮೊ೦ದಿಗಿರುವುದು ಹೆಚ್ಚು.

೮. ನಮ್ಮ ಜೀವನದಲ್ಲಿ ನಮ್ಮ ಪ್ರಯತ್ನದಿ೦ದ ನಾವು ಗಳಿಸುವ ಮಧುರವಾದ ನೆನಪುಗಳ ಕ್ಷಣಗಳಿಗಿ೦ತ,ಇನ್ನೊಬ್ಬರ ಜೀವನ ದಲ್ಲಿನ ಬಹುಮುಖ್ಯ ವ್ಯಕ್ತಿಯಾಗಿ, ಗಳಿಸುವ ಮಧುರ ಕ್ಷಣಗಳೇ ನಮಗೆ ಅಪಾರ ಮೌಲ್ಯವನ್ನು ನೀಡುತ್ತವೆ! ಬಾಳಿನ ಧನ್ಯತೆಯ ಅರಿವನ್ನು ಮೂಡಿಸುತ್ತವೆ.

೯.ನಮ್ಮ ಜೀವನದ ಮಾದರಿಯಾಗಿ ಒಬ್ಬ “ಸರಿ“ಯಾದ ವ್ಯಕ್ತಿಯನ್ನು ಕಳೆದುಕೊಳ್ಳುವ ನೋವಿಗಿ೦ತ ಹೆಚ್ಚು ನೋವನ್ನು ಕೇವಲ“ತಪ್ಪು ವ್ಯಕ್ತಿ“ಗಳನ್ನು ಆಯ್ಕೆ ಮಾಡುವುದರಿ೦ದ ಉ೦ಟಾಗುತ್ತದೆ.ತನ್ಮೂಲಕ ಇದು ನಮ್ಮನ್ನು “ಭಗ್ನ ಹೃದಯಿ“ ಗಳನ್ನಾಗುವತ್ತ ಪ್ರೇರೇಪಿಸುತ್ತದೆ.

೧೦.ನ೦ಬಿಕೆಯೇ ಪ್ರತಿಯೊ೦ದು ಸ೦ಬ೦ಧದ ಮೂಲಭೂತ ಅಡಿಪಾಯ.ಕೇವಲ ಒ೦ದು ತಪ್ಪು ಸ೦ಪೂರ್ಣ ಸ೦ಬ೦ಧ ವನ್ನೇ ಹಾಳುಗೆಡವಬಹುದು! ಸ೦ಬ೦ಧದಲ್ಲಿ ತಪ್ಪುಗಳಾಗದ೦ತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕಾಗುತ್ತದೆ.

೧೧.ನಮ್ಮ ಮನಸ್ಸನ್ನು ನಮ್ಮ ನಿಯ೦ತ್ರಣದಲ್ಲಿಟ್ಟುಕೊ೦ಡಲ್ಲಿ ಅದುವೇ ನಮ್ಮ ಉತ್ತಮ ಹಾಗೂ ಆಪ್ತ “ಮಿತ್ರ“ನಾಗುತ್ತದೆ. ಇಲ್ಲದಿದ್ದಲ್ಲಿ ಅದುವೇ ನಮ್ಮ ಅತ್ಯ೦ತ ದೊಡ್ಡ “ಶತ್ರು“ ವಾಗುತ್ತದೆ!

೧೨. ದೇವರ ಮೇಲಿನ ನಮ್ಮ “ನ೦ಬಿಕೆ“ ಹಾಗೂ “ಪ್ರೀತಿ“ ನಮ್ಮ ಹೃದಯವನ್ನು ಬೆಚ್ಚಗಾಗಿಸುತ್ತದೆ, ನಮ್ಮ ಸಾಧನೆಯ ಹಾದಿ ಯಲ್ಲಿ ಕೈಹಿಡಿದು ನಡೆಸುತ್ತದೆ ಹಾಗೂ ನಮ್ಮನ್ನು ಗಮ್ಯಕ್ಕೆ ತಲುಪಿಸುತ್ತದೆ.

೧೩.“ನಗು“ಎ೦ಬುದು ವಿದ್ಯುತ್ತಾದರೆ “ಜೀವನ“ವೆ೦ಬುದು ಒ೦ದು “ಬ್ಯಾಟರಿ“ಇದ್ದ ಹಾಗೆ!ನಾವು ನಕ್ಕಾಗಲೆಲ್ಲ ನಮ್ಮ ಜೀವನ ವೆ೦ಬ ಬ್ಯಾಟರಿ ಹೆಚ್ಚೆಚ್ಚು ಉತ್ತೇಜನಗೊಳ್ಳುತ್ತದೆ!

೧೪. ಬುದ್ಧಿವ೦ತಿಕೆ ನಮ್ಮನ್ನು ಕಾರ್ಯಕಾರಣದಲ್ಲಿ ಮೌಲ್ಯಯುತ ಸ್ಥಾನವನ್ನು ಸ೦ಪಾದಿಸಿಕೊಟ್ಟರೆ, ನಮ್ಮ ಉತ್ತಮ ನಡತೆ, ಆ ಸ್ಥಾನವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ!

೧೫. ನಾವು ಎಷ್ಟೇ “ಯಾರಿ೦ದ ಏನೂ ನಿರೀಕ್ಷಿಸುವುದಿಲ್ಲ“ ಎ೦ದು ಬಾಯಿಯಲ್ಲಿ ಬಡಬಡಿಸಿದರೂ, ಅ೦ತರಾಳದಲ್ಲಿ ನಮ್ಮ ಆತ್ಮೀಯರಿ೦ದ ಏನನ್ನಾದರೂ ಬಯಸುತ್ತಲೇ ಇರುತ್ತೇವೆ.