Pages

Saturday, June 16, 2012


ಮರೆಯಲಾಗದ ಮಹಾ ಶಿವರಾತ್ರಿ


ಅಂದು ಮಹಾಶಿವರಾತ್ರಿ. ಮನೆಯಲ್ಲಿ ಒಂದು ರೀತಿಯ ಸಂಭ್ರಮ. ನಾನು ಹೇಳ ಹೊರಟಿರುವುದು ಈಗ್ಗೆ 47 ವರ್ಷಗಳ ಹಿಂದಿನ ಮಾತು.  ಆಗೆಲ್ಲ ಪ್ರತಿ ಹಬ್ಬವು ಒಂದು ರೀತಿಯಲ್ಲಿ ಸಡಗರವೆ!  ಅದರಲ್ಲೂ  ಶಿವರಾತ್ರಿ ಎಂದರೆ ಈಶ್ವರನಿಗೆ ನಾಲ್ಕುಜಾವದ ಪೂಜೆ ನೆರವೇರಿಸುತ್ತ ಅಲ್ಪ ಆಹಾರದೊಂದಿಗೆ ರಾತ್ರಿಯಿಡಿ   ಜಾಗರಣೆ ಮಾಡುತ್ತಾ ಶಿವನ ಆರಾಧನೆಯಲ್ಲಿ ತಮ್ಮನ್ನು ತಾವು ಸಂಭ್ರಮದಿಂದ ತೊಡಗಿಸಿಕೊಳ್ಳುವ ವಿಶೇಷ ದಿನ. ಇಂತಹ ವಿಶೇಷ ದಿನದಂದು ನಡೆದ ಒಂದು ಸತ್ಯ ಘಟನೆ.

ಮನೆ ಯಜಮಾನರು ಅಂದು ಬೆಳಗಿನಿಂದಲೇ ಶಿವನ ಪೂಜೆಯ ಕೈಂಕರ್ಯಕ್ಕೆ  ತೊಡಗಿಕೊಂಡವರು.  ನಿತ್ಯ ಪೂಜೆಯ ಜೊತೆಗೆ ರುದ್ರನಿಗೆ ಅಭಿಷೇಕ ಮುಗಿಸಿ,  ಮಕ್ಕಳನ್ನು ಕೂರಿಸಿಕೊಂಡು ಸತ್ಯ ಹರಿಶ್ಚಂದ್ರನ ಕಥೆಯನ್ನು ಹೇಳಿದರು.  ಕಾರಣ, ಅಂದು ರಾತ್ರಿ ಮನೆಯ ಎದುರಿನ ಬಯಲಿನಲ್ಲಿ ರಾಜ ಹರಿಶ್ಚಂದ್ರನ ನಾಟಕ ನಡೆಯುವುದ್ದಿತ್ತು.   ಹೀಗಾಗಿ ಮಕ್ಕಳು ಈ ಕಥೆ ಗಾಗಿ ಅಪ್ಪನಲ್ಲಿ ಪೀಡಿಸುತ್ತಿದ್ದರು.  ಮಕ್ಕಳಿಗೆ ಒಂದು ರೀತಿಯ ಸಂಭ್ರಮ.  ಎದುರಿನ ಬಯಲಿನಲ್ಲಿ ನಾಟಕದ ರಂಗಸಜ್ಜಿಕೆ ಕೆಲಸ ನಡೆಯುತ್ತಿತ್ತು. ಅದನ್ನ  ನೋಡುವುದೇ ಒಂದು ಖುಷಿ.   ನಾಟಕ ಪ್ರಾರಂಭವಾಗುವುದು ರಾತ್ರಿ 10ರ ನಂತರವೇ.  ಮಕ್ಕಳು ಕಾಯುತ್ತಾ ಇರುವಾಗ ಮನೆ ಯಜಮಾನರು ಮಕ್ಕಳಿಗೆ " ಈಗ ಮಲಗಿ ನಿದ್ದೆ ಮಾಡಿ,  ನಾಟಕ ಪ್ರಾರಂಭ ಆದಕೂಡಲೇ ಎಬ್ಬಿಸುತ್ತೇನೆ, ಅಲ್ಲಿಯವರೆಗೆ ನಿದ್ದೆ ಮಾಡಿ.  ಈಗ ಜಾಸ್ತಿ ಹೊತ್ತು ನಿದ್ರೆ ಮಾಡಿದರೆ ಹೆಚ್ಚು ಹೊತ್ತು ನಾಟಕ ನೋಡಬಹುದು "  ಎಂದು ಒಪ್ಪಿಸಿ ಮೂರೂ  ಮಕ್ಕಳನ್ನು ಮಲಗಿಸಿಯೇ ಬಿಟ್ಟರು.

ಮಾರನೆ ಬೆಳಿಗ್ಗೆ ಮಕ್ಕಳು ಎದ್ದವರೇ " ನಾಟಕ ನೋಡಲು ಎಬ್ಬಿಸಲೇ ಇಲ್ಲ " ಎಂದು ಇಬ್ಬರು ಅಳಲು ಪ್ರಾರಂಭ.  ಆದರೆ ಒಂದು ಮಗು ಮಾತ್ರ ಎದ್ದಿರಲೇ ಇಲ್ಲ.  ಬಹಳ ಚೂಟಿಯಾಗಿದ್ದ ಮಗು ಯಾಕೆ ಇನ್ನು ಎದ್ದಿಲ್ಲ ಎಂದು ಮನೆ ಯಜಮಾನರು ಅಂದುಕೊಳ್ಳುತ್ತಿರುವಾಗಲೇ " ರಾತ್ರಿ ಮಗು ನಿದ್ದೆ ಮಾಡಿತ್ತೋ ಇಲ್ಲವೋ"  ಎಂದು ಮನೆಯೊಡತಿ ಸಮಜಾಯಿಷಿ ನೀಡಿದರೂ ಮಗು ಎಬ್ಬಿಸಲು ಮುಂದಾದರು.  " ಏಳಪ್ಪಾ , ಬೆಳಕಾಗಿ ಎಷ್ಟು ಹೊತ್ತಾಯಿತು?  ಏಳು," ಎಂದು  ಹೊದ್ದಿಕೆ ತೆಗೆದರೆ ಶಾಖ ಹೊರಗೆ ತಟ್ಟುವಷ್ಟು ಬಿಸಿ.  ಮಗು ಮೈ ಮುಟ್ಟಿದರೆ ಕಾದ ಕಬ್ಬಿಣ ಮುಟ್ಟಿದ ಅನುಭವ.   ಜ್ವರದ ತಾಪದಲ್ಲಿ ಬೆಂದ ಮಗು ಏಳಲು ಇರಲಿ ನರಳಲೂ  ಸಾಧ್ಯವಾಗದೆ ನಿಸ್ತೆಜವಾಗಿ ಹಾಸಿಗೆಯ ಮೇಲೆ ಬಿದ್ದುಕೊಂಡಿತ್ತು.  ಏನು ಮಾಡಲು ತೋಚದೆ ಮಗುವನ್ನು ಬಾಚಿ ತಬ್ಬಿಕೊಂಡರು.  ಅಷ್ಟರಲ್ಲಿ ಬಂದ ಮಗುವಿನ ತಾಯಿಗೆ ಗಾಬರಿ.  ಅಳಲು ಪ್ರಾರಂಭ  ಮಾಡಿಯೇ ಬಿಟ್ಟರು.  8 ವರ್ಷದ ಗಂಡು ಮಗು ಅಷ್ಟು ಚನ್ನಾಗಿ ಆಟವಾಡಿಕೊಂಡಿದ್ದ ಮಗುವಿಗೆ ಅದೇನು ಶಾಪವೋ ಏನೋ ಈ ರೀತಿಯ ಸ್ಥಿತಿ ತಲುಪಿದೆ ಎಂದು  ಕಣ್ಣಿರು ಇಡುತ್ತ ಕೂತರು.  " ಏನೂ ಆಗಿಲ್ಲ ಜ್ವರದ ತಾಪಕ್ಕೆ ಮಗು ಸುಸ್ತಾಗಿದೆ, ಅಷ್ಟೇ " ಎಂದು ಹೆಗಲಮೇಲೆ ಮಗುವನ್ನು ಹಾಕಿಕೊಂಡು ಆಸ್ಪತ್ರೆಯ ಕಡೆಗೆ ಧಾವಿಸಿದರು.

ಡಾಕ್ಟರ್ ಪರೀಕ್ಷೆಮಾಡಿ  " ಸಧ್ಯಕ್ಕೆ ಔಷದಿ ಕೊಡುತ್ತೇನೆ, ನೀವು ತಕ್ಷಣ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ " ಎಂದು ಸಲಹೆ ಇತ್ತರು.   ತಕ್ಷಣ ಟಾಂಗಾ  ಗಾಡಿಯಲ್ಲಿ ದೊಡ್ಡ ಆಸ್ಪತ್ರೆಗೆ ಹೋದರು.  ಆಸ್ಪತ್ರೆಗೆ ಧಾಖಲು ಮಾಡಿಕೊಂಡ ವೈದ್ಯರು ಎರಡು ಮೂರು ದಿನ ನೀಡಿದ ಔಷದಿಗಳು ಮಗುವಿನ ಜ್ವರವನ್ನು ಕಡಿಮೆಮಾಡಲಿಲ್ಲ.  ಮಗುವಿನ ಸ್ಥಿತಿ ಚಿಂತಾಜನಕವಾಯಿತು.  ಮಗುವಿಗೆ ಮಗ್ಗುಲು ಬದಲಾಯಿಸಲಾಗದೆ  ಸಂಪೂರ್ಣ ನಿತ್ರಾಣವಾಯಿತು.  ಕೈ ಕಾಲು ನಿತ್ರಾಣವಾಯಿತು.  ರಕ್ತ ಪರೀಕ್ಷೆ ಮಾಡಿಸಿ ಈಗ ಬಂದಿರುವ ಹೊಸ ಖಾಯಿಲೆ ಇರಬಹುದೆಂದು ವೈದ್ಯರು ಹಲವು ಹಿರಿಯ ವೈದ್ಯರೊಂದಿಗೆ ಚರ್ಚಿಸಿ ನಂತರ ಮಗುವಿನ ತಂದೆಯನ್ನು ಕರೆದು " ಈ ಮಗುವಿಗೆ ಪೋಲಿಯೋ ಆಗಿದೆ " ಎಂದರು.            ಏನೂ                       ಅರ್ಥವಾಗದೇ " ಹಾಗೆಂದರೇನು?" ಎಂದು ಬೆರಗಾಗಿ ಕೇಳಿದರು.  ವೈದ್ಯರು ಸಮಾಧಾನಚಿತ್ತದಿಂದ " ನೋಡಿ, ಈ ಜ್ವರ ಈಗ ಮಕ್ಕಳಿಗೆ ಕಾಣಿಸಿಕೊಳ್ಳುತ್ತಿದೆ.  ವೈರಾಣುಗಳ  ಸೋಂಕಿನಿಂದ ಬರುವ ಈ ಜ್ವರ ಮಕ್ಕಳನ್ನು ನಿಸ್ತೇಜವನ್ನಾಗಿ ಮಾಡಿಬಿಡುತ್ತದೆ. ಇಂತಹ ಸಂಧರ್ಭದಲ್ಲಿ ಮಕ್ಕಳ  ಕೈ, ಕಾಲು, ಕಣ್ಣು ಹೀಗೆ ಏನಾದರೊಂದು ತನ್ನ ಶಕ್ತಿ ಕಳೆದುಕೊಂಡು ವಿಕಲಾಂಗರಾಗುತ್ತಾರೆ.  ದೈರ್ಯ ತಂದುಕೊಳ್ಳಿ.  ನಮ್ಮ ಪ್ರಯತ್ನ ಸಂಪೂರ್ಣವಾಗಿ ನಾವು ಮಾಡುತ್ತೇವೆ. ಮಿಕ್ಕದ್ದು ಭಗವಂತನ ಕೈಯಲ್ಲಿದೆ."  ಎಂದು ಯಜಮಾನರನ್ನು ಸಂತೈಸಿದರು.   ದಂಪತಿಗಳಿಗಿಬ್ಬರಿಗೂ  ಭೂಮಿ ಬಾಯಿಬಿಟ್ಟ ಹಾಗೆ ಆಯಿತು.  " ಇಷ್ಟು ಚಂದದ ಮಗುವಿಗೆ ಇಷ್ಟೊಂದು ಭೀಕರ ಶಾಪವೇ? " ಎಂದು ಆ ತಾಯಿ ಗೊಳಾಡಲು  ಪ್ರಾರಂಭಿಸಿದರು.   ಈ ಮಾತು ಕೇಳಿದ ತಂದೆ ಮಾತ್ರ ದಿವ್ಯ ಮೌನಕ್ಕೆ ಶರಣಾದರು.   ತಮಗೇ ತಾವು ಸಮಾಧಾನ ಮಾಡಿಕೊಂಡು  ಪುನಃ  ವೈದ್ಯರಲ್ಲಿ ಹೋಗಿ "  ಮುಂದೇನು ಮಾಡಬೇಕು?  ಯಾವ ರೀತಿಯಲ್ಲಿ ಚಿಕಿತ್ಸೆ ಕೊಡಿಸಬೇಕು?  ಎಷ್ಟು ಹಣ ಖರ್ಚಾಗಬಹುದು?  ಎಷ್ಟೇ ಖಚಾದರು ಈ ಮಗುವನ್ನು ಪರಾಧೀನ ಮಾಡಲಾಗದು.   ದಯಮಾಡಿ ನನಗೆ ಸಹಾಯ ಮಾಡಿ." ಎಂದು ಅಂಗಲಾಚಿದರು.  ಸ್ವಲ್ಪ ಹೊತ್ತು ಸುಮ್ಮನಿದ್ದು ವೈದ್ಯರು " ನೋಡಿ, ಈ ಖಾಯಿಲೆಗೆ ಯಾವ ಔಷಧಿಗಳು ಈಗ ಸಧ್ಯಕ್ಕೆ ದೊರೆಯುತ್ತಿಲ್ಲ.  ಪೋಲಿಯೋ ರೋಗವು ಇತ್ತೀಚಿಗೆ ಕಾಣಿಸಿಕೊಂಡಿರುವ ಭೀಕರ ರೋಗ.  ಹತ್ತಾರು ಸಂಶೋಧನೆಗಳು ನಡೆಯುತ್ತಾ ಇವೆ.  ಈಗಿನ ಪರಿಸ್ಥಿತಿಯಲ್ಲಿ ಈ ಮಗುವಿನ ಜ್ವರ ಇಳಿಸದೆ ಮುಂದಿನ ಕ್ರಮ ತೆಗೆದು ಕೊಳ್ಳುವುದು  ಕಷ್ಟ.  ಆದರೂ,  ನೀವು ಯಾವುದೇ ಕಾರಣಕ್ಕೂ ದೈರ್ಯಗೆಡಬೇಡಿ.  ಸಾತ್ವಿಕರಾಗಿ ಕಾಣುವ ನೀವು ಸತ್ಯವನ್ನು ಅರ್ಥ ಮಾಡಿಕೊಳ್ಳಬಲ್ಲಿರಿ.  ಈ ಮಗುವಿಗೆ ಏನು ಅಗತ್ಯವಿದೆಯೋ ಅದನ್ನು ಮಾಡೋಣ.  ಚಿಂತೆ ಮಾಡಬೇಡಿ"  ಎಂದು ತಂದೆಯ ಭುಜವನ್ನು ತಟ್ಟುತ್ತಾ ಸಮಾಧಾನ ಪಡಿಸಿದರು.  ತಂದೆಯ ಕಣ್ಣುಗಳಲ್ಲಿ ಧಾರಾಕಾರ ನೀರು ಹರಿಯಿತು.  ಸಾವರಿಸಿಕೊಂಡು ಎರಡೂ ಕೈಗಳನ್ನು ಜೋಡಿಸುತ್ತ ದುಃಖದಿಂದ " ಈ ಮಗುವನ್ನು ಉಳಿಸಿಕೊಡಿ .  ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಚೈತನ್ಯ ಪೂರ್ಣನನ್ನಾಗಿ  ಮಾಡಿಕೊಡಿ.  ಎದ್ದು ಓಡಾಡಲು ಸಾಧ್ಯವಾಗದೆ ಇದ್ದರೂ ಪರವಾಗಿಲ್ಲ.  ಎದ್ದು ಕೂರಲಿ.  ತನ್ನ ಕೆಲಸ ತಾನು ಮಾಡಿಕೊಳ್ಳುವಷ್ಟು ಚೈತನ್ಯ ಭಗವಂತ ದಯಪಾಲಿಸಿದರೆ ಸಾಕು."  ಎಂದು ಬೇಡಿದರು.

ವೈದ್ಯರ ಪ್ರಯತ್ನ ಶಕ್ತಿಮೀರಿ ಸಾಗಿತ್ತು. ನಾಲ್ಕಾರು ತಿಂಗಳು ಆಸ್ಪತ್ರೆಯ ಜೀವನದ ನಂತರ ಮಗು ಮನೆಗೆ ವಾಪಸಾಯಿತು.ಎದ್ದು ಕೂರುವ ಸ್ಥಿತಿ ತಲುಪಿತ್ತು.  ಎದ್ದು ನಿಲ್ಲಲಾಗಲಿ ಓಡಾಡುವ ಪರಿಸ್ಥಿತಿಯಲ್ಲಿ ಮಗು ಇರಲಿಲ್ಲ.  " ಮುದ್ದಾದ ಮಗುವಿಗೆ  ಹೀಗಾಯಿತಲ್ಲ " ಎಂದು ತಾಯಿ ಅತ್ತರೆ,  " ಭಗವಂತ ಇಷ್ಟಾದರೂ ಮಾಡಿದನಲ್ಲ"  ಎಂದು ಸಮಾಧಾನ ಮಾಡುತ್ತಿದ್ದರು.  " ಇವನ ಕಾಲ ಮೇಲೆ ಇವನನ್ನು ನಿಲ್ಲಿಸಲು ನಮಗೆ ಸಾಧ್ಯವಾಗದೆ ಇರಬಹುದು, ಆದರೆ ಇವನ ಬುದ್ಧಿ ಬಲದಲ್ಲಿ ಇವನು  ಸ್ವತಂತ್ರವಾಗಿ ನಿಲ್ಲುವಂತೆ ಮಾಡುವುದೇ ನಮ್ಮಿಬ್ಬರ ಜೀವನ, ಸಾಧನೆ ಮತ್ತು ಬದುಕು."  ಎನ್ನುತ್ತಾ ತಮ್ಮ ಸಂಪೂರ್ಣ ಜೀವನವನ್ನು ಮೀಸಲಿಟ್ಟರು.

ಇಂದಿಗೆ ಈ ಪೋಲಿಯೋ ಪೀಡಿತನಿಗೆ 56 ವರ್ಷಗಳೇ ಆಗಿವೆ.  ತಂದೆ ತಾಯಿ ಮಾಡಿದ ಜೀವನ ಸಾಧನೆಯ ಫಲವಾಗಿ ತನ್ನ ಕಾಲಮೇಲೆ ತಾನು ನಿಂತಿದ್ದಾನೆ .  ಪ್ರತಿ ಕ್ಷಣದಲ್ಲೂ ಆತ್ಮಸ್ಥೈರ್ಯ ತುಂಬುತ್ತ, ವಿಶ್ವಾಸ ಕರಗದಂತೆ, ಬದುಕಿನ ಪ್ರತಿ ಕ್ಷಣವನ್ನು ಹೇಗೆ ಎದುರಿಸಬೇಕೆಂಬುದನ್ನು  ಉದಾಹರಣೆ ಮೂಲಕ  ದೈರ್ಯ ತುಂಬುತ್ತ ಬೆಳೆಸಿದರು.   ಯಾವುದೇ ಕಾರಣಕ್ಕೂ  ತಾನು ನಿಷ್ಪ್ರಯೋಜಕ ಎಂಬ ಭಾವ ಬಾರದ ಹಾಗೆ ರಕ್ಷಿಸಿ ಬೆಳೆಸಿದರು.  ತಮ್ಮ ಶಕ್ತಿ ಮತ್ತು ಅವಕಾಶಗಳಿಗೆ ಅನುಸಾರ  ವಿದ್ಯೆ ಕೊಡಿಸಿದರು.  ಜಗತ್ತಿನಲ್ಲಿ ಹೇಗೆ ಬದುಕಬೇಕೆಂಬ ಬುದ್ಧಿ ಕಲಿಸಿದರು.

ಇಂದಿಗೆ ಆ ತಂದೆ ತಾಯಿಯರು ಇಲ್ಲವಾದರೂ ಅವರ ಸಾಧನೆಯ ಪ್ರತೀಕ ಜೀವಂತವಾಗಿದೆ. ಪ್ರತಿ ಕ್ಷಣ ಆ ಸಾಧಕರನ್ನು ನೆನೆಯುತ್ತ ಅವರ ಆಶೀರ್ವಾದದ ಬಲ ಹಾಗೂ ಕೊಟ್ಟ ಸಂಸ್ಕಾರದ ನೆರಳಲ್ಲಿ ಇಂದು ಯಶಸ್ವಿ ವ್ಯಕ್ತಿಯಾಗಿ ತುಂಬು ಜೀವನ ನಡೆಸುತ್ತಿದ್ದಾನೆ. " ಪ್ರತಿ ಸವಾಲು ಅವಕಾಶವೇ, ಪ್ರತಿ ಅವಕಾಶವು ಸವಾಲೇ " ಎಂಬ ತಂದೆಯ ಮಾತನ್ನು ಅಕ್ಷರಶಃ ಪಾಲಿಸುತ್ತಾ  ಜೇವನದಲ್ಲಿ ಸಂತಸ ಮತ್ತು ತೃಪ್ತಿ ಕಂಡುಕೊಂಡ ಪೋಲಿಯೋ ಪೀಡಿತ " ನಾನೇ ". ಇಂತಹ ತಂದೆ ತಾಯಿ ಪಡೆದ ನಾನೇ  ಧನ್ಯ.  ಅವರ ಬಗ್ಗೆ ಎಷ್ಟು ಹೇಳಿದರು ಅದು ಕಡಿಮೆಯೇ.  ಅವರು ಬದುಕಿನಲ್ಲಿ ನನಗೆ ಕಲಿಸಿದ ಪಾಟಗಳು ಇಂದು ನನ್ನನ್ನು  ಕಾಪಾಡುತ್ತಿವೆ.

ಪ್ರತಿ ಶಿವರಾತ್ರಿ ಬಂದಾಗಲು ನನ್ನ ತಂದೆ ವಿಸ್ತಾರವಾಗಿ ನನಗೆ ಹೇಳಿದ ಈ ಘಟನೆ ನೆನಪಾಗುತ್ತದೆ.  ನನ್ನ ಅರಿವಿರದಂತೆ ಕಣ್ಣಲ್ಲಿ  ನೀರು ತುಂಬುತ್ತದೆ. ದುಖದಿಂದಲ್ಲ, ನನ್ನ ತಂದೆ ತಾಯಿಯಲ್ಲಿದ್ದ  ಅದಮ್ಯ ವಿಶ್ವಾಸದ ಸಂತೋಷದಿಂದ.  ಈಗ ಹೇಳಿ ಹೇಗೆ ಮರೆಯಲಿ ಈ ಮಹಾ ಶಿವರಾತ್ರಿಯನ್ನು?

ಹೆಚ್ ಎನ್ ಪ್ರಕಾಶ್


Friday, June 15, 2012

ಚಿನ್ಮಯ ಸತ್ಸಂಗ


ಚಿನ್ಮಯ ಸತ್ಸಂಗ
11.06.2012 ಭಾನುವಾರ
ಸ್ಥಳ: ಈಶಾವಾಸ್ಯಮ್,ಶಕ್ತಿಗಣಪತಿದೇವಾಲಯ ರಸ್ತೆ
ಹೊಯ್ಸಳನಗರ,ಹಾಸನ
ಆಸಕ್ತರ ಸಭೆ: ಬೆಳಿಗ್ಗೆ 11.00 ಕ್ಕೆ        ಸತ್ಸಂಗ: ಸಂಜೆ: 6.00 ಕ್ಕೆ
ಮಿತ್ರರೊಡಗೂಡಿ ಬನ್ನಿ,  
ಸಂಪರ್ಕಿಸಲು: 9663572406



Wednesday, June 13, 2012

ಆರೋಗ್ಯಕರ ಬದುಕಿಗಾಗಿ ಜೀವನ ಕ್ರಮ



ಯೋಗ ಗುರುಗಳಾದ ಶ್ರೀ ಶಂಕರನಾರಾಯಣ ಶಾಸ್ತ್ರಿಗಳು ನಮ್ಮ ಉಸಿರಾಟದ ಕ್ರಮದಲ್ಲಿನ ದೋಷ,ಆಹಾರ ಸೇವನೆ , ಜಲ ಚಿಕಿತ್ಸೆ ಯ ವಿಚಾರಗಳಲ್ಲಿ ನಮಗೆ  ಬಹಳ ಸರಳವಾಗಿ     ಅತ್ಯಮೂಲ್ಯ ಸಲಹೆಗಳನ್ನು  ನೀಡಿದ್ದಾರೆ.ಈ ಆಡಿಯೋ ಕ್ಲಿಪ್ ಗಾಗಿ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

ಯೋಗದ ಅರಿವು

Tuesday, June 12, 2012

ಯೋಗಗುರು ನಾಗರಾಜರಾಯರೊಂದಿಗೆ ಪ್ರಶ್ನೋತ್ತರ




Podcast Powered By Podbean

ಆಡಿಯೋ ಡೌನ್ ಲೋಡ್ ಮಾಡಲು ಕೊಂಡಿ
http://hariharapurasridhar.podbean.com/


ರುಚಿಗಾಗಿ ತಿಂದರೆ ಭೋಗ,ಹಸಿವಿಗಾಗಿ ತಿಂದರೆ ಯೋಗ

ತುಮಕೂರಿನವರಾದ  ಶ್ರೀ ನಾಗರಾಜ ರಾವ್, ಕೆಂದ್ರ  ಸರ್ಕಾರದ  ಮಾನವ ಸಂಪನ್ಮೂಲ   ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸ್ವಯಂನಿವೃತ್ತಿ ಪಡೆದವರು, ಆರ್ಶ  ಪರಂಪರೆಯಲ್ಲಿ  ಯೋಗ ಅಧ್ಯಯನಮಾಡಿ, ವೇದವನ್ನು ಅನುಷ್ಟಾನಾದಲ್ಲಿಟ್ಟು ಕೊಂಡಿರುವವರು ,ಪ್ರಸ್ತುತ  ಶೃಂಗೇರಿ ಶಾರದಾ ಪೀಠದ  ಗುರುಪರಂಪರೆಯಲ್ಲಿ ಈ ಜ್ಞಾನವನ್ನು ತಿಳಿಸಿಕೊಡುವ ಕೆಲಸವನ್ನು ಮಾಡುತ್ತ ,ಹಲವಾರು ಶಿಬಿರಗಳನ್ನು ನಡೆಸಿರುತ್ತಾರೆ.ವೇದದ ಹಿನ್ನೆಲೆಯಲ್ಲಿ ಯೋಗವನ್ನು ನಿತ್ಯಾನುಷ್ಟಾನದಲ್ಲಿ ಇಟ್ಟುಕೊ ಳ್ಳುವ ಬಗ್ಗೆ ಹಾಸನದ ಶ್ರೀ ಶಂಕರಮಠದಲ್ಲಿ ನಡೆದ ಶಿಬಿರದಲ್ಲಿ ಮಾಡಿದ ಪ್ರವಚನವನ್ನು ನೀವಿಲ್ಲಿ ಕೇಳಬಹುದು.

ನನ್ನ ಮನವಿ:  ಸರಳ ಸಜ್ಜನರಾದ  ಶ್ರೀ ನಾಗರಾಜರಾಯರ ಮಾತುಗಳನ್ನು ಕೇಳುತ್ತಾ ಹೋದಂತೆ  ನಮ್ಮ ಜೀವನದಲ್ಲಿ ಒಂದು ಭರವಸೆ ಮೂಡಿ ಒಂದು   ದೃಷ್ಟಿಕೋಣ  ಮೂಡುವುದರಲ್ಲಿ ಸಂಶಯವಿಲ್ಲ.  ಈ ಆಡಿಯೋ ಕೇಳಿ  ಅದನ್ನು ಅಕ್ಷರ ರೂಪಕ್ಕೆ ತಂದು ಪ್ರಕಟಿಸಿದರೆ ಹಲವರಿಗೆ ಉಪಯೋಗವಾಗುತ್ತದೆ ,ಆದರೆ ನನ್ನ ಸಮಯದ ಅಭಾವದಿಂದ ಶ್ರೀ ನಾಗರಾಜರಾಯರು ಮಾಡಿದ ಪ್ರವಚನವನ್ನು ಎಡಿಟ್  ಮಾಡಿ ಪ್ರಕಟಿಸಲು ಮಾತ್ರ ಸಾಧ್ಯವಾಗಿದೆ. ವೇದಸುಧೆಯ ಸಹೃದಯರು ಯಾರಾದರೂ ಮುಂದೆ ಬಂದು ಈ ಆಡಿಯೋ ಕೇಳಿ ಅದನ್ನು ಬರಹ ರೂಪಕ್ಕೆ ತಂದು  ಲೇಖನ ಒಂದನ್ನು ಸಿದ್ಧ  ಪಡಿಸಿ   ವೇದಸುಧೆ ಗೆ ಕಳಿಸಿಕೊಟ್ಟರೆ  ಅದನ್ನು ಅನ್ಯಾನ್ಯ ತಾಣಗಳಲ್ಲೂ ಪ್ರಕಟಿಸಲಾಗುವುದು. ಓದುಗರ ಸಹಕಾರ ಕೋರುವೆ.
-ಹರಿಹರಪುರಶ್ರಿಧರ್ 
ಸಂಪಾದಕ 

[ಪ್ಲೆಯರ್ ನಲ್ಲಿ ದೋಷ ಕಂಡುಬಂದಿರುವುದರಿಂದ ಸರಿಪಡಿಸಿ ಆಡಿಯೋ ಕ್ಲಿಪ್ ಪ್ರಕಟಿಸಲಾಗಿದೆ, ಆಡಿಯೋ ಕೇಳದಿದ್ದಲ್ಲಿ ದಯಮಾಡಿ ಕಾಮೆಂಟ್ ಕಾಲಮ್ ನಲ್ಲಿ ಬರೆದರೆ ವೇದಸುಧೆಯ ಗಮನಕ್ಕೆ ಬಂದು ಸರಿಪಡಿಸಲು ಅನುಕೂಲವಾಗುತ್ತದೆ]

Monday, June 11, 2012


ಪ್ರಳಯ ............................ಒಂದಷ್ಟು ಚಿಂತನೆ.


ಡಿಸೆಂಬರ್ 21, 2012 ರಂದು ಈ ಜಗತ್ತು ಮುಳುಗಲಿದೆ, ಎಲ್ಲಿ ನೋಡಿದರು ನೀರು, ಈ ಜಲಪ್ರಳಯದಲ್ಲಿ ಹಿಮಾಲಯದ ಮೌಂಟ್  ಎವೆರೆಸ್ಟ್ ಮೇಲೆ ಹರಿಯುವಷ್ಟು ಪ್ರಮಾಣದಲ್ಲಿ ನೀರು ಉಕ್ಕುತ್ತದೆ, ಎಂದು ಕೆಲವರ ಅಭಿಪ್ರಾಯ.  ಸೌರಮಂಡಲದಲ್ಲಿ ಭೂಮಿಯ ಗಾತ್ರಕ್ಕಿಂತ ಆರೆಂಟು ಪಟ್ಟು ದೊಡ್ಡದಿರುವ ದೈತ್ಯ ಗ್ರಹವೊಂದು ಭೂಮಿಯ ಮೇಲೆ ಅಪ್ಪಳಿಸಲಿದೆ ; ಭೂಮಿಯ ಗುರುತು ಸಿಗದ ಹಾಗೆ ಕಣ್ಮರೆಯಾಗುತ್ತದೆ ಎಂಬುದು ಕೆಲವರ ಅಭಿಪ್ರಾಯ.   ದೇವರ ಮತ್ತು ಸೈತಾನನ ನಡುವೆ ಕಾಳಗ ಕೊನೆಗೊಳ್ಳಲಿದೆ ಎನ್ನುವುದು ಬೈಬಲ್ ನ ಅಭಿಮತ.  ಭೂಮಿಯು ತನ್ನ ಗುರುತ್ವಾಕರ್ಷಣೆ ಕಳೆದುಕೊಂಡು ಸೂರ್ಯನ ಚಲನೆ ಅಸ್ಥವಸ್ತ ವಾಗಿ  ಭೂಮಿಯ ವಿನಾಶ ಖಂಡಿತ ಎನ್ನುವುದು ಚೀನಿಯ ಸಿದ್ಧಾಂತ.  ಇನ್ನೂ ಹೀಗೆ ಹಲವು ಹದಿನೆಂಟು ರೀತಿಯಲ್ಲಿ ಪ್ರಳಯದ ವಿವರಣೆ ನಡೆಯುತ್ತಿದೆ.

ಈ ವಿಚಾರವನ್ನು ಬಂಡವಾಳ ಮಾಡಿಕೊಂಡು ಹಲವಾರು ಪ್ರಚಾರ ಮಾಧ್ಯಮ ಸಂಸ್ಥೆಗಳು ಪುಸ್ತಕ, ಸಿ ಡಿ, ಡಿ ವಿ ಡಿ ಗಳನ್ನೂ ಬಿಡುಗಡೆ ಮಾಡಿ ಜನರಿಗೆ ಮತ್ತಷ್ಟು ನಡುಕ ಹುಟ್ಟಿಸಿದ್ದಾರೆ.  ವೆಬ್ ಸೈಟ್ ಗಳು ಹಲವಾರು ವಿಚಾರಗಳನ್ನು ಕಲೆಹಾಕಿ ವರ್ಣರಂಜಿತವಾಗಿ ಬಿಂಬಿಸಿದೆ. " 2012 ರ ನಂತರ ಪ್ರಪಂಚದ ಕೊನೆ " ಎಂಬ ಸಿನಿಮಾ ಕೂಡ ಬಿಡುಗಡೆಯಾಗಿದೆ. ಇವೆಲ್ಲವನ್ನೂ ಓದಿ, ನೋಡಿದ ಮೇಲೆ ಯಾರಿಗೆ ಆದರು ಹೆದರಿಕೆ ಆಗುವುದು ಸಹಜ.  ಆದರೂ, ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಇದೆಲ್ಲ ಸತ್ಯವೇ?  ಇದನ್ನು ನಂಬಬಹುದೇ?  ಎಂಬುದು ತಲೆಯಲ್ಲಿ ಸುಳಿಯುತ್ತದೆ.  ಕೆಲವರು ಇಂತಹ ವಿಚಾರ ಬಂದಾಗ " ಇವೆಲ್ಲ ಬರಿ ಡೋಂಗಿ, ಒಂದಿಷ್ಟು ಕಟ್ಟು ಕಥೆ ಕಣ್ರೀ " ಎಂದು ತೇಲಿಸಿ ಬಿಡುತ್ತಾರೆ.  ಆದರೂ,  ಜನಸಾಮಾನ್ಯರಲ್ಲಿ  ಒಂದು ರೀತಿಯ ಭ್ರಾಂತಿ  ಹುಟ್ಟುತ್ತದೆ.

ಇಂತಹ ಒಂದು ಸಂಧರ್ಭದಲ್ಲಿ ಭಾರತೀಯ ಕಾಲ ನಿರ್ಣಯ ಏನು ಹೇಳುತ್ತದೆ? ಸ್ವಲ್ಪ ಗಮನಿಸೋಣ.  ಸೃಷ್ಟಿಯ ಆದಿಯಿಂದ ಅಂತ್ಯದವರೆಗೆ ಕಾಲದ ವಿಸ್ತಾರ.  ಅತ್ಯಂತ ಸೂಕ್ಷ್ಮವಾದ ಅಣುವೆ ಇರಲಿ, ಅತ್ಯಂತ ಮಹತ್ತಾದ ಲೋಕವೇ ಇರಲಿ,  ಇವೆಲ್ಲವೂ ಈ ಕಾಲದ ಗಣನೆಗೆ ಒಳಪಟ್ಟಿವೆ.  ಒಂದು ಕ್ಷಣದಿಂದ ಹಿಡಿದು ಯುಗಯುಗಗಳವರೆಗೆ  ಈ ಗಣನೆ ನಿಖರವಾಗಿದೆ. ನಾವೆಲ್ಲಾ ಬಾಯಿಪಾಟ ಮಾಡಿದ ಮಗ್ಗಿಯಷ್ಟೇ ಸರಳವಾಗಿರುವ ಈ ಕಾಲ ಚಕ್ರ-- ಕ್ಷಣ, ಚುರುಕಾ, ವಿಘಳಿಗೆ, ಘಳಿಗೆ, ದಿನ, ಮಾಸ, ವರ್ಷ,ಸಂವತ್ಸರ ಮತ್ತು ಯುಗ ಹೀಗೆ ಸಾಗುತ್ತದೆ.   ಇದು ಒಂದು ಕಾಲದ ಆವರ್ತನ.   ಈ ಆವರ್ತನಗಳಿಗೆ ಯಾವುದೇ ವಸ್ತು, ವ್ಯಕ್ತಿ, ಅಥವಾ ಶಕ್ತಿ ಸಿಲುಕಿರಲಿ ಅದು ಈ ಕಾಲದೊಂದಿಗೆ ಸುತ್ತಲೇ ಬೇಕು.  ಜನನ- ಜೀವನ-ಮರಣ ಈ ಕ್ರಮಾವರ್ತನೆಗೆ ಒಳಗಾಗಲೇ ಬೇಕು.  ಅತ್ಯಲ್ಪಕಾಲ ಬದುಕುವ ಜೀವವೇ ಆಗಲಿ, ಕೋಟ್ಯಂತರ ವರ್ಷಗಳ ಕಾಲ ಬದುಕುವ ವಸ್ತು ಅಥವಾ ಜೀವವೇ ಆಗಲಿ, ಈ ಆವರ್ತನೆಯಿಂದ ಹೊರತಲ್ಲ.  ಹುಟ್ಟಿದ್ದು ಸಾಯಲೆಬೇಕೆಂಬುದು  ಸೃಷ್ಟಿಯ ನಿಯಮ. ಎಲ್ಲವು ಲಯವಾದಾಗ ಉಳಿಯುವುದು ಶೂನ್ಯ ಮಾತ್ರ- ನಿಶೂನ್ಯ.  ಇದೇ ಬಾಹ್ಯ ಅಂತಃಕರಣಗಳಿಗೆ ನಿಲುಕದ ಅಗೋಚರ ಅದಮ್ಯನಾದ ಪರಮಾತ್ಮ.

ಕೃತಯುಗ, ತ್ರೇತಾಯುಗ, ದ್ವಾಪರಯುಗ, ಮುಗಿಸಿ ಕಲಿಯುಗಕ್ಕೆ ಕಾಲಿರಿಸಿರುವ ನಾವು, ನಾಲ್ಕು ಪಾದವಿರುವ ಕಲಿಯುಗದ ಪ್ರಥಮಪಾದದ ಹತ್ತನೇ ಒಂದು ಭಾಗದಲ್ಲಿ ಇದ್ದೇವೆ.  ಒಂದು ಲೆಕ್ಕಾಚಾರದ ಪ್ರಕಾರ ಕಲಿಯುಗಕ್ಕೆ 4,32,000 ವರ್ಷಗಳು ಎಂದು ನಿರ್ಣಯ ಮಾಡಲಾಗಿದೆ.   ಇನ್ನು ಪ್ರಳಯದ ವಿಚಾರಕ್ಕೆ ಬಂದರೆ,  ಇನ್ನು ಕನಿಷ್ಠ 4,27, 000 ವರ್ಷಗಳು ಈ ಭೂಮಿ ಸುರಕ್ಷಿತವಾಗಿ ಇರುತ್ತದೆ.  ಶತಶತಮಾನಗಳಷ್ಟು ಹಿಂದೆ ಇದ್ದ  ಅಲ್ಲಮಪ್ರಭುಗಳ ಒಂದು ವಚನ ಇಲ್ಲಿ ಪ್ರಸ್ತುತ ವೆನಿಸುತ್ತದೆ.

                  ಹಿಂದೆ ಎಷ್ಟು ಪ್ರಳಯ ಹೋಯಿತೆಂದು ಅರಿಯೆ|
                  ಮುಂದೆ ಎಷ್ಟು ಪ್ರಳಯವಾಗುವುದೆಂದು ಅರಿಯೆ|
                  ತನ್ನ ಸ್ಥಿತಿಯ ತಾನರಿಯದೆಡೆ  ಅದೇ ಪ್ರಳಯವಲಾ|
                  ತನ್ನ ವಚನ ತನಗೆ ಹಗೆಯಾದೆಡೆ ಅದೇ ಪ್ರಳಯವಲಾ|
                  ಇಂತಹ ಪ್ರಳಯ ನಿನ್ನೊಳು ಉಂಟೇ ಗುಹೇಶ್ವರಾ||

ಈ ಹಿಂದೆ ಅದೆಷ್ಟೋ ಪ್ರಳಯಗಳು ಆಗಿಹೊಗಿವೆಯೋ ತಿಳಿಯದು, ಇನ್ನುಮುಂದೆ ಅದೆಷ್ಟು ಪ್ರಳಯ ಆಗಬಹುದು ಎಂಬುದನು ಕಲ್ಪಿಸಲು ಸಾಧ್ಯವಿಲ್ಲ.  ಸಾಧಕನಾದವನು ತನ್ನ ನಿಜವಾದ ಅಮರ ಸ್ವರೂಪವನ್ನು ಅರಿಯದೆ ಹೋದರೆ ಅದೇ ನಿಜವಾದ ಪ್ರಳಯ.   ಪ್ರಕೃತಿಯಿಂದ ಅಥವಾ ಶಕ್ತಿಯ ಮೂಲಕಾರಣದಿಂದ ಹುಟ್ಟುವಂತಹ ಎಲ್ಲವು ಕಾಣುತ್ತದೆ, ರೂಪಗೊಳ್ಳುತ್ತದೆ ಕೊನೆಗೆ ಆ ಪ್ರಕೃತಿಯಲ್ಲೇ ಪ್ರಳಯ ಹೊಂದುತ್ತದೆ.   ಆದರೆ, ಆತ್ಮತತ್ವ ಯಾವ ಕಾರಣದಿಂದಲೂ ಜನ್ಮವಾದುದಲ್ಲ, ಆದ್ದರಿಂದ ಆತ್ಮಕ್ಕ ಯಾವ ಪ್ರಳಯವೂ ಇಲ್ಲ.  ಅನಾತ್ಮವಾದ ದೇಹಾದಿಗಳಲ್ಲಿ  ನಾವುಗಳು ತಾದಾತ್ಮ ಭಾವ ತಳೆದು ಇದನ್ನೇ ನಿಜವಾದ ರೂಪವೆಂದು ಭ್ರಮಿಸುವ ಕಾರಣ ಅನಾತ್ಮನು ಹುಟ್ಟುತ್ತಾನೆ, ನಂತರ ಸಾಯುತ್ತಾನೆ.  ಇದು ಅಜ್ಞಾನ.   ಈ ಅಜ್ಞಾನವೇ ಪ್ರಳಯ.   ಜ್ಞಾನದ ಬೆಳಕಲ್ಲಿ ನಿಲ್ಲಲು, ಅಜ್ನಾನವೆಂಬ ಕತ್ತಲಿನಿಂದ ಹೊರಬರಬೇಕು.  ಆಗ ಅರಿವು ಅಮೃತವಾಗುತ್ತದೆ.  ಅಮೃತಕೆಲ್ಲಿ ಪ್ರಳಯದ ಭೀತಿ?

ಪ್ರಕಾಶ್  ಹೆಚ್ ಏನ್ 

( ನನ್ನ ಈ ಚಿಂತನೆಯು  ದಿನಾಂಕ 3-12-2009 ರಲ್ಲಿಹಾಸನ ಆಕಾಶವಾಣಿಯಲ್ಲಿ  ಬಿತ್ತರಗೊಂಡಿತ್ತು }