Pages

Tuesday, July 20, 2010

ಅಧಿಕಮಾಸದ ಹಿನ್ನೆಲೆ

ವೇದಸುಧೆ ಬಳಗದ ಶ್ರೀ ಹಂಸಾನಂದಿಯವರು ಉತ್ತಮ ಬರಹಗಾರರು.ಹಾಸನದವರಾದ ಇವರು ಸಧ್ಯ ಕ್ಯಾಲಿಫೋರ್ನಿಯಾದಲ್ಲಿದ್ದಾರೆ. ಶ್ರೀಯುತರ ಈ ಲೇಖನ ಓದಿ.
-ಶ್ರೀಧರ್

’ದುರ್ಭಿಕ್ಷದಲ್ಲಿ ಅಧಿಕ ಮಾಸ’ ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ’ಮೊದಲೇ ಕೊಳೆ ಅದರ ಮೇಲೆ ಮಳೆ’ ಅನ್ನೋ ಗಾದೆಗೂ ಇದೇ ಅರ್ಥ. ಮೊದಲೇ ಕಷ್ಟಗಳು ಇದ್ದಾಗ, ಅದರ ಮೇಲೆ ಇನ್ನಷ್ಟು ಕಷ್ಟಗಳನ್ನು ಬರುವುದನ್ನು ಸೂಚಿಸುತ್ತವೆ ಹೀಗೆ...’ದುರ್ಭಿಕ್ಷದಲ್ಲಿ ಅಧಿಕ ಮಾಸ’ ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ’ಮೊದಲೇ ಕೊಳೆ ಅದರ ಮೇಲೆ ಮಳೆ’ ಅನ್ನೋ ಗಾದೆಗೂ ಇದೇ ಅರ್ಥ. ಮೊದಲೇ ಕಷ್ಟಗಳು ಇದ್ದಾಗ, ಅದರ ಮೇಲೆ ಇನ್ನಷ್ಟು ಕಷ್ಟಗಳನ್ನು ಬರುವುದನ್ನು ಸೂಚಿಸುತ್ತವೆ ಹೀಗೆ ದುರ್ಭಿಕ್ಷದಲ್ಲಿ ಅಧಿಕಮಾಸ ಅಂತ ಗಾದೆ ಯಾಕೆ ಬಂದಿದೆ ಗೊತ್ತಾ? ಇದ್ದಕ್ಕಿದ್ದ ಹಾಗೆ ಒಂದು ತಿಂಗಳು ಹೆಚ್ಚಾಗಿ ಹೇಗೆ ಬರುತ್ತೇ ಅಂತೀರಾ?

ಈ ಮಾಸ ಅನ್ನೋ ಪದ ಮಾ ಅನ್ನೋ ಮೂಲದಿಂದ ಬಂದಿದೆ. ಪೂರ್ಣಿ’ಮಾ’, ಅ’ಮಾ’ವಾಸ್ಯೆ ಗಳಲ್ಲಿರುವ ಮಾ ಇದೇನೆ. ಕನ್ನಡದಲ್ಲಿ ಚಂದ್ರ ಅನ್ನೋ ಅರ್ಥ ಬರುವ ತಿಂಗಳು ಎನ್ನುವ ಪದವನ್ನೇ ನಾವು ಮಾಸ ಅನ್ನೋ ಅರ್ಥದಲ್ಲೇ ಬಳಸ್ತೀವೆ. ಈ ಓವರ್‌ಲೋಡೆಡ್ ಪದ ಎಷ್ಟು ಸರ್ವೇಸಾಮಾನ್ಯ ಆಗಿಹೋಗಿದೆ ಅಂದರೆ, ತಿಂಗಳು ಎಂದರೆ ಚಂದ್ರ ಅನ್ನೋದೇ ನಮ್ಮಲ್ಲಿ ಹಲವರಿಗೆ ಮರೆತುಹೋಗಿದೆ. ಆದಿರಲಿ. ತಿಂಗಳು, ಅಥವಾ ಮಾಸ, ಎಂದರೆ, ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಯವರೆಗಿರುವ ಅವಧಿ. ಇದು ಸುಮಾರಾಗಿ ಇಪ್ಪತ್ತೊಂಬತ್ತೂವರೆ ದಿನ, ಅಥವಾ ಸುಲಭವಾಗಿ ಮೂವತ್ತು ದಿನ ಅಂತ ಇಟ್ಟುಕೊಳ್ಳಬಹುದು.

ಕರ್ನಾಟಕದಲ್ಲಿ ನಮಗೆ ವರ್ಷದ ಮೊದಲ ಹಬ್ಬ ಯುಗಾದಿ. ಕರಾವಳಿಯಲ್ಲಿ ಬಿಟ್ಟರೆ, ಉಳಿದವರೆಲ್ಲ ಚಾಂದ್ರಮಾನ ಯುಗಾದಿಯನ್ನೇ ಆಚರಿಸುವುದು ಪದ್ಧತಿ. ಯುಗಾದಿ ಬರುವುದು ಚೈತ್ರದ ಮೊದಲ ದಿನ. ಅಂದ ಹಾಗೆ, ತಿಂಗಳುಗಳಿಗೆ ಚೈತ್ರ, ವೈಶಾಖ ಅಂತಲೇ ಹೆಸರೇಕೆ ಬಂತು ಗೊತ್ತಾ? ಇದೂ ನೂರಾರು ವರ್ಷ ಆಕಾಶವನ್ನು ನೋಡ್ತಾ ಬಂದ ನಮ್ಮ ಪೂರ್ವಿಕರ ಗಮನದ ಹರಹನ್ನು ತೋರಿಸುತ್ತೆ. ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಗೆ ಸುಮಾರು ಮೂವತ್ತು ದಿನ ಬೇಕಾಗಿದ್ದರೂ, ಚಂದ್ರ ಆಕಾಶದಲ್ಲಿ ಒಂದು ಸುತ್ತು ಸುತ್ತೋದಕ್ಕೆ ಇಪ್ಪತ್ತೇಳು-ಇಪ್ಪತ್ತೆಂಟು ದಿನ ಸಾಕು ಅನ್ನೋದು ಅವರಿಗೆ ಗೊತ್ತಾಗಿತ್ತು. ಹೇಗೆ ಅದು? ಈಗಿನ ತರಹ ಆಗ ಲೈಟ್ ಪಲ್ಯೂಷನ್ ಇರಲಿಲ್ಲ ಬಿಡಿ ಆಗ :-) ರಾತ್ರಿ ನಕ್ಷತ್ರಗಳು ಚೆನ್ನಾಗಿ ಕಾಣೋವು. ಹಾಗಾಗೇ, ಚಂದ್ರ ಯಾವಾಗಲೂ ಆಕಾಶದಲ್ಲಿ ಒಂದೇ ದಾರಿಯಲ್ಲೇ ಹೋಗ್ತಾನೆ ಅಂತ ಅವರಿಗೆ ತಿಳಿದಿತ್ತು.
ಹೀಗೆ ಚಂದ್ರ ಹೋಗೋವಾಗ ಕೆಲವು ನಕ್ಷತ್ರಗಳಿಗೆ ಅವನು ಕೆಲವು ದಿನ ಹತ್ತಿರವಾಗಿ ಕಾಣ್ತಾನೆ ಅನ್ನೋದನ್ನೂ ಅವರು ಕಂಡುಕೊಂಡರು. ಚಂದ್ರ ಆಕಾಶದಲ್ಲಿ ಹೊರಟ ಜಾಗಕ್ಕೇ ಮತ್ತೆ ಸುಮಾರು ೨೭-೨೮ ದಿನಗಳಲ್ಲಿ ಬರೋದ್ರಿಂದ, ಪ್ರತಿ ರಾತ್ರಿಯೂ ಅವನ ದಾರಿಯಲ್ಲಿ ಹತ್ತಿರವಾಗಿರೋ ಒಂದು ನಕ್ಷತ್ರವನ್ನು ಗುರುತಿಟ್ಟುಕೊಂಡು, ಅದರಿಂದ ದಿವಸದ ಲೆಕ್ಕಾಚಾರ ಹಾಕೋಕ್ಕೆ ಆರಂಭಿಸಿದರು. ಇವೇ ೨೭ ನಕ್ಷತ್ರಗಳು. ಅವುಗಳಿಗೇ ಅಶ್ವಿನಿ-ಭರಣಿ-ಕೃತಿಕಾ -... ರೇವತಿ ಅಂತ ಹೆಸರು. ಇದೇ ಆಕಾಶವನ್ನು ಸೂರ್ಯ ಒಂದು ವರ್ಷದಲ್ಲಿ ಸುತ್ತೋದ್ರಿಂದ, ಹೀಗೆ ಆಕಾಶವನ್ನ ಪಟ್ಟಿಹಾಕಿ ಅಳತ್ ಮಾಡಿಟ್ಟಿದ್ದು, ಸೂರ್ಯ ಎಲ್ಲಿದ್ದಾನೆ, ಚಂದ್ರ ಎಲ್ಲಿದ್ದಾನೆ ಅನ್ನೋದನ್ನ ಹೇಳೋದಕ್ಕೆ ಅನುಕೂಲ ಆಯ್ತು. ಅಂದರೆ, ಆಕಾಶವನ್ನು ೨೭ ಕಿತ್ತಳೆ ತೊಳೆಗಳ ತರಹ ವಿಂಗಡಿಸಿ, ಒಂದೊಂದಕ್ಕೂ ಒಂದು ನಕ್ಷತ್ರದ ಜಾಗ ಅಂದ್ರೆ, ಸರಿಯಾದ ಹೋಲಿಕೆ ಆಗುತ್ತೆ.

ಇವನ್ನೆಲ್ಲ ಯಾವುದೋ ಪೂಜೆ ಪುನಸ್ಕಾರ ಮಾಡೋ ಮಂತ್ರ ಹೇಳೋ ಗೊಡ್ಡು ಜನಗಳು ಮಾತ್ರ ತಿಳ್ಕೋತಿದ್ರು ಅನ್ನಬೇಡ್ರೀ! ಹಳ್ಳಿ ಹಳ್ಳೀಲಿ ಹೋಗಿ ಕೇಳಿ - ಯಾವ ಮಳೆ ಬಂದರೆ ಏನು ಅನುಕೂಲ ಅಂತ, ಹೇಳಿಯಾರು. ಹೀಗೆ ಅಶ್ವಿನಿ ಮಳೆ ಅಂದರೆ, ಸೂರ್ಯ ಅಶ್ವಿನಿಯ ಭಾಗದಲ್ಲಿ ಇರುವಾಗ ಬೀಳೋ ಮಳೆ ಅಂತ ಅರ್ಥ ಮಾಡಿಕೋಬೇಕು.

ತಿಂಗಳನ್ನು ಮಾಡಲು ಚಂದ್ರನನ್ನಿಟ್ಟವರು, ಮಳೆಗೆ ಮಾತ್ರ ರವಿಯ ಮೊರೆ ಹೋದರೇಕೆ? ಅದು ಸ್ವಾರಸ್ಯವಾದ ವಿಷಯವೇ. ಬೇಸಿಗೆ-ಮಳೆ-ಚಳಿಗಾಲಗಳು ಸೂರ್ಯ ಆಗಸದಲ್ಲಿ ನಕ್ಷತ್ರಗಳ ಹಾಸಿನಲ್ಲಿ ಎಲ್ಲಿದ್ದಾನೆ ಎಂಬುದರ ಮೇಲೆ ಹೊಂದಿಕೊಂಡಿದೆ ಅನ್ನೋದನ್ನು ಅವರು ಅನುಭವದಿಂದ ಅರಿತರು. ಸುಮಾರು ಸರಾಸರಿ ೩೬೦ ದಿನಗಳಲ್ಲಿ ಕಾಲಗಳು ಮತ್ತೆ ಮತ್ತೆ ಬರುತ್ತವೆ ಅಂಬೋದೂ ಅವರಿಗೆ ಗೊತ್ತಾಯ್ತು. ಬಹಳ ವರ್ಷಗಳು ಇದನ್ನೇ ನೋಡಿ, ಒಂದು ವರ್ಷಕ್ಕೆ ೩೬೫ ದಿನಗಳು ಅನ್ನೋದನ್ನು ತಿಳಿದುಕೊಂಡಿದ್ದರು.
ಆದರೆ, ದಿನ-ನಿತ್ಯದ ಕ್ಯಾಲೆಂಡರ್ ಬಳಕೆಗೆ ಸೂರ್ಯನನ್ನು ಬಳಸೋದು ಕಷ್ಟ. ಮೊದಲನೇದಾಗಿ, ಸೂರ್ಯ ಯಾವ ನಕ್ಷತ್ರದ ಬಳಿ ಇದ್ದಾನೆ ಅನ್ನೋದು ನೇರವಾಗಿ ಕಾಣೋಲ್ಲ- ಸೂರ್ಯನ ಬೆಳಕಿನಿಂದ. ಹಾಗಾಗಿ, ಸೂರ್ಯ ಹುಟ್ಟುವ ಮೊದಲು ಪೂರ್ವದಲ್ಲಿ ಯಾವ ನಕ್ಷತ್ರಗಳು ಕಾಣುತ್ತವೆ, ಸಂಜೆ ಮುಳುಗಿದ ನಂತರ ಯಾವ ನಕ್ಷತ್ರಗಳು ಕಾಣುತ್ತವೆ ಎನ್ನೋದನ್ನು ನೋಡಿ, ಸೂರ್ಯ ಯಾವ ನಕ್ಷತ್ರದ ಭಾಗದಲ್ಲಿದಾನೆ ಅನ್ನೋದನ್ನ ಕಂಡುಹಿಡೀಬೇಕಾಗತ್ತೆ. ಆದರೆ, ಚಂದ್ರನ ವಿಷಯ ಹಾಗಲ್ಲ. ಮೊದಲನೆದಾಗಿ, ೨೭ ನಕ್ಷತ್ರಗಳನ್ನ ಮಾಡಿರೋದೇ ಚಂದ್ರನ ಚಲನೆಯ ಮೇಲೆ ಆದ್ದರಿಂದ, ಪ್ರತಿದಿನ ಅವನು ಒಂದು ನಕ್ಷತ್ರದ ಬಳಿ ಇರುತ್ತಾನೆ! ಮತ್ತೆ, ಮಳೆಗಾಲವನ್ನು ಬಿಟ್ಟು, ಉಳಿದ ತಿಂಗಳುಗಳಲ್ಲಿ, ಸುಮಾರು ತಿಂಗಳಲ್ಲಿ ೨೫ ದಿನವಾದರೂ, ಚಂದ್ರನನ್ನು ನೋಡಬಹುದು.

ಅದೂ ಅಲ್ಲದೆ, ಅರ್ಧ ತಿಂಗಳು ಚಂದ್ರ ಹೆಚ್ಚುತ್ತಾನೆ, ಇನ್ನರ್ಧಕ್ಕೆ ಕುಗ್ಗುತ್ತಾನೆ. ಆದ್ದರಿಂದ, ತಿಂಗಳನ್ನು ಎರಡು ಪಕ್ಷ - ಒಂದೊಂದು ಪಕ್ಷಕ್ಕೆ ೧೫ ತಿಥಿ - ಸುಮಾರು ಒಂದು ತಿಥಿ ಒಂದು ದಿನದಷ್ಟೇ. ಹಾಗೇ, ಪ್ರತಿದಿನ ಚಂದ್ರ ಒಂದು ನಕ್ಷತ್ರದ ಬಳಿ ಇರುವುದರಿಂದ, ಆಯಾ ದಿನಕ್ಕೆ ಒಂದು ತಿಥಿ, ಒಂದು ನಕ್ಷತ್ರ ಕೊಟ್ಟರೆ, ಆ ದಿನವನ್ನು ಕ್ಯಾಲೆಂಡರ್ ನಲ್ಲಿ ಸೂಚಿಸುವುದು ಸುಲಭವಾಯಿತು. ಇನ್ನುವರ್ಷದ ೧೨ ತಿಂಗಳುಗಳನ್ನು ಆಯಾ ತಿಂಗಳು ಚಂದ್ರ ಯಾವ ನಕ್ಷತ್ರದ ಬಳಿ ಇರುತ್ತಾನೋ, ,ಅದರಿಂದ ಕರೆದರು. ಉದಾಹರಣೆಗೆ ಚಂದ್ರ ಚಿತ್ತಾ ನಕ್ಷತ್ರದ ಬಳಿಯಿದ್ದು ಆಗುವ ಹುಣ್ಣೀಮೆ ಚೈತ್ರ ಮಾಸಕ್ಕೆ ಸೇರಿದ್ದು. ಹಾಗೇ, ಚಂದ್ರ ಹುಣ್ಣಿಮೆಯಂದು ಅಶ್ವಿನಿ ನಕ್ಷತ್ರದ ಬಳಿ ಇದ್ದರೆ, ಅದು ಆಶ್ವಯುಜ ಮಾಸ ಅಷ್ಟೇ. ಉಳಿದ ಎಲ್ಲಾ ತಿಂಗಳಿಗೂ ಹೀಗೇ ಅರ್ಥ ಕಲ್ಪಿಸಬಹುದು.

ಸರಿ; ಬರಿ ತಿಥಿ, ಮಾಸ, ನಕ್ಷತ್ರಗಳದ್ದೇ ಕಾರುಬಾರಾಯ್ತು ಅಂತೀರಾ? ನಾನು ಹೀಗೇ ಎಲ್ಲೆಲ್ಲಿಗೋ ಹೋಗುತ್ತಾ ಇದ್ದರೆ, ಇವನು ಬರೆಯೋದು ಓದೋದು ದುರ್ಭಿಕ್ಷದಲ್ಲಿ ಅಧಿಕಮಾಸ ಇದ್ದಹಾಗೆ ಅಂದು ಬಿಟ್ಟರೆ ಕಷ್ಟ! ಅದಕ್ಕೆ ಮೊದಲೆ ಅಧಿಕಮಾಸದ ವಿವರ ಕೊಟ್ಟುಬಿಡ್ತೀನಿ. ಸುಮಾರು ೨೯.೫ ದಿನಗಳಿರುವ ೧೨ ತಿಂಗಳು ಎಂದರೆ, ಒಂದು ಚಾಂದ್ರಮಾನ ವರ್ಷದಲ್ಲಿ ೩೫೪ ದಿವಸ. ಅಂದರೆ, ಚೈತ್ರ ಶುದ್ಧ ಪಾಡ್ಯದಂದು ಆಚರಿಸುವ ಈ ವರ್ಷದ ಯುಗಾದಿಗೂ, ಅದೇ ದಿವಸ ಆಚರಿಸುವ ಮುಂದಿನ ವರ್ಷದ ಯುಗಾದಿಗೂ ಮಧ್ಯ ೩೫೪ ದಿವಸ ಅಷ್ಟೇ; ಆದರೆ, ಸರಾಸರಿ ಕಾಲಗಳ ವರ್ಷ ೩೬೫ ದಿನದ್ದು ಎಂದು ಆಗಲೇ ಹೇಳಿದ್ದೇನೆ. ಉದಾಹರಣೆಗೆ ಈ ವರ್ಷ ಮಾರ್ಚ್ ೩೧ಕ್ಕೆ ಇತ್ತು ಯುಗಾದಿ ಅಂತ ಇಟ್ಟುಕೊಳ್ಳಿ. ಮುಂದಿನ ವರ್ಷ ಅದು ಮಾರ್ಚ್ ೨೦ ಕ್ಕೆ ಬರುತ್ತೆ. ಅದರ ಮುಂದಿನ ವರ್ಷ ಮಾರ್ಚ್ ೯ಕ್ಕೆ - ಅದರ ಮುಂದಿನ ವರ್ಷ ಫೆಬ್ರವರಿ ೨೭ಕ್ಕೆ! ಹೀಗೇ ಹೋಗ್ತಾ ಹೋದರೆ, ಹತ್ತು ವರ್ಷ ಆಗೋ ಹೊತ್ತಿಗೆ, ನಮ್ಮ ಯುಗಾದಿ ಬೇಸಿಗೆಯ ಆರಂಭದಲ್ಲಿ ಬರೋ ಬದಲು ಚಳಿಗಾಲದ ಆರಂಭಕ್ಕೆ ಹೊರಟು ಹೋಗುತ್ತಲ್ಲವೇ? ಆಗ, ಉಗಾದಿಗೆ ಉಗುಳುನೀರು ಅನ್ನೋ ಗಾದೆಗಳೆಲ್ಲ ಸುಳ್ಳಾಗಿಹೋಗಲ್ವೇ? ವೇದ ಸುಳ್ಳಾಗಬಹುದು, ಆದರೆ ಗಾದೆ ಸುಳ್ಳಾಗೋಲ್ಲ, ಅಲ್ವಾ? ಹಾಗಿದ್ದರೆಇದಕ್ಕೆ ಏನು ಮಾಡೋದು ಅಂತೀರಾ?

ಆದರೆ, ನಿಮಗೆ ಯಾವತ್ತಾದರು ಡಿಸೆಂಬರ್‌ನಲ್ಲಿ ಯುಗಾದಿ ಹಬ್ಬ ಮಾಡಿರೋ ನೆನಪಿದಿಯೇ? ಯೋಚಿಸ್ತಾ ತಲೇ ಕೆರ್ಕೋಬೇಡಿ. ಯಾಕಂದ್ರೆ ಅದು ಯಾವತ್ತೂ ಆಗಿಲ್ಲ, ಆಗೋದೂ ಇಲ್ಲ! ಈ ತೊಂದರೆ ಅಗೋದು ಚಂದ್ರನ ವರ್ಷಕ್ಕೂ , ಸೂರ್ಯನ ವರ್ಷಕ್ಕೂ ಇರೋ ೧೧ ದಿವಸದ ಅಂತರದಿಂದ ಅಂತ ನಿಮಗೀಗಾಗಲೆ ಮನವರಿಕೆಯಾಗಿರಬೇಕು. ಇದನ್ನ ಹೇಗಪ್ಪಾ ಸರಿ ಮಾಡೋದು? ಲೆಕ್ಕ ಹಾಕಿ - ೧೨ ತಿಂಗಳಿಗೆ ೧೧ ದಿನ ಹಿಂದೆ ಬೀಳೋದಾದರೆ, ಒಂದು ತಿಂಗಳಿಗೆ ೧೧/೧೨ ದಿನ ಆಯಿತು. ಈ ಲೆಕ್ಕದಲ್ಲಿ, ಇಪ್ಪತ್ತೊಂಬತ್ತೂವರೆ ದಿವಸ ಹಿಂದೆ ಬೀಳೋಕೇ ಎಷ್ಟು ತಿಂಗಳು ಬೇಕು? ಸುಮಾರು ೩೨.೧೮ ತಿಂಗಳು.

ಅಂದರೆ ಏನಾಯ್ತು? ಸುಮಾರು ೩೨-೩೩ ತಿಂಗಳಿಗೆ ಒಂದು ಹೆಚ್ಚುವರಿ ತಿಂಗಳನ್ನ ಸೇರಿಸಿದರೆ, ನಾವು ಯುಗಾದಿ ಚಳಿಗಾಲಕ್ಕೆ ಓಡಿಹೋಗೋದನ್ನ ತಪ್ಪಿಸಬಹುದು. ಮೊದಲು ಮಾಡಿದ ಲೆಕ್ಕವನ್ನೇ ಇನ್ನೊಂದು ಸಲ ಮಾಡೋಣ. ಮೊದಲ ವರ್ಷದ ಯುಗಾದಿ ಮಾರ್ಚ್ ೩೧ಕ್ಕೆ. ಎರಡನೇ ವರ್ಷದ ಯುಗಾದಿ ಮಾರ್ಚ್ ೨೦ಕ್ಕೆ (ಈಗ ೧೨ ತಿಂಗಳು ಮುಗಿದಿದೆ). ಮೂರನೇ ವರ್ಷದ ಯುಗಾದಿ ಮಾರ್ಚ್ ೯ಕ್ಕೆ (ಈಗ ೨೪ ತಿಂಗಳು ಮುಗಿದವು). ಇನ್ನು ಮುಂದಿನ ವರ್ಷ - ಓ, ಅಷ್ಟರೊಳಗೆ ೩೩ ತಿಂಗಳು ದಾಟಿ ಹೋಗುತ್ತವೆ ಅಲ್ವಾ? ಹಾಗಿದ್ದರೆ ನಾವು ಒಂದು ಹೆಚ್ಚುವರಿ ತಿಂಗಳನ್ನ ಸೇರಿಸಿಬಿಡೋಣ. ಈ ಹೆಚ್ಚುವರಿ ತಿಂಗಳನ್ನು ಸೇರಿಸದಿದ್ದರೆ, ಹೊಸವರ್ಷದ ಯುಗಾದಿ ಫೆಬ್ರವರಿ ೨೭ಕ್ಕೆ ಬರಬೇಕಿತ್ತು. ಆದರೆ, ನಾವು ಒಂದು ತಿಂಗಳನ್ನು ನಡುವೆ ಜಾಣತನದಿಂದ ಸೇರಿಸಿಬಿಟ್ಟೆವಲ್ಲ? ಹಾಗಾಗಿ ಮೂರನೆ ವರ್ಷದ ಯುಗಾದಿ, ಅವತ್ತಿಗೆ ಮೂವತ್ತು ದಿನ ಮುಂದೆ, ಅಂದರೆ ಮಾರ್ಚ ೨೯ಕ್ಕೆ ಬರುತ್ತೆ! ಅದರ ಮುಂದಿನ ವರ್ಷ ಮಾರ್ಚ್ ೧೮ಕ್ಕೆ, ಅದರ ಮುಂದಿನ ವರ್ಷ ಮಾರ್ಚ್ ೧೧ಕ್ಕೆ, ಅದರ ಮುಂದಿನ ವರ್ಷ - ಮರೀಬೇಡಿ - ೩೨-೩೩ ತಿಂಗಳು ಕಳೆದಿವೆ ಆಗಲೆ, ಹಾಗಂದ್ರೆ, ಏನರ್ಥ? ಯುಗಾದಿ ಫೆಬ್ರವರಿ ೨೮ಕ್ಕೆ ಬದಲಾಗಿ, ಮಾರ್ಚ್ ೩೦ಕ್ಕೆ ಬರುತ್ತೆ.

ಈ ಜಾಣತನದಿಂದೇನಾಯಿತು ನೋಡಿ? ಯುಗಾದಿ ಹಬ್ಬ ಚಳಿಗಾಲಕ್ಕೆ ಹೋಗೋದಿಲ್ಲ, ಉಗಾದಿಗೆ ಉಗುಳುನೀರೂ ತಪ್ಪೋದಿಲ್ಲ. ಇಷ್ಟೇ ಅಧಿಕ ಮಾಸದ ಗುಟ್ಟು. ಚಂದ್ರನ ವರ್ಷ-ಸೂರ್ಯನ ವರ್ಷಗಳು ಆದಷ್ಟೂ ಒಂದಕ್ಕೊಂದಕ್ಕೆ ಬಿಡದೇ ಹೊಂದಿಕೆಯಾಗಿರುವಂತೆ ಮಾಡಿರುವ ಪದ್ಧತಿ ಇದು.

ಇದು ಭಾರತದಲ್ಲಿ ಮಾತ್ರವಲ್ಲದೆ, ಯಹೂದಿಗಳ ಹಿಬ್ರೂ ಪಂಚಾಂಗದಲ್ಲೂ ರೂಢಿಯಲ್ಲಿದೆ. ಅಧಿಕ ಮಾಸ ಯಾವಾಗ ಬರುತ್ತೆ ಅನ್ನೋದರ ಲೆಕ್ಕಾಚಾರ ಸ್ವಲ್ಪ ಬೇರೆಯಾದರೂ, ಸರಾಸರಿ ಎರಡೂ ಸಮಾಂತರವಾಗಿ ಹೋಗುತ್ತವೆ. ಇದನ್ನ ಯಾರು ಕೊಟ್ಟು-ಯಾರು ಕೊಂಡರೋ ಗೊತ್ತಿಲ್ಲ ನನಗೆ; ಅಥವ ಎರಡೂ ಕಡೆ ಬೇರೆಬೇರೆಯಾಗೇ ಈ ಸತ್ಯವನ್ನು ಕಂಡುಕೊಂಡಿರಲೂಬಹುದು.

ಈ ಎಲ್ಲ ಲೆಕ್ಕಾಚಾರಗಳಿರುವುದರಿಂದ, ಇನ್ನೊಂದು ಚಕ್ರವೂ ಪ್ರಾರಂಭವಾಗುತ್ತೆ. ಈ ಅಧಿಕ ಮಾಸಗಳನ್ನು ಹಾಕಿದಾಗಲೂ, ಪ್ರತಿ ವರ್ಷ ಚಂದ್ರನ ವರ್ಷವೂ ಸೂರ್ಯನ ವರ್ಷವೂ ಪೂರ್ತಿ ಸರಿಯಾಗಿ ಒಂದುಗೂಡದು ಅನ್ನೋದನ್ನು ನೀವು ಗಮನಿಸಿರಬಹುದು. ಆದರೆ, ೧೯ ವರ್ಷಗಳಲ್ಲಿ, ಇವೆರಡೂ ಮತ್ತೆ ಸೇರುತ್ತವೆ. ಅಂದರೆ, ಪ್ರತಿ ೧೯ ವರ್ಷಗಳಲ್ಲಿ ಕ್ಯಾಲೆಂಡರ್ ದಿನಾಂಕವೂ, ಚಂದ್ರನ ತಿಥಿ-ನಕ್ಷತ್ರಗಳೂ ಒಂದುಗೂಡುತ್ತವೆ. ಅಂದರೆ, ೧೯೮೦ರ ಜನವರಿ ಒಂದರಂದು ಚಂದ್ರ ಶುಕ್ಲ ಪಾಡ್ಯ, ಅಶ್ವಿನೀ ನಕ್ಷತ್ರದಲ್ಲಿ ಇರುತ್ತಾನೆ ಅಂದುಕೊಳ್ಳಿ (ಸುಮ್ಮನೇ ಅಂದುಕೊಳ್ಳಿ - ನಾನೇನೂ ಪಂಚಾಂಗ ನೋಡಿಲ್ಲ!) ; ೧೯೯೯ ರ ಜನವರಿ ಒಂದರಂದೂ ಕೂಡ ಶುಕ್ಲ ಪಾಡ್ಯ, ಅಶ್ವಿನಿ ನಕ್ಷತ್ರವಾಗಿರುತ್ತೆ. ಹಾಗೇ ೨೦೧೮, ಜನವರಿ ಒಂದರಂದೂ ಅದೇ ತಿಥಿ, ನಕ್ಷತ್ರ! ಇದು ನಿದಾನವಾಗಿ ದೂರ ಸರಿಯುವುದಾದರೂ, ಒಬ್ಬ ವ್ಯಕ್ತಿಯ ಜೀವಿತ ಕಾಲದಲ್ಲಿ ಅಳತೆ ಮಾಡುವಷ್ಟ ಬದಲಾಗದು ಎಂದೇ ಹೇಳಬಹುದು. ೧೯-೨೦ನೇ ಶತಮಾನದಲ್ಲಿ, ಇನ್ನೂ ಜನನ-ಪತ್ರಗಳು ಇಲ್ಲದ ಸಮಯದಲ್ಲಿ, ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕ ತಿಳಿಯದೆ, ಬರೀ ತಿಥಿ-ವಾರ-ನಕ್ಷತ್ರ-ಸಂವತ್ಸರಗಳಿರುವ ಜಾತಕಗಳಿದ್ದಾಗ, ಈ ಹತ್ತೊಂಬತ್ತು ವರ್ಷದ ಚಕ್ರವನ್ನು ಗಮನದಲ್ಲಿರಿಸಿ ಅವರು ಹುಟ್ಟಿದ ದಿನವನ್ನು ಕಂಡುಹಿಡಿದ ಸಂದರ್ಭಗಳೂ ಇವೆ. ಪುರಂದರದಾಸರು ಅಥವ ತ್ಯಾಗರಾಜರು ಮೊದಲಾದ ಪುರಾತನರು ಇಂತಹ ತಿಂಗಳು ಇಂತಹ ತಾರೀಕು ಜನಿಸಿದರು, ಅಥವಾ ಮರಣಿಸಿದರು ಎಂದು ಹೇಳುವಾಗಲೂ ಈ ಹತ್ತೊಂಬತ್ತು ವರ್ಷದ ಚಕ್ರ ತನ್ನ ಕೈಚಳಕ ತೋರಿರುತ್ತದೆ.

-ಹಂಸಾನಂದಿ

ಚಿತ್ರ ಕೃಪೆ - ಇಂಗ್ಲಿಷ್ ವಿಕಿಪಿಡಿಯ


(ಸುಮಾರು ಮೂರು ವರ್ಷಗಳ ಮೊದಲು ಬರೆದಿದ್ದಿದು. ಕೆಲವು ಚಿಕ್ಕಪುಟ್ಟ ಬದಲಾವಣೆ/ತಿದ್ದುಪಡಿಗಳೊಂದಿಗೆ ಹಾಕಿದ್ದೇನೆ)

No comments:

Post a Comment