Pages

Sunday, August 8, 2010

ಮಾವಿನ ಮರ - ಕೋಗಿಲೆ ; ಎರಡೂ ಬೇರೆ ಬೇರೆ ಒಂದಕ್ಕೊಂದು ಸಂಬಂಧವಿಲ್ಲದ ಅಸ್ತಿತ್ವಗಳು. ಆದರೆ ಅವೆರಡಕ್ಕೂ ಅಗಲಲಾರದ ನಂಟು. ಮಾವಿನ ಮರ ಚಿಗುರೊಡೆದೊಡನೆಯೇ ಕೋಗಿಲೆ ತನ್ನ ಗಾನಸುಧೆಯೊಂದಿಗೆ ಹಾಜರ್. ಅದೇ ನಮ್ಮನ್ನು ನೋಡಿ. ಹುಟ್ಟಿದ ಕೂಡಲೇ ಅಪ್ಪ-ಅಮ್ಮನ ಸಂಬಂಧ; ಸ್ವಲ್ಪ ಸಮಯದ ನಂತರ ಅಣ್ಣ-ತಂಗಿಯರ ಸಂಬಂಧ; ಬಂಧುಗಳ ಸಂಬಂಧ - ಹೀಗೆ ಈ ಸಂಬಂಧಗಳ ಸರಪಳಿ ಕೊನೆಯವರೆಗೂ ಬೆಳೆಯುತ್ತಲೇ ಹೋಗುತ್ತದೆ. ಆದರೆ ಇಂದು ನಾನಾ ಕಾರಣಗಳಿಂದ ಈ ರಕ್ತ ಸಂಬಂಧದ ಬೆಸುಗೆ ಸಾಕಷ್ಟು ಸಡಿಲವಾಗಿದೆ. ಅನೇಕ ಸಂದರ್ಭಗಳಲ್ಲಿ ಮುರಿದುಬೀಳುವ ಮಟ್ಟಕ್ಕೂ ಬಂದು ನಿಂತಿದೆ. ಇವತ್ತು ಎಲ್ಲರಲ್ಲೂ ವಿದ್ಯೆಯಿದೆ, ಹಣವಿದೆ. ಆದರೆ ವಿಶಾಲವಾದ ಹೃದಯ ಮತ್ತು ತೆರೆದ ಮನಸ್ಸು ವಿರಳವಾಗುತ್ತಿದೆ. ನಿಷ್ಕಲ್ಮಷವಾದ ನಗುಮುಖ ಮರೆಯಾಗಿದೆ. ಯಾರನ್ನು ದೂಷಿಸುವುದು? ಏಕೆ ಹೀಗೆ? ನಮಗೇನಾಗಿದೆ? ಎಂದು ಪ್ರಶ್ನಿಸಿಕೊಂಡರೆ ಅವು ಉತ್ತರವಿಲ್ಲದ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿನ ಪೀಳಿಗೆಗಳಲ್ಲಿ ಇಂತಹ ಒಂದು ತುಡಿತವೇ ಮಾಯವಾಗಿಬಿಟ್ಟಿದೆ. ಸುಮಧುರ ಸಂಬಂಧಗಳ ಸವಿಯನ್ನೇ ಅರಿಯದ ಇವರು ಅದರ ಮಹತ್ವವನ್ನು ಹೇಗೆ ತಾನೇ ತಿಳಿಯಬಲ್ಲರು? ಪಾಶ್ಚಾತ್ಯ ರೀತಿಯಂತೆ ನಾನು ಬದುಕುವುದೇ ನನ್ನ ಸುಖಕ್ಕಾಗಿ; ಇತರರ (ಅಂದರೆ ತನ್ನ ಸಂಬಂಧಿಕರನ್ನು ಕುರಿತು ಮಾತ್ರ ಇಲ್ಲಿ ಹೇಳಿರುವುದು) ಉಸಾಬರಿ ತನಗೇಕೆ ಎಂಬ ಭಾವನೆ ಎಲ್ಲರಲ್ಲಿ ಮನೆ ಮಾಡುತ್ತಿದೆ. ಸಮಾರಂಭಗಳಲ್ಲಿ ಅಪರೂಪಕ್ಕೆ ಸಿಗುವ ನೆಂಟರಿಗೆ 'ಹಾಯ್' 'ಬಾಯ್' ಹೇಳಿಬಿಟ್ಟು, ಮುಂದಿನ ಕ್ಷಣ ತನ್ನ ಲೋಕಕ್ಕೇ ಜಾರುವವರು ಬಹುಬಂದಿ ಇಂದು. ಆಪ್ತೇಷ್ಟರು ಮರಣ ಹೊಂದಿ ದೇಹವನ್ನು ಭಸ್ಮ ಮಾಡಿದೊಡನೆಯೇ ಸಂಬಂಧಗಳೂ ಭಸ್ಮವಾಗುವ ಕಾಲ ಬಂದಿರುವುದು ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂಬುದರ ಸೂಚಿ. ಬ್ಯಾಂಕ್ ಬ್ಯಾಲೆನ್ಸ್, 3-4 ನಿವೇಶನಗಳು, ಐಷಾರಾಮಿ ವಸ್ತುಗಳು ಇತ್ಯಾದಿ ಇಷ್ಟೇ ನಮ್ಮ ಜೀವನದ ಪರಮ ಗುರಿ ಎಂದಾದಾಗ ಪರಿಣಾಮ ಮೇಲಿನಂತೆಯೇ ಆಗಲೇಬೇಕಲ್ಲ್ಲವೇ? ಹುಟ್ಟಿದ ಮಗುವನ್ನು ಕ್ರೀಷೆಗೋ, ಆಯಾ ಸುಪರ್ದಿಗೋ ನೀಡಿ ದುಡಿಮೆಗೆ (ದುಡಿಯುವ ಇಂತಹ ಬಹುತೇಕ ಮಂದಿಗೆ ಷೋಕಿ ಬಿಟ್ಟರೆ ಹಣದ ನಿಜವಾದ ಅವಶ್ಯಕತೆ ಇರುವುದು; ಅನಿವಾರ್ಯತೆ ಇರುವುದು ಕೆಲವೇ ಮಂದಿಗೆ ಮಾತ್ರ) ಹೊರಟಾಗ ಮಗುವಿಗೆ ತಾಯಿಯ ಪ್ರೀತಿ, ಮಧುರ ಬಾಂಧವ್ಯದ ಸವಿಯನ್ನು ಉಣಿಸುವವರು ಯಾರು? ಕಾಲಾಂತರದಲ್ಲಿ ಆ ಮಗು ಆ ತಾಯಿ ಮಾಡಿದ್ದನ್ನೇ ಮಾಡುತ್ತದೆ. ಒಂದಿಷ್ಟು ಸೌಲಭ್ಯ, ಹಣಕಾಸು ನೀಡಿ, ತನ್ನ ಪಾಡಿಗೆ ತಾನು ತನ್ನ ಸುಖದ ಅನ್ವೇಷಣೆಯಲ್ಲಿ ತೊಡಗಿಬಿಡುತ್ತದೆ. ಆಗ ತಾಯಿ ಮಗುವನ್ನು ದೂಷಿಸಿ ಪ್ರಯೋಜನವೇನು? ನೇರವಾಗಿ ಹೇಳಬೇಕೆಂದರೆ, ಇಂದು ಸಮಾಜದಲ್ಲಿ ತಾಯಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸದೇ ಇರುವುದೇ ಈ ಸಂಬಂಧಗಳ ಹಳಸುವಿಕೆಗೆ ಮೂಲ ಕಾರಣವೆಂದರೆ ತಪ್ಪಾಗಲಾರದು. ತಾಯಿ ಸ್ವಾರ್ಥಿಯಾದಾಗ ಅವಳ ಸಂತಾನ ಕೂಡಾ ಅದೇ ಹಾದಿ ಹಿಡಿದೇ ಹಿಡಿಯುತ್ತದೆ. ಕುರುಡು ಕಾಂಚಾಣದ ಹಿಂದೆ ಬಿದ್ದು ನಾಗಾಲೋಟದಲ್ಲಿ ಓಡುತ್ತಿರುವವರಿಗೆ ಮುಂದಿನ ಪರಿಣಾಮಗಳು ಹೇಗೆ ತಾನೇ ಅರಿವಾದೀತು ಅಲ್ಲವೇ? ಪರಿಣಾಮ ಸಂಬಂಧಗಳು ಸೊರಗುತ್ತಿವೆ; ನಿಧಾನವಾದ ಆದರೆ ಅಷ್ಟೇ ಖಚಿತವಾದ ಅನಾಹುತಗಳೆಡೆಗೆ ಸಾಗುತ್ತಿವೆ. [ಇಂತಹ ವಿಚಾರಗಳು ತಲೆ ಹೊಕ್ಕಾಗ ಉಂಟಾಗುವ ತಳವಳ, ವೇದನೆ ಇನ್ಯಾರೊಂದಿಗೂ ಹಂಚಿಕೊಳ್ಳದ ಪರಿಸ್ಥಿತಿಯುಂಟಾದಾಗ ಮನಸ್ಸಿನ ದುಗುಡವನ್ನು ಈ ರೀತಿಯಲ್ಲಾದರೂ ಹೊರಹಾಕಿ ಅಲ್ಪ ನೆಮ್ಮದಿ ಸಿಗುವದೇನೋ ಎಂಬ ಹಂಬಲದೊಂದಿಗೆ ಈ ಬರಹ.]
-------------------------------------
ಕವಿ ಸುರೇಶರ ಚಿಂತನೆಗೆ ಪೂರಕ ವಾಗಬಹುದೆಂದು ನನ್ನ ಈ ಕವನವನ್ನು ಅವರ ಬರಹದೊಟ್ಟಿಗೆ ಹಾಕಿರುವೆ, ಸುರೇಶರಿಗೆ -ಈ ಕ್ರಮ ಸರಿಯಲ್ಲವೆನಿಸಿದರೆ ಪ್ರತ್ಯೇಕ ಹಾಕುವೆ.
-ಶ್ರೀಧರ್



ತೊಟ್ಟಿಮನೆ

ಊರಗೌಡರ
ತೊಟ್ಟಿಮನೆಯಲಿ
ಇದ್ದ ಜನಗಳು ನೂರು|
ರಾಜಠೀವಿಯಲಿ ಗೌಡರು ಹೊರಟರೆ ನಡುಗುತ್ತಿತ್ತು ಸೂರು||
ಒಂದು ಹೊತ್ತಿಗೆ
ನೂರು ಜನಗಳ
ಊಟವು ಒಮ್ಮೆಲೆ ನಡೆದಿತ್ತು|
ಒಟ್ಟಿಗೆ ಕುಣಿಯುತ
ಒಟ್ಟಿಗೆ ಕಲಿಯುತ
ಆಟ ಪಾಠವು ನಡೆದಿತ್ತು||
ಕೆಲಸದ ಹಂಚಿಕೆಯಾಗಿತ್ತು
ಮನೆಯಲಿ ಕಿಲಕಿಲ ನಗುವಿತ್ತು
ಗೌಡರ ಬಂಡಿಯು ಸಾಗಿತ್ತು|
ಅಜ್ಜಿಯ ತೊಡೆಯಲಿ ಬೆಚ್ಛಗೆ
ಮಕ್ಕಳು ಮಲಗುತ ಕಾಲವು ಕಳೆದಿತ್ತು||

ಆಡುವ ಕಿಟ್ಟಿಯ
ನೋಡುತ ಗೌಡರು
ಗೌಡತಿ ಕಿವಿಯಲಿ ಕೇಳಿದರು|
ತುಂಟಾಟದ ನಗುವಿನ
ಚಂದದ ಹುಡುಗ
ಯಾರ ಮನೆಯ ಮಗುವಮ್ಮಾ?!!||

ಗೌಡತಿ ಗೌಡರ
ದುರುಗುಟ್ಟುತ ನೋಡಿ
ಪಿಸುಗುಟ್ಟುತ ಗೌಡರ ಕಿವಿಯೊಳಗೆ|
ಮಗ ಗೋಪಾಲನ
ಮುದ್ದಿನ ಮೂರನೆ
ಮಗನೇ ಅಲ್ಲವೆ ಇವನೆಂದು||

ಸಂಜೆಯ ಸಮಯದಿ
ಜಗತಿಯ ಮೇಲೆ
ಶಿಶುವಿಹಾರವೇ ನಡೆದಿತ್ತು|
ಮಕ್ಕಳ ಕುಣಿತವ
ಹಿರಿಯರು ನೋಡುತ
ನೋಡುತ ದಿನವೇ ಕಳೆದಿತ್ತು||

ಕಾಲದ ಕಣ್ಣೇ ಬಿದ್ದಿತ್ತು
ಕಂಬ ಕಂಬವೇ ಕುಸಿದಿತ್ತು
ತೊಟ್ಟಿಯ ಮನೆಯು ಒಡೆದಿತ್ತು
ಗೌಡರ ಕಥೆಯು ಮುಗಿದಿತ್ತು||

8 comments:

  1. ಚೆನ್ನಾಗಿ ಬಂದಿದೆ. ಲೇಖನಕ್ಕೆ ಶೀರ್ಷಿಕೆ ಕೊಡಬಹುದಲ್ಲವೇ?

    ReplyDelete
  2. ಸು೦ದರವಾಗಿ ಮೂಡಿ ಬ೦ದಿದೆ. ಶೀರ್ಷಿಕೆಯ ಅಗತ್ಯವಿಲ್ಲವೆ೦ದು ಅನಿಸಿತೇ?

    ReplyDelete
  3. ಶೀರ್ಷಿಕೆ ಏನೆಂದು ಕೊಡಲಿ? "ಮೌಲ್ಯಗಳ ಅವಸಾನ" , "ಪ್ರೀತಿಯ ಅವಸಾನ" ಅಥವಾ "ನಮ್ಮ ಹಣೆಬರಹ"?????? ಇಬ್ಬರಿಗೂ ಪ್ರತಿಕ್ರಿಯೆಗಾಗಿ ವಂದನೆಗಳು. ಶುಭವಾಗಲಿ

    ReplyDelete
  4. “ಮೌಲ್ಯಗಳ ಅವಸಾನ“ ಸೂಕ್ತವಾಗಬಹುದೆ೦ದು ನನ್ನ ಅಭಿಪ್ರಾಯ.
    ನಮಸ್ಕಾರಗಳೊ೦ದಿಗೆ,

    ReplyDelete
  5. ಚಿಂತನೆ ಮಾರ್ಮಿಕವಾಗಿದೆ!

    ReplyDelete
  6. ಪ್ರೀತಿಯ ಸುರೇಶ್,
    ಮನದಾಳದ ನಿಮ್ಮ ದುಗುಡವನ್ನು ನಮ್ಮೊಡನೆ ಹಂಚಿಕೊಂಡಿದ್ದೀರಿ. ಅದು ನಮ್ಮೆಲ್ಲರ ದುಗುಡವೇ ಹೌದು. ದೇಶ ದಾಪುಗಾಲಿಟ್ಟು ಮುನ್ನಡೆಯುವ ಭರದಲ್ಲಿ ಸಂಬಂಧದ ಕೊಂಡಿ ಕಳಚಿಕೊಳ್ಳುತ್ತಿದೆ.ಇದಕ್ಕೆ ನೀವು ತಿಳಿಸಿರುವಂತೆ ಕಾರಣಗಳು ನೂರಾರು.ನಾನೊಮ್ಮೆ ತೊಟ್ಟಿಮನೆ ಎಂಬ ಕವನವನ್ನು ಸಂಪದದಲ್ಲಿ ಬರೆದಿದ್ದೆ, ಆ ಕವನ ಇಂದು ನೆನಪಾಯ್ತು.ಸಾಧ್ಯವಾದರೆ ನಿಮ್ಮ ಚಿಂತನೆಯ ಜೊತೆಗೇ ಆ ಕವನವನ್ನೂ ಹಾಕುವೆ.
    ಇನ್ನೊಂದು ದೊಡ್ದ ಅಪಾಯವನ್ನು ಗಮನಿಸಬೇಕು. ಈಗಿನ ಪೀಳಿಗೆಯಲ್ಲಿ ಮನೆಗೆ ಒಂದೇ ಮಗು! ಆ ಮಗುವಿಗೆ ಅಣ್ಣ, ತಮ್ಮ. ಅಕ್ಕ, ತಂಗಿ, ಸಂಬಂಧಗಳ ಅರಿವು ಹೇಗೆ ಮೂಡಬೇಕು? ಹೀಗೇ ಮುಂದುವರೆದಾಗ ಚಿಕ್ಕಪ್ಪ, ದೊಡ್ದಪ್ಪ, ಸೋದರತ್ತೆ, ಸೋದರಮಾವ-ಇವರೆಲ್ಲಿಂದ ಬರಬೇಕು? ಅಂದಹಾಗೆ ಅಪ್ಪ-ಅಮ್ಮನಿಂದ ದೂರವಾಗುವ ಮಕ್ಕಳಿಗೆ ಇನ್ನು ಅಜ್ಜ-ಅಜ್ಜಿ ಸಂಬಂಧ ಎಲ್ಲಿಂದ ಬಂತು?
    ಸುರೇಶ್,
    ಈ ಒಂದು ಸಂಬಂಧಗಳ ಕೊಂಡಿ ಶಾಶ್ವತವಾಗಿ ಕಳಚುವುದಷ್ಟೇ ಅಲ್ಲ, ವಂಶವೃಕ್ಷ-ಪದವೂ ಅರ್ಥ ಕಳೆದುಕೊಳ್ಳುವ, ಒಂದು ಕುಟುಂಬ ಸರ್ವ ನಾಶವಾಗುವ,ತನ್ಮೂಲಕ ಒಂದು ಮತ, ಒಂದು ಸಂಸ್ಕೃತಿ ನಶಿಸುವ ಎಲ್ಲಾ ಷಡ್ಯಂತ್ರಗಳೂ "ಮನೆಗೊಂದು ಮಗು" ಎಂಬ ನಿಲುವಿನಲ್ಲಿದೆ. ಈಗಲಾದರೂ ಎಚ್ಚರಗೊಳ್ಳದಿದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ!!

    ReplyDelete
  7. ಪ್ರಿಯ ಶ್ರೀಧರ್ ರವರೇ,
    ತಮ್ಮ ಸ್ಪಂದನೆಗೆ ಧನ್ಯವಾದಗಳು. ಕವನ ಕೂಡ ಚೆನ್ನಾಗಿದೆ ಮತ್ತು ಈ ಚಿಂತನೆಗಳಿಗೆ ಪೂರಕವಾಗಿಯೇ ಇದೆ. ಅದು ಹಾಗೇ ಇರಲು ನನ್ನಭ್ಯಂತರವಿಲ್ಲ. ಕುಟುಂಬಕ್ಕೊಂದು ಮಗುವಿನ ದೀರ್ಘಕಾಲಿಕ ಪರಿಣಾಮಗಳನ್ನು (ಒಂದು ಕುಟುಂಬದ ನೆಲೆಯಲ್ಲಿ, ಒಂದು ಜನಾಂಗದ ನೆಲೆಯಲ್ಲಿ ಮತ್ತು ಇಡೀ ರಾಷ್ಟ್ರದ ನೆಲೆಯಲ್ಲಿ) ನೆನೆಸಿಕೊಂಡರೇ ಭಯವಾಗುತ್ತದೆ. ಹಿಂದೆ ಸಾಕಲು ಕಷ್ಟವಾದರೂ ಒಂದೊಂದು ಕುಟುಂಬದಲ್ಲಿ ಡಜನ್ ಗಟ್ಟಲೇ ಮಕ್ಕಳಿರುತ್ತಿದ್ದರು. ಇಂದು ಒಟ್ಟಿಗೇ 10 ಮಕ್ಕಳನ್ನು ಸಾಕುವ ಆರ್ಥಿಕ ಸಬಲತೆ ಇದ್ದರೂ ಒಂದು ಮಗುವನ್ನು ಹೆರುವುದೇ ಹರಸಾಹಸವೆನಿಸಿಬಿಟ್ಟಿದೆ! ವಿಶೇಷವಾಗಿ ಇಂದಿನ ಪೀಳಿಗೆ ಈ ಬಗ್ಗೆ ಕಾಳಜಿ ವಹಿಸಬೇಕು.

    ReplyDelete