Pages

Monday, August 2, 2010

ಅವಧೂತ-೨

ನಾನು ಈಗ್ಗೆ ಸುಮಾರು ೧೮-೨೦ ವರ್ಷಗಳ ಹಿಂದೆ. ಮೊದಲಭಾರಿ ಅವಧೂತ ದರ್ಶನ ಪಡೆದಾಗ ಪೂಜ್ಯರು ಬಿಳಿ ಪಂಚೆ ಬಿಳಿ ಜುಬ್ಬ/ಶರ್ಟ್ ಧರಿಸುತ್ತಿದ್ದರು.ಮೊದಲ ಭಾರಿ ಸಕ್ಕರಾಯಪಟ್ಟಣಕ್ಕೆ ಮಿತ್ರರಾದ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ರೀಡರ್ ಆಗಿದ್ದ ಶ್ರೀ ಉಪೇಂದ್ರರೊಡನೆ ಹೋಗುವಾಗ ದಾರಿಯುದ್ದಕ್ಕೂ ಅವಧೂತರೆಂದರೆ ಹೇಗಿರಬಹುದೆಂಬ ಅನೇಕ ಕಲ್ಪನೆಗಳನ್ನು ಮನಸ್ಸಿನಲ್ಲಿಯೇ ಮೂಡಿಸಿಳ್ಳಲು ಪ್ರಯತ್ನಿಸಿದಾಗ ನಮ್ಮ ಋಷಿಮುನಿಗಳ ಹಲವು ಚಿತ್ರಗಳು ಕಣ್ಮುಂದೆ ಬಂದು, ಹೀಗಿರಬಹುದು, ಹಾಗಿರಬಹುದು, ಎಂಬ ಹಲವು ಊಹೆಗಳೊಡನೆ ಪೂಜ್ಯರ ಮನೆಯೊಳಗೆ ಕಾಲಿಟ್ಟೆ. ನಾಡಹೆಂಚಿನ ದೊಡ್ಡಮನೆ. ಮನೆ ಹಿಂದೆ ಇರುವ ಹಿತ್ತಲಲ್ಲಿ ಹಸುಗಳ ಮೇವಿಗಾಗಿ ಒಣ ಹುಲ್ಲನ್ನು ಒಟ್ಟಿದ್ದರೆಂದು ಕಾಣುತ್ತೆ. ಆಗತಾನೇ ಹುಲ್ಲನ್ನು ಮೆದೆಯಿಂದ ತೆಗೆದು ಹಸುಗಳಿಗೆ ಹಾಕಿ ಪೂಜ್ಯರು ಹಿತ್ತಲ ಬಾಗಿಲಿನಿಂದ ಮನೆಯೊಳಗೆ ಬರುವುದನ್ನು ಗಮನಿಸಿದೆವು. ಮುಖದ ತುಂಬ ಕೆದರಿದ ಗಡ್ದ. ಕೆದರಿದ ತಲೆಗೂದಲು. ಕೂದಲಿಗೆಲ್ಲಾ ಅಂಟಿರುವ ಹುಲ್ಲಿನ ತುಣುಕುಗಳು. ಒಮ್ಮೆ ನೋಡಿದ ಕೂಡಲೇ "ಇವರೇ ಅವಧೂತರು!" ಎಂಬ ಅಚ್ಚರಿಯೊಡನೆ ದೀನನಾಗಿ ನಿಂತೆ.ನಂತರ ಹತ್ತಿರ ಹೋಗಿ ನಮಸ್ಕರಿಸಿದೆ. ಒಂದು ಚಾಪೆಯಮೇಲೆ ಹತ್ತಿರದಲ್ಲೇ ಕುಳ್ಳಿರಿಸಿ ಕೊಂಡ ಪೂಜ್ಯರು " ನಿನ್ನ ಕೈ ಮುಟ್ಟಬಹುದಾ? " ಎಂದರು. "ಅಗತ್ಯವಾಗಿ ಗುರುಗಳೇ"- ಎಂದನಾನು ಅವರ ಹತ್ತಿರ ಕೈ ನೀಡಿದೆ.ನನ್ನ ಒಂದೊಂದೇ ಕೈ ಬೆರಳುಗಳನ್ನು ಅವರ ಹಸ್ತದಿಂದ ಹಿಡಿದ ಪೂಜ್ಯರು ನನ್ನ ಮನೆಯ ವಿವರ ಹೇಳುತ್ತಾ ಹೋದರು.ನಮ್ಮ ಕುಟುಂಬ ಎಲ್ಲಾ ವಿವರ ಬಿಚ್ಚಿಟ್ಟರು. ಅಷ್ಟು ಹೊತ್ತಿಗೆ ನಾನು ಮೂಕವಿಸ್ಮಿತನಾಗಿದ್ದೆ. ಪೂಜ್ಯರು ಹೇಳಿದರು" ನಿನ್ನ ಹಣಕಾಸಿನ ಮುಗ್ಗಟ್ಟಿನಬಗ್ಗೆ ನನ್ನನ್ನು ಕೇಳಲು ನೀನು ಬಂದಿದ್ದೀಯಾ, ಅಕ್ಟೋಬರ್ ೨೭ ರೊಳಗೆ ಹಣಕಾಸಿನ ತಾಪತ್ರಯಗಳೆಲ್ಲಾ ಕಳೆದು ಬಿಡುತ್ತೆ. ನಿಶ್ಚಿಂತೆಯಾಗಿರು, ಎಂದು ಹರಸಿದರು. ಅತ್ಯಾಶ್ಚರ್ಯವೆಂದರೆ ನಾನು ಅವರಲ್ಲಿ ಹೋಗಿದ್ದುದು ಜೂನ್ ಅಥವಾ ಜುಲೈ ತಿಂಗಳು ಇರಬಹುದು. ಅದೇ ವರ್ಷದ ಅಕ್ಟೋಬರ್ ೨೭ ರೊಳಗೆ ಹಣಕಾಸಿನ ತಾಪತ್ರಯಗಳೆಲ್ಲಾ ನಿವಾರಣೆ ಯಾಗಿತ್ತು. ಅಷ್ಟೇ ಅಲ್ಲ, ಮುಂದೆ ಇಲ್ಲಿಯವರಗೆ ತಾಪತ್ರಯ ಕಾಣಲೇ ಇಲ್ಲ.

3 comments: