ನನ್ನದು?
ಇರುವುದು ನಿನದಲ್ಲ ಬರುವುದು ನಿನಗಲ್ಲ
ತರಲಾರದ ನೀನು ಹೊರುವೆಯೇನೆಲ್ಲಾ!
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ
ಫಲಧಾರೆ ಹರಿಯಗೊಡು ಮರುಳು ಮೂಢ
ದೀಪಾವಳಿ
ಒಡಲಗುಡಿಯ ರಜ-ತಮಗಳ ಗುಡಿಸಿ
ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ
ಮನದ ಕತ್ತಲ ಕಳೆದು ತಿಳಿವಿನ ಬೆಳಕ
ಪಸರಿಪುದೆ ದೀಪಾವಳಿ ತಿಳಿ ಮೂಢ
ಸಮಪಾಲು
ಅಹುದಿಹುದು ಅಡೆತಡೆಯು ಬಾಳಹಾದಿಯಲಿ
ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ
ಸಮಪಾಲು ಪಡೆದಿರಲು ನೋವು ನಲಿವಿನಲಿ
ಬಾಳು ಬಂಗಾರ ಬದುಕು ಸಿಂಗಾರ ಮೂಢ
ನೀತಿವಂತ
ನೀತಿವಂತರ ನಡೆಯು ನ್ಯಾಯಕಾಸರೆಯು
ನುಡಿದಂತೆ ನಡೆಯುವರು ಸವಿಯ ನೀಡುವರು
ಪ್ರಾಣವನೆ ಪಣಕಿಟ್ಟು ಮಾತನುಳಿಸುವರು
ಜಗದ ಹಿತ ಕಾಯ್ವ ಧೀರರವರು ಮೂಢ
************
-ಕ.ವೆಂ.ನಾಗರಾಜ್
[ತರಲಾರದ ನೀನು ಹೊರುವೆಯೇನನ್ನು?]
ReplyDeleteತರಲಾರದ ನೀನು ಹೊರುವೆಯೇನೆಲ್ಲಾ?
[ಫಲಧಾರೆ ಹರಿಯಗೊಡು ಮರುಳು ಮೂಢ]
ಮರುಳುತನ ಅಂದರೆ ಮೌಢ್ಯ, ಮರುಳು ಮತ್ತು ಮೂಢ ಒಂದೇ ಅರ್ಥವನ್ನು ಕೊಡುವ ಎರಡುಪದಗಳಾಗಬಹುದು. ಮರುಳು ಬದಲು ಬೇರೇನನ್ನಾದರೂ ಹಾಕುವುದು ಒಳ್ಳೆಯದೆಂದು ಕಾಣುತ್ತೆ.
ದೀಪಾವಳಿ-ಅತ್ಯದ್ಭುತ, ಎಲ್ಲವೂ ಅದ್ಭುತ.
ಶುಭವಾಗಲಿ.
[[ತರಲಾರದ ನೀನು ಹೊರುವೆಯೇನೆಲ್ಲಾ!]]
ReplyDeleteನಿಮ್ಮ ಸಲಹೆ ಸೂಕ್ತ, ಬದಲಾಯಿಸಿರುವೆ.
ಚೆಂದದ ಚುಟುಕುಗಳು.
ReplyDeleteವಂದನೆಗಳು, ಸೀತಾರಾಮರೇ.
ReplyDelete