--------------------------------
- ಶ್ರೀ ಸುಧಾಕರ ಶರ್ಮರಿಗೆ ಪ್ರಣಾಮಗಳು, ಸಗೋತ್ರ ವಿವಾಹದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಆಗಬಹುದು; ಆಗಬಾರದು ಇತ್ಯಾದಿ. ತಮ್ಮ ಮಾರ್ಗದರ್ಶನಕ್ಕಾಗಿ ಕೋರುವೆ. ಗೌರವಾದರಗಳೊಂದಿಗೆ, -ಕವಿ ಸುರೇಶ್
- ------------------------------------------------
- ಗಾಂ ತ್ರಾಯತ ಇತಿ ಗೋತ್ರಃ|| ದನ ಮೇಯಿಸುವುದರಿಂದ ಬಂದದ್ದು ಗೋತ್ರ! ಮೊದಲಿಗೆ ಗುರುಕುಲದಲ್ಲಿರುವಾಗ ಗೋಪಾಲನೆ ಅನಿವಾರ್ಯವಾಗಿತ್ತು. ಪರಿಚಯ ಮಾಡಿಕೊಳ್ಳುವಾಗ ನೀನು ಯಾವ ಗುರುಕುಲದಲ್ಲಿ ಓದಿದ್ದು ಎಂಬುದನ್ನು, ನೀನು ಯಾವ ಗುರುಕುಲದಲ್ಲಿ ದನ ಮೇಯಿಸುತ್ತಿದ್ದೆ? ಎಂಬರ್ಥದಲ್ಲಿ "ಗೋತ್ರ" ಹುಟ್ಟಿದಂತೆ ಕಾಣುತ್ತದೆ. ಗೋ ಎಂದರೆ ವಾಣಿ ಎಂತಲೂ ಅರ್ಥವಿದೆ. ಅದನ್ನು ರಕ್ಷಿಸುವುದೇ ಗೋತ್ರ. ಹಾಗಾಗಿ ಯಾವ ಅಧ್ಯಯನ ಪರಂಪರೆ ನಿನ್ನದು ಎಂಬುದನ್ನು ತಿಳಿಯಲು ಗೋತ್ರ ಶಬ್ದದ ಪ್ರಯೋಗವೂ ಆಗಿರಬಹುದು. ಹೀಗೆ ಹಿನ್ನೆಲೆಯಿರುವಾಗ ಇದಕ್ಕೂ ವಿವಾಹಕ್ಕೂ ಯಾವಾಗ ಹೇಗೆ ಗಂಟು ಬಿತ್ತೋ ವಿಚಿತ್ರವಾಗಿದೆ. ವಿವಾಹ ಸಂದರ್ಭದಲ್ಲಿ ನೋಡಬೇಕಾದ್ದು ಗುಣ, ಸ್ವಭಾವಗಳೊಂದಿಗೆ, ಜೀವನ ಧ್ಯೇಯೋದ್ದೇಶಗಳೊಂದಿಗೆ, ರಕ್ತಸಂಬಂಧ. ಹತ್ತಿರದ ರಕ್ತಸಂಬಂಧಿಗಳಲ್ಲಿ ಲಗ್ನವಾಗದರೆ ಆನುವಂಶಿಕ ರೋಗಗಳು ತಲೆಯೆತ್ತುವ ಸಾಧ್ಯತೆಗಳು ಹೆಚ್ಚು. ತಾಯಿಯ ಕಡೆಯಾಗಲಿ ಅಥವಾ ತಂದೆಯ ಕಡೆಯಾಗಲಿ ಸುಮಾರು ಏಳು ತಲೆಮಾರುಗಳಷ್ಟು ಅಂತರವಿರುವಂತೆ ನೋಡಿಕೊಂಡರೆ ಈ ಸಾಧ್ಯತೆ ಅತ್ಯಂತ ಕಡಿಮೆ ಇರುತ್ತದೆ. ಬಹುಶಃ Almost Zero. ಇಂದು ಹಿಂದಿನ ಏಳು ತಲೆಮಾರುಗಳ ಮಾಹಿತಿ ಇಲ್ಲದಿರುವಾಗ ಎಷ್ಟು ಸಾಧ್ಯವೋ ಅಷ್ಟು ದೂರದ ಸಂಬಂಧ ನೋಡುವುದು ಒಳ್ಳೆಯದು.-ಸುಧಾಕರಶರ್ಮ
No comments:
Post a Comment