Pages

Friday, February 11, 2011

ದಾನ ಕೊಡುವಾಗ ಮತ್ತು ತೆಗೆದುಕೊಳ್ಳುವಾಗ ಅನುಸರಿಸಬೇಕಾದ ನಿಯಮಗಳೇನು?

ಅದೀನಾಃ ಸ್ಯಾಮ ಶರದಃ ಶತಮ್ (ಯಜುರ್ವೇದ.36.24.) - ನೂರು ವರ್ಷಗಳ ಕಾಲ ದೈನ್ಯತೆಯಿಲ್ಲದೆ ಬಾಳೋಣ ಎಂಬುದು ವೈದಿಕ ಪ್ರಾರ್ಥನೆ. ಸಂಸ್ಕೃತ ಸುಭಾಷಿತಗಳ ಮೂಲ ಇಲ್ಲಿದೆ! ಯಜ್ಞದಲ್ಲಿ ಮಾತು ಮಾತಿಗೂ "ಇದಂ ನ ಮಮ" ಎನ್ನುತ್ತಾ "ಕೊಡಬೇಕು. ಕೊಟ್ಟಿದ್ದೇನೆ, ಇದು ನನ್ನದಲ್ಲ" ಎಂಬ ಭಾವನೆಯಿಂದ ಕೊಡಬೇಕು ಎಂಬ ಶಿಕ್ಷಣವಿದೆ. ಇಲ್ಲೊಂದು ನಿಯಮ - ಕೊಟ್ಟಿದ್ದನ್ನು ತಕ್ಷಣ ಮರೆಯಬೇಕು, ಪಡೆದದ್ದನ್ನು ಎಂದಿಗೂ ಮರೆಯಬಾರದು. (ಇಲ್ಲಿ ಎಷ್ಟು ಎಂಬ ಪ್ರಮಾಣ Quantity ಮುಖ್ಯವೇ ಅಲ್ಲ). ಕೊಡುವಾಗ, ತೆಗೆದುಕೊಳ್ಳುವಾಗ ಅನುಸರಿಸಬೇಕಾದ ನಿಯಮವನ್ನು ನಮ್ಮ ಗುರುಗಳು ತಿಳಿಸುತ್ತಿದ್ದರು. ಮುಖ್ಯವಾಗಿ ಎರಡನ್ನು ನೋಡಬೇಕು - ಒಂದು ಉದಾರತೆ ಮತ್ತೊಂದು ಸಾಮರ್ಥ್ಯ. ಕೊಡುವಾಗ - ಉದಾರತೆಯಿಂದ ಸಾಮರ್ಥ್ಯವಿದ್ದಷ್ಟೂ ಕೊಡಬೇಕು. ಸಾಮರ್ಥ್ಯ ಮೀರಿ ಕೊಡಲು ಸಾಲ-ಸೋಲ ಮಾಡಬಾರದು. ಅಂತೆಯೇ ಇರುವಾಗ ಜಿಪುಣತನ ಮಾಡಬಾರದು. ತೆಗೆದುಕೊಳ್ಳುವಾಗ - ಕೊಡುವವರು ಉದಾರತೆಯಿಂದ ಕೊಡುತ್ತಿದ್ದಾರೆಯೇ ಅಥವಾ ಇನ್ನಾವುದೋ ಒತ್ತಡಕ್ಕೆ ಸಿಲುಕಿ ಕೊಡುತ್ತಿದ್ದಾರೆಯೇ ನೋಡಬೇಕು. ಕೊಡುತ್ತಿರುವುದು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಇದೆಯೋ ಅಥವಾ ಹೆಚ್ಚಿದೆಯೋ, ಕಡಿಮೆಯಿದೆಯೋ ಪರೀಕ್ಷಿಸಬೇಕು. ಎಲ್ಲಿ ಉದಾರತೆ ಅರ್ಥಾತ್ ಕೊಡುವ ಮನಸ್ಸಿದೆಯೋ ಮತ್ತು ಕೊಡುತ್ತಿರುವುದು ಅವರ ಸಾಮರ್ಥ್ಯಕ್ಕೆ ಸರಿಯಾಗಿದೆಯೋ ನೋಡಿ ಸ್ವೀಕರಿಸಬೇಕು. ಯಾವುದರಲ್ಲೇ ವ್ಯತ್ಯಾಸವಾಗಿದ್ದರೂ ತೆಗೆದುಕೊಳ್ಳಬಾರದು.  ನ ಪಾಪತ್ವಾಯ ರಾಸೀಯ (ಋಗ್ವೇದ.7.32.18.) - ನನ್ನ ದಾನಗಳು ಪಾಪಕ್ಕಾಗಿ ಬಳಸಲ್ಪಡದಿರಲಿ.

No comments:

Post a Comment