ನಿನ್ನೆ ಪ್ರಜಾವಾಣಿ ಪತ್ರಿಕೆಯಲ್ಲಿ ನನ್ನ ಮನ ಕಲಕಿದ ಈ ಲೇಖನ ವೇದಸುಧೆಯ ಓದುಗರಿಗಾಗಿ
ಕೃಪೆ: ಪ್ರಜಾವಾಣಿ ಈ-ಪತ್ರಿಕೆ
ವ್ಯವಸ್ಥೆಯ ಕ್ರೌರ್ಯದ ವಿರುದ್ಧ ದನಿಯೆತ್ತಿ ಕಳೆದ ಹತ್ತು ವರ್ಷಗಳಿಂದ ಉಪವಾಸ ನಡೆಸುತ್ತಿರುವ ಮಣಿಪುರದ ಹೆಣ್ಣುಮಗಳು ಬಿರಾಂಹನಾ ಇರೋಮ್ ಚಾನು ಶರ್ಮಿಳಾ.
ತಿನ್ನುತಿರುವರು ಜನಮಾಲ್‌ಗಳೆದುರು
ರಿಯಾಲಿಟೀ ಶೋ ನೋಡುತ್ತ
ಉಣ್ಣುತಿರುವರು ತಿನ್ನುತಿರುವರು
ಸಿನೆಮಾ ಮಂದಿರಗಳೆದುರೂ
ನನ್ನ ಮಗಳು ಇರೋಮಿಗೆ ಮಾತ್ರ
ರಕ್ತ ಭಯ
ಹತ್ತುವರ್ಷದಿಂದ ಏನೂ ಮುಟ್ಟಿಲ್ಲ,
ಯಾಕೆಂದರೆ... ಗೊತ್ತಾಕೆಗೆ,
ರಕ್ತದಲ್ಲಿ ಅದ್ದಿದ ರೊಟ್ಟಿ ತಿನ್ನುವುದೆಂದರೆ
ನರಹತ್ಯೆಗೈದಂತೆಯೇ
(-ಇರೋಮ್ ಶರ್ಮಿಳಾ ತಂದೆ)
ಆಕೆಯ ಪೂರ್ಣ ಹೆಸರು ಬಿರಾಂಗನಾ ಇರೋಮ್ ಚಾನು ಶರ್ಮಿಳಾ. ಜನನ, 1972ರ ಮಾರ್ಚ್ 14. ತಂದೆ, ಇರೋಮ್ ನಂದ ಸಿಂಗ್, ರಾಜ್ಯ ಪಶುಸಂಗೋಪನಾ ಇಲಾಖೆಯಲ್ಲಿ ಉದ್ಯೋಗಸ್ಥ. ತಾಯಿ, ಇರೋಮ್ ಸಾಖಿ ದೇವಿ. ಇವರ ಎಂಟು ಮಕ್ಕಳಲ್ಲಿ ಈಕೆ ಕೊನೇಯವಳು. ‘ಮೆಂಗ್ವೋಬೀ’ (ಚೆಲುವೀ) ಎಂದು ಕೊಂಡಾಟದಿಂದ ಕರೆಸಿಕೊಂಡವಳು. ಸದ್ಯ ಮಣಿಪುರ ಸರಕಾರ ಈಕೆಯನ್ನು ‘ಈಕೆಯ ಒಳಿತಿಗಾಗಿಯೇ’ ಮಣಿಪುರ ಜವಾಹರಲಾಲ ನೆಹರೂ ಆಸ್ಪತ್ರೆಯಲ್ಲಿ ನಾಳದ ಮೂಲಕ ಮೂಗಿನಿಂದ ಆಹಾರವನ್ನು ಬಲವಂತವಾಗಿ ಕಳಿಸಿ ‘ಸಾಯದಂತೆ ನೋಡಿಕೊಂಡಿದೆ’.
*
2000ನೇ ಇಸವಿ ನವೆಂಬರ 2ನೇ ತಾರೀಕಿನಂದು ಇಂಫಾಲಾ ಬಳಿಯ ಮಾಲಮ್ ಗ್ರಾಮದಲ್ಲಿ ಅಸ್ಸಾಂ ರೈಫಲ್ಸ್ ಅವರಿವರೆನ್ನದೆ ವಿವೇಚನೆಯೇ ಇಲ್ಲದೆ ಯದ್ವಾತದ್ವಾ ಗುಂಡು ಹಾರಿಸಿತು. ಪರಿಣಾಮವಾಗಿ ಹತ್ತುಮಂದಿ ಮಣಿಪುರೀ ಯುವಕರು ಅಸುನೀಗಿದರು. ಈ ಘಟನೆಯಿಂದ ಅತೀವ ಆಘಾತಗೊಂಡ ಎಳೆಯ ಯುವತಿ ಇರೋಮ್ ಶರ್ಮಿಳಾ, Armed Forces Special Powers Act 1958’ (ಸೈನಿಕರ ವಿಶೇಷಾಧಿಕಾರ ಕಾಯಿದೆ) ಅನ್ನು ತೆಗೆದು ಹಾಕಬೇಕೆಂದು ಬೇಡಿಕೆಯಿಟ್ಟು ಅದೇ 5ನೇ ತಾರೀಕಿನಿಂದ ಆಮರಣಾಂತ ಉಪವಾಸ ಕೈಗೊಂಡಳು. ಅವಳ ಆಗ್ರಹ ಒಂದೇ. ‘ಇದು ಅಕ್ಷಮ್ಯ, ಅನ್ಯಾಯ. ಸೈನಿಕರ ವಿಶೇಷಾಧಿಕಾರ ಕಾಯಿದೆಯನ್ನು ರದ್ದು ಮಾಡಿ’. ಮಾರನೆಯ ದಿನವೇ ಅಲ್ಲಿನ ಸರಕಾರ ಅವಳನ್ನು ಬಂಧಿಸಿತು, ಬಿಡುಗಡೆಮಾಡಿತು. ಹೊರಗೆ ಬಂದೊಡನೆ ಶರ್ಮಿಳಾ ಮತ್ತೆ ತನ್ನ ಉಪವಾಸ ಮುಂದರಿಸಿದಳು. ಅವಳು ‘ಆಸ್ಪತ್ರೆ - ಸೆರೆ’ಯಿಂದ ಹೊರಬರುವುದು, ಸತ್ಯಾಗ್ರಹ ಮಾಡಿ, ಪುನಃ ಬಂಧಿತಳಾಗಿ ಆಸ್ಪತ್ರೆ ಸೇರಿ ಮೂಗಿಗೆ ಆಹಾರ ನಾಳ ಸೇರಿಸಿದ ಸ್ಥಿತಿಯಲ್ಲೇ ಸತ್ಯಾಗ್ರಹ ಮುಂದರಿಸುವುದು ನಡೆಯುತ್ತಲೇ ಇದೆ. ಈ ನಡುವೆ ಇಂಫಾಲವನ್ನು, ಒಟ್ಟು ಮಣಿಪುರವನ್ನೇ, ಹಿಂಸೆ ಕತ್ತು ಹಿಡಿದಿದೆ.
ಅದರ ವಜ್ರಮುಷ್ಟಿಯಿಂದ ಮಣಿಪುರಕ್ಕೆ ಬಿಡುಗಡೆ ಎಂದು?
*
ಭೂದೇವಿಯ ಮಣಿಹಾರ, ಭುವಿಯ ಮೇಲಿನ ಸ್ವರ್ಗ, ನಿಸರ್ಗದೇವತೆಯ ಸ್ವಂತ ತಾಣ, ಹಚ್ಚಹಸಿರು ಪಚ್ಚೆ ಕಣಿವೆಗಳು, ನೀಲಿತಟಾಕಗಳು, ದಟ್ಟ ಅರಣ್ಯಗಳು, ಪ್ರಶಾಂತತೆಯ ತೊಟ್ಟಿಲಲಿ ಮಾರುತದ ಮೆಲುವಾತು ತೂಗಿ ಬರುವ ನಮ್ಮ ದೇಶದ ಪೂರ್ವೋತ್ತರದ ರಾಜ್ಯವಿದು ಮಣಿಪುರ. (ನೋಡಿ ‘ಓ! ಇದು ಸ್ವಿಜರ್ ಲ್ಯಾಂಡ್ ಆಫ್ ಇಂಡಿಯಾ’ ಅಂತ ಲಾರ್ಡ್ ಇರ್ವಿನ್ ಉದ್ಗರಿಸಿದನಂತೆ). ಒಂದೆಡೆ ನಾಗಾಲ್ಯಾಂಡ್, ಇನ್ನೊಂದೆಡೆ ಮಿಜೋರಾಂ, ಅಸ್ಸಾಂ, ಇನ್ನು ರಾಷ್ಟ್ರೀಯ ಗಡಿಯಾಗಿ ಮ್ಯಾನ್ಮಾರ್. ಒಂಬತ್ತು ಜಿಲ್ಲೆಗಳ ಈ ಪುಟ್ಟ ರಾಜ್ಯ ಅರಣ್ಯೋತ್ಪನ್ನಗಳ ಸಮೃದ್ಧ ನೆಲೆ. ಇಂಫಾಲ್ ಇದರ ರಾಜಧಾನಿ. ಇಲ್ಲಿ ಮೂಲನಿವಾಸಿಗಳು ಮೈತೀಯರು. ನೃತ್ಯ, ಸಂಗೀತ, ಉತ್ಸವಗಳಿಂದ ಲಕಲಕಿಸುವ, ಎರಡನೇ ಮಹಾಯುದ್ಧದ ಕಾಲದಲ್ಲಿ ಜಪಾನ್ ಮತ್ತು ಮಿತ್ರರಾಷ್ಟ್ರಗಳ ಯುದ್ಧನೆಲೆಯಾಗಿಯೂ ಪಾತ್ರವಹಿಸಿದ ಈ ಮಣಿಪುರ, ನಮ್ಮದೇ ಒಂದಂಗ. ನಮ್ಮದೇ ಒಂದಂಗವಾಗಿಯೂ, ಇಂದು ಪ್ರಭುತ್ವದ ಅವಿವೇಕ ಮತ್ತು ಅವಜ್ಞೆಗೀಡಾಗಿ ಚಿಂದಿಚೂರಾಗಿ ಹಿಂಸೆಯ ಕುದಿಕಡಾಯಿಯಲ್ಲಿ ಬೇಯುತ್ತಿರುವ ಅಸಂಖ್ಯ ವಿಧವೆಯರ ಕಣ್ಣೀರ ಪ್ರವಾಹವೇ ಹರಿವ ರಾಜ್ಯ.
ವಿಶೇಷಾಧಿಕಾರ ಕಾಯಿದೆಯ ಅಮಲಿನಲ್ಲಿ ಸೈನಿಕರು ಅಲ್ಲಿನ ಯಾವುದೇ ವ್ಯಕ್ತಿಯ ಮೇಲೆ ತುಸುವೇ ಸಂಶಯ ಬಂದರೂ ಭಯೋತ್ಪಾದಕರೆಂಬ ಆಪಾದನೆ ಹೊರಿಸಿ ಆತ ಹುಟ್ಟಿಲ್ಲ ಮಾಡಬಹುದು. ಕಂಡ ಹೆಣ್ಣನ್ನು ಎಳತಂದು ಸಾಮೂಹಿಕವಾಗಿ ಅತ್ಯಾಚಾರಮಾಡಿ ಏನೂ ಆಗಿಲ್ಲವೆಂಬಂತೆ ಹೊರಟು ಹೋಗಬಹುದು. ಪ್ರಶ್ನಿಸುವ ಹೆಣ್ಣನ್ನು ಕೊಲ್ಲಬಹುದು, ವಿರುದ್ಧ ದನಿಯೆತ್ತಿದವರನ್ನು ಯಾವುದೇ ಕ್ರಾಂತಿಕಾರಿ ಸಂಘಟನೆಗೆ ಜೋಡಿಸಿ ಆ ನೆವದಲ್ಲಿ ಕೊಚ್ಚಿ ಹಾದಿಯಲ್ಲೆಸೆಯಬಹುದು. ಯಾರೂ ಯಾವುದೇ ಸಂಘಟನೆಗೆ ಸೇರುವುದೇ ದೊಡ್ಡ ಅಪರಾಧವೆಂಬಂತೆ ಅವರ ಮನೆಗೆ ನುಗ್ಗಿ ಹೊರಗೆಳೆದು ಹಲ್ಲೆಮಾಡಬಹುದು. ಮನೋರಮಾದೇವಿಯ ಅಪರಾಧವೇನಿತ್ತು? ಕೇಳುವಂತಿಲ್ಲ? ಒಳನುಗ್ಗಿದರು ಅವರು, ಹಾಸಿಗೆಯಿಂದ ಅವಳನ್ನು ಕೆಳಗೆಳೆದರು, ತಡೆಯಲು ಬಂದ ಸೋದರರನ್ನು, ಮುದಿ ತಾಯಿಯನ್ನೂ ತಳ್ಳಿ ದಬ್ಬಿ ಹಲ್ಲೆ ಮಾಡಿದರು. ಗಂಟೆಗಟ್ಟಲೆ ಮನೋರಮಾದೇವಿಯನ್ನು ಹಿಂಸಿಸಿ, ಅವಳನ್ನು ಕೈದು ಮಾಡಿರುವೆವೆಂದು, ಅಸ್ಸಾಂ ರೈಫಲ್ಸ್ ಸ್ಟೇಶನ್ ಇರುವ ಕಾಂಗ್ಲಾ ಕೋಟೆಗೆ ಒಯ್ಯುವೆವೆಂದು ಹೇಳುತ್ತ, ಒಯ್ಯುವ ಮುಂಚೆ ತಾವು ಮನೆಯ ಯಾವ ವಸ್ತುವಿಗೂ ಹಾನಿ ಮಾಡಿಲ್ಲ, ಹೆಂಗಸರ ಮೇಲೆ ಕೈ ಮಾಡಿಲ್ಲ ಅಂತೆಲ್ಲ ಕೂಡ ಬರೆದಿರುವ ‘ನೋ ಕ್ಲೇಯ್ಮಾ ಸರ್ಟಿಫಿಕೇಟ್’ ಮೇಲೆ ಮನೆಯವರ ಸಹಿಯನ್ನು ಬಲವಂತದಿಂದ ಪಡೆದರು. ಅದೇ ಮರುದಿನ ಬೆಳಗಿನ ಜಾವ ಐದೂವರೆಗೆ ಅವಳ ದೇಹ ಎಲ್ಲೆಂದರಲ್ಲಿ ಗೀರು ಗಾಯ ತಿವಿತಗಳಿಂದ, ಅಕ್ಷರಶಃ ಮರ್ಮ-ಘಾತಗಳಿಂದ ಕೂಡಿ ಮನೆಯಿಂದ ಅಲ್ಲೇ ಐದಾರು ಕಿಲೋಮೀಟರು ಆಚೆ ಹಾದಿಬದಿಯಲ್ಲಿ ಅರೆನಗ್ನಾವಸ್ಥೆಯಲ್ಲಿ ಬಿದ್ದಿತ್ತು. ಈ ಎಲ್ಲಾ ಮಾಹಿತಿ ಹಾಗೂ ವಿವರಗಳನ್ನೊಳಗೊಂಡ ವರದಿಯೇನೋ ಬಂತು, ಆದರೆ ಸ್ವತಃ ಪ್ರಧಾನಮಂತ್ರಿ ಕೂಡ ಅದರ ಮೇಲೆ ಕಣ್ಣಾಡಿಸಲಿಲ್ಲ. ಅದರಲ್ಲೇನಿದೆ ಎಂದು ತೆರೆದು ನೋಡಲಿಲ್ಲ. ಮನೋರಮಾಳ ದಾರುಣ ಅಂತ್ಯ, ಬೆಂಕಿಯಂತೆ ಕನಲಿದ ‘ದೋಪ್ದಿ’ಯರು (‘ಮನೋರಮಾಳ ತಾಯಂದಿರು’ ಎಂದೇ ಅವರನ್ನು ಕರೆವರು) ‘ಬನ್ನಿ, ನಮ್ಮ ಮೇಲೆ ಅತ್ಯಾಚಾರ ಮಾಡಿ’ ಎಂದು ಬೊಬ್ಬಿಡುತ್ತ ಕಾಂಗ್ಲಾ ಕೋಟೆಯ ಹೆಬ್ಬಾಗಿಲಲ್ಲಿ ನಡೆಸಿದ ನಗ್ನ ಪ್ರತಿಭಟನೆ, ಎಲ್ಲವೂ ನಡೆದು ಏಳು ವರ್ಷಗಳೇ ಸರಿದು ಹೋಗಿವೆ. ಮಣಿಪುರ ಮಾತ್ರ ಹಾಗೆಯೇ ಇದೆ. ಕೇಳುವವರಿಲ್ಲದ ಅತಂತ್ರದಲ್ಲಿ. ಯಾವ ಕ್ಷಣ ಹೇಗೋ ಎಂಬ ಅನಿಶ್ಚಯದಲ್ಲಿ.
ಅಂದೊಂದು ದಿನ ಛೋಂಕಾಮ್ ಸಂಜಿತ್ ಎಂಬ ಯುವಕ, ವಿವಾಹಿತ, ಮಕ್ಕಳೊಂದಿಗ, ತನ್ನ ತಾಯಿಯನ್ನು ನೋಡಿಬರುವೆನೆಂದು ಮಾರುಕಟ್ಟೆಗೆ ಹೋದ. ಮತ್ತೆ ಹಿಂದಿರುಗಲಿಲ್ಲ. ಆತನನ್ನು ಹಾಡುಹಗಲೇ ಇಂಫಾಲದ ಆ ಜನನಿಬಿಡ ಮಾರುಕಟ್ಟೆಯಲ್ಲಿ ಕೊಂದು ಎಸೆದರು, ಯಾಕೆ? ಆತನನ್ನು ಕೊಂದಿರೇಕೆ? ‘ಆತ ಭಯೋತ್ಪಾದಕ!’. ಪುರಾವೆಯೇನು? ‘ಅದರ ಅಗತ್ಯವಿಲ್ಲ’. ಮುಂದೆ ಅವನ ಸಂಸಾರದ ಗತಿಯಾದರೂ ಏನು?
ಪ್ರಶ್ನಿಸುವಂತಿಲ್ಲ. ಅದು ಅವರ ವಿಶೇಷಾಧಿಕಾರ! ಏನೇನು ಮಾಡಿದರೂ ಅಪರಾಧಿಗಳಲ್ಲ ಅವರು, ಬದಲು, ಕರ್ತವ್ಯನಿರತರು. ದೊಂಬಿಕೋರರನ್ನು ಅಡಗಿಸುವವರು. ಉಗ್ರರನ್ನು ಮಟ್ಟಹಾಕುವವರು. ಪುಣೆಯ ಓಜೋಸ್ ಸುನೀತಾ ವಿಜಯ್, ಇರೋಮ್ ಶರ್ಮಿಳಾ ಹೋರಾಟ ಕುರಿತ ತನ್ನ ಏಕವ್ಯಕ್ತಿ ಪ್ರದರ್ಶನ ‘ಲೇ ಮಶಾಲೇ’ಯಲ್ಲಿ ಹೇಳಿದಂತೆ- ವಿಶೇಷಾಧಿಕಾರದ ಮತ್ತು ಎಲ್ಲಿವರೆಗೆ ಆ ಸೈನಿಕರ ಕಣ್ಣು ಮುಚ್ಚಿಸಿದೆಯೆಂದರೆ ಹೆಣ್ಣುಮಕ್ಕಳು ಅವರ ದೃಷ್ಟಿಯಲ್ಲಿ ಕೇವಲ ಎರಡು ಸ್ತನ ಮತ್ತು ಯೋನಿ ಮಾತ್ರ. ಇದಕ್ಕಿಂತ ಸ್ಪಷ್ಟ ಚಿತ್ರಣ ಇನ್ನು ಬೇರೆ ಬೇಕೆ? ಪ್ರಭುತ್ವದ ಅಭಯ ಛತ್ರಿಯಡಿಯಲ್ಲಿ ಮನುಷ್ಯ ಸ್ವತಃ ಭಯೋತ್ಪಾದಕನಾಗಿ ಅತ್ಯಾಚಾರಿಯಾಗಿ ಪರಿವರ್ತನೆಯಾಗುವ ದೃಷ್ಟಾಂತಕ್ಕೆ ಜ್ವಲಂತ ಉದಾಹರಣೆ ಇದು.
‘ಸೈನಿಕರ ಈ ವಿಶೇಷಾಧಿಕಾರವನ್ನು ಕಿತ್ತು ಹಾಕಿ, ನಮ್ಮನ್ನು ಬಚಾವು ಮಾಡಿ’- ಕೂಗುತ್ತಿದೆ ಮಣಿಪುರ. ಮೃಗೀಯ ಸೈನಿಕರ ವಿರುದ್ಧ ನಾಗರಿಕ ಚಳವಳಿಯೊಂದು ನಡೆದು ಇಡೀ ಮಣಿಪುರ ಸ್ತಬ್ಧವಾಯಿತು. ಮಕ್ಕಳು ಶಾಲೆ ಕಾಲೇಜುಗಳಿಗೆ ಹಾಜರಾಗಲಿಲ್ಲ. ಪ್ರತಿಫಲವಾಗಿ ಇನ್ನಷ್ಟು ಹಿಂಸೆ, ಕರ್ಫ್ಯೂ. ಪತಿಯನ್ನು ಕಳಕೊಂಡ ಪತ್ನಿಯರು. ಮಕ್ಕಳನ್ನು ಕಳಕೊಂಡ ತಾಯ್ತಂದೆಯರು. ನಾಳೆಯೆಂಬುದು ಏನೆಂದೇ ಅರಿಯದ ಮಸುಕು ಭವಿಷ್ಯದ ಅನಾಥ ಮಕ್ಕಳು. ಸರಕಾರದ ಪರಿಹಾರಕ್ಕಾಗಿ ತಮಗೆ ನಲ್ವತ್ತು ವರ್ಷ ವಯಸ್ಸಾಗುವವರೆಗೂ ಕಾಯಬೇಕಾದ ಅಭದ್ರತೆಯಿಂದ ಕಂಗಾಲಾಗಿರುವ ಅಸಂಖ್ಯ ಎಳೆಯ ವಿಧವೆಯರು. 2004ರಲ್ಲೊಮ್ಮೆ ಮಣಿಪುರಕ್ಕೆ ಭೇಟಿ ನೀಡಿದ ಮನಮೋಹನ ಸಿಂಗ್ ಸೈನಿಕರ ವಿಶೇಷಾಧಿಕಾರವನ್ನು ರದ್ದುಮಾಡುವುದಾಗಿ ಹೇಳಿದರು, ಹೇಳಿದ್ದು ಹೇಳಿದಷ್ಟಕ್ಕೇ ಮುಗಿಯಿತು. ಪ್ರಧಾನ ಮಂತ್ರಿಯೇ ನೇಮಿಸಿದ ಜೀವನ್ ರೆಡ್ಡಿ ಸಮಿತಿ- ‘ಹೇಗೇ ನೋಡಿದರೂ ದಬ್ಬಾಳಿಕೆಯ ದುಷ್ಟ ಕಾನೂನು ಇದು, ತೆಗೆದು ಹಾಕಲೇಬೇಕು’ ಎಂದು ಶಿಫಾರಸು ಮಾಡಿದರೂ ಕ್ರಿಯಾತ್ಮಕವಾಗಿ ಏನೂ ಆಗದೆ ವರದಿಯನ್ನು ಹುಳ ತಿಂದಿತು.
*
ಮಣಿಪುರದಲ್ಲಿ ಮಹಿಳೆಯರು ಕದನಕ್ಕಿಳಿಯುವುದು ಇವತ್ತಿನ ವಿದ್ಯಮಾನವಲ್ಲ. ಮೊದಲ ಉಲ್ಲೇಖಿತ ಉದಾಹರಣೆಯೇ ಮಹಾಭಾರತದ ಯೋಧೆ ಚಿತ್ರಾಂಗದೆ. ತಂದೆ ಚಿತ್ರವಾಹನನ ಏಕಮಾತ್ರ ಪುತ್ರಿ ಈಕೆ, ಸಮರವಿದ್ಯಾ ಪ್ರವೀಣೆ, ಧನುರ್ವಿದ್ಯಾ ಪಾರಂಗತೆ. ಸಿಂಹಾಸನವೇರಿ ರಾಜ್ಯಾಡಳಿತವನ್ನು ನೋಡಿಕೊಳ್ಳಬೇಕಾದ ಭಾವೀ ರಾಣಿ. ಅರ್ಜುನ ಆಕೆಯನ್ನು ವಿವಾಹವಾಗಲು ಮೊದಲು ನಿರಾಕರಿಸಿದಾಗ ಯುದ್ಧಮಾಡಿ ತನ್ನ ಸ್ವಂತ ಯೋಧತ್ವವನ್ನು ಪ್ರಕಟಪಡಿಸಿ ಅವನನ್ನು ಅಚ್ಚರಿಯಲ್ಲಿ ಕೆಡವಿದಾಕೆ - ಅಂತ, ಇಂಥ ನೂರಾರು ಕತೆಗಳಲ್ಲಿ ಒಂದು ಕತೆ. ರವೀಂದ್ರನಾಥ ಠಾಕೂರರ ಚಿತ್ರಾಂಗದಾ ನಾಟಕದಲ್ಲಿ ಅರ್ಜುನನೆದುರು ತನ್ನ ಅಸ್ಮಿತೆಯನ್ನು ಕಾದುಕೊಂಡ ಮಹಿಳೆಯಾಗಿ ರೂಪಿತವಾದವಳು.
ಹಾಗೆ, ಮಣಿಪುರದ ಇತಿಹಾಸದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಜೀವನದಲ್ಲಿ ಸಕ್ರಿಯರಾದ ಮಹಿಳಾ ಹೋರಾಟಗಾರರ ದೀರ್ಘ ಪರಂಪರೆಯೇ ಇದೆ. 1904, 1939ರಷ್ಟು ಹಿಂದೆಯೇ ತಮ್ಮ ಗಂಡಸರನ್ನು ಬಲವಂತವಾಗಿ ಸೇನೆಗೆ ಸೇರಿಸಿಕೊಳ್ಳುವುದನ್ನು ವಿರೋಧಿಸಿದ ಮಹಿಳೆಯರು ಅವರು. ಒಂದು ಬರಗಾಲದ ಸಮಯದಲ್ಲಿ ತಮ್ಮ ರಾಜ್ಯದ ಅಕ್ಕಿಯನ್ನು ರಫ್ತು ಮಾಡುವುದನ್ನು ವಿರೋಧಿಸಿದವರೂ ಅಲ್ಲಿನ ಮಹಿಳೆಯರೇ. ಇದೇ, ಸುಮಾರು ಮೂವತ್ತು ವರ್ಷದ ಕೆಳಗೆ ಮೈತೀ ಸಂಘ ಕಟ್ಟಿಕೊಂಡು ಸುತ್ತಮುತ್ತಿನ ಹಿಂಸೆಯನ್ನು ತಡೆಯಲು ರಾತ್ರಿಯೆಲ್ಲ ಸೀಮೆಎಣ್ಣೆ ದೊಂದಿ - ಮಶಾಲ್- ಬೀಸಿಕೊಂಡು ಅಕ್ಕಪಕ್ಕದ ಹಳ್ಳಿಗಳನ್ನು ಗಸ್ತು ಕಾದವರು. ಮಣಿಪುರದ ಸಶಸ್ತ್ರ ಸೈನಿಕರ ದೌರ್ಜನ್ಯದೆದುರು ಮಾನವ ತಡೆಯನ್ನು ನಿರ್ಮಿಸಿದವರು. ಇಷ್ಟೇ ಅಲ್ಲ, ಡ್ರಗ್ ಮತ್ತು ಸಾರಾಯಿ ಸಮಸ್ಯೆಗಳೆದುರೂ ಸಡ್ಡುಹೊಡೆದು ನಿಂತವರು. ಇರೋಮ್ ಶರ್ಮಿಳಾ ಬಂದಿದ್ದು ಇಂತಹ ಜಾಗೃತ ಮಹಿಳಾ ಚಳವಳಿಯ ಪ್ರಬಲ ಹಿನ್ನೆಲೆಯಿಂದ.
ಮಣಿಪುರದ ಉಕ್ಕಿನ ಮಹಿಳೆ ಈಕೆ, ಇರೋಮ್ ಶರ್ಮಿಳಾ ಚಾನು. ಸಶಸ್ತ್ರಪಡೆಯ ವಿಶೇಷಾಧಿಕಾರವನ್ನು ರದ್ದುಪಡಿಸಲೇಬೇಕೆಂದು ಆಗ್ರಹದ ಬೇಡಿಕೆಯಿಟ್ಟು ಆಮರಣಾಂತ ಉಪವಾಸ ಕುಳಿತಿದ್ದಾಳೆ. ಪ್ರತಿಸಲವೂ ಆತ್ಮಹತ್ಯಾ ಪ್ರಯತ್ನದ ಅಪರಾಧ ಹಚ್ಚಿ ಐಪಿಸಿ ಸೆಕ್ಷನ್ 309 ಪ್ರಕಾರ ಅವಳನ್ನು ಬಂಧಿಸಿ ಜವಾಹರಲಾಲ್ ಆಸ್ಪತ್ರೆಯ ಒಳಗೆ ಬಲವಂತದಿಂದ ಒಯ್ಯುತ್ತಾರೆ, ಮೂಗಿನ ಮೂಲಕ ಆಹಾರ ನೀಡುತ್ತಾರೆ. ಆ ಸೆಕ್ಷನ್ ಪ್ರಕಾರ ಅವಳನ್ನು ಹನ್ನೊಂದು ತಿಂಗಳಿಗಿಂತ ಹೆಚ್ಚು ನ್ಯಾಯಾಂಗ ಬಂಧನದಲ್ಲಿಡುವಂತಿಲ್ಲ. ಹಾಗಾಗಿ ಕೋರ್ಟಿಗೆ ಹಾಜರಾಗುತ್ತಾಳೆ. ಬಿಡುಗಡೆ ಹೊಂದುತ್ತಾಳೆ, ಕೋರ್ಟಿನಿಂದ ಹೊರಬಂದವಳೇ ಮತ್ತೆ ಉಪವಾಸ ಕೂರುತ್ತಾಳೆ. ಮತ್ತೆ ಬಂಧನ, ಆಸ್ಪತ್ರೆ, ಇನ್ನು ಹನ್ನೊಂದು ತಿಂಗಳು, ಮತ್ತೆ ಬಿಡುಗಡೆ, ನಡೆಯುತ್ತಲೇ ಇದೆ.
ಶರ್ಮಿಳಾ ಉಪವಾಸಕ್ಕೆ 2010ರ ನವೆಂಬರಕ್ಕೆ 5ಕ್ಕೆ ಹತ್ತು ವರ್ಷ ತುಂಬಿದೆ. ತನ್ನ ತಾರುಣ್ಯದ ದಿನಗಳನ್ನು ಈ ರೀತಿಯಲ್ಲಿ ವಿನಿಯೋಗ ಮಾಡುತ್ತ, ಅರೆತ್ರಾಣ ಸ್ಥಿತಿಯಲ್ಲಿಯೂ ಒಂದಿನಿತೂ ಚಂಚಲಗೊಳ್ಳದೆ, ದ್ವಂದ್ವಕ್ಕೆ ಒಳಗಾಗದೆ, ಯಾರ ಮನವೊಲಿಕೆಗೂ ಬಗ್ಗದೆ, ಆಕೆ ತನ್ನ ಉಪವಾಸ ಮುಂದರಿಸಿಕೊಂಡೇ ಇದ್ದಾಳೆ. ಅವಳು ಹುಟ್ಟಿದಾಗ ನಲ್ವತ್ತನಾಲ್ಕು ವರ್ಷದ ಸಾಖೀದೇವಿಯ ಎದೆಹಾಲು ಒಣಗಿಹೋಗಿತ್ತಂತೆ. ಮಗು ಅತ್ತಾಗೆಲ್ಲ ಅಣ್ಣ ಸಿಂಗಜಿತ್ ಅದನ್ನೆತ್ತಿಕೊಂಡು ಹೋಗಿ ಹಾಲೂಡುವ ತಾಯಂದಿರ ಬಳಿ ಬಿಡುತ್ತಿದ್ದನಂತೆ. ‘ಹಲಮಂದಿ ತಾಯಂದಿರ ಹಾಲು ಕುಡಿದು ಬೆಳೆದವಳು ನನ್ನ ತಂಗಿ. ಬಹುಶಃ ಆ ಋಣವನ್ನು ಈ ರೀತಿ ತೀರಿಸುತಿದ್ದಾಳೆ’ ಎನ್ನುತ್ತಾನೆ ಸಿಂಗಜಿತ್, ತಂಗಿಯ ಬಗ್ಗೆ ಭಾರೀ ಅಭಿಮಾನ ಅವನಿಗೆ. ತಾಯಿಯಂತೂ, ಮಗಳ ಉಪವಾಸದ ಆರಂಭದಲ್ಲಿ ‘ಗೆಲುವು ನಿನ್ನದೇ. ಸಂದೇಹವೇ ಇಲ್ಲ’ ಎಂದು ಆಶೀರ್ವದಿಸಿದವಳು. ಈ ಹತ್ತು ವರ್ಷಗಳಲ್ಲಿ ತಾಯಿ ಮಗಳು ಪರಸ್ಪರ ಮುಖಕೂಡ ನೋಡಿಲ್ಲ. ಭಾವನಾತ್ಮಕ ತೊಡಕು ತಮ್ಮಿಬ್ಬರನ್ನೂ ತಾಕಬಾರದು ಎನ್ನುವ ಧೀರೆ ಆಕೆ.
*
ಶರ್ಮಿಳಾಳ ಹೋರಾಟವನ್ನು ಆಧಾರವಾಗಿ ಇಟ್ಟುಕೊಂಡು ಕಾ ಗೆಮ್ಲೈಮ್ ಥಿಯೇಟರ್ ಆಡಿದ ‘ಮಿರೆಲ್ ಮಾಶಿಂಗಾ’ ಮೈಮ್ ನಾಟಕ, Just Peace Foundation ಎಂಬ ಸಂಸ್ಥೆ Hope, justice and peace ಉತ್ಸವದಲ್ಲಿ ಸಾರ್ವಜನಿಕರೆದುರು ಪ್ರದರ್ಶಿಸಿದ ನಿಯೋ-ಜೆನ್‌ನ ‘ಸ್ಪಿರಿಟ್ ಆಫ್ ಶರ್ಮಿಳಾ’ ಪೇಂಟಿಂಗ್, ಓಜೋಸ್ ಸುನೀತಾ ದೇಶದುದ್ದಕ್ಕೂ ಆಡುವ ‘ಲೇ ಮಶಾಲೇ’ ನಾಟಕ, ಮುಂತಾದವು ಮಣಿಪುರದ ಸಮಸ್ಯೆಯನ್ನು ಕಲಾಮಾರ್ಗದಲ್ಲಿ ತಿಳಿಸುವ ಪ್ರಯತ್ನ ನಡೆಸಿಕೊಂಡೇ ಇವೆ.
ಆದರೆ ಆ ಪುಟ್ಟ ರಾಜ್ಯದಲ್ಲಿ ನಡೆಯುತ್ತಿರುವ ಮನುಷ್ಯರ ಘನತೆ ಮರ್ಯಾದೆ ನೆಮ್ಮದಿಯ ಬಾಳನ್ನೇ ಚರಂಡಿಗೆಸೆಯುವ ನರಕಕೃತ್ಯಗಳು, ಅಲ್ಲಿನ ಆಕ್ರಂದನ ಪ್ರಭುತ್ವದ ಕಡೆಗಣ್ಣನ್ನೂ ತೆರೆಸುತ್ತಿಲ್ಲ, ಹೊರಕಿವಿಯನ್ನೂ ತಲುಪುತ್ತಿಲ್ಲ. ಇದೇ ಇಲ್ಲೇ ಸುತ್ತಮುತ್ತಿನ ರಾಜ್ಯದಲ್ಲಿ ಹೀಗಾಗಿದ್ದರೆ? ಸರಕಾರ ಅಥವಾ ನಾವು ಜನತೆ ಇಷ್ಟು ಜಡವಾಗಿ ವರ್ತಿಸಲು ಸಾಧ್ಯವಿತ್ತೆ? ಈಶಾನ್ಯ ರಾಜ್ಯಗಳ ಕುರಿತು ಈ ಪ್ರಮಾಣದ ಅವಜ್ಞೆಯೇಕೆ? ಈಶಾನ್ಯ ರಾಜ್ಯಗಳು ಇವು ನಮ್ಮವು ಎಂಬ ಪ್ರಜ್ಞೆಯೇ ನಮ್ಮಲ್ಲಿ ಇಲ್ಲ ಏಕೆ? ಅವರ ಆಳನೋವುಗಳಲ್ಲಿ ಇದೂ ಒಂದು. ‘ನೀವು ಯಾವ ದೇಶದವರು?’ ಪ್ರಶ್ನೆಯನ್ನು ತಮ್ಮ ದೇಶದಲ್ಲೇ ತಾವು ಎದುರಿಸಬೇಕಾದ ವ್ಯಂಗ್ಯ.
ಮಾರ್ಚ್ 14, ಇರೋಮ್ ಶರ್ಮಿಳಾ ಹುಟ್ಟಿದ ದಿನ, ಅಸ್ಸಾಂ ಸನ್ಮಿಲಿತ ಮಹಾಸಭಾ ಹನ್ನೊಂದು ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಿ ವಿಶೇಷಾಧಿಕಾರ ಕಾಯಿದೆಯನ್ನು ರದ್ದುಪಡಿಸಬೇಕೆಂದು ಕೋರಿ, ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಗೃಹಮಂತ್ರಿ ಈ ಮೂವರಿಗೂ ತನ್ನ ಬೇಡಿಕೆ ಸಲ್ಲಿಸಿತು. ಶಾಮಿಯಾನಾದಲ್ಲಿ ಮಹಿಳೆಯರೂ ನೆರೆದು ಸರದಿ ಉಪವಾಸದಲ್ಲಿ ಭಾಗವಹಿಸಿದರು. ಸತ್ಯಾಗ್ರಹದ ಸ್ಥಳಕ್ಕೆ ಆಸ್ಪತ್ರೆಯಿಂದ ಇರೋಮ್ ಶರ್ಮಿಳಾರನ್ನು ಹೊತ್ತುತಂದರು. ಆಕೆ ತನ್ನ ಇದ್ದಬದ್ದ ಶಕ್ತಿಗೂಡಿಸಿ ‘ಬೇಡಿಕೆ ಪೂರೈಸುವವರೆಗೂ ಉಪವಾಸವನ್ನು ನಿಲ್ಲಿಸಲಾರೆ. ಈ ಉಪವಾಸ ಮಹಿಳೆಯರಿಗಾಗಿ ಮಾತ್ರವಲ್ಲ. ಮಣಿಪುರದ ಸಮಸ್ತ ಜನಸ್ತೋಮಕ್ಕೆ ಸಿಗಬೇಕಾದ ನ್ಯಾಯಕ್ಕಾಗಿ. ಅಮಾನುಷ ದೌರ್ಜನ್ಯದ ವಿರುದ್ಧದ ಹೋರಾಟವಿದು’ ಎಂದು ಅಲ್ಲಿ ಮತ್ತೊಮ್ಮೆ ದನಿಯೆತ್ತಿದಳು. ಈ ಬಾರಿಯಂತೂ ಆಕೆ ಬಿಡುಗಡೆ ಹೊಂದಿದ ಸಮಯದಲ್ಲೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಇಂಫಾಲಾದಲ್ಲಿದ್ದರು. ‘ಒಮ್ಮೆ ನನಗೆ ರಾಷ್ಟ್ರಪತಿಯನ್ನು ಭೇಟಿಮಾಡುವ ಅವಕಾಶ ಸಿಕ್ಕರೆ ನಾನು ಕೇಳುವುದಿಷ್ಟೆ. - ಈ ಸೈನಿಕರ ವಿಶೇಷಾಧಿಕಾರವನ್ನು ಪ್ರಯೋಗಾತ್ಮಕವಾಗಿಯಾದರೂ ರದ್ದು ಮಾಡಿ, ಮಣಿಪುರದ ಪ್ರಜೆಗಳಿಗೆ ಸಮಾನತೆ ಒದಗಿಸಿ, ಅಂತ. ಆದರೆ ಅದು ಸಂಭವಿಸುವುದಿಲ್ಲವಲ್ಲ’ ಎಂದಳು. ‘ರಾಷ್ಟ್ರಪತಿಯ ಭೇಟಿಯಿಂದ ನನಗೇನೂ ಅನಿಸಿಲ್ಲ. ಇದುವರೆಗೆ ಎಷ್ಟೆಲ್ಲ ಘಟಾನುಘಟಿಗಳು ಬಂದರು. ಏನಾದರೂ ಆಯಿತೆ? ಮೊದಲು ನಮ್ಮ ಬೇಡಿಕೆ ಪೂರೈಸಲಿ. ಆಗ ಅವರ ಭೇಟಿಗಳು ನಮಗೆ ಹರ್ಷ ತಂದಾವು’ ಎಂದಳು. ‘ಕಾಯಿದೆ ರದ್ದು ಮಾಡುವವರೆಗೂ ತಾನು ತನ್ನ ಚಳವಳಿ ಮುಂದರಿಸುವವಳೇ. ಸತ್ತರೂ ಸರಿ. ಹಿನ್ನಡೆಯಲಾರೆ’ ಎಂದಳು.
ಇಂದು, ಬರೆಯುತ್ತಿರುವ ಈ ದಿನ, ಚಾಂದ್ರಮಾನ ಯುಗಾದಿ, ತನಗೆ ಮುಂದೆ ಒದಗಲಿರುವ ವಿಪತ್ತಿನ ಅರಿವೇ ಇಲ್ಲದಂತೆ ಪ್ರಕೃತಿ ವಿಜೃಂಭಿಸುತ್ತಿದೆ. ಅಲ್ಲಿ ಮಣಿಪುರದಲ್ಲಿ ಶರ್ಮಿಳಾ ಎಂಬ ಯುವತಿ ಅನ್ನ, ಒಂದು ಬಟ್ಟು ನೀರು ಸಹ ಮುಟ್ಟದೆ ಉಪವಾಸ ಮಲಗಿದ್ದಾಳೆ. ಇಲ್ಲಿ ಮನೆಮನೆಗಳಲ್ಲಿ ತಳಿರು ತೋರಣ. ಒಳಗೆಲ್ಲ ಹಬ್ಬದ ಹೋಳಿಗೆಯ ತಯಾರಿ ನಡೆಯುತ್ತಿದೆ.
ಹಸಿವು, ಹಬ್ಬ ಮತ್ತು ಉಪವಾಸ ಯುಗಯುಗಗಳ ‘ಲೋಕ ಇತಿಹಾಸ’ವೇ ಆಗಿದೆ.
*
ಮುಕ್ತಗೊಳಿಸಿರೊ ನನ್ನ ಪಾದಗಳನ್ನು
ಮುಳ್ಳುಬಳೆಗಳಂಥ ಸಂಕೋಲೆಗಳಿಂದ
ಜನಿಸಿದ್ದೇ ತಪ್ಪಾಯಿತೆ ಹಕ್ಕಿಯಂತೆ?
ಕಾರಾಗೃಹದ ಕತ್ತಲ ಕೋಣೆ, ಸುತ್ತಾ ಮಾರ್ದನಿಗಳು
ಹಕ್ಕಿಕಲರವವಲ್ಲ, ಖುಷಿಕುಶಾಲು ನಗೆಯಲ್ಲ
ಜೋಗುಳವೂ ಅಲ್ಲ.
ಮಡಿಲಲ್ಲಿನ ಮಗುವನ್ನು ಸೆಳೆದೊಯ್ದಿದ್ದಾರೆ, ಅಯ್ಯಾ
ಅದು ಹೆತ್ತಮ್ಮನ ಆಕ್ರಂದನ,
ಪತಿಯನಗಲಿದ ಸತಿಯ ರೋದನ
(ಇರೋಮ್ ಶರ್ಮಿಳಾ ಚಾನು)
No comments:
Post a Comment