ಇಂದು ಶ್ರೀಯುತ ಪಂಡಿತ ಸುಧಾಕರ ಚತುರ್ವೇದಿಯವರು 115ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರನ್ನು ನೆನೆಯೋಣ, ಅವರ ವಿಚಾರಗಳನ್ನು ತಿಳಿಯೋಣ, ನಮಿಸೋಣ, ಶುಭ ಹಾರೈಸೋಣ!
ಪಂಡಿತ ಸುಧಾಕರ ಚತುರ್ವೇದಿಯವರ ಕುರಿತು ಕೆಲವು ಮಾಹಿತಿ:
1. 1897ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿದವರು, ಅಪ್ಪಟ ಕನ್ನಡಿಗರು.
2. 11ನೆಯ ವಯಸ್ಸಿಗೆ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿದವರು.
3. ಇವರು ಚತುರ್ವೇದಿ ಮನೆತನದವರಲ್ಲ. ನಾಲ್ಕೂ ವೇದಗಳನ್ನು ಇಪ್ಪತ್ತೈದು ವರ್ಷಗಳ ಕಾಲ ಸತತ ಅಭ್ಯಾಸ ಮಾಡಿದ ನಿಜವಾದ ಪಂಡಿತರು. ಈ ಕಾರಣಕ್ಕಾಗಿ ಸಾರ್ವದೇಶಿಕ ಆರ್ಯ ಪ್ರತಿನಿಧಿ ಸಭೆಯ ನಿರ್ಣಯಾನುಸಾರ 'ಚತುರ್ವೇದಿ' ಎಂಬ ಉಪಾಧಿ ಪಡೆದವರು.
4. ವೈದಿಕ ವಾಗ್ಮಿಗಳು, ಬ್ರಹ್ಮಚರ್ಯವ್ರತಪಾಲಕರು, ಯಾವುದೇ ವೈದಿಕ ವಿಷಯಗಳನ್ನು ಸರಳವಾಗಿ ವಿವರಿಸುವ ನೈಪುಣ್ಯತೆ ಹೊಂದಿದವರು. ಇವರ ಅನೇಕ ಲೇಖನಗಳು, ವಿಚಾರಗಳು ಪುಸ್ತಕರೂಪದಲ್ಲಿ ಪ್ರಕಟಗೊಂಡಿವೆ. ಸತ್ಯಾನ್ವೇಶಿಗಳಿಗೆ ನಿಜವಾಗಿ ಮಾರ್ಗದರ್ಶಿಯಾಗಿವೆ.
5. ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿರದಿಂದ ಕಂಡವರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಸಾಕ್ಷಿಯಾದವರು. ಆ ಕುರಿತು ಅವರ ಮಾತು: "1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೆನಸಿಕೊಂಡರೆ ಈಗಲೂ ಕಣ್ಣಲ್ಲಿ ನೀರು ಬರುತ್ತದೆ. ದೊಡ್ಡದಾದ ತೋಟದಂತಿದ್ದ ಅಲ್ಲಿ ಸುತ್ತಲೂ 3-4 ಅಂತಸ್ತಿನ ಗೋಡೆ, ಒಂದೇ ಬಾಗಿಲು. ನೋಡುತ್ತಿದ್ದಂತೆ ಎಲ್ಲರ ಮೇಲೂ ಗುಂಡಿನ ದಾಳಿ. ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದರು. ಆದರೆ ಅಂದಿನ ಬ್ರಟಿಷ್ ಸರ್ಕಾರ ಕೇವಲ 670 ಜನ ಮಾತ್ರ ಸತ್ತಿದ್ದಾರೆ ಎಂದು ಹೇಳಿತು. ಮಂತ್ರ ಬರುತ್ತಿದ್ದರಿಂದ ಗಾಂಧೀಜಿಯವರು ನನ್ನ ಬಳಿ ಅಂತ್ಯ ಸಂಸ್ಕಾರ ಮಾಡಲು ಹೇಳಿದರು. ಅವರ ಆಜ್ಞೆಯಂತೆ ನದಿತಟದಲ್ಲಿ ಸಾವಿರಕ್ಕೂ ಹೆಚ್ಚು ಜನರ ಅಂತ್ಯಸಂಸ್ಕಾರ ಮಾಡಿದ್ದೆ."
6. ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಂಡವರು. ಗಾಂಧೀಜಿ ಸೇರಿದಂತೆ ಹಲವಾರು ಸ್ವಾತಂತ್ರ್ಯ ಸೇನಾನಿಗಳ ಒಡನಾಡಿಯಾಗಿದ್ದವರು. 13 ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಅವರ ಅಂದಿನ ಸ್ಥಿತಿ ಹೇಗಿತ್ತೆಂದರೆ ಕಿತ್ತು ತಿನ್ನುತ್ತಿದ್ದ ಬಡತನ, ಹೊಟ್ಟೆಗೆ ಏನೂ ಇರುತ್ತಿರಲಿಲ್ಲ, 3-4 ದಿನಗಳು ಏನೂ ತಿನ್ನಲು ಸಿಗದೆ ನೀರು ಮಾತ್ರ ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದವರು. ಯಾರಾದರೂ ಆಲೂಗೆಡ್ಡೆ ಕೊಟ್ಟರೆ ಬೇಯಿಸಿಕೊಂಡು ತಿನ್ನಲೂ ಸಾಧನಗಳಿರಲಿಲ್ಲ. ಹಸಿವು ಕಚ್ಚಿಕೊಂಡಿದ್ದರೂ ಏನೂ ಮಾಡಲಾಗುತ್ತಿರಲಿಲ್ಲವೆಂದು ನೆನೆಸಿಕೊಳ್ಳುತ್ತಾರೆ.
7. ಲಾಹೋರಿನಲ್ಲಿದ್ದಾಗ ಭಗತ್ ಸಿಂಗ್ ಇವರ ವಿದ್ಯಾರ್ಥಿಯಾಗಿದ್ದ. ಗಣಿತದಲ್ಲಿ ತೇರ್ಗಡೆಯಾಗಲು ಆತನಿಗೆ 15 ಅಂಕಗಳು ಬೇಕಿದ್ದವು. ಇವರ ಹತ್ತಿರ ಅಂಕ ಕೊಡಲು ಭಗತ್ ಕೇಳಿದಾಗ "ಲಕ್ಷಣವಾಗಿ ಫೇಲಾಗು, ನನ್ನಿಂದ ಇಂತಹ ಕೆಲಸ ಅಸಾಧ್ಯ" ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ಭಗತ್ ಮತ್ತು ಅವನ ಇತರ ಒಡನಾಡಿಗಳು ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ ಹುತಾತ್ಮರಾದವರು. ಹೋರಾಟದ ದಾರಿ ಬೇರೆಯಾದರೂ ಗಾಂಧೀಜಿ ಮತ್ತು ಅವರುಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ.
8. ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯದ ಅರ್ಥ ತಿಳಿದುಕೊಳ್ಳುವ, ಅಭಿವೃದ್ಧಿ ಕಡೆಗೆ ಗಮನ ಹರಿಸುವುದರೊಂದಿಗೆ ಕಿರಿಯರಿಗೆ ಸ್ವಾತಂತ್ರ್ಯದ ಮಹತ್ವ ತಿಳಿಸುವ ಅಗತ್ಯ ಹೆಚ್ಚು ಎಂಬುದು ಅವರ ಅಭಿಮತ.
9. ಆಚಾರಕ್ಕಿಂತ ವಿಚಾರಕ್ಕೆ ಹೆಚ್ಚು ಮಹತ್ವ, ಪ್ರಾಧಾನ್ಯತೆ ಕೊಟ್ಟವರು. ನಂಬಿದ ತತ್ವ, ಆದರ್ಶಗಳಿಗೆ ಬದ್ಧರಾದವರು. ಅವರ ಮಾತುಗಳು ಕೆಲವರಿಗೆ ಕಠಿಣವೆನಿಸಿದರೂ ಅದರಲ್ಲಿ ಸತ್ಯವಿದೆ, ತತ್ವವಿದೆ. ಆದರೆ ಪೂರ್ವಾಗ್ರಹ ಪೀಡಿತರಲ್ಲ. ತಾವು ನಂಬಿದ ಯಾವುದೇ ವಿಚಾರ ತಪ್ಪು ಎಂದು ಸಾಧಾರವಾಗಿ ಯಾರೇ ತಿಳಿಸಿಕೊಟ್ಟರೂ ಇದುವರೆಗೂ ನಂಬಿದ ವಿಚಾರ ಬಿಟ್ಟು ಸತ್ಯದ ಹಾದಿ ತುಳಿಯಲು ಸಿದ್ಧವಿರುವವರು.
10. ವೇದ, ಭಗವದ್ಗೀತೆ, ಇತ್ಯಾದಿಗಳನ್ನು ಅರ್ಥವತ್ತಾಗಿ ಸರಳವಾಗಿ ಶ್ರೋತೃಗಳೆದುರಿಗೆ ಬಿಚ್ಚಿಡುವ ಕಲೆ ಇವರಿಗೆ ಒಲಿದಿದೆ. ಅನಿಷ್ಟ ಸಂಪ್ರದಾಯಗಳ ವಿರುದ್ಧದ ಇವರ ಸಮರ, ಇವರ ಸಾಹಿತ್ಯ ಸೇವೆಗಳಿಗಾಗಿ ಇವರು ವಂದನೀಯರು.
11. ಪ್ರಸ್ತುತ ಇವರು ಬೆಂಗಳೂರಿನ ಜಯನಗರ 5ನೆಯ ಬ್ಲಾಕಿನಲ್ಲಿರುವ ಶ್ರೀ ಕೃಷ್ಣ ಸೇವಾಶ್ರಮ ಆಸ್ಪತ್ರೆಯ ಎದುರು ಸಾಲಿನಲ್ಲಿರುವ ಮನೆಯೊಂದರಲ್ಲಿ ವಾಸವಿದ್ದಾರೆ.
12. ಎಲ್ಲಾ ಪಕ್ಷಗಳ ನಾಯಕರು, ಪ್ರತಿಷ್ಠಿತರು ಇವರನ್ನು ಕಂಡು ನಮಸ್ಕರಿಸಿ ಆಶೀರ್ವಾದ ಪಡೆದು ಹೋಗುತ್ತಾರೆ. ಆದರೆ ಇವರನ್ನೇ ಮರೆಯುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವ ಪಿಂಚಣಿಯನ್ನು ನಯವಾಗಿ ತಿರಸ್ಕರಿಸಿದ ಇವರಿಗೆ ಕೇಂದ್ರ ಸರ್ಕಾರದಿಂದಾಗಲೀ, ರಾಜ್ಯ ಸರ್ಕಾರದಿಂದಾಗಲೀ ಯಾವುದೇ ಅಧಿಕೃತ ಗೌರವವಾಗಲೀ, ಸನ್ಮಾನವಾಗಲೀ ದೊರೆತಿಲ್ಲ. ಇದಕ್ಕೆ ಅಡ್ಡಿಯಾಗಿರುವುದು ಸರ್ಕಾರದ ಕಟ್ಟಳೆಗಳು. ಅರ್ಜಿ ಹಾಕಿ ಸನ್ಮಾನ ಪಡೆಯಬೇಕು! ಅಂತಹ ಕೇಳಿ ಪಡೆಯುವ ಗೌರವದ ಅಗತ್ಯ ಈ ಹಿರಿಯ ಜೀವಕ್ಕಿಲ್ಲ!
ಈ ಮೇರು ವ್ಯಕ್ತಿತ್ವಕ್ಕೆ ನಮಿಸೋಣ! ಅವರ ವಿಚಾರಗಳನ್ನು ತಿಳಿಯೋಣ! ಅವರ ಮಾರ್ಗದರ್ಶನ ಸದಾ ಸಿಗಲಿ ಎಂದು ಬಯಸೋಣ!
*******************
-ಕ.ವೆಂ.ನಾಗರಾಜ್.
ಪೂಜ್ಯ ಪಂಡಿತ್ ಸುಧಾಕರ ಚತುರ್ವೇದಿಯವರ ಜನ್ಮದಿನದಂದು ಅವರ ಬಗ್ಗೆ ಮಾಹಿತಿ ನೀಡಿ ವೇದಸುಧೆಯ ಗೌರವ ಹೆಚ್ಚಿಸಿದ್ದೀರಿ. ನಿಮಗೆ ಧನ್ಯವಾದಗಳು.ವೇದದ ಬಗೆಗೆ ಸರಳ ಸತ್ಯ ವಿಚಾರಗಳನ್ನು ಶ್ರೀ ಶರ್ಮರಿಂದ ಕೇಳಿ ಪ್ರೇರಣೆಗೊಂಡು ವೇದಸುಧೆಯ ಆರಂಭಕ್ಕೆ ಕಾರಣವಾಯ್ತು. ಪಂಡಿತ್ ಜೀ ಯವರು ಶರ್ಮರ ಗುರುಗಳು. ಹಾಗಾಗಿ ನಮಗೆಲ್ಲರಿಗೂ ಗುರುಗಳೇ ಆಗಿದ್ದಾರೆ. ಪೂಜ್ಯರಿಗೆ ವೇದಸುಧೆಯ ಅಭಿಮಾನಿಗಳ ಪರವಾಗಿ ಸಾಸ್ಟಾಂಗ ಪ್ರಣಾಮಗಳು. ಸರ್ವಶಕ್ತ ಭಗವಂತನು ಪೂಜ್ಯರಿಗೆ ಇನ್ನೂ ಆಯುರಾರೋಗ್ಯವನ್ನು ಹೆಚ್ಚಿಸಿ ನಮಗೆಲ್ಲಾ ಇನ್ನೂ ಹತ್ತಾರು ವರ್ಷಗಳು ಅವರಿಂದ ಮಾರ್ಗದರ್ಶನ ಪಡೆಯುವ ಅವಕಾಶವನ್ನು ಕರುಣಿಸಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ReplyDeleteವಂದನೆಗಳು, ಶ್ರೀಧರ್.
ReplyDeleteಕೆಲವರು ಸಂಪದಿಗರ ಪ್ರತಿಕ್ರಿಯೆಗಳು:
Jayanth Ramachar on April 12, 2011 - 7:23am.
ನಾಗರಾಜ್ ಅವರೇ ಇಂಥಹ ಮಹೋನ್ನತ ವ್ಯಕ್ತಿಯ ಪರಿಚಯ ಮಾಡಿಸಿದಕ್ಕಾಗಿ ಅನಂತಾನಂತ ಧನ್ಯವಾದಗಳು. ಇಂಥಹ ವ್ಯಕ್ತಿಗೆ ಪರೋಕ್ಷಕ್ಕಿಂತಲೂ ಪ್ರತ್ಯಕ್ಷವಾಗಿ ನಮಿಸಿದರೆ ಹೆಚ್ಚು ಸೂಕ್ತ ಎಂದು ನನ್ನ ಅನಿಸಿಕೆ. ತಮಗೆ ಸಾಧ್ಯವಾದಲ್ಲಿ ಒಂದು ಸಂಜೆ ನನ್ನನು ಅವರ ಮನೆಗೆ ಕರೆದುಕೊಂಡು ಹೋಗುವಿರ?
manju787 on April 12, 2011 - 7:54am.
ಕವಿ ನಾಗರಾಜರೆ, ಎಲೆ ಮರೆಯ ಕಾಯಿಯ೦ತಿರುವ ಹಿರಿಯ ಜೀವವೊ೦ದರ ಪರಿಚಯ ಮಾಡಿಸಿ ಕೊಟ್ಟ ನಿಮಗೆ ಅಭಿನ೦ದನೆಗಳು. ಅರ್ಜಿ ಹಾಕಿ ಬೇಡಿ ಪಡೆಯುವ ಸ್ವಾತ೦ತ್ರ್ಯ ಹೋರಾಟಗಾರರ ಪಿ೦ಚಣಿಯನ್ನು ತಿರಸ್ಕರಿಸಿದ್ದು ನಿಜಕ್ಕೂ ಶ್ಲಾಘನೀಯ. ಇ೦ಥವರನ್ನೆಲ್ಲ ಮರೆತಿರುವ ನಮ್ಮ ಇ೦ದಿನ "ನಾಯಿ"ಕರು ತಮ್ಮ ಚಿರ ನಿದ್ರೆಯಿ೦ದೆದ್ದು ಬರುವರೇ?
kamath_kumble on April 12, 2011 - 9:02am.
ನಾಗರಾಜ್ ಅವರೇ ಉತ್ತಮ ಪರಿಚಯ. ಕೊನೆಯ ಮಾತುಗಳು ಓದುತಿದ್ದಂತೆ ಮನಸ್ಸಿಗೆ ತುಬಾ ನೋವಾಯಿತು. ಅರ್ಹರಿಗೆ ಸನ್ಮಾನಿಸುವುದು ಸರ್ಕಾರ ಮರೆತಿದೆ. ಕೋಟಿ ಕೋಟಿ ಇರುವವರಿಗೆ ಕೋಟಿ ಕೋಟಿ ಕೊಡುವ ಸರ್ಕಾರಕ್ಕೆ ನನ್ನದೊಂದು ಧಿಕ್ಕಾರ !!
gopinatha on April 12, 2011 - 10:28am.
ಕವಿಯವರೇ
ಇಂತಹ ಅಪ್ರತಿಮ ವ್ಯಕ್ತಿಯ ಪರಿಚ ಮಾಡಿಸಿ ಕೊಟ್ಟ ನಿಮಗೆ ನನ್ನ ನಮನ
RAMAMOHANA on April 12, 2011 - 3:56pm.
ಅವರನ್ನು ನಾವುಗಳು ನಡೆಸಿಕೊಳ್ಳುತ್ತಿರುವ ರೀತಿ ನೆನೆದರೆ ಮನಸ್ಸಿಗೆ ತುಂಬಾ ನೋವಾಗತ್ತದೆ............?
-ರಾಮಮೋಹನ
ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಸಮಾಜದಲ್ಲಿ ಸಜ್ಜನರಿಗೆ ಕೊರತೆ ಯಿಲ್ಲ ವೆಂಬುದು ಸಾಬೀತಾಗುತ್ತದೆ. ಯೋಜಕಸ್ತತ್ರ ದುರ್ಲಭ: ಎಂಬ ಮಾತಿದೆ. ವೇದಸುಧೆಯು ಯೋಜಿಸುವ ಕೆಲಸ ಮಾಡಬೇಕು. ಸಮಾನ ಮಾನಸಿಕರು ಕೇವಲ ಓದದೆ ಇನ್ನೂ ಹೆಚ್ಚು ಕ್ರಿಯಾಶೀಲರಾಗಬೇಕು. ವೇದದ ವಿಚಾರವು ಜನಸಾಮಾನ್ಯರಿಗೆ ತಲುಪಬೇಕು. ಈ ಪ್ರಯತ್ನದಲ್ಲಿ ಕೈ ಜೋಡಿಸಿದಾಗ ಶತಾಯುಷಿಗಳಾದ ಪಂಡಿತ್ ಜಿ ಯವರ ಮನಕ್ಕೆ ಸಂತಸವಾಗುತ್ತದೆ.
ReplyDeleteಪಂಡಿತ್ ಚತುರ್ವೆದಿಯವರಿಗೆ ನಮನಗಳು ಮತ್ತು ಶುಭ ಹಾರೈಕೆಗಳು
ReplyDeleteಪ್ರತಿಕ್ರಿಯಿಸಿದ ಶ್ರೀಧರ್, ವಿ.ಆರ್.ಭಟ್ ರವರಿಗೆ ವಂದನೆಗಳು.
ReplyDeleteನಿಜವಾದ ನಮನ ಅವರ ಆದರ್ಶಗಳನ್ನು ನಮ್ಮ ಬಾಳಿಗೆ ಇಳಿಸಿಕೊಂಡಾಗ ಮಾತ್ರ ಅಲ್ಲವೇ?
ReplyDeleteಮಾನವೀಯತೆಯ ತಳಹದಿಯ ಮೇಲೆ ವಿಶಾಲ ಮನೋಭಾವ.
ಎಲ್ಲರ ಹಿತವನ್ನೂ ಸಾಧಿಸಿಕೊಡಬಲ್ಲಂತಹ ವೇದಗಳ ಆಧ್ಯಯನ ಮತ್ತು ಪ್ರಚಾರ.
ಅರ್ಥಹೀನ ಆಚರಣೆಗಳ ತ್ಯಾಗ.
- ಸುದಾಕರ ಶರ್ಮಾ
ಶ್ರೀ ಶರ್ಮಾಜಿ,
ReplyDeleteನಿಮ್ಮಂತೆ ಸರಳವಾಗಿ ಮನಮುಟ್ಟುವಂತೆ ವೇದದ ವಿಚಾರವನ್ನು ಹೇಳುವ ಗುರುಗಳು ಬೇಕಲ್ಲಾ! ನೀವು ಎಲ್ಲರಿಗೂ ಯಾವಾಗಲೂ ಸಿಗಲು ಸಾಧ್ಯವೇ? " ವೇದೋಕ್ತ ಜೀವನ ಪಥ"ಪುಸ್ತಕವನ್ನು ನೇರವಾಗಿ ನಮ್ಮಂತಹ ಸಾಮಾನ್ಯರು ಓದಿದರೆ ಅರ್ಥವಾಗುದಿಲ್ಲ. ನಿಮ್ಮಂತವರಿಂದ ಪಾಠವೇ ಆಗಬೇಕು. ಎಲ್ಲರಿಗೂ ನೀವು ಪಾಠಮಾಡಲು ಅಸಾಧ್ಯ. ಹಾಗಾಗಿ ಏನಾದರೊಂದು ಉಪಾಯ ಕಂಡು ಹಿಡಿದುಕೊಳ್ಳಲೇ ಬೇಕು. ಸಾಮಾನ್ಯವಾಗಿ ಎಲ್ಲರಿಗೂ ಎಲ್ಲಾ ಕಾಲಕ್ಕೂ ಉಪಯೋಗವಾಗುವ ಆಯ್ದ ವೇದಮಂತ್ರಗಳನ್ನು ಅರ್ಥವನ್ನು ತಿಳಿಸಿ ಸ್ವರ ಸಹಿತ ಕಲಿಸಬೇಕು. ಅದಕ್ಕೆ ಸೂಕ್ತವಾದ ಆಡಿಯೋ ಸಿ.ಡಿಯನ್ನಾದರೂ ಮಾಡಬೇಕು.ಸಾಮಾನ್ಯವಾಗಿ ಈವರಗೆ ವೇದವು ಎಲ್ಲರಿಗಾಗಿ, ಎಂಬ ಬಗ್ಗೆ ಸಾಕಷ್ಟು ವೇದಮಂತ್ರಗಳನ್ನು ಉಧಾಹರಿಸಿ ವಿವರಿಸಿದ್ದೀರಿ. ಈಗಾಗಲೇ ನೀವು ತಿಳಿಸಿರುವ ಮಂತ್ರಗಳನ್ನು ಕೇಳಿದಾಗ ವೇದವು ಎಲ್ಲರಿಗಾಗಿ ಇದೆ ಎಂದೂ ಯಾವುದೇ ಜಾತಿ, ಲಿಂಗ ಭೇದವಿಲ್ಲದೆ ಕಲಿಯಬಹುದೆಂಬುದನ್ನು ಅರ್ಥಮಾಡಿಕೊಳ್ಳಬಹುದು.ದೈನಂದಿನ ಬದುಕಿಗೆ ಅಗತ್ಯವಾದ ಕೆಲವು ವೇದಮಂತ್ರಗಳ ಅರ್ಥವನ್ನು ತಿಳಿಸಿದ್ದೀರಿ. ಆದರೂ ಇನ್ನೂ ಬೇಕು. ಕೊಡುವಿರಾ?