Pages

Wednesday, June 29, 2011

ನೆಚ್ಚುವುದು-ಮೆಚ್ಚುವುದು


ನೆಚ್ಚುವುದು-ಮೆಚ್ಚುವುದು

[ ಸ್ನೇಹಿತರೇ, ’ಜಗದಮಿತ್ರನ ಕಗ್ಗ’ದ ೨೩ನೇ ಕಂತು ನಿಮ್ಮೆಲ್ಲರ ಓದಿಗಾಗಿ: ]

ಯಾರದೋ
ಮೆಚ್ಚುಗೆಯ ದಾರಿಕಾಯಲು ಬೇಡ
ಯಾರನೋ ನಂಬಿ ನೀ ಜೀವಿಸಲು ಬೇಡ
ಭೂರಿ ಭೋಜನ ನಿನಗೆ ದೈವವಂ ನೆಚ್ಚಿದಡೆ
ಸಾರಿ ನೀ ಅದ ನಂಬು | ಜಗದಮಿತ್ರ

ಕೂರಿಸುತ ತೇರನೆಳೆವರು ನೀನು ಗೆದ್ದಾಗ
ಹಾರಿಸುವರಷ್ಟು ಪಟಾಕಿ ತೋಪುಗಳ
ಜಾರಿಕೊಳ್ಳುವರೆಲ್ಲ ನೀ ಬಿದ್ದು ಅಳುವಾಗ
ದೂರವಿಡು ಮೊಳದಷ್ಟು | ಜಗದಮಿತ್ರ

ಹಾರಿ ಬಂದಿಹ ಹದ್ದು ಹರೆದು ಹೋಗುವ ರೀತಿ
ಊರು ಉದರವು ಬೆನ್ನು ಸೊಂಟ ಕೈಕಾಲು
ಭಾರ ಹೇರಿದ ಹಾಗೆ ಬಳಲುವುದು ಕಾಯಿಲೆಯೊಳ್
ದೂರುವುದು ಯಾರಲ್ಲಿ ? ಜಗದಮಿತ್ರ

ನೂರೆಂಟು ತಿನಿಸುಗಳು ನಾನಾ ಭಕ್ಷ್ಯಗಳು
ಸೂರೆಹೊಡೆವವು ಕಣ್ಣು ಹಾಯಿಸಲು ಮನವ
ಮಾರಕವು ಜಿಹ್ವಾ ಚಾಪಲ್ಯ ಜೀವಕ್ಕೆ
ಮೀರದಂತಿರಲಿ ಮಿತಿ | ಜಗದಮಿತ್ರ

ಆರು ಗಾವುದ ನಡೆದು ನೂರು ಮೆಟ್ಟಿಲು ತುಳಿದು
ಊರುದ್ದ ಅಲೆಸಿ ದಂಡಿಸು ಶರೀರವನು
ಬೇರಾವ ಮಾರ್ಗಕಿಂ ಯೋಗವತಿಸೂಕ್ತ
ಆರೋಗ್ಯ ಸೂತ್ರವಿದು | ಜಗದಮಿತ್ರ

--ವಿ.ಆರ್.ಭಟ್

2 comments:

  1. ಆರೋಗ್ಯಸೂತ್ರವಂತೂ ಬಲು ಚೆನ್ನಾಗಿದೆ.ಆದರೆ ನನ್ನ ಪಾಡು ಏನಾಗಿದೆ ಅಂದ್ರೆ ನನ್ನ ವಾಸದ ಮನೆಯ ಮೇಲೆ ಎರಡು ಫ್ಲೋರ್ ಕಟ್ಟಿಸುತ್ತಿರುವೆ.ಪಾಪ ಕಾರ್ಮಿಕರು ಅವರ ಪಾಡಿಗೆ ಶ್ರದ್ಧೆಯಿಂದ ಅವರ ಕೆಲಸ ಮಾಡಿಕೊಂಡು ಹೋಗುತ್ತಾರೆ. ನಾನು ಏನೋ ಕಡಿದು ಕಟ್ಟೆ ಹಾಕ್ತೀನೆಂದು ದಿನದಲ್ಲಿ ಹತ್ತು ಭಾರಿ ಮಹಡಿ ಮೆಟ್ಟಿಲು ಹತ್ತಿಳಿದೆ. ಈಗ ಆಯುರ್ವೇದ ಆಸ್ಪತ್ರೆಯಲ್ಲಿ ಮಸ್ಸೇಜ್ ಮಾಡಿಸಿಕೊಳ್ಳುತ್ತಿರುವೆ.ಅಂದ್ರೆ ಎಲ್ಲರೂ ಮೆಟ್ಟಿಲು ಹತ್ತಿ ಇಳಿಯಬೇಡಿ ಆನ್ನೋದಿಲ್ಲ. ನನ್ನ ಹಾಗೆ ಸುಮ್ಸುಮ್ನೆ ಹತ್ತಬೇಡಿ.

    ReplyDelete
  2. ಆತ್ಮೀಯ ಶ್ರೀಧರರೇ, ನಮಗೆಲ್ಲಾ ಏನಾಗಿದೆ ಎಂದರೆ ಬಹಳವಾಗಿ ನಡೆದು ಅಭ್ಯಾಸ ತಪ್ಪಿಹೋಗಿದೆ, ಸತತ ನಡೆಯುವ, ಭಾರ ಹೊರುವ, ಮೆಟ್ಟಿಲು ಹತ್ತಿ-ಇಳಿದು ಮಾಡುವ ಮುದುಕರನ್ನೂ ಕಂಡಿದ್ದೇನೆ, ಅದರರ್ಥ ನಿಮ್ಮಲ್ಲಿ ನ್ಯೂನವೆಂದಲ್ಲ, ಯಾರೋ ಒಬ್ಬಾತ ಆಕಳ ಕರುವೊಂದನ್ನು ಚಿಕ್ಕದಿರುವಾಗಿನಿಂದ ಎತ್ತಿದ್ದನಂತೆ-ಅದು ದೊಡ್ಡದಾದರೂ ಆತನಿಗೆ ಎತ್ತಲು ಭಾರವೆನಿಸಲಿಲ್ಲ-ಇದರರ್ಥ practice makes man perfect. ಆದರೆ ಒಂದು ಚಿಕ್ಕ ಡಿಸ್ಕೌಂಟು- ಕೆಲವರಿಗೆ ೫೦ ವಯಸ್ಸಿನ ಮೇಲೆ ಮೊಳಕಾಲು ಗಂಟಿನಲ್ಲಿರುವ ಅಸ್ಥಿಮಜ್ಜೆ ಕರಗಿ ಹೋಗಿ ಎಲುವು ಎಲುವು ಹೊಸೆದು ಅತಿಯಾಗಿ ನೋವು ಬರುತ್ತದೆ ಎಂಬುದು ತಿಳಿದುಬಂದಿದೆ-ಇದಕ್ಕೂ ಸರಿಯಾದ ಆಯುರ್ವೇದ ಪಂಡಿತರು ಪರಿಹಾರ ನೀಡುತ್ತಾರೆ, ತಮಗೆ ಬೇಗ ವಾಸಿಯಾಗಲಿ ಎಂದು ಹಾರೈಸುತ್ತ ನಿಮ್ಮ ಅಭಿಪ್ರಾಯಕ್ಕೆ ಕೃತಜ್ಞನಾಗಿದ್ದೇನೆ.

    ReplyDelete