Pages

Thursday, October 27, 2011

ವಿವೇಕ ಚೂಡಾಮಣಿ - ಭಾಗ-೧೫


ಗ್ರಂಥದ ಮುಂದುವರಿಕೆ:-

मूलम्- ಮೂಲ:-
मन्दमध्यमरूपाऽपि वैराग्येण शमादिना ।
प्रसादेन गुरोः सेयं प्रवृद्धा सूयते फलम् ॥२९॥

ಮಂದ-ಮಧ್ಯಮ-ರೂಪಾಽಪಿ ವೈರಾಗ್ಯೇಣ ಶಮಾದಿನಾ |
ಪ್ರಸಾದೇನ ಗುರೋಸ್ಸೇಯಂ ಪ್ರವೃದ್ಧಾ ಸೂಯತೇ ಫಲಮ್ ||೨೯|

ಪ್ರತಿಪದಾರ್ಥ :-
(ಮಂದ-ಮಧ್ಯಮ-ರೂಪಾ ಅಪಿ= ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ, ವೈರಾಗ್ಯೇಣ= ವಿರಾಗದಿಂದದಲೂ, ಶಮಾದಿನಾ = ಶಮಾದಿಗುಣ ಸಾಧನದಿಂದಲೂ, ಗುರೋಃ =ಗುರುವಿನ, ಪ್ರಸಾದೇನ = ಅನುಗ್ರಹದಿಂದ, ಸಾ ಇಯಂ = ಆ ಈ (ಮುಮುಕ್ಷುತ್ವವು), ಪ್ರವೃದ್ಧಾ = ಪ್ರಬಲವಾಗಿ, ಫಲಂ = ಫಲವನ್ನು , ಸೂಯತೇ = ಉಂಟುಮಾಡುತ್ತದೆ. )

ತಾತ್ಪರ್ಯ : 
ಇಂತಹ ಮುಮುಕ್ಷುತ್ವವು ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ ವೈರಾಗ್ಯ , ಶಮಾದಿಗುಣ ಸಾಧನೆ ಮತ್ತು ಗುರುವಿನ ಅನುಗ್ರಹದಿಂದ (ಉಪದೇಶದಿಂದ) ಪ್ರಬಲವಾಗಿ ಮೋಕ್ಷರೂಪವಾದ ಫಲವು ಉಂಟಾಗುತ್ತದೆ.

ವಿವರಣೆ :
ಸಾಧನ ಚತುಷ್ಟಯದ ನಂತರ ಆಚಾರ್ಯರು ಮುಂದುವರಿದು ಮುಮುಕ್ಷುತ್ವದ ಬಗೆಗೆ ಹೇಳುತ್ತಾರೆ.  ಮುಮುಕ್ಷುತ್ವ ಅಥವಾ ಬಿಡುಗಡೆಯ ಬಯಕೆ ಎನ್ನುವುದು ಎಲ್ಲರಲ್ಲೂ ಒಂದೇ ತೆರನಾಗಿ ಇರುವುದಿಲ್ಲ. ಕೆಲವರಿಗೆ ಮಂದ (Slow)ವಾಗಿರುತ್ತದೆ. ನಿಧಾನವಾಗಿ ಕೆಲಸ ಮಾಡುವ ಅಥವಾ ಮುಂದಿನ ವಾರವೋ ಮುಂದಿನ ತಿಂಗಳೋ ಮಾಡಿದರಾಯಿತು ಎನ್ನುವ ಮನೋಭಾವವಿರುತ್ತದೆ. ಕೆಲವರಿಗೆ ಮಧ್ಯಮ (Medium)ಸ್ಥಿತಿಯಲ್ಲಿರುತ್ತದೆ. ನಾಳೆಯೋ ನಾಡಿದ್ದೋ ಮಾಡಿದರಾಯಿತು ಎನ್ನುವ ಮನೋಭಾವ. ಕೆಲವರಿಗೆ ಪ್ರವೃದ್ಧ(ಜಾಗೃತ, Quick, Cautious)  ಸ್ಥಿತಿಯಲ್ಲಿರುತ್ತದೆ.  ಇಂದು ಮಾಡಬೇಕಾದ ಕೆಲಸ ಈಗಲೇ ಆಗಿ ಬಿಡಬೇಕು ಎನ್ನುವ ತೀವ್ರತೆಯ ಮನೋಭಾವವಿರುತ್ತದೆ. ಹೀಗೆ ಮುಮುಕ್ಷುತ್ವವು ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ ಸಹ ವೈರಾಗ್ಯಸಾಧನೆ ಮತ್ತು ಶಮಾದಿಗುಣಗಳ ಪಾಲನೆಯಿಂದ ಪರಿಪಾಕಗೊಂಡ ಮೋಕ್ಷಾಪೇಕ್ಷಿಯ ಮೇಲೆ ಗುರುವಿನ ಅನುಗ್ರಹವು ಆಗುವುದರಿಂದ ಅದು ತೀವ್ರತೆಯನ್ನು ಪಡೆದುಕೊಳ್ಳುತ್ತದೆ.  ವಿಷಯಭೋಗವಸ್ತುಗಳಲ್ಲಿನ ದೋಷಗಳನ್ನು ಕಂಡು ಹುಟ್ಟುವ ಮಂದ ಮುಮುಕ್ಷುತ್ವವು ಶಾಸ್ತ್ರಾರ್ಥಗಳನ್ನು ಅರಿಯುವ ಕಾಲದಲ್ಲಿ ಮಧ್ಯಮಾವಸ್ಥೆಗೆ ಬಂದು ವೈರಾಗ್ಯವು ತೀವ್ರವಾದಂತೆ ಶಮಾದಿಗುಣಗಳು ಸಿದ್ಧಿಸಿದಂತೆ ಮನಸ್ಸು ಸಮಾಧಾನದಲ್ಲಿ ಲೀನವಾಗುವುದರೊಂದಿಗೆ ಗುರುವಿನ ಅನುಗ್ರಹವೂ ಅಪೇಕ್ಷಿಯ ಮೇಲೆ ಉಂಟಾಗಿ ಮುಮುಕ್ಷುತ್ವವು ಪ್ರಬಲವಾಗಿ ಮೋಕ್ಷರೂಪವಾದ ಫಲವು ಉಂಟಾಗುತ್ತದೆ ಎಂದು ವ್ಯಾಖ್ಯಾನಕಾರರು ವಿವರಿಸುತ್ತಾರೆ.
ಗಾಂಧೀಜಿಯವರಿಗೆ ಬಂದದ್ದು ತೀವ್ರತರವಾದ ಮುಮುಕ್ಷುತ್ವ ಎನ್ನಬಹುದು. ’ದೇಶಕ್ಕಾಗಿ ಸರಳತೆಯನ್ನು ಪಾಲಿಸುತ್ತೇನೆ’ ಎಂದು ಹೇಳಿದಷ್ಟೇ ವೇಗವಾಗಿ ತಮ್ಮ ’ಸಿವಿಲ್’ ಪೋಷಾಕುಗಳನ್ನು ತ್ಯಜಿಸಿ ದೇಶೀಯವಾದ ಒಂಟಿ ಬಟ್ಟೆಯನ್ನು ಉಟ್ಟರು !. ಅಪ್ರತೀಕಾರ ಅಥವಾ ಅಹಿಂಸೆಯನ್ನೇ ತಮ್ಮ ಧ್ಯೇಯವಾಗಿರಿಸಿಕೊಂಡು ಗುರಿಯನ್ನು ಮುಟ್ಟಿದರು. ಮಹಾಭಾರತದಲ್ಲಿ ವಿದುರನಿಗೆ ಬಂದದ್ದು ತೀವ್ರವಾದ ಮುಮುಕ್ಷುತ್ವವೆ. ಅರ್ಜುನನಿಗೆ ಬಂದ ಮುಮುಕ್ಷುತ್ವ ಹಾಗೆ ಬಂದು ಹೀಗೆ ಹೋದದ್ದು !. ಆದುದರಿಂದ, ಆತ್ಮಾಭ್ಯಾಸಿಯು ಪುರುಷ ಪ್ರಯತ್ನದಿಂದ ಶಮಾದಿಗುಣಗಳು ಮತ್ತು ವೈರಾಗ್ಯ ಸಾಧನೆಗೆ ತೀವ್ರವಾಗಿ ಯತ್ನಿಸಬೇಕಾಗುತ್ತದೆ ಎಂಬ ಸೂಕ್ಷ್ಮವನ್ನು ಇಲ್ಲಿ ಕಂಡು ತಿಳಿಯಬಹುದು.
ಮಂದಗಾಮಿಗಳು ಇಂದೋ ನಾಳೆಯೋ ಅಥವಾ ಎಂದೋ ಒಂದು ದಿನ ಆತ್ಮಾನುಭವವನ್ನು ಪಡೆದರೆ ಆಯಿತು ಎನ್ನುವ ಮನೂಭಾವದವರು. ಪ್ರವೃದ್ಧರಿಗೆ ವ್ಯಾವಹಾರಿಕ ಜಗತ್ತು ಎನ್ನುವುದು ಕಾದ ದೋಸೆಯ ಹೆಂಚಿನ ಮೇಲೆ ಕೂರುವಂತೆ !. ಆದಷ್ಟು ಬೇಗ ಎದ್ದು ಓಡಬೇಕು (ಸಂಸಾರದಿಂದ) ಎನ್ನುವ ತೀವ್ರತೆ. ಇನ್ನು ಕೆಲವರು ಕ್ರಮೇಣ ಪ್ರಪಂಚದೊಂದಿಗೆ ರಾಜಿಮಾಡಿಕೊಂಡು ಕಾಲಯಾಪನೆ ಮಾಡುವವರು , ಕ್ಷಣಿಕ ವೈರಾಗ್ಯದವರು.
ಹೀಗಿದ್ದರೂ ಸಹ ಸಾಧನ ಚತುಷ್ಟಯಗಳ ಸಾಧನೆಯಿಂದ ಮತ್ತು ಗುರುವಿನ ಅನುಗ್ರಹವನ್ನು ಪಡೆಯುವುದರಿಂದ ಮೋಕ್ಷರೂಪವಾದ ಫಲವನ್ನು ಹೊಂದಬಹುದು ಎಂದು ಆಚಾರ್ಯರು ವಿವರಿಸುತ್ತಾರೆ.

मूलम्- ಮೂಲ:-

वैराग्यंच मुमुक्षुत्वं तीव्रं यस्य तु विद्यते ।
तस्मिन्नेवार्थवंतः स्युः फलवंतः शमादयः ॥३०॥

ವೈರಾಗ್ಯಂಚ ಮುಮುಕ್ಷುತ್ವಂ ತೀವ್ರಂ ಯಸ್ಯ ತು ವಿದ್ಯತೇ |
ತಸ್ಮಿನ್ನೇವಾರ್ಥವಂತಃ ಸ್ಯುಃ ಫಲವಂತಃ ಶಮಾದಯಃ ||೩೦||

ಪ್ರತಿಪದಾರ್ಥ :-
(ತು= ಆದರೆ, ಯಸ್ಯ= ಯಾರಿಗೆ, ವೈರಾಗ್ಯಂ= ವೈರಾಗ್ಯವು, ಮುಮುಕ್ಷುತ್ವಂ ಚ= ಮತ್ತು ಬಿಡುಗಡೆಯ ಬಯಕೆಯು, ತೀವ್ರಂ ವಿದ್ಯತೇ= ತೀವ್ರವಾಗಿದೆಯೋ,
ತಸ್ಮಿನ್ ಏವ = ಅವನಲ್ಲಿಯೇ, ಶಮಾದಯಃ= ಶಮಾದಿಗುಣಗಳು, ಅರ್ಥವಂತಃ=ಅರ್ಥವುಳ್ಳವೂ, ಫಲವಂತಃ=ಫಲವುಳ್ಳದ್ದೂ, ಸ್ಯುಃ =ಆಗುವುವು).

ತಾತ್ಪರ್ಯ:-
ಆದರೆ, ಯಾರಲ್ಲಿ ವೈರಾಗ್ಯವು ಮತ್ತು ಮುಮುಕ್ಷುತ್ವವು ತೀವ್ರವಾಗಿರುವುದೋ ಅವನಲ್ಲಿಯೇ ಶಮಾದಿಗುಣಗಳು ಸಾರ್ಥಕವೂ ಸಫಲವೂ ಆಗುವುವು.

ವಿವರಣೆ:-
ಈ ಮೇಲಿನ ಶ್ಲೋಕವನ್ನು ಮತ್ತು ಅದರ ತಾತ್ಪರ್ಯವನ್ನು ಗಮನಿಸಿದರೆ ಸುತ್ತಿ-ಬಳಸಿ ಮತ್ತೆ ಇದ್ದಲ್ಲಿಗೇ ಬಂದೆವೇನೊ ಎನಿಸುತ್ತದೆ. ಅದು ನಿಜವೆ !. ಈ ಮೂಲಕ ಸಾಧನ ಚತುಷ್ಟಯದ ಗುಣಗಳೆಲ್ಲವೂ ಅಪೇಕ್ಷಿಯಲ್ಲಿ ಅಥವಾ ಅಧಿಕಾರಿಯಲ್ಲಿ ತೀವ್ರವಾಗಿಯೇ ಇರಬೇಕಾಗುತ್ತದೆ ಎನ್ನುವುದನ್ನು ತಿಳಿಯಬಹುದು.  ಒಬ್ಬನು ತನ್ನ ಹೊಲದಲ್ಲಿ ರಾಗಿಯನ್ನು ನಾಟಿ ಚೆನ್ನಾಗಿ ನೀರು ಕೊಟ್ಟು ಗೊಬ್ಬರವನ್ನೂ ಹಾಕಿ ತಿಂಗಳುಗಳ ಕಾಲ ಕಣ್ಣಿಟ್ಟು ಬೆಳೆದರೂ ಸಹ ಇಳುವರಿಯು ಚೆನ್ನಾಗಿಲ್ಲ ಎಂದು ಹೇಳುತ್ತಾನೆ. ಏಕೆಂದರೆ ಆತನು ಬೆಳೆಯ ಸುತ್ತಲೂ ಬೆಳೆದಿದ್ದ ಕಳೆಯನ್ನು ಹಾಗೆ ಬಿಟ್ಟುಕೊಂಡೇ ಉತ್ತಮ ಇಳುವರಿಯನ್ನು ಬಯಸಿರುತ್ತಾನೆ. ಸಂಪೂರ್ಣ ತೊಡಗುವಿಕೆ ಇಲ್ಲದೆ ಉತ್ತಮ ಫಲವನ್ನು ನಿರೀಕ್ಷಿಸುವುದಾದರೂ ಹೇಗೆ ? . ತೊಡವಿಕೆಯ ಜೊತೆಗೆ ಮಾಡುವ ಕೆಲಸದಲ್ಲಿ Passion ಮತ್ತು ತೀವ್ರತೆಗಳೆರಡೂ ಇರಬೇಕಾಗುತ್ತದೆ.
ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ ಕ್ರಮೇಣ (ಮೇಲೆ ವಿವರಿಸಿದಂತೆ) ಮುಮುಕ್ಷುತ್ವವು ತೀವ್ರವಾಗುತ್ತದೆ ಎಂದರೂ ಸಹ ಸಾಧ್ಯತೆಗಳು ದೀರ್ಘಕಾಲೀನವಾದುವೂ ಮತ್ತು ಇಂತಹ ಸ್ಥಿತಿಯಲ್ಲಿ ಮನೋನಿಗ್ರಹವು ಕಷ್ಟಸಾಧ್ಯವಾದುದರಿಂದ ತೀವ್ರತೆಯ ಭಾವವೇ ಉತ್ತಮ ಎನ್ನುವ ಆಶಯವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆನ್ನಬಹುದು.
ವೈರಾಗ್ಯ ಮತ್ತು ಮುಮುಕ್ಷುತ್ವದ ತೀವ್ರತೆಯನ್ನು ಇಟ್ಟುಕೊಂಡು ಸಾಧನೆಗೆ ಮುಂದಾದಾಗ ಶಮಾದಿಗಳು ಫಲನೀಡುತ್ತವೆ ಮತ್ತು ಅರ್ಥಪೂರ್ಣವಾಗಿರುತ್ತದೆ ಎಂದು ವ್ಯಾಖ್ಯಾನಿಸುತ್ತಾರೆ. ಕಾರ್ಯದಿಂದ ಕಾರಣವನ್ನು ಊಹಿಸಬೇಕೆಂಬ ಅಭಿಪ್ರಾಯವು ಇಲ್ಲಿ ವ್ಯಕ್ತವಾಗುವುದನ್ನು ಕಾಣಬಹುದು.  ತೀವ್ರ ವೈರಾಗ್ಯವಿದ್ದರೆ ಶಮಾದಿ ಶಬ್ದಗಳು ಅರ್ಥವುಳ್ಳದ್ದಾಗುವುವು, ತೀವ್ರ ಮುಮುಕ್ಷುತ್ವವಿದ್ದರೆ ಶಮಾದಿಗಳು ಫಲವುಳ್ಳದ್ದಾಗುವುವು ಎಂದು ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು ವ್ಯಾಖ್ಯಾನಿಸುತ್ತಾರೆ.

मूलम्- ಮೂಲ:-

एतयोर्मंदता यत्र विरक्तत्वमुमुक्षुयोः ।
मरौ सलिलवत् तत्र शमादेर्भानमात्रता ॥३१॥

ಏತಯೋರ್ಮಂದತಾ ಯತ್ರ ವಿರಕ್ತತ್ವ-ಮುಮುಕ್ಷುಯೋಃ|
ಮರೌ ಸಲಿಲವತ್ತತ್ರ ಶಮಾದೇರ್ಭಾನಮಾತ್ರತಾ ||೩೧||

ಪ್ರತಿಪದಾರ್ಥ:-
(ಯತ್ರ= ಯಾರಲ್ಲಿ, ಏತಯೋ ವಿರಕ್ತತ್ವ-ಮುಮುಕ್ಷುತಾ= ಈ ವೈರಾಗ್ಯ-ಮುಮುಕ್ಷುತ್ವಗಳು, ಮಂದತಾ= ಮಂದವಾಗಿವೆಯೋ ತತ್ರ= ಅವರಿಗೆ,
ಮರೌ = ಮರುಭೂಮಿಯಲ್ಲಿ, ಸಲಿಲವತ್= ನೀರಿರುವಂತೆ, ಶಮಾದೇಃ= ಶಮಾದಿಗಳ, ಭಾನಮಾತ್ರ ತಾ= ತೋರಿಕೆಯು ಮಾತ್ರ ’ಇರುತ್ತದೆ’).

ತಾತ್ಪರ್ಯ:-
ಯಾರಲ್ಲಿ ಈ ವೈರಾಗ್ಯ-ಮುಮುಕ್ಷುತ್ವಗಳು ಮಂದವಾಗಿರುತ್ತವೆಯೋ ಅವರಲ್ಲಿ ಶಮಾದಿಗಳು ತೋರಿಕೆಗೆ ಮಾತ್ರ ಇರುತ್ತದೆ. ಹೇಗೆಂದರೆ, ಮರುಭೂಮಿಯಲ್ಲಿ ನೀರಿರುವಂತೆ (ಅಥವಾ ಮರೀಚಿಕೆಯಂತೆ, ಬಿಸಿಲ್ಗುದುರೆ).

ವಿವರಣೆ :-
ಯಾರಲ್ಲಿ ವೈರಾಗ್ಯ ಮತ್ತು ಮುಮುಕ್ಷುತ್ವಗಳು ಮಂದವಾಗಿರುತ್ತದೆಯೋ ಅವರಲ್ಲಿ ಶಮಾದಿಗುಣಗಳು ಕೇವಲ ತೋರಿಕೆಗೆ ಮಾತ್ರ ಇರುತ್ತದೆಯೇ ಹೊರತು ಸಾಧನೆಯ ರೂಪದಲ್ಲಿ ಇರುವುದಿಲ್ಲ. ಮರುಭೂಮಿಯಲ್ಲಿ ಮರೀಚಿಕೆಯನ್ನು ಕಾಣುವಂತೆ ಅಥವಾ ಮರಳುಗಾಡಿನಲ್ಲಿ ದುರ್ಲಭವಾದ ನೀರಿನ ಮೂಲದಂತೆ ತೋರಿಕೆಯಾಗುತ್ತದೆ ಎಂದು ವಿವರಿಸುತ್ತಾರೆ. ಮೇಲ್ನೋಟಕ್ಕೆ ಇದ್ದಂತೆ ಕಾಣುತ್ತದೆ ಆದರೆ ವಾಸ್ತವದಲ್ಲಿ ಇರುವುದಿಲ್ಲ ಎಂದು ಅರ್ಥ.
ಗುರಿ ಇಲ್ಲದೆ ದಾರಿಯಲ್ಲಿ ಸಾಗಿದರೆ ಎಲ್ಲಿಗೆ ತಲುಪಬೇಕೆಂಬ ಗೊಂದಲವು ಮುಗಿಯುವುದೇ ಇಲ್ಲ. ಹೊಲದಲ್ಲಿ ಉತ್ತಮ ಇಳುವರಿಯನ್ನು ಪಡೆಯಬೇಕೆಂಬ ತೀವ್ರ ಹಂಬಲವಿದ್ದರೆ ಅದಕ್ಕೆ ಪೂರಕವಾದ ಕಾರ್ಯಗಳೂ ಕೈಗೂಡುತ್ತವೆ ಸಾಧನಗಳೂ ಫಲ ನೀಡುತ್ತವೆ.  ಗುರಿಯ ನೆಚ್ಚಿಗೆ ಇಲ್ಲದಿದ್ದರೂ ಸಹ ಹಂಬಲದಿಂದ , ಉತ್ಸಾಹದಿಂದ ಕೆಲಸ ಮಾಡುತ್ತಾ ಹೋಗುವುದರಿಂದ ಅರಿಯದೆಯೇ ಗುರಿಯನ್ನು ಮುಟ್ಟುವುದು ಸಾಧ್ಯ ಎಂದು ಹೇಳಬಹುದು. ಮುಖ್ಯವಾಗಿ ಬೇಕಾಗುವುದು ಕಾರ್ಯದಲ್ಲಿ ತೀವ್ರತೆ ಮತ್ತು ಹಂಬಲ, ಇದಿಲ್ಲದೆ ಮಾಡುವ ಕೆಲಸವು ಫಲಕಾರಿಯಾಗದೆ ಕೇವಲ ’ನಾವೂ ಮಾಡಿದೆವು’ ಎನ್ನುವುದಕ್ಕೆ ಸೀಮಿತವಾಗಿಬಿಡುತ್ತದೆ.  ನೆಹರೂ ಅವರಲ್ಲಿ ತೋರಿಕೆಯಂತಿದ್ದ ದೇಶಪ್ರೇಮ, ಸ್ವದೇಶೀಯತೆ, ಸರಳತೆಗಳು ಗಾಂಧೀಜಿಯವರಲ್ಲಿ ಸಾಧನೆಯ ರೂಪದಲ್ಲಿ ಇದ್ದುವು ಎನ್ನುವುದನ್ನು ಸುಲಭವಾಗಿ ತಿಳಿಯಬಹುದು !.
ವೈರಾಗ್ಯ ಮತ್ತು ಮುಮುಕ್ಷುತ್ವವು ತೀವ್ರತೆಯನ್ನು ಪಡೆದುಕೊಂಡಾಗ ಸಾಧನೆಯ ಹಾದಿಯು ಸುಗಮವಾಗುತ್ತದೆ ಎನ್ನುವ ಸೂಕ್ಷ್ಮ ವಿಚಾರವನ್ನು ಇಲ್ಲಿ ತಿಳಿಯಬಹುದು.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ....

--------------------------

ಕೊ : ಇದೊಂದು ಹೊಸ ಮಾದರಿ. ಮೂಲ, ಪ್ರತಿಪದಾರ್ಥ, ತಾತ್ಪರ್ಯ, ವಿವರಣೆ ಕೊನೆಯಲ್ಲಿ ಟಿಪ್ಪಣಿ. ಇದು ಸೋಪಾನ.  ಈ ಪ್ರಯತ್ನ ಸರಿಯಾಗಿದೆಯೋ ಇಲ್ಲವೋ ಎನ್ನುವುದನ್ನು ನೀವೇ ಹೇಳಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳದ್ದೇ ಅಂತಿಮ ನಿರ್ಣಯವಾದುದರಿಂದ ತೀರ್ಮಾನವನ್ನು ನಿಮಗೇ ಬಿಟ್ಟಿದ್ದೇನೆ :) . ದಯವಿಟ್ಟು ತಿಳಿಸಿ.

ಕೊ.ಕೊ.: ಪ್ರತಿಪದಾರ್ಥವನ್ನು ಕೊಡಲು ನನ್ನಲ್ಲಿ ಸಬಂಧಪಟ್ಟ ಕನ್ನಡ ಪುಸ್ತಕವು ಇಲ್ಲ. ನನ್ನ ಗ್ರಹಿಕೆಯ, ತಿಳುವಳಿಕೆಯ ಆಧಾರದಲ್ಲಿ ಕೊಟ್ಟಿದ್ದೇನೆ, ಕೊಡುತ್ತೇನೆ.  ಇಲ್ಲೇನಾದರೂ ತಪ್ಪುಗಳು ಕಂಡು ಬಂದಲ್ಲಿ ತಿಳಿಸಿ-ತಿದ್ದಿಕೊಡಿ ಎಂದು
 ಕೇಳಿಕೊಳ್ಳುತ್ತೇನೆ. ಹಳೆಯ ಮಾದರಿಯನ್ನೇ ಉಳಿಸಿಕೊಳ್ಳಬೇಕೆಂದರೆ ,  ಅದಕ್ಕೂ ಸರಿಯೆ.

=======================

ವಂದನೆಗಳೊಂದಿಗೆ,

" ಈಶಾವಾಸ್ಯಂ" ಗೃಹ ಪ್ರವೇಶೋತ್ಸವ



ವೇದಸುಧೆಯ ಆತ್ಮೀಯ ಅಭಿಮಾನಿಗಳೇ ,
ಹಾಸನದಲ್ಲಿ ನೂತನವಾಗಿ ನಿರ್ಮಿಸಿರುವ " ಈಶಾವಾಸ್ಯಂ" ಗೃಹದ ಪ್ರವೇಶೋತ್ಸವದ ವಿವರಗಳು ಕೆಳಕಂಡಂತಿವೆ. ನಮ್ಮ ವಾಸದ ಜೊತೆಗೆ ಸತ್ಸಂಗಗಳಿಗಾಗಿಯೇ ಒಂದು ಪ್ರತ್ಯೇಕ ವ್ಯವಸ್ಥೆಯನ್ನು ಭಗವತ್ ಕೃಪೆಯಿಂದ ಮಾಡಲಾಗಿದೆ. ಪ್ರತ್ಯೇಕ ಆಮಂತ್ರಣ ಮುದ್ರಿಸಿ ಅಂಚೆಯಲ್ಲಿ ಕಳುಹಿಸಲೂ ಕೂಡ ಸಮಯಾವಕಾಶವಿಲ್ಲವಾಗಿದೆ. ತಾವು ಇದನ್ನೇ ನನ್ನ ವೈಯಕ್ತಿಕ ಆಮಂತ್ರಣ ವೆಂದು ಭಾವಿಸಿ ಬಂದು ಹರಸಬೇಕೆಂದು ವಿನಂತಿಸುವೆ.
ತಮ್ಮ ವಿಶ್ವಾಸಿ
-ಹರಿಹರಪುರ ಶ್ರೀಧರ್
ಸಂಪಾದಕ ,ವೇದಸುಧೆ
---------------------------------------------------------------------------
ದಿನಾಂಕ: 2.11.2011 ಬುಧವಾರ

ಪ್ರವೇಶ : ಬೆ.9.30 ರಿಂದ 10.00


ಸಮಾಜ ಸ್ಮರಣೆ:12.00 ರಿಂದ 1.30
ಉಪಸ್ಥಿತಿ: ಮಾನ್ಯ ಶ್ರೀ ಸು.ರಾಮಣ್ಣ , ಜ್ಯೇಷ್ಠ ಪ್ರಚಾರಕರು. ರಾ.ಸ್ವ.ಸಂಘ
ಸಾನ್ನಿಧ್ಯ: ಪೂಜ್ಯ ಮಾತಾಜಿ ವಿವೇಕಮಯೀ ,ಭವತಾರಣಿ ಆಶ್ರಮ, ಬೆಂಗಳೂರು  

ವೈಯೋಲಿನ್ ವಾದನ ಕಛೇರಿ: ಮದ್ಯಾಹ್ನ 4:00 ರಿಂದ
ಡಾ|| ಬಿ.ಎಸ್.ಆರ್.ದೀಪಕ್ ಶಿವಮೊಗ್ಗ ಮತ್ತು ವೃಂದ ದಿಂದ
--------------------------------------------------------------------------------------------

"ಈಶಾವಾಸ್ಯಮ್"   ಗೃಹಪ್ರವೇಶ ಸಂದರ್ಭದಲ್ಲಿ ಹಾಸನದ ಶ್ರೀ ಶಂಕರ  ಮಠದಲ್ಲಿ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮಗಳು:

1.11.2011 ಮಂಗಳವಾರ ಸಂಜೆ 6.00 ಕ್ಕೆ:
ಪೂಜ್ಯ  ಅಧ್ವಯಾ ನಂದೇ೦ದ್ರ ಸರಸ್ವತೀ ಸ್ವಾಮೀಜಿ, ಅಧ್ಯಾತ್ಮ ಪ್ರಕಾಶ ಕಾರ್ಯಾಲಯ, ಹೊಳೆ ನರಸೀಪುರ 

2.11.2011 ಬುಧವಾರ ಸಂಜೆ 6.00 ಕ್ಕೆ:
ಪೂಜ್ಯ ಮಾತಾಜಿ ವಿವೇಕಮಯೀ ,ಭವತಾರಣಿ ಆಶ್ರಮ, ಬೆಂಗಳೂರು

3.11.2011 ಗುರುವಾರ ಸಂಜೆ 6.00 ಕ್ಕೆ:
ಪೂಜ್ಯ ನಿರ್ಭಯಾ ನಂದ ಸರಸ್ವತೀ ಸ್ವಾಮೀಜಿ,
ಶ್ರೀ ರಾಮಕೃಷ್ಣ -ವಿವೇಕಾನ೦ದಾಶ್ರಮ ,ಗದಗ್ ಮತ್ತು ಬಿಜಾಪುರ 
ಶ್ರೀ ವೀರೆಶಾನಂದ ಸರಸ್ವತೀ ಸ್ವಾಮೀಜಿ,
ಶ್ರೀ ರಾಮಕೃಷ್ಣ -ವಿವೇಕಾನ೦ದಾಶ್ರಮ,ತುಮಕೂರು 


ತಮಗೆ ಆದರದ ಸ್ವಾಗತ
-ಹರಿಹರಪುರ ಶ್ರೀಧರ್
---------------------------------------------------------------------------------------


Saturday, October 22, 2011

ವಿವೇಕ ಚೂಡಾಮಣಿ -ಭಾಗ-೧೪


ಗ್ರಂಥದ ಮುಂದುವರಿಕೆ..

सम्यगास्थापनं बुद्धेः शुद्धे ब्रह्मणि सर्वदा ।
तत्समाधनमित्युक्तं  न तु चित्तस्य लालनम् ||२७||

ಸಮ್ಯಗಾಸ್ಥಾಪನಂ ಬುದ್ಧೇಃ ಶುದ್ಧೇ ಬ್ರಹ್ಮಣಿ ಸರ್ವದಾ|
(= ಬುದ್ಧಿಯನ್ನು ಶುದ್ಧ ಬ್ರಹ್ಮನಲ್ಲಿ ಯಾವಾಗಲೂ ಚೆನ್ನಾಗಿ ಇಟ್ಟುಕೊಳ್ಳುವುದು)
ತತ್ ಸಮಧಾನಮಿತ್ಯುಕ್ತಂ ನ ತು ಚಿತ್ತಸ್ಯ ಲಾಲನಮ್ ||೨೭||
(=ಅದನ್ನು (ಇದನ್ನು) ಸಮಾಧಾನವೆಂದು ಹೇಳಿದೆಯೇ ಹೊರತು ಚಿತ್ತ ಪೋಷಣೆಯನ್ನು ಅಲ್ಲ)

ಶುದ್ಧ ಬ್ರಹ್ಮದಲ್ಲಿ ಬುದ್ಥಿಯನ್ನು ಸ್ಥಿರಗೊಳಿಸುವುದು ಎಂದರೆ ಧರ್ಮಾತೀತವಾದ ನಿರ್ಗುಣ ಬ್ರಹ್ಮನಲ್ಲಿ ಬುದ್ಧಿಯನ್ನು ನಿಶ್ಚಯಗೊಳಿಸಿಕೊಳ್ಳುವುದು (ಸಮ್ಯಕ್ =ಚೆನ್ನಾಗಿ , ಆಸ್ಥಾಪನಂ = ನೆಲೆಗೊಳಿಸುವುದು) ಮತ್ತು ಇದನ್ನೇ ಸಮಾಧಾನವೆಂದು ಹೇಳಲ್ಪಟ್ಟಿದೆ. ಮನಸ್ಸಿನ ಲಾಲನೆಯು ಸಮಾಧಾನ (ಸಮ್ಯಕ್ =ಚೆನ್ನಾಗಿ, ಆಧಾನಂ= ಇಡುವುದು) ಅಲ್ಲ ಎಂದು ಮೇಲಿನ ಶ್ಲೋಕದಲ್ಲಿ ತಿಳಿಸುತ್ತಾರೆ. ಸಮಾಧಾನ ಎನ್ನುವುದಕ್ಕೆ ಶಾಂತಿ ಎನ್ನುವ ಅರ್ಥವಿದ್ದರೂ ಸಹ ಇಲ್ಲಿ, ಬ್ರಹ್ಮನಲ್ಲಿ  ನಿಶ್ಚಯಸ್ವರೂಪವಾದ ಬುದ್ಧಿಯನ್ನು ನೆಲೆಗೊಳಿಸಿಕೊಳ್ಳುವುದನ್ನು ಸಮಾಧಾನ ಎಂದು ಹೇಳಿರುತ್ತಾರೆ. ’ಚಿತ್ತಸ್ಯ ಲಾಲನಮ್’ ಎಂದರೆ ಮನಸ್ಸಿನ ಲಾಲನೆ ಅಥವಾ ಮನಸ್ಸಿಗೆ ಮುದವಾಗುವಂತೆ ನೆಡೆದುಕೊಳ್ಳುವುದು ಎಂಬ ಅರ್ಥದಲ್ಲಿ ಹೇಳಿರುತ್ತಾರೆ. ಚಿತ್ತ ಎನ್ನುವುದಕ್ಕೆ ಸ್ಮೃತಿ ಎನ್ನುವ ಅರ್ಥವೂ ಬರುವುದರಿಂದ ಸ್ಮೃತಿ ಅಥವಾ ನೆನಪು ಎನ್ನುವುದು ಪ್ರಮಾಣೀಕೃತವಾಗಬಹುದಾದ ಭೂಮಿಕೆಯಾಗುವುದಿಲ್ಲ  ಎಂದು ತಾರ್ಕಿಕರು ಹೇಳುತ್ತಾರೆ . ನೆನಪು ಎನ್ನುವುದೇ ಎಲ್ಲೋ ಸ್ವಲ್ಪ ಹಾಗೆ ಅಥವಾ ಹೀಗೆ ಆಗಿರಬಹುದಾದ ಎನ್ನುವ ಅರ್ಥವನ್ನು ಹೊರಡಿಸುವುದರಿಂದ ಸ್ಮೃತಿಪ್ರಮಾಣವನ್ನು ನೆಚ್ಚಿಕೊಳ್ಳುವುದು ಹಿತವಲ್ಲ ಆದುದರಿಂದ ಗತಕಾಲದ ನೆನಪುಗಳಲ್ಲೇ ಕಾಲ ಕಳೆಯುವುದನ್ನು ಬಿಟ್ಟು ವಾಸ್ತವದ ಅಂದರೆ ಅನುಭವದಿಂದ ತಿಳಿಯಬಹುದಾದ ಆತ್ಮಾರ್ಥದಲ್ಲಿ ಬುದ್ಧಿಯನ್ನು ನೆಲೆಗೊಳಿಸಿಕೊಳ್ಳುವುದು ಹಿತವಾದುದು ಎಂದು ಹೇಳುತ್ತಾರೆ.
ಮಕ್ಕಳು ಸಿಹಿತಿಂಡಿ ಬೇಕೆಂದು ಅಳುತ್ತಾ ಕುಳಿತಾಗ ಮಗುವಿನ ಮನಸ್ಸನ್ನು ಶಾಂತಗೊಳಿಸಲು ಸಿಹಿತಿಂಡಿಯನ್ನು ಕೊಟ್ಟು ಉಪಚರಿಸುತ್ತೇವೆ. ಇನ್ನೆಂದೂ ಆ ಮಗುವು ಸಿಹಿಯನ್ನು ಕೇಳುವುದೇ ಇಲ್ಲ ಎನ್ನಲು ಸಾಧ್ಯವೆ ?. ಮನಸಿನ ಹೊಯ್ದಾಟಗಳಿಗೆ ಮಿತಿ ಎಂಬುದು ಇರುವುದಿಲ್ಲ, ಆದುದರಿಂದ ಮನಸಿನ ಲಾಲನೆಯನ್ನು ಬಿಟ್ಟು ಪ್ರಯತ್ನಪೂರ್ವಕವಾಗಿ ಬುದ್ಧಿಯನ್ನು ಬ್ರಹ್ಮನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳುತ್ತಾರೆ.
ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು ತಮ್ಮ ವ್ಯಾಖ್ಯಾನದಲ್ಲಿ ಹೀಗೆ ಹೇಳುತ್ತಾರೆ.
"ಶುಭಾಶುಭಾಭ್ಯಾಂ ಮಾರ್ಗಾಭ್ಯಾಂ ವಹಂತೀ ವಾಸನಾಸರಿತ್ |
ಪೌರುಷೇಣ ಪ್ರಯತ್ನೇನ ಯೋಜನೀಯಾ ಶುಭೇ ಪಥಿ || " .

ವಾಸನಾ(ಬಯಕೆಗಳು, ಅವಿದ್ಯೆ, ಇತ್ಯಾದಿ) ಎನ್ನುವ ನದಿಯು ಎಲ್ಲಾ (ಒಳಿತು-ಕೆಡುಕು) ದಾರಿಯಲ್ಲಿಯೂ ಹರಿಯುತ್ತಿರುತ್ತದೆ. ಪುರುಷ ಪ್ರಯತ್ನದಿಂದ ಅದನ್ನು ಸರಿಯಾದ ದಾರಿಯಲ್ಲಿ ಹರಿಯುವಂತೆ ಮಾಡಿಕೊಳ್ಳಬೇಕು ಎಂದು ವ್ಯಾಖ್ಯಾನಿಸುತ್ತಾರೆ. ಹರಿಯುವ ನದಿಗೆ ರಾಮನ ಮನೆಯಾದರೇನು ? ರಾವಣನ ಮನೆಯಾದರೇನು ?. ಪ್ರವಾಹ ಬರುವಾಗ ಅದು ಹರಿದದ್ದೇ ದಾರಿ ಎಂದಾಗುತ್ತದೆ. ಅಂತಹ ನದಿಯನ್ನು (ವಾಸನಾ ಸರಿತ್) ಸ್ವಪ್ರಯತ್ನದಿಂದ ಬೇಕಾದ ದಾರಿಯಲ್ಲಿ ಹರಿಯುವಂತೆ ಮಾಡಿಕೊಳ್ಳುವುದು ಜ್ಞಾನಿಯ ಲಕ್ಷಣ ಎನ್ನಬಹುದು. ಎಲ್ಲವನ್ನೂ ದೇವರೇ ಮಾಡಿಬಿಡುತ್ತಾನೆ ಎನ್ನುವುದಾದರೆ ಸ್ವಪ್ರಯತ್ನ, ಸ್ವಸಾಮರ್ಥ್ಯ ಎನ್ನುವುದಕ್ಕೆ ಬೆಲೆ ಹುಟ್ಟುತ್ತದೆಯೇ ? . ಒಳ್ಳೆಯದನ್ನು ಮಾಡುವುದಕ್ಕೆ ದೇವರೇ ಬುದ್ಧಿಯನ್ನು ಕೊಡುತ್ತಾನೆ ಎನ್ನುವುದಾದರೆ ಕೊಟ್ಟಿರುವ ಬುದ್ಧಿಯನ್ನು ಇನ್ನೂ ಏಕೆ ಬಳಸಿಲ್ಲ ಎಂದು ಕೇಳಬೇಕಾಗುತ್ತದೆ !. ( ಕೈಲಾಸಂ ಹೇಳುತ್ತಾರೆ: "ಅವರು ರೋಗಿಯು ಚೇತರಿಸಿಕೊಳ್ಳಲೆಂದು ದೇವರ ಮೇಲೆ ಭಾರ ಹಾಕಿದರು, ಆ ಭಾರವನ್ನು ದೇವರು ನಾಲ್ಕು ಜನರ ಮೇಲೆ ಹಾಕಿದ " ಎಂದು !). ಪುರುಷ ಪ್ರಯತ್ನ ಎನ್ನುವುದು ಮನಸಿನ ಲಾಲಸೆಗಳನ್ನು ಹತ್ತಿಕ್ಕುವುದಕ್ಕೆ ಅಗತ್ಯವಾದುದು ಎನ್ನಬಹುದು.

ಸಾಧನ ಚತುಷ್ಟಯದಲ್ಲಿ ಮೂರನೆಯ ಸಾಧನವಾದ ಶಮದಮಾದಿ ಆರುಗುಣಗಳು ಇಲ್ಲಿಗೆ ಮುಗಿಯುತ್ತದೆ

ನಾಲ್ಕನೆಯ ಸಾಧನವು ಮುಮುಕ್ಷುತ್ವ

अहंकारादिदेहान्तान् बन्धानज्ञानकल्पितान् ।
स्वस्वरूपावबोधेन मोक्तुमिच्छा मुमुक्षुता ॥२८॥

ಅಹಂಕಾರಾದಿ-ದೇಹಾಂತಾನ್ ಬಂಧಾನಜ್ಞಾನ ಕಲ್ಪಿತಾನ್ |
(=ಅಹಮಿಕೆಯಿಂದ ಮೊದಲಾಗಿ ದೇಹದವರೆಗೆ ಅಜ್ಞಾನದಿಂದ ಕಲ್ಪಿತವಾಗಿರುವ ಬಂಧನಗಳು)
ಸ್ವಸ್ವರೂಪಾವಬೋಧೇನ ಮೋಕ್ಷುಮಿಚ್ಛಾ ಮುಮುಕ್ಷುತಾ ||೨೮||
(=ತನ್ನ ಅರಿವು ಅಥವಾ ಆತ್ಮಸಾಕ್ಷಾತ್ಕಾರದ ಜ್ಞಾನದಿಂದ (ಬಂಧನಗಳಿಂದ) ಬಿಡುಗಡೆಯನ್ನು ಬಯಸುವುದೇ ಮುಮುಕ್ಷುತ್ವವು)

ಅಹಂಕಾರದಿಂದ ಮೊದಲಾಗಿ ದೇಹದವರೆವಿಗೆ ಅಜ್ಞಾನದಿಂದ ಕಲ್ಪಿತವಾಗಿರುವ ಬಂಧನಗಳನ್ನು ತನ್ನನ್ನು ತಾನು ತಿಳಿಯುವುದರಿಂದ ಬಿಡಿಸಿಕೊಳ್ಳುವ ಬಯಕೆಯನ್ನು ಮುಮುಕ್ಷುತ್ವ ಎಂದು ಹೇಳುತ್ತಾರೆ.
ಅಹಂಕಾರ ಎಂದರೆ ಗರ್ವ ಎಂಬ ಅರ್ಥವು ಬರುವುದಿಲ್ಲ. ಕಣ್ಣು ತುಂಬ ಸುಂದರವಾಗಿಯೇನೋ ಇದೆ, ಆದರೆ ಅದು ನನ್ನ ಕಣ್ಣು ಎಂಬ ಅಂತಃಕರಣಪೂರಕವಾದ ಅಹಂಕಾರವು ಇರುತ್ತದೆ. ಅಂತಃಕರಣದ ಅಹಂಕಾರಕ್ಕೆ ಅಜ್ಞಾನವೇ ಬಂಧನ. ಅಜ್ಞಾನ ಎನ್ನುವುದು ಅಧ್ಯಾಸ(ಹಾವು ಹಗ್ಗದ ತತ್ವ) ದಿಂದ ಬಂದಿರುವುದು. ನಂತರ ಮನಸ್ಸು, ಬುದ್ಧಿ, ಜ್ಞಾನೇಂದಿಯಗಳು, ಕರ್ಮೇಂದ್ರಿಯಗಳು ಮತ್ತು ಇವುಗಳಿಂದ ಆಗಿರುವ ದೇಹ. ಇವೆಲ್ಲಕ್ಕೂ ಬಂಧನಗಳು ಇದ್ದೇ ಇರುವುವು.  ಸ್ವಸ್ವರೂಪದ ಅನುಭವದಿಂದ ಅಥವಾ ತನ್ನನ್ನು ತಾನು ತಿಳಿಯುವುದರಿಂದ(ಆತ್ಮ ಸಾಕ್ಷಾತ್ಕಾರದಿಂದ) ಹುಟ್ಟುವ ಜ್ಞಾನವು ಸರ್ವವೂ ಆತ್ಮನೇ ಆಗಿದ್ದಾನೆ ಎಂದು ಸಿದ್ಧಪಡಿಸುವುದರಿಂದ ಅಂತಹ ಬಂಧನಗಳಿಂದ ಬಿಡಿಸಿಕೊಳ್ಳಲು ಹುಟ್ಟುಬ ಬಯಕೆಯನ್ನೇ ಮುಮುಕ್ಷುತ್ವ ಎಂದು ವಿವರಿಸುತ್ತಾರೆ.  ಎಲ್ಲವೂ ಆತ್ಮನೇ ಆಗಿರುವುದರಿಂದ ಆತ್ಮನಿಗಿಂತಲೂ ಭಿನ್ನವಾಗಿ ಕಂಡುಬರುವ ಯಾವ ವಸ್ತುವನ್ನೂ ಬಯಸದಿರುವುದು ಬಂಧನದಿಂದ ಬಿಡುಗೊಂಡಂತೆ ಮತ್ತು ಮುಮುಕ್ಷುತ್ವಕ್ಕೆ ರಹದಾರಿಯಂತೆ ಎಂದು ಹೇಳಬಹುದು. ಬಂಧನದಿಂದ ಬಿಡುಗಡೆ ಹೊಂದಲು ಇಕ್ಕಟ್ಟಾದ ಕೋಣೇಯಲ್ಲಿ ಉಸಿರಾಡುವುದಕ್ಕೆ  ಎಷ್ಟು ತೀವ್ರತೆ ಬೇಕೋ ಅಂತಹ ತೀವ್ರತೆಯೇ ಬೇಕು ಎನ್ನಬಹುದು. ಶಮದಮಾದಿಗುಣಸಂಪನ್ನನಿಗೇ ಮುಮುಕ್ಷುತ್ವವು ಒಲಿದು ಬರುವುದು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿರುತ್ತದೆ

ಇಲ್ಲಿಗೆ ಸಾಧನ ಚತುಷ್ಟಯವು ಮುಗಿಯುತ್ತದೆ. ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.


ವಂದನೆಗಳೊಂದಿಗೆ....

Thursday, October 20, 2011

ಯೋಚಿಸಲೊ೦ದಿಷ್ಟು...೪೩

೧. ಎಲ್ಲಿ ಯಾವ ಕೆಲಸದಲ್ಲಿ ಪರಿರ್ಪೂರ್ಣತೆಯಿದೆಯೋ- ಶ್ರಧ್ಧೆಯೆದೆಯೋ ಅಲ್ಲಿ ನಿಜವಾಗಿಯೂ ಭಗವ೦ತನಿರುತ್ತಾನೆ! ಡಾ|| ಡಿ.ವೀರೇ೦ದ್ರ ಹೆಗ್ಗಡೆ

೨. ದಾನ ಮಾಡುವವನು ಇವತ್ತೇ ಕೊಟ್ಟು ಬಿಡಬೇಕು. ನಾಳೆ ಅ೦ತಹ ಅವಕಾಶ ಒದಗಿ ಬರದೇ ಇರಬಹುದು!!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

೩.ಮಾನವ ಜೀವನವೇ ಅತ್ಯ೦ತ ಆಸ್ದಕ್ತಿದಾಯಕವಾದುದು.. ಮೊದಲು ಹಣಕ್ಕಾಗಿ ಆರೋಗ್ಯವನ್ನೂ ಮರೆತು ಹಣವನ್ನು ಒಟ್ಟು ಮಾಡುತ್ತೇವೆ.. ಆನ೦ತರ ಉತ್ತಮ ಆರೋಗ್ಯವನ್ನು ಪಡೆಯಲು ಆ ಗಳಿಸಿದ ಹಣವನ್ನೆಲ್ಲಾ ಕಳೆಯುತ್ತೇವೆ!!

೪.ನಮ್ಮನ್ನು ಯಾವಾಗಲೂ ನೋಡಲು ಬಯಸದವರ ಕ೦ಗಳತ್ತಲೇ ದೃಷ್ಟಿ ಹರಿಸುವುದಕ್ಕಿ೦ತ, ನಮ್ಮನ್ನು ನಿಜವಾಗಿಯೂ ನೋಡಬಯಸುವವರ ಕ೦ಗಳತ್ತ ನಮ್ಮ ಗಮನ ಹರಿಯಬಿಡುವುದು ಲೇಸು!!

೫. ಸತ್ಯವೆ೦ಬುದು ಯಾವಾಗಲೂ ಸದಾ ತೆರೆದ ಪುಸ್ತಕದ೦ತೆ!ಅದನ್ನು ಮರೆಮಾಚಲು ಸಾಧ್ಯವಿಲ್ಲ!! ಸತ್ಯಕ್ಕೆ ಯಾವಾಗಲೂ ಒ೦ದೇಮುಖ ಇರುವುದಿಲ್ಲ. ಸತ್ಯವನ್ನು ಕಾಣುವವರ ಹಾಗೂ ಅರ್ಥೈಸಿಕೊಳ್ಳುವವರ ಮೇಲೆ ಅದರ ಮುಖಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ!! ಸತ್ಯವನ್ನು ಒಪ್ಪಿಕೊಳ್ಳುವ ಯಾ ಒಪ್ಪಿಕೊಳ್ಳದೇ ಇರುವ ಆಯ್ಕೆ ಮಾತ್ರ ನಮ್ಮದು!!

೬. ಶರೀರದ೦ತೆ ಬುಧ್ಧಿಗೂ ಮುಪ್ಪು ಅಡರುವುದರಿ೦ದ ನಿರ್ಣಾಯಕ ಸ್ಥಾನದಲ್ಲಿರುವವರು ಅಜೀವ ಪರ್ಯ೦ತ ಅಧಿಕಾರದಲ್ಲಿರಬಾರದು- ಅರಿಸ್ಟಾಟಲ್

೭.ಈ ಪ್ರಪ೦ಚದಲ್ಲಿ ವಾಸ್ತವವನ್ನು ಅರಿಯುವವರೆಗೂ ಅಪಾಯ ತಪ್ಪಿದ್ದಲ್ಲ!

೮.ಮೆದುಳು ಒ೦ದು ಹೊಟ್ಟೆಯಿದ್ದ೦ತೆ ಎ೦ದು ಭಾವಿಸಿದರೆ.ಅದರೊಳಗೆ ಎಷ್ಟು ತು೦ಬುತ್ತದೆ ಎನ್ನುವುದಕ್ಕಿ೦ತ , ಅದು ಎಷ್ಟು ಜೀರ್ಣಿಸಿಕೊಳ್ಳುತ್ತದೆ ಎನ್ನುವುದೇ ಅತಿ ಮುಖ್ಯ- ಗೌರೀಶ್ ಕಾಯ್ಕಿಣಿ

೯. ಕೆಳಗಿನವರ ಮೇಲೆ ಸವಾರಿ ಮಾಡುವವನು ಮೇಲಿನವರ ಕಾಲು ನೆಕ್ಕುತ್ತಾನೆ!!- ಬೀಚಿ

೧೦.ದೊರೆತನಕ್ಕೆ ಎಷ್ಟು ಮ೦ದಿ ಆಪ್ತರಿರುತ್ತಾರೋ ಅಷ್ಟೇ ಮ೦ದಿ ಹಗೆಗಳೂ ಇರುತ್ತಾರೆ!

೧೧. ಅನುಭವವೇ ಮನುಷ್ಯನ ಪಾಠಶಾಲೆ!!

೧೨.ನಮ್ಮ ಮೂಲಭೂತ ಅವಶ್ಯಕತೆಗಳನ್ನೆಲ್ಲಾ ಬೇರೆಯವರು ಪೂರೈಸುತ್ತಾರೆ೦ದು ಕಾಯುತ್ತಿದ್ದರೆ ನಿರಾಶೆ ತಪ್ಪಿದ್ದಲ್ಲ!

೧೩.ಎಲ್ಲಿ ಆದರ್ಶ ಇದೆಯೋ ಅಲ್ಲಿ ಕೃಷಿ ಇರಬೇಕು.. ಮಾತಿರಬಾರದು! ಕೃತಿ ಇಲ್ಲದ ಶಬ್ಧಗಳು ಆದರ್ಶವನ್ನು ಕೊಲೆ ಮಾಡುತ್ತವೆ!!

೧೪. ಸೌ೦ದರ್ಯವೆನ್ನುವುದು ನೋಡುವವರ ಕಣ್ಣುಗಳನ್ನು ಅವಲ೦ಬಿಸಿರುತ್ತದೆ!

೧೫.ಸೃಷ್ಟಿ ಮಾಡಲು ನಮಗೆ ಸಾಧ್ಯವಿಲ್ಲದಿರುವಾಗ ಹಾಳು ಮಾಡಲೂ ನಮಗೆ ಅಧಿಕಾರವಿಲ್ಲ!!

Thursday, October 13, 2011

ವಿವೇಕ ಚೂಡಾಮಣಿ-ಭಾಗ-೧೩



ಗ್ರಂಥದ ಮುಂದುವರಿಕೆ :-

सहनं सर्वदुखानां अप्रतीकारपूर्ककम् ।
चिन्ताविलापरहितं सा तितिक्षा निगद्यते ॥२५॥

ಸಹನಂ ಸರ್ವದುಃಖಾನಾಂ ಅಪ್ರತೀಕಾರಪೂರ್ವಕಮ್ |
(=ದುಃಖಗಳಿಗೆ ಪ್ರತಿಕ್ರಿಯೆ ತೋರದೆ (ದೂರದೆ) ಎಲ್ಲವನ್ನೂ ಸಹಿಸಿಕೊಳ್ಳುವುದು)
ಚಿಂತಾವಿಲಾಪರಹಿತಂ ಸಾ ತಿತಿಕ್ಷಾ ನಿಗದ್ಯತೇ ||೨೫||
(=ಚಿಂತೆ-ಶೋಕಗಳಿಂದ ಮುಕ್ತನಾಗುವುದೇ ತಿತಿಕ್ಷೆಯು)

ನಾಲ್ಕನೆಯದು ತಿತಿಕ್ಷಾ

ಹೊರಗಿನ ವಿಷಯಗಳು ಯಾವಾಗ ಚಿತ್ತಕ್ಕೆ ಬಾಧಿಸುವುದಿಲ್ಲವೋ ಆಗ ಚಳಿ-ಮಳೆ-ಬಿಸಿಲು ಮುಂತಾದವುಗಳಲ್ಲಿ ವ್ಯತ್ಯಾಸವು ತಿಳಿಯುವುದಿಲ್ಲ, ದ್ವಂದ್ವವೂ ಇರುವುದಿಲ್ಲ.  ಕಾಲಕ್ಕನುಸಾರವಾಗಿ ಅವುಗಳು ವಿಕೋಪದಿಂದ ಬಂದರೂ ಸಹ ಅದನ್ನೂ ಸಹಿಸಿಕೊಳ್ಳುವುದು ತಿತಿಕ್ಷೆ ಎಂದು ಮೇಲಿನ ಶ್ಲೋಕದಲ್ಲಿ ಆಚಾರ್ಯರು ಹೇಳಿರುತ್ತಾರೆ. ಸಹಿಸಿಕೊಂಡಿರುವುದು ಎಂದರೆ , ಬಂದೊದಗಿದ್ದಕ್ಕೆ ಸಾಕಷ್ಟು ಗೊಣಗಿ, ಸಿಡುಕಿ ನಂತರ ’ಅಯ್ಯೋ ನನಗ್ಯಾಕೆ’ ಎಂದು ಸುಮ್ಮನಾಗುವುದಲ್ಲ ! , ಬದಲಾಗಿ ಅಪ್ರತೀಕಾರಪೂರ್ವಕವಾಗಿ ಎಂದರೆ ಯಾವುದೇ ಪ್ರತಿಕ್ರಿಯೆಯನ್ನು ತೋರದೆ ಆಗಿದ್ದಕ್ಕೆ ಚಿಂತಿಸದೆ, ಶೋಕಿಸದೆ ದುಃಖಗಳನ್ನು ಸಹಿಸಿಕೊಂಡಿರುವುದು ಎಂದು ಅರ್ಥ.  ಪ್ರತೀಕಾರವನ್ನು ತೋರದೆ ಸಹಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸವೇನೋ ನಿಜ ಆದರೆ ಅಂತಹ ಕಷ್ಟದ ಕೆಲಸವನ್ನೇ ಆತ್ಮಾಭ್ಯಾಸಿಯು ಮಾಡಬೇಕಿರುವುದು ಎನ್ನುವುದು ಮೇಲಿನ ವಾಕ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.  ಇಲ್ಲಿ ಗಾಂಧೀಜಿಯವರ ತತ್ವವೊಂದನ್ನು ನೆನಪಿಸಿಕೊಳ್ಳಬಹುದು. "ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರು ಬದಲಾಗಿ ನೀನು ಹೊಡೆಯಬೇಡ" ಎಂಬ ಮಾತು. ಸಂತರ ಗುಣವೇ ಇದು ಎನ್ನಬಹುದು.  ಅಂತರಂಗ ಮತ್ತು ಬಹಿರಂಗಗಳೆರಡರಲ್ಲೂ ಸಹನಶಕ್ತಿ ಇರಬೇಕಾಗುತ್ತದೆ. ಗೆಳೆಯರೊಬ್ಬರು ಲಕ್ಷ ರೂಪಾಯಿ ಪಡೆದುಕೊಂಡು ಸಮಯಕ್ಕೆ ಸರಿಯಾಗಿ ಕೊಡದಿದ್ದಾಗ ಬಾಯಿ ಮಾತಿಗೆ ’ಇರಲಿ ಬಿಡಯ್ಯಾ ನಿಧಾನವಾಗಿ ಕೊಡುವಿಯಂತೆ’ ಎಂದು ಹೇಳಿ ಮನಸಿನಲ್ಲಿ ’ಇವನ ಮನೆ ಹಾಳಾಗ’ ಎಂದು ಜರಿಯುವುದು ಸಹನೆಯ ಲಕ್ಷಣವೇನೂ ಅಲ್ಲ !.  ದುಃಖ-ಶೋಕಾದಿಗಳಿಂದ ಕೂಡಿರುವ ಮನಸ್ಸಿಗೆ ಆತ್ಮವಿಚಾರವು ದಕ್ಕುವುದಿಲ್ಲ ಎಂದು ಹೇಳುತ್ತಾ ಸರ್ವದುಃಖಗಳನ್ನೂ ಸಹಿಸಿಕೊಂಡು, ನುಂಗಿಕೊಂಡು ಸಾಧನೆ ಮಾಡಬೇಕು ಎಂದು ತಿಳಿಸುತ್ತಾರೆ.
’ದುಃಖಾನಾಂ’ ಎಂದು ಬಹುವಚನದಲ್ಲಿ ಹೇಳಿರುವುದು ’ತಾಪತ್ರಯ’ ಗಳ ಕುರಿತಾಗಿ.  ಅಧಿಭೌತಿಕ, ಅಧಿದೈವಿಕ ಮತ್ತು ಆಧ್ಯಾತ್ಮಿಕ ವಾಗಿ ಒದಗಿ ಬರುವ ಹೊಸ-ಹೊಸ (ನವನವ ಜನಿತ) ದುಃಖಗಳನ್ನು ತಾಪತ್ರಯಗಳು ಎಂದು ಹೇಳಲಾಗಿದೆ. ಭೌತಿಕವಾಗಿ (Physical), ಮಾನಸಿಕವಾಗಿ(Menatal) ಮತ್ತು ಆಕಸ್ಮಿಕವಾಗಿ(Accidental) ಒದಗಿ ಬರುವ ಯಾವುದೇ ದುಃಖಶೋಕಾದಿಗಳಿಗೂ ಬಾಗದೆ , ಪ್ರತಿಕ್ರಿಯೆಯನ್ನೂ ತೋರದೆ ಸಹಿಸಿಕೊಂಡು (ಸಹಿಕೊಳ್ಳುವುದನ್ನೂ ಹೇಳಿಕೊಳ್ಳದೆ !)  ಸಾಧನೆಯ ಹಾದಿಯಲ್ಲಿ ಸಾಗುವುದನ್ನು ತಿತಿಕ್ಷೆ ಎಂದು ನಿರೂಪಿಸುತ್ತಾರೆ. ಹೀಗೆ ಸಹಿಸಿಕೊಳ್ಳುವುದು ಅಭ್ಯಾಸವಾಗಿಬಿಟ್ಟರೆ ಅದು ಸಾಧಕನ ಸಹಜ ಲಕ್ಷಣವೇ ಆಗಿಬಿಡುತ್ತದೆ.  ಡಯಾಬಿಟಿಸ್ಸಿಗೆ ಉಪ್ಪು-ಸಿಹಿ ಯನ್ನು ತಿನ್ನದೆ ಹತೋಟಿಯಲ್ಲಿಟ್ಟುಕೊಂಡಿರಬೇಕು ಎಂದು ವೈದ್ಯರು ಹೇಳುವುದನ್ನು ಅಂತರಂಗ-ಬಹಿರಂಗಗಳೆರಡಲ್ಲೂ ಸಾಧಿಸುತ್ತಾ ಬಂದಾಗ ಮುಂದೊಂದು ದಿವಸ ಸಿಹಿ ತುಂಬಿದ ಕೊಳಗವನ್ನೇ ಮುಂದೆ ತಂದಿಟ್ಟರೂ ಅದರ ಕಡೆಗೆ ಗಮನ ಹರಿಯಲಾರದು !.  ಹೃದಯದ ಕಾಯಿಲೆಯಿದ್ದವರಿಗೆ ಕೊಬ್ಬಿನಂಶವನ್ನು ಹೆಚ್ಚು ಸೇವಿಸಬೇಡಿ ಎಂದು ಹೇಳಿರುತ್ತಾರೆ. ಅವರೇನೋ ಬಾಹ್ಯವಾಗಿ ತಿನ್ನುವುದನ್ನು ಬಿಟ್ಟಿರುತ್ತಾರೆ ಆದರೆ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿರುತ್ತಾರೆ. ಇದು ಮನುಷ್ಯನನ್ನು ಮಾನಸಿಕವಾಗಿ ಕುಗ್ಗಿಸುತ್ತದೆ.  ಇಲ್ಲೂ ಸಹ ’ಶಮ’ ಎನ್ನುವುದು ಸಾಧಿತವಾಗಿದ್ದಾಗ ತಿತಿಕ್ಷೆಯು ತಾನೇ ಬರುವುದರಿಂದ ಇವೆಲ್ಲವೂ ಒಂದೇ ದಾರಕ್ಕೆ ಪೋಣಿಸಿರುವ ಹೂವುಗಳು ಎಂದು ತಿಳಿಯಬೇಕಾಗುತ್ತದೆ.


ಐದನೆಯದು ಶ್ರದ್ಧೆ

शास्त्रस्य गुरुवाक्यस्य सत्यबुद्ध्यावधारणा ।
सा श्रद्धा कथिता सद्भिर्यया वस्तूपलभ्यते ॥२६॥

ಶಾಸ್ತ್ರಸ್ಯ ಗುರುವಾಕ್ಯಸ್ಯ ಸತ್ಯಬುದ್ಧ್ಯಾವಧಾರಣಾ |
(= ಶಾಸ್ತ್ರದಲ್ಲೂ ಗುರುವಾಕ್ಯದಲ್ಲೂ ಧೃಡವಾದ ಗ್ರಹಿಕೆಯನ್ನಿಟ್ಟುಕೊಳ್ಳುವುದು)
ಸಾ ಶ್ರದ್ಧಾ ಕಥಿತಾ ಸದ್ಭಿಃ ಯಯಾ ವಸ್ತೂಪಲಭ್ಯತೇ ||೨೬||
(= ಆತ್ಮವಸ್ತುವಿನ ಸಿದ್ಧಿಗಾಗಿ ನಂಬಿಕೆಯನ್ನಿಟ್ಟುಕೊಳ್ಳುವುದೇ ಶ್ರದ್ಧೆಯು)

’ಶಾಸ್ತ್ರಗಳಲ್ಲೂ ಗುರುವಿನ ಮಾತಿನಲ್ಲೂ ಸತ್ಯಬುದ್ಧಿಯಿಂದ ನಂಬಿಕೆಯನ್ನಿಟ್ಟುಕೊಂಡು ಆತ್ಮವಸ್ತುವಿನ ಚಿಂತನೆಯಲ್ಲಿ ತೊಡಗುವುದನ್ನು ಶ್ರದ್ಧೆ ಎಂದು ಸತ್ಪುರುಷರು ಹೇಳುತ್ತಾರೆ ’ ಎಂದು ಆಚಾರ್ಯರು ಶ್ರದ್ಧೆಯ ನಿರೂಪಣೆಯನ್ನು ಮಾಡುತ್ತಾರೆ.  ಬ್ರಹ್ಮದ ವಿಷಯದಲ್ಲಿ ಶಾಸ್ತ್ರವೂ ಗುರುವೂ ಹೇಳುವುದನ್ನು ಸತ್ಯವೆಂಬ ನಿಶ್ಚಿತ ಬುದ್ಧಿಯಿಂದ ಗ್ರಹಿಸಿ ಇಟ್ಟುಕೊಳ್ಳುವುದನ್ನು ಶ್ರದ್ಧೆ ಎಂದು ಹೇಳುತ್ತಾರೆ. ’ಶ್ರದ್ಧಾವಾನ್ ಲಭತೇ ಜ್ಞಾನಂ’ ಎನ್ನುವ ವಾಕ್ಯ ಬಹು ಪ್ರಸಿದ್ಧವಾದುದು. ಗೀತೆಯಲ್ಲೂ ಸಹ " ಶ್ರದ್ಧೆಯಿಲ್ಲದಿರುವ ಮನುಷ್ಯರು ಧರ್ಮವನ್ನೂ ಬಿಟ್ಟು ನನ್ನನ್ನೂ ಹೊಂದದೆ ಮತ್ತೆ-ಮತ್ತೆ ಈ ಇಹದ ಬಂಧನಕ್ಕೆ ಬೀಳುತ್ತಿದ್ದಾರೆ (೯.೩)" ಎಂಬ ವಾಕ್ಯವು ಬರುತ್ತದೆ. ಇಲ್ಲಿ ಶಾಸ್ತ್ರ ಎಂದರೆ ’ತತ್ವಮಸಿ’ ’ಪ್ರಜ್ಞಾನಾಂ ಬ್ರಹ್ಮ’  ಮುಂತಾದ ಔಪನಿಷದ ಶಾಸ್ತ್ರಗಳೆಂದು ಸದ್ಗುರುಗಳು ವ್ಯಾಖ್ಯಾನಿಸಿರುತ್ತಾರೆ. ಇದನ್ನು ಅನುಸರಿಸುವುದರಿಂದ ಬರುವುದೇ ಗುರುವಾಕ್ಯ.  ಬ್ರಹ್ಮವು ಸತ್ಯ ಮತ್ತು ನನ್ನಲ್ಲೇ ಪರಬ್ರಹ್ಮನಿದ್ದಾನೆ ಎಂಬ ಅನುಭವವನ್ನು ಪಡೆದುಕೊಳ್ಳುವುದನ್ನೇ ’ಸತ್ಯ’ ಎಂಬ ಪದದಿಂದ ಸೂಚಿಸಿದ್ದಾರೆ ಎಂದು ಹೇಳುತ್ತಾರೆ. ಅಳಿಯುವ ವಿಷಯವೆಲ್ಲವೂ ಅಸತ್ಯ ಅಥವಾ ಮಿಥ್ಯೆ ಎನ್ನುತ್ತಾರೆ. ಮಿಥ್ಯೆ ಎಂದರೆ ಸಂಪೂರ್ಣ ಅಸತ್ಯವೆಂದು ಗ್ರಹಿಸದೆ ’ಮಿಥ್ಯಾವಚನಃ ಅನಿರ್ವಚನೀಯ ಶಬ್ದಃ’ ಎಂದು ತಿಳಿಯಬೇಕಾಗುತ್ತದೆ. ಯಾವುದನ್ನು ವಿವರಿಸಲಾಗುವುದಿಲ್ಲವೋ ಅಥವಾ ಯಾವುದು ಸ್ಥಿತ್ಯಂತರಗಳಿಂದ ಬದಲಾವಣೆಯನ್ನು ಹೊಂದುತ್ತಾ ನಿರ್ಧಿಷ್ಟರೂಪವನ್ನು ತಳೆಯಲಾರದೇ ಹೋಗುತ್ತದೆಯೋ ಅದನ್ನು ’ಮಿಥ್ಯೆ’ (ಜಗನ್ಮಿಥ್ಯಾ) ಎಂದು ಗ್ರಹಿಸಬೇಕಾಗುತ್ತದೆ.
ಮೊದಲಿಗೆ ಹೇಳಿಕೊಡುವುದನ್ನು ಶ್ರದ್ಧೆಯಿಂದ ಕೇಳಬೇಕಾಗುತ್ತದೆ ಮತ್ತು ಕಲಿಬೇಕಾಗುತ್ತದೆ. ಶ್ರದ್ಧೆಯು ಇಲ್ಲದಿದ್ದರೆ ವಿಷಯದ ಸ್ವೀಕಾರ ಮನೋಭಾವವೂ ಹುಟ್ಟುವುದಿಲ್ಲ. ಶ್ರದ್ಧೆ ಮತ್ತು ನಂಬಿಕೆಯಿಂದ ಗುರುವಾಕ್ಯದಂತೆ ನಡೆಯಬೇಕು ಎಂದರೆ ವಿಚಾರವಾದಕ್ಕೆ ಎಳ್ಳುನೀರು ಬಿಟ್ಟಂತಾಗುತ್ತದೆ ಅಲ್ಲವೇ ? ಎಂದರೆ, ವಿಷಯ ಸ್ವೀಕಾರವೇ ಇಲ್ಲದೆ ವಿಚಾರವಾದರೂ ಎಲ್ಲಿಂದ ಬಂದೀತು !?. ಹಾಗಾಗಿ ಮೊದಲಿಗೆ ಶಾಸ್ತ್ರವನ್ನೂ ಗುರುವಾಕ್ಯವನ್ನೂ ಸ್ವೀಕರಿಸುವವರಾಗಬೇಕು ನಂತರವಷ್ಟೇ ವಿಚಾರಕ್ಕೆ ಅವಕಾಶವಾಗುತ್ತದೆ ಎಂದು ತಿಳಿಯಬಹುದು. ಚಿಕ್ಕಮಕ್ಕಳಂತೂ ತಂದೆ-ತಾಯಿ ಹೇಳಿಕೊಡುವುದನ್ನು ಪ್ರಶ್ನಾತೀತವಾಗಿ ಕಲಿತುಬಿಡುತ್ತವೆ. ಅಂತಹ ನಂಬಿಕೆಯ ಮೇಲೆಯೆ ಜೀವನವೂ ಸಾಗುತ್ತದೆ. ಭಾರತದಲ್ಲಿ ನಿತ್ಯವೂ ಒಂದಿಲ್ಲೊಂದು ಕಡೆ ಬಾಂಬ್ ದಾಳಿಗಳು ಆಗುತ್ತಲೇ ಇರುತ್ತವೆ, ಜನಗಳು ಸಾಯುತ್ತಲೇ ಇರುತ್ತಾರೆ ಆದರೂ ಸಹ ಎಂದಿನಂತೆ ವಹಿವಾಟುಗಳು ನಡೆಯುತ್ತವೆ, ಪ್ರವಾಸಗಳು ಜರುಗುತ್ತಲೇ ಇರುತ್ತದೆ !. ಜೀವನಶ್ರದ್ಧೆಯೇ ಮಾನವನ ಧನಾತ್ಮಕ ಅಂಶ ಎನ್ನಬಹುದು. ನಂಬಿಕೆಯ ಮೇಲೆ ಯಾವುದೋ ಹೋಟೆಲಿಗೆ ಹೋಗಿ ಏನೋ ತಿಂದು (ಅಲ್ಲಿ ಏನಾದರೂ ಕಂಟಾಮಿನೇಶನ್ ಆಗಿದೆಯೇ ಎನ್ನುವುದನ್ನೂ ಯೋಚಿಸದೆ !) ಬರುತ್ತೇವೆ. ಹೋಟೆಲಿನ ನಾವೀನ್ಯತೆ, ಅಂದ-ಚೆಂದಗಳಿಗೆ ಮನಸೋತು ಯಾವುದನ್ನೂ ಪ್ರಶ್ನಿಸದೆ ಗಾಂಭೀರ್ಯದಿಂದ ಹೋಗಿ ತಿಂದು ಕೇಳಿದಷ್ಟು ಬಿಲ್ಲನ್ನೂ ಜೊತೆಗೆ ಟಿಪ್ಸನ್ನೂ ಕೊಟ್ಟು ಬರುತ್ತೇವೆ. ಇದೇ ನಂಬಿಕೆ ಶ್ರಧ್ಧೆಯನ್ನು (ಶ್ರಧ್ ಧಾ =ಚೆನ್ನಾಗಿ ಇಡುವುದು) ಅನುಭವದಿಂದ ಬಂದಿರುವ ಶಾಸ್ತ್ರದಲ್ಲಿ  ಗುರುವಾಕ್ಯದಲ್ಲಿ ಇಟ್ಟುಕೊಳ್ಳಬಾರದೇಕೆ ?!. ಒಂದು ವಿಷಯವನ್ನು ಸ್ವೀಕರಿಸದೆ ಅದನ್ನು ತಿರಸ್ಕರಿಸಲೂ ಸಾಧ್ಯವಿಲ್ಲ ಎಂದು ಹೇಳಬಹುದು.
ಕಠೋಪನಿಷತ್ತಿನ ಆರಂಭದಲ್ಲೇ ಪ್ರಸಂಗವೊಂದು ಬರುತ್ತದೆ. ನಚಿಕೇತನ ತಂದೆಯಾದ ವಾಜಶ್ರವಸನು ವಿಶ್ವವನ್ನೇ ಆಳಬೇಕೆಂಬ ಬಯಕೆಯಿಂದ ವಿಶ್ವಜಿತ್ ಎಂಬ ಯಾಗವನ್ನು ಮಾಡುತ್ತಾನೆ. ಯಾಗದ ಕೊನೆಯಲ್ಲಿ ಸರ್ವವನ್ನೂ ದಾನಮಾಡಬೇಕಾದಾಗ (ಯಾಗದ ನಿಯಮ) ಆತನು, ಬೆಳೆಯನ್ನು ಬೆಳೆಯಲಾಗದ ಒಣಭೂಮಿ, ಬರಡು ಹಸುಗಳು ಮುಂತಾದ ಬಳಕೆಗೆ ಬಾರದ ವಸ್ತುಗಳನ್ನೇ ದಾನ ಮಾಡುತ್ತಾನೆ. ’ಅಕ್ಕಿಯ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ’ ಎನ್ನುವ ಮನೋಭಾವ ಆತನದ್ದು. ಶ್ರದ್ಧೆಯಿಲ್ಲದ ಕಾರ್ಯದಿಂದ ತಂದೆಯು ಏನನ್ನು ತಾನೇ ಸಾಧಿಸಿಯಾನು ಎನ್ನುವುದು ನಚಿಕೇತನಿಗೆ ಬರುವ ಸಂಶಯ. ಇದಕ್ಕಾಗಿ ತನ್ನನ್ನೇ ಸಮರ್ಪಿಸಿಕೊಳ್ಳುವವರೆವಿಗೂ ನಚಿಕೇತನು ಮುಂದಡಿಯಿಡುತ್ತಾನೆ. ಇಲ್ಲಿ ಮಗನ ಶ್ರದ್ಧೆಯನ್ನೂ ತಂದೆಯ ಅಶ್ರದ್ಧೆಯನ್ನೂ ಕಾಣಬಹುದಾಗಿರುತ್ತದೆ.  

ಶ್ರದ್ಧೆಯ ವಿಷಯವಾಗಿ ರಾಮಕೃಷ್ಣ ಪರಮಹಂಸರು ಸೊಗಸಾದ ವಿವರಣೆಯೊಂದನ್ನು ಕೊಡುತ್ತಾರೆ.
 "ಲಂಕೆಯಲ್ಲಿದ್ದ ರಾಮಾನುಯಾಯಿಯೊಬ್ಬನಿಗೆ ರಾಮಕ್ಷೇತ್ರವನ್ನು ನೋಡಲು ಬಯಕೆಯಾಯಿತಂತೆ. ಆದರೆ, ಸಾಗರವನ್ನು ದಾಟಲು ಸಾಧ್ಯವಾಗದೆ ವಿಭೀಷಣನಲ್ಲಿಗೆ ಬಂದು ಕಷ್ಟವನ್ನು ಹೇಳಿಕೊಂಡನಂತೆ.
 ವಿಭೀಷಣನು ಕೈಯಲ್ಲಿ ಏನನ್ನೋ ಹಿಡಿದು ಒಂದೆರೆಡು ಮಂತ್ರಗಳನ್ನು ಹೇಳಿ ಆ ವಸ್ತುವನ್ನು  ಅನುಯಾಯಿಯ ಪಂಚೆಯ ತುದಿಗೆ ಕಟ್ಟಿ ’ ಮಂತ್ರಿಸಿದ ವಸ್ತುವೊಂದನ್ನು ನಿನ್ನ ಪಂಚೆಗೆ ಕಟ್ಟಿದ್ದೇನೆ. ಅದರ ಪ್ರಭಾವದಿಂದ ನೀನು ಸಲೀಸಾಗಿ ಸಾಗರವನ್ನು ದಾಟಬಹುದು’ ಎಂದು ಹೇಳಿ ಕಳುಹಿಸಿದನಂತೆ. ರಾಮನನ್ನು ಕಾಣುವ ತವಕದಲ್ಲಿ ಮತ್ತು ಅದೇ ಧ್ಯಾನದಲ್ಲಿ ಹೊರಟ ಆತನು ಸಾಗರದ ಮೇಲೆ ನೆಡೆದುಕೊಂಡೇ ಮುಕ್ಕಾಲುದಾರಿ ಕ್ರಮಿಸಿದನಂತೆ. ವಿಭೀಷಣನು ಅದೆಂತಹ ಮಾಯಾವಸ್ತುವನ್ನು ಮಂತ್ರಿಸಿ ಕಟ್ಟಿರಬಹುದೆಂದು ಯೋಚಿಸಿದ ಆತನು ಪಂಚೆಯ ತುದಿಯ ಗಂಟನ್ನು ಬಿಚ್ಚಿ ನೋಡಿ ಬೆರಗಾದನಂತೆ !. ಅಲ್ಲಿದ್ದುದು ಕೇವಲ ಒಂದು ಕಲ್ಲು ಮಾತ್ರ !. ’ಇದು ಇಷ್ಟೆಯೇ’ ಎಂದು ಉದ್ಗಾರ ತೆಗೆಯುತ್ತಲೇ ಆತನು ಸಾಗರದಲ್ಲಿ ಮುಳುಗಿಹೋದನಂತೆ " . ನಂಬಿಕೆಯ ಸೋರೆ ಬುರುಡೆಗೆ ಒಂದು ತೂತು ಬಿದ್ದರೂ ಸಹ ಅದರಲ್ಲಿ ನೀರು ತುಂಬಿಕೊಳ್ಳುತ್ತದೆ, ಈಜುವುದಕ್ಕೆ ಬಳಸಲು ಆಗುವುದಿಲ್ಲ.

ಮುಂದಿನ ಕಂತಿನಲ್ಲಿ  ಇನ್ನಷ್ಟು ತಿಳಿಯೋಣ.
.......................................

ಒಂದು ಮಾತು : ವಿವೇಕ ಚೂಡಾಮಣಿಯ ವಿವರಣೆಯ ಜೊತೆಗೆ ಇಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳನ್ನೂ ಸೇರಿಸಿ ಓದಿಕೊಂಡರೆ ವಿಚಾರವು ಇನ್ನಷ್ಟು ಸ್ಪಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ.  ಪ್ರತಿಕ್ರಿಯೆಗಳು ವಿವರಣೆಗೆ ಮತ್ತಷ್ಟು ಹೊಳಪು ನೀಡುತ್ತಿರುವುದರಿಂದ ಅದನ್ನೂ ಪೂರಕವಾಗಿ ಸೇರಿಸಿಕೊಂಡು ಓದಿ ಎಂದು ಕೋರುತ್ತೇನೆ.
.................................

ವಂದನೆಗಳೊಂದಿಗೆ....

Tuesday, October 11, 2011

ಯೋಚಿಸಲೊ೦ದಿಷ್ಟು...೪೨

೧. ನಾಳಿನ ಬಗ್ಗೆ ಕನಸು ಕಾಣದೇ ಯಾವುದೇ ಗುರಿಯನ್ನೂ ಸಾಧಿಸಲು ನಾವು ಸಮರ್ಥರಾಗುವುದಿಲ್ಲ! ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨. ಎಲ್ಲರೂ ಬದುಕುವ ಕಲ್ಪನೆಯೇ ಧರ್ಮ! - ಡಾ|| ಡಿ.ವೀರೇ೦ದ್ರ ಹೆಗ್ಗಡೆ
೩. ನಮ್ಮ ಜೊತೆಯಲ್ಲಿ ಇರುವುದು ನಾವು ಗಳಿಸಿದ ಜ್ಞಾನ ಮಾತ್ರ!!
೪.ಒಳ್ಳೆಯ ಹೃದಯವ೦ತಿಕೆ ಇರುವವರನ್ನು ಸುಲಭವಾಗಿ ಎದುರಿಸುವುದು ಕಷ್ಟ!
೫. ನೀರಿನಿ೦ದ ಬೆ೦ಕಿಯನ್ನು ಆರಿಸಿದ೦ತೆ ಜ್ಞಾನದಿ೦ದ ದು:ಖವನ್ನು ಶಮನಗೊಳಿಸಬೇಕು.ದು:ಖದ ಶಮನದಿ೦ದ ದೇಹವು ಸ್ವಸ್ಠವಾಗುತ್ತದೆ- ಮಹಾಭಾರತ
೬. ತನ್ನವರನ್ನು ಪ್ರೀತಿಸುವುದು ಸ್ವಜಾತಿ ಕೋಮು ಪಕ್ಷಪಾತವಲ್ಲ! ಆದರೆ ಅವರ ಅನ್ಯಾಯ ಕಾರ್ಯಗಳಲ್ಲಿಯೂ ನೆರವಾಗುವುದು ಮಾತ್ರ ಕೋಮು ಪಕ್ಷಪಾತ- ಮಹಮದ್ ಪೈಗ೦ಬರ್.
೭. ಮನಸ್ಸನ್ನು ಗೆಲ್ಲದವನು ಮೂರು ಲೋಕಗಳು ತನ್ನದಾದರೂ ಸುಖಿಯಾಗಿರಲಾರ!!
೮. ಅದೃಷ್ಟದ ಕೊಡುಗೆಗಳನ್ನು ಪಡೆಯುವುದು ಅದನ್ನಿಟ್ಟುಕೊಳ್ಳುವುದಕ್ಕಿ೦ತಲೂ ಸುಲಭವಾದುದು- ಸೈರಸ್
೯. ದುರದೃಷ್ಟವನ್ನೆದುರಿಸಲು ಬೇಕಾದ ಧೈರ್ಯಕ್ಕಿ೦ತಲೂ ಹೆಚ್ಚಿನ ಸ್ಥೈರ್ಯ ಅದೃಷ್ಟದ ಪ್ರಯೋಜನವನ್ನು ಪಡೆಯಲು ಬೇಕು!!
೧೦. ಅದೃಷ್ಟ ಹಾಗೂ ದುರಾದೃಷ್ಟಗಳೆರಡೂ ಪಯಣಿಸುವುದು ಒ೦ದೇ ವಾಹನದಲ್ಲಿ !!- ರಶ್ಯನ್ ಗಾದೆ
೧೧. ಮಣಬ೦ಗಾರಕ್ಕಿ೦ತ ಒ೦ದು ತೊಲ ಅದೃಷ್ಟವೇ ಲೇಸು! – ಯಹೂದಿ ಗಾದೆ
೧೨. ಅದೃಷ್ಟ ಸದಾಕಾಲ ನಮ್ಮ ಜೊತೆಗಿರುವುದಿಲ್ಲ. ಹೀಗೆ ಬ೦ದು ಹಾಗೇ ಹೋಗುತ್ತದೆ!!
೧೩. ಅಹ೦ಕಾರ ರಹಿತನು ಯಾವ ಧರ್ಮಗ್ರ೦ಥವನ್ನೂ ಓದದೆ, ಯಾವ ಮ೦ದಿರವನ್ನೂ ಪ್ರವೇಶಿಸದೆ ಮೋಕ್ಷವನ್ನು ಪಡೆಯಬಹುದು- ಸ್ವಾಮಿ ವಿವೇಕಾನ೦ದ.
೧೪. ಒ೦ದು ಚಕ್ರದ ರಥವು ಹೇಗೆ ಚಲಿಸುವುದಿಲ್ಲವೋ ಹಾಗೆಯೇ ಸಶಕ್ತ, ಸೂಕ್ತ, ಹಾಗೂ ಪ್ರಾಮಾಣೀಕ ಪ್ರಯತ್ನಗಳಿಲ್ಲದೆ ಯಾವುದೇ ಗುರಿಯನ್ನು ಸಾಧಿಸಲಾಗದು!!
೧೫. ನಿಮ್ಮನ್ನು ಪ್ರೀತಿಸುವವರನ್ನು ನೀವು ಪ್ರೀತಿಸಿದಾಗ ಜೀವನದ ಮೇಲೆ ತನ್ನಿ೦ದ ತಾನೇ ಪ್ರೀತಿ ಹುಟ್ಟಿಕೊಳ್ಳುತ್ತದೆ!!

ಯೋಚಿಸಲೊ೦ದಿಷ್ಟು...೪೨

೧. ನಾಳಿನ ಬಗ್ಗೆ ಕನಸು ಕಾಣದೇ ಯಾವುದೇ ಗುರಿಯನ್ನೂ ಸಾಧಿಸಲು ನಾವು ಸಮರ್ಥರಾಗುವುದಿಲ್ಲ! ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨. ಎಲ್ಲರೂ ಬದುಕುವ ಕಲ್ಪನೆಯೇ ಧರ್ಮ! - ಡಾ|| ಡಿ.ವೀರೇ೦ದ್ರ ಹೆಗ್ಗಡೆ
೩. ನಮ್ಮ ಜೊತೆಯಲ್ಲಿ ಇರುವುದು ನಾವು ಗಳಿಸಿದ ಜ್ಞಾನ ಮಾತ್ರ!!
೪.ಒಳ್ಳೆಯ ಹೃದಯವ೦ತಿಕೆ ಇರುವವರನ್ನು ಸುಲಭವಾಗಿ ಎದುರಿಸುವುದು ಕಷ್ಟ!
೫. ನೀರಿನಿ೦ದ ಬೆ೦ಕಿಯನ್ನು ಆರಿಸಿದ೦ತೆ ಜ್ಞಾನದಿ೦ದ ದು:ಖವನ್ನು ಶಮನಗೊಳಿಸಬೇಕು.ದು:ಖದ ಶಮನದಿ೦ದ ದೇಹವು ಸ್ವಸ್ಠವಾಗುತ್ತದೆ- ಮಹಾಭಾರತ
೬. ತನ್ನವರನ್ನು ಪ್ರೀತಿಸುವುದು ಸ್ವಜಾತಿ ಕೋಮು ಪಕ್ಷಪಾತವಲ್ಲ! ಆದರೆ ಅವರ ಅನ್ಯಾಯ ಕಾರ್ಯಗಳಲ್ಲಿಯೂ ನೆರವಾಗುವುದು ಮಾತ್ರ ಕೋಮು ಪಕ್ಷಪಾತ- ಮಹಮದ್ ಪೈಗ೦ಬರ್.
೭. ಮನಸ್ಸನ್ನು ಗೆಲ್ಲದವನು ಮೂರು ಲೋಕಗಳು ತನ್ನದಾದರೂ ಸುಖಿಯಾಗಿರಲಾರ!!
೮. ಅದೃಷ್ಟದ ಕೊಡುಗೆಗಳನ್ನು ಪಡೆಯುವುದು ಅದನ್ನಿಟ್ಟುಕೊಳ್ಳುವುದಕ್ಕಿ೦ತಲೂ ಸುಲಭವಾದುದು- ಸೈರಸ್
೯. ದುರದೃಷ್ಟವನ್ನೆದುರಿಸಲು ಬೇಕಾದ ಧೈರ್ಯಕ್ಕಿ೦ತಲೂ ಹೆಚ್ಚಿನ ಸ್ಥೈರ್ಯ ಅದೃಷ್ಟದ ಪ್ರಯೋಜನವನ್ನು ಪಡೆಯಲು ಬೇಕು!!
೧೦. ಅದೃಷ್ಟ ಹಾಗೂ ದುರಾದೃಷ್ಟಗಳೆರಡೂ ಪಯಣಿಸುವುದು ಒ೦ದೇ ವಾಹನದಲ್ಲಿ ಪ್ರಯಾಣಿಸುತ್ತವೆ!!- ರಶ್ಯನ್ ಗಾದೆ
೧೧. ಮಣಬ೦ಗಾರಕ್ಕಿ೦ತ ಒ೦ದು ತೊಲ ಅದೃಷ್ಟವೇ ಲೇಸು! – ಯಹೂದಿ ಗಾದೆ
೧೨. ಅದೃಷ್ಟ ಸದಾಕಾಲ ನಮ್ಮ ಜೊತೆಗಿರುವುದಿಲ್ಲ. ಹೀಗೆ ಬ೦ದು ಹಾಗೇ ಹೋಗುತ್ತದೆ!!
೧೩. ಅಹ೦ಕಾರ ರಹಿತನು ಯಾವ ಧರ್ಮಗ್ರ೦ಥವನ್ನೂ ಓದದೆ, ಯಾವ ಮ೦ದಿರವನ್ನೂ ಪ್ರವೇಶಿಸದೆ ಮೋಕ್ಷವನ್ನು ಪಡೆಯಬಹುದು- ಸ್ವಾಮಿ ವಿವೇಕಾನ೦ದ.
೧೪. ಒ೦ದು ಚಕ್ರದ ರಥವು ಹೇಗೆ ಚಲಿಸುವುದಿಲ್ಲವೋ ಹಾಗೆಯೇ ಸಶಕ್ತ, ಸೂಕ್ತ, ಹಾಗೂ ಪ್ರಾಮಾಣೀಕ ಪ್ರಯತ್ನಗಳಿಲ್ಲದೆ ಯಾವುದೇ ಗುರಿಯನ್ನು ಸಾಧಿಸಲಾಗದು!!
೧೫. ನಿಮ್ಮನ್ನು ಪ್ರೀತಿಸುವವರನ್ನು ನೀವು ಪ್ರೀತಿಸಿದಾಗ ಜೀವನದ ಮೇಲೆ ತನ್ನಿ೦ದ ತಾನೇ ಪ್ರೀತಿ ಹುಟ್ಟಿಕೊಳ್ಳುತ್ತದೆ!!

Friday, October 7, 2011

"ಈಶಾವಾಸ್ಯಮ್ "




 ಸತ್ಸಂಗಕ್ಕಾಗಿ ನನ್ನ ಮನೆಯ ಮೇಲೊ೦ದು ಹಾಲ್ ನಿರ್ಮಾಣ ಮಾಡಬೇಕೆಂಬ  ಮಹದಾಸೆ. ಭಗವಂತನ ಕೃಪೆಯಿಂದ ಅದು ನೆರವೇರಿದೆ. ಬರುವ ನವಂಬರ್ ೨ ರಂದು "ಈಶಾವಾಸ್ಯಮ್"  ಪ್ರವೇಶೋತ್ಸವವು ನಿಶ್ಚಯ ವಾಗಿದೆ. ಅಷ್ಟರಲ್ಲಿ ಅನಾಯಾಸವಾಗಿ ಲಭ್ಯವಾದ ಅವಕಾಶವನ್ನು ಉಪಯೋಗಿಸಿಕೊಳ್ಳ ಬಾರದೇಕೆ?  ಎಂಬ ಆಲೋಚನೆಯ ಪರಿಣಾಮ , ನಿನ್ನೆ ವಿಜಯದಶಮಿಯ ಶುಭ ದಿನ ದಂದು ಒಂದು  ದಿಢೀರ್ ಸತ್ಸಂಗವು ಅದೇ ಹಾಲ್ ನಲ್ಲಿ ನಡೆಯಿತು.  ಹಾಸನದ  ಶಂಕರ ಮಠಕ್ಕೆ ಪ್ರವಚನಕ್ಕಾಗಿ ಆಗಮಿಸಿದ್ದ ಬೆಂಗಳೂರು ಜೆ.ಪಿ.ನಗರ ಚಿನ್ಮಯಾ ಮಿಷನ್ನಿನ ಪೂಜ್ಯ ಕೃತಾತ್ಮಾ ನಂದರನ್ನು ನಮ್ಮ ನಿರ್ಮಾಣ ಹಂತದ ಸತ್ಸಂಗದ ಹಾಲ್ ಗೆ ಆಹ್ವಾನಿಸಿದೆ. ಪೂಜ್ಯರು ಸಂತೋಷದಿಂದ ಆಗಮಿಸಿ ಸತ್ಸಂಗವನ್ನು ನಡೆಸಿ ಕೊಟ್ಟರು. ಅದರ ಕೆಲವು ದೃಶ್ಯಗಳು ಇಲ್ಲಿವೆ. 

ಸಂಪಾದಕೀಯ


ಕೇಳಿದ  ಉಪನ್ಯಾಸಗಳ ಆಡಿಯೋ ಸಾಕಷ್ಟಿವೆ. ಎಲ್ಲವನ್ನೂ ಎಡಿಟ್ ಮಾಡಿ ವಿಷಯಾನುಕ್ರಮವಾಗಿ ಪ್ರಕಟಿಸಬೇಕಿದೆ. ಆದರೆ ಸಧ್ಯಕ್ಕೆ ಕಂಪ್ಯೂಟರ್ ಆಮೆವೇಗ ತಾಳಿದೆ. ಮನೆ ನಿರ್ಮಾಣದ ಕೆಲಸ ಇನ್ನೂ ಮುಗಿದಿಲ್ಲ. ಬರುವ ನವಂಬರ್ 2 ಕ್ಕೆ ಗೃಹಪ್ರವೇಶ. ಹಾಗಾಗಿ ಇನ್ನು ಒಂದು ತಿಂಗಳು ಬ್ಲಾಗ್ ಮತ್ತು ವೆಬ್ ಸೈಟ್ ಗಳು ನನ್ನ ಕಡೆಯಿಂದ ಅಪ್ಡೇಟ್ ಆಗಲಾರದು. ವೇದಸುಧೆ ಬಳಗದ ಉಳಿದ ಮಿತ್ರರು ಈ ಅವಧಿಯಲ್ಲಿ ವೇದಸುಧೆಯನ್ನು ಮುನ್ನಡೆಸುವರು.ಎಲ್ಲರ ಸಹಕಾರ ಎಂದಿನಂತಿರಲಿ.

ಸಹವಾಸ ದೋಷದ ತಪ್ಪಲ್ಲ!

     'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನದ್ದೇನೂ ತಪ್ಪಿಲ್ಲ. ಅವನನ್ನು ಬಲಿಪಶು ಮಾಡಿದ್ದಾರೆ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ ಸಹವಾಸದಿಂದ ಹಾಳಾದಳು', 'ಅವನು ರಾಮಚಂದ್ರ. ಆದರೆ ಆ ಮಿಟಕಲಾಡಿ ಅವನನ್ನು ಬಲೆಗೆ ಹಾಕಿಕೊಂಡಿದ್ದಾಳೆ', 'ಮೊದಲು ಇವನು ಹೀಗಿರಲಿಲ್ಲ, ಪೋಲಿ ಪಟಾಲಮ್ ಸೇರಿ ಕೆಟ್ಟುಹೋದ', 'ನಮ್ಮೂರಿನಲ್ಲಿದ್ದಾಗ ಹೇಗಿದ್ದಳು, ಬೆಂಗಳೂರಿಗೆ ಸೇರಿದ್ದೇ ಸೇರಿದ್ದು, ತಲೆಯೇ ನಿಲ್ಲುತ್ತಿಲ್ಲ', 'ನಮ್ಮ, ಪಕ್ಕದ ಮನೆಯಲ್ಲೇ ಅವನು ಬಾಡಿಗೆಗೆ ಇದ್ದ, ಬಹಳ ಸಂಭಾವಿತ. ಅಂಥವನು ಉಗ್ರಗಾಮಿ ಎಂದರೆ ನಂಬಲೇ ಆಗುತ್ತಿಲ್ಲ' - ಇಂತಹ ಮಾತುಗಳು ಕಿವಿಗೆ ಬೀಳುತ್ತಿರುತ್ತವೆ. ಇದರಲ್ಲಿ ಹೊರಹೊಮ್ಮುವ ಮುಖ್ಯಾಂಶವೆಂದರೆ ತಪ್ಪು ನಮ್ಮದಲ್ಲ, ನಮ್ಮವರದಲ್ಲ, ಬೇರೆಯವರದು. ಇದು ಇಲ್ಲಿಗೇ ನಿಲ್ಲುವುದಿಲ್ಲ. ನಮ್ಮ ತಪ್ಪುಗಳು, ಸೋಲುಗಳು, ಕೆಟ್ಟ ಸಂಗತಿಗಳಿಗೆಲ್ಲಾ ಕಾರಣ ನಾವಲ್ಲ, ಬೇರೆಯವರೇ ಎಂದು ವಾದಿಸುತ್ತೇವೆ. ಆದರೆ, ಯಶಸ್ಸುಗಳಿಗೆ, ಒಳ್ಳೆಯ ಸಂಗತಿಗಳಿಗೆಲ್ಲಾ ನಾವು ಮಾತ್ರ ಕಾರಣರು ಎಂದು ನಂಬುತ್ತೇವೆ.

     ವಿವೇಚನೆ ಮಾಡೋಣ, ಯಾರಾದರೂ ಇನ್ನೊಬ್ಬರ ಕಾರಣದಿಂದ ಹಾಳಾಗುತ್ತಾರೆಯೇ ಎಂಬುದು ಸಂಶೋಧನೆಗೆ ಅರ್ಹವಾದ ವಿಚಾರ. ಇತರರಿಂದ ನಮಗೆ ತೊಂದರೆಯಾಗಬಹುದು, ಕೇಡಾಗಬಹುದು. ಆದರೆ ಆ ತೊಂದರೆಯಲ್ಲಿ ನಮ್ಮ ಪಾಲೂ ಇರಬಹುದಲ್ಲವೇ? ಒಂದು ಸರಳ ಉದಾಹರಣೆ ನೋಡೋಣ. ಮಾವಿನಮರ ಮತ್ತು ಬೇವಿನಮರ ಅಕ್ಕ ಪಕ್ಕದಲ್ಲಿ ಇವೆಯೆಂದು ಭಾವಿಸೋಣ. ಬೇವಿನಮರದ ಪಕ್ಕದಲ್ಲಿರುವ ಮಾವಿನಮರದ ಹಣ್ಣುಗಳು ಕಹಿಯಾಗಿರುವುವೇ? ಮಾವಿನಮರದ ಪ್ರಭಾವದಿಂದ ಬೇವಿನ ಕಹಿಯಲ್ಲಿ ವ್ಯತ್ಯಾಸವಾಗುವುದೇ? ಒಂದು ವೇಳೆ ಮಾವಿನಮರ ಇದ್ದ ಸ್ಥಳದಲ್ಲಿ ಬೇವಿನಮರ ಮತ್ತು ಬೇವಿನಮರ ಇದ್ದ ಸ್ಥಳದಲ್ಲಿ ಮಾವಿನಮರ ಇದ್ದಿದ್ದರೆ? ಆಗಲೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ. ಎರಡು ಮರಗಳು ಇರುವ ಭೂಮಿಯ ಗುಣ ಒಂದೇ. ಆದರೆ ಮಾವಿನಮರ ಭೂಮಿಯಲ್ಲಿ ತನಗೆ ಬೇಕಾದ ಸಾರವನ್ನು ಮಾತ್ರ ಹೀರಿಕೊಳ್ಳುತ್ತದೆ. ಬೇವಿನಮರವೂ ಅಷ್ಟೆ. ಮಾವು ಮತ್ತು ಬೇವಿನ ಮರಗಳಿಗೆ ವಿಭಿನ್ನ ಫಲಗಳನ್ನು ನೀಡುವ ಆಯ್ಕೆಯಿಲ್ಲ. ಮನುಷ್ಯನ ವಿಷಯದಲ್ಲಿ ಈ ತತ್ವ ಅನ್ವಯಿಸಿ ನೋಡೋಣ. ವಿವೇಚನೆ ಮಾಡುವ ಶಕ್ತಿಯಿರುವ ಮನುಷ್ಯ ವಿಚಿತ್ರ ಜೀವಿ, ಅದ್ಭುತ ಜೀವಿ, ಅವನೇ ಬೇರೆ, ಅವನ ರೀತಿಯೇ ಬೇರೆ. ಅವನಲ್ಲಿ ಒಳ್ಳೆಯ ಮತ್ತು ಕೆಟ್ಟ ಅಂಶಗಳೆರಡೂ ಇರುತ್ತವೆ. ಮರದ ಬೇರುಗಳು ಹೇಗೆ ನೀರಿನ ಸೆಲೆಯಿರುವ ಕಡೆಗೆ ಚಾಚಿ ಮುನ್ನಡೆಯುವುವೋ ಅದೇ ರೀತಿ ಒಳ್ಳೆಯ ಅಂಶ ಪ್ರಧಾನವಾಗಿರುವ ವ್ಯಕ್ತಿ ಅಂತಹವರದೇ ಸಹವಾಸ ಇಷ್ಟಪಡುತ್ತಾನೆ. ಒಂದುವೇಳೆ ಅವನು ಕೆಟ್ಟವರ ನಡುವೆಯೇ ಬಾಳಬೇಕಾದ ಪರಿಸ್ಥಿತಿಯಿದ್ದರೆ ಅವನಲ್ಲಿನ ಕೆಟ್ಟ ಅಂಶಗಳಿಗೆ ಪ್ರಚೋದನೆ ದೊರೆತು, ಕೆಟ್ಟವನೆನಿಸಿಕೊಂಡರೂ ಸಹ ಅವನು ಕೆಟ್ಟವರಲ್ಲಿ ಒಳ್ಳೆಯವನು ಅನ್ನಿಸಿಕೊಳ್ಳಬಹುದು. ಅದೇ ರೀತಿ ಕೆಟ್ಟ ಅಂಶಗಳು ಪ್ರಧಾನವಾಗಿರುವ ವ್ಯಕ್ತಿ ಒಳ್ಳೆಯವರ ನಡುವೆ ಇರಬೇಕಾದ ಅನಿವಾರ್ಯತೆ ಬಂದರೆ ಅವನ ಒಳ್ಳೆಯತನಕ್ಕೆ ಪ್ರಚೋದನೆ ಸಿಕ್ಕಿ ಒಳ್ಳೆಯವನೆನಿಸಿದರೂ, ಆಗಾಗ್ಗೆ ಅವನ ಕೆಟ್ಟತನ ಪ್ರಕಟವಾಗದೇ ಇರದು. 
     ಹಾಗಾದರೆ ಕೆಟ್ಟವರು ಕೆಟ್ಟವರಾಗೇ ಇರುತ್ತಾರೆಯೇ? ಒಳ್ಳೆಯವರು ಒಳ್ಳೆಯವರಾಗೇ ಇರುತ್ತಾರೆಯೇ? ಎಂಬ ಪ್ರಶ್ನೆಗೆ ಕಾಲ ನೀಡಿರುವ ಉತ್ತರವೆಂದರೆ ಇಲ್ಲ, ಹಾಗಿಲ್ಲ ಎಂಬುದೇ. ಪರಿಸ್ಥಿತಿಯ ಶಿಶುವಾಗಿ ಮುಸ್ಲಿಮನಾಗಬೇಕಾಗಿ ಬಂದ ಕಾಳಿಚರಣ ಮಾತೃಧರ್ಮಕ್ಕೆ ಮರಳಲು ಬಯಸಿದಾಗ ಅದನ್ನು ಒಪ್ಪದ ಅಂಧ ಸಂಪ್ರದಾಯವಾದಿಗಳು ಅದನ್ನು ವಿರೋಧಿಸಿದರು. ಅವರ ವಿರುದ್ಧ ಕೆರಳಿ ನಿಂತ ಅವನು ಕಾಲಾಪಹಾಡ್ ಆಗಿ ಖಡ್ಗ ಹಿರಿದು ಅಸಂಖ್ಯಾತ ಹಿಂದೂಗಳನ್ನು ಮುಸ್ಲಿಮರನ್ನಾಗಿ ಮಾಡಿದ ಇತಿಹಾಸ ಕಣ್ಣ ಮುಂದಿದೆ. ಅಂತಹ ತಪ್ಪುಗಳ ಫಲವೇ ಈಗಿನ ಕಾಶ್ಮೀರ ಸಮಸ್ಯೆ, ಉಗ್ರಗಾಮಿಗಳ ಸಮಸ್ಯೆ. ಬೇಡನಾಗಿ ಬೇಟೆಯಾಡಿ ಜೀವಿಸುತ್ತಿದ್ದ ವಾಲ್ಮೀಕಿ ಸಂತನಾಗಿ ಪರಿವರ್ತಿತನಾಗಿ ಅದ್ಭುತ ರಾಮಾಯಣ ರಚಿಸಿದ್ದನ್ನೂ ನಾವು ಅರಿತಿದ್ದೇವೆ. ಒಳ್ಳೆಯತನಕ್ಕೆ ಮತ್ತು ಕೆಟ್ಟತನಕ್ಕೆ ಜಾತಿ, ಮತ, ಪಂಥಗಳ ಭೇದವಿಲ್ಲ. ಸಪ್ತರ್ಷಿಗಳೆಂದು ಕರೆಯಲ್ಪಡುವ ಯಾವ ಋಷಿಯೂ ಮೂಲದಲ್ಲಿ ಹುಟ್ಟಿನಿಂದ ಬ್ರಾಹ್ಮಣರಾಗಿರಲಿಲ್ಲ. ನಾವು ಆರಾಧಿಸುವ ರಾಮ ಕ್ಷತ್ರಿಯನಾಗಿ ಜನಿಸಿದವನು. ಕೃಷ್ಣ ಗೊಲ್ಲಕುಲದಲ್ಲಿ ಹುಟ್ಟಿದವನು. ಮಹಾಪತಿವ್ರತೆಯೆಂದು ಗೌರವಿಸುವ ಅರುಂಧತಿ ಹುಟ್ಟಿನಿಂದ ಶೂದ್ರಳೆಂದರೆ ಹೆಮ್ಮೆಪಡಬೇಕು. ಜಾತಿ, ಮತ, ಧರ್ಮ, ಇತ್ಯಾದಿಗಳೆಲ್ಲಾ ದೇವನಿರ್ಮಿತವಲ್ಲ, ಮಾನವನ ಸೃಷ್ಟಿ. ಅಷ್ಟೇ ಏಕೆ, ಅಸಂಖ್ಯಾತ ದೇವರುಗಳೂ ಮಾನವನಿರ್ಮಿತರೇ. ಆದರೆ ಮಾನವನಿರ್ಮಿತನಲ್ಲದ, ಈ ಜಗತ್ತು, ಈ ಬ್ರಹ್ಮಾಂಡವನ್ನು ನಿಯಂತ್ರಿಸುವ ಆ ದೇವರದೇವನೊಬ್ಬನಿದ್ದಾನೆ. ಆ ದೇವನ ಇರುವಿಕೆಯನ್ನು ಅನುಭವಿಸಿ ಅರಿಯಬಹುದೇ ಹೊರತು ಕಾಣುವುದು ದುಸ್ತರ. ವಿಷಯಾಂತರವಾಗುವುದರಿಂದ ಇದನ್ನು ಇಲ್ಲಿಗೇ ನಿಲ್ಲಿಸಿ ಮೂಲವಿಷಯಕ್ಕೆ ಬರೋಣ.
     ನಮ್ಮ ಮನೋಭಾವ ಹೇಗಿದೆ? ಯಾರನ್ನಾದರೂ ಕುರಿತು ಯಾರಾದರೂ ಅವನು ಎಷ್ಟು ಒಳ್ಳೆಯವನು ಎಂದರೆ ಅದನ್ನು ತಕ್ಷಣ ಒಪ್ಪಿಕೊಳ್ಳುವುದಿಲ್ಲ. 'ನನಗೆ ಗೊತ್ತಿಲ್ಲವೇ ಅವನ ಬೇಳೆಕಾಳು' ಎಂದು ಮೂಗು ಮುರಿಯುತ್ತೇವೆ ಅಥವ ಅವನ ಒಳ್ಳೆಯತನಕ್ಕೆ ಸಾಕ್ಷಿ ಬಯಸುತ್ತೇವೆ. ಅವನಲ್ಲಿರಬಹುದಾದ ಲೋಪಗಳ ತನಿಖೆ ನಡೆಸುತ್ತೇವೆ. ಅಂತಹುದೇನಾದರೂ ಸಿಕ್ಕಿದರೆ ಸಾಕು, ಅವನ ಚಾರಿತ್ರ್ಯಹನನ ಮಾಡಿಯೇ ಸಿದ್ಧ.  ಅದೇ ಕೆಟ್ಟವನು ಅಂದರೆ ಹಿಂದೆ ಮುಂದೆ ನೋಡದೆ ಒಪ್ಪಿಬಿಡುತ್ತೇವೆ! ನಮ್ಮ ಮತ್ತು ನಮ್ಮವರ ತಪ್ಪುಗಳು ನಮಗೆ ಗೌಣವಾಗಿ ಕಾಣುತ್ತವೆ. ಇತರರ ಸಣ್ಣ ತಪ್ಪುಗಳೂ ಬೃಹದಾಕಾರ ತಳೆಯುತ್ತವೆ. ನಮ್ಮ ನಿಜವಾದ 'ದೋಷ' ಇಲ್ಲಿದೆ. ನಾವು ತಪ್ಪುಗಳನ್ನು, ಲೋಪಗಳನ್ನು ಹೊರಗೆ ಹುಡುಕುತ್ತೇವೆ, ಕಾಣುತ್ತೇವೆ. ನಿಜವಾದ ತಪ್ಪು, ನಿಜವಾದ ಲೋಪ 'ಒಳಗೆ' ಇದೆ! ಆ ಒಳಗಿನ ತಪ್ಪನ್ನು ಅರಿಯುವ, ತಿದ್ದಿಕೊಳ್ಳುವ ಪ್ರಯತ್ನ ಮಾಡಲು ಪ್ರಾರಂಭಿಸಿದಾಗ ನಾವು ನಿಜವಾದ ಮನುಷ್ಯರಾಗುತ್ತಾ ಹೋಗುತ್ತೇವೆ. ಸಮಸ್ಯೆ ಬರುವುದು ಇಲ್ಲೇ. ಏಕೆಂದರೆ ಒಳ್ಳೆಯವರಾಗುವುದು ಎಂದರೆ ಮೇಲೇರುತ್ತಾ ಹೋಗುವುದು. ಇದು ಕಠಿಣವಾದ ಹಾದಿ. ಮೇಲೇರುವುದು ಕಷ್ಟ, ಆದರೆ ಕೆಳಕ್ಕೆ ಬೀಳುವುದು? ಹಾಗೆಂದು ಇದ್ದಲ್ಲೇ ಇದ್ದರೆ ನಾವು ನಿಜವಾದ ಮನುಷ್ಯರೆನಿಸಿಕೊಳ್ಳುವುದಾದರೂ ಹೇಗೆ? ಸಾಧಕ ಮೇಲೇರುವ ಪ್ರಯತ್ನವನ್ನು ಕೆಳಕ್ಕೆ ಬಿದ್ದರೂ ಬಿಡುವುದಿಲ್ಲ. ಅಂತಹ ನಿಜಸಾಧಕರೇ ಸಮಾಜದ ಆಸ್ತಿಯೆಂದರೆ ತಪ್ಪಲ್ಲ. ಆದರೆ ನಾವಾದರೋ ಅಂತಹ ಸಾಧಕರನ್ನು ದೇವರುಗಳನ್ನಾಗಿ ಮಾಡಿಬಿಡುತ್ತೇವೆ. ಸಾಧನೆ ಮಾಡುವುದು ನಮಗೆ ಸಂಬಂಧಿಸಿದ್ದಲ್ಲ ಎಂದುಕೊಂಡುಬಿಡುತ್ತೇವೆ. 
ನಿನಗೆ ನೀನೆ ಬಂಧು ನಿನಗೆ ನೀನೆ ಶತ್ರು
ಪರರೇನು ಮಾಡುವರು ನಿನದೆ ತಪ್ಪಿರಲು  
ಉನ್ನತಿಗೆ ಹಂಬಲಿಸು ಅವನತಿಯ ಕಾಣದಿರು
ನಿನ್ನುದ್ಧಾರ ನಿನ್ನಿಂದಲೇ ಮೂಢ ||
     ಅವರು ಅಂಥವರು, ಇವರು ಇಂಥವರು, ಇವರುಗಳಿಂದಲೇ ನಮ್ಮ ದೇಶ ಈ ಸ್ಥಿತಿಗೆ ಬಂದಿದೆ ಎಂದು ದೂರುವುದು ಸಾಮಾನ್ಯವಲ್ಲವೇ? 'ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ?' ಅಂದರೆ ಸಿಗಬಹುದಾದ ಉತ್ತರವೆಂದರೆ 'ನ್ಯಾಯ, ನೀತಿ, ಧರ್ಮ ಎಂದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ?' ಎಂಬುದೇ. ಪುರಂದರದಾಸರೇ ಹಾಡಿಲ್ಲವೇ 'ಸತ್ಯವಂತರಿಗಿದು ಕಾಲವಲ್ಲ . . . .'! ಬದುಕುವುದು ಕಷ್ಟ, ಸತ್ಯವಂತರಿಗೆ ಕಾಲವಲ್ಲ ಎಂದು ಪ್ರತಿಯೊಬ್ಬರೂ ತಪ್ಪು ಮಾಡುತ್ತಾ ಹೋದರೆ ಇತರರನ್ನು ದೂಷಿಸಬೇಕಾದರೂ ಏಕೆ? ಅವರದು ದೊಡ್ಡ ತಪ್ಪುಗಳು, ನಮ್ಮದಾದರೋ ಪರಿಸ್ಥಿತಿಯ ಕಾರಣದಿಂದ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು ಎಂದು ಸಮರ್ಥಿಸಿಕೊಳ್ಳುತ್ತೇವೆ. ಈ ಸಣ್ಣ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯವಾಗುತ್ತದೆ. ಪುರಂದರದಾಸರು ಒಳ್ಳೆಯ ದಾರಿಯಲ್ಲಿ ನಡೆಯಲು ಪ್ರಾರಂಭಿಸಿದಾಗ ಅದರ ಕಷ್ಟದ ಅರಿವಾಗಿ ಆರೀತಿ ಹಾಡಿದ್ದೇ ಹೊರತು ಒಳ್ಳೆಯತನ ಬಿಡಿ ಎಂಬರ್ಥದಲ್ಲಿ ಅಲ್ಲ, ಕಷ್ಟವಾದರೂ ಬಿಡಬೇಡಿ ಎಂಬ ಒಳಧ್ವನಿ ಅದರಲ್ಲಿದೆ. ನಾವು ಒಳ್ಳೆಯವರಾಗಲು ಅಥವ ಕೆಟ್ಟವರಾಗಲು ಇತರರು ಕೇವಲ ನೆಪಗಳಾಗಬಹುದೇ ಹೊರತು ಅವರು ಕಾರಣರಾಗುವುದಿಲ್ಲ, ವಾಸ್ತವಿಕವಾಗಿ ನಾವೇ ಕಾರಣರು. ಹೀಗಿರುವಾಗ ನಮಗೆ ಹೊರಗಿನವರು ಮಾದರಿ ಏಕಾಗಬೇಕು? ನಾವು ಒಳ್ಳೆಯವರು/ಕೆಟ್ಟವರು ಅನ್ನಿಸಿಕೊಳ್ಳಲು ನಿಜವಾದ ಕಾರಣ ನಮ್ಮ ಒಳಗೇ ಇರುವಾಗ ನಾವು ಏನಾಗಬೇಕು ಅನ್ನುವುದು ನಮ್ಮ ಮೇಲೇ ನಿರ್ಭರವಾಗಿದೆ. ಗೀತೆ ಹೇಳುವಂತೆ ನಮ್ಮ ಉದ್ಧಾರಕ್ಕಾಗಲೀ, ಪತನಕ್ಕಾಗಲೀ ನಾವೇ ಕಾರಣರೇ ಹೊರತು ಇತರರಲ್ಲ. ಹಾಗಿರುವಾಗ ಒಳ್ಳೆಯತನಕ್ಕೆ ನಮ್ಮನ್ನು ನಾವು ತೆರೆದುಕೊಳ್ಳೋಣ, ಕನಿಷ್ಠ ಪ್ರಯತ್ನವನ್ನಾದರೂ  ಮಾಡೋಣ. ಲೋಪಗಳನ್ನು ಕಾಣುವೆಡೆಗಳಲ್ಲಿ ಒಳ್ಳೆಯದನ್ನು ಕಾಣಲು ಹಂಬಲಿಸೋಣ. ನಮ್ಮಲ್ಲಿ 'ಇರುವುದನ್ನು' ಗುರುತಿಸಿಕೊಳ್ಳೋಣ, ಉಪಯೋಗಿಸೋಣ!
ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||
*************
-ಕ.ವೆಂ.ನಾಗರಾಜ್.