Pages

Monday, February 13, 2012

ವಿವೇಕ ಚೂಡಾಮಣಿ-ಭಾಗ-೧೯




मूलम् - ಮೂಲ

दुर्वारसंसारदवाग्नितप्तं दोधूयमानं दुरदृष्टवातैः ।
भीतं प्रसन्नं परिपाहि मृत्योः शरण्यमन्यं यदहं न जाने ॥३८॥

ದುರ್ವಾರ-ಸಂಸಾರ-ದವಾಗ್ನಿತಪ್ತಂ ದೋಧೂಯಮಾನಂ ದುರದೃಷ್ಟವಾತೈಃ |
ಭೀತಂ ಪ್ರಪನ್ನಂ ಪರಿಪಾಹಿ ಮೃತ್ಯೋಃ ಶರಣ್ಯಮನ್ಯಂ ಯದಹಂ ನ ಜಾನೇ ||೩೭||

ಪ್ರತಿಪದಾರ್ಥ :

 (ಯತ್ = ಯಾವ ಕಾರಣದಿಂದ, ಅಹಂ =ನಾನು, ಅನ್ಯಂ ಶರಣ್ಯಂ= ಬೇರೆ ಗುರುವನ್ನು(ಕಾಯುವವನನ್ನು) , ನ ಜಾನೇ=ಅರಿಯೆನೊ , (ಹೀಗಾಗಿ) ದುರ್ವಾರ-ಸಂಸಾರ-ದವಾಗ್ನಿತಪ್ತಂ = ಬಗೆಹರಿಸಲು ಆಗದಿರುವ ಬದುಕಿನ ಜಂಜಡಗಳೆಂಬ ಕಾಳ್ಗಿಚ್ಚಿನಿಂದ ಬೆಂದಿರುವ (ನೊಂದಿರುವ), ದುರದೃಷ್ಟವಾತೈಃ = ದುರದೃಷ್ಟವೆಂಬ ಬಿರುಗಾಳಿಯಿಂದ , ದೋಧೂಯಮಾನಂ = ಅದುರುತ್ತಿರುವ(ಕಂಪಿಸುತ್ತಿರುವ), ಭೀತಂ = ಹೆದರಿರುವ, ಪ್ರಪನ್ನಂ = ಶರಣು ಬಂದಿರುವ, (ನನ್ನನ್ನು) ಮೃತ್ಯೋಃ = ಇಂತಹ ಸಾವಿನಿಂದ, ಪರಿಪಾಹಿ = ಕಾಪಾಡು).

ತಾತ್ಪರ್ಯ:

ಪರಿಹರಿಸಲು ಆಗದಿರುವ ಸಂಸಾರವೆಂಬ ಜಂಜಡಗಳ ಕಾಳ್ಗಿಚ್ಚಿನಿಂದ ಬೆಂದು-ನೊಂದು ದುರದೃಷ್ಟವೆಂಬ ಬಿರುಗಾಳಿಯಿಂದ ಅದುರಿ-ಬೆದರಿ ನಿನ್ನಲ್ಲಿಯೇ ಶರಣು ಬಂದಿರುವ ನನ್ನನ್ನು ಈ ಸಂಸಾರವೆಂಬ ಸಾವಿನ ಮನೆಯಿಂದ ಕಾಪಾಡು; ಏಕೆಂದರೆ ಬೇರೆ ಯಾವ ಗುರುವನ್ನೂ ರಕ್ಷಕನನ್ನೂ ನಾನರಿಯೆನು .

ವಿವರಣೆ:

ಆತ್ಮಜ್ಞಾನವನ್ನು ಅರಸಿ ಬರುವ ಶಿಷ್ಯನು ಗುರುವಿನ ಮುಂದೆ ನಿವೇದಿಸಿಕೊಳ್ಳುತ್ತಾ ’ನಿಮ್ಮನ್ನು ಬಿಟ್ಟರೆ ಬೇರಾರೂ ನನಗೆ ದಾರಿ ತೋರುವವರಿಲ್ಲ’ ಎಂದು ಹೇಳುತ್ತಾನೆ. ಗುರುವು ಯಾವ ಕಾರಣಕ್ಕೂ ತನ್ನನ್ನು ಪಕ್ಕಕ್ಕೆ ಸರಿಸಬಾರದು ಅಥವಾ ಉದಾಸೀನ ಮಾಡಬಾರದು ಎಂದು ತನ್ನ ತೀವ್ರತರವಾದ ಮೋಕ್ಷಾಪೇಕ್ಷೆಯನ್ನು ಶಿಷ್ಯನು ಇಲ್ಲಿ ಪ್ರಕಟಿಸುತ್ತಾನೆ. ಸಂಸಾರವೆಂಬುದು ದಾವಾಗ್ನಿ ಅಥವಾ ಕಾಡಿನಕಿಚ್ಚು. ಇದಕ್ಕೆ ಬಿರುಗಾಳಿಯು ಸೇರಿಕೊಂಡುಬಿಟ್ಟರೆ ಅದು ಎಲ್ಲೆಡೆ ಬಹುಬೇಗ ಹರಡತೊಡಗುತ್ತದೆ. ಮತ್ತೆ-ಮತ್ತೆ ಸಂಸಾರದೊಳಗೆ ಬೀಳುವಂತೆ ಮಾಡುತ್ತಿರುವ ಬಯಕೆಗಳಿಂದ ಅಥವಾ ವಾಸನೆಗಳಿಂದ ಹೆದರಿ ಬೇರೆಲ್ಲೂ ಹೋಗದೆ ನಿಮ್ಮ ಬಳಿಗೆ ಶರಣಾಗಿ ಬಂದಿರುವ ನನ್ನನ್ನು ದುರದೃಷ್ಟಕರವಾದ ವಾಸನೆಗಳೆಂಬ ಬಿರುಗಾಳಿ-ಕಾಳ್ಗಿಚ್ಚಿನಂತಹ ಸಾವಿನಕೂಪದಿಂದ ಪಾರು ಮಾಡಿ ಎಂದು ಶಿಷ್ಯನು ಕೇಳಿಕೊಳ್ಳುತ್ತಾನೆ. ಗುರುವಿನ ಕೃಪಾದೃಷ್ಟಿಯು (ಕಾರುಣ್ಯದ ನೋಟ, ಅನುಗ್ರಹದ ನೋಟ) ತ್ವರಿತವಾಗಿ ಶಿಷ್ಯನ ಮೇಲೆ ಬೀಳಬೇಕೆಂಬುದು ಮೇಲಿನ ಶ್ಲೋಕದ ಆಶಯವಾಗಿದೆ. ತಡವಾದರೆ ವಾಸನೆಗಳು ಮತ್ತೆ ಸಾಧಕನನ್ನು ಮುತ್ತಿಕೊಂಡು ಸಂಸಾರದೊಳಗೆ ಬೀಳುವಂತೆ ಮಾಡಬಹುದು, ಇದರಿಂದ ಲೋಕಕ್ಕೆ ಮತ್ತೊಬ್ಬ ಸಾಧಕನ ಸೇವೆಯು ಸಿಗಲಾರದು ಎಂಬ ಭಾವವು ಕಂಡುಬರುತ್ತದೆ. ಯಾವಾಗ ಹೆದರದಿದ್ದರು ಮನುಷ್ಯನು ಸಾವಿಗೆ ಹೆದರಬೇಕಾಗುತ್ತದೆ. ಸಾವಿನ ಕೊನೆಯ ಕ್ಷಣದಲ್ಲಾದರೂ ’ಮುಗಿಯಿತೇ’ ಎಂಬ ಕರುಣಾಜನಕ ಭಾವವು ಸಾಮಾನ್ಯವಾಗಿ ಹುಟ್ಟದೇ ಇರಲಾರದು. ಇಂತಹ ಭಯವನ್ನು ಹೋಗಲಾಡಿಸಿ ಜನನ-ಮರಣಗಳೆಂಬ ಜಂಜಡದಿಂದ ನನ್ನನ್ನು ಪಾರುಮಾಡಿ ಎಂದು ಶಿಷ್ಯನು ನಿವೇದಿಸಿಕೊಳ್ಳುವುದು ಸಮುಚಿತವಾಗಿ ಕಂಡುಬರುತ್ತದೆ. ’ಶರಣಮನ್ಯಂ ಯದಹಂ ನ ಜಾನೇ - ನಿಮ್ಮನ್ನು ಬಿಟ್ಟರೆ ನನಗೆ ಗತಿಯಿಲ್ಲ’ ಎಂದು ಗುರುವನ್ನು ತನ್ನೆಡೆಗೆ ಸೆಳೆದುಕೊಳ್ಳುವ ತಂತ್ರವನ್ನೂ ಆಚಾರ್ಯರು ಇಲ್ಲಿ ತುಂಬ ಉದಾರತೆಯಿಂದ ಜ್ಞಾನಾರ್ಥಿಗಳಿಗೆ ತಿಳಿಸಿರುತ್ತಾರೆ.

 मूलम्-ಮೂಲ

शान्ता महान्तो निवसन्तिसन्तो वसन्तवल्लोकहितं चरन्तः ।
तीर्णास्स्वयं भीमभवार्णवं जनानहेतुनाऽन्यानपि तारयन्तः॥३९॥

ಶಾಂತಾ ಮಹಾಂತೋ ನಿವಸಂತಿ ಸಂತೋ ವಸಂತವಲ್ಲೋಕಹಿತಂ ಚರಂತಃ |
ತೀರ್ಣಾಃಸ್ವಯಂ ಭೀಮಭವಾರ್ಣವಂ ಜನಾನಹೇತುನಾಽನ್ಯಾನಪಿ ತಾರಯಂತಃ ||೩೮||

ಪ್ರತಿಪದಾರ್ಥ:

( ಭೀಮಭವಾರ್ಣವಂ = ಅಗಾಧವಾದ(ಜಂಜಡಗಳಿಂದ ಕೂಡಿರುವ) ಸಂಸಾರಸಾಗರವನ್ನು , ಸ್ವಯಂ = ತಾವೇ, ತೀರ್ಣಾಃ = ದಾಟಿರುವವರೂ, ಅಹೇತುನಾ = ನಿಮಿತ್ತವಿಲ್ಲದೆ, ಅನ್ಯಾನ್ ಜನಾನ್ ಅಪಿ = ಇತರ ಜನರನ್ನೂ, ತಾರಯಂತಃ = ದಾಟಿಸುವವರೂ, ಶಾಂತಾಃ = ನೆಮ್ಮದಿಯಿಂದಿರುವವರೂ, ಮಹಾಂತಾಃ = ದೊಡ್ಡವರೂ (ಮಹನೀಯರೂ) [ಆದ], ಸಂತಃ= ಸತ್ಪುರುಷರು, ವಸಂತವತ್ = ವಸಂತಋತುವಿನಂತೆ, ಲೋಕಕಲ್ಯಾಣಗಳನ್ನು , ಚರಂತಃ = ಮಾಡುತ್ತಾ, ನಿವಸಂತಿ = ಇರುತ್ತಾರೆ.)

ತಾತ್ಪರ್ಯ :

ಅಗಾಧವಾದ ಮತ್ತು ಜಂಜಡಗಳಿಂದ ಕೂಡಿರುವ ಸಂಸಾರಸಾಗರವನ್ನು ದಾಟಿ ಯಾವ ನಿಮಿತ್ತವೂ  ಇಲ್ಲದೆ ಇತರರನ್ನೂ ದಾಟಿಸುವ ಶಾಂತರೂ ಮಹನೀಯರೂ ಆದ ಸತ್ಪುರುಷರು ವಸಂತಕಾಲದಂತೆ ಯಾವಾಗಲೂ ಲೋಕಕ್ಕೆ ಒಳಿತನ್ನೇ ಮಾಡುತ್ತಿರುತ್ತಾರೆ.

ವಿವರಣೆ:

ಶಿಷ್ಯನು ಗುರುವನ್ನು ಹೊಂದಿ ಸಂಸಾರಸಾಗರವನ್ನು ದಾಟಿಸಿ ಎಂದೇನೋ ಕೇಳಿಕೊಳ್ಳುತ್ತಾನೆ. ಆದರೆ, ದಾಟಿಸಬಲ್ಲವರು ಯಾರು ?!. ಗುರುವು ಯಶಸ್ವಿಯಾಗಿ ದಾಟಿದ್ದರೆ ಶಿಷ್ಯನನ್ನೂ ದಾಟಿಸುತ್ತಾನೆ. ಈಜು ಬಲ್ಲವನು ಮಾತ್ರ ಈಜು ಬಾರದವನಿಗೆ ಕಲಿಸಬಲ್ಲನು. ಕುರುಡನು ಇತರರಿಗೆ ದಾರಿಯನ್ನು ತೋರಿಸಲಾರನು.  ಜೀವನ್ಮುಕ್ತರನ್ನೇ ಶಿಷ್ಯನು ಜ್ಞಾನಪ್ರಾಪ್ತಿಗಾಗಿ ಆಶ್ರಯಿಸಬೇಕು ಎನ್ನುವುದನ್ನು  ಆಚಾರ್ಯರು ಇಲ್ಲಿ ಸೂಕ್ಷ್ಮವಾಗಿ ಹೇಳಿರುತ್ತಾರೆ. ಹೀಗೆ ಸ್ವಾನುಭವವಿರುವ ಗುರುವು ಯಾವ ಅಪೇಕ್ಷೆಯನ್ನೂ ಇಟ್ಟುಕೊಳ್ಳದೆ ಜ್ಞಾನೋಪದೇಶವನ್ನು ಮಾಡುವವನಾಗಬೇಕು ಎಂಬ ವಿಚಾರವೂ ಇಲ್ಲಿ ಬರುತ್ತದೆ. ಹೀಗೆ ಆಚಾರ್ಯರು ಗುರು-ಶಿಷ್ಯರಿಬ್ಬರಿಗೂ ವಿವೇಕವನ್ನು ಉಪದೇಶಿಸುತ್ತಾ ಹೋಗುತ್ತಾರೆ. ಆಚಾರ್ಯರು ವಸಂತಕಾಲವನ್ನು ಅನುಮೋದಿಸಿರುವುದು ಇಲ್ಲಿಯ ವಿಶೇಷ. ಗ್ರೀಷ್ಮವು ಬಿಸಿಲ ಬೇಗೆಯಿಂದ ಕೂಡಿ ಕಂಗೆಡಿಸಿದರೆ ವರ್ಷಕಾಲದಲ್ಲಿ ಮಳೆಯಿಂದ ಹಾನಿಯೂ ಆಗುವುದುಂಟು. ಶರತ್ಕಾಲ ಮತ್ತು ಶಿಶಿರಗಳಲ್ಲಿ ಚಳಿ ಮತ್ತು ಹಿಮಪಾತಗಳಿಂದ ತೊಂದರೆಯಾಗುವುದುಂಟು. ವಸಂತಕಾಲದಲ್ಲಿ ಪ್ರಕೃತಿಯು ಸೊಬಗಿನಿಂದ ಕೂಡಿ ತಂಗಾಳಿಯನ್ನು ತೀಡುತ್ತಾ ಹಿತಕರವಾದ ಸನ್ನಿವೇಷವನ್ನು ಉಂಟುಮಾಡುವುದರಿಂದ ವಸಂತಕಾಲವನ್ನು ಇಲ್ಲಿ ಪ್ರಸ್ತಾವಿಸಿದ್ದಾರೆ ಎನ್ನಬಹುದು. ಸತ್ಪುರುಷರಾದ ಗುರುಗಳು ವಸಂತಕಾಲದಂತೆ ಯಾವಾಗಲೂ ಲೋಕಹಿತವನ್ನೇ ಬಯಸುತ್ತಾ ಒಳಿತನ್ನೇ ಉಂಟುಮಾಡುತ್ತಿರುತ್ತಾರೆ ಎನ್ನುವುದು ತಾತ್ಪರ್ಯ.

 ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ...

No comments:

Post a Comment