ಈ ಕೆಳಗಿನದು ಮೂರನೆಯ ಕಗ್ಗ.
ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ I
ಮಹಿಯಿಂ ಜಗವಾಗಿ ಜೀವವೇಷದಲಿ II
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ I
ಗಹನ ತತ್ತ್ವಕೆ ಶರಣೋ - ಮಂಕುತಿಮ್ಮ II
ತಿಳಿಯಗೊಡದೊಂದು=ತಿಳಿಯಗೊಡದ ಒಂದು
ವಿಹರಿಪುದದೊಳ್ಳಿತೆಂಬುದು = ವಿಹರಿಪುದು ( ವಿಹಾರ ಮಾಡುವುದು) +ಅದು+ಒಳ್ಳಿತು = ಒಳ್ಳೆಯದು +ಎಂಬುದು
ನಿಸದವಾದೊಡಾ = ನಿಸದವಾದೊಡೆ + ಆ
ವಿಹಾರಮಾಡುವುದು ಎಂದರೆ, ಎಲ್ಲದರಲ್ಲೂ ವ್ಯಾಪಕವಾಗಿ ಚೈತನ್ಯ ರೂಪದಲ್ಲಿರುವುದು ಎಂದೂ ಅರ್ಥೈಸಬಹುದು. ನಿಸದವಾದೊಡೆ ಎಂದರೆ ನಿಜವಾದರೆ ಎಂದೇ ಅರ್ಥೈಸಬೇಕು.
ಮಾನವರಲ್ಲಿ ಇದು ಒಂದು ನಿರಂತರ ಪ್ರಶ್ನೆ. ಆ ದೇವರೆಂಬ ವಸ್ತು ಇದೆಯೋ ಇಲ್ಲವೋ ಎಂದು. ಇದೆ ಎಂದರೆ, ಅದಕ್ಕೆ ನಾನಾ ಹೆಸರುಗಳು, ರೂಪಗಳು, ಪೂಜೆಗಳು, ಹಲವು ಪೂಜಾ ವಿಧಾನಗಳು, ಆಚಾರಗಳು, ಸಂಪ್ರದಾಯಗಳು ಆ ದೇವರ ರೂಪ ಮತ್ತು ಕಾರ್ಯವೈಖರಿಗೆ ನಾನಾ ಭಾಷ್ಯಗಳು. ಅನಾದಿ ಕಾಲದಲ್ಲೂ ಆ ದೇವರ ಅಸ್ತಿತ್ವವನ್ನು ಪ್ರಶ್ನಿಸುವ " ಚಾರ್ವಾಕ" ರೆಂಬುವರೂ ಇದ್ದರು. ಇಂದಿಗೂ ಆ ದೇವರೆಂಬ ವಸ್ತುವನ್ನು ನಂಬದಿರುವರು ಇದ್ದಾರೆ. ಕೆಲವರಿಗೆ ಧೃಢವಾದ ನಂಬಿಕೆ. ಇನ್ನೂ ಕೆಲವರಿಗೆ ಅನುಮಾನ. ಮತ್ತೆ ಕೆಲವರಿಗೆ ಅದು ಆಗಾಗ ಬಂದು ಹೋಗುವ ವಿಚಾರ. ಕೆಲವರಿಗೆ ಸಂಕಟ ಬಂದಾಗ ಮಾತ್ರ ದೇವರ ನೆನಪು, ಕೆಲವರಿಗೆ ಬರೀ ತೋರಿಕೆಗೆ ಭಕ್ತಿ. ಮತ್ತು ಕೆಲವರಿಗೆ ಹೊರಗೆ ತೋರದಿದ್ದರೂ ಆಂತರ್ಯದಲ್ಲಿ ಶುಧ್ಧ ಭಕ್ತಿ.
ಇಲ್ಲಿ ಡಿ.ವಿ.ಜಿ ಯವರೂ ಸಹ " ನಿಸದವಾದೊಡೆ" ಎಂದಿದ್ದಾರೆ. " ಜಗವ ಸೃಜಿಸಿ, ಗತಿ ಸೂತ್ರವನಾಡಿಸಿ" ಎಂದಿದ್ದಾರೆ ದಾಸರು. ಅಂದರೆ ಜಗತ್ತನ್ನು ಸೃಷ್ಟಿಸಿ, ಜಗತ್ತಿನ ಎಲ್ಲ ಜೀವರಾಶಿಗಳನ್ನೂ ತನ್ನ ಇಷ್ಟದಂತೆ ಪರಮಾತ್ಮ ಆಡಿಸುವನೆಂಬ ಅರ್ಥದಲ್ಲಿದೆ ದಾಸರ ಉಕ್ತಿ. ಹಾಗೆ ಇಡೀ ವಿಶ್ವವನ್ನು ಸೃಷ್ಟಿಮಾಡಿ, ಎಲ್ಲ ಜಡ ಮತ್ತು ಜೀವಿಗಳಲ್ಲೂ ತಾನೇ ತಾನಾಗಿ ವ್ಯಾಪಿಸಿರುವ ಆ ಪರಮಾತ್ಮನೆಂಬುವುದು ಒಳ್ಳೆಯದು ಮತ್ತು ಇರುವುದು ಸತ್ಯವಾದರೆ, ಆ ಗಹನಕ್ಕೆ ಅಂದರೆ ಗೂಢವಾದ, ಊಹೆ, ಅರಿವು ಮತ್ತು ತರ್ಕಕ್ಕೆ ನಿಲುಕದ ಆ ಗುಹ್ಯವಾದ ವಸ್ತುವಿಗೆ ಶರಣಾಗು ಎನ್ನುತ್ತಾರೆ ಡಿ.ವಿ.ಜಿ . ಇಲ್ಲಿ ಸತ್ಯವಾದರೆ ಎಂದಿದ್ದಾರೆ. ಅಂದರೆ ಅದು ಅಸತ್ಯವೂ ಆಗಿರಬಹುದೇ? ಎಂದರೆ, ಅದು ಹಾಗಲ್ಲ. ನಂಬುವವನ ಮನಸ್ಸಿಗೆ, ಮಾತಿಗೆ ಅದು ಸತ್ಯ ಎಂದು ಗೋಚರಿಸಿದರೆ, ಅದನ್ನು ನಂಬು ಮತ್ತು ಶರಣಾಗು ಎಂದು ಹೇಳಿದ್ದಾರೆ. ನಾನು ನಂಬಲ್ಲ ಎಂಬುವವನೂ ಸಹ " ನಾನು ದೇವರನ್ನು ನಂಬುವುದಿಲ್ಲ " ಎನ್ನುತ್ತಾನೆ. ಅಂದರೆ ಅವನು " " ದೇವರು" ಎನ್ನುವ ವಸ್ತುವೊಂದಿದೆ ನಾನು ಅದನ್ನು ನಂಬುವುದಿಲ್ಲ ಎಂದು ಅರ್ಥವಲ್ಲವೇ?
ಹಾಗಾಗಿ ವಾಚಕರೆ ನಿಮಗೆ ಆ ಪರಮಾತ್ಮ ವಸ್ತುವಿನಲ್ಲಿ ನಂಬಿಕೆ ಇದ್ದರೆ, ಶುಧ್ಧವಾಗಿ ನಂಬಿ, ಶರಣಾಗಿ ಎನ್ನುತ್ತಾರೆ ಡಿ.ವಿ.ಜಿ .
ಇಂದಿನ ದಿನ ಎಲ್ಲರಿಗೂ ಶುಭವಾಗಲಿ. ನಮಸ್ಕಾರ.
---------------------------------------
ಪ್ರತಿಕ್ರಿಯೆಗಳಿಗೆ ಪೂರಕವಾಗಿ ಈ ಕೆಳಗಿನ ಕೊಂಡಿ ನೀಡಿರುವೆ
-ಶ್ರೀಧರ್
ರವಿಯವರೇ,
ReplyDeleteನಮಸ್ಕಾರ. ಕಳೆದ ಮೂರು ದಿನಗಳಿಂದ ಡಿ.ವಿ.ಜಿ ಯವರ ಕಗ್ಗದ ಬಗ್ಗೆ ಸರಣಿ ಲೇಖನ ಬರೆಯುತ್ತಿದ್ದೀರಿ. ಅದರ ವಿವರಣೆ ಕೊಡುತ್ತಿದ್ದೀರಿ. ಧನ್ಯವಾದಗಳು. ಡಿ.ವಿ.ಜಿ. ಯವರು ನನ್ನ ದೃಷ್ಟಿಯಲ್ಲಿ ನಾವ್ ಕಂಡ ಋಷಿ,ಎಂದೇ ನನ್ನ ಭಾವನೆ. ದೇವರ ವಿಚಾರದಲ್ಲಿ ಒಂದು ವಾದವಿದೆ. ಭಗವಂತನು ಸರ್ವಶಕ್ತ,ಸರ್ವವ್ಯಾಪಿ ಎಂಬುದು ಎಲ್ಲರ ನಂಬಿಕೆ.ಅಥವಾ ಇಡೀ ಜಗತ್ತನ್ನು ನಡೆಸುವ ಒಂದು ಶಕ್ತಿಗೆ ಭಗವಂತನೆಂದು ಕರೆಯಬಹುದು.ಅದು ಸರಿ. ಆದರೆ ದೇವರು ಬೇರೆ. ದೇವತೆ ಬೇರೆ ಎಂಬ ಮಾತುಗಳಿವೆ. ಉಪನ್ಯಾಸಕರೊಬ್ಬರ ಮಾತುಗಳು ಇವು.ದೇವರೆಂದರೆ ಎಲ್ಲರ ನಂಬಿಕೆ ಮತ್ತು ಶ್ರದ್ಧೆಯಂತೆ ಇಡೀ ಬ್ರಹ್ಮಾಂಡವನ್ನು ನಿಯಂತ್ರಿಸುತ್ತಿರುವ ಒಂದು ದಿವ್ಯಶಕ್ತಿ. "ಆದರೆ ದೇವತೆ ಎಂದರೆ ಹಾಗಲ್ಲ. ಮಾನವ ಲೋಕವಿದ್ದಂತೆ. ದೇವತೆಗಳದ್ದೂ ಒಂದು ಲೋಕವಿದೆ. ದೇವತೆಯನ್ನು ಯಾರು ಬೇಕಾದರೂ ಒಲಿಸಿಕೊಂಡು ಅವರ ಇಷ್ಟವನ್ನು ಈಡೇರಿಸಿಕೊಳ್ಳಬಹುದು.ದೇವತೆಯನ್ನು ತನ್ನ ಅಧೀನದಲ್ಲಿ ಇರಿಸಿಕೊಳ್ಲಲು ಸಾಧ್ಯ" ಹೀಗೆಲ್ಲಾ ಆ ಉಪನ್ಯಾಸಕರು ಮಾಡಿದ ಉಪನ್ಯಾಸವು ನನಗೆ ವಿಚಿತ್ರವೆನಿಸಿತು. ನನ್ನ ನಂಬಿಕೆಯಂತೆ ದೇವರೆಂದರೆ ಆ ಭಗತ್ ಶಕ್ತಿ ಒಂದೇ.ಅದನ್ನು ಸುಧಾಕರಶರ್ಮರು ವಿಶ್ವಚೇತನ ವೆನ್ನುತ್ತಾರೆ.ಅಸ್ತಿತ್ವಗಳ ಬಗ್ಗೆ ಅವರ ವಿವರವಾದ ಉಪನ್ಯಾಸವಿದೆ. ಇರಲಿ. ಆದರೆ ಭಗವಂತನನ್ನು ಯಾರ್ಯಾರು ಯಾವಹೆಸರಿನಿಂದಾದರೂ ಕರೆಯಲಿ. ಚಿಂತೆಯಿಲ್ಲ. ಆದರೆ ದೇವತೆಗಳೆಂದರೆ ಅವರಿಗೂ ಮನುಶ್ಯರಂತೆ ಒಂದು ಲೋಕವಿದೆ. ಅವರು ಭೂ ಲೋಕಕ್ಕೆ ಬಂದು ಸಂಚಾರ ಮಾಡುತ್ತಾರೆ. ಹೀಗೆಲ್ಲಾ ಹೇಳುತ್ತಾರಲ್ಲಾ, ಈ ಬಗ್ಗೆ ಡಿ.ವಿ.ಜಿ ಯವರಯವರ ನಿಲುವು ಭಿನ್ನವಾಗಿದೆಯಲ್ಲವೇ? ಸಾಧ್ಯವಾದರೆ ಈ ಬಗ್ಗೆ ಗೊಂದಲ ನಿವಾರಿಸುವ ಪ್ರಯತ್ನ ಮಾಡಬಹುದೇ?
ನಿಮ್ಮ ಲೇಖನದಿಂದ ಪ್ರಶ್ನೆ ಉದ್ಭವವಾಗಿಲ್ಲ. ಇದು ಚರ್ಚಿಸಲು ಸೂಕ್ತವಾದ ವೇದಿಕೆಯಾಗಲಿ, ನೀವು ಗೊಂದಲಗಳನ್ನು ನಿವಾರಿಸಬಲ್ಲಿರಿ ,ಎಂಬುದಕ್ಕಾಗಿ ಕೇಳಿದೆ, ಅಷ್ಟೆ.
ಶ್ರೀಧರ್ ಅವರೇ ನಿಮ್ಮ ವಿಚಾರ ಬಹಳ ಸೂಕ್ತವಾಗಿದೆ.
Deleteಇಡೀ ಜಗತ್ತು ಒಂದು ವ್ಯವಸ್ಥೆ. ಈ ವ್ಯವಸ್ಥೆಯನ್ನು ತನ್ನಿಂದಲೇ ಸೃಷ್ಟಿಸಿಕೊಂಡು ಮತ್ತು ಎಲ್ಲ ರೂಪಗಳಲ್ಲೂ ತಾನೇ ಪ್ರತಿಬಿಂಭಿಸುತ್ತಿರುವ ಆ ಪರಮ ಶಕ್ತಿಯನ್ನೇ ಎಲ್ಲರೂ ದೇವರು, ಪರಮಾತ್ಮ ಎನ್ನುತ್ತಾರೆ. ಹೆಸರು ಏನು ಬೇಕಾದರೂ ಕರೆಯಲಿ. ಹಾಗೆ ಇಂದು ಒಂದು ವ್ಯವಸ್ತೆಯಾದರೆ ಅದರ ನಿರ್ವಹಣೆಗೆ ಒಂದು ತಂಡ ಅಥವಾ ತಂಡಗಳ ಸಮೂಹವನ್ನೇ ಇಟ್ಟುಕೊಳ್ಳಬೇಕಾಗುತ್ತದೆ. ಹಾಗೆ ಉಂಟಾದುದೆ ದೇವತೆಗಳ ಪಂಚಭೂತಗಳ ವ್ಯವಸ್ಥೆ. ಈ ದೇವತೆಗಳೂ ಸ್ವತಂತ್ರರಲ್ಲ.
ನೋಡಿ ಒಂದು ಆಫೀಸನ್ನೇ ತೆಗೆದುಕೊಳ್ಳೋಣ. ಉನ್ನತ ಅಧಿಕಾರಿ ಮತ್ತು ಅವನ ಕೈ ಕೆಳಗೆ ಕೆಲಸ ಮಾಡುವ ಹಲವು ಕಡಿಮೆ ದರ್ಜೆಯ ಅಧಿಕಾರಿಗಳು ಮತ್ತು ಅವರಿಗೆ ಸಹಾಯಕರು, ಆ ಸಹಾಯಕರಿಗೆ ಬೇರೆ ಬೇರೆ ಕೆಲಸ ಮತ್ತು ಸದುಪಾಯಗಳನ್ನು ಒದಗಿಸಿಕೊಡಲು ಸಹಾಯಕರಿರುವಂತೆ ಈ ಪರಮಾತ್ಮನ ವ್ಯವಸ್ತೆಯಲ್ಲೂ ( organisation ) ಇಂದ್ರ, ಅಷ್ಟ ದಿಕ್ಪಾಲಕರು ದೇವತೆಗಳು, ಯಕ್ಷರು ಗಂಧರ್ವರು, ಕಿನ್ನರರು, ಕಿಂಪುರುಷರು, ರಾಕ್ಷಸರು , ಪಂಚ ಭೂತಗಳು, ವಸುಗಳು ಹೀಗೆ ಅವನ ಲೀಲಾ ವಿನೋದಕ್ಕೆ ಏನೇನು ಬೇಕೋ ಅದೆಲ್ಲವನ್ನೂ ಅವನೇ ನಿಯಮಿಸಿಕೊಂಡಿದ್ದಾನೆ. ಆ ಪರಮಾತ್ಮ ಮಾತ್ರ ಸರ್ವ ಸ್ವತಂತ್ರನು ಮತ್ತು ನಿತ್ಯನು ಮತ್ತು ಸತ್ಯನು. ಮಿಕ್ಕೆಲ್ಲ ವ್ಯವಸ್ಥೆಯೂ ಅವನ ಆಜ್ಞೆ, ಇಚ್ಛೆ ಮತ್ತು ಆದೇಶಾನುಸಾರ ನಡೆಯುತ್ತದೆ. "ಮಾನವ ಲೋಕವಿದ್ದಂತೆ. ದೇವತೆಗಳದ್ದೂ ಒಂದು ಲೋಕವಿದೆ. ದೇವತೆಯನ್ನು ಯಾರು ಬೇಕಾದರೂ ಒಲಿಸಿಕೊಂಡು ಅವರ ಇಷ್ಟವನ್ನು ಈಡೇರಿಸಿಕೊಳ್ಳಬಹುದು.ದೇವತೆಯನ್ನು ತನ್ನ ಅಧೀನದಲ್ಲಿ ಇರಿಸಿಕೊಳ್ಲಲು ಸಾಧ್ಯ ". ದೇವತೆಗಳದ್ದು ಒಂದು ಲೋಕವಲ್ಲ. ಇಡೀ ವ್ಯವಸ್ಥೆಯ ಒಂದು ಸ್ಥರವಷ್ಟೇ. ಆ ದೇವತೆಗಳೂ ಆ ಪರಮಾತ್ಮನು ನಿಮಸಿದ ಗುಲಾಮರಷ್ಟೇ. ಅವರೂ ಸಹ ಪರಮಾತ್ಮನ ಆದೇಶದಂತೆ ನಡೆಯಲೇ ಬೇಕು. ಇನ್ನು ಅವರನ್ನು ಒಲಿಸಿಕೊಳ್ಳುವುದು ಮತ್ತು ಅದರಿಂದ ನಮ್ಮ ಇಷ್ಟವನ್ನು
ಈಡೇರಿಸಿಕೊಳ್ಳುವುದು ಎನ್ನುವುದು " ಭ್ರಮೆ" ಏಕೆಂದರೆ ಪರಮಾತ್ಮನ ಕೃಪೆಯಿಲ್ಲದೆ ಇಲ್ಲಿ ಏನೂ ನಡೆಯುವುದಿಲ್ಲ. ' ಅವರು ಭೂ ಲೋಕಕ್ಕೆ ಬಂದು ಸಂಚಾರ ಮಾಡುತ್ತಾರೆ.'' ಎಂದು ಹೇಳಿದ್ದರಲ್ಲ. ಅದು ಸತ್ಯ ಆದರೆ ಅವರು ಅಂದು ಕೊಂಡಂತೆ ಅಲ್ಲ. ನೋಡಿ ಈಗ ವಾಯುವನ್ನು ಒಂದು ದೇವತೆ ಎಂದು ಪರಿಗಣಿಸಲ್ಪಟ್ಟಿದೆ. ಆ ವಾಯು ಈ ಭೂ ಸಂಚಾರ ಮಾಡುತ್ತಿಲ್ಲವೇ? ಹಾಗೆಯೇ ಅಗ್ನಿ, ಯಮ ವರುಣ ಎಲ್ಲರೂ ಸಂಚಾರ ಮಾಡುತ್ತಿಲ್ಲವೇ.? ಇದನ್ನು ಬಿಟ್ಟು ಬೇರೆ ರೀತಿಯ ವ್ಯಾಖ್ಯಾನ ಮಾಡಿದರೆ ಅದು ನಮ್ಮ ವಿಚಾರದ ಪರಿಧಿಯೊಳು ಬರುವುದಿಲ್ಲ.
ನಮಸ್ಕಾರ
ನಿಮ್ಮ ವಿಚಾರ ಚೆನ್ನಾಗಿದೆ. ಪಂಚಭೂತಗಳಬಗ್ಗೆ ಶ್ರೀ ಸುಧಾಕರಶರ್ಮರ ಮಾತುಗಳನ್ನು ಅಳವಡಿಸುವೆ. ಓದುಗರು/ಕೇಳುಗರು ತಮ್ಮ ಚರ್ವೆ ಮುಂದುವರೆಸಲಿ.
Deleteವೇದಗಳ ಬೆಳಕಿನಲ್ಲಿ -
Deleteಯಾವುದು ಕೊಡುತ್ತದೋ, ಕೊಡುವ ಸಾಮರ್ಥ್ಯವನ್ನು ಪಡೆದಿದೆಯೋ ಅದೇ ದೇವ, ದೇವತೆ. ಅವು ಜಡ ದೇವತೆಗಳು ಮತ್ತು ಚೇತನ ದೇವತೆಗಳೆಂದು ಎರಡು ವಿಧ. ಗಾಳಿ, ನೀರು, ಬೆಂಕಿ, ಸೂರ್ಯ ಮೊದಲಾದವು ಜಡ ದೇವತೆಗಳು. ಮಾತಾ-ಪಿತೃಗಳು, ಗುರುಜನರು ಚೇತನ ದೇವತೆಗಳು. ಜಡ ದೇವತೆಗಳು ಎಲ್ಲರ ವಿಚಾರದಲ್ಲೂ ಒಂದೇ ರೀತಿಯಲ್ಲಿ ವ್ಯವಹರಿಸಿದರೆ, ಚೇತನ ದೇವತೆಗಳು ಬುದ್ಧಿಪೂರ್ವಕವಾಗಿ ಕೆಲಸ ಮಾಡುತ್ತಾರೆ. ಸೂರ್ಯನ ಶಾಖ ಎಲ್ಲರಿಗೂ ಒಂದೇ. ವಿದ್ವಜ್ಜನರು ತಮಗೆ ಹೊಡೆದ ಮಗುವಿನ ವಿಚಾರದಲ್ಲಿ, ಮತ್ತು ತಮಗೆ ಹೊಡೆದ ದುಷ್ಟನ ವಿಚಾರದಲ್ಲಿ ಒಂದೇ ರೀತಿ ವ್ಯವಹರಿಸುವುದಿಲ್ಲ!
ಇನ್ನು ದೇವರನ್ನು ಸರ್ವಶಕ್ತನೆಂದು ತಿಳಿಯುತ್ತೇವೆ. ಇದರರ್ಥ ಯಾವುದೇ ಸಾಧನ ಸಾಮಾಗ್ರಿಗಳ, ದಲ್ಲಾಳಿ, ಮಧ್ಯವರ್ತಿಗಳ ಅವಶ್ಯಕತೆಗಳಿಲ್ಲದೆ ತನ್ನ ಕಾರ್ಯವನ್ನು ಮಾಡಬಲ್ಲ ಶಕ್ತಿ ಎಂದರ್ಥ.
ತಪ್ಪಾಗಿ ತಿಳಿದರೆ, ತಾವು ದೇವರ ದೂತರೆಂದು, ಪ್ರವಾದಿಗಳೆಂದು, ದೇವರ ಅವತಾರವೆಂದು, ದೈವಾಂಶ ಸಂಭೂತರೆಂದು ಸಮಾಜವನ್ನು ದಾರಿ ತಪ್ಪಿಸುವ ದುಷ್ಟರಿಗೆ ಕೊರತೆಯೇನಿಲ್ಲ.
ಭಗವಂತನ 'ಕೃಪೆ'ಯಿಲ್ಲದೆ ಯಾವುದೂ ನಡೆಯುವುದಿಲ್ಲ ಎಂಬುದನ್ನು, ಭಗವಂತನ 'ನಿಯಮ'ಗಳನ್ನು ಮೀರಿ ಯಾವುದೂ ನಡೆಯುವುದಿಲ್ಲ ಎಂದು ತಿಳಿದರೆ ಹೆಚ್ಚು ಸೂಕ್ತ. ಒಮ್ಮೆ ಜಗತ್ತಿನ ವ್ಯವಸ್ಥೆಯನ್ನು ಮಾಡಿದನೆಂದರೆ ಆ ಪರಮಾತ್ಮನು ಮಿಕ್ಕಂತೆ ಸಾಕ್ಷಿಭೂತ. ದಿನನಿತ್ಯದ ವ್ಯವಹಾರದಲ್ಲಿ ಮೂಗು ತೂರಿಸಿ ಕೃಪೆ, ಅವಕೃಪೆ ಮಾಡುವ ಯಾವ ವ್ಯವಹಾರವೂ ಇರುವುದಿಲ್ಲ.
ಅನಂದ ಸ್ವರೂಪನಾದ ಭಗವಂತನಿಗೆ ನಮಗೆ ಬೇಕಾದಂತೆ 'ಲೀಲಾ ವಿನೋದ'ದ ಅಗತ್ಯವಿಲ್ಲ!
'ಲೋಕ'ವೆಂದರೆ ಕಣ್ಣಿಗೆ ಕಾಣುವುದು ಎಂದೇ ಅರ್ಥ. (ಲೋಕೃ ದರ್ಶನೇ ಎಂಬುದು ಮೂಲ ಧಾತು). ಕಾಣಿಸದೆ ಕಲ್ಪಿಸುವುದು ಲೋಕವೆನಿಸುವುದಿಲ್ಲ!
ಚಿಂತಿಸಿ, ವಿಷಯಗಳು ಸ್ಪಷ್ಟವಾಗುತ್ತವೆ.
-ಸುಧಾಕರ ಶರ್ಮಾ