ಏನು ಜೀವನದರ್ಥ?
ಏನು ಜೀವನದರ್ಥ? ಏನು ಪ್ರಪಂಚಾರ್ಥ ?
ಏನು ಜೀವಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು?
ಜ್ಞಾನಪ್ರಮಾಣವೇಮ್? ಮಂಕುತಿಮ್ಮ
ಕಾಣದಿಲ್ಲಿರ್ಪುದೇನಾನುಮುಂಟೆ
=ಕಾಣದೆ + ಇಲ್ಲಿ+ ಇರ್ಪುದು(ಇರುವುದು)+ಏನಾನುಂ( ಏನಾದರೂ)+ ಉಂಟೆ
"ಈ ನಮ್ಮ ಜೀವನಕ್ಕೆ ಏನಾದರೂ ಅರ್ಥ ಇದೆಯೇ? ನಾವಿರುವ ಈ ಪ್ರಪಂಚದ ಅರ್ಥವೇನು? ನಮ್ಮ ಮತ್ತು ನಾವು ಇರುವ ಈ ಪ್ರಪಂಚದ ಪರಸ್ಪರ ಸ೦ಬ೦ಧವೇನು? ಇವೆರಡನ್ನೂ ಬೆಸೆದಿರುವ, ನಮ್ಮ ಕಣ್ಣಿಗೆ ಕಾಣದ ಒಂದು ಶಕ್ತಿ ಏನಾದರೂ ಇದೆಯೇ? ಹಾಗಿದ್ದರೆ ಅದೇನು? ಅದು ನಮ್ಮ ವಿಚಾರ ಮತ್ತು ಜ್ಞಾನದ ಪರಿಧಿಯಿಂದ ಮೀರಿದೆಯೇ? ಹಾಗಾದರೆ ಅದು ಏನು? " ಎಂಬ ಭಾವಗಳನ್ನು ವ್ಯಕ್ತಪಡಿಸುತ್ತಾರೆ ಈ ಕಗ್ಗದಲ್ಲಿ ಮಾನ್ಯ ಶ್ರೀ ಡಿ.ವಿ.ಜಿ ಯವರು.
ವಾಚಕರೆ, ಅಲ್ಪ ಸ್ವಲ್ಪ ವಿಚಾರಮಾಡುವ ಶಕ್ತಿ ಇರುವವರೂ ಸಹ ಈ ರೀತಿಯ ಪ್ರಶ್ನೆಗಳನ್ನು ತಮ್ಮಲ್ಲೇ ತಾವು ಅನೇಕ ಬಾರಿ ಕೇಳಿಕೊಳ್ಳುತ್ತಾರೆ. ಅಲ್ಲವೇ?
ನಾವು ಹುಟ್ಟುತ್ತೇವೆ, ಬೆಳೆಯುತ್ತೇವೆ, ಬದುಕುತ್ತೇವೆ ಮತ್ತು ಒಂದು ದಿನ ಸಾವಿನ ತೆಕ್ಕೆಗೆ ಬೀಳುತ್ತೇವೆ. ಈ ಎಲ್ಲಕ್ಕೂ ಏನಾದರೂ ಅರ್ಥವಿದೆಯೇ? ನಾವು ಇಲ್ಲಿರುವಾಗ ನಮ್ಮ ಜೀವನದಲ್ಲಿ ಜ್ಞಾನದ ಜೊತೆಯಲ್ಲಿ ಪ್ರೀತಿ, ಪ್ರೇಮ, ಕೋಪ, ದ್ವೇಷ, ಅಸೂಯೆ, ಅನುರಾಗ ಮುಂತಾದ ಹಲವಾರು ಭಾವನೆಗಳನ್ನು ಬೆಳೆಸಿಕೊಳ್ಳುತ್ತೇವೆ. ಆ ಭಾವನೆಗಳ ಜೊತೆಗೆ ಜೀವಿಸುತ್ತೇವೆ. ಈ ರೀತಿಯ ಜೀವನಕ್ಕೇನಾದರೂ ಅರ್ಥವಿದೆಯೇ? ವಾಸ್ತವ ಬದುಕಿಗೆ ಮಾತ್ರ ಮಾಸ್ತವವೇ ಕಾರಣವೋ ಅಥವಾ ನಮ್ಮ ಕಣ್ಣಿಗೆ ಕಾಣದ ಆದರೂ ಈ ಎಲ್ಲವನ್ನೂ ನಿಯಂತ್ರಿಸುವ ಬೇರೆ ಯಾವುದಾದರೂ ಶಕ್ತಿ ಇದೆಯೇ. ಇದ್ದರೆ ಅದರ ಸ್ವರೂಪವೇನು ಮತ್ತು ಅದರ ಕಾರ್ಯ ವೈಖರಿಯೇನು ಎನ್ನುವುದು ಎಲ್ಲ ವಿಚಾರವಂತರಿಗೂ ಬರುವ ಸಂದೇಹಗಳು.
ಪ್ರತಿ ಜೀವಿಯ ಹುಟ್ಟು ಏಕಾಗುತ್ತದೆ? ಭೌತಿಕ ಕಾರಣವು ಎಲ್ಲರಿಗೂ ಗೊತ್ತು. ಆದರೆ ಈ ಭೌತಿಕವಲ್ಲದೆ ಬೇರೆ ಏನಾದರೂ ಕಾರಣವಿದೆಯೇ? ಆ ಕಾರಣವೇ ನಮ್ಮ ಪ್ರತಿ ನಿಮಿಷದ ಕಾರ್ಯಗಳನ್ನೂ ನಿಯಂತ್ರಿಸುತ್ತದೆಯೇ? ನಮ್ಮ ಭಾರತೀಯ ಸಿದ್ಧಾಂತದ ಪ್ರಕಾರ ಪ್ರತಿ ಜೀವಿಯೂ ಒಂದು ಪೂರ್ವ ನಿಯೋಜಿತ ಕಾರಣಕ್ಕಾಗಿ ಜನಿಸಿ ಮತ್ತು ಆ ಪೂರ್ವ ನಿಯೋಜಿತ ಕ್ರಮದಲ್ಲಿಯೇ ತನ್ನ ಜೀವನವನ್ನು ನಡೆಸುತ್ತದೆ ಎಂದು ಹೇಳಲ್ಪಟ್ಟಿದೆ. ಹಾಗಿದ್ದರೆ ಆ ಕಾರಣದ ಮೂಲವೇನು? ಆ ಕಾರಣಕ್ಕೆ ಕಾರಕರಾರು? ಬಹಳ ಕ್ಲಿಷ್ಟವಾದ ಪ್ರಶ್ನೆ.
ನಮ್ಮ ಋಷಿ ಮುನಿಗಳೂ ಸಹ ಈ ರೀತಿಯ ಪ್ರಶ್ನೆಗಳಿಗೆ ಉತ್ತರವನ್ನು ಕಾಣಲು ಮಾಡಿದ ಪ್ರಯತ್ನದ ಫಲವೇ ಭಾರತೀಯ ವೇದ ಶಾಸ್ತ್ರಗಳು, ಉಪನಿಷತ್ತುಗಳು . ಹೀಗೆ ಎಲ್ಲರಲ್ಲೂ ಸಾಮಾನ್ಯವಾಗಿ ಉದ್ಭವವಾಗುವ ಮತ್ತು ಎಲ್ಲರೂ ವಿಚಾರ ಮಾಡಬಹುದಾದ ಅಥವಾ ಮಾಡಲೇಬೇಕಾದ ಪ್ರಶ್ನೆಗಳ ಸ್ವರೂಪವೇ ಈ ಕಗ್ಗ.
ಮಿತ್ರರೇ ಬನ್ನಿ ನಾವು ನೀವು ಎಲ್ಲರೂ ವಿಚಾರ ಮಾಡುವ, ಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗುವ.
No comments:
Post a Comment